ಜಿಎಸ್‌ಟಿ| ಮೊದಲು ವಿರೋಧಿಸಿ, ನಂತರ ಅದನ್ನೇ ಅಸ್ತ್ರ ಮಾಡಿಕೊಂಡ ಮೋದಿ ಸರ್ಕಾರ

MOdi GST

ಅಕ್ಟೋಬರ್ 23, 2013 ರಂದು, ನರೇಂದ್ರ ಮೋದಿಯ ಗುಜರಾತ್ ಸರ್ಕಾರವು ಜಿಎಸ್‌ಟಿ ಜಾರಿಗೊಳಿಸಲು 115ನೇ ಸಂವಿಧಾನ ತಿದ್ದುಪಡಿ ಮಸೂದೆ 2011 ಅನ್ನು ಅಂಗೀಕರಿಸುವ ಯುಪಿಎ ಸರ್ಕಾರದ ಪ್ರಯತ್ನವನ್ನು ವಿರೋಧಿಸಿತ್ತು. 2016ರ ಆಗಸ್ಟ್ 9 ರಂದು ಸಂಸತ್ತಿನಲ್ಲಿ ಜಿಎಸ್‌ಟಿ ಬಗ್ಗೆ ತಮಗೆ ಅನುಮಾನವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು

ಪ್ರಧಾನಿ ನರೇಂದ್ರ ಮೋದಿ ತಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಕೇಂದ್ರ ಸರ್ಕಾರದ ಯಾವೆಲ್ಲ ಯೋಜನೆಗಳನ್ನು ವಿರೋಧಿಸಿದ್ದರೋ ಅವೆಲ್ಲವನ್ನು ಅವರು ಪ್ರಧಾನಿಯಾಗಿ ಅನುಷ್ಟಾನಕ್ಕೆ ತಂದಿದ್ದಾರೆ. ಅವುಗಳಲ್ಲಿ ಜಿಎಸ್‌ಟಿ ಕೂಡ ಒಂದು. ಬಿಜೆಪಿ ಇಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)  ವಿಪರೀತವಾಗಿ ಎಲ್ಲ ಅಗತ್ಯ ವಸ್ತುಗಳ ಮೇಲೆ ಹೇರಿದೆ. ಆದರೆ, ಇದೇ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಜಿಎಸ್‌ಟಿ ಉಗ್ರವಾಗಿ ವಿರೋಧಿಸುತ್ತಾ "ಇದು ಹಣಕಾಸಿನ ವ್ಯವಹಾರದಲ್ಲಿ ಒಕ್ಕೂಟದ ತತ್ವಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ" ಎಂದು ಬಣ್ಣಿಸಿದ್ದರು.

ಜಿಎಸ್‌ಟಿ ಅನುಷ್ಟಾನವನ್ನು ಅತ್ಯಂತ ಪ್ರಬಲವಾಗಿ ಪ್ರತಿರೋಧಿಸುವುದರಿಂದ ಹಿಡಿದು ಈಗ ಅದರ ಗರಿಷ್ಟ ಪ್ರಯೋಜನ ಪಡೆಯುವವರೆಗೆ ಬಿಜೆಪಿ ಒಂದು ಸಂಪೂರ್ಣ ಯು-ಟರ್ನ್ ನಡಾವಳಿ ಪ್ರದರ್ಶಿಸಿದೆ. ಫೆಬ್ರವರಿ 20, 2011 ರಂದು, ಅಂದಿನ ಬಿಜೆಪಿಯ ಹಿರಿಯ ನಾಯಕ ಮತ್ತು ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಯಶವಂತ್ ಸಿನ್ಹಾ ಅವರು ಇದು ಸಿಂಗ್ ಸರ್ಕಾರದ ತಪ್ಪು ನಿರ್ಧಾರವೆಂತಲು ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳು ತಮ್ಮ ಸ್ವಂತ ಹಿತಾಸಕ್ತಿಗಳಿಂದ ಜಿಎಸ್‌ಟಿಯನ್ನು ವಿರೋಧಿಸುತ್ತಿವೆ ಎಂದು ಹೇಳಿದ್ದರ ಕುರಿತು ಹಿಂದೂಸ್ತಾನ್ ಟೈಮ್ಸ್ ಅಂದು ವರದಿ ಮಾಡಿತ್ತು.
 
ಅಕ್ಟೋಬರ್ 23, 2013 ರಂದು, ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರವು ಜಿಎಸ್‌ಟಿ ಜಾರಿಗೊಳಿಸಲು 115ನೇ ಸಂವಿಧಾನ ತಿದ್ದುಪಡಿ ಮಸೂದೆ 2011 ಅನ್ನು ಅಂಗೀಕರಿಸುವ ಯುಪಿಎ ಸರ್ಕಾರದ ಪ್ರಯತ್ನವನ್ನು ವಿರೋಧಿಸಿತ್ತು. ಅಂದು ರಾಷ್ಟ್ರೀಯ ಸಬಲೀಕರಣ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಅಂದಿನ ಗುಜರಾತ್ ಸಚಿವ ಸೌರಭ್ ಪಟೇಲ್, "ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಜಿಎಸ್ಟಿ ಆಡಳಿತವನ್ನು ಜಾರಿಗೊಳಿಸಿದರೆ, ಗಮ್ಯಸ್ಥಾನ ಆಧಾರಿತ ತೆರಿಗೆ ತತ್ವದಿಂದಾಗಿ ಗುಜರಾತ್ ರಾಜ್ಯ ವಾರ್ಷಿಕ 14,000 ಕೋಟಿ ರೂಪಾಯಿ ನಷ್ಟವನ್ನು ಭರಿಸಬೇಕಾಗುತ್ತದೆ" ಎಂದು ಹೇಳಿದ್ದರು.

ಆರ್ಥಿಕ ಹಿಂಜರಿತದಿಂದಾಗಿ ಗುಜರಾತ್ ಆದಾಯದ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಪಟೇಲ್ ಹೇಳಿದ್ದರು. "ಆದರೂ ಕೇಂದ್ರವು ಇನ್ನೂ ರೂ 4,500 ಕೋಟಿ ಬಾಕಿ ಪರಿಹಾರವನ್ನು ಬಿಡುಗಡೆ ಮಾಡಿಲ್ಲ. ಸಂವಿಧಾನ ತಿದ್ದುಪಡಿ ಮಾಡುವ ಬದಲು ಈ ಸಮಸ್ಯೆಯನ್ನು ಪರಿಹರಿಸಬೇಕು. ಸ್ಥಾಯಿ ಸಮಿತಿಯು ಸೂಚಿಸಿದಂತೆ ಜಿಎಸ್‌ಟಿ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ವ್ಯಾಪಕ ಒಮ್ಮತಕ್ಕೆ ಬರಲಾಗಿಲ್ಲ" ಎಂದಿದ್ದರು. ಅಷ್ಟೇ ಅಲ್ಲದೆˌ ಆಗಸ್ಟ್ 4, 2010ರಂದು, ಗುಜರಾತ್ ಸರ್ಕಾರವು ಜಿಎಸ್‌ಟಿಯನ್ನು ವಿರೋಧಿಸುವ ಅಧಿಕಾರ ಸಮಿತಿಯ ಮುಂದೆ ವಿವರವಾದ ಲಿಖಿತ ತಕರಾರನ್ನು ಸಲ್ಲಿಸಿತ್ತು.

ಆ ಲಿಖಿತ ತಕರಾರಿನಲ್ಲಿ ಬಿಜೆಪಿ: “ಜಿಎಸ್‌ಟಿಯ ಹಲವು ವೈಶಿಷ್ಟ್ಯಗಳ ಬಗ್ಗೆ ಅಧಿಕಾರ ಸಮಿತಿಯೊಳಗೆ ಒಮ್ಮತದ ಕೊರತೆಯಿರುವ ಸಮಯದಲ್ಲಿ ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿ ಬಂದಿದೆ. ಈ ತಿದ್ದುಪಡಿಯು ರಾಜ್ಯಗಳ ಪರೋಕ್ಷ ತೆರಿಗೆಗಳನ್ನು ವಿಧಿಸುವ ಮತ್ತು ಸಂಗ್ರಹಿಸುವ ಅಧಿಕಾರವನ್ನು ಮೂಲಭೂತವಾಗಿ ಬದಲಾಯಿಸುತ್ತದೆ" ಎಂದು ಬರೆಯಲಾಗಿತ್ತು. "ತೆರಿಗೆಗಳ ದರವನ್ನು ನಿರ್ಧರಿಸುವ ಅಧಿಕಾರವು ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗದ ಮೂಲಭೂತ ಕಾರ್ಯವಾಗಿದೆ. 265 ನೇ ವಿಧಿಯು ಕಾನೂನಿನ ಅಧಿಕಾರವನ್ನು ಹೊರತುಪಡಿಸಿ ಯಾವುದೇ ತೆರಿಗೆಯನ್ನು ವಿಧಿಸಬಾರದು ಅಥವಾ ಸಂಗ್ರಹಿಸಬಾರದು ಎಂದು ಸ್ಪಷ್ಟವಾಗಿ ಹೇಳುತ್ತದೆ. ಹೀಗಾಗಿ, ಪ್ರಸ್ತಾವಿತ ವಿಧಿ 279 'ಎ' ನ ನಿಬಂಧನೆಗಳು ಸಂವಿಧಾನದ ಅಸ್ತಿತ್ವದಲ್ಲಿರುವ ನಿಬಂಧನೆಗಳಿಗೆ ವಿರುದ್ಧವಾಗಿವೆ."

Image
GST illastration

"ಜಿಎಸ್‌ಟಿ ಕೌನ್ಸಿಲ್‌ಗೆ ನೀಡಿರುವ ವ್ಯಾಪಕ ಅಧಿಕಾರವನ್ನು ಒಪ್ಪಿಕೊಳ್ಳುವುದು ನಮಗೆ ಕಷ್ಟವಾಗಿದೆ. ಈ ಅಧಿಕಾರಗಳು ರಾಜ್ಯದ ಶಾಸಕಾಂಗ ಮತ್ತು ಆಡಳಿತದ ವ್ಯಾಪ್ತಿಯಲ್ಲಿ ಉಳಿಯುತ್ತವೆ ಮತ್ತು ಕೌನ್ಸಿಲ್‌ಗೆ ಬಿಟ್ಟುಕೊಡಲಾಗುವುದಿಲ್ಲ ಏಕೆಂದರೆ ಅದು ರಾಜ್ಯದ ಸಂಪೂರ್ಣ ಆರ್ಥಿಕ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತದೆ" ಎಂದು ಅಂದಿನ ಮೋದಿ ನೇತೃತ್ವದ ಗುಜರಾತ್ ಸರ್ಕಾರ ವಾದಿಸಿತ್ತು. ಫೆಬ್ರವರಿ 11, 2011 ರಂದು ಮತ್ತೊಮ್ಮೆ ಗುಜರಾತ್ ಸರ್ಕಾರವು ಹೀಗೆ ಹೇಳಿತು: "ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಹೊಸ ಸಂವಿಧಾನಾತ್ಮಕ ತಿದ್ದುಪಡಿ ಕರಡು ಒಕ್ಕೂಟದ ಹಣಕಾಸಿನ ತತ್ವಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಆದ್ದರಿಂದ, ಪ್ರಸ್ತುತ ರೂಪದಲ್ಲಿ ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿಯನ್ನು ಗುಜರಾತ್ ಸರ್ಕಾರ ಬೆಂಬಲಿಸುವುದಿಲ್ಲ."

ಅನುಮಾನವಿದೆ ಎಂದಿದ್ದ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅವರು 2016ರ ಆಗಸ್ಟ್ 9 ರಂದು ಸಂಸತ್ತಿನಲ್ಲಿ ಜಿಎಸ್‌ಟಿ ಬಗ್ಗೆ ತಮಗೆ ಅನುಮಾನವಿದೆ ಎಂದು ಒಪ್ಪಿಕೊಂಡ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದ್ದನ್ನು ನಾವು ಸ್ಮರಿಸಬಹುದು. ಮುಖ್ಯಮಂತ್ರಿಯಾಗಿ ಜಿಎಸ್‌ಟಿ ಬಗ್ಗೆ ಅನುಮಾನಗಳಿದ್ದ ಅನುಭವದಿಂದ ಪ್ರಧಾನಿಯಾಗಿ ಆ ಸಮಸ್ಯೆಗಳನ್ನು ಪರಿಹರಿಸಲು ನನಗೆ ಸುಲಭವಾಯಿತು ಎಂದು ಮೋದಿ ಹೇಳಿದ್ದರು. ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕರು 'ʼಈಗ ಜಿಎಸ್‌ಟಿ ಜಾರಿ ಮಾಡುತ್ತಿರುವವರು ವಿರೋಧ ಪಕ್ಷದಲ್ಲಿದ್ದಾಗ ಏಕೆ ವಿರೋಧಿಸುತ್ತಿದ್ದರು" ಎಂದು ಪ್ರಶ್ನಿಸಿದ್ದರು.

"ನನಗೆ ಹಲವು ಅನುಮಾನಗಳಿದ್ದವು. ನಾನು ಪ್ರಣಬ್ ಮುಖರ್ಜಿ ಅವರೊಂದಿಗೆ ಹಲವು ಬಾರಿ ಚರ್ಚಿಸಿದ್ದೇನೆ" ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅಂದಿನ ರಾಷ್ಟ್ರಪತಿಯನ್ನು ಉಲ್ಲೇಖಿಸಿ ಹೇಳಿದ್ದರು. ಈಗ ಮೋದಿ ಸರ್ಕಾರ ಜಿಎಸ್‌ಟಿ ಅನುಷ್ಟಾನವನ್ನು ಸಮರ್ಥಿಸಿಕೊಳ್ಳುತ್ತಿರುವುದಷ್ಟೇ ಅಲ್ಲದೆ ಅದನ್ನು ಗರಿಷ್ಠ ಮಟ್ಟದಲ್ಲಿ ಎಲ್ಲಾ ಅಗತ್ಯ ವಸ್ತುಗಳಿಗೆ ವಿಸ್ತರಿಸಿದೆ.

ಇದನ್ನು ಓದಿದ್ದೀರಾ? ಜಿಎಸ್‌ಟಿ| ನೂತನ ಸರಕು ಸೇವಾ ತೆರಿಗೆ ವಿರುದ್ಧ ಮೀಮ್ಸ್‌ ಸಮರ

"ಹೊಸ ಪರೋಕ್ಷ ತೆರಿಗೆ ಪದ್ಧತಿಯಿಂದ ದೇಶವು ಪ್ರಯೋಜನ ಪಡೆಯಲಿದೆ" ಇಂದು ಬಿಜೆಪಿ ವಾದಿಸುತ್ತಿದೆ. ಇದು ಬಿಜೆಪಿ ಮತ್ತು ಮೋದಿಯವರ ದ್ವಿಮುಖ ನೀತಿಯನ್ನು ಎತ್ತಿ ತೋರಿಸುತ್ತದೆ. ಮೋದಿ ಸರ್ಕಾರ ಮೊದಲೇ ಧಾರ್ಮಿಕ ಮೂಲಭೂತವಾದಿಗಳ ನಿಯಂತ್ರಣದಲ್ಲಿದೆ. ಅದಕ್ಕೆ ವೈಜ್ಞಾನಿಕ ದೃಷ್ಟಿಕೋನವಿಲ್ಲ. ಹಾಗಾಗಿ ಈಗ ಮೋದಿ ಸಂಶೋಧನೆಗಳಿಗೆ ಬಳಸಲಾಗುವ ವೈಜ್ಞಾನಿಕ ಉಪಕರಣಗಳ ಮೇಲೆ ಕೂಡ ಗರಿಷ್ಠ ಮಟ್ಟದ ಜಿಎಸ್‌ಟಿ ವಿಧಿಸಿದೆ. ಇನ್ನು ಸಾಮಾನ್ಯ ಜನರ ಬದುಕಿಗೆ ಬೇಕಾಗುವ ಅಗತ್ಯ ವಸ್ತುಗಳು ಕೂಡ ಜಿಎಸ್‌ಟಿಯ ಹೊಡೆತಕ್ಕೆ ತತ್ತರಿಸುವ ಮೂಲಕ ಜನರ ಬದುಕು ಭಾರವಾಗಿದೆ. ಧಾರ್ಮಿಕ ಮೂಲಭೂತವಾದಿಗಳ ಹಾಗು ಸರ್ವಾಧಿಕಾರಿಗಳ ಕೈಯಲ್ಲಿ ಅಧಿಕಾರ ಸಿಕ್ಕರೆ ಏನಾಗಬೇಕೋ ಈಗ ದೇಶದಲ್ಲಿ ಅದೇ ಆಗುತ್ತಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್