
ಸ್ವಾತಂತ್ರ್ಯ ಬಂದಾಗಿನಿಂದಲೂ ಭಾಷೆಯ ವಿಚಾರದಲ್ಲಿ ಹಿಂದಿ ಮತ್ತು ಹಿಂದಿಯೇತರ ರಾಜ್ಯಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಯಾವುದೇ ಪಕ್ಷ ಅಧಿಕಾರ ಹಿಡಿದರೂ ಒಂದು ಭಾಷೆಯನ್ನು ರಾಷ್ಟ್ರದ ಭಾಷೆಯಾಗಿ ಮಾಡಲು ಸಾಧ್ಯವಾಗಿಲ್ಲ. ರಾಷ್ಟ್ರ ರೂಪಗೊಂಡಿರುವುದೇ ರಾಜ್ಯಗಳ ಗುಂಪಿನಿಂದ. ಹೀಗಾಗಿಯೇ ಅದನ್ನು ಗಣರಾಜ್ಯ ಎಂದು ಕರೆದಿರುವುದು
ಭಾಷೆ ಎನ್ನುವುದು ಕೇವಲ ಸೀಮಿತ ವ್ಯವಹಾರದ ಸಾಧನವಲ್ಲ. ಜನ ಸಮುದಾಯದ ಸಕಲ ವ್ಯವಹಾರಕ್ಕೂ, ಹೃದಯ ಸಂವಾದಕ್ಕೂ ಇರುವ ಮಾರ್ಗ. ಸಾವಿರಾರು ವರ್ಷಗಳ ಚರಿತ್ರೆ, ಪರಂಪರೆ, ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ವಿದ್ಯಮಾನಗಳು, ಆಸೆ-ಆಕಾಂಕ್ಷೆಗಳು, ರಾಜಕೀಯ ಏಳುಬೀಳುಗಳು ಹೀಗೆ ಸಕಲವನ್ನು ತನ್ನೊಡಲಲ್ಲಿ ತುಂಬಿಕೊಂಡಿರುವ ಮಹಾ ಚೇತನ. ಒಂದು ಭಾಷೆಯನ್ನಾಡುವ ಸಮುದಾಯ ಚಿಕ್ಕದಿರಲಿ, ದೊಡ್ಡದಿರಲಿ ಭಾಷೆಯ ಈ ಚೇತನವನ್ನು ಅಲ್ಲಗಳೆಯಲಾಗದು; ಹತ್ತಿಕ್ಕಲಾಗದು.
ಪ್ರಜಾತಂತ್ರ ವ್ಯವಸ್ಥೆಯಲ್ಲಂತೂ ಯಾವ ಭಾಷೆಯೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ; ಇಲ್ಲಿ ಎಲ್ಲವೂ ಮಾನ್ಯವೇ; ಎಲ್ಲವೂ ಸಮಾನವೇ. ನಮ್ಮ ಸಂವಿಧಾನ ರೂಪಿಸಿರುವುದೇ ಈ ತತ್ವದ ಮೇಲೆ. ಸಂವಿಧಾನ ಹಲವು ಕಾರಣಗಳಿಂದಾಗಿ, ಆಡಳಿತ ನಿರ್ವಹಣೆಯ ತೊಡಕುಗಳಿಂದಾಗಿ ಭಾರತದಲ್ಲಿರುವ ಎಲ್ಲ ಭಾಷೆಗಳನ್ನೂ ಅಂಗೀಕಾರ ಮಾಡಿಲ್ಲ. ಆದರೆ ಯಾವ ಭಾಷೆಯನ್ನೂ ಅದು ಕಡೆಗಣಿಸಿಲ್ಲ. ಸಮಾನತೆ ಎನ್ನುವ ತತ್ವ ಎಲ್ಲ ಭಾಷೆಗಳಿಗೂ, ಜನ ಸಮುದಾಯಗಳಿಗೂ ಅನ್ವಯವಾಗುವ ತತ್ವ.
ಭಾರತ ಬಹುದೊಡ್ಡ ದೇಶ. ಗಣರಾಜ್ಯಗಳ ಒಕ್ಕೂಟ. ಹಾಗೆಯೇ ಬಹುಮುಖೀ ದೇಶ. ಇಲ್ಲಿ ಭಾಷೆ, ಸಂಸ್ಕೃತಿ, ಸಾಹಿತ್ಯ, ನಂಬಿಕೆಗಳು, ಧಾರ್ಮಿಕ ಭಾವನೆಗಳು, ಜನಜೀವನದ ವೈವಿಧ್ಯ, ಬಣ್ಣಗಳು ಇತ್ಯಾದಿ ಅನೇಕ ವಿಚಾರಗಳಲ್ಲಿ ಇದು ಬಹುಮುಖ ಉಳ್ಳದ್ದು. ಇದನ್ನು ನಂಬಿಯೇ ನಮ್ಮ ರಾಷ್ಟ್ರೀಯ ಬದುಕು ರೂಪಗೊಳ್ಳಬೇಕು. ಕೇಂದ್ರ ಸರ್ಕಾರ ಎನ್ನುವುದು ಈ ಎಲ್ಲ ವಿಚಾರಗಳನ್ನೂ ಗಮನಿಸಿಯೇ ತನ್ನ ಆಡಳಿತವನ್ನು ರೂಪಿಸಿಕೊಳ್ಳಬೇಕು; ಸಮುದಾಯಗಳ, ರಾಜ್ಯಗಳ ಸಂವರ್ಧನೆಗೆ ನೆರವಾಗುವ ರೀತಿಯಲ್ಲಿಯೇ ಸಕಲ ವ್ಯವಹಾರವನ್ನೂ ನಿಭಾಯಿಸಬೇಕು. ಈ ಸಮತೋಲನ ತಪ್ಪಿದಾಗಲೆಲ್ಲ ರಾಷ್ಟ್ರದಲ್ಲಿ ಗಲಭೆಗಳು ಭುಗಿಲೆದ್ದಿವೆ; ಬದುಕು ಅಸ್ತವ್ಯಸ್ತವಾಗಿದೆ; ಸಾವು ನೋವುಗಳು ಆಗಿವೆ.
ಸ್ವಾತಂತ್ರ್ಯ ಬಂದಾಗಿನಿಂದಲೂ ಭಾಷೆಯ ವಿಚಾರದಲ್ಲಿ ಹಿಂದಿ ಮತ್ತು ಹಿಂದಿಯೇತರ ರಾಜ್ಯಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಯಾವುದೇ ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿದರೂ ಒಂದು ಭಾಷೆಯನ್ನು ರಾಷ್ಟ್ರದ ಭಾಷೆಯಾಗಿ ಮಾಡಲು ಸಾಧ್ಯವಾಗಿಲ್ಲ. ನಮ್ಮ ರಾಷ್ಟ್ರ ರೂಪಗೊಂಡಿರುವುದೇ ರಾಜ್ಯಗಳ ಗುಂಪಿನಿಂದ. ಹೀಗಾಗಿಯೇ ಇದನ್ನು ಗಣರಾಜ್ಯ ಎಂದು ಕರೆದಿರುವುದು. ಈ ಗಣರಾಜ್ಯದ ವ್ಯವಹಾರಕ್ಕೆ ತಕ್ಕ ಭಾಷಾ ಸೂತ್ರಕ್ಕಾಗಿ ಹುಡುಕಾಟ ನಡೆದು, ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲಾಗಿದೆ. ಹಿಂದಿ, ಇಂಗ್ಲಿಷ್, ಮತ್ತು ಪ್ರಾದೇಶಿಕ ಭಾಷೆ. ಈ ಮೂರು ಭಾಷೆಗಳಲ್ಲಿ ಎರಡು ದೇಶೀಯ ಭಾಷೆಗಳು; ಒಂದು ವಿದೇಶದ್ದು. ಇಂಗ್ಲಿಷ್ ನಮ್ಮ ದೇಶಭಾಷೆಯಲ್ಲ. ಆದರೆ ಬ್ರಿಟಿಷರ ಆಡಳಿತದ ಕಾರಣದಿಂದಾಗಿ ನಮ್ಮ ಜೊತೆಯಲ್ಲಿಯೇ ಉಳಿದುಕೊಂಡಿದೆ. ಹಾಗೆಂದು ಇದಕ್ಕೆ ಸಲ್ಲದ ಮಾನ್ಯತೆಯನ್ನೂ ಕೊಡಬೇಕಾಗಿಲ್ಲ.

ತಜ್ಞರ ಮಾತನ್ನು ಗಾಳಿಗೆ ತೂರಲಾಗಿದೆ
ಪ್ರತಿಯೊಂದು ರಾಜ್ಯಕ್ಕೂ ತನ್ನ ಭಾಷೆಯೇ ಮುಖ್ಯ. ಈ ಭಾಷೆಯಲ್ಲಿ ಆಡಳಿತ, ವ್ಯವಹಾರ, ಶಿಕ್ಷಣ ಎಲ್ಲವೂ ನಡೆಯಬೇಕು. ಆದರೆ ನಾವು ಇನ್ನೂ ಈ ತತ್ವವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂಗ್ಲಿಷ್ ಇವತ್ತಿಗೂ ನಮ್ಮನ್ನು ಶೋಷಿಸುವ ಹತಾರವಾಗಿಯೇ ಉಳಿದುಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಜಾಗತೀಕರಣದ ಪ್ರಭಾವದಿಂದಾಗಿ ಇಂಗ್ಲಿಷ್ ಮತ್ತೆ ನಮ್ಮ ಹೆಗಲೇರಿ ಕುಳಿತಿದೆ. ನಮ್ಮ ಆರ್ಥಿಕ ಬಲವೂ ಈ ಇಂಗ್ಲಿಷ್ನಲ್ಲಿಯೇ ಇದೆ ಎಂಬ ತಪ್ಪು ಕಲ್ಪನೆಯೂ ಆಳವಾಗಿ ನಮ್ಮ ಜನರಲ್ಲಿ ಬೇರುಬಿಟ್ಟಿದೆ. ಶಿಕ್ಷಣ ಕ್ರಮವಂತೂ ಇಂಗ್ಲಿಷ್ ಭಾಷೆಯನ್ನು ಸಿಂಹಾಸನದ ಮೇಲೆ ಕೂಡಿಸಿಕೊಂಡಿದೆ. ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆ- ಹೀಗೆ ಯಾವುದೇ ಭಾಷೆಯನ್ನು ಭಾಷೆಯಾಗಿ ಕಲಿಯಲು ಯಾರದೂ ಅಡ್ಡಿ ಇಲ್ಲ. ಭಾಷೆಯನ್ನು ನಮ್ಮ ಮಕ್ಕಳು ಚೆನ್ನಾಗಿಯೇ ಕಲಿಯಬೇಕು. ಆದರೆ ಶಿಕ್ಷಣ ಮಾಧ್ಯಮ ಮಗುವಿನ ತಾಯಿ ಮಾತಲ್ಲೇ /ಪ್ರಾದೇಶಿಕ ಭಾಷೆಯಲ್ಲೇ ಇರಬೇಕೆಂಬ ತಜ್ಞರ ಮಾತನ್ನು ಗಾಳಿಗೆ ತೂರಲಾಗಿದೆ. ಗಾಂಧೀಜಿ ಇದನ್ನೇ ಒಪ್ಪಿಕೊಂಡಿದ್ದರು ಮತ್ತು ಪಾಲಿಸುತ್ತಿದ್ದರು. ಜಗತ್ತಿನಾದ್ಯಂತ ಬಹುಪಾಲು ಶಿಕ್ಷಣ ತಜ್ಞರು ಹೇಳುವುದು ಇದೇ ಅಭಿಪ್ರಾಯವನ್ನೇ. ಇಂಗ್ಲಿಷ್ ಮಾಧ್ಯಮ ಶಾಲೆ ಎನ್ನುವುದು ಮಕ್ಕಳನ್ನು ಮತ್ತು ಪೋಷಕರನ್ನು ಸುಲಿಯುವ ವ್ಯವಹಾರವಾಗಿ ತನ್ನ ನಾಲಗೆಯನ್ನು ದೇಶದುದ್ದಕ್ಕೂ ಚಾಚಿದೆ. ಇದರಿಂದ ಪಾರಾಗುವ ಉಪಾಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ನಮ್ಮ ಪರಿಸ್ಥಿತಿ ಹದಗೆಟ್ಟಿದೆ.
ಇಂಥ ಸನ್ನಿವೇಶದಲ್ಲಿ ಇಡಿ ರಾಷ್ಟ್ರಕ್ಕೆ ಒಂದು ಭಾಷೆಯನ್ನು ಆಡಳಿತಕ್ಕೆ ಜೋಡಿಸುವ ಕೊಂಡಿ ಭಾಷೆಯಾಗಿ ಮಾಡುವುದು ಬಹಳ ಕಷ್ಟ. ಹಿಗಾಗಿಯೇ ಇಂಗ್ಲಿಷನ್ನು ಕೊಂಡಿ ಭಾಷೆಯಾಗಿ ಉಳಿಸಿಕೊಳ್ಳಲಾಗಿತ್ತು. ಆದರೂ, ಪ್ರಾದೇಶಿಕ ಭಾಷೆಗಳನ್ನು ಬದಿಗೊತ್ತಲಾಗಿರಲಿಲ್ಲ. ಇದೀಗ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಹಿಂದಿಯನ್ನು ಮತ್ತೆ ಮುನ್ನೆಲೆಗೆ ತರಲು ನೋಡುತ್ತಿದೆ. ಇಂಗ್ಲಿಷ್ ವಿದೇಶೀ ಭಾಷೆ ಎಂದೂ ಹೇಳುತ್ತಿದೆ.
ಬಿಜಿಪಿ, ಆರ್ ಎಸ್ ಎಸ್ ಮತ್ತು ಹಿಂದೂ ಪರಿವಾರದ ಕೇಂದ್ರ ಸರ್ಕಾರ ನಂಬಿಕೊಂಡಿರುವ ಚಿಂತನೆ ಎಂದರೆ, ʼಒಂದು ರಾಷ್ಟ್ರ, ಒಂದು ಭಾಷೆ.ʼ ಅದು ಹೇಳುವ ಇನ್ನೊಂದು ಮಾತಿನಲ್ಲೂ ಇದೇ ವಿಚಾರಧಾರೆ ಅಡಗಿದೆ: ʼಹಿಂದಿ, ಹಿಂದುತ್ವ, ಹಿಂದುಸ್ತಾನ್.ʼ ಇದು ಇಲ್ಲಿಗೇ ನಿಂತಿಲ್ಲ ಮತ್ತು ನಿಲ್ಲುವುದಿಲ್ಲ. ಒಂದೇ ಭಾಷೆ, ಒಂದೇ ಧರ್ಮ, ಒಂದೇ ಸಂಸ್ಕೃತಿ, ಒಂದೇ ರಾಷ್ಟ್ರ ಒಂದೇ ಜನಾಂಗ ಇತ್ಯಾದಿ ಮಾತುಗಳೆಲ್ಲ ಅದೇ ವಿಚಾರಕ್ಕೆ ತುಡಿಯುತ್ತವೆ. ಅನ್ಯಭಾಷೆ ಇಂಗ್ಲಿಷನ್ನು ಹೊರಗಿಡಬೇಕು, ಅನ್ಯ ಧರ್ಮೀಯರನ್ನು ಭಾರತದಿಂದ ಹೊರಗಿಡಬೇಕು, ʼಹಿಂದೂ, ನಾವೆಲ್ಲ ಒಂದುʼ-ಇಂಥ ಮಾತುಗಳು, ಕೂಗುಗಳು, ಸಿದ್ಧಾಂತಗಳು ಸುಮ್ಮನೇ ಅಲ್ಲ. ಬಹುತ್ವವನ್ನು ಒಪ್ಪದ, ಬಹುಮುಖೀ ಸಂಸ್ಕೃತಿಯನ್ನು ಮಾನ್ಯಮಾಡದ ಪಕ್ಷಗಳು, ಸಂಘಟನೆಗಳು ಸಹಜವಾಗಿಯೇ ಇಂಥ ಮಾತುಗಳನ್ನು ಆಡುತ್ತವೆ. ತಮ್ಮ ಅಧಿಕಾರವನ್ನು ಬಳಸಿಕೊಂಡು ಈ ಗುರಿಯನ್ನು ಮುಟ್ಟಲು ನೋಡುತ್ತವೆ. ಹಿಟ್ಲರ್ ಚಿಂತನೆಯಲ್ಲಿಯೂ ಇದೇ ಸಿದ್ಧಾಂತ ಇತ್ತು. ಇದು ಹಿಂಸೆಯನ್ನು ಒಪ್ಪುತ್ತದೆ. ವಿಭಿನ್ನ ನಂಬಿಕೆಗಳನ್ನು, ವಿಭಿನ್ನ ಸಂಸ್ಕೃತಿಗಳನ್ನು, ಬಗೆಬಗೆಯ ಜನ ಸಮುದಾಯಗಳನ್ನು ಕೊಲ್ಲುವ ಹಂತಕ್ಕೂ ಈ ಸಿದ್ಧಾಂತಗಳು ಹೋಗುತ್ತವೆ. ತಮ್ಮ ಗುರಿ ಸಾಧನೆಯಲ್ಲಿ ರಕ್ತಪಾತವಾಗುವುದನ್ನೂ ಅವು ಬೇಡ ಎನ್ನುವುದಿಲ್ಲ.
ಇಂಥ ಪಕ್ಷವೊಂದೇ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಈ ಹೊತ್ತಿನಲ್ಲಿ ಹಿಂದಿ ಮತ್ತೆ ಸರ್ವಾಧಿಕಾರದ ಭಾಷೆಯಾಗಿ ಕಾಣಿಸಿಕೊಂಡಿದೆ. ಕೇಂದ್ರ ಗೃಹಮಂತ್ರಿ ತಮ್ಮ ಗುಪ್ತ ಕಾರ್ಯಸೂಚಿಯನ್ನು ಬಹಿರಂಗವಾಗಿ ಸಣ್ಣ ದನಿಯಲ್ಲಿ, ʼಹಿಂದಿ ರಾಷ್ಟ್ರೀಯ ಭಾಷೆಯಾಗಿ, ಇಡೀ ರಾಷ್ಟ್ರದ ಭಾಷೆಯಾಗಿ ವಿಕಾಸಗೊಳ್ಳಲು ಎಲ್ಲರೂ ಕೈಜೋಡಿಸಬೇಕು, ಆಗ ವಿದೇಶೀ ಭಾಷೆಗೆ ಜಾಗ ಇರುವುದಿಲ್ಲʼ ಎಂಬ ಮಾತನ್ನು ಆಡಿದ್ದಾರೆ.

ಭಾಷಾ ಕದನಕ್ಕೆ ನಮ್ಮನ್ನು ಒತ್ತಾಯಿಸಬೇಡಿ : ಸ್ಟಾಲಿನ್
ಹಿಂದಿ ಏರಿಕೆಯ ಈ ಮಾತು ಹಿಂದಿಯೇತರ ರಾಜ್ಯಗಳನ್ನು, ವಿಶೇಷವಾಗಿ ದಕ್ಷಿಣ ರಾಜ್ಯಗಳನ್ನು ಕೆರಳಿಸಿದೆ. ಅನೇಕ ರಾಜಕೀಯ ಪಕ್ಷಗಳ ಮುಖಂಡರೂ ಈ ಹುನ್ನಾರವನ್ನು ಖಂಡಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರಂತೂ, ʼಭಾಷಾ ಕದನಕ್ಕೆ ನಮ್ಮನ್ನು ಒತ್ತಾಯಿಸಬೇಡಿʼ ಎಂದಿದ್ದಾರೆ. ʼಇದು ಭಾರತದ ಆತ್ಮದ ಮೇಲೆ ನಡೆಸಿರುವ ನೇರ ಪ್ರಹಾರʼ ಎಂದೂ ಅವರು ಹೇಳಿದ್ದಾರೆ. ಇಂಥ ಪ್ರತಿರೋಧ ಎಲ್ಲ ಕಡೆಯಿಂದಲೂ ಆರಂಭವಾಗಿದೆ. ಬಿಜೆಪಿಯ ಒಳಗಿನವರಲ್ಲೂ ಕೆಲವರು ಹಿಂದಿ ಹೇರಿಕೆಯ ವಿರೋಧೀ ಮಾತುಗಳನ್ನು ಆಡಿದ್ದಾರೆ. ಆದರೆ ಅದು ದೊಡ್ಡ ದನಿಯಾಗುವ ಸಾಧ್ಯತೆ ಇಲ್ಲ. ಅಂಥ ಮಾತುಗಳನ್ನು ಅಲ್ಲಿಯೇ, ಆಗಲೇ ಚಿವುಟಿ ಹಾಕುವ ವಿದ್ಯೆಯನ್ನು ಕೇಂದ್ರ ಗೃಹಮಂತ್ರಿ ಬಲ್ಲರು.
ಈಗ ಕೆಲವು ರಾಜ್ಯಗಳಲ್ಲಾದರೂ ಜಾರಿಯಲ್ಲಿರುವ ಹೊಸ ಶಿಕ್ಷಣ ನೀತಿ ಕರಡು ರೂಪದಲ್ಲಿ ಜನತೆಯ ಮುಂದಿಟ್ಟಾಗ ತಮಿಳುನಾಡು ಬಲವಾಗಿ ಪ್ರತಿಭಟಿಸಿತ್ತು. ಗುಪ್ತ ಹಿಂದಿ ಹೇರಿಕೆಯನ್ನು ಅದು ಗ್ರಹಿಸಿತ್ತು. ಪ್ರತಿರೋಧದ ಬಿಸಿ ಜೋರಾಗಿಯೇ ಇದ್ದುದರಿಂದ ಕರಡನ್ನು ಮಾರ್ಪಡಿಸಲಾಯಿತು.
ಇನ್ನೊಂದು ನಿಜ ಸಂಗತಿಯನ್ನೂ ನಾವು ಗಮನಿಸಬೇಕು. ಹಿಂದಿ ವಿಚಾರದಲ್ಲಿ ಉತ್ತರ ದಕ್ಷಿಣ ಎಂದು ಬಿಂಬಿಸಲಾಗುತ್ತಿದೆ. ಹಿಂದಿಗೆ ದಕ್ಷಿಣ ರಾಜ್ಯಗಳ ವಿರೋಧ ಮಾತ್ರ ಎಂಬ ಚಿತ್ರವನ್ನೂ ದೊಡ್ಡದು ಮಾಡಿ ಹೇಳಲಾಗುತ್ತಿದೆ. ಆದರೆ ಉತ್ತರ ಭಾರತದ ಎಲ್ಲ ರಾಜ್ಯಗಳಲ್ಲೂ ಹಿಂದಿ ಇಲ್ಲ. ಪಂಜಾಬ್ ಗೆ ಪಂಜಾಬಿ ಇದೆ; ಗುಜರಾತ್ ಗೆ ಗುಜರಾತಿ ಭಾಷೆ; ಪಶ್ಚಿಮ ಬಂಗಾಳ, ಒಡಿಶಾ, ಈಶಾನ್ಯ ರಾಜ್ಯಗಳು ಹೀಗೆ ಅನೇಕ ಉತ್ತರ ಭಾರತದ ರಾಜ್ಯಗಳಿಗೆ ತಮ್ಮದೇ ಭಾಷೆಗಳಿವೆ. ಅವೇನೂ ಹಿಂದಿಯ ಅಡಿಯಾಳಾಗಲು ಬಯಸುವುದಿಲ್ಲ.
ದಿಲ್ಲಿಯ ಗದ್ದುಗೆಯಲ್ಲೂ ಹಿಂದಿಯ ದರ್ಬಾರನ್ನೇ ನಡೆಸಲು ನೋಡಲಾಗುತ್ತಿದೆ. ಹಿಂದಿ ಬಾರದ ರಾಜಕಾರಣಿಯನ್ನು ಕಡೆಗಣಿಸಿ ನೋಡುವ ಪ್ರಯತ್ನಗಳೂ ಗುಪ್ತಗಾಮಿನಿಯಾಗಿ ಹರಿಯುತ್ತಿವೆ. ಅತ್ಯುತ್ತಮ ರೀತಿಯಲ್ಲಿ ಇಂಗ್ಲಿಷ್ ಬಲ್ಲ ರಾಜಕಾರಣಿಗಳೂ ಕಷ್ಟಪಟ್ಟು ಹಿಂದಿಯಲ್ಲಿ ಮಾತನಾಡುವುದನ್ನು ನಾವು ನೋಡುತ್ತಿದ್ದೇವೆ. ಹಿಂದಿ ಭಾಷೆಯನ್ನು ವ್ಯಕ್ತಿತ್ವದ, ಸಾಮರ್ಥ್ಯದ ಮಾನದಂಡವಾಗಿ ಮಾಡಲಾಗಿದೆ. ಹೀಗಾಗಿಯೇ ನಮ್ಮ ಶಶಿ ತರೂರ್ ತಾನೂ ಹಿಂದಿಯಲ್ಲಿ ಚೆನ್ನಾಗಿ ಮಾತನಾಡುತ್ತೇನೆಂದು ತೋರಿಸುತ್ತಾರೆ. ಜಯರಾಂ ರಮೇಶ್ ಸೇರಿದಂತೆ ಹಲವರು ಇಂಥ ದಾರಿಯಲ್ಲಿಯೇ ಇದ್ದಾರೆ. ತತ್ವವಾಗಿ ಹಿಂದಿಯನ್ನು ಅವರು ಒಪ್ಪದಿದ್ದರೂ, ಹಿಂದಿ ಇಲ್ಲದಿದ್ದರೆ ದಿಲ್ಲಿಯಲ್ಲಿ ಉಳಿಗಾಲವಿಲ್ಲ ಎನ್ನುವಂತೆ ಹಿಂದಿಗೇ ಮೊರೆಹೋಗಿದ್ದಾರೆ. ಉರ್ದು ತಿಳಿದಿರುವ ನಮ್ಮ ಖರ್ಗೆ ಅವರಿಗೆ ಹಿಂದಿ ಅಂಥ ಸವಾಲಲ್ಲ.
ಇದನ್ನು ಓದಿದ್ದೀರಾ? ನಾವು ತಿಳಿದಿರುವಂತೆಯೇ ಜಗತ್ತು ಒಡೆದು ಹೋಗುತ್ತಿದೆ | ಅರುಂಧತಿ ರಾಯ್
ಭಾಷೆ ಎನ್ನುವುದು ಅಧಿಕಾರ ಚಲಾಯಿಸುವ ಹತಾರವಾಗಬಾರದು. ಫ್ಯಾಸಿಸ್ಟ್ ಶಕ್ತಿಗಳ ಗುಪ್ತ ಕಾರ್ಯಾಚರಣೆಯ ಅನುಷ್ಠಾನಕ್ಕೆ ಮಾರ್ಗವೂ ಆಗಬಾರದು. ಹಾಗೆ ಆದಾಗಲೆಲ್ಲ ಅದನ್ನು ಪ್ರತಿಭಟಿಸುವ ಶಕ್ತಿಗಳು ಸಹಜವಾಗಿಯೇ ಸಿಡಿದೇಳುತ್ತವೆ. ಶಾಂತಿ, ಅಹಿಂಸೆಯ ಮೂಲಕವೇ ಪಡೆದುಕೊಂಡ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಿಂಸೆ ಭುಗಿಲೇಳಬಾರದು. ಅಂಥದಕ್ಕೆ ಯಾವ ಆಡಳಿತವೂ ಅವಕಾಶ ಕೊಡಬಾರದು.
ನಿಜಕ್ಕೂ ಮನಷ್ಯನ ವಿಕಾಸ, ಸಮಾಜದ ಬೆಳವಣಿಗೆ, ರಾಷ್ಟ್ರದ ಮುನ್ನಡೆ ಹೇಗಾಗಬೇಕು ಎಂಬುದನ್ನು ತೀವ್ರ ಕಾಳಜಿಯಿಂದ ಚಿಂತಿಸಿದಾಗ ಮಾತ್ರ ಸಮಸ್ಯೆಗಳ ಪರಿಹಾರ ಸಾಧ್ಯ. ಹೇರಿಕೆಯಿಂದಲ್ಲ, ಬಲವಂತದಿಂದಲ್ಲ.