ಪ್ರಧಾನಿ ಮೋದಿಯನ್ನು ಪ್ರಮೋಟ್ ಮಾಡುತ್ತಿರುವ ಕರ್ಮಠ ಸನ್ಯಾಸಿಗಳು: ಜೆ ಎಸ್‌ ಪಾಟೀಲ

Modi with siddeshwara

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳು ಪ್ರವಚನಕಾರರು ಹಾಗು ಸಂಘ ಪರಿವಾರದ ಖಾಸಾ  ರಾಯಭಾರಿಗಳು. ಆ ಕುರಿತು ಅವರು ತಮ್ಮ ನಡವಳಿಕೆಯಿಂದ ಅನೇಕ ವೇಳೆ ತೋರಿಸಿದ್ದಾರೆ. ಅವರು ಪ್ರವಚನ ಮಾಡುವ ವಿಷಯ ಬಹುತೇಕ ಚಾತುರ್ವರ್ಣ ಪ್ರತಿಪಾದಿಸುವ ಗೀತೆ, ಉಪನಿಷತ್ತು, ವೇದಗಳ ಮೇಲೆಯೇ ಇರುತ್ತದೆ

ಅಧ್ಯಾತ್ಮ ಲೋಕ ಲೌಕಿಕದ ಎಲ್ಲ ಬಗೆಯ ಜಂಜಡಗಳಿಂದ ಮುಕ್ತವಾಗಿರಬೇಕು ಎಂದು ನಾವೆಲ್ಲ ಬಯಸುತ್ತೇವೆ. ಅಧ್ಯಾತ್ಮವೆಂದರೆ ಈ ಲೋಕದ ಆಗುಹೋಗುಗಳಿಗೆ ಬೆನ್ನು ತೋರುವುದಲ್ಲ ಎಂದು ನಾವು ಅರಿತುಕೊಳ್ಳಬೇಕಿದೆ. ಅಧ್ಯಾತ್ಮ ಅಥವಾ ಸನ್ಯಾಸಕ್ಕಿಂತ ಸಂಸಾರವೆನ್ನುವುದೊಂದು ಮಹಾ ತಪಸ್ಸು. ಅದನ್ನು ಬಸವಣ್ಣನವರು ಹೀಗೆ ಹೇಳುತ್ತಾರೆ:

"ಕಾಲಿಗೆ ಕಟ್ಟಿದೆ ಗುಂಡುˌ
ಕೊರಳಿಗೆ ಕಟ್ಟಿದೆ ಬೆಂಡುˌ
ತೇಲಲೀಯದು ಗುಂಡುˌ
ಮುಳುಗಲೀಯದು ಬೆಂಡುˌ
ಇಂತಪ್ಪ ಸಂಸಾರ ಶರಧಿಯನು
ದಾಂಟಿಸಿ ಕಾಲಾಂತಕನೆ ಕಾಯೊ
ಕೂಡಲಸಂಗಮದೇವಾ."

ಸಂಸಾರವೆಂಬುದು ಬಹಳ ಸಂಕೀರ್ಣವಾದ ಸಂಬಂಧಗಳ ಬಂಧ. ಅದನ್ನು ಗೆದ್ದು ನೀಗುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಹಿಂದಿನಿಂದ ಸನ್ಯಾಸವೆಂದರೆ ಕಠಿಣವಾದ ಬದುಕು ಎಂದು ಬಿಂಬಿಸಿಕೊಂಡು ಬರಲಾಗಿದೆ. ಸನ್ಯಾಸಕ್ಕಿಂತ ಸಂಸಾರವೇ ಕಠಿಣ ಹಾಗು ಜೀವನ್ಮುಖಿ ಎನ್ನುವುದನ್ನು ಬದುಕಿ ತೋರಿಸಿದವರು ನಮ್ಮ ಕಲ್ಯಾಣದ ಶರಣರು.

ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆಯಾದ ಸಂಘ ಹೇಳಿಕೇಳಿ ಬಲಪಂಥೀಯ ಸಿದ್ಧಾಂತ ಪ್ರತಿಪಾದಿಸುವ ಸಂಘಟನೆಗಳು. ಬಲಪಂಥೀಯರೆಂದರೆ ಜೀವವಿರೋಧಿಗಳು ಹಾಗು ದೇವರು ಮತ್ತು ಧರ್ಮವನ್ನು ಬಂಡವಾಳ ಮಾಡಿಕೊಂಡು ಬದುಕುವ ವ್ಯಾಪಾರಿಗಳು. ಬಲಪಂಥೀಯರು ಪ್ರಗತಿ ವಿರೋಧಿಗಳುˌ ಬುದ್ದಿಜೀವಿಗಳನ್ನು ಸದಾ ದ್ವೇಷಿಸುವ ಪ್ರತಿಭಾಹೀನ ಕುಟಿಲರು. ಇಂತಹ ಪಲಪಂಥೀಯ ಬಿಜೆಪಿ ಬಗ್ಗೆ ಇಂದಿನ ತತ್ವಹೀನ ಸನ್ಯಾಸಿಗಳು ಒಲವು ಹೊಂದಿರುವುದು ಆಶ್ಚರ್ಯದ ಸಂಗತಿಯಲ್ಲ. ಅಧುನಿಕ ಕಾಲದಲ್ಲಿ ಎಲ್ಲ ರಂಗಗಳು ತಮ್ಮ ಪಾವಿತ್ರ್ಯತೆ ಕಳೆದುಕೊಂಡಿವೆˌ ಅದಕ್ಕೆ ಅಧ್ಯಾತ್ಮ ರಂಗ ಹೊರತಲ್ಲ.

ಅಧ್ಯಾತ್ಮ ರಂಗದಲ್ಲಿದ್ದು ಐಷಾರಾಮಿ ಬದುಕು ಜೀವಿಸುತ್ತ ರಾಜಕಾರಣಿಗಳು ಮತ್ತು ಶ್ರೀಮಂತರ ಅಕ್ರಮ ಸಂಪತ್ತನ್ನು ದೋಚಿ ಜನಸೇವೆ ಮಾಡಿದ ಅನೇಕ ಬಾಬಾಗಳು ನಮ್ಮ ನಡುವೆ ಆಗಿ ಹೋಗಿದ್ದಾರೆ. ಅದೇ ರಂಗದಲ್ಲಿ ಅತ್ಯಂತ ಸರಳವಾಗಿˌ ಸಭ್ಯವಾಗಿ ಬದುಕು ಸಾಗಿಸುತ್ತ ತಮ್ಮ ಪೂರ್ವಾಶ್ರಮದ ಜಾತಿ ಮೋಹ ಬಿಡದೆˌ ಬಲಪಂಥೀಯ ಜೀವವಿರೋಧಿ ಸಂಘಟನೆ/ಸಿದ್ಧಾಂತಗಳ ಒಡನಾಟ ಹೊಂದಿದವರೂ ನಮ್ಮ ನಡುವೆ ಇದ್ದಾರೆ. ಈ ಎರಡನೇ ಬಗೆಯ ಅಧ್ಯಾತ್ಮಿಗಳು ಅತ್ಯಂತ ಅಪಾಯಕಾರಿಗಳು.

Image
ಕಾಂಗ್ರೆಸ್‌ ನಾಯಕ ಎಂ ಬಿ ಪಾಟೀಲ್‌ ಜೊತೆ ಸಿದ್ದೇಶ್ವರ ಸ್ವಾಮಿ
ಕಾಂಗ್ರೆಸ್‌ ನಾಯಕ ಎಂ ಬಿ ಪಾಟೀಲ್‌ ಜೊತೆ ಸಿದ್ದೇಶ್ವರ ಸ್ವಾಮಿ

ಕರ್ನಾಟಕ ರಾಜ್ಯ ಮಠ ಪರಂಪರೆಯಲ್ಲಿ ತನ್ನದೆಯಾದ ಇತಿಹಾಸವನ್ನು ಹೊಂದಿದೆ. ಇಲ್ಲಿ ಬಸವ ಧರ್ಮ ಪರಂಪರೆಯ ಲಿಂಗಾಯತ ವಿರಕ್ತ ಮಠಗಳುˌ ವೀರಶೈವ ಆರಾಧ್ಯ ಬ್ರಾಹ್ಮಣ ಪರಂಪರೆಯ ಆಗಮಿಕ ಆಚಾರ್ಯರ ಮಠಗಳು, ಮಾಧ್ವ ಬ್ರಾಹ್ಮಣರ, ಹವ್ಯಕ ಶೈವ ಅದ್ವೈತಿಗಳ, ಶ್ರೀವೈಷ್ಣವರ, ರಾಯರ, ಉತ್ತರಾಧಿಗಳ, ಕಶ್ಯಪ ಬ್ರಾಹ್ಮಣರ, ಗೋಸಾಯಿ ಕ್ಷತ್ರೀಯ ಮರಾಠರ, ಆರೂಢರ, ನಾಥ ಪರಂಪರೆಯ ಇತ್ಯಾದಿ ಇನ್ನೂ ಅನೇಕ ಬಗೆಯ ಮಠಗಳಿವೆ. ಇದರ ಜೊತೆಗೆ ಕಾರ್ಪೋರೇಟ್ ಅಧ್ಯಾತ್ಮೋದ್ಯಮಿಗಳಾದ ನಕಲಿ ಬಾಬಾಗಳ ಆಶ್ರಮಗಳು ನಾಯಿ ಕೊಡೆಯಂತೆ ಎಲ್ಲೆಂದರಲ್ಲಿ ತಲೆ ಎತ್ತಿವೆ. ಈ ಎಲ್ಲ ಮಠಗಳು ಇಂದು ತಮ್ಮ ಮೂಲ ಪರಂಪರೆಯಿಂದ ವಿಮುಖವಾಗಿ ಆಳುವವರ ಅಂಗಳದಲ್ಲಿ ಆಶೆಗಣ್ಣು ಬಿಡುತ್ತಿರುವುದು ಅಷ್ಟೇ ಸತ್ಯ ಸಂಗತಿ.

ಇನ್ನು ಈ ವಾರ ಪ್ರಧಾನಿ ಮೋದಿಯವರು ಚುನಾವಣಾ ದೃಷ್ಟಿಯಿಂದ ಕರ್ನಾಟಕದ ಪ್ರವಾಸಕ್ಕೆ ಬಂದಾಗ ಒಂದಷ್ಟು ಘಟನೆಗಳು ನಡೆದುಹೋದವು. ಆ ಘಟನೆಗಳು ನಮ್ಮ ಸಾಮಾನ್ಯ ಹಾಗು ಸಂವೇದನಾಶೀಲ ಜನರಿಗೆ ದಿಗ್ಭ್ರಮೆಯನ್ನು ಉಂಟುಮಾಡಿವೆ. ಮೊದಲನೆಯದು ಯೋಗವನ್ನು ವ್ಯಾಪಾರ ಮಾಡಿಕೊಂಡಿರುವ ಮೋದಿ ಪಟಾಲಂ ಅದನ್ನು ಬ್ರಾಂಡಿಂಗ್ ಮಾಡುವ ಸಲುವಾಗಿ ತಮ್ಮ ಒಂದು ದಿನದ ರಾಜ್ಯ ಭೇಟಿಗೆ ಕೋಟ್ಯಂತರ ರೂಪಾಯಿ ಸರ್ಕಾರದ ಬೋಕ್ಕಸಕ್ಕೆ ಹೊರೆ ಹಾಕಿದ್ದು ಮತ್ತು ಎರಡನೆಯದು ಮೋದಿಯನ್ನು ಕೆಲವು ಕಪಟ ಸನ್ಯಾಸಿಗಳು ವಿಪರೀತವಾಗಿ ಹೊಗಳಿದ ಘಟನೆಗಳು.

ಸನಾತನ ವೈದಿಕ ಧರ್ಮದ ರಾಯಭಾರಿ

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳು ಖ್ಯಾತ ಪ್ರವಚನಕಾರರು ಹಾಗು ಸಂಘ ಪರಿವಾರದ ಖಾಸ್  ರಾಯಭಾರಿಗಳು. ಆ ಕುರಿತು ಅವರು ಯಾವ ಮುಚ್ಚುಮರೆಯಿಲ್ಲದೆ ತಮ್ಮ ನಡವಳಿಕೆಯಿಂದ ಅನೇಕ ವೇಳೆ ತೋರಿಸಿದ್ದಾರೆ. ಅವರು ಪ್ರವಚನ ಮಾಡುವ ವಿಷಯ ಬಹುತೇಕ ಚಾತುರ್ವರ್ಣ ಪ್ರತಿಪಾದಿಸುವ ಗೀತೆˌ ಉಪನಿಷತ್ತುˌ ವೇದ ಮುಂತಾದ ಸನಾತನ ವೈದಿಕ ಸಾಹಿತ್ಯಗಳ ಮೇಲೆ. ಸ್ವಾಮಿಗಳು ತಾವು ತಟಸ್ತರು ಎಂದು ತೋರಿಸಿಕೊಳ್ಳುತ್ತಲೇ ಲಿಂಗಾಯತ ಧರ್ಮದ ವ್ಯಾಪ್ತಿಯನ್ನು ಮೀರಿ ನಿಂತು ಸನಾತನ ವೈದಿಕ ಧರ್ಮದ ರಾಯಭಾರಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅವರೆಂದೂ ಬಸವಾದಿ ಶಿವಶರಣರ ವೈಜ್ಞಾನಿಕ ಮತ್ತು ವೈಚಾರಿಕ ಸಂಗತಿಗಳನ್ನು ಮಾತನಾಡುವುದಿಲ್ಲ. ಹಾಗೊಂದು ವೇಳೆ ವಚನ ಸಾಹಿತ್ಯದ ಬಗ್ಗೆ ಅವರು ಮಾತನಾಡಿದರೆ ಅಥವಾ ಬರೆದರೆ ಅದು ಕೇವಲ ಅನುಭಾವದ ವಚನಗಳ ಕುರಿತು ಮಾತ್ರ.

ಹೀಗೆ ಒಂದು ಸಿದ್ಧಾಂತಕ್ಕೆ ಬದ್ಧರಾಗಿರುವ ಸಿದ್ಧೇಶ್ವರ ಸ್ವಾಮಿಗಳು ವೈಚಾರಿಕವಾಗಿ ಚಿಂತಿಸಬೇಕು ಎಂದು ಅಪೇಕ್ಷಿಸುವುದು ಹಾಗು ನಿರೀಕ್ಷಿಸುವುದು ಜನರ ಮಹಾತಪ್ಪು. ಗುರು ಪೂರ್ಣಿಮೆಯ ಸಂದರ್ಭದಲ್ಲಿ ಅವರ ಪ್ರವಚನ ಕೇಳಲು ವಿಜಯಪುರದ ಜನರು  ಕಾತರದಿಂದ ಕಾಯುತ್ತಿರುತ್ತಾರೆ. ಮೂಡಣ ಮುಂಜಾನೆ ನಸುಕಿನಲ್ಲಿ ಬರಿಗಾಲಲ್ಲಿ ಅವರ ಪ್ರವಚನಕ್ಕೆ ಜನರು ತಂಡೋಪತಂಡವಾಗಿ ಬರುತ್ತಾರೆ. ಮುಂದಿನ ಸಾಲಿನಲ್ಲಿ ಸರ್ಕಾರಿ ತಿಮಿಂಗಲಗಳು ಕಣ್ಣು ಮುಚ್ಚಿಕೊಂಡು ಕುಳಿತು ಅಪಾರ ಶ್ರದ್ಧೆಯಿಂದ ಅವರ ಮಾತು ಕೇಳುತ್ತವೆ. ಕನಿಷ್ಟ ಅರ್ಧ ಶತಮಾನಗಳ ಅವರ ಪ್ರವಚನ ಸೇವೆ ನಿರ್ಲಿಪ್ತವಾದದ್ದು. ಸಿದ್ದೇಶ್ವರ ಸ್ವಾಮಿಗಳಂತಹ ಮಹಾನ್ ಪಂಡಿತರು ಜಿಲ್ಲೆಯಲ್ಲಿದ್ದರೂ ಬಸವಣ್ಣನ ತವರು ಜಿಲ್ಲೆ ವಿಜಯಪುರದಲ್ಲಿ ವೈಜ್ಞಾನಿಕತೆ ಹಾಗು ವೈಚಾರಿಕತೆ ಒಂದಿನಿತು ಬೆಳೆಯಲಿಲ್ಲ. ಇಲ್ಲಿನ ಜನರದ್ದು ಅದರಲ್ಲೂ ವಿಶೇಷವಾಗಿ ಲಿಂಗಾಯತರದ್ದು ಉಪಜಾತಿಗಳ ನಡುವಿನ ತಾಕಲಾಟ/ಗುದ್ದಾಟ ಮತ್ತು ವೈದಿಕ ಗುಲಾಮಗಿರಿಯ ಬದುಕು.

ಇದೆ ಜಿಲ್ಲೆಯಲ್ಲಿ ಹುಟ್ಟಿ ಮೊದಲು ನಾಸ್ತಿಕ ಎಡಪಂಥೀಯರಾಗಿದ್ದ ಲಿಂಗಾನಂದ ಸ್ವಾಮಿಗಳು ಮೂರು ಸಾವಿರ ಮಠದ ವಿದ್ಯಾರ್ಥಿಯಾಗಿದ್ದಾಗ ಬಸವ ತತ್ವದ ಸೆಳೆತಕ್ಕೆ ಒಳಗಾಗಿ ಆಸ್ತಿಕರಾಗಿ ಬದಲಾದವರು. ಯಾವ ಮಠˌ ಆಶ್ರಮಗಳ ಹಿನ್ನೆಲೆಯೂ ಇಲ್ಲದ ಲಿಂಗಾನಂದ ಸ್ವಾಮಿಗಳು ಬರಿಗೈಯಲ್ಲಿ ಮನೆ ಬಿಟ್ಟು ಹೊರನಡೆದವರು. ಮುಂದೆ ಅವರು ಕರ್ನಾಟಕದ ಯಾವುದೇ ಬಸವ ಪರಂಪರೆಯ ವಿರಕ್ತ ಮಠಗಳು ಮಾಡದˌ ನಾಡು ಬೆರಗುಕೊಳ್ಳುವ ಕಾರ್ಯ ಮಾಡಿ ಅಜರಾಮರರಾದರು. ಇಡೀ ನಾಡಿನಲ್ಲಿ ಬಸವ ತತ್ವದೊಳಗಿನ ವೈಚಾರಿಕತೆಯನ್ನು ತಮ್ಮ ಅಮೋಘ ಕಂಠಸಿರಿ ಹಾಗು ವಾಗ್ಮಿತ್ವದಿಂದ ಬಿತ್ತಿದವರು. ಅವರ ಪ್ರವಚನದಿಂದ ಪ್ರಭಾವಿತರಾಗಿ ವೈದಿಕ ಗುಲಾಮರಾಗಿದ್ದ ಅಸಂಖ್ಯಾತ ಲಿಂಗಾಯತ ಕುಟುಂಬಗಳು ನೈಜ ಲಿಂಗಾಯತ ಧರ್ಮೀಯರಾಗಿ ಬದಲಾದರು. ಹೀಗೆ ಒಂದಿಡೀ ತಲೆಮಾರನ್ನು ಪ್ರಭಾವಿಸಿ ಬಸವ ತತ್ವ ಬಿತ್ತಿ ಜನರನ್ನು ಪರಿವರ್ತಿಸಿದವರು ಲಿಂಗಾನಂದ ಶ್ರೀಗಳು.

ಬಸವ ತತ್ವದ ಸಮಾರಂಭಗಳಿಂದ ಅಂತರ ಕಾಯ್ದುಕೊಂಡವರು

ಸಿದ್ದೇಶ್ವರ ಸ್ವಾಮಿಗಳ ಅಗಾಧ ವಿಚಾರಧಾರೆಯ ಪ್ರವಚನ ಕೇಳಿ ಜನ ಬದಲಾಗಿಲ್ಲ ಎನ್ನುವ ಒಂದು ಸಾಮಾನ್ಯ ಆರೋಪವಿದೆ. ಇದು ಬೇಡದವರ ಆರೋಪವಷ್ಟೇ. ಬಲಪಂಥೀಯ ವಿಚಾರಗಳು ಕೇಳಿಸಿಕೊಂಡು ಜನ ವಿಚಾರಮಾದಿಗಳಾಗಿ ಬದಲಾಗುವುದಾದರೂ ಹೇಗೆ? ಅವರ ವಿಚಾರಗಳಿಂದ ಪ್ರಭಾವಿತರಾಗಿ ಅಲ್ಲಿನ ಜನ ಬಲಪಂಥೀಯರಾಗಿ ಸಾಕಷ್ಟು ಬದಲಾಗಿದ್ದಾರೆ. ಏನನ್ನು ಬಿತ್ತಲಾಗುತ್ತದೊ ಅದನ್ನೇ ಬೆಳೆಯಬೇಕಲ್ಲವೆ? ಹಾಗಾಗಿ ಸ್ವಾಮಿಗಳಿಂದ ವೈಚಾರಿತೆ, ವೈಜ್ಞಾನಿಕತೆ, ಬಹುತ್ವ, ಬುದ್ಧ, ಬಸವಣ್ಣ, ಪೆರಿಯಾರರ ತತ್ವಗಳು ಅಥವಾ ಮತ್ತೇನನ್ನೊ ನಿರೀಕ್ಷಿಸುವುದು ಮಹಾತಪ್ಪು. ಜನರ ಆರೋಪ ಮತ್ತು ಟೀಕೆಗಳಿಂದ ಸ್ವಾಮಿಗಳು ಖಂಡಿತ ಬದಲಾಗುವುದಿಲ್ಲ. ಹಾಗೆಯೇ ಅವರ ಭಕ್ತರು ಕೂಡ. ಸ್ವಾಮಿಗಳು ತಮ್ಮ ಅನೇಕ ಪ್ರವಚನಗಳಲ್ಲಿ ಬಲಪಂಥೀಯ ವಿಷ ಕಾರುವ ಚಕ್ರವರ್ತಿ ಸೂಲಿಬೆಲೆಯಂತವರೊಂದಿಗೆ ವೇದಿಕೆಯನ್ನು ಯಾವ ಮುಲಾಜೂ, ಅಳುಕುಗಳಿಲ್ಲದೆ ಹಂಚಿಕೊಳ್ಳಬಲ್ಲರು. ಆದರೆ, ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ನಡೆಯುವ ವೈಚಾರಿಕ ಹಾಗು ಬಸವ ತತ್ವದ ಸಭೆ ಸಮಾರಂಭಗಳಿಂದ ಅವರು ನಿರ್ಧಿಷ್ಟ ಅಂತರ ಕಾಯ್ದುಕೊಂಡಿದ್ದಾರೆ.

Image
ಮಠದ ಆವರಣದಲ್ಲಿ ಪ್ರವಚನ ನೀಡುತ್ತಿರುವ ಸ್ವಾಮೀಜಿ
ಮಠದ ಆವರಣದಲ್ಲಿ ಪ್ರವಚನ ನೀಡುತ್ತಿರುವ ಸ್ವಾಮೀಜಿ

ಸಿದ್ದೇಶ್ವರ ಸ್ವಾಮಿಗಳು ಮೊನ್ನೆ ಪ್ರಧಾನಿ ಮೋದಿಯನ್ನು ಮೈಸೂರಿನಲ್ಲಿ ಹಾಡಿ ಹೊಗಳಿದ್ದು ಅನೇಕ ಜನರ ಆಕ್ಷೇಪಕ್ಕೆ ಕಾರಣವಾಗಿದೆ. ಸುತ್ತೂರು ಮಠದೊಂದಿದೆ ಸ್ವಾಮಿಗಳದ್ದು ಮೊದಲಿನಿಂದ ಗಳಸ್ಯ-ಕಂಠಸ್ಯ ಸಂಬಂಧ. ಬಲಪಂಥೀಯ ಕಾರ್ಪೋರೇಟ್ ಉದ್ಯಮದಂತಿರುವ ಸುತ್ತೂರು ಮಠದಲ್ಲಿ ಬಲಪಂಥೀಯ ವೇದ ಪಾಠಶಾಲೆ ಉದ್ಘಾಟಿಸಲು ಬಲಪಂಥೀಯ ಪ್ರಧಾನಿ ಮೋದಿಯಲ್ಲದೆ ಮತ್ಯಾರು ಸೂಕ್ತ ವ್ಯಕ್ತಿ ಸಿಗಬಲ್ಲರು? ಆ ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಸ್ವಾಮಿಯವರ ಉಪಸ್ಥಿತಿ ಅಗತ್ಯ. ಸಹಜ ಹಾಗು ಪೂರ್ವನಿಯೋಜಿತವಾದದ್ದು ಮತ್ತು ಅವರಿಂದ ಪ್ರಧಾನಿ ಮೋದಿಯ ಗುಣಗಾನ ಕೂಡ ಅಷ್ಟೇ ಸಹಜ ಮತ್ತು ಸಂದರ್ಭೋಚಿತ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೆಯಾದ ಸಿದ್ಧಾಂತವಿರುತ್ತದೆ. ತಮ್ಮದೆ ಸಿದ್ದಾಂತಕ್ಕೆ ಸೇರಿದ ಮತ್ತು ತಮ್ಮವರೆಯಾದ ಪ್ರಧಾನಿಯನ್ನು ಸ್ವಾಮಿಗಳು ಮನತುಂಬಿ, ಬಾಯಿತುಂಬಿ ಹೊಗಳಿದ್ದರಲ್ಲಿ ಯಾವ ಅಸಹಜತೆ ಅಥವಾ ತಪ್ಪಿದೆ ಹೇಳಿ ನೋಡೋಣ?

ಇದನ್ನು ಓದಿದ್ದೀರಾ? ಅಲ್ಪಸಂಖ್ಯಾತರ ವಿಷಯವನ್ನು ಸಂಪೂರ್ಣವಾಗಿ ಕೈಬಿಟ್ಟ 8ನೇ ತರಗತಿಯ ಸಮಾಜವಿಜ್ಞಾನ ಪಠ್ಯ

ಅಷ್ಟಕ್ಕೂ ಸಿದ್ದೇಶ್ವರ ಸ್ವಾಮಿಗಳ ಪ್ರವಚನದಿಂದ ಜನ ಬದಲಾಗಿಲ್ಲ ಅಂದರೆ ಅದರಲ್ಲಿ ಅವರ ತಪ್ಪೇನಿದೆ? ಅವರು ನಿರ್ಲಿಪ್ತವಾಗಿ ಹಾಗು ಬಹಳ ತಾಳ್ಮೆಯಿಂದ ವಿಷಯಗಳನ್ನು ಹೇಳುತ್ತಾರೆ. ಜನರು ಅದನ್ನು ಸ್ವೀಕರಿಸದೆ ಇರುವುದರಲ್ಲಿ ಅವರ ತಪ್ಪು ಹುಡುಕಬಾರದು. ಆದರೆ ಜನರನ್ನು ವೈಚಾರಿಕವಾಗಿ ಪ್ರಭಾವಿಸುವಲ್ಲಿ ಅವರ ಪ್ರವಚನ ಕೆಲಸ ಮಾಡಿಲ್ಲ ಎನ್ನದಿದ್ದರೆ ನಮ್ಮಂತವರು ಆತ್ಮವಂಚನೆ ಮಾಡಿಕೊಂಡಂತೆ. ಬಸವಣ್ಣ ಒಂದು ಸಾಮ್ರಾಜ್ಯದ ಪ್ರಧಾನಿಯಾಗಿದ್ದುಕೊಂಡು ಕೇವಲ ಸರಳವಾಗಿ ಮಾತ್ರ ಬದುಕಲಿಲ್ಲ. ಬದಲಾಗಿ ಜನರನ್ನು ಕೂಡ ಸರಳವಾಗಿ ಬದುಕುವ, ಹಾಗು ಸಮಾಜದಲ್ಲಿನ ಅನ್ಯಾಯಗಳನ್ನು ಪ್ರಶ್ನಿಸುವಂತ ವಿಚಾರವಂತರನ್ನಾಗಿ ಪರಿವರ್ತಿಸಿದರು. ಆದರೆ ನನಗೆ ಇಲ್ಲಿ ಅಂತಿಮವಾಗಿ ಕಾಡುವ ಪ್ರಶ್ನೆ ಎಂದರೆ, ಸಮಾಜದ ಅನ್ಯಾಯಗಳನ್ನು ಯಾವತ್ತೂ ಪ್ರಶ್ನಿಸದ, ನಿಷ್ಠುರವಾಗಿ ಎಂದಿಗೂ ಮಾತನಾಡದ ಒಬ್ಬ ವ್ಯಕ್ತಿಯ ವೈಯಕ್ತಿಕ ಅನನ್ಯ ಸರಳತೆಯಾಗಲಿ ಅಥವಾ ಆತನ ಅಗಾಧ ಪಾಂಡಿತ್ಯವಾಗಲಿ ಈ ಸಮಾಜಕ್ಕೆ ಯಾವ ರೀತಿಯಲ್ಲಿ ಸಹಾಯಮಾಡಬಲ್ಲದು ಎಂಬುದು.

ನಿಮಗೆ ಏನು ಅನ್ನಿಸ್ತು?
14 ವೋಟ್