ಅಂತರ್‌ಧರ್ಮೀಯ ಮದುವೆ | ‘ಪ್ರೀತಿಯೇ ನಮಗೆ ಧರ್ಮ’

ಅಂತರ್‌ ಧರ್ಮೀಯ ವಿವಾಹ, ಪ್ರೀತಿ  ಇಂದು ನೆನ್ನೆಯ ವಿದ್ಯಮಾನವಲ್ಲ. ನಮ್ಮ  ಹಿರಿಯರ ಕಾಲದಿಂದಲೂ ಜಾತಿ, ಧರ್ಮ ನೋಡದೇ ಪ್ರೀತಿಸಿ, ಮದುವೆಯಾಗಿ ಜೊತೆಯಾಗಿ ಬದುಕುತ್ತಿರುವವರು ನಮ್ಮ ನಡುವೆ ಇದ್ದಾರೆ. ಆದರೆ, ಇಂದು ಭಿನ್ನ ಧರ್ಮದ ಯುವಕ ಯುವತಿ ಖುಷಿಯಿಂದ ಮಾತನಾಡಿದರೂ ಅವರ ಮೇಲೆ ಗೂಂಡಾಗಿರಿ ನಡೆಸಲಾಗುತ್ತಿದೆ!

ಸ್ನೇಹದಿಂದ ಸಲುಗೆ, ಸಲುಗೆಯಿಂದ ಪ್ರೀತಿ ಇದು ಸಾಮಾನ್ಯವಾಗಿ ಎಲ್ಲರ ಬದುಕಿನಲ್ಲೂ ನಡೆಯುವ ಸುಮಧುರ ಭಾವ. ‘ಲವ್‌ ಅಟ್‌ ಫಸ್ಟ್‌ ಸೈಟ್‌’ ಎಂದು ಹೇಳುವುದನ್ನು ನಾವೆಲ್ಲರೂ ಕೇಳಿರುತ್ತೇವೆ. ಪ್ರೀತಿಸಿ ಮದುವೆಯಾಗಿ ನೆಮ್ಮದಿಯಿಂದ ಬದುಕುತ್ತಿರುವ ಜೋಡಿಗಳನ್ನು ನಾವು ನಮ್ಮ ಸುತ್ತಮುತ್ತಲೇ ಗಮನಿಸಿರುತ್ತೇವೆ. ಪ್ರೀತಿಯೆಂಬುದು ಜಾತಿ, ಧರ್ಮ, ಭಾಷೆ ನೋಡಿ ಹುಟ್ಟುವಂತದ್ದಲ್ಲ. ಅದು ಅವರವರ ಮನಸ್ಸು, ಭಾವನೆಗಳಿಗೆ ಸಂಬಂಧಿಸಿದ್ದು ಎಂಬುದು ಎಲ್ಲರೂ ಒಪ್ಪುವಂತಹ ವಿಷಯವೇ.

Eedina App

ಆದರೆ, ವರ್ತಮಾನದ ಪ್ರೀತಿಗೆ ಜಾತಿ, ಧರ್ಮದ ‘ಸೋಂಕು’ ಬೆನ್ನತ್ತಿದೆ. ಅಂತರ್‌ ಜಾತಿ, ಅಂತರ್‌ ಧರ್ಮೀಯ ಪ್ರೀತಿಗೆ ಎಲ್ಲಿಲ್ಲದ ಆಕ್ರೋಶ ವ್ಯಕ್ತವಾಗುತ್ತಿದೆ. ಹೆತ್ತ ಮಕ್ಕಳು ಎಂಬುದನ್ನು ನೋಡದೇ ಪೋಷಕರೇ ಪ್ರೇಮಿಗಳನ್ನು ಕೊಲೆ ಮಾಡುತ್ತಿರುವ ‘ಮರ್ಯಾದೆಗೇಡು ಹತ್ಯೆ’ ಪ್ರಕರಣಗಳು ತೀರಾ ಸಾಮಾನ್ಯ ಎನ್ನುವಂತಾಗಿದೆ. ‘ಪ್ರೀತಿ’ ಎಂಬುದು ಇಂದು ನೆನ್ನೆಯ ವಿದ್ಯಮಾನವಲ್ಲ. ದೇಶ ವಿಭಜನೆಗೂ ಮುಂಚಿನಿಂದಲೇ, ನಮ್ಮ  ಹಿಂದಿನವರೇ ಜಾತಿ, ಧರ್ಮ ನೋಡದೇ ಪ್ರೀತಿಸಿ, ಮದುವೆಯಾಗಿ ಜೊತೆಯಾಗಿ ಬದುಕುತ್ತಿರುವುದನ್ನು ನಾವು ನೋಡಿದ್ದೇವೆ, ಕೇಳಿರುತ್ತೇವೆ. ಆದರೆ, ಇಂದಿನ ಪರಿಸ್ಥಿತಿ ಬಿಗಡಾಯಿಸಿದೆ. ಮತ್ತೊಂದು ಧರ್ಮವಿರಲಿ, ಒಂದೇ ವಾರಗೆಯ ಯುವಕ ಯುವತಿಯರಿಬ್ಬರು ಜೊತೆಯಾಗಿ ಹೋಗುತ್ತಿದ್ದರೆ ಅವರನ್ನು ಅವಮಾನಿಸುವುದು ನಡೆಯುತ್ತಿದೆ. ಅದರಲ್ಲೂ ಇಬ್ಬರು ಅಂತರ್‌ ಧರ್ಮೀಯ ಸ್ನೇಹಿತರಾಗಿದ್ದರಂತೂ ‘ಲವ್‌ ಜಿಹಾದ್‌’ ಹೆಸರಿನಲ್ಲಿ ಥಳಿಸಿ ಕೊಲೆ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇಂತಹ ಘಟನೆಗಳಿಗೆ ಸರ್ಕಾರಗಳು ಪರೋಕ್ಷವಾಗಿ, ಕೆಲವು ಕಡೆ ನೇರವಾಗಿ ಕುಮ್ಮಕ್ಕು ನೀಡುತ್ತಿರುವುದು ಮಾತ್ರ ಆಘಾತಕಾರಿ ಮತ್ತು ಬೇಸರದ ಸಂಗತಿ.

ಅಂತರ್‌ಧರ್ಮೀಯ ಪ್ರೀತಿ, ವಿವಾಹವನ್ನು ‘ಮಹಾನ್‌ ಅಪರಾಧ’ ಎಂದು ನೋಡುವ ಇಂದಿನ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಪ್ರೀತಿಯನ್ನು ಕೋಮುದ್ವೇಷದ ಬೆಂಕಿಯಾಗಿ ಬಳಸುತ್ತಿರುವ ಜನರ ನಡುವೆ, ಪ್ರೀತಿಸಿ, ಅಂತರ್‌ಧರ್ಮೀಯ ವಿವಾಹವಾಗಿ ಸಂತೋಷದಿಂದ ಬದುಕುತ್ತಿರುವ ಜೋಡಿಯೊಂದು ಕುಟುಂಬ, ಸಮಾಜದಿಂದ ಎದುರಿಸಿದ ಸವಾಲುಗಳ ಬಗ್ಗೆ ಈದಿನ.ಕಾಮ್‌ನೊಂದಿಗೆ ಮಾತನಾಡಿದ್ದಾರೆ.

AV Eye Hospital ad

ಸೌಪರ್ಣಿಕಾ-ಸಮೀರ್ (ಹೆಸರು ಬದಲಿಸಲಾಗಿದೆ) ನಾವಿಬ್ಬರು ಬಯಲುಸೀಮೆಯವರು. ಸಾಮಾನ್ಯ ಬಡ ಕುಟುಂಬದಿಂದ ಬಂದವರು. ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬ ಮಹದಾಸೆಯಿಂದ ಹಲವು ವರ್ಷಗಳ ಸತತ ಪರಿಶ್ರಮ ಪಟ್ಟೆವು. ಅದಕ್ಕೆ ಸಂಬಂಧಿಸಿದ ತರಬೇತಿಯ ಸಮಯದಲ್ಲಿ ಪರಸ್ಪರ ಪರಿಚಯವಾಯಿತು. ಪರಿಚಯ ಸ್ನೇಹವಾಗಿ, ಸಲುಗೆಯಾಗಿ, ಪ್ರೀತಿಯಾಗಿ ಬದಲಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಎರಡು ವರ್ಷ ಪ್ರೀತಿಯ ವಿಷಯವನ್ನು ಕುಟುಂಬದವರಿಗೂ ತಿಳಿಸಿರಲಿಲ್ಲ. ಇಬ್ಬರು ಒಬ್ಬರಿಗೊಬ್ಬರು ಅರಿತ ನಂತರ ವಿವಾಹವಾಗುವ ನಿರ್ಧಾರಕ್ಕೆ ಬಂದೆವು ಎಂದು ತಮ್ಮ ಪ್ರೀತಿ ಆರಂಭವಾದದ್ದನ್ನು ವಿವರಿಸುತ್ತಾರೆ ಸೌಪರ್ಣಿಕಾ.

“ಪರಸ್ಪರ ಆಲೋಚನೆಗಳು ಹೊಂದಿಕೆಯಾಗಿತ್ತು. ನಮ್ಮಿಬ್ಬರ ಜಾತಿ, ಧರ್ಮ ನಮ್ಮ ಪ್ರೀತಿಗೆ ಎಂದಿಗೂ ಅಡ್ಡಿ ಆಗಲಿಲ್ಲ. ಆದರೆ, ವಿವಾಹದ ವಿಷಯ ಹಾಗಲ್ಲ. ಇಬ್ಬರು ಭಿನ್ನ ನಂಬಿಕೆ-ಆಚರಣೆಗಳನ್ನು ನಡೆಸುತ್ತಿದ್ದರಿಂದ ಮನೆಯವರನ್ನು ಎದುರಿಸುವುದು ಅಷ್ಟೇನು ಸುಲಭದ ಮಾತಾಗಿರಲಿಲ್ಲ. ನಾನು ಸಮೀರ್ ನನ್ನು ಮದುವೆಯಾಗುತ್ತೇನೆ ಎಂದಾಗ, ಇಡೀ ಕುಟುಂಬದವರು ನನ್ನ ಮೇಲೆ ಹೌಹಾರಿದರು. ಈಗಾಗಲೇ ಸಮಾಜದಲ್ಲಿ ಬಾಯಿಂದ ಬಾಯಿಗೆ ಪ್ರಚಲಿತದಲ್ಲಿರುವ ಮಾತುಗಳನ್ನು ಹೇಳುತ್ತಾ, ನಮ್ಮ ನಂಬಿಕೆ ಆಚರಣೆ ಅನುಸರಿಸುವವನ್ನೇ ಮದುವೆಯಾಗು, ಈ ಪ್ರೀತಿಯನ್ನು ಕನಸೆಂದು ಮರೆತುಬಿಡು ಎಂದೆಲ್ಲ ಪುಸಲಾಯಿಸಿದರು. ಆರಂಭದಲ್ಲಿ ಪುಸಲಾಯಿಸಿದರೂ, ನಂತರ ಸಮೀರ್ ನನ್ನು ವಿವಾಹವಾಗುವಂತಿಲ್ಲ ಎಂದು ತಂದೆ ಪಟ್ಟು ಹಿಡಿದರು. ಕುಟುಂಬ, ಸಂಬಂಧಿಕರು ಮೂದಲಿಕೆಯ ಮಾತುಗಳು ಹಗಲು-ರಾತ್ರಿ ಬೆಂಬಿಡದೇ ಕಾಡುತ್ತಿದ್ದವು. ಆದರೆ, ನಮ್ಮಿಬ್ಬರ ನಿರ್ಧಾರ ಅಚಲವಾಗಿತ್ತು. ಯಾವುದೇ ಕಾರಣಕ್ಕೂ ಮನೆಯವರಿಗೆ ಹೇಳದೇ ವಿವಾಹವಾಗುವುದು ಬೇಡ ಎಂದು ನಿರ್ಧರಿಸಿದ್ದೆವು. ಕುಟುಂಬದವರ ಒಪ್ಪಿಗೆಯೊಂದಿಗೆ ಮದುವೆ ಆಗಬೇಕು ಎಂಬುದು ಇಬ್ಬರ ನಿರ್ಧಾರವಾಗಿತ್ತು. ಭಿನ್ನ ಧರ್ಮದವರು ವಿವಾಹದ ನಂತರ ಯಾವ ಧರ್ಮವನ್ನು ಪಾಲಿಸುತ್ತಾರೆ. ಮಕ್ಕಳು ಹುಟ್ಟಿದಲ್ಲಿ ಅವರಿಗೆ ಯಾವ ಧರ್ಮದ ಗುರುತು ನೀಡಲಾಗುತ್ತದೆ? ಹೀಗೆ ನಾನಾ ಬಗೆಯ ಪ್ರಶ್ನೆಗಳು ನಮ್ಮ ಸುತ್ತಲಿನವರಿಂದ ನಾವು ಕೇಳಿದ್ದೆವು. ಎಷ್ಟೇ ಉತ್ತರ ನೀಡಿದರೂ ಅದನ್ನು ಆಲಿಸುವ, ಒಪ್ಪುವ ಸ್ಥಿತಿ ಅವರಲ್ಲಿ ಇರಲಿಲ್ಲ ಎಂಬುದು ವಾಸ್ತವ” ಎಂದು ತಾವು ಎದುರಿಸಿದ ಸವಾಲುಗಳನ್ನು ವಿವರಿಸುತ್ತಾರೆ ಅವರು.

“ಹಲವು ಗಲಾಟೆ, ಜಗಳಗಳ ನಂತರ ನನ್ನ ಮದುವೆಗೆ ಕುಟುಂಬದವರಿಂದ ಸಮ್ಮತಿ ದೊರೆಯಿತು. ಆ ಸಮ್ಮತಿಯಲ್ಲಿ ಬೇಸರವಿತ್ತು. ಆದರೆ, ಇದು ಇಂದಲ್ಲ ನಾಳೆ ಸರಿ ಹೋಗುತ್ತದೆ ಎಂಬುದು ಅಚಲವಾಗಿತ್ತು. ಆರಂಭದಲ್ಲಿ ತಾಯಿ ಮತ್ತು ಅಣ್ಣ ವಿವಾಹಕ್ಕೆ ಅಸಮ್ಮತಿ ಸೂಚಿಸಿದ್ದರು. ನಂತರ ಅವರೇ ನನ್ನ ಪ್ರೀತಿಗೆ ಜೊತೆಯಾಗಿ ನಿಂತಿದ್ದು ನನಗೆ ಧೈರ್ಯ ನೀಡಿತ್ತು. ಸಮೀರ್ ಮನೆಯಲ್ಲಿಯೂ ಈ ಬಗ್ಗೆ ಹೆಚ್ಚು ಚರ್ಚೆ ನಡೆದಿತ್ತು. ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ವಿವಾಹ ನೋಂದಣಿ ಮಾಡಿಸಿದೆವು. ನನ್ನ ಮತ್ತು ಸಮೀರ್ ನ ಕುಟುಂಬದವರ ನಂಬಿಕೆ ಆಚರಣೆಗಳಂತೆ ಎರಡು ಪ್ರತ್ಯೇಕ ಕಾರ್ಯಕ್ರಮಗಳನ್ನು ಮಾಡಲಾಯಿತು. ಪ್ರಸ್ತುತ ಇಬ್ಬರೂ ಸಂತೋಷದಿಂದ ಬದುಕುತ್ತಿದ್ದೇವೆ” ಎಂದು ಪ್ರೀತಿಗೆ ಜಾತಿ ಧರ್ಮಗಳ ಹಂಗಿಲ್ಲ ಎಂಬುದಕ್ಕೆ ನಾವೆ ಉದಾಹರಣೆ ಎನ್ನುವಂತೆ ಬದುಕುತ್ತಿದ್ದಾರೆ.

“ವಿವಾಹದ ನಂತರ ಯಾರು ಯಾವ ಧರ್ಮಕ್ಕೆ ಮತಾಂತರವಾಗಬೇಕು ಎಂಬುದರ ಬಗ್ಗೆ ನಮ್ಮ ಕುಟುಂಬದವರು, ನೆರೆಹೊರೆಯವರು ತೀವ್ರ ಚರ್ಚೆ ನಡೆಸುತ್ತಿದ್ದರು. ನಮ್ಮ ಮೇಲೂ ಒತ್ತಡ ಹೇರಿದ್ದರು. ಆದರೆ, ಈ ವಿಷಯದಲ್ಲಿ ನಾವಿಬ್ಬರೂ ಯಾವುದೇ ಧರ್ಮಕ್ಕೆ ಮತಾಂತರವಾಗದೇ, ಪ್ರೀತಿಯಿಂದಲೇ ಬದುಕುವುದೆಂದು ನಿರ್ಧರಿಸಿದ್ದೆವು. ಹಾಗೆಯೇ ಬದುಕುತ್ತಿದ್ದೇವೆ. ನಮ್ಮ ಮನೆಗೆ ಸಮೀರ್ ಕುಟುಂಬದವರು ಹಾಗೂ ನನ್ನ ಕುಟುಂಬದವರು ಬಂದು, ಇದ್ದು ಹೋಗುತ್ತಾರೆ. ನಾವು ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ. ಇದೊಂದು ಬಗೆಯಲ್ಲಿ ನಮ್ಮೆಲ್ಲರ ನಡುವೆ ಸೌಹಾರ್ದತೆಯನ್ನು ತಂದಿದೆ” ಎಂದು ಅವರು ವಿವರಿಸುತ್ತಾರೆ.

ಸೌಪರ್ಣಿಕಾ-ಸಮೀರ್‌ ಮಾತ್ರವಲ್ಲ. ಇದೇ ರೀತಿ ನೂರಾರು ಮಂದಿ ಭಿನ್ನ ನಂಬಿಕೆಯ ಜನರು ಪ್ರೀತಿಸಿ, ವಿವಾಹವಾಗಿ, ಯಾವುದೋ ಒಂದು ಧರ್ಮದ ಸಂಪ್ರದಾಯ, ಕಟ್ಟಳೆಗಳಲ್ಲಿ ಬಂಧಿಯಾಗದೇ ಸಂತೋಷ ಮತ್ತು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದರೆ, ಈ ನಡುವೆ ರಾಜಕೀಯ ಕಾರಣಕ್ಕಾಗಿ ಸಮಾಜವನ್ನು ಒಡೆಯುವ ಶಕ್ತಿಗಳು ವ್ಯಕ್ತಿಗಳ ವೈಯಕ್ತಿಕ ಜೀವನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂಬುದೇ ವಿಪರ್ಯಾಸದ ಸಂಗತಿ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app