ತಜ್ಞರಿಗೆ 5 ಪ್ರಶ್ನೆ | ಹಸಿವಿನ ಸೂಚ್ಯಂಕದಲ್ಲಿ ಮತ್ತೆ ಕುಸಿದ ಭಾರತ

Global Hunger Index 5

ಇತ್ತೀಚೆಗೆ ಬಿಡುಗಡೆ ಆದ ಹಸಿವಿನ ಸೂಚ್ಯಂಕದಲ್ಲಿ ಭಾರತ 101ನೇ ರ‍್ಯಾಂಕ್ ಪಡೆದುಕೊಂಡಿದೆ. ಅಲ್ಲದೆ, ಹಸಿವಿನ ಸ್ಥಿತಿ ಗಂಭೀರವಾಗಿರುವ 31 ದೇಶಗಳಲ್ಲಿ ಭಾರತವೂ ಒಂದು. ಆದರೆ, ಒಕ್ಕೂಟ ಸರ್ಕಾರದ ಅರ್ಥ ಸಚಿವರು ದೇಶದ ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂದೇ ಹೇಳುತ್ತಿದ್ದಾರೆ. ಈ ಕುರಿತು ಆಹಾರ ತಜ್ಞ ಕೆ ಸಿ ರಘು ಅವರೊಂದಿಗಿನ ಪ್ರಶ್ನೋತ್ತರ ಇಲ್ಲಿದೆ

1. 'ಆರ್ಥಿಕ ಅಭಿವೃದ್ಧಿ ಸಮತೋಲನದಲ್ಲಿದೆ' ಎಂದು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ವರದಿಯಲ್ಲಿ ಹೇಳಿರುವಂತೆ, ಹಸಿವಿನ ಸೂಚ್ಯಂಕದಲ್ಲಿ ಭಾರತ ಮತ್ತೆ ಕುಸಿತ ಕಂಡಿದೆ. ಇದರಲ್ಲಿ ಯಾವುದು ನಿಜ?

ಹಸಿವು, ಅಪೌಷ್ಟಿಕತೆ ಇರುವಾಗಿನ ಅಭಿವೃದ್ಧಿ ಅಭಿವೃದ್ಧಿಯಲ್ಲ. ಗೋದಾಮು ತುಂಬಿದೆ; ಆದರೆ ಜನರ ಹೊಟ್ಟೆ ಖಾಲಿ ಇದೆ ಎಂದರೇನರ್ಥ? ಭಾರತ ಹಸಿವು ಸೂಚ್ಯಂಕದಲ್ಲಿ ಕುಸಿತ ಕಂಡಿರುವುದು ಇಡೀ ದೇಶಕ್ಕೆ ಅವಮಾನ ಎಂಬ ಅರ್ಥ ಕೊಡುತ್ತದೆ. ದೇಶ ಆರ್ಥಿಕ ಅಭಿವೃದ್ಧಿಯಾಗಿದೆ ಎಂದು ದೇಶದ ಹೊರಗಿನವರು ಹೇಳುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಅದೇ ರೀತಿ, ಹೊರಗಿನ ದೇಶದವರು, ಭಾರತದಲ್ಲಿ ಹಸಿವಿದೆ ಎಂದು ಹೇಳಿದಾಗ ಯಾಕೆ ಒಪ್ಪಿಕೊಳ್ಳುವುದಿಲ್ಲ?

2. ಅದೇ ವರದಿಯು, ಭಾರತದಲ್ಲಿ ಆಹಾರದ ಅಭದ್ರತೆ, ಪೌಷ್ಟಿಕ ಆಹಾರದ ಕೊರತೆ ಗಣನೀಯ ಪ್ರಮಾಣದಲ್ಲಿದೆ ಎಂದು ಉಲ್ಲೇಖಿಸಿದೆ. ಇದು ಹೌದಾದರೆ, ಪರಿಹಾರವೇನು?

ಭಾರತದಲ್ಲಿ ವರ್ಷಕ್ಕೆ 24 ಮಿಲಿಯನ್ ಟನ್ ಅಡುಗೆ ಎಣ್ಣೆ ಬಳಸಲಾಗುತ್ತದೆ. ಕಳೆದ ಎರಡು ವರ್ಷದಿಂದ ಎರಡು ಮಿಲಿಯನ್ ಟನ್ ಅಡುಗೆ ಎಣ್ಣೆ ಬಳಕೆ ಕಡಿಮೆಯಾಗಿದೆ. ಬಡವರಿಗೆ ಪೋಷಕಾಂಶದ ಜೊತೆಗೆ ಕೊಬ್ಬಿನಂಶ ಕೂಡ ಬಹಳ ಮುಖ್ಯ. ಎಣ್ಣೆಯ ದರ ಲೀಟರ್‌ಗೆ 200 ರುಪಾಯಿ ಆಗಿರುವುದರಿಂದ ಎಣ್ಣೆ ಬಳಕೆ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ. ಕೇವಲ ಅಕ್ಕಿ, ಗೋಧಿಯಿಂದ ಮಾತ್ರ ಹಸಿವು, ಅಪೌಷ್ಟಿಕತೆ ಹೋಗುವುದಿಲ್ಲ. ಅದಕ್ಕೆ ಎಣ್ಣೆಕಾಳುಗಳು ಬಹುಮುಖ್ಯ, ಎಣ್ಣೆಯಂಶ ಅತಿ ಮುಖ್ಯ. ಶೇಕಡ 80ರಷ್ಟು ಅಡುಗೆ ಎಣ್ಣೆಯನ್ನು ವಿದೇಶದಿಂದ ಅವಲಂಬಿಸಿದ್ದೇವೆ. ಇದೀಗ ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತು ನಿಲ್ಲಿಸಿದೆ. ಆಹಾರದ ಹಣದುಬ್ಬರ ಮಿತಿ ಮೀರಿದೆ. ಇದನ್ನೆಲ್ಲ ಸರಿದಾರಿಗೆ ತಂದು, ಸ್ವಾವಲಂಬನೆ ಸಾಧಿಸಿ, ವಾಸ್ತವಗಳನ್ನು ಒಪ್ಪಿಕೊಂಡು, ಅದಕ್ಕೆ ತಕ್ಕಂತೆ ಕಾರ್ಯಯೋಜನೆ ತಯಾರಿಸಿಕೊಳ್ಳಬೇಕು. ಬಹುಶಃ ಇದೊಂದೇ ಸರಿಯಾದ ಪರಿಹಾರ.

3. ಬೆಳೆ ವೈವಿಧ್ಯತೆ ಹೆಚ್ಚಾದಂತೆ ಹಸಿವಿನಿಂದ ಸಂಕಷ್ಟಕ್ಕೀಡಾಗುವವರ ಪ್ರಮಾಣ ಕಡಿಮೆ ಆಗುತ್ತದೆ ಎಂಬ ಪ್ರತಿಪಾದನೆ ಇದೆ. ಇದರ ಬಗ್ಗೆ ಏನಂತೀರಿ?

Image
Global Hunger Index 1
ಸಾಂದರ್ಭಿಕ ಚಿತ್ರ

ಸಾಮಾನ್ಯವಾಗಿ ಊಟದ ತಟ್ಟೆಯಲ್ಲಿ ಕಾಮನಬಿಲ್ಲಿನ ಬಣ್ಣ ಇರಬೇಕು ಅಂತ ಹೇಳುತ್ತಾರೆ. ಅಂದರೆ, ಏಕದಳ ಧಾನ್ಯ, ದ್ವಿದಳ ಧಾನ್ಯ, ಕಾಳುಗಳು, ಹಣ್ಣು, ತರಕಾರಿ, ಮೀನು, ಮಾಂಸ ಇದೆಲ್ಲವೂ ಇದ್ದಾಗ ಆಹಾರದಲ್ಲಿ ವೈವಿಧ್ಯತೆ ಇದೆ ಎಂದರ್ಥ. ದಕ್ಷಿಣ ಭಾರತದ ಊಟವು 'ಅನ್ನದ ಗುಡ್ಡ-ಸಾರಿನ ಹೊಳೆ' ಎನ್ನುವಂತಾಗಿದೆ. ಹಣ್ಣುಗಳನ್ನು ಕೊಂಡು ತಿನ್ನುವ ಪರಿಸ್ಥಿತಿಯಲ್ಲಿ ನಮ್ಮ ದೇಶದ ಬಡವರಿಲ್ಲ. ಹಾಗಾಗಿ, ಆಹಾರದಲ್ಲಿ ವೈವಿಧ್ಯತೆ ಇರಲೇಬೇಕು ಮತ್ತು ಅದನ್ನು ಕೊಂಡುಕೊಳ್ಳುವ ಶಕ್ತಿಯೂ ಇರಬೇಕು. ಅಲ್ಲದೆ, ಆ ಆಹಾರ ಪದಾರ್ಥಗಳನ್ನು ನಮ್ಮಲ್ಲಿ ಬೆಳೆಯಬೇಕು. ಹೀಗೆ ಆ ಎರಡಕ್ಕೂ ಸಂಬಂಧ ಇದೆ. ಒಂದು ವೇಳೆ, ಬೆಳೆ ವೈವಿಧ್ಯ ಸಾಧ್ಯವಾಗಿ, ಅದರಿಂದ ಆಹಾರ ವೈವಿಧ್ಯ ವಾಸ್ತವಕ್ಕೆ ಬಂದರೂ, ಕೊಂಡುಕೊಳ್ಳುವ ಶಕ್ತಿ ಬಡವರಿಗೆ ಬರುವವರೆಗೂ ಹಸಿವು, ಪೌಷ್ಟಿಕಾಂಶ ಕೊರತೆ ಇದ್ದೇ ಇರುತ್ತದೆ.

4. ಬೆಳೆ ವೈವಿಧ್ಯತೆಗೂ ಅಪೌಷ್ಟಿಕತೆ ಹೆಚ್ಚಳಕ್ಕೂ ನೇರ ಸಂಬಂಧ ಇದೆಯೇ?

ಹೌದು, ನೇರ ಸಂಬಂಧ ಇದೆ. ಯಾಕೆಂದರೆ, ನಮಗೆ ಗೊತ್ತಿರುವ ಪೋಷಕಾಂಶಗಳು ಕೇವಲ ಶೇಕಡ ಐದರಷ್ಟು. ಗೊತ್ತಿಲ್ಲದೆ ಇರುವ ಪೋಷಕಾಂಶಗಳು ಶೇಕಡ 95ರಷ್ಟು. ಎಸ್ಇಒ ಪ್ರಕಾರ, ಆಹಾರದಿಂದ ಪೋಷಕಾಂಶವೇ ಹೊರತು ಪೋಷಕಾಂಶದಿಂದ ಆಹಾರವನ್ನು ಅಳೆಯಬಾರದು. ಎಲ್ಲ ಆಹಾರದಲ್ಲಿ ವೈವಿಧ್ಯತೆ ಇರುತ್ತದೆ. ಎಲ್ಲಿ ಆಹಾರದಲ್ಲಿ ವೈವಿಧ್ಯತೆ ಇರುತ್ತದೆಯೋ ಅಲ್ಲಿ ಗೊತ್ತಿರುವ ಮತ್ತು ಗೊತ್ತಿಲ್ಲದ ಪೋಷಕಾಂಶಗಳು ದೇಹಕ್ಕೆ ದಕ್ಕುತ್ತವೆ.

ಇದನ್ನು ಓದಿದ್ದೀರಾ?: ಅರ್ಥ ಪಥ | ಢಾಕಾದ ಖಾದರ್ ಮಿಯಾ ಮತ್ತು ದೆಹಲಿಯ ಹಿಂದು ವ್ಯಾಪಾರಿ

5. ಹಸಿವು ಮತ್ತು ಅಪೌಷ್ಟಿಕತೆ ನೀಗಿಸಲು ಸರ್ಕಾರದ ಮುಂದಿರುವ ಸವಾಲುಗಳೇನು?

ಕೇವಲ ಏಕದಳ ಧಾನ್ಯಗಳಿಂದ ಹಸಿವು, ಅಪೌಷ್ಟಿಕತೆ ಹೋಗಲಾಡಿಸಲು ಆಗೋಲ್ಲ. ಆಹಾರ ಭದ್ರತೆ ಅಂದರೆ, ಕೇವಲ ಅಕ್ಕಿ ಆಗಬಾರದು. ಜೊತೆಗೆ ಬೇಳೆಕಾಳುಗಳು, ಎಣ್ಣೆಕಾಳುಗಳು, ಎಣ್ಣೆ, ದ್ವಿದಳ ಧಾನ್ಯಗಳು, ಏಕದಳ ಧಾನ್ಯಗಳು, ಧಾನ್ಯಗಳು - ಇವೆಲ್ಲವೂ ಇರಬೇಕು. ತಮಿಳುನಾಡು, ಕೇರಳದಲ್ಲಿ ಬೇಳೆಕಾಳುಗಳು ಮತ್ತು ಎಣ್ಣೆಯನ್ನು ಸಬ್ಸಿಡಿಯಲ್ಲಿ ಕೊಡಲಾಗುತ್ತದೆ. ಹೀಗೆ, ಪಡಿತರದಲ್ಲಿ ಆಹಾರ ಸಂಸ್ಕೃತಿಯ ಆಧಾರದ ಮೇಲೆ ಎಲ್ಲ ಬಗೆಯ ಆಹಾರ ಸೇರಿಸುವುದು ಹಸಿವು ಮತ್ತು ಅಪೌಷ್ಟಿಕತೆಯಿಂದ ಜನರನ್ನು ದೂರ ಇಡಬಹುದು.

ಸಮನ್ವಯ | ಅಶ್ವಿನಿ ಮ ಮೇಲಿನಮನಿ
ನಿಮಗೆ ಏನು ಅನ್ನಿಸ್ತು?
2 ವೋಟ್