ಹಿಂದಿ ದಿವಸ | ರಾಜ್ಯ ಸರ್ಕಾರ ಮೊದಲು ತುಳು, ಹವ್ಯಕ, ಕೊಡವ ಭಾಷೆಗಳ ದಿನ ಆಚರಿಸಲಿ - ಕೆ. ಮರುಳಸಿದ್ದಪ್ಪ ಆಗ್ರಹ

hindi divas

ಘೋಷಣೆಯಾದ ದಿನದಿಂದ ಇವತ್ತಿನವರೆಗೂ ʼಹಿಂದಿ ದಿವಸʼಕ್ಕೆ ವಿರೋಧ ವ್ಯಕ್ತವಾಗುತ್ತಲೇ ಇದೆ. ಯಾವುದೇ ಭಾಷೆಗೆ ಇಲ್ಲದ ದಿನ, ಹಿಂದಿಗೆ ಮಾತ್ರ ಯಾಕೆ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ಸಾಹಿತಿಗಳಾದ ಕೆ ಮರುಳಸಿದ್ದಪ್ಪ, ಅಗ್ರಹಾರ ಕೃಷ್ಣಮೂರ್ತಿ, ಕನ್ನಡಪರ ಹೋರಾಟಗಾರ ಅರುಣ್‌ ಜಾವಗಲ್‌ ತಮ್ಮ ವಿರೋಧವನ್ನು ಇಲ್ಲಿ ದಾಖಲಿಸಿದ್ದಾರೆ

ಬೆಂಗಳೂರು: ಸೆಪ್ಟೆಂಬರ್‌ 14 ʼಹಿಂದಿ ದಿವಸ್‌ʼ. 1949ರಲ್ಲಿ ಹಿಂದಿಯನ್ನು ಅಧಿಕೃತ ಆಡಳಿತ ಭಾಷೆ ಎಂದು ಕೇಂದ್ರ ಸರ್ಕಾರ ಘೋಷಿಸಿದ ಆ ದಿನವನ್ನು ʼಹಿಂದಿ ದಿವಸ್‌ʼ ಎಂದು ಆಚರಿಸಲಾಗುತ್ತಿದೆ. ಒಂದೇ ದೇಶ, ಒಂದೇ ಕಾನೂನು, ಒಂದೇ ಭಾಷೆ ಇರಬೇಕು ಎಂದು ವಾದಿಸಿದ ಒಂದಷ್ಟು ನಾಯಕರು 1940ರ ದಶಕದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಆದರೆ ಬಹುತೇಕ ರಾಜ್ಯಗಳಿಂದ ಅದಕ್ಕೆ ವಿರೋಧ ವ್ಯಕ್ತವಾಗಿತ್ತು. ಸಂಸತ್ತಿನಲ್ಲಿ ಸುದೀರ್ಘ ಚರ್ಚೆ, ವಾದ- ವಿವಾದ ನಡೆದ ನಂತರ ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಲಾಯಿತು.  

ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂಬ ಅಭಿಪ್ರಾಯವಿದೆ. ಇದಕ್ಕೆ ರಾಜ್ಯದ ಬಿಜೆಪಿ ಸರ್ಕಾರದ ನಡವಳಿಕೆಗಳು ಪುಷ್ಟಿ ನೀಡುತ್ತಿವೆ. ಕೇಂದ್ರ ಸರ್ಕಾರದ ಮಂತ್ರಿಗಳು ಅಥವಾ ಬಿಜೆಪಿ ನಾಯಕರು ಭಾಗವಹಿಸುವ ವೇದಿಕೆಗಳಲ್ಲಿ ಹಿಂದಿಯಲ್ಲಿರುವ ಬ್ಯಾನರ್‌  ಬರಹಗಳು ರಾರಾಜಿಸುತ್ತಿರುತ್ತವೆ. ಹಿಂದಿಯ ಹೇರಿಕೆಗಿಂತ ಹಿಂದಿಯವರ ಓಲೈಕೆಗೆ ಖುದ್ದು ಸರ್ಕಾರ ಇಳಿದಂತಿದೆ.

ರಾಜ್ಯದಲ್ಲಿ ಹಿಂದಿ ದಿವಸ ಆಚರಣೆಗೆ ಸಾಹಿತಿಗಳು, ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ದಿನ.ಕಾಮ್‌ ಜೊತೆ ಮಾತನಾಡಿದ ಹಿರಿಯ ಸಾಹಿತಿ ಕೆ ಮರುಳಸಿದ್ದಪ್ಪ, ʼರಾಜ್ಯ ಸರ್ಕಾರ ಹಿಂದಿ ದಿವಸ ಆಚರಿಸುವ ಮೊದಲು ತುಳು, ಹವ್ಯಕ, ಕೊಡವ ದಿವಸಗಳನ್ನು ಆಚರಿಸಲಿʼ ಎಂದು ಆಗ್ರಹಿಸಿದರು.

ʼಹಿಂದಿ ದಿನಾಚರಣೆ, ಸಂಸ್ಕೃತ ದಿನಾಚರಣೆ ಮಾಡಲಾಗುತ್ತಿದೆ. ನಮ್ಮಲ್ಲಿ ಕನ್ನಡ ದಿನಾಚರಣೆ ಯಾವಾಗʼ ಎಂದು ಅವರು ಪ್ರಶ್ನಿಸಿದರು. ʼಈ ಯಾವ ದಿನಾಚರಣೆಗಳೂ ಹೆಚ್ಚು ದಿನ ನಡೆಯಲ್ಲ. ಜನ ಒಪ್ಪಿದರೆ ಮಾತ್ರ. ನಾನು ಹಿಂದಿಯನ್ನು ದ್ವೇಷ ಮಾಡುತ್ತಿಲ್ಲ.  ಹಿಂದಿಯಂತೆ ನೂರಾರು ಭಾಷೆಗಳಿವೆ. ಎಲ್ಲವೂ ಸೋದರ ಭಾಷೆಗಳು. ತುಳು ಅತ್ಯಂತ ಪ್ರಾಚೀನ ದ್ರಾವಿಡ ಭಾಷೆ. ತುಳು ದಿನ ಯಾಕಿಲ್ಲʼ ಎಂದು ಅವರು ಪ್ರಶ್ನಿಸಿದರು.

8ನೇ ಶೆಡ್ಯೂಲ್‌ ರದ್ದಿಗೆ ಹಾಕಬೇಕು: ಅಗ್ರಹಾರ ಕೃಷ್ಣಮೂರ್ತಿ   
ʼಹಿಂದಿಯ  ಬಲವಂತದ ಹೇರಿಕೆ ನಿಲ್ಲಬೇಕು. ಯಾವುದೇ ಒಂದು ಭಾಷೆಗೆ ಅತಿಯಾದ ಪ್ರೋತ್ಸಾಹ ಕೊಡುವುದು ಸರಿಯಲ್ಲ. ಎಲ್ಲ ಭಾಷೆಯನ್ನೂ ಸಮಾನವಾಗಿ ಕಾಣಬೇಕು. ಅದಕ್ಕಾಗಿ 8ನೇ ಶೆಡ್ಯೂಲನ್ನು ಮೊದಲು ಸ್ಕ್ರೇಪ್‌ಗೆ ಹಾಕಬೇಕು. ರೆಕಗ್ನೈಸ್ಡ್‌ ಲ್ಯಾಂಗ್ವೇಜ್‌ ಎಂಬುದನ್ನು ರದ್ದು ಮಾಡುವ ಮೂಲಕ ಬುಡಕಟ್ಟು ಭಾಷೆಗಳೂ ಸೇರಿದಂತೆ  ಲಕ್ಷಾಂತರ ಭಾಷೆಗಳನ್ನು ಉಳಿಸಬೇಕಾಗಿದೆʼ ಎಂದರು.

ʼಹಿಂದಿ ದಿವಸ ಆಚರಣೆ ಜಮೀನ್ದಾರಿ ಮನಸ್ಥಿತಿ ತೋರಿಸುತ್ತದೆ. ಹಿಂದಿ ದಿವಸ ಸರ್ಕಾರಿ ಕಚೇರಿಗಳಲ್ಲಿ ವಿವಿಧ ಸ್ಪರ್ಧೆ ನಡೆಸಿ, ಬಹುಮಾನ ಕೊಡುವ ಸಂಪ್ರದಾಯವಿದೆ. ಅದಕ್ಕಾಗಿಯೇ ಸಂಸದೀಯ ಸಮಿತಿ ಇದೆ. ಯಾವುದೇ ಭಾಷೆಗಿಲ್ಲದ ಸಮಿತಿ ಹಿಂದಿಗೆ ಮಾತ್ರ ಯಾಕೆ?

ಹಿಂದಿ ಘಟಸರ್ಪದಂತೆ. ಉಳಿದ ಭಾಷೆಗಳು ಬಸವನಹುಳುವಿನಂತಾಗಿವೆ. ಸರ್ಪದ ತಲೆಗೆ ಮೊಟಕಿದರೆ ಸ್ವಲ್ಪ ಸಮಯ ಸುಮ್ಮನಾಗುತ್ತದೆ. ಮತ್ತೆ ತಲೆ ಎತ್ತುತ್ತದೆ. ಪ್ರತಿಸಲವೂ ಹಿಂದಿ ದಿವಸಕ್ಕೆ ವಿರೋಧ ವ್ಯಕ್ತವಾಗಿದೆ. ಎಲ್ಲಾ ಪ್ರಾದೇಶಿಕ ಭಾಷೆಯ ಜನರೂ ಗಟ್ಟಿಯಾಗಿ ವಿರೋಧಿಸಬೇಕು. ಕನ್ನಡಕ್ಕೆ ಇಲ್ಲದ ಪ್ರಾಮುಖ್ಯತೆ ಬೇರೆ ಯಾವ ಭಾಷೆಗೂ ಕೊಡಬೇಕಿಲ್ಲ. ನನ್ನ ಭಾಷೆ ಫ್ರೆಂಚ್‌, ಇಂಗ್ಲಿಷ್‌ಗೆ ಸಮಾನವಾದ ಭಾಷೆ ಎಂದೇ ತಿಳಿಯಬೇಕುʼ ಎಂದು ಹೇಳಿದರು.

ಸಂವಿಧಾನ ತಿದ್ದುಪಡಿಗೆ ಜನಪ್ರತಿನಿಧಿಗಳು ಯತ್ನಿಸಬೇಕು: ಅರುಣ್‌ ಜಾವಗಲ್‌

ಹಿಂದಿ ಹೇರಿಕೆಯ ವಿರುದ್ಧದ ಹೋರಾಟ ಇಂದಿನದಲ್ಲ. ಅದಕ್ಕಾಗಿ ರಕ್ತವೇ ಹರಿದಿದೆ. 1964- 65ರಲ್ಲಿ ಹಿಂದಿ ದಿವಸ್‌ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಬೆಂಗಳೂರಿನಲ್ಲಿಯೂ ಉಗ್ರ ಪ್ರತಿಭಟನೆಗಳು ನಡೆದಿತ್ತು. 2005ರ ನಂತರ ಅದೊಂದು ಕ್ಯಾಂಪೇನ್‌ ರೂಪ ಪಡೆದಿದೆ. ಹಿಂದೆ ಕಾಂಗ್ರೆಸ್‌ನವರೂ ಏನೂ ಮಾಡಿಲ್ಲ. ಇತ್ತೀಚೆಗೆ ಕರ್ನಾಟಕ ಕಾಂಗ್ರೆಸ್‌ ಹೆಚ್ಚು ಸ್ಟ್ರಾಂಗ್‌ ಆಗಿರುವ ಕಾರಣ ಸಿದ್ದರಾಮಯ್ಯನವರಂಥ ನಾಯಕರು ಹಿಂದಿ ಹೇರಿಕೆಯ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ, ಅಷ್ಟು ಮಾಡಿದರೆ ಸಾಲದು. ನಮ್ಮವರು ಸಮಸ್ಯೆಯ ಮೂಲದ ಬಗ್ಗೆ ಮಾತನಾಡುತ್ತಿಲ್ಲ. ಆರ್ಟಿಕಲ್‌ 334 ರಿಂದ 351 ರವರೆಗೆ ಭಾಷೆಯ ಬಗ್ಗೆಯೇ ಇದೆ. ಹಿಂದಿ ದಿವಸ್‌ ಆಚರಿಸಬೇಕು ಎಂದು ಆರ್ಟಿಕಲ್‌ 351ರಲ್ಲಿ ಹೇಳಿದೆ. ಅದನ್ನು ತಿದ್ದುಪಡಿ ಮಾಡಲು ಒತ್ತಾಯಿಸಬೇಕು. ಕಾಯ್ದೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಸಿಗುತ್ತಿವೆ. ಕನ್ನಡ ಆಡಳಿತ ಭಾಷೆಯಾಗಬೇಕು. 50 ಲಕ್ಷ ಜನಸಂಖ್ಯೆ ಇರುವ ಸಿಂಗಪುರದಲ್ಲಿ ಐದು ಅಧಿಕೃತ ಆಡಳಿತ ಭಾಷೆಗಳಿವೆ. 130 ಕೋಟಿ ಜನರಿರುವ ಭಾರತದಲ್ಲಿ ಒಂದೇ ಆಡಳಿತ ಭಾಷೆ ಇರುವುದು ಅಚ್ಚರಿಯ ವಿಷಯ. 

ನಿಮಗೆ ಏನು ಅನ್ನಿಸ್ತು?
2 ವೋಟ್