ಪತ್ರಿಕೋದ್ಯಮದ ತೆರೆಮರೆಯ ಹೀರೋ, ದುರಿತಕಾಲದ ನಮ್ಮ ‘ರಾಮ'

ರಾಮನ ಹೆಸರಲ್ಲಿ ನಡೆಯಬಾರದ್ದೆಲ್ಲ ನಡೆಯುತ್ತಿರುವ ಈ ದುರಿತಕಾಲದಲ್ಲಿಯೂ, ರಾ‍ಮ್‌ರಂತಹ ಕೆಲ ಪತ್ರಕರ್ತರು ಆಸೆ-ಆಮಿಷಗಳಿಗೆ ಬಲಿಯಾಗದೆ, ತಾವು ನಂಬಿದ ತತ್ವ-ಸಿದ್ಧಾಂತವನ್ನು ಬಲಿ ಕೊಡದೆ, ಜವಾಬ್ದಾರಿಯಿಂದ ನುಣುಚಿಕೊಳ್ಳದೆ, ಪತ್ರಿಕೋದ್ಯಮದ ಪಾವಿತ್ರ್ಯತೆಯನ್ನು ಕಾಪಾಡುತ್ತಿದ್ದಾರೆ. ಅದರ ಘನತೆಯನ್ನು ಅಲ್ಪ ಸ್ವಲ್ಪವಾದರೂ ಉಳಿಸಿದ್ದಾರೆ.

ರಾಮ್ ಎಂದಾಕ್ಷಣ ಪತ್ರಿಕೋದ್ಯಮ, ಸಂಗೀತ, ಸಿನೆಮಾ, ಸಾಹಿತ್ಯ, ಸಂಚಾರ, ಫಿಟ್ನೆಸ್, ಡಯಾಬಿಟಿಸ್... ಎಲ್ಲ ನೆನಪಾಗುತ್ತದೆ. ಇದರ ಜೊತೆ ಜೊತೆಗೇ ಅವರ ಅಪಾರ ಸಹನೆ, ಸರಳತೆ, ಮನುಷ್ಯ ಪ್ರೀತಿ, ಜನಪರ ನಿಲುವು, ಸಾಮಾಜಿಕ ಕಳಕಳಿ, ದೇಸಿ ಪ್ರಜ್ಞೆ, ಆಧುನಿಕ ಆಲೋಚನೆಗಳೂ ನೆನಪಾಗುತ್ತವೆ. ಇವೆಲ್ಲ ಇದ್ದೂ, ನಾನಲ್ಲ ಎಂಬ ನಿರ್ಲಿಪ್ತಭಾವ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಅವರ ಬಗೆಗಿನ ಗೌರವವನ್ನು ಗಟ್ಟಿಗೊಳಿಸುತ್ತದೆ. ನಮ್ಮ ನಡುವಿನ ಅಪರೂಪದ ಅಪರಂಜಿ (ಸ್ವಲ್ಪ ಅತಿ ಅನಿಸಿದರೂ)ಯಂತೆ ಕಾಣಬೇಕೆನಿಸುತ್ತದೆ.

ರಾಮ್ ಅಥವಾ ಎಸ್ಆರ್ ರಾಮಕೃಷ್ಣ ನನಗೆ ಪರಿಚಯವಾಗಿದ್ದು 90ರ ದಶಕದಲ್ಲಿ, ನಟರಾಜ್ ಹುಳಿಯಾರ್ ಅವರ ಮೂಲಕ. ನಾನಾಗ ‘ಲಂಕೇಶ್ ಪತ್ರಿಕೆ’ಯಲ್ಲಿದ್ದೆ. ರಾಮ್ ನನಗಿಂತ ಒಂದೆರಡು ವರ್ಷಗಳ ಹಿರಿಯರು, ಪ್ರತಿಷ್ಠಿತ ಪತ್ರಿಕೆಗಳ ಜವಾಬ್ದಾರಿಯುತ ಸ್ಥಾನಗಳನ್ನು ಸಮರ್ಥವಾಗಿ ನಿರ್ವಹಿಸಿದ ಅನುಭವಿ ಪತ್ರಕರ್ತರು. ಮೊದಲಿಗೆ ಅವರನ್ನು ಭೇಟಿಯಾದಾಗ ನನಗೆ ಇಷ್ಟವಾಗಿದ್ದು, ಅವರ ಅಮ್ಮನಂತಹ ಪ್ರೀತಿ, ನಿರ್ಮಲ ನಗು. ಹಾಗೆಯೇ ಎಲ್ಲವನ್ನೂ ಎಲ್ಲರೊಂದಿಗೂ ಹಂಚಿಕೊಳ್ಳುವ ಮುಕ್ತ ಮನೋಭಾವ ಹಾಗೂ ಎಲ್ಲರನ್ನು ಗೌರವಿಸುವ ಸೆಕ್ಯುಲರ್ ಗುಣ. ಆ ಗುಣದಿಂದಾಗಿಯೇ ವಿವಿಧ ಕ್ಷೇತ್ರಗಳ ಹಲವರೊಂದಿಗೆ ಒಡನಾಡಲು, ಅರಿಯಲು, ಅರಗಿಸಿಕೊಳ್ಳಲು, ಹಂಚಲು ಸಾಧ್ಯವಾಗಿರುವುದು ಎನ್ನುವ ರಾಮ್, ಇಲ್ಲಿ ಎಲ್ಲರೂ ಮುಖ್ಯ ಎಂಬುದನ್ನು ಅನುಭವದಿಂದ ಅರಿತವರು. ಅದನ್ನು ಜೀವನದುದ್ದಕ್ಕೂ ಪಾಠದಂತೆ ಪಾಲಿಸಿಕೊಂಡು ಬಂದವರು.

ರಾಮ್ ಪತ್ರಕರ್ತರಾಗಿ ನನಗೆ ಹೆಚ್ಚು ಹತ್ತಿರ. ಅವರನ್ನು ಕಂಡಾಗಲೆಲ್ಲ ಕುಡುಮಿ ಪದ ನೆನಪಾಗುತ್ತದೆ. ಓದುವ, ಬರೆಯುವ, ರಾಗ ಸಂಯೋಜಿಸುವ, ಪಂಚ್ ಪದಕ್ಕಾಗಿ ಹುಡುಕಾಡುವ, ಹಳೆಯದಕ್ಕೆ ಕುತೂಹಲದ ಕಣ್ಣಾಗುವ, ಹೊಸತನಕ್ಕೆ ಹಾತೊರೆಯುವ.. ಹೀಗೆ ಯಾವುದಾದರೂ ಒಂದರಲ್ಲಿ ಮುಳುಗಿಹೋಗುವ ಗುಣ. ಚಾರ್ಲ್ಸ್ ಬೋದಿಲೇರ್‌ನ ಸದಾ ಕುಡಿದಿರು, ಏನನ್ನಾದರೂ.. ಎನ್ನುವಂತೆ. ಅದು ಅವರ ವಿಶೇಷ. ಪತ್ರಿಕಾಲಯಗಳಲ್ಲಿ ಅವರ ನೆಚ್ಚಿನ ಕೆಲಸ ಡೆಸ್ಕ್. ಇದ್ದೂ ಇಲ್ಲದಂತೆ, ಹಿನ್ನೆಲೆಯಲ್ಲಿದ್ದು ಕಟ್ಟುವ ಕೆಲಸದಲ್ಲಿ ನಿರತರು ಮತ್ತು ನಿಪುಣರು.

Image

ಇತ್ತೀಚಿನ ದಿನಗಳ ಪತ್ರಿಕಾಲಯಗಳಲ್ಲಿ ಡೆಸ್ಕ್ ವಿಭಾಗ ಕಡಿಮೆಯಾಗುತ್ತಿದೆ. ಕೋವಿಡ್ ಕೃಪೆಯಿಂದಾಗಿ ‘ವರ್ಕ್ ಫ್ರಂ ಹೋಂ’ ಜಾರಿಯಿಂದಾಗಿ ಹೆಚ್ಚೂ ಕಡಿಮೆ ಕಣ್ಮರೆಯಾಗಿದೆ. ಆ ವಿಭಾಗ ಒಂದು ಪತ್ರಿಕೆಯ ಬಹುಮುಖ್ಯ ಅಂಗ. ಅನನುಭವಿ ವರದಿಗಾರರ ಸುದ್ದಿಗಳನ್ನು, ಹೊಸಬರ ಲೇಖನಗಳನ್ನು ಡೆಸ್ಕ್‌ನಲ್ಲಿರುವ ಹಿರಿಯ ಪತ್ರಕರ್ತರು ಬಹಳ ತಾಳ್ಮೆಯಿಂದ ಓದಿ, ತಿದ್ದಿ ತೀಡಿ, ಅದಕ್ಕೊಂದು ರೂಪ ಕೊಟ್ಟು ಪ್ರಕಟಣೆಗೆ ಯೋಗ್ಯವಾಗುವಂತೆ ಮಾಡುವ ಕೆಲಸ. ಆ ಸುದ್ದಿ ಅಥವಾ ಲೇಖನವನ್ನು ಓದಿದವರಲ್ಲಿ ಬರೆದವರ ಬಗ್ಗೆ ಗೌರವ ಮೂಡಿಸುವ, ಆ ಮೂಲಕ ಪತ್ರಿಕೆಗೊಂದು ಘನತೆ ತರುವ ಕೆಲಸ. ಪತ್ರಿಕಾ ವಲಯದಲ್ಲಿ, ಪತ್ರಕರ್ತರ ಸರ್ಕಲ್‌ನಲ್ಲಿ ಅದು ಬೆಟ್ಟಕ್ಕೆ ಕಲ್ಲು ಹೊರುವ ಕೆಲಸ, ಗ್ಲಾಮರ್‌ಲೆಸ್ ಕೆಲಸ, ಕತ್ತೆ ಕೆಲಸ. ಯಾರದೋ ಹೆಸರಿಗೆ ಇನ್ನಾರೋ ಕಷ್ಟಪಟ್ಟು ಸಮಯ, ಶ್ರದ್ಧೆ ಸುರಿಯುವ ಕೆಲಸವನ್ನು ಇತ್ತೀಚಿನ ಪತ್ರಕರ್ತರು ಮಾಡುವುದಿಲ್ಲ. ಅದರಿಂದ ಹೆಸರೂ ಇಲ್ಲ, ಲಾಭವೂ ಇಲ್ಲವೆಂದು ಅತ್ತ ಸುಳಿಯುವುದೂ ಇಲ್ಲ.

ಆದರೆ, ರಾಮ್ ಆ ಕೆಲಸವನ್ನು ತುಂಬು ಶ್ರದ್ಧೆಯಿಂದ, ಖುಷಿಯಿಂದ ದಶಕಗಟ್ಟಲೆ ಮಾಡಿಕೊಂಡು ಬಂದಿದ್ದಾರೆ. ಹಲವರನ್ನು ವರದಿಗಾರರನ್ನಾಗಿ, ಬರಹಗಾರರನ್ನಾಗಿ ರೂಪಿಸಿದ್ದಾರೆ. ಹಲವು ಪತ್ರಿಕೆಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದ್ದಾರೆ. ಪತ್ರಿಕೋದ್ಯಮದ ಘನತೆಯನ್ನು ಎತ್ತಿಹಿಡಿದಿದ್ದಾರೆ. ತಾವು ಮಾತ್ರ ತೆರೆಮರೆಯಲ್ಲಿಯೇ ಇದ್ದಾರೆ.

ಹಾಗಾಗಿಯೇ ರಾಮ್ ಪತ್ರಕರ್ತರಾಗಿ ಹೆಚ್ಚಿನ ಜನಕ್ಕೆ ಗೊತ್ತಿಲ್ಲ. `ಇವತ್ತಿನ ಸಂದರ್ಭದಲ್ಲಿ ಪತ್ರಕರ್ತ ಅಂತ ಹೇಳಿಕೊಳ್ಳದಿರುವುದೇ ಕ್ಷೇಮ ಬಿಡಿ ಬಸು’ ಎನ್ನುವ ರಾಮ್, ಪತ್ರಿಕೋದ್ಯಮದಲ್ಲಿ ನೈತಿಕತೆ (ಕೊಂಚವಾದರೂ) ಉಳಿಸಿಕೊಂಡಿರುವ ಪತ್ರಿಕಾ ಸಂಸ್ಥೆಗಳಲ್ಲಿ ಕೆಲಸ ಮಾಡಲು ಇಚ್ಛಿಸುತ್ತಾರೆ. ಒಳ್ಳೆಯ ಸಂಬಳವನ್ನು ಬಯಸುತ್ತಾರೆ. ಸಿಗದಿದ್ದಾಗ ಸುಮ್ಮನಿರುತ್ತಾರೆ. ಸುಮ್ಮನಿರುವ ಸಮಯದಲ್ಲಿ ಕನ್ನಡದ ಶ್ರೇಷ್ಠ ಕೃತಿಗಳನ್ನು ಇಂಗ್ಲಿಷಿಗೆ ಅನುವಾದ ಮಾಡುತ್ತಾರೆ.

ಕನ್ನಡದ ಲೇಖಕರನ್ನು ಇಂಗ್ಲಿಷ್ ವಲಯಕ್ಕೆ ಪರಿಚಯಿಸುತ್ತಾರೆ. ಅದೂ ಆಗದಿದ್ದಾಗ ಶರಣರ ವಚನಗಳಿಗೆ, ಕವಿಗಳ ಕವನಗಳಿಗೆ ರಾಗ ಸಂಯೋಜನೆ ಮಾಡುತ್ತಾರೆ. ಅವುಗಳನ್ನು ಹಾಡಲು ಆಸೆಪಡುವ ಒಂದಷ್ಟು ಹೊಸ ಗಾಯಕ/ಗಾಯಕಿಯರಿಗೆ ಅವಕಾಶ ಕಲ್ಪಿಸಿಕೊಡುತ್ತಾರೆ. ಅವರು ಸಿನಿಮಾ ಕ್ಷೇತ್ರದಲ್ಲಿ ನೆಲೆಯೂರಲು ಸಂಪರ್ಕ ಸೇತುವೆಯಾಗುತ್ತಾರೆ. ಹಾಗೆಯೇ ಹೊಸದಾಗಿ ರಾಗ ಸಂಯೋಜಿಸಿದ್ದನ್ನು ಗೆಳೆಯರಿಗೆ ಕೇಳಿಸಿ, ಒಳ್ಳೆಯದನ್ನು ಹಂಚಿದಾಗ ಆಗುವ ಆನಂದವನ್ನು ಹೇಳದೆ ಮನಸ್ಸಿಗೆ ಮುಟ್ಟಿಸುತ್ತಾರೆ.

ಈ ಸುದ್ದಿ ಓದಿದ್ದೀರಾ?: EWS | ಶೇ.10ರ ಮೀಸಲಾತಿಯ ಒಳನೋಟದ ಚರ್ಚೆಯಾಗಲಿ, ಜನರಲ್ ಮೆರಿಟ್ ವ್ಯಾಪ್ತಿಯ ಜಾತಿಗಳನ್ನು ಬಹಿರಂಗಪಡಿಸಲಿ

ಇನ್ನು, ಕಡಿಮೆ ಬಜೆಟ್‌ನಲ್ಲಿ ಯಾರಾದರೂ ಗೆಳೆಯರು ಸಿನೆಮಾ ಮಾಡುತ್ತಿದ್ದೇವೆಂದರೆ, ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ದುಡಿಯುತ್ತಾರೆ. ಗೀತ ರಚನೆ, ಸಂಭಾಷಣೆ, ಕತೆ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡು ಅದನ್ನು ಇನ್ನಷ್ಟು ಸಮೃದ್ಧಗೊಳಿಸುತ್ತಾರೆ. ಅವರು ಸಂಭಾವನೆ ಕೊಟ್ಟರೆ ತೆಗೆದುಕೊಳ್ಳುತ್ತಾರೆ, ಕೊಡದಿದ್ದರೆ ನಕ್ಕು ಸುಮ್ಮನಾಗುತ್ತಾರೆ. ಒಂದಷ್ಟೂ ಹೈಫೈ ಗೆಳೆಯರೊಂದಿಗೆ ಸೇರಿ ‘ಫಿಟ್ನೆಸ್ ಫ್ರೀಕ್‌’ಗೆ ಬಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಹಂಬಲಿಸುತ್ತಾರೆ. ತಮಗಿರುವ ಡಯಾಬಿಟಿಸ್‌ಗೆ ಊಟದಲ್ಲಿಯೇ ಮದ್ದು ಮಾಡಿಕೊಂಡು, `ಹೆಂಗೆ ನಾವು’ ಎಂದು ಹುಬ್ಬೇರಿಸುತ್ತಾರೆ. ಇದ್ದಕ್ಕಿದ್ದಂತೆ ಗೆಳೆಯರಿಗೆ ಫೋನ್ ಮಾಡಿ `ಕೂತು ಮಾತನಾಡಿ ತುಂಬಾ ದಿನಗಳಾಯ್ತಲ್ಲ, ಬನ್ನಿ’ ಎನ್ನುತ್ತಾರೆ. ಎಲ್ಲರಿಂದ ತಪ್ಪಿಸಿಕೊಂಡು ದೂರದೂರಿಗೆ ಪ್ರವಾಸ ಹೊರಡುತ್ತಾರೆ. ಇವೆಲ್ಲವೂ ರಾಮ್. ಅವರ ಬದುಕಿಗೆ ಜೀವದ್ರವ್ಯ ಒದಗಿಸುವ ಹಲವು ವಿಧಗಳು. ಅವರೇ ಹುಡುಕಿಕೊಂಡ ಹಾದಿಗಳು.

ಇಂತಹ ಬಹುಮುಖ ವ್ಯಕ್ತಿತ್ವದ ರಾಮ್, ಗೆಳೆಯನಾಗಿ ಸಿಕ್ಕಿದ್ದು ನನ್ನ ಅದೃಷ್ಟ. ನನ್ನ ಪತ್ರಕರ್ತ ಬದುಕನ್ನು- ಅನಿಶ್ಚಿತ ಬದುಕನ್ನು ಬಹಳ ಹತ್ತಿರದಿಂದ ಕಂಡಿದ್ದ ರಾಮ್, 2012-13ರಲ್ಲಿ ಫೋನ್ ಮಾಡಿ, 'ಬಸು, ಒಂದಷ್ಟು ಫ್ರೆಂಡ್ಸ್ ಸೇರಿ ಒಂದು ಇಂಗ್ಲಿಷ್ ವೀಕ್ಲಿ ಟ್ಯಾಬ್ಲಾಯ್ಡ್ ಮಾಡೋಣ ಬನ್ನಿ’ ಎಂದರು. 'ಸಾರ್, ನನಗೆ ಇಂಗ್ಲಿಷೇ ಬರಲ್ಲ’ ಎಂದರೆ, 'ಈಗ ಬರುವಷ್ಟೇ ಸಾಕು, ಬನ್ರಿ’ ಎಂದರು. 'ಟಾಕ್ ನ್ಯೂಸ್ ಮ್ಯಾಗ್’ ಎಂಬ ವಿನೂತನ ಇಂಗ್ಲಿಷ್ ವೀಕ್ಲಿಯಲ್ಲಿ ಅವರೊಂದಿಗೆ ಒಂದೂವರೆ ವರ್ಷ ಕೆಲಸ ಮಾಡುವ ಅವಕಾಶ ದೊರಕಿತು. ಆ ಮುಖಾಂತರ ಒಂದಷ್ಟು ಇಂಗ್ಲಿಷ್ ಪತ್ರಕರ್ತರ ಸ್ನೇಹವೂ ಲಭಿಸಿತು. ಆ ಪತ್ರಿಕೆಗೆ ಅವರು ಸಂಪಾದಕರಾಗಿದ್ದರೂ, ವರದಿಗಾರರ ತಂಡದೊಂದಿಗೆ ಸ್ನೇಹಿತರಂತಿದ್ದರು. ಇಡೀ ರಾತ್ರಿ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುತ್ತಿದ್ದರು. ಪದಗಳನ್ನು ತೂಗಿ ನೋಡಿ ಬಳಸುತ್ತಿದ್ದರು. ನಾವು ಒಡ್ಡೊಡ್ಡಾಗಿ ಬರೆದ ವರದಿಗಳಿಗೆ ರಕ್ತ-ಮಾಂಸ ತುಂಬಿ, ಚೆಂದದ ತಲೆಬರಹ ನೀಡಿ ನಿಬ್ಬೆರಗಾಗುವಂತೆ ಮಾಡುತ್ತಿದ್ದರು. ಇರುವ ಮಿತಿಗಳಲ್ಲಿಯೇ ಉತ್ಕೃಷ್ಟವಾದ ಸಂಚಿಕೆ ರೂಪಿಸಲು ಹಗಲಿರುಳು ಶ್ರಮಿಸುತ್ತಿದ್ದರು. ‘ಟಾಕ್’ ಪತ್ರಿಕೆಯನ್ನು ತಪ್ಪದೆ ಓದುತ್ತಿದ್ದ ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ, ‘ಹಳೆಯ ಇಲ್ಲಸ್ಟ್ರೇಟೆಡ್ ವೀಕ್ಲಿ ನೆನಪಾಗುತ್ತಿದೆ ಕಣಯ್ಯ’ ಎಂದಿದ್ದರು. ಅದು ರಾಮ್‌ಗೆ ಆಸ್ಕರ್ ಅವಾರ್ಡ್‌ನಷ್ಟೇ ಖುಷಿ ಕೊಟ್ಟಿತ್ತು. ಅದೇ ಖುಷಿಯಲ್ಲಿ ಅನಂತಮೂರ್ತಿಯವರದ್ದೊಂದು ಸುದೀರ್ಘ ಸಂದರ್ಶನ ಮಾಡಿದ್ದರು. ಅವರೊಂದಿಗೆ ಒಂದು ದಿನ ಕಳೆದ ಮೇಲೆ ರಾಮ್, ಸರ್ಕ್ಯಾಸ್ಟಿಕ್ಕಾಗಿ 'ಲಂಕೇಶರಷ್ಟು ದಿಟ್ಟ, ಸ್ಪಷ್ಟ ಅಲ್ಲ’ ಎಂದಿದ್ದರು. 

Image

ನನಗೆ ಅವರು ‘ಟಾಕ್’ನಲ್ಲಿ ಪ್ರತಿವಾರ ಬರೆಯುತ್ತಿದ್ದ ‘ಅಯ್ಯೋಟೂನ್ಸ್’ ಕಾರ್ಟೂನ್ ಪೀಸ್ ತುಂಬಾ ಇಷ್ಟವಾಗಿತ್ತು. ಅದಕ್ಕಾಗಿ ಅವರು ಮಾಡಿಕೊಳ್ಳುತ್ತಿದ್ದ ತಯಾರಿ, ಪಂಚಿಂಗ್ ಪದಗಳಿಗಾಗಿ ತಡಕಾಡುತ್ತಿದ್ದ ಪರಿ, ಅಳೆದು ತೂಗಿ ಬಳಸುತ್ತಿದ್ದ ಬಗೆ- ‘ಛೇ ಛೇ’ ಅಂಕಣ ಬರೆಯುತ್ತಿದ್ದ ಲಂಕೇಶರನ್ನು ನೆನಪಿಸುತ್ತಿತ್ತು. ರಾಮ್ ಅವರ ಆ ವಿಟ್, ವಿಡಂಬನೆಗೆ ಪರ್ಫೆಕ್ಟ್‌ ಮ್ಯಾಚ್ ಎನ್ನುವಂತೆ ಸತೀಶ್ ಆಚಾರ್ಯರ ಚಿತ್ರಗಳು- ಅಲ್ಲಾ ರಖಾ ಮತ್ತು ಜಾಕೀರ್ ಹುಸೇನ್ರ ಜುಗಲ್ಬಂದಿಯನ್ನು ನೆನಪಿಗೆ ತರುತ್ತಿತ್ತು. ಅದು ಹಲವರು ಕಾದು ಓದುತ್ತಿದ್ದ ಅಂಕಣವಾಗಿತ್ತು. ಜನಮನ್ನಣೆ ಗಳಿಸಿತ್ತು. ಒಬ್ಬರಿಂದೊಬ್ಬರಿಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗುತ್ತಿತ್ತು. ‘ಟಾಕ್’ ಪತ್ರಿಕೆ ನಿಂತಮೇಲೆ ರಾಮ್, ‘ಬಸು, ಅದನ್ನು ಪುಸ್ತಕ ಮಾಡಬಹುದೆ’ ಎಂದಿದ್ದರು. ಪ್ರತಿಷ್ಠಿತ ಪ್ರಕಾಶಕ ಸಂಸ್ಥೆಯವರೂ ಸಿಕ್ಕಿದ್ದರು. ಅದಕ್ಕೆ ಬೇಕಾದ ತಯಾರಿಯೂ ನಡೆದಿತ್ತು. ಕಾಲ ಸರಿದಂತೆ, ಮಾಡುವ ಮನಸ್ಸು ಮೂಲೆಗೊರಗಿ, ‘ಅದು ಆ ವಾರಕ್ಕೆ ಮಾತ್ರ’ ಎಂದು ತಮ್ಮನ್ನೇ ತಾವು ಸಮರ್ಥಿಸಿಕೊಂಡಿದ್ದರು. ಸುಮ್ಮನಾಗಿದ್ದರು.  

ಒಂದು ಸಲ, ‘ಬಸು, ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಅಂತರೆ, ಆದರೆ ಅಷ್ಟೇ ಹಳೆಯ ಏರಿಯಾಗಳು, ಅದಕ್ಕೊಂದಿಕೊಂಡ ಜನಗಳು, ಅವರ ಆಚಾರ-ವಿಚಾರಗಳು, ಅವರ ನಂಬಿಕೆಗಳು, ನಾಟಿ ವೈದ್ಯರು, ಮಾಟ-ಮಂತ್ರ-ಯಂತ್ರ ಕಟ್ಟುವವರು ಇವರ ಮೇಲೆ ಒಂದು ಸರಣಿ ಮಾಡಬಹುದಲ್ಲವೇ?’ ಎಂದರು. ನಾನು ಬೆಂಗಳೂರಿನ ಹಳೆ ಬಡಾವಣೆಗಳಾದ ಬಳೇಪೇಟೆ, ಕಾಟನ್ ಪೇಟೆ, ಅಕ್ಕಿ ಪೇಟೆ, ಮಾಮೂಲ್ ಪೇಟೆಗಳನ್ನೆಲ್ಲ ಸುತ್ತಿ.. ನಾಟಿ ವೈದ್ಯರ ಮೇಲೊಂದು ಲೇಖನ ಸಿದ್ಧಪಡಿಸಿದೆ. ಅದನ್ನು ನೋಡಿ ಕುತೂಹಲಗೊಂಡ ರಾಮ್, 'ವಂಡರ್‌ಫುಲ್’ ಎಂದರು. ಪ್ರಕಟವಾಯಿತು. ನಮ್ಮ ದುರದೃಷ್ಟಕ್ಕೆ ಅದೇ ಕೊನೆ ಇಷ್ಯೂ ಆಗಿತ್ತು.

ಆನಂತರ ರಾಮ್, ‘ಬಸು, ಬೆನ್ನು ನೋವು ತಡಿಯೋಕ್ಕಾಗ್ತಿಲ್ಲ, ಆ ನಿಮ್ಮ ನಾಟಿ ವೈದ್ಯರನ್ನು ಒಂದು ಸಲ ನೋಡೋಣ್ವಾ?’ ಎಂದರು. ನನಗೆ ನಿಜಕ್ಕೂ ಗಾಬರಿಯಾಯಿತು. ಮಾಡರ್ನ್ ಸೈನ್ಸ್ ಬಗ್ಗೆ ಮಾತನಾಡುವವರು, ವೈದ್ಯಕೀಯ ಜಗತ್ತಿನ ಬಗ್ಗೆ ತಿಳಿದು ಬರೆಯುವವರು, ನಗರದಲ್ಲಿಯೇ ಹುಟ್ಟಿ ಬೆಳೆದವರು, ಪತ್ರಿಕೆಯ ಸಂಪಾದಕರು ನಾಟಿ ವೈದ್ಯರನ್ನು ನೋಡಬೇಕಲ್ಲ ಎಂದದ್ದು, ರಾಮ್‌ರನ್ನು ಗುಮಾನಿಯಿಂದ ನೋಡುವಂತೆ ಮಾಡಿತ್ತು. ಆದರೆ ನೋವಿನ ಯಮಯಾತನೆಯ ಮುಂದೆ ಯಾವ ಸೈನ್ಸ್ ಆದರೇನು? ಸಂಕಟಕ್ಕಾದವನೆ ವೆಂಕಟರಮಣ!

ಅಂತೂ ರಾಮ್‌ರನ್ನು ಕರೆದುಕೊಂಡು ಚಿಕ್ಕಪೇಟೆ ಗಲ್ಲಿಗೆ ಹೋದೆ. ಆ ನಾಟಿ ವೈದ್ಯ ಪದ್ಧತಿಗೆ ಅವರು ’ಮರ್ಮ ಚಿಕಿತ್ಸೆ’ ಎಂದು ಕರೆಯುತ್ತಿದ್ದರು. ಅಂದರೆ ರಾಜ ಮಹಾರಾಜರ ಕಾಲದಲ್ಲಿ ಯುದ್ಧದ ಸಮಯದಲ್ಲಿ ವಿರೋಧಿ ಪಾಳೆಯದ ದಾಳಿಗೆ ಒಳಗಾಗಿ ಗಾಯಗೊಳ್ಳುವ ಯೋಧರಿಗೆ ಔಷಧಿ, ಚಿಕಿತ್ಸೆ ನೀಡುವ ವೈದ್ಯ ಪದ್ಧತಿ (ವಾರ್ ಫೀಲ್ಡ್‌ನಲ್ಲಿ ರೆಡ್ ಕ್ರಾಸ್ ಸಂಸ್ಥೆ ಮಾಡುವ ದೇಸಿ ಪದ್ಧತಿ). ಈ ಪದ್ಧತಿಯ ಆರನೇ ತಲೆಮಾರಿನವರಾದ ಶೇಖರ್ ಎಂಬ ನಾಟಿ ವೈದ್ಯರು ಕುಟುಂಬದ ವೈದ್ಯ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿದ್ದರು. ತುಂಬಾ ಶ್ರದ್ಧೆಯಿಂದ ಮಾಡುತ್ತಿದ್ದರು. ಅಲ್ಲಿಗೆ ಬರುವವರು ಆರ್ಥಿಕವಾಗಿ ದುರ್ಬಲರು ಎಂಬುದನ್ನು ಮನಗಂಡು, ಅವರು ಕೊಟ್ಟಷ್ಟು ಹಣ ಪಡೆಯುತ್ತಿದ್ದರು. ಬೆಂಗಳೂರಿನ ಚಿಕ್ಕಪೇಟೆಯ ಅವರ ಮನೆಯಲ್ಲಿಯೇ ಸೊಂಟ, ಮೈ ಕೈ ನೋವು, ಮೂಳೆ ಮುರಿತ, ಲಕ್ವಾ- ಮೂಳೆ, ನರಗಳ ಪರಿಣಿತ ಡಾಕ್ಟರ್‌ಗಳು ಏನು ಚಿಕಿತ್ಸೆ ಮಾಡುತ್ತಾರೋ ಅದೆಲ್ಲವನ್ನು ಮಾಡುತ್ತಿದ್ದರು- ಬರೀ ಎರಡು ಬೆರಳುಗಳಿಂದ! ಆಧುನಿಕ ವಿಜ್ಞಾನಕ್ಕೆ ಸವಾಲಾದ 'ಬೆಲ್ ಪಾಲ್ಸಿ’ಯನ್ನೂ ನೋಡುತ್ತಿದ್ದರು. ಅವರ ಬಳಿ ರಾಮ್ ಅವರನ್ನು ಕರೆದುಕೊಂಡು ಹೋದೆ. ಅವರಿಗೆ ಸಂಪಾದಕರೂ ಕೂಡ ಒಬ್ಬ ರೋಗಿಯೇ. ಆದರೂ ವಿಶೇಷವಾಗಿ ಉಪಚರಿಸಿದರು. ’ಎರಡು ಮೂರು ಸಿಟ್ಟಿಂಗ್ ಬಂದರೆ, ಸರಿ ಹೋಗುತ್ತದೆ’ ಎಂದರು. ಮಾರನೆಯ ದಿನ, ’ಹೇಗಿದೆ ಸಾರ್ ನೋವು’ ಎಂದೆ. ’ತುಂಬಾನೆ ರಿಲೀಫ್ ಅನ್ನಿಸ್ತಿದೆ ಬಸು’ ಎಂದರು. ಆದರೆ ಮತ್ತೆರಡು ಸಿಟ್ಟಿಂಗ್ ಸಾಧ್ಯವಾಗಲಿಲ್ಲ. ಎಷ್ಟೋ ದಿನಗಳ ನಂತರ ಸಿಕ್ಕಾಗ, ’ಹೋಗಲೇ ಇಲ್ಲವಲ್ಲ ಸಾರ್’ ಎಂದರೆ, ’ನೋವು ಇರಬೇಕಂಡ್ರಿ..’ ಎಂದು ನಕ್ಕಿದ್ದರು.

Image

ಇಂತಹ ರಾಮ್‌ಗೆ ಈಗ ಅವರತ್ತರ ಹರೆಯ. ಆದರೆ ಇವತ್ತಿಗೂ ಟೀಶರ್ಟ್, ಜೀನ್ಸ್ ಪ್ಯಾಂಟ್ ಮತ್ತು ಶೂಸ್ ಹಾಕಿ ಹರೆಯದ ಹುಡುಗನಂತಿರಲು ಆಸೆಪಡುವ ರಾಮ್, ಅದೇ ಜೀವನೋತ್ಸಾಹದಿಂದ ಪುಟಿಯುತ್ತಿರಲಿ. ಅರವತ್ತು ಅಂತಹ ದೊಡ್ಡ ವಯಸ್ಸಲ್ಲ ಎಂಬುದನ್ನು ಅವರ ಪತ್ರಿಕಾಲಯದ ಡೆಸ್ಕ್ ಕೆಲಸವೇ ಅವರನ್ನು ಪ್ರೇರೇಪಿಸಲಿ.

ಇವತ್ತು ಪತ್ರಿಕೋದ್ಯಮ ಪ್ರಿಂಟ್‌ನಿಂದ ಡಿಜಿಟಲ್‌ವರೆಗೆ; ಕೈಬರಹದಿಂದ ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ನ ರೆಡಿ ರೈಟಿಂಗ್‌ವರೆಗೆ ಬದಲಾವಣೆಯ ಹೊರಳು ಹಾದಿಯಲ್ಲಿದೆ. ಸಾಮಾಜಿಕ ಜಾಲತಾಣದಿಂದಾಗಿ ಜನಸಾಮಾನ್ಯರೇ ಪತ್ರಕರ್ತರಾಗಿ ಸುದ್ದಿ ಹಂಚುವುದನ್ನೂ ನೋಡುತ್ತಿದ್ದೇವೆ. ಹಾಗೆಯೇ ನೈತಿಕತೆ, ಮೌಲ್ಯ, ತತ್ವ, ಸಿದ್ಧಾಂತಗಳನ್ನು ಭಾಷಣಕ್ಕೆ-ಬರಹಕ್ಕೆ ಸೀಮಿತಗೊಳಿಸಿ ಹಣಕ್ಕಾಗಿ ಅಧಿಕಾರಸ್ಥರ ಪರವಾಗಿರುವ; ಸತ್ಯವನ್ನು ಸಮಾಧಿ ಮಾಡಿ ಸುಳ್ಳನ್ನೇ ಸತ್ಯವೆಂದು ಸಾರುತ್ತಿರುವ; ಅಯೋಗ್ಯರನ್ನು ಅಧಿಕಾರದಲ್ಲಿ ಕೂರಿಸಲು ಶಕ್ತಿಮೀರಿ ಶ್ರಮಿಸುತ್ತಿರುವ; ದೇಶವನ್ನೇ ದಿಕ್ಕು ತಪ್ಪಿಸುತ್ತಿರುವ ಪತ್ರಕರ್ತರನ್ನೂ ಕಾಣುತ್ತಿದ್ದೇವೆ.

ಸಮಾಧಾನದ ಸಂಗತಿ ಎಂದರೆ, ರಾಮನ ಹೆಸರಲ್ಲಿ ನಡೆಯಬಾರದ್ದೆಲ್ಲ ನಡೆಯುತ್ತಿರುವ ಈ ದುರಿತಕಾಲದಲ್ಲಿಯೂ, ರಾ‍ಮ್‌ರಂತಹ ಕೆಲ ಪತ್ರಕರ್ತರು ಆಸೆ-ಆಮಿಷಗಳಿಗೆ ಬಲಿಯಾಗದೆ, ಸುತ್ತಲಿನ ಸ್ವಾರ್ಥಿಗಳನ್ನು ನೋಡಿ ಸಿನಿಕರಾಗದೆ, ತಾವು ನಂಬಿದ ತತ್ವ-ಸಿದ್ಧಾಂತವನ್ನು ಬಲಿ ಕೊಡದೆ, ಜವಾಬ್ದಾರಿಯಿಂದ ನುಣುಚಿಕೊಳ್ಳದೆ, ಪತ್ರಿಕೋದ್ಯಮದ ಪಾವಿತ್ರ್ಯತೆಯನ್ನು ಕಾಪಾಡುತ್ತಿದ್ದಾರೆ. ಸತ್ಯ ಮತ್ತು ಸತ್ವವುಳ್ಳದ್ದನ್ನು ಬರೆದೂ ತಣ್ಣಗಿದ್ದಾರೆ. ಪತ್ರಿಕೋದ್ಯಮದ ಘನತೆಯನ್ನು ಅಲ್ಪ ಸ್ವಲ್ಪವಾದರೂ ಉಳಿಸಿದ್ದಾರೆ. ಜನರ ನಂಬಿಕೆಯನ್ನು ಗಟ್ಟಿಗೊಳಿಸಿದ್ದಾರೆ. ಇಂತಹವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ. ನಾಡಿನ ನಾಳಿನ ಬದುಕು ಸಹ್ಯವಾಗಲಿ.

ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180