ಪಠ್ಯ ಪರಿಷ್ಕರಣೆ ವಿವಾದ| ಇತಿಹಾಸ ತಿರುಚಿದ್ದು ರಾಜಾರಾಮ ಹೆಗಡೆಯವರ ಗಮನಕ್ಕೆ ಬರದೇ ಹೋದವೇ?

B C Nagesh

ಪದವಿ ಮತ್ತು ಸ್ನಾತಕೋತ್ತರ ಪಠ್ಯಕ್ರಮದಲ್ಲಿ ಈಗ ಸಮ್ಮತವಾಗಿರುವ ಬಗೆಯ ಇತಿಹಾಸ ಬೋಧಿಸುತ್ತ ಶಾಲಾ ಪಠ್ಯಪುಸ್ತಕಗಳಲ್ಲಿ ಮಾತ್ರ ಅದಕ್ಕಿಂತ ಭಿನ್ನವಾದ ರೀತಿಯಲ್ಲಿ ಪಾಠಗಳನ್ನು ಸೃಷ್ಟಿಸುವದು ಎಷ್ಟು ಸರಿ? ಹೆಗಡೆಯವರು ಸಮಿತಿಯ ಸದಸ್ಯರಾಗಿದ್ದೂ ಅವರೇ ಬದಲಾಯಿಸಿದರೇ? ಇನ್ನಾರೋ ಮಾಡಿದ ಬದಲಾವಣೆಗಳಿಗೆ ಮೌನ ಸಮ್ಮತಿ ಸೂಚಿಸಿದರೇ?  

ಪಠ್ಯಪುಸ್ತಕ ಪರಿಷ್ಕರಣೆಯ ಕುರಿತ ಹಲವು ವಾದ ವಿವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ಈ ಕುರಿತು ಹೆಚ್ಚು ಮಾತನಾಡುವ ಉತ್ಸಾಹ ನನಗೆ ಸಾಧ್ಯವಾಗಿರಲಿಲ್ಲ. ಇದಕ್ಕೆ ಪುನರ್ ಪರಿಷ್ಕರಣ ಸಮಿತಿಯ ಅಧ್ಯಕ್ಷ ಮತ್ತು ಶಿಕ್ಷಣ ಸಚಿವರನ್ನೊಳಗೊಂಡು ಹಲವರು ತಮ್ಮ ಹೇಳಿಕೆಗಳ ಮೂಲಕ ಶೈಕ್ಷಣಿಕವಾಗಿರಬೇಕಾಗಿದ್ದ ಈ ವಿಚಾರಗಳ ಮಂಡನೆಗೆ ರಾಜಕೀಯ ಪರಿಭಾಷೆಯ ಮೊರೆ ಹೋದದ್ದು ಒಂದು ಕಾರಣ. “ಕಾಂಗ್ರೆಸ್ ಮತ್ತು ಆ ಪಕ್ಷದ ಮುಖಂಡರ ಕೃಪಾಶೀರ್ವಾದಕ್ಕೆ ಒಳಗಾದವರು ಬರೆದದ್ದೇ ಇತಿಹಾಸ, ಅದೇ ಸರಿ ಎನ್ನುವಂತಾಗಿದೆ” ಎಂಬ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಹೇಳಿಕೆಯ ಕುರಿತು ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯ ಪರಿಷ್ಕರಣ ಸಮಿತಿ ಸದಸ್ಯರಾಗಿದ್ದ ಡಾ. ಅಶ್ವಥನಾರಾಯಣ “ಪ್ರಜಾವಾಣಿ”ಗೆ ತಾವು ಬರೆದ ಪತ್ರದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಪಠ್ಯಗಳು “ಇತಿಹಾಸದಲ್ಲಿ ಘಟಿಸಿದ ಅನ್ಯಾಯ, ದಬ್ಬಾಳಿಕೆ, ಆಕ್ರಮಣಗಳಿಗೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಂತಿರಬೇಕು” ಎಂದು ಶಿಕ್ಷಣ ಸಚಿವರು ಹೇಳಿರುವುದನ್ನೂ ಅವರು ಪ್ರಸ್ತಾಪಿಸಿದ್ದಾರೆ. ಶಿಕ್ಷಣ ಸಚಿವರು ಇತಿಹಾಸ, ಅದರ ಉದ್ದೇಶ ಇತ್ಯಾದಿಗಳ ಕುರಿತು ತಮ್ಮದೇ ಗ್ರಹಿಕೆಗಳನ್ನು ಹೊಂದಿರಲು ಸ್ವತಂತ್ರರು. ಇತಿಹಾಸದ ಅಭ್ಯಾಸಿಗಳು ದೀರ್ಘಕಾಲದಿಂದ  ಬೆಳೆದುಕೊಂಡು ಬಂದ ಚರಿತ್ರೆಯ ತತ್ವಜಿಜ್ಞಾಸೆ, ಅದರ ಅಧ್ಯಯನ ಮತ್ತು ಸಂಶೋಧನ ವಿಧಾನಗಳಿಗೆ ಬದ್ಧರು. ಏಕೆಂದರೆ ಇತಿಹಾಸವೆಂಬುದು ಬ್ರಿಟಿಷ್ ಇತಿಹಾಸಕಾರ ಇ. ಎಚ್. ಕಾರ್ ಹೇಳುವಂತೆ, ʼಇತಿಹಾಸಕಾರ ಮತ್ತು ಅವನು ಕಂಡುಕೊಂಡ ಸಂಗತಿಗಳ (ಫ್ಯಾಕ್ಟ್ಸ್) ನಡುವೆ ಕೊನೆಯಿಲ್ಲದೇ ನಡೆಯುವ ಪಾರಸ್ಪರಿಕ ಸಂಬಂಧದ ಪ್ರಕ್ರಿಯೆ, ವರ್ತಮಾನ ಮತ್ತು ಗತದ ನಡುವೆ ಅನವರತ ನಡೆಯುವ ಸಂಭಾಷಣೆʼ.   

ಎಂಟನೆಯ ತರಗತಿಯ ಇತಿಹಾಸ ಪಠ್ಯದಲ್ಲಿ ಭಾರತದಲ್ಲಿ ಪ್ರಥಮ ಹಂತದ ನಗರೀಕರಣವನ್ನು ಪ್ರತಿನಿಧಿಸುವ ಸಿಂಧೂ ನಾಗರಿಕತೆ ಎಂದು ಗುರುತಿಸುವ ಪಾಠವನ್ನು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಪರಿಷ್ಕರಿಸಿದ ಪಠ್ಯದಲ್ಲಿ “ಸಿಂಧೂ-ಸರಸ್ವತಿ ನಾಗರಿಕತೆ” ಎಂದು ಹೆಸರಿಸಿದ ಔಚಿತ್ಯದ ಬಗ್ಗೆ, ಆ ನಾಗರಿಕತೆಯನ್ನು ಹಾಗೆ ಕರೆಯುವಲ್ಲಿ ಚಕ್ರತೀರ್ಥ ಅಧ್ಯಕ್ಷತೆಯ ಪರಿಷ್ಕರಣ ಸಮಿತಿಯ ಸದಸ್ಯರಾದ ಇತಿಹಾಸ ಪ್ರಾಧ್ಯಾಪಕ ಡಾ. ರಾಜಾರಾಮ್ ಹೆಗಡೆಯವರ ಪಾತ್ರದ ಬಗ್ಗೆ ಪ್ರಶ್ನೆಗಳೆದ್ದಿವೆ. ನಿಜ, ಈ ವರೆಗೆ ಇತಿಹಾಸ ಅಧ್ಯಯನದಲ್ಲಿ ಒಮ್ಮತ ಮೂಡಿರುವ ಅಂಶಗಳನ್ನು ಮಕ್ಕಳಿಗೆ ಸಾರಾಂಶ ರೂಪದಲ್ಲಿ ನೀಡುವದು ಇತಿಹಾಸ ತಜ್ಞರ ಕರ್ತವ್ಯ. ಮೊದಲು ಸಿಂಧೂ ಸಂಸ್ಕೃತಿ ಎಂದು ಕರೆಯಲ್ಪಡುತ್ತಿದ್ದ ನಾಗರಿಕತೆಯನ್ನು ಸಿಂಧೂ ಮತ್ತು ಅದರ ಉಪನದಿಗಳ ತಟದ ನೆಲೆಗಳಲ್ಲಿ ಕಂಡುಬಂದ ಸಾಮಗ್ರಿಯ ಜೊತೆ ಸಾಮ್ಯವಿದ್ದಂಥದೇ ಸಾಮಗ್ರಿ, ಆ ನದಿ ವ್ಯವಸ್ಥೆಯ ಪ್ರದೇಶಗಳಾಚೆ ಉದಾ: ಗುಜರಾತ್, ರಾಜಸ್ತಾನ ರಾಜ್ಯಗಳ ಕೆಲವೆಡೆ ಕೂಡ ಕಂಡು ಬಂದ ಹಿನ್ನೆಲೆಯಲ್ಲಿ ಈಗ ಅದರ ಒಂದು ಪ್ರಮುಖ ನೆಲೆಯಾದ ಹರಪ್ಪದ ಹೆಸರನ್ನೇ ಆ ನಾಗರಿಕತೆಗೆ ಕೊಡಲಾಗಿದೆ.

Image
ಆರ್ಯನ್ನರು
ಆರ್ಯನ್ನರು

ಭಾರತದ ಚರಿತ್ರಲೇಖನದಲ್ಲಿ ಭಾಷಿಕ, ಮತೀಯ ಮತ್ತು ಪ್ರಾದೇಶಿಕ ಸ್ವರೂಪದ ಸಂಕುಚಿತ ಪರಿಗಣನೆಗಳು ವಿವಿಧ ರೂಪಗಳಲ್ಲಿ ಬೆಳೆದುಕೊಂಡು ಬಂದಿವೆ. ಅಂಥ ಪ್ರವೃತ್ತಿಗಳು ಕೆಲವೊಮ್ಮೆ ಇತಿಹಾಸ ಸಂಶೋಧನೆ ಹಾಗೂ ಬರವಣಿಗೆಯ ನೀತಿ-ನಿಯಮಗಳನ್ನೆಲ್ಲ ಗಾಳಿಗೆ ತೂರಿ ವರ್ತಮಾನದ ರಾಜಕೀಯ ಆಟಗಳ ಆಡುಂಬೊಲವಾಗಿ ಮಾರ್ಪಟ್ಟದ್ದೂ ಇದೆ. ಬರಗೂರು ಅವರ ಸಮಿತಿಯ ಪಠ್ಯದಲ್ಲಿ ಭಾರತದ ಪ್ರಾಚೀನ ನಾಗರಿಕತೆಗಳು ಎಂಬ ಪಠ್ಯದಲ್ಲಿ ಮೊದಲ ಹಂತದ ನಗರೀಕರಣ ಬೆಳೆದು ಬಂದ ಕುರಿತು ಸುಮಾರು 150 ವರ್ಷಗಳ ಹಿಂದೆ ಪಂಜಾಬಿನ ಸಿಂಧೂ ಕಣಿವೆಯ ಪ್ರದೇಶದಲ್ಲಿ ಹರಪ್ಪದ ಪ್ರಾಚೀನ ನೆಲೆ ಆಕಸ್ಮಿಕವಾಗಿ ಬೆಳಕಿಗೆ ಬಂದು, ನಂತರ ಪ್ರಾಕ್ತನಶಾಸ್ತ್ರಜ್ಞರು ವೈಜ್ಞಾನಿಕ ಸಂಶೋಧನೆ ಕೈಗೊಂಡಾಗ ಅದೊಂದು ಪ್ರಾಚೀನ ನಗರವೆಂದು ಅವರಿಗೆ ಮನವರಿಕೆಯಾದದ್ದು, ಸುತ್ತಲೂ ಕಂಡುಬಂದ ಮತ್ತಿತರ ನೆಲೆಗಳಿಗೂ ಈ ಮೊದಲು ಸಿಕ್ಕ ನೆಲೆಗಳಿಗೂ ಸಾಮ್ಯತೆ ಇದ್ದ ಕಾರಣ ಅವುಗಳನ್ನು ಸಿಂಧೂ ಕಣಿವೆಯ ನಾಗರಿಕತೆಯೆಂದು ಕರೆಯಲಾದದ್ದು ಇತ್ಯಾದಿ ಆರಂಭಿಕ ವಿವರಣೆ ಇದೆ.

ನಂತರ ಆ ಸಂಸ್ಕೃತಿಯ ನಗರ ಯೋಜನೆ, ನಗರ ಜೀವನ, ಅವನತಿ ಎಲ್ಲ ವಿವರಗಳು ಮುಗಿದಾದ ಮೇಲೆ ಋಗ್ವೇದ  ಕಾಲ, ಉತ್ತರ ವೇದಕಾಲ ಇತ್ಯಾದಿಗಳು ಬರುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಚಕ್ರತೀರ್ಥ ಅಧ್ಯಕ್ಷತೆಯ ಪರಿಷ್ಕೃತ ಪಠ್ಯದಲ್ಲಿ ಈ ಪಾಠ “ಸಿಂಧೂ ಸರಸ್ವತಿ ನಾಗರಿಕತೆ” ಎಂದಾಗುತ್ತದೆ. ಪಾಠ ಪ್ರಾರಂಭವಾಗುವದು ಹೀಗೆ:  ವೇದಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ಋಗ್ವೇದವೇ  ಪ್ರಪಂಚದ ಅತ್ಯಂತ ಪ್ರಾಚೀನ ವಾಂಗ್ಮಯ ಎಂಬುದು ಭಾರತೀಯರಾದ ನಮಗೆ ಹೆಮ್ಮೆಯ ವಿಷಯ. ವೇದಗಳಲ್ಲಿ ಕಂಡು ಬರುವ ವಿವರಗಳ ಪೈಕಿ ಮುಖ್ಯವಾದದ್ದು ಸರಸ್ವತಿ ನದಿ. ಋಗ್ವೇದದ ಕಾಲದಲ್ಲಿ ಸರಸ್ವತಿ ತುಂಬಿ ಹರಿಯುವ ಬಲುದೊಡ್ಡ ನದಿಯಾಗಿತ್ತೆಂದು ತಿಳಿದುಬರುತ್ತದೆ. ಕಾಲಕಳೆದಂತೆ ಪ್ರಾಕೃತಿಕ ಕಾರಣಗಳಿಂದ ಇಂಗುತ್ತ ಬಂದ ಅದು ಸಾ.ಶ.ಪೂ 2000ದ ಹೊತ್ತಿಗೆ ಬತ್ತಿಹೋಯಿತು. ಇದರ ಆಧಾರದ ಮೇಲೆ ಋಗ್ವೇದದ ಕಾಲ ಕಡಿಮೆಯೆಂದರೆ ಸಾ.ಶ.ಪೂ 3000ಕ್ಕೂ ಹಿಂದಿನದು ಎಂದು ಇತಿಹಾಸಜ್ಞರು ಸಿದ್ಧಪಡಿಸಿದ್ದಾರೆ. ಅಂದರೆ ಇಂದಿಗೆ 5000 ವರ್ಷಗಳಿಗೂ ಮುನ್ನ!

ಬರಗೂರರ ಪರಿಷ್ಕರಣೆಯ ಪಠ್ಯದಲ್ಲಿ ವೇದಗಳ ಕಾಲ ಈಗ ಸಮ್ಮತವಾಗಿರುವಂತೆ ಸಾ.ಶ.ಪೂ 1500 ರಿಂದ ಸಾ.ಶ.ಪೂ 700 ಎಂದಿದ್ದರೆ ಚಕ್ರತೀರ್ಥ ಸಮಿತಿ ಅದನ್ನು ಪರಿಷ್ಕರಿಸಿ ಸಾ.ಶ.ಪೂ 3000 ದಷ್ಟು ಹಿಂದಕ್ಕೆ ಕೊಂಡೊಯ್ದಿದೆ. ಬರಗೂರು ಪಠ್ಯದಲಿ ಸಿಂಧೂ ನಾಗರಿಕತೆಯ ಕಾಲ ಈಗ ಸಮ್ಮತವಿರುವಂತೆ ಸುಮಾರು 4600 ವರ್ಷಗಳಷ್ಟು ಪುರಾತನವೆಂದಾಗಿದ್ದರೆ ಚಕ್ರತೀರ್ಥ ಪಠ್ಯ ಋಗ್ವೇದವನ್ನು ಈಗಿನಿಂದ 5000 ವರ್ಷ ಪುರಾತನಗೊಳಿಸಿ ಪೂರ್ವವೇದ ಕಾಲವನ್ನು ಸಿಂಧೂ ನಾಗರಿಕತೆಗಿಂತ ಮೊದಲಿನದಾಗಿಸುತ್ತದೆ. ಚೋದ್ಯವೆಂದರೆ ಬರಗೂರು ನೇತೃತ್ವದ ಸಮಿತಿ ವಿಜಯ್ ಪೂಣಚ್ಚ ಅಧ್ಯಕ್ಷತೆಯ ರಚನಾ ಸಮಿತಿ  ಸಿದ್ಧಪಡಿಸಿದ ಯಾವ ಪಠ್ಯವನ್ನು ಪರಿಷ್ಕರಿಸಿತ್ತೋ ಆ ರಚನಾ ಸಮಿತಿಯಲ್ಲಿಯೂ ರಾಜಾರಾಮ್ ಹೆಗಡೆಯವರು ಪರಿಶೀಲಕರಾಗಿದ್ದರು ಮತ್ತು ಚಕ್ರತೀರ್ಥ ಅಧ್ಯಕ್ಷತೆಯ ಪುನರ್-ಪರಿಶೀಲನ ಸಮಿತಿಯಲ್ಲಿಯೂ ಸದಸ್ಯರಾಗಿದ್ದವರು. ಹೆಗಡೆಯವರು ವೃತ್ತಿನಿರತರಾಗಿದ್ದ ಕುವೆಂಪು ವಿಶ್ವವಿದ್ಯಾಲಯ ಒಳಗೊಂಡು ಎಲ್ಲ ಇತಿಹಾಸ ಪಠ್ಯಕ್ರಮಗಳಲ್ಲಿರುವ ಭಾರತದ ಇತಿಹಾಸದ ಕಾಲಾನುಕ್ರಮ ಮೊದಲು ಹರಪ್ಪನ್ ಅಥವಾ ಸಿಂಧೂ ನಾಗರಿಕತೆ ಮತ್ತು ನಂತರ ವೇದಕಾಲ. ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಸಮಿತಿಯ ಪಾಠ ಸಿಂಧೂ ಮತ್ತದರ ಉಪನದಿಗಳ ಜೊತೆ ಸರಸ್ವತಿ ನದಿಯನ್ನು ಸೇರಿಸಿ ಸಪ್ತಸಿಂಧೂ ಎಂದು ಕರೆದು “ಸರಸ್ವತಿಯ ಹರಿವು ವ್ಯಾಪಿಸಿಕೊಂಡ ಪ್ರದೇಶಗಳಲ್ಲೆಲ್ಲ…ದೊರೆತ ಮೊದಮೊದಲ ನಗರಗಳಲ್ಲಿ ಹರಪ್ಪ, ಮೊಹೆಂಜೊದಾರೊ ಪ್ರಮುಖವಾದವು. ಹೀಗಾಗಿಯೇ ಪ್ರಾಚೀನ ಭಾರತದ ನಾಗರಿಕತೆಯನ್ನು ಬಳಕೆಯಲ್ಲಿ ಹೆಚ್ಚಾಗಿ ಹರಪ್ಪ ನಾಗರಿಕತೆ ಎಂದು ಕರೆಯಲಾಗುತ್ತದೆ. ಆದರೆ ಅದನ್ನು ‘ಸಿಂಧೂ ಸರಸ್ವತಿ ನಾಗರಿಕತೆ’ ಎಂದು ಕರೆಯುವದು ಸೂಕ್ತ” ಎನ್ನುತ್ತದೆ. ಈ ಹೆಸರಿನ ನಾಗರಿಕತೆಯನ್ನು ಎಲ್ಲಾದರೂ ಇತಿಹಾಸತಜ್ಞರು ಮಾನ್ಯ ಮಾಡಿ ಸಾರ್ವತ್ರಿಕ ಪಠ್ಯದ ಭಾಗವಾಗಿ ಪ್ರಸ್ತುತಪಡಿಸಿದ್ದಾರೆಯೆ?

Image
ಹರಪ್ಪ ನಾಗರಿಕತೆಯ ಕುರುಹುಗಳು
ಹರಪ್ಪ ನಾಗರಿಕತೆಯ ಕುರುಹುಗಳು

ಇತಿಹಾಸದ ಅಧ್ಯಯನ ಕ್ರಮದ ಮಾನದಂಡಗಳಲ್ಲಿ ಅದು ತೇರ್ಗಡೆಯಾಗಿದೆಯೇ? ಇದಕ್ಕೆ ಉತ್ತರ ಇಲ್ಲವೆಂಬುದೇ ಆಗಿದೆ. ಹರಪ್ಪನ್ ಸಂಸ್ಕೃತಿಗೆ ವೈದಿಕ ಬಣ್ಣ ಕೊಡುವ ರೀತಿಯಲ್ಲಿ ಈ ನಾಗರಿಕತೆಯನ್ನು ಸೂಚಿಸಲು ಸರಸ್ವತಿ ಸಿಂಧೂ ನಾಗರಿಕತೆ ಎಂಬ ಶಬ್ದಬಳಕೆ್ ಮಾಡುವುದನ್ನು ವಿಮರ್ಶಿಸಿದ ಪ್ರೊ. ಇರ್ಫಾನ್ ಹಬೀಬ್ ಸಿಂಧೂ ಜಲಾನಯನ ಪ್ರದೇಶವು ಕೆಲ ಋತುಗಳಲ್ಲಷ್ಟೇ ಹರಿಯುವ ಸಣ್ಣ ನದಿಯಾದ ಸರಸ್ವತಿಯನ್ನು ಒಳಗೊಳ್ಳುತ್ತದಾದರೂ ಈ ಎರಡಕ್ಕೂ ತಳಕು ಹಾಕಲು ಬಲವಾದ ಭೌಗೋಳಿಕ ಸಮರ್ಥನೆ ಇಲ್ಲವೆನ್ನುತ್ತಾರೆ. 

ಹಾಕ್ಡಾ ಘಗ್ಗಡ್  (ಸರಸ್ವತಿಯು ಇದರ ಉಪನದಿ) ಕಣಿವೆ ತುಂಬಾ ಜನಸಮೃದ್ಧದಿಂದ ಕೂಡಿತ್ತು, ಸಿಂಧೂ ನಾಗರಿಕತೆಯ ಕೇಂದ್ರವಲಯವಾಗಿತ್ತೆಂದು ಹೇಳಲು ಬೇಕಾದ ವಾಸ್ತವ ಸಾಕ್ಷ್ಯಗಳಿಲ್ಲ. ಈಗ ಬತ್ತಿಹೋದ ಹಾಕ್ಡಾ, ಘಗ್ಗಡ್ ಮತ್ತು ಚೌತಾಂಗ್ ನದಿಗಳು ಅವು ಹರಿಯುತ್ತಿದ್ದ ಕಾಲದಲ್ಲೂ ಸಣ್ಣ ನದಿಗಳಾಗಿದ್ದು ಪ್ರವಾಹದಿಂದ ಮುಕ್ತವಾಗಿದ್ದ ಅಲ್ಲಿ ಕೃಷಿ ಚಟುವಟಿಕೆ ಏರ್ಪಟ್ಟಿದ್ದರಿಂದ ಆ ನದಿಪಾತ್ರಗಳ ಸಮೀಪ ಜನವಸತಿ ಸಾಪೇಕ್ಷವಾಗಿ ಹೆಚ್ಚಿತಾದರೂ ಕಾಲಾಂತರದಲ್ಲಿ ನದಿಗಳು ಬತ್ತಿ ಕೃಷಿಯು ಕುಗ್ಗಿದ ಕಾರಣ ಅವು ವಾಸರಹಿತ ನೆಲೆಮಾತ್ರವಾಗಿ ಉಳಿದವು. ಸಿಂಧು ನಾಗರಿಕತೆಯು ಆರ್ಯರದು ಅಷ್ಟೇ ಅಲ್ಲ ಅದು ವೈದಿಕ ಯುಗದ್ದು ಅಥವಾ ವೇದಕಾಲಾನಂತರದ್ದು ಎಂದು ಗಟ್ಟಿಯಾಗಿ ಪ್ರತಿಪಾದಿಸಲು ನೋಡಿದ ಪ್ರವೃತ್ತಿಗಳನ್ನೂ ಪ್ರಸ್ತಾಪಿಸುತ್ತ ಅವರು ತಮ್ಮ “ದಿ ಇಂಡಸ್ ಸಿವಿಲೈಝೇಶನ್” ಪುಸ್ತಕದಲ್ಲಿ ಅದನ್ನು ಸಾಧಾರವಾಗಿ ನಿರಾಕರಿಸಿದ್ದಾರೆ. ಸಿಂಧೂ ನಾಗರಿಕತೆ ವೈದಿಕ ಮೂಲದ್ದೆಂಬ ದುರ್ಬಲ ವಾದಸರಣಿಯನ್ನು ರಾಮಶರಣ್ ಶರ್ಮಾ ತಮ್ಮ ʼವಾಸ್ ದಿ ಹರಪ್ಪನ್ ಕಲ್ಚರ್ ವೇದಿಕ್?ʼ ಎಂಬ ಉಪನ್ಯಾಸದಲ್ಲಿ ವಿಮರ್ಶಿಸಿದ ವಿವರಗಳನ್ನು‌ ಇರ್ಫಾನ್ ಹಬೀಬ್ ಅವರ ʼದಿ ಇಂಡಸ್ ಸಿವಿಲೈಝೇಶನ್ʼ ಪುಸ್ತಕದ ಕನ್ನಡ ಅನುವಾದಕ್ಕೆ ನಾನು ಬರೆದ ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದು ಇಲ್ಲಿ ಆ ವಿವರಗಳಿಗೆ ಹೋಗುವುದಿಲ್ಲ.

ಸಿಂಧೂ ಸರಸ್ವತಿ-ಋಗ್ವೇದ ಕಾಲ ವಾದ ಹಾಸ್ಯಾಸ್ಪದ ಎಂದವರು ಇವರೇ!

ಋಗ್ವೇದ ಮತ್ತು ಸಿಂಧೂ ನಾಗರಿಕತೆಗಳ ಕುರಿತು ನಮಗೆ ತಿಳಿದಿರುವುದನ್ನು ಪರಸ್ಪರ ಪೂರಕವೆಂದು ಹೊಂದಿಸುವ ಪ್ರಯತ್ನಗಳ ತೊಂದರೆಯ ಅರಿವು ರಾಜಾರಾಮ್ ಹೆಗಡೆಯವರಿಗೆ ಇಲ್ಲವೆಂದಲ್ಲ. ಇರ್ಫಾನ್ ಹಬೀಬ್ ಅವರ “ಪ್ರಿಹಿಸ್ಟರಿ” ಪುಸ್ತಕದ ಕನ್ನಡ ಅನುವಾದಕ್ಕೆ ಹೆಗಡೆ ತಾವು ಬರೆದ ಮುನ್ನುಡಿಯಲ್ಲಿ ವಸಾಹತು ಯುಗದಲ್ಲಿ ಬೆಳೆದುಬಂದ ಆರ್ಯರು ಭಾರತಕ್ಕೆ ಹೊರಗಿನಿಂದ ಬಂದವರೆಂಬ ನಿರೂಪಣೆ, ಆರ್ಯ-ದ್ರಾವಿಡ ಜನಾಂಗಗಳ ಕಲ್ಪನೆಗಳನ್ನು ಹೊಂದಿದ ಸೆಕ್ಯುಲರ್ ವಾದಿ ಬಣ ಮತ್ತು ಆರ್ಯರು ಭಾರತೀಯ ಮೂಲದವರು, ಸಿಂಧೂ ಸಂಸ್ಕೃತಿ ಆರ್ಯರದು ಎಂಬ ನಿರೂಪಣೆಯ ಹಿಂದುತ್ವವಾದಿ ಬಣಗಳೆರಡರ ವಾದಗಳೂ ನಮ್ಮ  ಪ್ರಾಗೈತಿಹಾಸದ ಬೆಳಕಿನಲ್ಲಿ ಹಾಸ್ಯಾಸ್ಪದವಾಗಿ ತೋರುತ್ತವೆ ಎನ್ನುತ್ತಾರೆ. ಹಾಗೇ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸರಣಿಯ “ಭಾರತ ಉಪಖಂಡದ ಆಧುನಿಕಪೂರ್ವ ಚರಿತ್ರೆ” ಸಂಪುಟಕ್ಕೆ ತಾವು ಬರೆದ “ವೈದಿಕ ಆರ್ಯರು: ಇತ್ತೀಚಿನ ಚರ್ಚೆಗಳು” ಲೇಖನದಲ್ಲಿ ಋಗ್ವೇದದ ಕಾಲವನ್ನು ಕ್ರಿ. ಪೂ 1500 ರಿಂದ 1000ದ ಅವಧಿಯಲ್ಲಿ ಇಡಬಹುದು ಎನ್ನುತ್ತಾರೆ. ಆದರೆ ಅವರು ಸದಸ್ಯರಾಗಿರುವ ಸಮಿತಿ ಪುನರ್ ಪರಿಶೀಲಿಸಿದ ಎಂಟನೆಯ ತರಗತಿಯ ಪಠ್ಯ ಋಗ್ವೇದದ ಕಾಲ ಕ್ರಿ.ಪೂ 3000ಕ್ಕೆ ಹೋಗುತ್ತದೆ ಎನ್ನುತ್ತದೆ.

ಇದನ್ನು ಓದಿದ್ದೀರಾ? ಪಠ್ಯಪರಿಷ್ಕರಣೆ ವಿಚಾದ| ಸಮಿತಿ ಸದಸ್ಯರ ವರದಿ ಧಿಕ್ಕರಿಸಿ ರಹಸ್ಯ ತಿದ್ದುಪಡಿ ಮಾಡಿದ ಅಧ್ಯಕ್ಷ ಚಕ್ರತೀರ್ಥ!

“ಕಳೆದ ಕೆಲವು ವರ್ಷಗಳಿಂದ ಆರ್ಯರ ಮೂಲ ಭಾರತವೇ, ಅವರು ಸರಸ್ವತಿ ತೀರದಿಂದಲೇ ಹೊರದೇಶಗಳಿಗೆ ವಲಸೆ ಹೋಗಿದ್ದಾರೆ, ಅವರೇ ಸಿಂಧೂ ನಾಗರಿಕತೆಯ ಕರ್ತೃಗಳು ಎಂಬ ವಾದ ಮಂಡಿಸಲಾಗುತ್ತಿದೆ, ಆದರೆ ಇಂಥ ವಾದಗಳು ಸದ್ಯಕ್ಕೆ ಅಸಂಬದ್ಧವಾಗಿ ತೋರುತ್ತವೆ” ಎಂದು ಹೆಗಡೆಯವರು ಕನ್ನಡ ವಿಶ್ವವಿದ್ಯಾಲಯದ ಪುಸ್ತಕದಲ್ಲಿನ ತಮ್ಮ ಲೇಖನದಲ್ಲಿ ಬರೆದಿದ್ದರೆ ಎಂಟನೆಯ ತರಗತಿ ಪಠ್ಯದಲ್ಲಿ ಸಿಂಧೂ ಸಂಸ್ಕೃತಿಯ ಪಾಠ ಪ್ರಾರಂಭವಾಗುವದೇ ಋಗ್ವೇದದ ಪ್ರಸ್ತಾಪದೊಂದಿಗೆ. ಅಲ್ಲದೇ ಸಿಂಧೂ ನಾಗರಿಕತೆ ಮತ್ತು ಋಗ್ವೇದದ ಕಾಲಗಳನ್ನು ಸಮಕಾಲೀನಗೊಳಿಸಲಾಗಿದೆ. ಹೆಗಡೆಯವರು ರಚನಾಸಮಿತಿಯಲ್ಲಿ ಪರಿಶೀಲಕರಾಗಿ ಇದ್ದು ಬರಗೂರು ಅಧ್ಯಕ್ಷರಾಗಿದ್ದ ಪರಿಷ್ಕರಣ ಸಮಿತಿ ಪರಿಷ್ಕರಿಸಿದ ಮತ್ತು ಅದೇ ಹೆಗಡೆಯವರು ಸದಸ್ಯರಾಗಿರುವ ಚಕ್ರತೀರ್ಥ ಅಧ್ಯಕ್ಷತೆಯ ಪುನರ್ ಪರಿಷ್ಕರಣ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕದ ಇತಿಹಾಸದ ಪಾಠದಲ್ಲಿ ಹೀಗೆ ಒಂದಕ್ಕೊಂದು ವಿಭಿನ್ನವಾದ ರೀತಿಯ ನಿರೂಪಣೆ ಮತ್ತು ವಿವರಗಳಿವೆ.

ಪದವಿ ಮತ್ತು ಸ್ನಾತಕೋತ್ತರ ಪಠ್ಯಕ್ರಮದಲ್ಲಿ ಈಗ ಸಮ್ಮತವಾಗಿರುವ ಬಗೆಯ ಇತಿಹಾಸ ಬೋಧಿಸುತ್ತ ಶಾಲಾ ಪಠ್ಯಪುಸ್ತಕಗಳಲ್ಲಿ ಮಾತ್ರ ಅದಕ್ಕಿಂತ ಭಿನ್ನವಾದ ರೀತಿಯಲ್ಲಿ ಪಾಠಗಳನ್ನು ಸೃಷ್ಟಿಸುವದು ಎಷ್ಟು ಸರಿ? ಹೆಗಡೆಯವರು ಸಮಿತಿಯ  ಸದಸ್ಯರಾಗಿದ್ದೂ ಇವು ಅವರ ಗಮನಕ್ಕೆ ಬರದೇ ಹೋದವೇ? ಆ ಬದಲಾವಣೆಗಳನ್ನು ಅವರು ಸ್ವತಃ ಮಾಡಿದರೇ? ಅಥವಾ ಇನ್ನಾರೋ ಮಾಡಿದ ಬದಲಾವಣೆಗಳಿಗೆ ಮೌನ ಸಮ್ಮತಿ ಸೂಚಿಸಿದರೇ? ಇದನ್ನು ಅವರೇ ಹೇಳಬೇಕು.

ನಿಮಗೆ ಏನು ಅನ್ನಿಸ್ತು?
6 ವೋಟ್