ಸಮಾನತೆಯೇ ಇಲ್ಲವಾದರೆ ಹಿಂದೂಗಳೆಲ್ಲ ಒಂದಾಗುವುದು ಸಾಧ್ಯವೇ...?

dalith-issue

ಅನ್ಯಧರ್ಮದವರ ಜೊತೆ ಮದುವೆಯಾಗಲು ಹೋದ ದಲಿತ ಹುಡುಗಿ ಹಿಂದೂವಾಗಿ ಕಾಣುತ್ತಾಳೆ. ಆದರೆ ದೈವ, ದೇವರು, ಧಾರ್ಮಿಕ ಕಟ್ಟುಪಾಡುಗಳು ಬಂದಾಗ ಅದೇ ದಲಿತರು ಹಿಂದೂಗಳೇ ಅಲ್ಲವೇನೋ ಎನ್ನುವಂತೆ ಸಮಾಜ ನಡೆದುಕೊಳ್ಳುತ್ತದೆ! ಹಾಗಾದರೆ ದಲಿತರು ಇತರ ಹಿಂದೂಗಳಂತೆ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಬಾರದೇ?

ಕಳೆದ ಒಂದು ವಾರದಲ್ಲಿ ಎರಡು ಪ್ರಮುಖ ಘಟನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ, ಅಚ್ಚರಿ ಮತ್ತು ನೋವಾಯಿತು. ಚಿಕ್ಕಮಗಳೂರಿನಲ್ಲಿ ದಲಿತ ಯುವತಿಯೋರ್ವಳು ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಲು ಮುಂದಾದಾಗ ಕೆಲವೊಂದು ಸ್ವಯಂಘೋಷಿತ ಹಿಂದೂಪರ ಸಂಘಟನೆಯವರು ವಿರೋಧಿಸಿ, ಹೋರಾಟ, ಹಾರಾಟ ಮಾಡಿದ್ದರು. ಪೊಲೀಸರು ರಕ್ಷಣೆಯ ನೆಪದಲ್ಲಿ ಸಾಕಷ್ಟು ವಿಚಾರಣೆಯನ್ನು ಮಾಡಿ, ಯುವಪ್ರೇಮಿಗಳನ್ನು ದೂರ ಮಾಡಲು ಸಾಧ್ಯವೇ ಎಂದೂ ಪ್ರಯತ್ನಿಸಿದ್ದರು ಎಂದರೆ ತಪ್ಪಾಗಲಾರದು. ಆದರೆ ಆ ದಲಿತ ಯುವತಿಯ ದೃಢತೆ ಹಾಗೂ ಹಿಮ್ಮೆಟ್ಟದ ಬಿಗಿ ನಿಲುವಿನಿಂದಾಗಿ ಅದೇ ಮುಸ್ಲಿಂ ಯುವಕನೊಂದಿಗೆ ವಿವಾಹವಾಯಿತು. ಈ ಜೋಡಿಯ ಹಿಂದೆ ನಿಂತವರು ದಲಿತ ಪರ ಸಂಘಟನೆಗಳು. ಅವರ ಬೆಂಬಲದಿಂದಾಗಿ ಪ್ರೇಮಿಗಳಿಬ್ಬರು ಒಂದಾಗಿದ್ದಾರೆ. ಸ್ವಯಂಘೋಷಿತ ಹಿಂದೂಪರ ಸಂಘಟನೆಗಳು ಇದನ್ನು ಲವ್ ಜಿಹಾದ್ ಎಂದರೆ ದಲಿತಪರ ಸಂಘಟನೆಯವರು ಇದು ಅವರಿಬ್ಬರ ವೈಯಕ್ತಿಕ ನಿರ್ಧಾರ ಎಂದಿವೆ.

ಮತ್ತೊಂದು ವಿಚಿತ್ರ ಘಟನೆ ನಡೆದದ್ದು ಕೋಲಾರ ಜಿಲ್ಲೆಯ ಮಾಲೂರು ಬಳಿಯ ಟೇಕಲ್ ಎಂಬಲ್ಲಿ. 14 ವರ್ಷ ಪ್ರಾಯದ ಬಾಲಕನೋರ್ವ ಭೂತಮ್ಮನ ಮೂರ್ತಿ ಉತ್ಸವ ನಡೆಯುತ್ತಿದ್ದಾಗ ಕೆಳಕ್ಕೆ ಬಿದ್ದ ದೇವರನ್ನು ಹೊರುವ ಗುಜ್ಜದ ಕೋಲನ್ನು ಎತ್ತಿಕೊಟ್ಟನೆಂಬ ಕಾರಣಕ್ಕೆ 60 ಸಾವಿರ ರೂಪಾಯಿ ದಂಡ ಕಟ್ಟಬೇಕಾದ ಶಿಕ್ಷೆ ಅನುಭವಿಸುತ್ತಿದ್ದಾನೆ. ಇದಕ್ಕೆ ಕಾರಣ ಆ ಬಾಲಕ ದಲಿತನೆಂಬ ಸಂಗತಿ! ನಿಜವಾಗಿಯೂ ಈ ಸಾಮಾಜಿಕ ವ್ಯವಸ್ಥೆ ಇನ್ನೂ ತಾರತಮ್ಯ, ಅಸಮಾನತೆ, ಅಸ್ಪೃಶ್ಯತೆಯ ಮಡುವಿನಲ್ಲೇ ತೇಲುತ್ತಿದೆ ಎಂಬ ಮಾತಿಗೆ ಇಂಬು ಕೊಟ್ಟಂತಿದೆ!

ಮೇಲಿನ ಎರಡು ಘಟನೆಗಳಲ್ಲಿ ಅನ್ಯಧರ್ಮದವರ ಜೊತೆ ಮದುವೆಯಾಗಲು ಹೋದರೆ ದಲಿತ ಹುಡುಗಿ ಹಿಂದೂವಾಗಿ ಕಾಣುತ್ತಾಳೆ. ಆದರೆ ದೈವ, ದೇವರು, ಭೂತಗಳ ವಿಚಾರ ಬಂದಾಗ, ಧಾರ್ಮಿಕ ಕಟ್ಟುಪಾಡುಗಳು ಬಂದಾಗ ಅದೇ ದಲಿತರು ಹಿಂದೂಗಳೇ ಅಲ್ಲವೇನೋ ಎನ್ನುವಂತೆ ಅಸ್ಪೃಶ್ಯತೆಯ ಕೂಪದಲ್ಲಿ ಕುಸಿಯುವಂತೆ ಮಾಡುತ್ತದೆ ಈ ಜಾತಿ ವ್ಯವಸ್ಥೆಯ ಸಮಾಜ! ಹಾಗಾದರೆ ಅವರು ಇತರ ಹಿಂದೂಗಳಂತೆ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಬಾರದೇ? ಇಂತಹ ದಂಡ, ಶಿಕ್ಷೆ, ಬಹಿಷ್ಕಾರಗಳು ಕೆಲವು ಕಡೆಯಾದರೆ, ಅಘೋಷಿತ ಬಹಿಷ್ಕಾರಗಳು ಈಗಲೂ ಹಲವೆಡೆ ಹಾಗೆಯೇ ಇವೆ! ಹೀಗೆಯೇ ಆದರೆ ಸಮಾನತೆಯ ಅಡಿಪಾಯದಲ್ಲಿ ಹಿಂದೂ ಧರ್ಮವನ್ನು ಕಟ್ಟುವುದು ಹೇಗೆ? ಮತಾಂತರವನ್ನು ತಡೆಯುವುದು ಹೇಗೆ? ದಲಿತರನ್ನು ಹೊರತುಪಡಿಸಿ ಹಿಂದೂ ಧರ್ಮ ಕಟ್ಟಲಾದೀತೇ? ಹೀಗೆಯೇ ತಾರತಮ್ಯ ಮುಂದುವರೆದರೆ ದಲಿತರು ಹಿಂದೂಧರ್ಮದಲ್ಲಿ ಉಳಿಯುತ್ತಾರೆಯೇ? ಇವೇ ಮೊದಲಾದ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕಾದ ಕಾಲ ಬಂದಿದೆ.

Image
ಮುಸ್ಲಿಂ ಯುವಕನನ್ನು ಪ್ರೇಮವಿವಾಹವಾದ ಚಿಕ್ಕಮಗಳೂರಿನ ದಲಿತ ಯುವತಿ
ಮುಸ್ಲಿಂ ಯುವಕನನ್ನು ಪ್ರೇಮವಿವಾಹವಾದ ಚಿಕ್ಕಮಗಳೂರಿನ ದಲಿತ ಯುವತಿ

ದಲಿತರನ್ನು, ಹಿಂದುಳಿದವರನ್ನು ಅಸ್ಪೃಶ್ಯರನ್ನಾಗಿ ನೋಡಿದ ಪರಿಣಾಮದಿಂದ ಹಾಗೂ ಅವರಿಗೆ ಸಾಮಾಜಿಕ ಸಮಾನತೆಯನ್ನು ನಿರಾಕರಿಸಿದ್ದರಿಂದ ಅವರುಗಳಲ್ಲಿ ಬಹುತೇಕರು ಮತಾಂತರದತ್ತ ಯೋಚಿಸಿದ್ದು. ಅಂದು ಅಂಬೇಡ್ಕರ್ ರವರನ್ನೇ ಬಿಡದ ಈ ಜಾತೀಯತೆಯ ಭೂತ ಇಂದೂ ಸಹ ಜೀವಂತವಾಗಿದೆ! ಹಾಗಾಗಿ ಬಾಬಾ ಸಾಹೇಬರು ತುಳಿದ ಹಾದಿಯಲ್ಲೇ ಅದೆಷ್ಟೋ ಮಂದಿ ದಲಿತರು ಬೌದ್ಧ ಧರ್ಮದತ್ತ ವಾಲಿದರು. ತಮಗೆ ಎಲ್ಲಿ ಗೌರವ, ಸಮಾನತೆ ದೊರೆಯುತ್ತದೋ ಆ ಸಮಾಜದತ್ತ ದಲಿತರು, ಹಿಂದುಳಿದವರು ಆಕರ್ಷಿತರಾಗಿ ಅಲ್ಲಿನ ಧರ್ಮವನ್ನು ಒಪ್ಪಿಕೊಳ್ಳುವುದನ್ನು ತಪ್ಪೆಂದು ಹೇಳಲಾದೀತೇ? ಹಾಗಾಗಿ ದಲಿತರ, ಹಿಂದುಳಿದವರ ಆತ್ಮಗೌರವಕ್ಕೆ ಚ್ಯುತಿ ಬರದಂತೆ ನಡೆಸಿಕೊಂಡು, ಅವರನ್ನು ನಮ್ಮರೆಂದು ಒಪ್ಪಿಕೊಂಡು ಸಮಾಜವನ್ನು ಕಟ್ಟಬೇಕಾಗಿದೆ.

ಬಸವಣ್ಣ 12ನೇ ಶತಮಾನದಲ್ಲಿ ತಾರತಮ್ಯ ರಹಿತ ಸಮಾಜ ಕಟ್ಟುವುದಕ್ಕಾಗಿಯೇ ಲಿಂಗಾಯತ ಧರ್ಮವನ್ನು ಹುಟ್ಟು ಹಾಕಿದರು. ಮುಂದೆ ನಾರಾಯಣ ಗುರುಗಳು ಸಹ ಈ ಅಸ್ಪೃಶ್ಯತೆ, ಮಡಿಮೈಲಿಗೆ ವಿರುದ್ಧ ಸಾಮಾಜಿಕ ಕ್ರಾಂತಿ ಮಾಡಿದರು. ಅಂಬೇಡ್ಕರರು ದಲಿತರ, ಹಿಂದುಳಿದವರ ಅಭ್ಯುದಯಕ್ಕಾಗಿ ಮೀಸಲಾತಿಯನ್ನು ತಂದರು. ಆದರೂ ಇಂದಿಗೂ ದಲಿತರ ಮೇಲಿನ ದೌರ್ಜನ್ಯ, ಬಹಿಷ್ಕಾರ ಹಾಗೆಯೇ ಉಳಿದಿದೆ ಎಂದರೆ ಈ ಜಾತಿಪದ್ಧತಿ ಅದೆಷ್ಟು ಗಟ್ಟಿಯಾಗಿ ನಮ್ಮ ಮನಸ್ಸಿನಲ್ಲಿ ಬೇರೂರಿರಬಹುದು ಊಹಿಸಿ. ನಮ್ಮ ನಮ್ಮ ಮನದೊಳಗಿನ ಜಾತಿಯ ವಿಷಬೀಜವನ್ನು ಹೊರಹಾಕಿದಾಗ ದಲಿತ ಬಲಿತರೆಂಬ ಭೇದಭಾವ ದೂರ ಮಾಡಲು ಸಾಧ್ಯ. ಇಲ್ಲವಾದರೆ ದಲಿತರು ನಮ್ಮಿಂದ ದೂರವಾಗುವ ದಿನ ದೂರವಿಲ್ಲ.

ಇದನ್ನು ಓದಿದ್ದೀರಾ? ಮುಸ್ಲಿಂ ವಿರೋಧಿ ವಿಷಯವುಳ್ಳ ಟ್ವೀಟ್‌ಗಳು ಭಾರತದಲ್ಲಿಯೇ ಹೆಚ್ಚು : ಐಸಿವಿ ವರದಿ

ಈ ಮಣ್ಣಿನ ಮೂಲನಿವಾಸಿಗಳು, ಶ್ರಮಜೀವಿಗಳು, ಮುಗ್ಧರು ಹಾಗೂ ಪ್ರತಿಭಾನ್ವಿತ ವರ್ಗವಾದ ಈ ದಲಿತರನ್ನು ಕಳೆದುಕೊಂಡರೆ ಹಿಂದೂ ಧರ್ಮ ಪರಿಪೂರ್ಣವಾಗಿರಲು ಸಾಧ್ಯವೇ? ಮೇಲ್ವರ್ಗ- ಕೆಳವರ್ಗ ಎನ್ನುವ ಪರಿಕಲ್ಪನೆಯೇ ಈ ಜಾತೀಯತೆಗೆ ಒತ್ತು ನೀಡುವಂತೆ ಮಾಡುತ್ತಿದೆ. ಹಾಗಾಗಿ ನಾವೆಲ್ಲ ಮನುಷ್ಯರೆನ್ನುವ ಹಾಗೂ ಅವರವರ ಸಂಸ್ಕೃತಿ ಅವರವರ ಅಸ್ಮಿತೆ ಎನ್ನುವ ಗೌರವದ ಭಾವನೆ ಎಲ್ಲರಲ್ಲೂ ಬರಬೇಕು. ರಾಜಕೀಯ ಲಾಭಕ್ಕಾಗಿ ನಮ್ಮನ್ನು ಒಡೆಯುವ ಜನರಿಂದ ನಾವು ದೂರವಿದ್ದು ನಮ್ಮ ಅಣ್ಣ ತಮ್ಮಂದಿರಂತಿರುವ ದಲಿತರು, ಹಿಂದುಳಿದವರನ್ನು ಗೌರವಿಸೋಣ, ಪ್ರೀತಿಸೋಣ, ಸಮಾನತೆಯ ಆಧಾರದಲ್ಲಿ ಸದೃಢ ಹಿಂದೂ ಧರ್ಮ ಕಟ್ಟೋಣ.

ಧರ್ಮ ನಮಗಾಗಿಯೇ ಹೊರತು, ಧರ್ಮಕ್ಕಾಗಿ ನಾವಲ್ಲ. ನಾವಿರದಿದ್ದರೂ ಧರ್ಮ ಇರುತ್ತದೆ. ಧರ್ಮವೆಂಬುದು ನಮ್ಮ ನಂಬಿಕೆಯೇ ಹೊರತು ಪರರ ಮೇಲೆ ಹೇರುವ ಅಸ್ತ್ರವಲ್ಲ. ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಬೇರೊಂದಿಲ್ಲ. ಅವರವರ ಧರ್ಮ, ನಂಬಿಕೆ ಅವರಿಗೆ ದೊಡ್ಡದು. ಅದನ್ನು ಪ್ರಶ್ನಿಸುವುದಾಗಲಿ, ಹೀಯಾಳಿಸುವುದಾಗಲಿ ಸಾಧುವಲ್ಲ. ಹಾಗಾಗಿ ನಮ್ಮ ಧರ್ಮವನ್ನು ಪ್ರೀತಿಸೋಣ, ಪರರ ಧರ್ಮವನ್ನು ಗೌರವಿಸೋಣ.

ನಿಮಗೆ ಏನು ಅನ್ನಿಸ್ತು?
2 ವೋಟ್