ಕನ್ನಡ ಹಬ್ಬ | ಅನ್ನದ ಬಟ್ಟಲು, ಬೇಸಾಯದ ಕತಿ, ನಡುವೆ ಸುಳಿವ ಹೆಣ್ಣು... ನನ್ನಿಷ್ಟದ ಪುಸ್ತಕ- ಅನುಪಮಾ ಪ್ರಸಾದ್

ಅನ್ನದ ಬಟ್ಟಲು, ಬೇಸಾಯದ ಕತಿ

ʼಕಥೆ, ಕಾದಂಬರಿ, ಕವಿತೆ, ಪ್ರಬಂಧ ಅಥವಾ ಇನ್ನಾವುದೇ ವೈಚಾರಿಕ ಕೃತಿಗಳನ್ನೆತ್ತಿಕೊಳ್ಳದೆ ಕನ್ನಡದ ಈ ಪುಸ್ತಕಗಳ ಬಗ್ಗೆಯೆ ಯಾಕೆ ಬರೆಯಬೇಕೆನಿಸಿತು ಎಂಬುದಕ್ಕೆ ಉತ್ತರ ಹುಡುಕುವ ಗೋಜಿಗೆ ಹೋಗದಿದ್ದರೂ ಇವುಗಳೇ ಯಾಕೆ ನನ್ನ ಮನಸಿಗೆ ಬಂತೆಂಬ ಬಗ್ಗೆ ನನಗೇ ಸೋಜಿಗವಾಗುತ್ತಿದೆʼ ಎನ್ನುವ ಅನುಪಮಾ ಪ್ರಸಾದ್‌ ತಮ್ಮಿಷ್ಟದ ಪುಸ್ತಕಗಳ ಬಗ್ಗೆ ಬರೆದಿದ್ದಾರೆ

ಓದಿರುವ, ಇಷ್ಟವಾಗಿರುವ ಪುಸ್ತಕಗಳಲ್ಲಿ ಯಾವುದಾದರೂ ಐದು ಪುಸ್ತಕಗಳ ಬಗ್ಗೆ ಟಿಪ್ಪಣಿ ಬರೆದುಕೊಡಿ ಎಂದಾಗ ಇಷ್ಟವಾಗಿದ್ದು ಹಲವು ಇದ್ದರೂ, ಈ ಸಂದರ್ಭಕ್ಕೆ ನೆನಪಾಗಿದ್ದು; ಅನ್ನದ ಬಟ್ಟಲು, ಬೇಸಾಯದ ಕತಿ, ನಾಗಂದಿಗೆಯೊಳಗಿಂದ, ಮಂಜಮ್ಮ ಜೋಗತಿ.

Eedina App

ಕಥೆ, ಕಾದಂಬರಿ, ಕವಿತೆ, ಪ್ರಬಂಧ ಅಥವಾ ಇನ್ನಾವುದೇ ವೈಚಾರಿಕ ಕೃತಿಗಳನ್ನೆತ್ತಿಕೊಳ್ಳದೆ ಕನ್ನಡದ ಈ ನಾಲ್ಕು ಪುಸ್ತಕಗಳ ಬಗ್ಗೆಯೆ ಯಾಕೆ ಬರೆಯಬೇಕೆನಿಸಿತು ಎಂಬುದಕ್ಕೆ ಉತ್ತರ ಹುಡುಕುವ ಗೋಜಿಗೆ ಹೋಗದಿದ್ದರೂ ಇವುಗಳೇ ಯಾಕೆ ನನ್ನ ಮನಸಿಗೆ ಬಂತೆಂಬ ಬಗ್ಗೆ ನನಗೇ ಸೋಜಿಗವಾಗುತ್ತಿದೆ. ಆದರೆ, ʼನೆನಪೇ ಸಂಗೀತʼವೆಂಬ ಪುಸ್ತಕ ಮಾತ್ರ, ವರ್ತಮಾನದಲ್ಲಿ ಮಠದ ಸ್ವಾಮಿಗಳ ಅತಿರೇಕ, ಭಯಾನಕ ಹಿಂಬದಿ ಕಥೆಗಳು ಅನಾವರಣಗೊಳ್ಳುತ್ತಿರುವ ಈ ಹೊತ್ತಿಗೆ ಒಂದಿಷ್ಟಾದರೂ ಸಾಂತ್ವನಕ್ಕಿರಲಿ ಎಂದೇ ಬರೆಯಬೇಕೆನಿಸಿತು.  

ಅನ್ನದ ಬಟ್ಟಲು- ಡಾ.ಟಿ.ಎಸ್.ಚನ್ನೇಶ್:  ಈ ಕೃತಿ ಬೆಳೆಗಳ ಕಥೆ, ನೆಲದ ಕಥೆ, ಬೀಜಗಳ ಬವಣೆ, ಕೀಟ-ರೋಗಗಳಿಂದಾಗುವ ಬವಣೆ, ವಾತಾವರಣ ಇದೆಲ್ಲದನ್ನೂ ದಾಟಿ ಈ ಸಾಗುವಳಿಗಳಿಗೆ ಪೂರಕವಾದ ಪಶು ಸಂಗೋಪನೆ ಆ ಮೂಲಕ ಜಾನುವಾರುಗಳ ವ್ಯಥೆ, ಮೀನುಗಾರಿಕೆ, ಮನುಷ್ಯ ನಿರ್ಮಿತ ಪಾಲಿಸಿ, ಸಮಾಜ, - ಹೀಗೆ ನಮ್ಮ ಉಸಿರಿನ ಶಕ್ತಿಯಾಗಿರುವ ಅನ್ನದ ಬಟ್ಟಲಿನ ವಿರಾಟ್ ಕಥೆಯನ್ನು ಪುಟ್ಟದಾಗಿ ಸರಳವಾಗಿ ನಮ್ಮ ಮುಂದಿಡುತ್ತದೆ. ನಮ್ಮ ಅನ್ನದ ಬಟ್ಟಲು ತುಂಬಲು ಪ್ರತಿ ಕ್ಷಣ ದುಡಿಯುವ ಮಣ್ಣು, ಧಾನ್ಯವಾಗಲು ದುಡಿಯುವ ಪೈರುಗಳ, ಗಿಡಗಳ ಕಥೆ ಹೇಳುವ ಈ ಪುಸ್ತಕ ಒಂದು ಕಾಲದಲ್ಲಿ ನಮ್ಮ ಸ್ವಾಭಿಮಾನದ ಪ್ರತೀಕದಂತಿದ್ದ ದೇಸೀ ಹತ್ತಿಯ ಜಾಗವನ್ನಾಕ್ರಮಿಸಿದ ಬಿಟಿ ಕುಲಾಂತರಿಯ ಬಗ್ಗೆ ನಡೆದ ಅಧ್ಯಯನ, ಪರಿಣಾಮಗಳನ್ನು “ನೇಚರ್” ಎಂಬ ವಿಜ್ಞಾನ ಪತ್ರಿಕೆ ಪ್ರಕಟಿಸಿರುವುದನ್ನು ಹೇಳುತ್ತ, ಕಾರ್ಪೋರೇಟುಗಳ ವಾರೀಸುದಾರನಂತೆ ವರ್ತಿಸುವ ಸರ್ಕಾರಗಳು, ಸರ್ಕಾರದ ನೆರಳನ್ನಾಶ್ರಯಿಸಿದ ಕೆಲ ವಿಜ್ಞಾನಿಗಳು ಇದನ್ನೆಲ್ಲ ಅಭಿವೃದ್ದಿಯೆಂದೇ ವಾದಿಸುತ್ತ ಸಮಾಜಮುಖಿಯಾಗಬೇಕಾಗಿದ್ದ ಒಂದು ಸಮುದಾಯ ರೈತ ವಿರೋಧಿಯಾಗುತ್ತಿದೆಯೆ ಎಂಬ ಪ್ರಶ್ನೆಯನ್ನೆತ್ತುತ್ತದೆ. ಕುಲಾಂತರಿ ಸಾಸಿವೆಯ ವಾಣಿಜ್ಯ ಕೃಷಿಯ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಯೋಚಿಸಬೇಕಾದ ಹಲವು ಪ್ರಶ್ನೆಗಳನ್ನು ಈ ಪುಸ್ತಕದ ಲೇಖನಗಳು ಎತ್ತುತ್ತವೆ.

AV Eye Hospital ad

ಬೇಸಾಯದ ಕತಿ- ಚಂ.ಸು. ಪಾಟೀಲ: ಮೊದಲ ಪುಸ್ತಕ ವಿಜ್ಞಾನಿಯ ಕಣ್ಣೋಟದಲ್ಲಿ ಮಣ್ಣಿನ ಕಥೆ ಹೇಳುತ್ತ ಬೇಸಾಯಗಾರನತ್ತ ಮುಖ ಮಾಡಿದರೆ, “ಬೇಸಾಯಗಾರನ ಕತಿ” ಯುವ ಬೇಸಾಯಗಾರನ ಕಣ್ಣಿಂದ ಮಣ್ಣನ್ನು, ಕೃಷಿಯನ್ನು ನೋಡುತ್ತ ತನ್ನ ಸಂಕಷ್ಟ ಕತೋಡಿಕೊಳ್ಳುತ್ತ, ದಲ್ಲಾಳಿಗಳ ಮೋಸದೆದುರು ನಿಂತು ಹೋರಾಟ, ಆಧುನಿಕ ಕೃಷಿ ಹಾಗು ಪಾರಂಪರಿಕ ಕೃಷಿಯ ಅನುಭವಕ್ಕೆ ಮುಖಾಮುಖಿಯಾಗಿ ಹರಿಹಾರ ಕಂಡುಕೊಳ್ಳುತ್ತ ಪ್ರತಿಯೊಬ್ಬ ಬೇಸಾಯಗಾರನ ಕತೆಯಾಗಿ ಅನುಭವಕ್ಕೆ ಸಿಗುತ್ತದೆ. ಕೃಷಿ ಸಂಸ್ಕತಿ ಎಂಬುದು ಒಂದು ಪದವಲ್ಲ. ಅದು ಬದುಕಿನ ಅನುಭವ ಎಂಬುದನ್ನು ಮೂಲತಃ ನೇಗಿಲು ಹಿಡಿದ ಬೇಸಾಯಗಾರ ದಂಪತಿಗಳ ಮಗಳಾಗಿ, ಬೆನ್ನಿ-ಬೇಸಾಯದ ತಾದಾತ್ಮ್ಯದಲ್ಲಿ ಬೇಸಾಯದ ನಡಿಗೆ ಕಂಡಿರುವುದರಿಂದ ಬೇಸಾಯದ ಕತಿ ನನಗೆ ಪ್ರಕೃತಿಯ ಬದುಕು ಹಾಗು ಅದನ್ನವಲಂಭಿಸಿದ ಜೀವ ಜಾಲದ ಬದುಕಾಗಿ ತೀವ್ರವಾಗಿ ತಟ್ಟಿತೇನೊ..   

ನಾಗಂದಿಗೆಯೊಳಗಿಂದ- ಬಿ.ಎಮ್.ರೋಹಿಣಿ: ಇದು ಜೀವನ ಕಥನ. ರೋಹಿಣಿಯವರ ಹೊಸಿಲು ದಾಟುತ್ತಿರುವ ಭಾವಚಿತ್ರವಿರುವ ಮುಖಪುಟವಂತು ಮೌನವಾಗಿ ನೋಟದಿಂದಲೇ ಎಷ್ಟೊ ಸಂಗತಿಗಳನ್ನು ನಮ್ಮೆದೆಗೆ ದಾಟಿಸುತ್ತದೆ. ನಾಗಂದಿಯೊಳಗೆ ನಾವು ಹೆಣ್ಣುಮಕ್ಕಳು ಏನೇನನ್ನೋ ಹಾಕಿಡುತ್ತೇವೆ. ಬೇಕಾದಾಗ ಬೇಕಾದಷ್ಟು ತೆಗೆದುಕೊಂಡು ಮತ್ತೆ ಅದನ್ನ ನಾಗಂದಿಗೆ ಮೂಲೆಗೆ ತಳ್ಳುತ್ತೇವೆ. ಹಾಗೆಯೇ ನೆನಪುಗಳೂ ಮರೆಯಾಗಿಯೋ ಮರೆಯಾಗಿಸಿಯೋ ಎಂದು ಹೇಳಿಕೊಳ್ಳುವ ರೋಹಿಣಿಯವರ ಮಾತಿನಲ್ಲೇ ಇದು ಸೂಚ್ಯವಾಗಿದೆ. ಇದು ಕೇವಲ ನಾನು ಕೇಂದ್ರಿತವಲ್ಲದೆಯೇ ತನ್ನನ್ನೂ, ಕುಟುಂಬವನ್ನೂ ಒಳಗೊಂಡು ತಾನು ಬದುಕಿದ ಊರಿನ ವಿವಿಧ ಲಯಗಳನ್ನೂ ಹಿಡಿದಿಟ್ಟುಕೊಂಡು ವ್ಯಕ್ತಿ ಕಥನವಾಗಿಯೂ ಜೊತೆ ಜೊತೆಗೆ ಊರಿನ ಸಮಾಜೊ ಸಾಂಸ್ಕೃತಿಕ ಕಥನವಾಗಿಯೂ ಗೋಚರಿಸುತ್ತದೆ. ಒಂದು ಪ್ರದೇಶದ ಸಮಾಜ ಶಾಸ್ತ್ರೀಯ ನೋಟವನ್ನೂ, ಕಟ್ಟಲ್ಪಟ್ಟ ಸಾಮಾಜಿಕ ವ್ಯವಸ್ಥೆಯಲ್ಲಿರುವ ಒಳಿತು ಕೆಡುಕುಗಳನ್ನು ಗುರುತಿಸುತ್ತ, ಒಂದು ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಇದೆಲ್ಲ ಹೇಗೆ ಸಾಧನವಾಗುತ್ತದೆಂಬುದನ್ನೂ ಕಾಣಿಸುತ್ತದೆ.

ನಡುವೆ ಸುಳಿವ ಹೆಣ್ಣು- ಮಂಜಮ್ಮ ಜೋಗತಿ: ಅರುಣ್ ಜೋಳದಕೂಡ್ಲಿಗಿ ನಿರೂಪಣೆ ಮಾಡಿರುವ ಮಂಜಮ್ಮ ಜೋಗತಿಯವರ ಆತ್ಮಕಥನ “ನಡುವೆ ಸುಳಿವ ಹೆಣ್ಣು” ಬಹಳ ವಿಶಿಷ್ಟ ಅನಿಸಿದ್ದು ಮಂಜಮ್ಮ ಜೋಗತಿಯ ಜೀವನ ವೃತ್ತಾಂತದ ಜೊತೆಗೆ ಜೋಗತಿ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ ಕಥನವೂ ತೆರೆದುಕೊಂಡು ಜೋಗತಿ ಸಮುದಾಯದ ಒಳ ಕಥನವನ್ನು ಕಾಣಿಸುತ್ತದೆ. ಜೈವಿಕತೆಯ ಕಾರಣಕ್ಕಾಗಿ ಮಂಜ ಮಂಜಮ್ಮನಾಗುತ್ತ ಹೋಗುವ ಹಂತದಲ್ಲಿ ಸ್ವತಃ ಮಂಜನ ತೊಳಲಾಟ, ಅವಮಾನ, ಮನೆಯವರ ವರ್ತನೆಗಳು, ಬದಲಾಗುವ ಮಂಜನ ಚಹರೆಗಳನ್ನು ಹೇಳುವ ಸೂಕ್ಷ್ಮ ಸಂದರ್ಭಗಳನ್ನು ವಿವೇಕದ ಎಚ್ಚರಿಕೆಯಲ್ಲಿ ರೋಚಕ, ಅತಿರೇಕವಾಗದಂತೆ ಪ್ರಬುದ್ಧವಾಗಿ ಆದರೆ ಅದು ನಮ್ಮನ್ನು ಕಾಡುವಂತೆ ನಿರೂಪಿಸಲಾಗಿದೆ.

ಇದನ್ನು ಓದಿದ್ದೀರಾ? ಕನ್ನಡ ಹಬ್ಬ | ನೀಲವ್ವ, ನೀಲಕುರಿಂಜಿ, ಭೂಮಿಯ ಋಣ, ಬೆತ್ತಲೆಸಂತ, ಶಯ್ಯಾಗೃಹ... ಇಷ್ಟದ ಪುಸ್ತಕ- ಚಾಂದ್‌ ಪಾಷಾ

ನೆನಪೇ ಸಂಗೀತ- ವಿದ್ಯಾಭೂಷಣ: ಒಂದು ಕಾಲದಲ್ಲಿ ಮಠಾಧೀಶರಾಗಿದ್ದವರು ವಿದ್ಯಾಭೂಷಣ. ಈ ಕೃತಿ ಒಂದು ನಮೂನೆ ದಾಕ್ಷಿಣ್ಯವನ್ನಿಟ್ಟುಕೊಂಡೇ, ಸನ್ಯಾಸ, ಮಠ-ಪೀಠ ಹಾಗು ಅದರ ದಂದುಗಗಳ ಕುರಿತು ಖುಷಿಯಿಂದ, ಯಾತನೆಯಿಂದ, ವಿಷಾದದಿಂದ ಮಾತಾಡುತ್ತದೆ. ಇನ್ನಷ್ಟು ಸಾಧ್ಯತೆಗಳಿತ್ತು ಎಂದು ಓದುವಾಗ ಅನಿಸಿದರೂ ಕೃತಿಕಾರನ ಪ್ರಾಂಜಲ ಮನದ ನಿವೇದನೆ ತಟ್ಟುತ್ತದೆ. ವಿದ್ಯಾಭೂಷಣರ ಬಾಲ್ಯ, ಮಠ, ಅಲ್ಲಿಂದ ಪ್ರೇಮ ವಿವಾಹದವರೆಗಿನ ಬದುಕಿನ ಲೋಕ ಇಲ್ಲಿ ತೆರೆದುಕೊಂಡಿದೆ. ಕೃತಿ ತನ್ನೊಳಗೆ ಮಿತಿಯನ್ನಿಟ್ಟುಕೊಂಡರೂ ಒಂದಷ್ಟು ವಾಸ್ತವವನ್ನು ತೆರೆದಿಟ್ಟು, ವಿಚಾರ ಸಂಘರ್ಷವನ್ನು ನಮ್ಮೊಳಗೆ ಹುಟ್ಟು ಹಾಕುತ್ತದೆ.    

ನಿಮಗೆ ಏನು ಅನ್ನಿಸ್ತು?
1 ವೋಟ್
eedina app