ಭಾರತದ ಸ್ವಧರ್ಮದ ಮೇಲೆ ಅತ್ಯಂತ ಘೋರ ದಾಳಿ ನಡೆಯುತ್ತಿದೆ

communal clash

ಈ ದೇಶಕ್ಕೆ, ಯಾವುದಾದರೂ ಅತಿ ದೊಡ್ಡ ಸವಾಲಿದ್ದರೆ ಅದು ಕೋಮು ಸೌಹಾರ್ದತೆ. ಕಳೆದ 75 ವರ್ಷಗಳಲ್ಲಿ ಈ ಆದರ್ಶದ ಮೇಲೆ ಪದೇ ಪದೇ ಆಘಾತಗಳಾಗಿವೆ. ಹಿಂದೂ ಮುಸ್ಲಿಂ ಏಕತೆಗೆ ಸವಾಲು ಹಾಕುವ ಎಲ್ಲಾ ಘಟನೆಗಳು ಮತ್ತು ಗಲಭೆಗಳಲ್ಲದೆ, ಪೊಲೀಸ್, ಆಡಳಿತ ಮತ್ತು ರಾಜಕೀಯ ನಾಯಕರು ಒಂದಾಗಿ ಪಾತ್ರ ವಹಿಸಿದ ಪ್ರಮುಖ ಘಟನೆಗಳೂ ಇವೆ.

ಇಂದು ದೇಶದಲ್ಲಿ ಏನು  ನಡೆಯುತ್ತಿದೆಯೋ ಅದನ್ನು ಭಾರತದ ಸ್ವಧರ್ಮದ ಮೇಲಿನ ದಾಳಿ ಎಂದು ಹೇಗೆ ಹೇಳಲು ಸಾಧ್ಯ ?

Eedina App

ಈ ಲೇಖನದ ಹಿಂದಿನ ಮೂರು ಸಂಚಿಕೆಗಳಲ್ಲಿ, ನಾವು ಇಂದಿನ ಪರಿಸ್ಥಿತಿಯ ಮೌಲ್ಯಮಾಪನದ ಮಾನದಂಡವು, ಯಾವುದೇ ಒಂದು ಪುಸ್ತಕ ಅಥವಾ ಸಿದ್ಧಾಂತ ಅಥವಾ ಯಾವುದಾದರೂ ಒಬ್ಬ ವ್ಯಕ್ತಿಯು ಆಲೋಚನೆಗಳು ಆಗಿರಲು ಸಾಧ್ಯವಿಲ್ಲ ಎಂಬುದನ್ನು ನೋಡಿದ್ದೇವೆ. ಭಾರತದ ಸ್ವಧರ್ಮವೇ  ಇಂದು ದೇಶದ ಪರಿಸ್ಥಿತಿಯ ತಿಳಿವಳಿಕೆಯ ಪರೀಕ್ಷೆಯಾಗಿದೆ.

ಮೈತ್ರಿ, ಕರುಣೆ, ಮತ್ತು ನಮ್ರತೆಯ ತ್ರಿವೇಣಿ ಸಂಗಮವು ಭಾರತದ ಸ್ವಧರ್ಮವನ್ನು ವ್ಯಾಖ್ಯಾನಿಸುತ್ತದೆ ಎಂಬುದನ್ನೂ ನಾವು ನೋಡಿದ್ದೇವೆ. ಸಮಾಜವಾದ, ಸೆಕ್ಯುಲರಿಸಂ ಮತ್ತು ಪ್ರಜಾಪ್ರಭುತ್ವ ನಮ್ಮ ನಾಗರಿಕತೆಯ ಈ ಮೂರು ಆದರ್ಶಗಳ ಆಧುನಿಕ ರೂಪಗಳಾಗಿವೆ.

AV Eye Hospital ad

ಹಾಗಾದರೆ ಈ ಮೂರು ಮೌಲ್ಯಗಳು ಇಂದು ದಾಳಿಗೊಳಗಾಗಿವೆಯೇ? ಇದು ಎಷ್ಟು ಅಪಾಯಕಾರಿ
ದಾಳಿ? ಹಾಗಾದರೆ ಈ ಸ್ಥಿತಿಯಲ್ಲಿ ನಮ್ಮ ಧರ್ಮ ಯಾವುದು?

ಸ್ವಾತಂತ್ರ್ಯದ ನಂತರ, ಭಾರತದ ಸ್ವಧರ್ಮದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬ ವ್ಯಕ್ತಿಯೂ ನಿಷ್ಕಪಟತೆಯಿಂದ ಈ ಬಗ್ಗೆ ಯೋಚನೆ ಮಾಡಬೇಕು. ಸತ್ಯವೆಂದರೆ ಕಳೆದ 75 ವರ್ಷಗಳಿಂದ ಈ ದೇಶದಲ್ಲಿ ಭಾರತದ ಸ್ವಧರ್ಮಕ್ಕೆ ಯಾವತ್ತೂ ನ್ಯಾಯ ಸಿಕ್ಕಿಲ್ಲ. ಯಾವುದೇ ಪಕ್ಷಕ್ಕೆ ಅಧಿಕಾರ ಇರಲಿ, ಅವರು ಧರ್ಮದ ಹೆಸರಿನಲ್ಲಿ ಅಧರ್ಮವನ್ನು ಹಬ್ಬಿಸಿದ್ದಾರೆ. ಹಾಗಿದ್ದಲ್ಲಿ ಇಂದು ನಡೆಯುತ್ತಿರುವುದನ್ನು ಅತ್ಯಂತ ಮಾರಣಾಂತಿಕ ದಾಳಿ ಎಂದು ಹೇಗೆ/ಏಕೆ ಕರೆಯುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಮೊದಲನೆಯದಾಗಿ ನಮ್ಮ ಸರ್ವಧರ್ಮದ ಆಧಾರವಾಗಿರುವ ಸ್ನೇಹದ ಆದರ್ಶವನ್ನೇ ನೋಡಿ, ವಿಭಜನೆಯ ಭೀಕರತೆಯಿಂದ ಹುಟ್ಟಿದ ಈ ದೇಶಕ್ಕೆ, ಯಾವುದಾದರೂ ಅತಿ ದೊಡ್ಡ ಸವಾಲಿದ್ದರೆ ಅದು ಕೋಮು ಸೌಹಾರ್ದತೆ. ಅದರಲ್ಲೂ ಮುಖ್ಯವಾಗಿ ಹಿಂದೂ-ಮುಸ್ಲಿಂ ಏಕತೆ ಕಾಪಾಡುವುದು. ಕಳೆದ 75 ವರ್ಷಗಳಲ್ಲಿ ಈ ಆದರ್ಶದ ಮೇಲೆ ಪದೇ ಪದೇ ಆಘಾತಗಳಾಗಿವೆ. ಹಿಂದೂ ಮುಸ್ಲಿಂ ಏಕತೆಗೆ ಸವಾಲು ಹಾಕುವ ಎಲ್ಲಾ ಘಟನೆಗಳು ಮತ್ತು ಗಲಭೆಗಳಲ್ಲದೆ, ಪೊಲೀಸ್, ಆಡಳಿತ ಮತ್ತು ರಾಜಕೀಯ ನಾಯಕರು ಒಂದಾಗಿ ಪಾತ್ರ ವಹಿಸಿದ ಪ್ರಮುಖ ಘಟನೆಗಳೂ ಇವೆ. ಇದು 1984ರ ಸಿಖ್ಖರ ನರಮೇಧವಾಗಲಿ ಅಥವಾ ನೆಲ್ಲಿ, ಮಲಿಯಾನ, ಗುಜರಾತ್ ಅಥವಾ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಬಲವಂತದ ವಲಸೆ, ಇವೆಲ್ಲವೂ ಭಾರತದ ಸ್ವಧರ್ಮದ ಮೇಲಿನ ದಾಳಿಗಳು.

communal police

ಆದರೆ, ಕಳೆದ ಕೆಲವು ವರ್ಷಗಳಲ್ಲಿ, ಸೌಹಾರ್ದ ಮತ್ತು ಸರ್ವಧರ್ಮ ಸಾಮರಸ್ಯದ ಆದರ್ಶಗಳನ್ನು ಆಧರಿಸಿದ ಸಾಂವಿಧಾನಿಕ ಮೌಲ್ಯಗಳ ಮೇಲೆ ಅಭೂತಪೂರ್ವ ದಾಳಿ ನಡೆದಿದೆ. ಮೊದಲ ಬಾರಿಗೆ ಪೌರತ್ವ ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಧರ್ಮದ ಆಧಾರದ ಮೇಲೆ ಎರಡು ವರ್ಗದ ಪೌರತ್ವವನ್ನು ಸೃಷ್ಟಿಸಲಾಗಿದೆ. ಪ್ರಥಮ ಬಾರಿಗೆ ಸಾರ್ವಜನಿಕ ವೇದಿಕೆಯಿಂದ ಧರ್ಮದ ಹೆಸರಿನಲ್ಲಿ ನರಮೇಧಕ್ಕೆ ಕರೆ ನೀಡಲಾಗುತ್ತಿದೆ, ಬೀದಿಗಳಲ್ಲಿ ಧರ್ಮವನ್ನು ಗುರುತಿಸಿ ಬಹಿರಂಗವಾಗಿ ಹಲ್ಲೆಗಳು ನಡೆಯುತ್ತಿವೆ. ಧಾರ್ಮಿಕ ತಾರತಮ್ಯವನ್ನು ಸಮಾಜದಿಂದ ಹೊರಹಾಕುವ ಬದಲು ನಿತ್ಯದ ಸಾಮಾನ್ಯ ವಿಷಯವಾಗಿಸಲಾಗಿದೆ. ಅಧಿಕಾರದ ಮೇಲ್ವರ್ಗದಿಂದ ಅಲ್ಪಸಂಖ್ಯಾತರ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಕೆರಳಿಸಲಾಗುತ್ತಿದೆ. ಮೊದಲ ಬಾರಿಗೆ ಎಲ್ಲಾ ಧರ್ಮಗಳಿಗೆ ಸಮಾನ ಸ್ಥಾನದ ಬದಲು ಒಂದು ಸಮುದಾಯದ್ದೇ ಪ್ರಭಾವ/ಶಕ್ತಿಶಾಲಿ ಎಂಬ ಸಿದ್ಧಾಂತವನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಮನೆಗೆ ಬೆಂಕಿ ಹಚ್ಚುವ ಮೂಲಕ ವೋಟಿನ ರೊಟ್ಟಿ ಬೇಯಿಸುವ ದೇಶವಿರೋಧಿ ರಾಜಕೀಯ ಶಕ್ತಿಶಾಲಿಯಾಗಿದೆ.

ಕರುಣೆ/ಸಹಾನುಭೂತಿಯ ಆದರ್ಶವು ಸಾರ್ವಜನಿಕ ಕಲ್ಯಾಣ, ಅಂತ್ಯೋದಯ ಮತ್ತು ಸಮಾಜವಾದದ ಕಲ್ಪನೆಯ ತಿರುಳಾಗಿದೆ.

ಸಹಜವಾಗಿಯೇ ಈ ಆದರ್ಶವನ್ನೂ  ಸ್ವತಂತ್ರ ಭಾರತದಲ್ಲಿ ಕಡೆಗಣಿಸಲಾಗಿದೆ. 75 ವರ್ಷಗಳ ನಂತರವೂ ಬಡತನ, ಹಸಿವು ಮತ್ತು ಅಪೌಷ್ಟಿಕತೆಯ ಅಸ್ತಿತ್ವವು ಸಮಾನತೆಯ ಆದರ್ಶದ ಮೇಲೆ ಕಳಂಕವಾಗಿದೆ. ಆದರೆ ಇಲ್ಲಿಯೂ ಸಹ ಕಳೆದ ಎಂಟು ವರ್ಷಗಳಲ್ಲಿ ಅಭೂತಪೂರ್ವ ಕುಸಿತ ಕಂಡುಬಂದಿದೆ. ಇತ್ತೀಚೆಗೆ ಸಾರ್ವಜನಿಕಗೊಳಿಸಲಾದ ದತ್ತಾಂಶದ ಪ್ರಕಾರ ದಶಕಗಳಿಂದ ಕುಸಿತ ದಾಖಲಿಸುತ್ತಿದ್ದ ಅಪೌಷ್ಟಿಕತೆ ಮತ್ತು ಹಸಿವಿನ ಸಮಸ್ಯೆಗಳ ಅನುಪಾತವು ಮೊದಲ ಬಾರಿಗೆ ಹೆಚ್ಚಾಗಿದೆ. ನಿರುದ್ಯೋಗವು ದಾಖಲೆಯ ಹೆಚ್ಚಳ ಕಂಡಿದೆ. ಆಘಾತಕಾರಿ ರೀತಿಯಲ್ಲಿ 5 ಕೋಟಿ ಜನರು ಬಡತನ ರೇಖೆಗಿಂತ ಕೆಳಕ್ಕೆ ತಳ್ಳಲ್ಪಟ್ಟಿದ್ದಾರೆ.

ಲಾಕ್‌ಡೌನ್ ನಂತರ ಎರಡು ವರ್ಷಗಳಲ್ಲಿ ದೇಶದ 97% ಕುಟುಂಬಗಳ ಆದಾಯವು ಕಡಿಮೆಯಾಗಿದೆ, ಆದರೆ ಕಳೆದ ಎರಡೂವರೆ ವರ್ಷಗಳಲ್ಲಿ ಪ್ರಧಾನಿಯವರ ವಿಶೇಷ ಸ್ನೇಹಿತ ಗೌತಮ್ ಅದಾನಿಯವರ ಆಸ್ತಿ 66 ಸಾವಿರ ಕೋಟಿ ರೂಗಳಿಂದ 12 ಸಾವಿರ ಕೋಟಿಗೆ ಏರಿಕೆಯಾಗಿದೆ. ಇದರರ್ಥ ಕೇವಲದ ಏರಿಕೆಯಲ್ಲ, 18 ಪಟ್ಟು ಭಾರೀ ಹೆಚ್ಚಳ. ಸಮಾನತೆಯ ಸಾಂವಿಧಾನಿಕ ಆದರ್ಶದ ಈ ರೀತಿಯ ಮಾನಭಂಗ ದೇಶದಲ್ಲಿ ಹಿಂದೆಂದೊ ಕಂಡು ಬಂದಿರಲಿಲ್ಲ.

Delhi-violence

ಅಧಿಕಾರ ಮತ್ತು ಪ್ರಜಾಪ್ರಭುತ್ವದ ಘನತೆಯ ಕಲ್ಪನೆಯು ನಮ್ರತೆಯ ಆದರ್ಶದಿಂದ ಹುಟ್ಟಿಕೊಂಡಿದೆ. ಜವಾಹರಲಾಲ್ ನೆಹರು ಅವರ ಕಾಲದಲ್ಲಿ ಪ್ರಜಾಸತ್ತಾತ್ಮಕ ಗಡಿಗಳನ್ನು ಸ್ಥಾಪಿಸಲಾಯಿತು ಮತ್ತು ಹೆಚ್ಚೂ-ಕಡಿಮೆ ಅವುಗಳ ಪಾಲನೆಯು ಕೂಡ ವ್ಯವಸ್ಥಿತವಾಗಿತ್ತು. ಆದರೆ ಇಂದಿರಾಗಾಂಧಿ ಅಧಿಕಾರಕ್ಕೆ ಬಂದ ನಂತರ  ಪ್ರಜಾಸತ್ತಾತ್ಮಕ ಮೌಲ್ಯಗಳ ಅವನತಿ ಶುರುವಾಯಿತು. ಮತ್ತು ಭಾರತದ ಪ್ರಜಾಪ್ರಭುತ್ವದ ಮೇಲೆ ತುರ್ತು ಪರಿಸ್ಥಿತಿ ಹೇರಿಕೆ ಅತಿ ದೊಡ್ಡ ಕಲೆಯಾಗಿತ್ತು. ಅದರ ನಂತರ ತುರ್ತು ಪರಿಸ್ಥಿತಿಯಂಥ ಯಾವುದೇ ಘಟನೆ ನಡೆಯಲಿಲ್ಲ, ಆದರೆ ನಾಗರಿಕ ಸ್ವಾತಂತ್ರ್ಯಗಳು ಮತ್ತು ಸಾಂವಿಧಾನಿಕ ಮಿತಿಗಳ ಉಲ್ಲಂಘನೆ ಮುಂದುವರೆಯಿತು.
ಜನರ ಮೇಲೆ ವ್ಯವಸ್ಥೆಯ ಶೋಷಣೆ ಚಾಲ್ತಿಯಲ್ಲಿತ್ತು. ಈ ಅರ್ಥದಲ್ಲೂ ಸಹ ಕಳೆದ ಎಂಟು ವರ್ಷಗಳಲ್ಲಿ ಮತ್ತು ವಿಶೇಷವಾಗಿ ಕಳೆದ ಮೂರು ವರ್ಷಗಳಲ್ಲಿ ಹಳೆಯ ಪ್ರತಿ ಮಿತಿ(ಹದ್ದು)ಗಳನ್ನು ದಾಟಲಾಗಿದೆ. CBI ಮತ್ತು ED ಯಂತಹ ಸಂಸ್ಥೆಗಳನ್ನು ಈ ಹಿಂದೆಯೂ ದುರುಪಯೋಗಪಡಿಸಿಕೊಳ್ಳಲಾಗಿತ್ತು. ಆದರೆ ನೇರವಾಗಿ ರಾಜಕೀಯ ಪ್ರತಿಸ್ಪರ್ಧಿಗಳನ್ನು ಗುರಿಯಾಗಿಸಲು ಈಗ ಯಾವುದೇ ಮುಚ್ಚುಮರೆ ಉಳಿದಿಲ್ಲ.

ಇದನ್ನು ಓದಿ : ವ್ಯಕ್ತಿಗಿರುವಂತೆ ಒಂದು ದೇಶಕ್ಕೂ ಸ್ವಧರ್ಮ ಎಂಬುದಿದೆಯೇ?

ಚುನಾವಣಾ ಆಯೋಗದ ಬಗ್ಗೆ ಇದು ಆಡಳಿತಾರೂಢ ಸರ್ಕಾರದ ಕಚೇರಿಯೇ ಅಥವಾ ಪಕ್ಷದ ಕಚೇರಿಯೇ? ಎಂಬ ಪ್ರಶ್ನೆ ಮಾತ್ರ ಉಳಿದಿದೆ.ನ್ಯಾಯಾಂಗವೇ ತನ್ನ ಮಿತಿಯಲ್ಲಿ ರಾಜಿ ಮಾಡಿಕೊಂಡಿದೆ.ಮುಖ್ಯವಾಹಿನಿಯ ಮಾಧ್ಯಮವು ಹೆಚ್ಚು ಕಡಿಮೆ ಅಧಿಕಾರದಲ್ಲಿರುವವರ  ಜೇಬಿನಲ್ಲಿದೆ, ಮಾತನಾಡುವ ಧೈರ್ಯ ಮಾಡಿದವರಿಗೆ ಜೈಲು ದಾರಿ ತೋರಿಸಲಾಗಿದೆ. ರಷ್ಯಾ ಮತ್ತು ಟರ್ಕಿಯಂತೆಯೇ ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಒಂದು ಔಪಚಾರಿಕತೆ ಬಾಕಿ ಉಳಿದಿದೆ.ಹಂತ ಹಂತವಾಗಿ ನಾವು ಚುನಾಯಿತ ಸರ್ವಾಧಿಕಾರಗಳಾಗಿ ರೂಪುಗೊಳ್ಳುತ್ತಿದ್ದೇವೆ.

ಇದನ್ನೂ ಓದಿ? ದೇಶಕ್ಕೆ ತನ್ನದೇ ಆದ ಧರ್ಮವೊಂದು ಇರಬಹುದೇ ? ಅದನ್ನು ಎಲ್ಲಿ ಹುಡುಕುವುದು?

ನಿಸ್ಸಂಶಯವಾಗಿ ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ಸ್ವಧರ್ಮದ ಮೇಲಾದ ಮೊದಲ ದಾಳಿ ಏನೂ ಅಲ್ಲ. ಆದರೆ ಇಂದು ನಡೆಯುತ್ತಿರುವ ಈ ದಾಳಿ ನಾಲ್ಕು ವಿಧಗಳಲ್ಲಿ ಅತ್ಯಂತ ಅಭೂತಪೂರ್ವವಾದದ್ದು ಮತ್ತು ಮಾರಣಾಂತಿಕವಾಗಿದೆ.

ಮೊದಲನೆಯದಾಗಿ, ನಾವು ಮೇಲೆ ನೋಡಿದಂತೆ, ಈ ಮೂರು ಆದರ್ಶಗಳ ಮೇಲೆ ನಡೆಯುತ್ತಿರುವ ಈ ದಾಳಿಯು, ಪ್ರತಿ ಹಳೆಯ ದಾಳಿಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಎರಡನೆಯದಾಗಿ, ಕೆಲವೊಮ್ಮೆ ಈ ಮೂರು ಆದರ್ಶಗಳಲ್ಲಿ ಯಾವುದಾದರೂ ಒಂದರ ಮೇಲೆ ಆಕ್ರಮಣ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲಾ ಮೂರು ಆದರ್ಶಗಳು ಏಕಕಾಲದಲ್ಲಿ ದಾಳಿಗೊಳಗಾಗಿವೆ.

ಇದನ್ನು ಓದಿದ್ದೀರಾ? ನಮ್ರತೆ, ಕರುಣೆ ಮತ್ತು ಮೈತ್ರಿಯ ತ್ರಿವೇಣಿ ಸಂಗಮವೇ ಭಾರತದ ಸ್ವಧರ್ಮ

ಮೂರನೆಯದಾಗಿ, ಈ ದಾಳಿಯು ಹೊರಗಿನವರಿಂದ ಅಥವಾ ಕಡೆಗಣಿಸಲ್ಪಟ್ಟ (Marginalized) ತೀವ್ರಗಾಮಿ ಶಕ್ತಿಗಳಿಂದ ನಡೆಯುತ್ತಿಲ್ಲ. ಈ ಬಾರಿಯ ದಾಳಿ, ಸಾಂವಿಧಾನಿಕ ಅಧಿಕಾರದ ಶಕ್ತಿ ಹೊಂದಿದವರಿಂದ ಪ್ರಾಯೋಜಿತವಾಗಿದೆ, ವಿಶಾಲವಾದ ಸಂಘಟನೆಯ ಸಾಮರ್ಥ್ಯ ಮತ್ತು ಮಿತಿಯಿಲ್ಲದ ಹಣದ ಶಕ್ತಿಯಿಂದ ಬೆಂಬಲಿಸಲ್ಪಟ್ಟಿದೆ. ನಾಲ್ಕನೆಯದಾಗಿ, ಸ್ವಧರ್ಮದ ಮೇಲಿನ ಈ ದಾಳಿಯು ಕೇವಲ ಅಧರ್ಮವಲ್ಲ, ಅಂದರೆ ಧರ್ಮವನ್ನು ಮಾನ್ಯ ಮಾಡಿ ಅದನ್ನು ಕಡೆಗಣಿಸುವ ಸಾಮಾನ್ಯ ಬೂಟಾಟಿಕೆ ಅಲ್ಲ. ಈ ಬಾರಿ ಅದು ಭಾರತದ ಮೇಲೆ ವೈಚಾರಿಕ ವಿಧರ್ಮಿಗಳ ಅಂದರೆ ತಾತ್ವಿಕವಾಗಿ ಧರ್ಮದ್ರೋಹಿಗಳ ದಾಳಿಯಾಗಿದೆ. ಇದು ಸೈದ್ಧಾಂತಿಕವಾಗಿ ಭಾರತದ ಸ್ವಧರ್ಮವನ್ನು ನಿರಾಕರಿಸುವ ಚಿಂತನೆಯ ಆಕ್ರಮಣವಾಗಿದೆ.

ಇಂದು ಭಾರತೀಯ ನಾಗರಿಕತೆಯ ಭವ್ಯ ಪರಂಪರೆ, ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಮತ್ತು ಭಾರತೀಯ ಸಂವಿಧಾನದ ಆದರ್ಶಗಳಲ್ಲಿ ನಂಬಿಕೆಯಿರುವ ಪ್ರತಿಯೊಬ್ಬ ಭಾರತೀಯನ ಧರ್ಮವೇನಾಗಿರಬೇಕೆಂದರೆ: ತನು, ಮನ ಸಂಪತ್ತು ಮತ್ತು ಅಗತ್ಯವಿದ್ದರೆ, ತಮ್ಮ ಜೀವದೊಂದಿಗೆ ಭಾರತದ ಸ್ವಧರ್ಮವನ್ನು ರಕ್ಷಿಸಿಕೊಳ್ಳುವುದು.

ಅನುವಾದ | ರಂಜಿತಾ ಜಿ ಹೆಚ್‌
ನಿಮಗೆ ಏನು ಅನ್ನಿಸ್ತು?
0 ವೋಟ್
eedina app