ಸ್ವಧರ್ಮ | ನಮ್ರತೆ, ಕರುಣೆ ಮತ್ತು ಮೈತ್ರಿಯ ತ್ರಿವೇಣಿ ಸಂಗಮವೇ ಭಾರತದ ಸ್ವಧರ್ಮ

Buddha

ಇಲ್ಲಿ ವಿವಿಧ ರೀತಿಯ ಪಂಥಗಳು, ಅನೇಕ ಪಂಗಡಗಳು ಅಥವಾ ಧರ್ಮಗಳಿವೆ. ನಮ್ಮ ಜನರು ಆಳವಾದ ಧಾರ್ಮಿಕ ನಂಬಿಕೆಯನ್ನು ಹೊಂದಿದ್ದಾರೆ. ಎಲ್ಲಾ ಧಾರ್ಮಿಕ ಸಮುದಾಯಗಳು ಸಾರ್ವಜನಿಕವಾಗಿ ಧಾರ್ಮಿಕ ನಂಬಿಕೆಯನ್ನು ಆಚರಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ. ಈ ಅನೇಕ ಸಮುದಾಯಗಳ ನಡುವೆ ಸೌಹಾರ್ದದ ಹಾಗೂ ಜಗಳಗಳ ಇತಿಹಾಸವಿದೆ

ಈ ಲೇಖನದ ಹಿಂದಿನ ಎರಡು ಸಂಚಿಕೆಗಳಲ್ಲಿ, ದೇಶದ ವರ್ತಮಾನವನ್ನು ಭಾರತದ ಸ್ವಧರ್ಮದ ಬೆಳಕಿನಲ್ಲಿ ಪರೀಕ್ಷಿಸಲು ಪ್ರಯತ್ನಿ ಸಲಾಗಿದೆ. ಇಂದು ನಡೆಯುತ್ತಿರುವುದು ಸರಿಯೇ ಅಥವಾ ತಪ್ಪು, ಹೆಮ್ಮೆ ಅಥವಾ ಅವಮಾನದ ವಿಷಯವೇ ಎಂದು ನಾವು ನಮ್ಮದೇ ಆದ ಪ್ರಯತ್ನ - ಪೂರ್ವಾಗ್ರಹಗಳ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ.ಸಿದ್ಧ ಮಾದರಿ ಅಥವಾ ಎರವಲು ಪಡೆದ ಸಿದ್ಧಾಂತದಿಂದ  ಪರೀಕ್ಷಿಸಲು ಸಾಧ್ಯವಿಲ್ಲ, ಯಾವುದೇ ಪಠ್ಯ ಅಥವಾ ಇಷ್ಟದ ದೇವರುಗಳ ಪದಗಳಿಂದ ಅಳೆಯಲು ಸಾಧ್ಯವಿಲ್ಲ.

ಯಾವುದೇ ದೇಶದ ಪ್ರಯಾಣವನ್ನು ಪರೀಕ್ಷಿಸುವ ಅಳತೆಗೋಲು / ಪ್ರಮಾಣವು ಅದರ ಸ್ವಧರ್ಮವಾಗಿರಬಹುದು. ಮೊದಲು ಧರ್ಮ ಮತ್ತು ಸ್ವಧರ್ಮವನ್ನು ವಿವರಿಸಿದ ನಂತರ ಲೇಖನದ ಹಿಂದಿನ ಭಾಗಗಳಲ್ಲಿ ಭಾರತ ಗಣರಾಜ್ಯದ ಸ್ವಧರ್ಮವು ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ಅಥವಾ ಯುರೋಪಿನ  ಆಧುನಿಕ ಸಿದ್ಧಾಂತಗಳಲ್ಲಿಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು.

ರಾಷ್ಟ್ರೀಯ ಚಳವಳಿಯ ಸಮಯದಲ್ಲಿ ನಮ್ಮ ನಾಗರಿಕತೆಯ ಪರಂಪರೆ ಮತ್ತು ಪಾಶ್ಚಿಮಾತ್ಯ ವಿಚಾರಗಳ ನಡುವಿನ ಸಂವಾದ ಮತ್ತು ಸಂಘರ್ಷದ ಐತಿಹಾಸಿಕ ಪ್ರಕ್ರಿಯೆಯ ಮೂಲಕ ಭಾರತ ಗಣರಾಜ್ಯದ ಸ್ವಧರ್ಮವನ್ನು ರಚಿಸಲಾಯಿತು. ಅಂತಿಮವಾಗಿ ಈ ಪ್ರಕ್ರಿಯೆಯಿಂದ ಹುಟ್ಟಿದ ಭಾರತದ ಸ್ವಧರ್ಮವು ನಿಜಕ್ಕೂ ಏನು ಎಂದು ಈಗ ಕೇಳಬಹುದು.

ಮೂಲಭೂತವಾಗಿ, ಭಾರತೀಯ ನಾಗರಿಕತೆಯ ಶಾಶ್ವತ ಮೌಲ್ಯಗಳಾದ ನಮ್ರತೆ, ಕರುಣೆ ಮತ್ತು ಸ್ನೇಹಗಳ ತ್ರಿವೇಣಿ ಸಂಗಮದಲ್ಲಿ ಭಾರತದ ಸ್ವಧರ್ಮವನ್ನು ಹುಡುಕಬಹುದು. 26 ಜನವರಿ 1950ರಂದು ಉದ್ಘಾಟನೆಗೊಂಡ ಭಾರತೀಯ ಗಣರಾಜ್ಯದ ಬೇರುಗಳು, ಆ ದಿನದಲ್ಲಿ ಅಳವಡಿಸಿಕೊಂಡ ಆಧುನಿಕ ಸಂವಿಧಾನ ಅಥವಾ ವಸಾಹತುಶಾಹಿ ಆಳ್ವಿಕೆಯಲ್ಲಿನ ಆಧುನಿಕ ಪಶ್ಚಿಮದ ವಿಚಾರಗಳಿಗೆ ಸೀಮಿತವಾಗಿಲ್ಲ.

ಕನಿಷ್ಠ ಮೂರು ಸಾವಿರ ವರ್ಷಗಳ ನಮ್ಮ ಚಿಂತನಾ ಪರಂಪರೆಯಿಂದ ಉದ್ಭವಿಸುವ ಮೂರು ಆದರ್ಶಗಳು, ಭಾರತೀಯ ಗಣರಾಜ್ಯದ ಆದರ್ಶಗಳಲ್ಲಿಯೂ ಪ್ರತಿಫಲಗೊಂಡಿವೆ. ಆದರೆ ಈ ಮೂರು ಆದರ್ಶಗಳು ಅವುಗಳ ಪ್ರಾಚೀನ ರೂಪದಲ್ಲಿಯೇ ನಮ್ಮ ಸಂವಿಧಾನದಲ್ಲಿ ಪುನರಾವರ್ತನೆಯಾಗಿಲ್ಲ. ಸ್ವಾತಂತ್ರ್ಯ ಚಳವಳಿಯ ಅವಧಿಯಲ್ಲಿ ಈ ಆದರ್ಶಗಳನ್ನು ಸಂಶೋಧನೆಗೊಳಪಡಿಸಿ, ಸ್ಪಷ್ಟಪಡಿಸಲಾಯಿತು ಮತ್ತು ಆಧುನಿಕ ಯುರೋಪ್‌ನ ಮೂರು ಆದರ್ಶಗಳ ಜೊತೆ ಇವುಗಳ ಆಳವಾದ ಸಂಭಾಷಣೆ ನಡೆಯಿತು.

ಫ್ರೆಂಚ್ ಕ್ರಾಂತಿಯ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಘೋಷಣೆಯನ್ನು, ಭಾರತೀಯ ಮನಸ್ಸುಗಳು  ತನ್ನದೇ ಆದ ರೀತಿಯಲ್ಲಿ ಕೇಳಿದವು. ಇಪ್ಪತ್ತನೇ ಶತಮಾನದ ಉದಾರವಾದ, ಸಮಾಜವಾದ ಮತ್ತು ಜಾತ್ಯತೀತತೆಯ ಸಿದ್ಧಾಂತಗಳನ್ನು ತಮ್ಮದೇ ಸೈದ್ಧಾಂತಿಕ ಜರಡಿ ಮೂಲಕ ಶೋಧಿಸಿದರು. ಈ ಮಂಥನ ಮಾಡುವ ಮೂಲಕ ಪ್ರಜಾಪ್ರಭುತ್ವ, ಕಲ್ಯಾಣ ರಾಜ್ಯ ಮತ್ತು ಸಾರ್ವತ್ರಿಕ ಧರ್ಮದ ಸಮಚಿತ್ತತೆ (ಸೆಕ್ಯುಲರಿಸಂ)ಯ ಸ್ಥಳೀಯ ಆದರೆ ಆಧುನಿಕ ತಿಳಿವಳಿಕೆಯೊಂದನ್ನು ನಿರ್ಮಿಸಿದೆವು. ಈ ಸಂಪೂರ್ಣ ಹಿಂದೂಸ್ತಾನಿ ಆಧುನಿಕತೆಯಲ್ಲಿ ಭಾರತೀಯ ಗಣರಾಜ್ಯದ ಸ್ವಧರ್ಮದ ಮೂರು ಮೂಲ ತತ್ವಗಳು ನೆಲೆಸಿವೆ.

ಬುದ್ಧನ ಧರ್ಮದರ್ಶನದಲ್ಲಿ ಮೈತ್ರಿಯ ಪರಿಕಲ್ಪನೆಯನ್ನು ಸ್ಪಷ್ಟವಾಗಿ ನಿರೂಪಿಸಲಾಗಿದೆ. ಮೈತ್ರಿಯೆಂದರೆ ಕೇವಲ ಸ್ನೇಹ ಅಥವಾ ಪ್ರೀತಿ ಅಲ್ಲ. ಮೈತ್ರಿಯ ಸಾಮರಸ್ಯವು ಕಡುಬಯಕೆಯಲ್ಲ, ಆದರೆ ಅದು ಪರೋಪಕಾರಕ್ಕಾಗಿ. ಮೈತ್ರಿಯು ಪ್ರೀತಿ ವ್ಯಾಮೋಹವಲ್ಲ ಆದರೆ ಇದು ಜ್ಞಾನಪೂರ್ವಕ. ಮೈತ್ರಿಯ ಸ್ವಭಾವವು ಸದುದ್ದೇಶದಿಂದ ಕೂಡಿರುತ್ತದೆ ಮತ್ತು ಅದು ಲೋಭ ಮುಕ್ತವಾಗಿರುತ್ತದೆ.

buddha

ಜೀವಿಗಳಿಗೆ ಉಪಕಾರ ಮಾಡುವುದು, ಸಂತೋಷಕ್ಕಾಗಿ ಹಾರೈಸುವುದು, ದ್ವೇಷ ಮತ್ತು ದುರುದ್ದೇಶದ ಪರಿತ್ಯಾಗ ಅದರ ಲಕ್ಷಣ. ಇದು ವೈಯಕ್ತಿಕ ಆದರ್ಶ ಮಾತ್ರವಲ್ಲ, ಈ ಆದರ್ಶಕ್ಕೆ ನಮ್ಮ ಸಂಪ್ರದಾಯದಲ್ಲಿ ರಾಜಧರ್ಮದ ರೂಪವನ್ನು ನೀಡಲಾಗಿದೆ. ಅಶೋಕ ಮತ್ತು ಅಕ್ಬರನ ಆಳ್ವಿಕೆಯಲ್ಲಿ ಎಲ್ಲ ಧರ್ಮದ ಜನರೆಡೆಗೆ ಸಮಚಿತ್ತತೆಯ ಸಂಪ್ರದಾಯವು, ಈ ಆದರ್ಶದಿಂದ ಪ್ರೇರಿತವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ‘ಭ್ರಾತೃತ್ವದ ಆದರ್ಶ’ ಬುದ್ಧನ ತತ್ವಶಾಸ್ತ್ರದಲ್ಲಿನ ಮೈತ್ರಿಯ ಪರಿಕಲ್ಪನೆಯಿಂದ ಸ್ಫೂರ್ತಿ ಪಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತದ ಸಂವಿಧಾನದ ಮೂಲ ಕಲ್ಪನೆಯಲ್ಲಿನ ಸರ್ವಧರ್ಮ ಸಮಾನತೆಯು (ಮತ್ತು ನಂತರ ಇದನ್ನು "ಸೆಕ್ಯುಲರಿಸಂ" ಅಥವಾ ಧರ್ಮನಿರಪೇಕ್ಷತೆ ಎಂದು ಕರೆಯಲಾಗಿದೆ) ವಾಸ್ತವವಾಗಿ ಪಶ್ಚಿಮ ಸೆಕ್ಯುಲರಿಸಂನ ಅನುವಾದವಲ್ಲ. ನಮ್ಮ ಸಂವಿಧಾನ ರಚನೆಕಾರರಿಗೆ ಗೊತ್ತಿತ್ತು ಚರ್ಚ್-ರಾಜ್ಯಗಳ ಸಂಬಂಧಗಳ ಸಮಸ್ಯೆ ಯುರೋಪಿನದು, ನಮ್ಮದಲ್ಲ. ವಿವಿಧ ಧರ್ಮಗಳ ನಡುವೆ ಸಾಮರಸ್ಯ ಕಾಪಾಡುವುದೇ ಆಧುನಿಕ ಭಾರತದ ಸಮಸ್ಯೆಯಾಗಿದೆ. ನಮ್ಮ ದೇಶದಲ್ಲಿ ನಾನಾ ಬಗೆಯ ಧಾರ್ಮಿಕ ವೈವಿಧ್ಯಗಳಿವೆ.

ಇಲ್ಲಿ ವಿವಿಧ ರೀತಿಯ ಪಂಥಗಳು, ಅನೇಕ ಪಂಗಡಗಳು ಅಥವಾ ಧರ್ಮಗಳಿವೆ. ನಮ್ಮ ಜನರು ಆಳವಾದ ಧಾರ್ಮಿಕ ನಂಬಿಕೆಯನ್ನು ಹೊಂದಿದ್ದಾರೆ. ಎಲ್ಲಾ ಧಾರ್ಮಿಕ ಸಮುದಾಯಗಳು ಸಾರ್ವಜನಿಕವಾಗಿ ಧಾರ್ಮಿಕ ನಂಬಿಕೆಯನ್ನು ಆಚರಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ. ಈ ಅನೇಕ ಸಮುದಾಯಗಳ ನಡುವೆ ಸೌಹಾರ್ದದ ಹಾಗೂ ಜಗಳಗಳ ಇತಿಹಾಸವಿದೆ. ಅದಕ್ಕಾಗಿಯೇ ನಮಗಿರುವ ಸವಾಲುಗಳೆಂದರೆ ವಿಭಿನ್ನ ಅಭಿಪ್ರಾಯಗಳ ಮತ್ತು ಧರ್ಮಗಳ ಅನುಯಾಯಿಗಳಲ್ಲಿ ಸಮಚಿತ್ತವನ್ನು ಸ್ಥಾಪಿಸುವುದು, ದ್ವೇಷ ಮತ್ತು ಹಿಂಸೆಯನ್ನು ತಡೆಯುವುದು, ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಿಸುವುದು ಮತ್ತು ಧಾರ್ಮಿಕ ಸಮುದಾಯದಲ್ಲಿನ ಆಂತರಿಕ ದುಷ್ಟತನಗಳನ್ನು ಸುಧಾರಿಸುವುದು. ಆದ್ದರಿಂದ ನಾಸ್ತಿಕತೆ ಅಥವಾ ನಾಸ್ತಿಕ ಜಾತ್ಯತೀತತೆ ನಮ್ಮ ಸಮಸ್ಯೆಯ ಪರಿಹಾರವಲ್ಲ.

ಭಾರತದ ಸ್ವಧರ್ಮದಲ್ಲಿ ಸರ್ವಧರ್ಮದ ಒಂದು ಸ್ಥಳೀಯ ದೃಷ್ಟಿಕೋನವಿದೆ. ಅದು ಧಾರ್ಮಿಕತೆಯನ್ನು ಗೌರವಿಸುತ್ತದೆ. ಎಲ್ಲಾ ಪಂಥಗಳನ್ನು ಸಮಭಾವದಿಂದ ಕಾಣುತ್ತದೆ. ಇದು ಮೈತ್ರಿಯಿಂದ ಹುಟ್ಟಿದ್ದು ದೇಶಪ್ರೇಮಿಯೂ ಆಗಿದೆ. ಮೈತ್ರಿಯ ಕಲ್ಪನೆಯ ಈ ಆಧುನಿಕ ವ್ಯಾಖ್ಯಾನದಿಂದಾಗಿ ನಮ್ಮ ಸಂವಿಧಾನದಲ್ಲಿ ಯಾವ ರಾಜಧರ್ಮವೂ ಇಲ್ಲ. ಎಲ್ಲ ಧರ್ಮದ ವ್ಯಕ್ತಿಗಳಿಗೆ ಸಮಾನ ಪೌರತ್ವವನ್ನು ನೀಡಲಾಗಿದೆ. ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲಿ ಆರಾಧನೆ, ಧಾರ್ಮಿಕ ಆಚರಣೆ- ನಿರ್ವಹಣೆಯ ಅಧಿಕಾರ ಕೊಡಲಾಗಿದೆ. ಪ್ರತಿ ಸಮುದಾಯವು ತನ್ನ ಧಾರ್ಮಿಕ ವ್ಯವಸ್ಥೆ ಮತ್ತು ಸಂಸ್ಥೆಗಳನ್ನು ಕಾಪಾಡಿಕೊಳ್ಳುವ ಹಕ್ಕನ್ನು ಹೊಂದಿದೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ವಿಶೇಷ ರಕ್ಷಣೆ ನೀಡಲಾಗಿದೆ.

ಅದೇ ರೀತಿ ಕರುಣೆ / ಸಹಾನುಭೂತಿಯ ಕಲ್ಪನೆಯು, ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆಯ ತಿರುಳಾಗಿದೆ. ಸಾಮಾನ್ಯವಾಗಿ ಸಮಾನತೆಯ ಕಲ್ಪನೆ, ವಿಚಾರಗಳ ಬೇರುಗಳನ್ನು ಆಧುನಿಕ ಯುರೋಪಿನ ಸಮಾಜವಾದ ಅಥವಾ ಕಮ್ಯುನಿಸಂನಲ್ಲಿ ಶೋಧಿಸಲಾಗಿದೆ. ಮೊದಲ ನೋಟದಲ್ಲಿ ಪ್ರಾಚೀನ ಭಾರತೀಯ ಚಿಂತನೆಯಲ್ಲಿ ಸಮಾನತೆಯ ಕಲ್ಪನೆ, ವಿಚಾರಗಳು ಇರಲೇ ಇಲ್ಲ ಎಂದು  ತೋರಬಹುದು.

ದೇವರ ಮುಂದೆ ಎಲ್ಲರೂ ಸಮಾನರು ಎಂಬ ಕಲ್ಪನೆಯಂತೂ ಇತ್ತು. ಆದರೆ ಲೌಕಿಕ ವಸ್ತುಗಳು ಮತ್ತು ಸಂಪತ್ತಿನ ಹಂಚಿಕೆಯ ವಿಷಯದಲ್ಲಿ ಸಮಾನತೆಯ ಕಲ್ಪನೆಯಿರಲಿಲ್ಲ. ಆದರೆ ನಾವು ಆಳವಾಗಿ ಹುಡುಕಿದರೆ, ಸಹಾನುಭೂತಿಯ ಕಲ್ಪನೆಯು ನಮ್ಮ ಪರಂಪರೆಯಲ್ಲಿ  ವ್ಯಾಪಕವಾಗಿತ್ತು ಎಂದು ನಾವು ಕಂಡುಕೊಳ್ಳುತ್ತೇವೆ. ವಿನೋಬಾ ಭಾವೆ ಹೇಳುತ್ತಿದ್ದರು “ಹೇಗೆ ರಾಮನಿಗೆ ಕೌಶಲ್ಯ ತಾಯಿಯೊ ಮತ್ತು ಕೃಷ್ಣನಿಗೆ ತಾಯಿ ಯಶೋಧೆಯೊ ಅದೇ ರೀತಿ ಸಮಾನತೆಯ ವಿಚಾರಗಳ ತಾಯಿ ಕರುಣೆ."

"ಬುದ್ಧನು ಕರುಣೆಯ ಅವತಾರ" ಈ ತಿಳಿವಳಿಕೆಯ ಅನುಸಾರ ಕರುಣೆ ಎಂದರೆ ಕೇವಲ ದಯೆ ಎಂದಲ್ಲ. ಪರರ ದುಃಖವನ್ನು ಕಂಡಾಗ ಸತ್ಪುರುಷರ ಹೃದಯದಲ್ಲಾಗುವ ಕಂಪನಕ್ಕೆ ‘ಕರುಣೆ’ ಎನ್ನುತ್ತಾರೆ. ಈ ಬಗೆಯ ಕರುಣೆಯ ಪ್ರವೃತ್ತಿಯು ವ್ಯಕ್ತಿಯನ್ನ ಪರರ ದುಃಖವನ್ನು ದೂರ ಮಾಡುವ ಪ್ರಯತ್ನಗಳಲ್ಲಿಯೂ ತೊಡಗಿಸಬಹುದು.

ಆಧುನಿಕ ಕಾಲದಲ್ಲಿ ಸಹಾನುಭೂತಿಯ ಪ್ರವೃತ್ತಿಯು ಒಬ್ಬ ವ್ಯಕ್ತಿಯದಲ್ಲ. ಆದರೆ ಸಾಮೂಹಿಕ ಆದರ್ಶದ ರೂಪವನ್ನು ಪಡೆಯುತ್ತದೆ. ಜಗತ್ತಿನ ಇತರ ದೇಶಗಳಂತೆ ನಮ್ಮ ದೇಶದಲ್ಲೂ ಆಧುನಿಕ ಸಮಾಜವಾದ ಮತ್ತು ರಷ್ಯಾದ ಕ್ರಾಂತಿಯ ಕಲ್ಪನೆಯ ಪ್ರಭಾವದ ಅಡಿಯಲ್ಲಿ ಸಹಾನುಭೂತಿ/ಕರುಣೆಯ ವ್ಯಾಖ್ಯಾನವು ನಡೆಯಿತು. ಸಮಾನತೆಯ ಕಲ್ಪನೆಯು ಆದರ್ಶ ಸಮಾಜವನ್ನು ನಿರ್ಮಿಸುವ ಕೇಂದ್ರ ಕಲ್ಪನೆಯಾಯಿತು.

ಮಹಾತ್ಮ ಗಾಂಧಿಯವರ ಪ್ರಭಾವ

ಸಮಾನತೆಯನ್ನು ಕೇವಲ ಒಂದು ಆಧ್ಯಾತ್ಮಿಕ ತತ್ವವಾಗಿ ಸೀಮಿತಗೊಳಿಸದೆ ಭೌತಿಕ ಜಗತ್ತಿನಲ್ಲಿ ವಿತರಣೆಯ ಸಮಾನತೆಯಾಗಿಯೂ ವ್ಯಕ್ತಪಡಿಸಲಾಯಿತು. ಆದ್ದರಿಂದ ಸಮಾನತೆಯ ಜವಾಬ್ದಾರಿ ಯಾವುದೇ ಒಬ್ಬ ವ್ಯಕ್ತಿಯದ್ದಲ್ಲ, ಆದರೆ ರಾಜ್ಯ ವ್ಯವಸ್ಥೆಯ ಮೇಲೆ ಹೇರಲಾಗಿದೆ. ಸಮಾನತೆಯ ಕಲ್ಪನೆಯು ಆರ್ಥಿಕ ಸಮಾನತೆಗೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ ಕ್ಷೇತ್ರದಲ್ಲಿ ಜಾತಿ ಸಮಾನತೆ ಮತ್ತು ಪುರುಷ-ಮಹಿಳೆಯರಲ್ಲಿ ಲಿಂಗ ಸಮಾನತೆಯ ಕಲ್ಪನೆಯೂ ಈ ಮೂಲದಿಂದ ಹುಟ್ಟಿಕೊಂಡಿತು. ಮಹಾತ್ಮ ಗಾಂಧಿಯವರ ಪ್ರಭಾವದಿಂದ ಭಾರತೀಯ ಸಮಾಜವಾದವು ಪ್ರಪಂಚದ ಇತರ ಸಮಾಜವಾದಕ್ಕಿಂತ ವಿಭಿನ್ನ ರೂಪವನ್ನು ಪಡೆಯಲು ಸಾಧ್ಯವಾಯಿತು.

gandhi.

ಸ್ನೇಹ ಮತ್ತು ಸಹಾನುಭೂತಿಯಂತೆ, ನಮ್ರತೆಯನ್ನು ಸಹ ವ್ಯಕ್ತಿಯ ಗುಣವಾಗಿ ನೋಡಲಾಗುತ್ತದೆ. ವಿನಯ, ನಮ್ರ ಎಂದರೆ ಒಳ್ಳೆಯ ನಡತೆಯ ವ್ಯಕ್ತಿ. ಭಾರತೀಯ ಸಂಪ್ರದಾಯದ ವಿವಿಧ ಪ್ರಕಾರಗಳಲ್ಲಿ ನಮ್ರತೆಯನ್ನು ವಿವರಿಸಲಾಗಿದೆ. ಆದರೆ ಈ ಪರಿಕಲ್ಪನೆಯು ನಮಗೆ ರಾಜಪ್ರಭುತ್ವದಲ್ಲಿ ರಾಜನ ಮತ್ತು ಗಣರಾಜ್ಯದಲ್ಲಿ, ಇದು ಗಣ ಅಂದರೆ ಪ್ರಜೆಯ ಗುಣಗಳ ವಿವರಣೆಯ ಕಡೆಗೆ ಕೂಡ ನಮ್ಮನ್ನು ಕರೆದೊಯ್ಯುತ್ತದೆ. ಸಹಜವಾಗಿ ಪ್ರಜಾಪ್ರಭುತ್ವ ಕಲ್ಪನೆಯು ಆಧುನಿಕವಾಗಿದೆ, ಮತ್ತು ಅದರ ಕೆಲವು ಸಂಸ್ಥೆಗಳನ್ನು ಪಾಶ್ಚಿಮಾತ್ಯ ವ್ಯವಸ್ಥೆಯಿಂದ ಎರವಲು ಪಡೆಯಲಾಗಿದೆ. ಆದರೆ ಪ್ರಾಚೀನ ಭಾರತದಲ್ಲಿ ರಾಜಧರ್ಮ ಮತ್ತು ರಾಜ್ಯಾಡಳಿತ ಮತ್ತು ಮೊಘಲ್ ಅವಧಿಯಲ್ಲಿನ ಸುಲ್ತಾನರ ಅರ್ಹತೆ ಮತ್ತು ದೋಷಗಳ ವಿವರಣೆಯು ಆಧುನಿಕ ಪ್ರಜಾಪ್ರಭುತ್ವದ ನಮ್ಮ ತಿಳಿವಳಿಕೆಗೆ ಆಧಾರವಾಗಿದೆ.

ಇದನ್ನು ಓದಿ: ಸ್ವಧರ್ಮ | ದೇಶಕ್ಕೆ ತನ್ನದೇ ಆದ ಧರ್ಮವೊಂದು ಇರಬಹುದೇ? ಅದನ್ನು ಎಲ್ಲಿ ಹುಡುಕುವುದು ?

ಆಧುನಿಕ ಅರ್ಥದಲ್ಲಿ ಗಣರಾಜ್ಯ ಎಂದರೆ ಪುರಾತನ ಭಾರತೀಯ ಗಣರಾಜ್ಯದಲ್ಲಿದ್ದಂತೆಯೇ ಎಂದು ಅಲ್ಲ, ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಇಂದಿನ ವ್ಯವಸ್ಥೆಗೆ ಪ್ರಾಚೀನ ಗಣರಾಜ್ಯದ ಅನುಭವದ ಪ್ರಸ್ತುತತೆಯನ್ನು ಒತ್ತಿ ಹೇಳಿದರು. ಅದಕ್ಕೆ ಭಾರತದ ಪ್ರಜಾಪ್ರಭುತ್ವಕ್ಕೆ ಪಾಶ್ಚಿಮಾತ್ಯ ಪ್ರಜಾಪ್ರಭುತ್ವದ ಮೈಕಟ್ಟು ಅಳವಡಿಸಿಕೊಂಡರು. ಆದರೆ ಅದಕ್ಕೆ ಭಾರತೀಯ ಜೀವಂತಿಕೆ(ಆತ್ಮ)ಯನ್ನು ನೀಡಿದರು. ಭಾರತೀಯ ಪ್ರಜಾಪ್ರಭುತ್ವದ ಸ್ವರೂಪವು ಸಂಸ್ಥೆಗಳು ಅಥವಾ ಪ್ರಕ್ರಿಯೆಗಳಿಗಿಂತ ಹೆಚ್ಚು ಸಾರ್ವಜನಿಕ ಕಲ್ಯಾಣ, ಸಾರ್ವಜನಿಕ ನಮ್ರತೆ ಮತ್ತು ಸಾರ್ವಜನಿಕ ಅಭಿಪ್ರಾಯದಿಂದ ನಿಯಂತ್ರಿಸಲ್ಪಡುತ್ತದೆ. ಅಹಂಕಾರ ಮತ್ತು ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಪ್ರಯತ್ನಗಳು ಭಾರತೀಯ ಪ್ರಜಾಪ್ರಭುತ್ವ ಸಂಸ್ಕೃತಿಗೆ ವಿರುದ್ಧವಾಗಿದೆ.

ಈಗ ನಾವು ಕೊನೆಯ ಪ್ರಶ್ನೆಯೆಡೆಗೆ ಹೋಗಬಹುದು: ಕಳೆದ ಕೆಲವು ವರ್ಷಗಳಲ್ಲಿ ಭಾರತದ ಬದಲಾಗುತ್ತಿರುವ ಸ್ವಭಾವ ನಮ್ಮ ಈ ಸ್ವಧರ್ಮಕ್ಕೆ ಅನುಗುಣವಾಗಿದೆಯೇ?

ಅನುವಾದ | ರಂಜಿತಾ ಜಿ ಹೆಚ್‌
ನಿಮಗೆ ಏನು ಅನ್ನಿಸ್ತು?
0 ವೋಟ್
eedina app