ಕಾಂತಾರ ಸಿನಿಮಾವಷ್ಟೇ ಅಲ್ಲ; ಬ್ರಾಹ್ಮಣ್ಯದ ಮುಷ್ಠಿಯಲ್ಲಿ ದಲಿತ ಆದಿವಾಸಿ ಜನರನ್ನು ಹಿಡಿದಿಡುವ ಪ್ರಯತ್ನ

ಸಿನಿಮಾದ ಟ್ಯಾಗ್‌ಲೈನ್ ʼಇದೊಂದು ದಂತಕತೆʼ ಎಂದು ಬರೆದುಕೊಂಡಿದ್ದರೂ, ಹಾಗೆ ಎನಿಸುವುದಿಲ್ಲ.

ಸಿನಿಮಾದ ಟ್ಯಾಗ್‌ಲೈನ್ ʼಇದೊಂದು ದಂತಕತೆʼ ಎಂದಿದ್ದರೂ, ಹಾಗೆ ಎನಿಸುವುದಿಲ್ಲ. ಇದಕ್ಕೆ ಪೂರಕವಾಗಿ ರಿಷಬ್ ಶೆಟ್ಟಿ ಚಿತ್ರವನ್ನು ಸಮರ್ಥಿಸಿ ಬ್ರಾಹ್ಮಣ್ಯದ ಮಾತುಗಳನ್ನಾಡುತ್ತಿರುವುದು, ಅವುಗಳ ಮೂಲಕ ಚಿತ್ರದ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಯತ್ನಿಸುತ್ತಿರುವುದು, ಬ್ರಾಹ್ಮಣಶಾಹಿ ಶಕ್ತಿಗಳು ಚಿತ್ರವನ್ನು ಬೆಂಬಲಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ

'ಕಾಂತಾರ' ಕನ್ನಡ ಚಲನಚಿತ್ರ ಈಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಬಾಕ್ಸಾಫೀಸ್ ಗಳಿಕೆಯೂ ದಾಖಲೆಯದು ಎನ್ನಲಾಗುತ್ತಿದೆ. ಅತ್ಯದ್ಭುತ ಎನ್ನುವವರು, ದೈವಿಕ ಭಾವನೆಯ ಆರಾಧನೆಯ ಭಾವದಿಂದ ನೋಡುವವರು, ಸಿನಿಮಾವನ್ನು ಕೇವಲ ಸಿನಿಮಾ ಮಾತ್ರವಾಗಿ ನೋಡಬೇಕು ಎನ್ನುವವರು, ಭೂತ ಕೋಲ ಮತ್ತು ಆ ಬಗೆಗಿನ ಶೂದ್ರ ಜನಸಾಮಾನ್ಯರ ನಂಬಿಕೆಗಳನ್ನು ದುರುಪಯೋಗಪಡಿಸಿಕೊಂಡು ತಪ್ಪಾಗಿ ಚಿತ್ರಿಸಿ ಭೂತ ಹಾಗೂ ಕೋಲವನ್ನು ಬ್ರಾಹ್ಮಣಶಾಹಿ ಷಡ್ಯಂತ್ರಗಳ ಭಾಗವಾಗಿಸಿ ಚಿತ್ರ ಮಾಡಲಾಗಿದೆ. ಕೋಲದ ಆಚರಣೆಯ ರೀತಿ ರಿವಾಜುಗಳು ಚಿತ್ರದಲ್ಲಿ ತೋರಿಸಿರುವುದಕ್ಕಿಂತ ಸಂಪೂರ್ಣ ಭಿನ್ನವಾದ ವಿಚಾರವಾಗಿದೆ ಎನ್ನುವವರು ಸಾಕಷ್ಟು ಜನರಿದ್ದಾರೆ. ಹಲವು ವಿವಾದಗಳು ಚಿತ್ರದ ಸುತ್ತ ಸುಳಿಯತೊಡಗಿವೆ.

ಕಾಂತಾರ ಕೇವಲ ಸಿನಿಮಾವಾಗಿ ಮಾತ್ರ ನೋಡಲು ಸಾಧ್ಯವಾಗದು. ನೈಜ ವಿಚಾರ ಏನೆಂದರೆ ಯಾವುದೇ ಸಿನಿಮಾ, ಸಾಹಿತ್ಯ, ನಾಟಕ ಇತ್ಯಾದಿಗಳು ಕೇವಲ ಮನರಂಜನೆಗಾಗಿ ಮಾತ್ರ, ಅಷ್ಟಕ್ಕೆ ಸೀಮಿತಗೊಳಿಸಿ ನೋಡಬೇಕು ಎನ್ನುವುದು ರಾಜಕೀಯ ಅನಕ್ಷರಸ್ಥರ ಮತ್ತು ಆಳುವ ರಾಜಕೀಯದ ಪರವಾದವರ ವಾದವಾಗುತ್ತದೆ.

ಈ ಚಿತ್ರಕ್ಕೆ ಆಳುವ ಶಕ್ತಿಗಳ ಪರವಾದ ಸ್ಪಷ್ಟವಾದ ರಾಜಕೀಯ ಹಾಗೂ ಕಲ್ಚರಲ್ ಉದ್ದೇಶ ಎದ್ದು ಕಾಣುವಂತಿದೆ. ಚಿತ್ರದ ಕತಾವಸ್ತು, ಪಾತ್ರ ಪೋಷಣೆ, ಮಾತುಗಳು, ಕೊನೆಗೆ ಮುಕ್ತಾಯದಲ್ಕಿ ಹೊರಡಿಸುವ ಬ್ರಾಹ್ಮಣ್ಯದ ಪರ ತೀರ್ಮಾನ... ಇತ್ಯಾದಿ ಎಲ್ಲವೂ ಚಾಕಚಕ್ಯತೆಯಿಂದ ವ್ಯವಸ್ಥೆ, ಅಧಿಕಾರಶಾಹಿ, ಬ್ರಾಹ್ಮಣ್ಯವನ್ನು ಸಮಾಜದ ಬಹುಸಂಖ್ಯಾತರಾಗಿರುವ ದಲಿತ ಮತ್ತು ಶೂದ್ರ ಸಮುದಾಯಗಳ ಮಧ್ಯೆ ಅವರ ಆರಾಧನಾ ಪಾತ್ರಗಳ ಮೂಲಕ ಮನಸ್ಸಿಗೆ ನಾಟುವಂತೆ ತೋರಿಸಿ ಅಚ್ಚೊತ್ತುವುದೇ ಈ ಚಿತ್ರದ ಪ್ರಧಾನ ಉದ್ದೇಶದಂತೆ ಕಾಣಿಸುತ್ತದೆ.

ಸಿನಿಮಾದ ಟ್ಯಾಗ್ ಲೈನ್ ಇದೊಂದು ದಂತಕತೆ ಎಂದು ಬರೆದುಕೊಂಡಿದ್ದರೂ ಹಾಗೆ ನೋಡಿ ಚಿತ್ರ ಮಾಡಲಾಗಿದೆ ಎನಿಸುವುದಿಲ್ಲ. ಇದಕ್ಕೆ ಪೂರಕವಾಗಿ ರಿಷಬ್ ಶೆಟ್ಟಿ ಚಿತ್ರವನ್ನು ಸಮರ್ಥಿಸಿ ಬ್ರಾಹ್ಮಣ್ಯದ ಎರಕದ ಮಾತುಗಳನ್ನು ಉದುರಿಸುತ್ತಿರುವುದು, ಅವುಗಳ ಮೂಲಕವೂ ಚಿತ್ರದ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು....ಬ್ರಾಹ್ಮಣಶಾಹಿ ಶಕ್ತಿಗಳು ಈ ಚಿತ್ರವನ್ನು ಬೆಂಬಲಿಸುತ್ತಾ ಕುರುಡು ಸಮರ್ಥನೆ ಮಾಡುತ್ತಿರುವುದು...ವಿಮರ್ಶೆ ಮಾಡುವವರ ಮೇಲೆ ಮುಗಿ ಬೀಳುತ್ತಿರುವುದು...ರಿಷಬ್ ಶೆಟ್ಟಿಯ ಆರ್ಥಿಕ ಹಾಗೂ ರಾಜಕೀಯ ಹಿನ್ನೆಲೆ....ಇತ್ಯಾದಿಗಳನ್ನು ಗಮನಿಸಿದರೆ ವಿಚಾರ ಸ್ಪಷ್ಟವಾಗಿಬಿಡುತ್ತದೆ. ಜೊತೆಗೆ ಸರ್ಕಾರ ಭೂತ ಕೋಲ ಪಾತ್ರಿಗಳಿಗೆ ಮಾಸಾಶನ ಯೋಜನೆ ಹೊರಡಿಸುವುದು ಇತ್ಯಾದಿಗಳನ್ನು ಗಮನಿಸಬಹುದು. ಇದು ಚುನಾವಣಾ ಕಾಲವಾಗಿರುವುದನ್ನೂ ಕೂಡ ಗಮನಿಸಬೇಕು.

ಅವಿಭಜಿತ ದಕ್ಷಣ ಕನ್ನಡ ಜಿಲ್ಲೆ ಹಾಗೂ ಕೇರಳದ ಕಾಸರಗೋಡು ಸ್ವಲ್ಪ ಮಟ್ಟಿಗೆ ಕಣ್ಣೂರು ಜಿಲ್ಲೆಯ ಆದಿವಾಸಿಗಳು, ದಲಿತರು, ಶೂದ್ರರಲ್ಲಿ ಭೂತ ಕೋಲದ ಬಗ್ಗೆ ನಂಬಿಕೆ ಹೊಂದಿ ಬದುಕಿನ ಭಾಗವಾಗಿಸಿ ಕೊಂಡಿರುವವರೇ ಹೆಚ್ಚಿನವರು.

ಸಿನಿಮಾದ ಟ್ಯಾಗ್‌ಲೈನ್ ʼಇದೊಂದು ದಂತಕತೆʼ ಎಂದು ಬರೆದುಕೊಂಡಿದ್ದರೂ, ಹಾಗೆ ಎನಿಸುವುದಿಲ್ಲ

ಕೋಲವನ್ನು ಸಾಮೂಹಿಕವಾಗಿಯೇ ಹೆಚ್ಚಾಗಿ ನಡೆಸುತ್ತಾರೆ. ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಕೆಲಭಾಗಗಳಲ್ಲಿ ಕುಟುಂಬಗಳು ಕೋಲವನ್ನು ನಡೆಸುವ ಪರಿಪಾಟ ಇತ್ತು. ಈಗ ಕೋಲ ಕಟ್ಟುವುದು ಕಡಿಮೆಯಾಗಿದ್ದರೂ ಭೂತಗಳ ಆರಾದನೆ ಕಡಿಮೆಯಾಗಿಲ್ಲ. ಕೇರಳದ ಕಾಂಞಗಾಡ್, ಚೀಮೇನಿ, ಕಯ್ಯೂರು ಮೊದಲಾದೆಡೆಗಳಲ್ಲಿ ಹತ್ತು ಹನ್ನೆರಡು ದಿನಗಳ ಕಾಲ ಭೂತದ ಕೋಲದ ಜಾತ್ರೆಗಳೇ ನಡೆಯುತ್ತವೆ. ಹತ್ತಾರು ಸಾವಿರಗಳಿಂದ ಲಕ್ಷದವರೆಗೂ ಜನರು ಭಾಗವಹಿಸುತ್ತಾರೆ. ಅಲ್ಲಿ ಹತ್ತಾರು ಭೂತಗಳ ಪಾತ್ರಧಾರಿಗಳು ಕೋಲ ಕಟ್ಟುತ್ತಾರೆ. ರಾತ್ರಿ ಹಗಲುಗಳ ಪರಿವೆಯಿಲ್ಲದೇ ನಡೆಯುತ್ತವೆ. ಕಾಂಞಗಾಡಿನಲ್ಲಿ ಎರಡು ಗಂಟೆಗಳಿಗೊಮ್ಮೆ ಒಂದು ಕೋಲ ನಡೆಸುತ್ತಾರೆ. ಗುಳಿಗ, ಪಂಜುರ್ಲಿ, ಮುತ್ತಪ್ಪ ನಂತಹ ಶೂದ್ರ ಭೂತಗಳ ಜೊತೆಗೆ ವಿಷ್ಣು ಮೂರ್ತಿ ಎಂಬ ವೈದಿಕ ಬ್ರಾಹ್ಮಣ್ಯೀಕರಿಸಿರುವ ಭೂತ ಕೂಡ ಪಾತ್ರಧಾರಿಗಳ ಮೂಲಕ ಕೋಲ ಕಟ್ಟುತ್ತವೆ. ವಿಷ್ಣುಮೂರ್ತಿ ಭೂತವನ್ನು ಬಹಳ ಪ್ರಾಮುಖ್ಯತೆಗಳನ್ನು ನೀಡುತ್ತಾ ಹೆಚ್ಚು ಹೆಚ್ಚು ಪ್ರಾಯೋಜಿಸಲಾಗುತ್ತಿದೆ. ಕಯ್ಯೂರು ಬಳಿಯಿರುವ ಚೀಮೇನಿ ಸುತ್ತಮುತ್ತ ವಿಷ್ಣು ಮೂರ್ತಿ ಭೂತದ ದೊಡ್ಡ ದೈವ ಸ್ಥಾನಗಳಿವೆ. ಭೂತ, ದೈವ, ತೆಯ್ಯಂ ಸಮಾನ ಅರ್ಥದಲ್ಲಿ ಭೂತಗಳಿಗೆ ಬಳಸಲಾಗುತ್ತಿದೆ. ಇವೆಲ್ಲವೂ ಸಾಮೂಹಿಕ ಕೋಲಗಳಾಗಿವೆ. ಕುಟುಂಬಗಳು ನಡೆಸುವ ಕೋಲಗಳು ಕಡಿಮೆ. ಕೋಲ ನಡೆಸುವುದು ಈಗಂತೂ ಬಹಳ ದುಬಾರಿಯಾಗಿರುವುದರಿಂದಾಗಿ ಸಾಮಾನ್ಯ ಕುಟುಂಬಗಳು ಕೋಲ ನಡೆಸುವುದು ಕಡಿಮೆಯಾಗಿ ಬಿಟ್ಟಿವೆ.

ದಕ್ಷಣ ಕನ್ನಡದ ಹಳೇ ಭೂಮಾಲಿಕ ಕುಟುಂಬಗಳು ಕೋಲ ನಡೆಸುವುದು ಪ್ರತಿಷ್ಠೆ ವಾಡಿಕೆಯಂತೆ ನಡೆಯುತ್ತವೆ. ಬಂಟರಲ್ಲಿ ಗುತ್ತುಗಳೆಂದು ಕರೆಸಿಕೊಳ್ಳುವ ದೊಡ್ಡ ಭೂಮಾಲೀಕ ಕುಟುಂಬಗಳು ಕೋಲ ಹಾಗೂ ಕಂಬಳಗಳನ್ನು ತಮ್ಮ ಮನೆತನದ ಪ್ರತಿಷ್ಠೆಯೆಂದೇ ಭಾವಿಸುತ್ತವೆ.

ಕಾಂತಾರ ಸಿನಿಮಾ ಆದಿವಾಸಿಗಳು ಹಾಗೂ ದಲಿತರು ಎದುರಿಸುತ್ತಿರುವ ಸರ್ಕಾರಿ ಒಕ್ಕಲೆಬ್ಬಿಸುವಿಕೆಯ ಕರಾಳತೆಯನ್ನು ಮುಚ್ಚಿ ಅರಣ್ಯ ಇಲಾಖೆಯು ಆದಿವಾಸಿಗಳ ದಲಿತರ ಪರವಾಗಿ ವರ್ತಿಸುತ್ತಿದೆ ಎನ್ನುವಂತೆ ಚಿತ್ರಿಸಲಾಗಿದೆ. ಅಲ್ಲದೇ ದೊಡ್ಡ ಭೂಮಾಲೀಕರು ಅಕ್ರಮಿಸಿಕೊಂಡಿರುವ ಅರಣ್ಯ ಇನ್ನಿತರ ಭೂಪ್ರದೇಶಗಳನ್ನು ತೆರವು ಮಾಡಿಸಿ ಅರಣ್ಯ ಸಂರಕ್ಷಣೆ ಕಾರ್ಯ ಮಾಡುತ್ತಿದೆ ಎನ್ನುವಂತೆ ಚಿತ್ರಿಸಲಾಗಿದೆ. ದೊಡ್ಡ ಭೂಮಾಲೀಕರುಗಳು ಆದಿವಾಸಿ ದಲಿತರನ್ನು ಬಳಸಿಕೊಂಡು ನಾಟ ಮಾಫಿಯಾದ ಕಳ್ಳ ದಂಧೆಯ ವಿರುದ್ಧ ಅರಣ್ಯ ಇಲಾಖೆ ಇರುತ್ತದೆ ಎನ್ನುವಂತೆ ತೊರಿಸಲಾಗಿದೆ. ಅದನ್ನು ನಾಯಕ ಶಿವನ ವಿರುದ್ಧದ ಅರಣ್ಯ ಅಧಿಕಾರಿಯ ದ್ವೇಷದ ಭಾಗವಾಗಿಸಿದ್ದರೂ ಇತರ ಪಾತ್ರ ಪೋಷಣೆಯ ಜೊತಗೂಡಿಸಿ ನೋಡಿದಾಗ ನೋಡುಗರಿಗೆ ತಲುಪುವ ಸಂದೇಶ ಅರಣ್ಯ ಇಲಾಖೆ ಪರವಾಗಿ ಬಿಡುತ್ತದೆ. ದಕ್ಷಿಣ ಕನ್ನಡವೂ ಸೇರಿದಂತೆ ದೇಶದ ಆದಿವಾಸಿಗಳು ಹಾಗೂ ದಲಿತರು ಇನ್ನಿತರ ಶೂದ್ರ ಜನಸಾಮಾನ್ಯರು ಸರ್ಕಾರದ ಪರವಾಗಿ ಅರಣ್ಯ  ಇಲಾಖೆಯು ನಡೆಸುತ್ತಿರುವ ದಬ್ಬಾಳಿಕೆ, ಹಿಂಸೆ, ಕಿರುಕುಳಗಳಿಂದ ಬೇಸತ್ತು ಬಂಡಾಯವೆದ್ದು ನಿಂತು ತಮ್ಮ ಅಸ್ತಿತ್ವ ಹಾಗೂ ಬದುಕಿನ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಅವರಿರುವ ತುಂಡು ನೆಲಗಳಿಗೆ ಸರಿಯಾದ ಹಕ್ಕುಪತ್ರವನ್ನಾಗಲಿ ಬದುಕಿನ ಮೂಲಭೂತ ಸೌಕರ್ಯಗಳನ್ನಾಗಲಿ ಇದುವರೆಗೂ ಒದಗಿಸದೇ ಸತಾಯಿಸುತ್ತಾ ಬರಲಾಗುತ್ತಿದೆ. ಕ್ಷಣ ಕ್ಷಣವೂ ಅಭದ್ರತೆಯಲ್ಲಿ ಬದುಕುವಂತೆ ಮಾಡಿಡಲಾಗಿದೆ. ಲಕ್ಷಾಂತರ ಜನರು ತಮ್ಮ ಬದುಕುಗಳನ್ನೇ ಕಳೆದುಕೊಂಢಿದ್ದಾರೆ. ಈ ದುರಂತ ಹಾಗೂ ಕ್ರೌರ್ಯದ ವಾಸ್ತವವನ್ನು ಸಂಪೂರ್ಣವಾಗಿ ಮರೆಮಾಚುವಂತೆ ಕಾಂತಾರದಲ್ಲಿ ಚಿತ್ರಿಸಲಾಗಿದೆ.

kantara

ಭೂತ, ದೈವ, ತೆಯ್ಯಂ, ಕೋಲಗಳ ವಾಸ್ತವ ಗ್ರಹಿಕೆ ಇರುವವರಿಗೆ ಕಾಂತಾರವನ್ನು ಒಪ್ಪಿಕೊಳ್ಳಲು ಬಹಳ ಕಷ್ಟವಾಗುತ್ತದೆ. ದಲಿತ ಪಾತ್ರವನ್ನು ಕಥಾ ನಾಯಕನ ಸ್ಥಾನದಲ್ಲಿ ಇರಿಸಿ ದಲಿತ ದಮನಿತ ವಿರೋಧಿ ಕತಾವಸ್ತುವನ್ನು ಪೋಣಿಸಿ ಜನಸಾಮಾನ್ಯರ ಸಹಜ ನಂಬಿಕೆಗಳನ್ನೂ ಕೂಡ ತಿರುಚಿ ಕೊನೆಗೆ ಪ್ರಭುತ್ವ ಹಾಗೂ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಚಿಂತನೆಗಳನ್ನು ದಲಿತ ಆದಿವಾಸಿ ಸಮುದಾಯಗಳ ಮಧ್ಯೆ ಹೇರುವ ಒಂದು ಗಂಭೀರ ಪ್ರಯತ್ನವೇ ಕಾಂತಾರ ಸಿನಿಮಾ ರೂಪದಲ್ಲಿ ಮಾಡಿ ಹಂಚಲಾಗುತ್ತಿದೆ.

ಪಾಡ್ದನಗಳ ಬದಲಿಗೆ ಬ್ರಾಹ್ಮಣಶಾಹಿ ಶ್ಲೋಕವನ್ನು ಯಕ್ಷಗಾನದ ಭಾಗವತಿಕೆಯ ರೂಪದಲ್ಲಿ ಹೇಳಿಸಿ ಪಂಜುರ್ಲಿಯನ್ನು ವೈಷ್ಣವ ದೇವನಾದ ಮಹಾವಿಷ್ಣುವಿನ ಅವತಾರವೆಂದು ಬಿಂಬಿಸುವ ಮೂಲಕ ಚಿತ್ರ ಕೊನೆಗೊಳ್ಳುತ್ತದೆ.

ಇದನ್ನು ಓದಿದ್ದೀರಾ? ಕೋಟಿಕಂಠ ಗಾಯನ | ಚಿಂತನೆಯ ಮಟ್ಟ ಅಪ್ರಬುದ್ಧ ಸ್ಥಿತಿ ತಲುಪಿದಾಗ ಇಂತಹ ಪ್ರಹಸನ ಅನಿವಾರ್ಯ

ಆದರೆ ಈ ಅವತಾರ, ಭೂತ ಪಾತ್ರಧಾರಿಯನ್ನು ಭೂಮಾಲೀಕನ ಅಣತಿಯಂತೆ ನಡೆಯಲು ಒಪ್ಪದೇ, ದೈವ ಕ್ಷಮಿಸುವುದಿಲ್ಲ ಕಾರಣ ಕೊಟ್ಟು ನಿರಾಕರಿಸಿದ್ದಕ್ಕೆ ಕೊಲೆ ಮಾಡಿ ಬಿಸಾಕುವಾಗ ರಕ್ಷಣೆಗೆ ಬರುವುದಿಲ್ಲ. ಕೊನೆಗೆ ಭೂಮಾಲಿಕ ನಾಯಕ ಶಿವನನ್ನು ಹೊಡೆಸಿ ಎಸೆದ ಮೇಲೆ ನಾಯಕನ ಮೈ ಮೇಲೆ ತಾನಾಗಿಯೇ ಆವಾಹಿಸುತ್ತದೆ. ದಲಿತ ಆದಿವಾಸಿಗಳ ಆರಾಧನೆಯ ಪಂಜುರ್ಲಿ ವಿಷ್ಣುವಿನ ಅವತಾರ ಹೇಗೆ ಆಗಲು ಸಾಧ್ಯ ? ಯಾಕೆ ಕ್ಷೇತ್ರಪಾಲ ಮಾತ್ರ ಕ್ಷಮಿಸುವುದಿಲ್ಲ? ಪಂಜುರ್ಲಿ ಯಾಕೆ ಕ್ಷಮಿಸುತ್ತಾನೆ? ಇತ್ಯಾದಿ ಪ್ರಶ್ನೆಗಳು  ಹಾಕಿಕೊಂಡರೆ ಉತ್ತರಗಳಿಲ್ಲ.

ಈ ಸಿನಿಮಾವನ್ನು ದಲಿತ ಆದಿವಾಸಿ ಜನಸಾಮಾನ್ಯರ ನಂಬಿಕೆಗಳನ್ನು, ಜನಪದ ನಂಬಿಕೆಗಳನ್ನು, ದಲಿತ ಆದಿವಾಸಿ ಕಲ್ಚರಲ್ ಅಂಶಗಳನ್ನು, ಆಧುನಿಕ ಫ್ಯಾಂಟಸಿಯನ್ನು, ಸಮಕಾಲೀನ ದಲಿತ ದಮನಿತರ ಆಗುಹೋಗುಗಳನ್ನು, ದಲಿತ ಆದಿವಾಸಿ ಶೋಷಣೆಯನ್ನು, ಬಹುಸಂಖ್ಯಾತ ಜನಸಮುದಾಯಗಳು ಎದುರಿಸುತ್ತಿರುವ ಭೂಮಿ ಪ್ರಶ್ನೆಯನ್ನು  ಬಳಸಿಕೊಂಡು ರೋಚಕತೆ, ಆಧುನಿಕ ಸಿನಿಮಾ ತಂತ್ರಜ್ಞಾನ ಹಾಗೂ ಅಬ್ಬರಗಳೊಂದಿಗೆ ಬ್ರಾಹ್ಮಣ ಧರ್ಮದ ಹಿಡಿತದಡಿ ದಲಿತ ಆದಿವಾಸಿ ಇನ್ನಿತರ ಜನಸಾಮಾನ್ಯರನ್ನು ಹಿಡಿದಿಡುವ ಇತ್ತೀಚಿನ ಒಂದು ಪರಿಣಾಮಕಾರಿ ಪ್ರಯತ್ನವೆನ್ನಬಹುದು. ಇಂತಹ ಪ್ರಯತ್ನಗಳು ಸಿನಿಮಾಗಳಲ್ಲಿ ಮೊದಲಿನಿಂದಲೂ ಸಾಕಷ್ಟು ನಡೆಯುತ್ತಲೇ ಬರುತ್ತಿವೆ.

ಈ ಗ್ರಹಿಕೆ ಹಾಗೂ ಎಚ್ಚರಿಕೆಗಳೊಂದಿಗೆ ಕಾಂತಾರ ಸಿನಿಮಾವನ್ನು ಗ್ರಹಿಸದೇ ಹೋದರೆ ಅವರು ತೋಡಿರುವ ಖೆಡ್ಡಕ್ಕೆ ಬಿದ್ದಂತಾಗುತ್ತದೆ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app