ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ನೇತಾಜಿ ಗೆಲುವಿಗೆ ಶ್ರಮಿಸಿದ್ದ ಕನ್ನಡಿಗ ಹಾವೇರಿಯ ಸಿದ್ದಪ್ಪ ಹೊಸಮನಿ

1939ರ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಸೋತಿದ್ದರೆ ಅವರ ರಾಜಕೀಯ ಭವಿಷ್ಯ ಮಂಕಾಗುತ್ತಿತ್ತು. ಆ ಸಂದಿಗ್ಧ ಸಂದರ್ಭದಲ್ಲಿ ಸುಭಾಷ್ ಅವರು ಹಾವೇರಿಗೆ ಬಂದು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸಿದ್ದಪ್ಪ ಹೊಸಮನಿ ಅವರ ಬೆಂಬಲ ಕೋರಿದರು. ಅಂತೆಯೇ ಹೆಚ್ಚು ಮತ ಪಡೆದು ನೇತಾಜಿ ವಿಜೇತರಾಗಿದ್ದರು

1938ರ ಗುಜರಾತಿನ ಹರಿಪುರದಲ್ಲಿ ಜರುಗಿದ 51ನೇ ಕಾಂಗ್ರೆಸ್‌ನ ಅಧಿವೇಶನದ ಅಧ್ಯಕ್ಷರಾಗಿ ಇಡೀ ರಾಷ್ಟ್ರದ ಗಮನ ಸೆಳೆದ ಯುವ ನಾಯಕ ಸುಭಾಷ್‌ ಚಂದ್ರ ಬೋಸ್‌. ‘ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಮತ್ತು ‘ದಿಲ್ಲಿ ಚಲೋ’ ಘೋಷಣೆಗಳ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಯುವ ಮನಸ್ಸುಗಳನ್ನು ಹೊಸೆದು ಸ್ವಾತಂತ್ರ್ಯದ ಹೋರಾಟಕ್ಕೆ ಕಿಚ್ಚು ಹಚ್ಚಿದವರು ಸುಭಾಷ್ ಚಂದ್ರ ಬೋಸ್‌.

1939ರಲ್ಲಿ ನೇತಾಜಿ ಅವರು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪುನರಾಯ್ಕೆಯಾಗಲು ಬಯಸಿದ್ದರು. ಆದರೆ, ಪಟ್ಟಾಭಿ ಸೀತಾರಾಮಯ್ಯ ಅವರನ್ನು ಗಾಂಧೀಜಿ ಅವರು ಅಭ್ಯರ್ಥಿ ಎಂದು ಘೋಷಿಸಿದರು. ಪಟ್ಟಾಭಿ ಅವರನ್ನು ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯ್‌ ಪಟೇಲರೂ ಬೆಂಬಲಿಸಿದರು. ದೇಶದ ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿಗಳು ಪಟ್ಟಾಭಿ ಅವರ ಪರವಾಗಿ ಕೆಲಸ ಪ್ರಾರಂಭಿಸಿದವು.

1939ರ ಕಾಂಗ್ರೆಸ್ ಅಧ್ಯಕ್ಷೀಯ ಚುಣಾವಣೆಯಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಸೋತಿದ್ದರೆ ಅವರ ರಾಜಕೀಯ ಭವಿಷ್ಯ ಮಂಕಾಗುತ್ತಿತ್ತು. ಈ ಸಂದಿಗ್ಧ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಕರ್ನಾಟಕದ ಹಾವೇರಿಗೆ ಬಂದರು. ಬೋಸ್ ಅವರಿಗೆ ಕನ್ನಡಿಗ ಮತ್ತು ಕರ್ನಾಟಕದ ರಾಜಕೀಯ ಪುನರ್ಜನ್ಮ ನೀಡಿತು. ಅವರೇ ಹಾವೇರಿಯ ಸರ್ ಸಿದ್ದಪ್ಪ ಹೊಸಮನಿಯವರು. 

ಸಿದ್ದಪ್ಪ ಹೊಸಮನಿ ಅವರೊಂದಿಗೆ ನೇತಾಜಿ
ಹಾವೇರಿಯ ಸಿದ್ದಪ್ಪ ಹೊಸಮನಿ ಅವರೊಂದಿಗೆ ನೇತಾಜಿ (ಸಂಗ್ರಹ ಚಿತ್ರ: ಮಹೇಶ್‌ ನೀ ಚನ್ನಂಗಿ)

ಸಿದ್ದಪ್ಪ ಹೊಸಮನಿಯವರು ಆಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು. ಇವರನ್ನು ಭೇಟಿಯಾದ ಬೋಸ್‌ ಅವರು ವರ್ತಮಾನದ ರಾಜಕೀಯ ವಿದ್ಯಮಾನದ ಕುರಿತು ಚರ್ಚಿಸಿದರು. ಭಾರತಕ್ಕೆ ಬದಲಾದ ನಾಯಕತ್ವ ಅವಶ್ಯಕತೆ ಇರುವುದನ್ನು ಗಮನಿಸಿ ಹೊಸಮನಿ ಸಿದ್ದಪ್ಪನವರು ಸುಭಾಸಚಂದ್ರ ಬೋಸ್ ಅವರ ಪರವಾಗಿ ಪ್ರಚಾರ ಆರಂಭಿಸಿದರು. ಈ ಸಂದರ್ಭದಲ್ಲಿ ಗಾಂಧೀಜಿಯವರು ‘ಪಟ್ಟಾಭಿ ಸೀತಾರಾಮಯ್ಯನವರ ಗೆಲುವು ಗಾಂಧೀಜಿಯವರ ಗೆಲುವು, ಪಟ್ಟಾಭಿರಾಮರ ಸೋಲು ಗಾಂಧೀಜಿಯವರ ಸೋಲು’ ಎಂದು ಹೇಳುವ ಮೂಲಕ ಪ್ರಚಾರಕ್ಕೆ ಕಿಚ್ಚು ಹಚ್ಚಿದರು. ಕೊನೆಗೆ ಚುನಾವಣೆ ನಡೆದು ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. ಸುಭಾಷ್ ಚಂದ್ರ ಬೋಸ್ 1580 ಮತಗಳನ್ನು ಮತ್ತು ಪಟ್ಟಾಭಿ ಸೀತಾರಾಮಯ್ಯನವರು 1377 ಮತಗಳನ್ನು ಪಡೆದಿದ್ದರು. ಸುಭಾಷ್ ಚಂದ್ರ ಬೋಸರು 203 ಮತಗಳ ಅಂತರದಿಂದ ಗೆದ್ದಿದ್ದರು.

ಇಡೀ ದೇಶದಲ್ಲಿಯೇ ಸುಭಾಷ್‌ರಿಗೆ ಹೆಚ್ಚು ಮತಗಳನ್ನು ಕರ್ನಾಟಕದ ಸದಸ್ಯರು ನೀಡಿದ್ದರು. ಇವರಿಗೆಲ್ಲ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದವರು ಹಾವೇರಿಯ ಸಿದ್ದಪ್ಪ ಹೂಸಮನಿಯವರು. ಅಂದು ಸಿದ್ದಪ್ಪ ಹೊಸಮನಿಯವರು ಸುಭಾಷ್ ಚಂದ್ರ ಬೋಸ್ ಅವರ ಬೆನ್ನಿಗೆ ನಿಲ್ಲದೇ ಇದ್ದಿದ್ದರೆ ಮುಂದೆ ಸುಭಾಷ್ ಚಂದ್ರ ಬೋಸ್ ಅವರು ಜ್ವಾಲಾಮುಖಿಯಾಗಿ ಪರಿವರ್ತನೆ ಆಗುತ್ತಿದ್ದರೇ? ಎಂಬ ಸಂಶಯ ನಮ್ಮನ್ನು ಕಾಡುವುದು. ಅವತ್ತು ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ಪಟೇಲರ ಮಾತನ್ನು ಧಿಕ್ಕರಿಸಿ ಸುಭಾಸ್ ಚಂದ್ರ ಬೋಸ್‌ ಅವರ ಪರವಾಗಿ ಕೆಲಸ ಮಾಡಿದ್ದರ ಪ್ರತಿಫಲವಾಗಿ ಬೋಸರಿಗೆ ಗೆಲುವು ಸಾಧ್ಯವಾಯಿತು. ಮುಂದೆ ಫಾರ್ವರ್ಡ್‌ ಬ್ಲಾಕ್ ಪಕ್ಷದ ಪತ್ರಿಕೆಯಲ್ಲಿ ಸುಭಾಷ್ ಚಂದ್ರ ಬೋಸ್ ಅವರು "ನಾನು ಸರ್ ಸಿದ್ದಪ್ಪ ಹೊಸಮನಿ ಅವರಿಂದ ಪ್ರೇರಿತಗೊಂಡಿದ್ದೇನೆ. ಅವರು ನಿಷ್ಕಲ್ಮಶ ಮನಸಿನ ನಿಷ್ಠುರವಾದಿ, ನಾನು ಕಂಡ ಅಪರೂಪದ ವ್ಯಕ್ತಿಗಳಲ್ಲಿ ಪ್ರಮುಖರು" ಎಂದು ಬರೆದುಕೊಂಡಿದ್ದರು.

ಇದನ್ನು ಓದಿದ್ದೀರಾ?: ನೇತಾಜಿ ನೆನಪು | ಸ್ಫೂರ್ತಿ, ತ್ಯಾಗ, ಸಾಹಸಗಳ ಸಾಕಾರಮೂರ್ತಿ ಸುಭಾಷ್‌ಚಂದ್ರ ಬೋಸ್‌

“ಹೊಸಮನಿಯವರು ಶ್ರೇಷ್ಠ ನಿಷ್ಣಾತ ರಾಜಕಾರಣಿ. ಮುತ್ಸದ್ಧಿ ಮಹಾನುಭಾವ, ನಾನು ಕಂಡಿರುವವರಲ್ಲಿ ಅವರು ಅಪರೂಪದ ವ್ಯಕ್ತಿ. ನನಗೆ ಅವರು ರಾಜಕೀಯದ ಸ್ಫೂರ್ತಿ ಒದಗಿಸಿಕೊಟ್ಟಿದ್ದಾರೆ. ಅವರ ಸಭ್ಯತೆ, ಪ್ರಾಮಾಣಿಕತೆ, ದೇಶಾಭಿಮಾನ, ಎದೆಗಾರಿಕೆ ಹಾಗೂ ವಿಶಾಲ ಮನೋಭಾವನೆಗಳು ರಾಷ್ಟ್ರಕ್ಕೆ ಮಾರ್ಗದರ್ಶಕವಾಗಿವೆ. ದೈಹಿಕವಾಗಿ ಅವರು ವೃದ್ಧರಾಗಿದ್ದರೆ, ರಾಜಕೀಯ ವಿಚಾರಗಳ ದೃಷ್ಟಿಯಿಂದ ಅವರು ತರುಣರಾಗಿದ್ದಾರೆ” ಎಂದು ಬರೆದಿದ್ದರು.

ಇಂದು ಹಾವೇರಿಯ ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ಹೊಂಬಣ್ಣದ ಪ್ರತಿಮೆಯೊಂದನ್ನು ನಿಲ್ಲಿಸಲಾಗಿದೆ. ಇದೇ ಸರ್ ಸಿದ್ದಪ್ಪ ಹೊಸಮನಿಯವರ ಪ್ರತಿಮೆ. ಸುಭಾಷ್ ಚಂದ್ರ ಬೋಸರ ಜನ್ಮದಿನದಂದು ಅವರನ್ನು ನೆನೆಯುವಾಗ ನೇತಾಜಿಯವರಿಗೆ ರಾಜಕೀಯ ಪುನರ್ ಜನ್ಮ ನೀಡಿದ ಕನ್ನಡಿಗ, ಸಿದ್ದಪ್ಪ ಹೊಸಮನಿ ಅವರನ್ನು ನೆನೆಯುವುದು ಕನ್ನಡಿಗರ ಕರ್ತವ್ಯ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app