ʼಹಿಂದೂ ಪದಕ್ಕೂ, ಸನಾತನ ಧರ್ಮಕ್ಕೂ ಐತಿಹಾಸಿಕವಾಗಿ ಯಾವುದೇ ಜೈವಿಕ ಸಂಬಂಧ ಇಲ್ಲʼ

ಹಿಂದೂ ಪದಕ್ಕೂ ಸನಾತನ ಧರ್ಮಕ್ಕೂ ಯಾವುದೇ ಸಂಬಂಧ ವಿಲ್ಲ

ಹಿಂದೂ ಪದಕ್ಕೂ, ಸನಾತನ ಧರ್ಮ ಅಥವಾ ವೈದಿಕ ಧರ್ಮಕ್ಕೂ ಐತಿಹಾಸಿಕವಾಗಿ ಯಾವುದೇ ಜೈವಿಕ ಸಂಬಂಧ ಇಲ್ಲ. ಸುಮಾರು 1300 ವರ್ಷಗಳ ಹಿಂದೆ ಈ ಪದವು ಸಂಸ್ಕೃತವೂ ಸೇರಿದಂತೆ, ಭಾರತದ ಯಾವುದೇ ಭಾಷೆಗಳಲ್ಲಿ ಇರಲಿಲ್ಲ. ರಾಜಕೀಯವಾಗಿ ತಾನು ʼಹಿಂದೂʼ ಎಂದು ಕರೆದುಕೊಂಡ ಮೊದಲ ಅರಸ ಬಹುಶ: 1352ರಲ್ಲಿದ್ದ ವಿಜಯನಗರದ ಬುಕ್ಕರಾಯ 

ನಿನ್ನೆ ಮೊನ್ನೆಯವರೆಗೆ ಸಾಮಾನ್ಯವಾಗಿದ್ದ ಪದಗಳು ಹಾಗೂ ತಿಳಿವಳಿಕೆಗಳು ಇವತ್ತು ವಿವಾದಗಳನ್ನು ಹುಟ್ಟು ಹಾಕುತ್ತಿವೆ. ʼಹಿಂದೂʼ ಪದದ ಕುರಿತು ಸತೀಶ್‌ ಜಾರಕಿಹೊಳಿಯವರ ಹೇಳಿದ್ದರಲ್ಲಿ ತಪ್ಪಿದ್ದರೆ, ʼಸರಿʼ ಏನು ಎಂಬುದನ್ನು ಜನರಿಗೆ ತಿಳಿಸಿಹೇಳಬೇಕು. ಆದರೆ ಇವತ್ತು ಹಾಗೆ ಆಗುತ್ತಿಲ್ಲ. ಸರ್ವಾಧಿಕಾರಿಯಾಗಿ ಬೆಳೆಯುತ್ತಿರುವ ವ್ಯವಸ್ಥೆಯಲ್ಲಿ ಸಂವಾದ ಇರುವುದಿಲ್ಲ, ಬದಲು ಆಕ್ರಮಣ ನಡೆಯುತ್ತದೆ. ರಾಜಕೀಯ ಲಾಭಕ್ಕಾಗಿಯೇ ಎಲ್ಲರೂ ಪ್ರಯತ್ನಿಸುತ್ತಿರುತ್ತಾರೆ.

ಇವತ್ತು ʼಹಿಂದುತ್ವʼದ ರಾಜಕಾರಣ ಮಾಡುವವರು ಹಿಂದುತ್ವಕ್ಕೆ ಆಧಾರವಾಗಿ ವೈದಿಕ ಜ್ಞಾನ ಪರಂಪರೆಯನ್ನು ಮುಂದಿಡುತ್ತಾರೆ. ಈಚಿನ ದಿನಗಳಲ್ಲಿ ಅದನ್ನು ʼಸನಾತನ ಧರ್ಮʼ ಎಂದೂ ಕರೆಯಲಾಗುತ್ತಿದೆ. ಈ ಸನಾತನ ಧರ್ಮವು ಅನೇಕ ದೇವರುಗಳನ್ನು ಒಳಗೊಂಡಿದ್ದು, ಅವರಲ್ಲಿ ಯಾವೊಬ್ಬ ದೇವರೂ ʼನಾನು ಹಿಂದೂ ಧರ್ಮವನ್ನುʼ ಸೃಷ್ಟಿಸಿದ್ದೇನೆʼ ಎಂದು ಹೇಳಿಯೇ ಇಲ್ಲ. ಜೊತೆಗೆ ಸಂಸ್ಕೃತದಲ್ಲಿ ಹೇಳಲಾಗಿರುವ ಸನಾತನ ಧರ್ಮದ ಬಗ್ಗೆ ಬಹುತೇಕ ಭಾರತೀಯರಿಗೆ ಏನೂ ಗೊತ್ತಿಲ್ಲ. ಅವರಿವರು, ಮುಖ್ಯವಾಗಿ ಪುರೋಹಿತರು ಹೇಳಿದ್ದನ್ನು ಇತರರು ಮುಗ್ಧವಾಗಿ ನಂಬಿದ್ದಾರೆ ಅಷ್ಟೆ.

ʼಹಿಂದೂʼ ಪದವು ಸಂಸ್ಕೃತ ಜನ್ಯ ಅಲ್ಲವೆಂಬುದನ್ನು ಎಲ್ಲ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ವೈದಿಕ ಸಾಹಿತ್ಯದಲ್ಲಿ ಈ ಪದದ ಉಲ್ಲೇಖ ಇಲ್ಲ. ನಿಘಂಟು ತಜ್ಞ ಸರ್‌ ಮೋನಿಯರ್‌ ವಿಲಿಯಂಸ್‌ ಅವರು ʼಹಿಂದೂ ಅಥವಾ ಇಂಡಿಯಾ ಪದವು ದೇಸೀ ಮೂಲದ್ದು ಅಲ್ಲʼ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪ್ರಾಚೀನವಾದ ಬೌದ್ಧ ಮತ್ತು ಜೈನ ಗ್ರಂಥಗಳಲ್ಲಿ ʼಹಿಂದೂʼ ಶಬ್ದ ಬಳಕೆಯಾಗಿಲ್ಲ. ಇವತ್ತು ಸಂವಿಧಾನ ಅಂಗೀಕರಿಸಿದ 24 ಅಧಿಕೃತ ಭಾಷೆಗಳಲ್ಲಿರುವ ಪ್ರಾಚೀನ ಪಠ್ಯಗಳೂ ಈ ಪದವನ್ನು ಬಳಸಿಲ್ಲ. ಕನ್ನಡದ ವಡ್ಡಾರಾಧನೆ, ವಿಕ್ರಮಾರ್ಜುನ ವಿಜಯ, ಗದಾಯುದ್ಧ, ರಾಮಚಂದ್ರಚರಿತ ಪುರಾಣ, ಧರ್ಮಾಮೃತ, ಗದುಗಿನ ಭಾರತ ಮೊದಲಾದ ಕೃತಿಗಳಲ್ಲಿಯೂ ಹಿಂದೂ ಪದ ಇಲ್ಲ. ದೇವರಿಗೇ ಕನ್ನಡ ಹೇಳಿಕೊಟ್ಟ ನಮ್ಮ ವಚನಕಾರರೂ ಹಿಂದೂ ಪದವನ್ನು ಬಳಸಿಲ್ಲ.

AV Eye Hospital ad

ವಿದ್ವಾಂಸರು ಈಗಾಗಲೇ ಹೇಳಿರುವಂತೆ, ʼಹಿಂದೂ ಪದʼವನ್ನು ಸೃಷ್ಟಿಸಿ, ಬಳಸಿದವರು ಭಾರತ ದೇಶಕ್ಕೆ ಹೊರಗಿನಿಂದ ಆಗಮಿಸಿದವರು. ಹಾಗೆ ಬರುವವರು ಸಿಂಧೂ ನದಿಯನ್ನು ದಾಟಿಯೇ ಭಾರತದೊಳಕ್ಕೆ ಪ್ರವೇಶಿಸುವುದು ಭೌಗೋಳಿಕವಾಗಿ ಅನಿವಾರ್ಯವಾಗಿತ್ತು. ಕ್ರಿಸ್ತಶಕಪೂರ್ವ 325ರಲ್ಲಿ ಗ್ರೀಕ್‌ ನ ಮೆಸಿಡೋನಿಯಾದಿಂದ ಭಾರತದ ಕಡೆಗೆ ದಂಡೆತ್ತಿ ಬಂದಿದ್ದ ಅಲೆಕ್ಸಾಂಡರ್‌ ನು ಸಿಂಧೂ ನದಿಯನ್ನು ದಾಟಿದ್ದ. ಅರಿಸ್ಟಾಟಲ್‌ ನ ಶಿಷ್ಯನಾಗಿದ್ದ ಆತನಿಗೆ ಹೋಮರನ ಇಲಿಯೆಡ್‌ ಬಾಯಿಪಾಠ ಬರುತ್ತಿತ್ತಂತೆ. ಅಂಥ ವಿದ್ವಾಂಸ ಮತ್ತು ಶೂರನಾಗಿದ್ದ ಅವನು ಸಿಂಧೂ ನದಿಯನ್ನು ʼಇಂದೂʼ ಎಂದು ದಾಖಲಿಸಿಕೊಂಡ (ವಸಾಹತು ಆಡಳಿತಗಾರರು ಭಾರತದ ಹೆಸರುಗಳಲ್ಲಿನ ʼಡ ʼ ವನ್ನು ʼರʼ ಮಾಡಿಕೊಂಡ ಹಾಗೆ, ಕನ್ನಡ-ಕೆನರಾ, ಕೊಡಗು-ಕೂರ್ಗ್‌). ಭಾಷಾ ಬಳಕೆಯಲ್ಲಿ ಇವೆಲ್ಲ ಸಾಮಾನ್ಯ ಸಂಗತಿಗಳು. ಆ ಕಾಲದಲ್ಲಿ ಪ್ರಚಲಿತದಲ್ಲಿ ಇತ್ತು ಎನ್ನಲಾದ ʼಭಾರತ ವರ್ಷʼ ಪದವು ಅಲೆಕ್ಸಾಂಡರನ ಕಿವಿಗೆ ಯಾಕೆ ಬೀಳಲಿಲ್ಲವೋ ತಿಳಿಯದು.

ಸಿಂಧುನದಿ
ಸಿಂಧೂನದಿ

ಅರ್ಥವೇ ಇಲ್ಲದ ಹಿಂದೂ ಪದ- ಆರ್‌ ಸೂರ್ಯನಾರಾಯಣ: ಅಲೆಕ್ಸಾಂಡರನ ಆನಂತರ ಭಾರತದ ಕಡೆಗೆ ಬಂದ ಅಫ್ಘಾನ್‌ ಮತ್ತು ಪರ್ಶೀಯಾದವರು ಸಿಂಧೂ ನದಿಯನ್ನು ದಾಟಿ ಬರುವಾಗಲೂ ʼಹಿಂದೂ ನದಿʼಯೆಂದೇ ದಾಖಲಿಸಿಕೊಂಡರು. ಹೀಗಾಗಿ ಪ್ರಾಚೀನ ಭಾರತದ ವಾಯುವ್ಯ ಭಾಗವು ʼಹಿಂದೂಸ್ಥಾನʼವೆಂದೇ ಪ್ರಚಾರಕ್ಕೆ ಬಂತು. ಸಂಸ್ಕೃತದ ʼಸʼವು  ಪಾರಸಿಯಲ್ಲಿ ʼಹʼ ಆಗಿ ಪರಿವರ್ತನೆಗೊಳ್ಳುವುದು ಸಹಜವಾದ ಪ್ರಕ್ರಿಯೆ. ಮುಂದೆ ಮುಸಲ್ಮಾನರ ಆಳ್ವಿಕೆ ಪಸರಿಸಿದಂತೆ ಈ ಪದವೂ ವಿಸ್ತಾರವಾಯಿತು. ಜವಾಹರಲಾಲ ನೆಹರೂ ಅವರು ತಮ್ಮ ʼಡಿಸ್ಕವರಿ ಆಫ್‌ ಇಂಡಿಯಾʼದಲ್ಲಿ ʼಹಿಂದೂ ಪದವು ಲಿಖಿತವಾಗಿ ನಮಗೆ ಮೊದಲು ಕಾಣಿಸಿಕೊಳ್ಳುವುದು ಎಂಟನೇ ಶತಮಾನದ ತಾಂತ್ರಿಕ ಪಠ್ಯಗಳಲ್ಲಿʼ ಎಂದು ಬರೆದಿದ್ದಾರೆ. ಆರ್‌ ಸೂರ್ಯನಾರಾಯಣ ಎಂಬ ವಿದ್ವಾಂಸರ ಪ್ರಕಾರʼ 20-25 ಶತಮಾನಗಳ ಹಿಂದಿನ ಬ್ರಾಹ್ಮಣ ಭೂಮಿಯನ್ನು ಪಾಶ್ಚಾತ್ಯರು ಅರ್ಥವೇ ಇಲ್ಲದ ಹಿಂದೂ ಪದವನ್ನು ಬಳಸಿ ವಿವರಿಸಿದರು (Universal Religion, p.1-2)

ಇರಾನಿನ ಅವೆಸ್ತಾ ಹೆಸರಿನ ಧಾರ್ಮಿಕ ಪಠ್ಯಗಳನ್ನು ರಚಿಸಿದವರು ಝೋರಾಸ್ಟ್ರಿಯನ್ನರು (ಪಾರ್ಸಿಗಳು). ಈ ಪಠ್ಯಗಳಲ್ಲಿ  ಹಿಂದೂ ಪದವನ್ನು ಅವಹೇಳನಕಾರಿಯಾಗಿ ʼಗುಲಾಮʼ ಎಂಬರ್ಥದಲ್ಲಿ ಬಳಸಲಾಗಿದೆಯಂತೆ. ಇದು ಇದ್ದರೂ ಇರಬಹುದು. ಯಾಕೆಂದರೆ ತಮ್ಮದಲ್ಲದ ಧಾರ್ಮಿಕ ಗುಂಪಿನವರೆಲ್ಲರನ್ನೂ ಜನರು ಹಾಗಿಯೇ ಭಾವಿಸುತ್ತಾರೆ. ಒಂದು ಕಾಲಕ್ಕೆ ಭೂವಾಚಕವಾಗಿ ಬಳಕೆಯಲ್ಲಿದ್ದ ಪದವು ಹೀಗೆ ಮೌಲ್ಯಮಾಪನಕ್ಕೆ ಒಳಗಾದದ್ದು 11ನೇ ಶತಮಾನದಲ್ಲಿ. ಯಾರು ಆಳುತ್ತಾರೋ ಅವರ ಧೋರಣೆಗಳಿಗನುಗುಣವಾಗಿ ಮತಗಳ ಮರು ಮೌಲ್ಯಮಾಪನ ನಡೆಯುತ್ತಲೇ ಇರುತ್ತದೆ. ʼತಮ್ಮದು ಶ್ರೇಷ್ಠ, ಇತರರದು ಕನಿಷ್ಠʼ ಎಂಬ ನೆಲೆಯಲ್ಲಿ ಹಿಂದೂ ಪದವೂ ತನ್ನ ಅರ್ಥವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ, ಕುಗ್ಗಿಸಿಕೊಳ್ಳುತ್ತಾ ಬಂದಿದೆ. 1964ರಲ್ಲಿ ಲಕ್ನೋದಿಂದ ಪ್ರಕಟವಾದ Lughet-e-Kishwari ಎಂಬ ಪರ್ಶಿಯನ್‌ ನಿಘಂಟಿನಲ್ಲಿ ಹಿಂದೂ ಅಂದರೆ  “chore [thief], dakoo [dacoit], raahzan [waylayer], and ghulam [slave] ಎಂಬ ಅರ್ಥಗಳನ್ನು ನೀಡಲಾಗಿದೆ.

Urdu-Feroze-ul-Laghat ಎಂಬ ಇನ್ನೊಂದು ನಿಘಂಟುವಿನಲ್ಲಿ ಹಿಂದೂ ಪದಕ್ಕೆ barda (obedient servant), sia faam (black color) and kaalaa (black) ಎಂಬರ್ಥಗಳನ್ನು ನೀಡಲಾಗಿದೆ. ಇದು ಎಲ್ಲ ಕಡೆಯೂ ನಡೆಯುವ ಕತೆಯೇ ಹೌದು. ಮನುಸ್ಮೃತಿಯು ʼಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಇವರ ಜಾತಿಯ ಹೆಸರನ್ನೆತ್ತಿ ಬೈಯುವ ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕುʼ ಎಂದು ಆದೇಶಿಸುತ್ತದೆ (8-271). ತಮ್ಮ ಅಧಿಕಾರವನ್ನು ಕಾಪಿಟ್ಟುಕೊಳ್ಳಲು ಇತರರನ್ನು ಕೀಳಾಗಿ ಕಾಣುವುದು ಚರಿತ್ರೆಯಲ್ಲಿ  ಕಂಡುಬರುವ  ಸಾಮಾನ್ಯ  ಅಂಶವಾಗಿದೆ.

ಇದನ್ನು ಓದಿದ್ದೀರಾ? ʼಸಚಿವರು ತೊಲಗಲಿ, ಶಿಕ್ಷಣ ಉಳಿಯಲಿʼ ಚಳವಳಿಯೊಂದೇ ನಮ್ಮ ಮುಂದಿರುವ ಮಾರ್ಗ: ಶಿಕ್ಷಣ ತಜ್ಞ ನಿರಂಜನಾರಾಧ್ಯ

ಒಟ್ಟಾರೆಯಾಗಿ ಹೇಳುವುದಾದರೆ, ಹಿಂದೂ ಪದಕ್ಕೂ ಸನಾತನ ಧರ್ಮ ಅಥವಾ ವೈದಿಕ ಧರ್ಮಕ್ಕೂ ಯಾವುದೇ ಜೈವಿಕ ಸಂಬಂಧ ಐತಿಹಾಸಿಕವಾಗಿ ಇಲ್ಲ. ಸುಮಾರು 1300 ವರ್ಷಗಳ ಹಿಂದೆ ಈ ಪದವು ಸಂಸ್ಕೃತವೂ ಸೇರಿದಂತೆ, ಭಾರತದ ಯಾವುದೇ ಭಾಷೆಗಳಲ್ಲಿ ಇರಲಿಲ್ಲ. ರಾಜಕೀಯವಾಗಿ ತಾನು ʼಹಿಂದೂʼ ಅಂತ ಕರೆದುಕೊಂಡ ಮೊದಲ ಅರಸನೆಂದರೆ ಬಹುಶ: 1352ರಲ್ಲಿದ್ದ ವಿಜಯನಗರದ ಬುಕ್ಕರಾಯ (ಹಿಂದೂರಾಯ ಸುರತ್ರಾಣ). ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ʼಹಿಂದೂʼ ಪದಕ್ಕೆ ʼಮುಸ್ಲಿಂʼ ಅಲ್ಲದ ಎಂಬ ಅರ್ಥವೂ ಪ್ರಾಪ್ತಿಸಿ, ಅದು ಈಗಲೂ ಮುಂದುವರೆಯುತ್ತಿದೆ. ಸಮಾಜವನ್ನು ವಿಭಜಿಸಿ ನೋಡುವವರಿಗೆ ಅದೀಗ ಬಹಳ ಸಹಕಾರಿಯಾಗಿದೆ.  ಆದರೆ ಈಗ ಹಿಂದೂ ಪದವು ಭಾರತದ ಬಹುತೇಕ ಭಾಷೆಗಳಲ್ಲಿ ಲಭ್ಯ ಇದೆ. ಅದು ಇವತ್ತಿನ ರಾಜಕೀಯದ ಭಾಗ ಅಷ್ಟೇ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app