'ಜತೆಗಿರುವನು ಚಂದಿರ' ನಾಟಕ ಪ್ರದರ್ಶನಕ್ಕೆ ಧಕ್ಕೆ; ಕೆಲವು ಪ್ರಶ್ನೆಗಳು

jotegiruvanu chandira

ಚಂಪಾ ಅವರು ತುರ್ತುಪರಿಸ್ಥಿತಿಯ ವಿರುದ್ಧ ಪ್ರತಿಭಟನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.  ಕೆಲವು ಸಾಂಸ್ಕೃತಿಕ ಲೋಕದ ಖ್ಯಾತರು, ಸಾಮಾಜಿಕ ಬದ್ಧತೆಯಿರುವ ಮಂದಿ, ಸಮಾಜ-ವಿಭಜಕ ಶಕ್ತಿಗಳ ಬಗೆಗೆ ತಮ್ಮ ಅಸಮಾಧಾನವನ್ನು ಹಾಗೂ ಖಂಡನೆಯನ್ನು ವ್ಯಕ್ತಪಡಿಸುತ್ತ ಬಂದಿರುವುದು ನಿಜ. ಆದರೆ ಅಂತಹವರ ಸಂಖ್ಯೆ ಈಗ ತೀರಾ ಕಡಿಮೆ

ಖ್ಯಾತ ಸಾಹಿತಿ ಶ್ರೀ ಜಯಂತ್ ಕಾಯ್ಕಿಣಿಯವರು ಜೋಸೆಫ್ ಸ್ಟೀನ್ ರ 'ಫಿಡ್ಲರ್ ಆನ್ ದಿನ ರೂಫ್ ' ನಾಟಕವನ್ನು (ಇದೇ ಹೆಸರಿನ ಚಲನಚಿತ್ರವೂ ಇದೆ) 'ಜತೆಗಿರುವನು ಚಂದಿರ' ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ.  ಮೂಲ ನಾಟಕದ ಝಾರ್ ಕಾಲದ ರಷ್ಯಾದ ಯಹೂದಿ ಕುಟುಂಬವೊಂದರ ಕಥೆಯನ್ನು ಭಾರತದ ಸಂದರ್ಭಗಳಿಗೆ ತಕ್ಕಂತೆ ಮಾರ್ಪಡಿಸಲಾಗಿದೆ. ಅನೇಕ ವರ್ಷಗಳಿಂದ ಕನ್ನಡದ ನಾಟಕ ಯಶಸ್ವಿಯಾಗಿ ಪ್ರದರ್ಶಿಸಲ್ಪಡುತ್ತಿದೆ. ಈ ನಾಟಕವನ್ನು ಶಿವಮೊಗ್ಗದ ರಂಗಬೆಳಕು ತಂಡವು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಪ್ರದರ್ಶನ ಮಾಡುತ್ತಿದ್ದಾಗ, ಭಜರಂಗ ದಳ/ಆರೆಸ್ಸೆಸ್‌ಗೆ ಸೇರಿದ ಕೆಲವರು, ಮುಸಲ್ಮಾನ ಕುಟುಂಬವೊಂದರ ವಸ್ತುವುಳ್ಳ ನಾಟಕ ಎಂಬ ಕಾರಣಕ್ಕಾಗಿಯೇ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಇದು ಫ್ಯಾಸಿಸ್ಟ್ ಅಟ್ಟಹಾಸದ ಇನ್ನೊಂದು ಪ್ರಕರಣ. ಇಂತಹ ಕುಕೃತ್ಯಗಳನ್ನು ಪ್ರಜ್ಞಾವಂತ ಮನಸ್ಸುಗಳು ಪ್ರತಿರೋಧಿಸಬೇಕು.

ಆದರೆ, ಕೆಲವು ಪ್ರಶ್ನೆಗಳನ್ನು ನಮ್ಮ ಸಾಹಿತ್ಯ/ಸಾಂಸ್ಕೃತಿಕ ವಲಯದ ಮುಂದೆ ಇಡಬೇಕಾಗುತ್ತದೆ. ಎಷ್ಟು ಸಾಹಿತಿಗಳು, ಬರಹಗಾರರು ಮುಂತಾದವರು (ಅಪವಾದಗಳಿವೆ) ಸಾರ್ವಜನಿಕ ಜೀವನದ ಅಪಸವ್ಯಗಳ ಬಗೆಗೆ ದನಿಯನ್ನು ಎತ್ತಿದ್ದಾರೆ? ಎತ್ತುತ್ತಿದ್ದಾರೆ? ಅಕ್ಷರಗಳನ್ನು ಪ್ರತಿರೋಧದ ಮಾಧ್ಯಮವನ್ನಾಗಿ ಬಳಸಿಕೊಂಡಿದ್ದಾರೆ? ಅವರೇನು ಚಳವಳಿಗಾರರಾಗಬೇಕಿಲ್ಲ, ಆದರೆ ಕೆಲವು ಸಂದರ್ಭಗಳಲ್ಲಾದರೂ ಜನಪರವಾದ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬೇಕಲ್ಲವೇ? ಹಾಗೆ ಮಾಡಿದರೇ, ಎಲ್ಲಿ ತಮ್ಮ ಸಾಹಿತ್ಯವನ್ನು 'ಪ್ರಚಾರ ಸಾಹಿತ್ಯ' ಎಂದು ಜರೆಯಲಾಗುವುದೋ ಎಂಬ ಭಯ ಹಾಗೂ ಆತಂಕ ಅಂತಹವರಿಗೆ ಇರುತ್ತವೆಯೇ? ಅಥವಾ ಸಿದ್ಧಾಂತರಾಹಿತ್ಯ ಪ್ರತಿಪಾದನೆ ತಮ್ಮದಾದ್ದರಿಂದ ತಟಸ್ಥ ನೀತಿಯೇ ಸೂಕ್ತ ಎಂಬ ಮನೋಭಾವವನ್ನು ಹೊಂದಿರುತ್ತಾರೆಯೇ?

ಇತಿಹಾಸದ ಪುಟಗಳನ್ನು ತಿರುಗಿಸಿದಾಗ 1930ರ ದಶಕದಲ್ಲಿ ಜರ್ಮನಿ ಮತ್ತು ಇಟಲಿಯಲ್ಲಿ ನಾಝಿ ಮತ್ತು ಫ್ಯಾಸಿಸಂ ಉತ್ತುಂಗದಲ್ಲಿದ್ದಾಗ ಬರ್ಟಲ್ಟ್ ಬ್ರೆಕ್ಟ್, ಅರ್ನೆಸ್ಟ್ ಹೆಮ್ಮಿಂಗ್ವೆ, ಎರಿಖ್ ಮಾರಿಯಾ ರೀಮಾರ್ಕ್ ಮುಂತಾದ ಫ್ಯಾಸಿಸಂ ವಿರೋಧಿ ಸಾಹಿತಿ-ಬರಹಗಾರರ ಕೃತಿಗಳನ್ನು ನಾಝಿ-ಫ್ಯಾಸಿ ಪಡೆಗಳು ಸುಟ್ಟವು. ಆದರೆ ಅದೇ ಕಾಲಘಟ್ಟದಲ್ಲಿ ಎಝ್ರಾ ಪೌಂಡ್, ವಿಂಧಮ್ ಲೂವಿಸ್, ನುಟ್ ಹ್ಯಾಮ್ಸನ್ ಮುಂತಾದ ಹೆಸರುವಾಸಿ ಲೇಖಕರು ಫ್ಯಾಸಿವಾದದತ್ತ ಆಕರ್ಷಿತರಾಗಿದ್ದರು!

ಚಂಪಾ, ಶಿವರಾಮ ಕಾರಂತರ ಪ್ರತಿರೋಧ

ನಮ್ಮ ದೇಶದಲ್ಲಿ ಪ್ರಥಮ ಬಾರಿಗೆ 1974ರಲ್ಲಿ ತುರ್ತುಪರಿಸ್ಥಿತಿ ಜಾರಿಯಾಯಿತು. ಅನೇಕ ತೆರನಾದ ನಿರ್ಬಂಧಗಳನ್ನು ಹೇರಲಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತೀವ್ರ ಧಕ್ಕೆಯಾಯಿತು. ಇವುಗಳನ್ನೆಲ್ಲ ವಿರೋಧಿಸಿ ಕನ್ನಡ ವಾಙ್ಞಯಲೋಕದ ದಿಗ್ಗಜರಾಗಿದ್ದ ಶಿವರಾಮ ಕಾರಂತರು ತಮಗೆ ನೀಡಿದ್ದ ಪದ್ಮಭೂಷಣ ಪ್ರಶಸ್ತಿಯನ್ನು 1975ರಲ್ಲಿ ವಾಪಸ್ಸು ಮಾಡಿದರು. ಚಂಪಾ ಅವರು ತುರ್ತುಪರಿಸ್ಥಿತಿಯ ವಿರುದ್ಧ ಪ್ರತಿಭಟನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿದರು.  ಕೆಲವು ಸಾಂಸ್ಕೃತಿಕ (ವಿಸ್ತೃತ ನೆಲೆಯಲ್ಲಿ ಈ ಪದವನ್ನು ಬಳಸಲಾಗಿದೆ) ಲೋಕದ ಖ್ಯಾತನಾಮರು ಮತ್ತು ಸಾಮಾಜಿಕ ಬದ್ಧತೆಯಿರುವ ಮಂದಿ, ಸಮಾಜ-ವಿಭಜಕ ಶಕ್ತಿಗಳ ಚಟುವಟಿಕೆಗಳ ಬಗೆಗೆ ತಮ್ಮ ಅಸಮಾಧಾನವನ್ನು ಹಾಗೂ ಖಂಡನೆಯನ್ನು ವ್ಯಕ್ತಪಡಿಸುತ್ತ ಬಂದಿರುವುದು ನಿಜ. ಆದರೆ ಅಂತಹವರ ಸಂಖ್ಯೆ ಕಡಿಮೆ ಎಂದರೆ ತಪ್ಪಾಗಲಾರದು!

ಕಳೆದ ಕೆಲವು ದಶಕಗಳಿಂದ ನಮ್ಮ ದೇಶದಲ್ಲಿ ಕೆಲವು ಪುಸ್ತಕಗಳು, ಚಲನಚಿತ್ರಗಳು, ನಾಟಕಗಳು, ಚಿತ್ರಕಲೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ಮತಾಂಧರ ಮತ್ತು ಮೂಲಭೂತವಾದಿಗಳ ದಾಳಿಗಳಾಗುತ್ತಿವೆ. ಇವುಗಳ ವಿರುದ್ಧ ಪ್ರತಿಭಟನೆಗಳೂ ಜರುಗಿವೆ. ಆದರೆ ವ್ಯಾಪಕವಾದ ನೆಲೆಯಲ್ಲಿ ಪ್ರತಿರೋಧದ ದನಿಗಳು ಏಳುತ್ತಿಲ್ಲ ಎಂಬುದು ಅಷ್ಟೇ ಸತ್ಯ!

ಜನರಿಗೂ ಸಾಮಾಜಿಕ ಕಳಕಳಿ ಇರಬೇಕಲ್ವಾ?

ಹೌದು, ಇಂತಹ ವಿಷಯಗಳು ಚರ್ಚೆಗೆ ಬಂದಾಗ, ಸಾಹಿತಿಗಳು ಮತ್ತು ಲೇಖಕರನ್ನು ಮಾತ್ರ ಬೊಟ್ಟು ಮಾಡಿ ತೋರಿಸಲಾಗುತ್ತದೆ, ಸಮಾಜದ ಬೇರೆ ವಿಭಾಗಗಳ ಜನರಿಗೂ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿರಬೇಕಲ್ಲವೇ ಎಂಬ ಪ್ರಶ್ನೆಯನ್ನು ಕೇವಲ ಬರಹಗಾರರು ಮಾತ್ರ ಮುನ್ನೆಲೆಗೆ ತರುವುದಿಲ್ಲ, ಇತರ ಕೆಲವು ವಿಶೇಷ್ಞರು ಕೂಡ ಇದರ ಬಗೆಗೆ ಪ್ರಸ್ತಾಪವನ್ನು ಮಾಡುತ್ತಾರೆ. ಆದರೆ ಸಾಹಿತಿಗಳು, ಬರಹಗಾರರು ಮತ್ತು ಸಾಂಸ್ಕೃತಿಕ ಲೋಕದ ಗುರುತಿಸಲ್ಪಡುವ ವ್ಯಕ್ತಿಗಳು ಹೆಚ್ಚಿನ ಓದು ಹಾಗೂ ಅಧ್ಯಯನದಲ್ಲಿ ತೊಡಗಿರುತ್ತಾರೆ; ಹೆಚ್ಚು ತಿಳಿವಳಿಕೆಯನ್ನು ಹೊಂದಿರುತ್ತಾರೆ ಎಂಬ ಅಭಿಮತ ಜನಮಾನಸದಲ್ಲಿ ನೆಲೆಗೊಂಡಿದೆ. ಹೀಗಾಗಿ, ಅವರ ನಡೆ-ನುಡಿಗಳ, ಅವರು ತಳೆಯುವ ನಿಲುಮೆಗಳ ಬಗೆಗೆ ನಿರೀಕ್ಷೆಗಳಿರುತ್ತವೆ!

ಇದನ್ನು ಓದಿದ್ದೀರಾ? ಜೊತೆಗಿರಬೇಕಿತ್ತಲ್ಲವೇ ಚಂದಿರರು?: ಇದು ಕರ್ನಾಟಕದ ಸ್ವಂತಿಕೆಗಾದ ಅವಮಾನ

ಏನೇ ಇರಲಿ, ಇನ್ನಾದರೂ, ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕನ್ನಡದ ಸಾಹಿತಿಗಳು, ಬರಹಗಾರರು ಕೋಮುವಾದ, ಮೂಲಭೂತವಾದದಂತಹ ಮಾನವತಾ ವಿರೋಧಿ ಪ್ರಕ್ರಿಯೆಗಳು, ಫ್ಯಾಸಿಸ್ಟರ ಹೆಚ್ಚಾಗುತ್ತಿರುವ ನಾನಾ ತೆರನಾದ ಆಕ್ರಮಣಗಳ ವಿರುದ್ಧ ಸೂಕ್ತ  ಪ್ರತಿರೋಧವನ್ನು ಒಡ್ಡುತ್ತಾರೆಯೇ?

ಶಿವಮೊಗ್ಗ ಜಿಲ್ಲೆಯ ಕಲಾವಿದರ ಒಕ್ಕೂಟ ಪುನಃ ಆನವಟ್ಟಿಯಲ್ಲಿ 'ಜತೆಗಿರುವನು ಚಂದಿರ' ನಾಟಕ ಪ್ರದರ್ಶಿಸುವುದಾಗಿ ನಿಶ್ಚಯಿಸಿರುವುದು ಸ್ವಾಗತಾರ್ಹ ಹಾಗೂ ಅಭಿನಂದನೀಯ ನಡೆ.

ನಿಮಗೆ ಏನು ಅನ್ನಿಸ್ತು?
1 ವೋಟ್