'ಈ ದಿನ' ವಿಶೇಷ | ಪೋಷಕರೇ, ಇಂತಹ ಪಠ್ಯವನ್ನು ನಿಮ್ಮ ಮಕ್ಕಳು ಓದಬೇಕೇ?

NAGESH CHAKRATHEERTHA

ಹತ್ತನೇ ತರಗತಿಯ ವಿವಾದಿತ ಪಠ್ಯಗಳಲ್ಲಿರುವ ಬಹುತೇಕ ಸಂಗತಿಗಳು ಅವೈಜ್ಞಾನಿಕವಾದವು. ಅದಕ್ಕೂ ಮಿಗಿಲಾಗಿ, ಸ್ತ್ರೀ ದ್ವೇಷವನ್ನು ಪ್ರತಿಪಾದಿಸುವಂಥವು. ಸರ್ಕಾರ, ಇಂತಹ ಪಠ್ಯವನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿ ಏನನ್ನು ಸಾಧಿಸಲು ಹೊರಟಿದೆ? ಧರ್ಮದ ವಿಷಯಗಳನ್ನು ಪಠ್ಯಕ್ಕೆ ಸೇರಿಸುವುದೇ ಆದರೆ, ಎಲ್ಲ ಧರ್ಮಗಳದ್ದೂ ಸೇರಿಸಬಹುದಲ್ಲವೇ?

ಶಾಲಾ ಪಠ್ಯಗಳನ್ನು ಸಿದ್ಧಪಡಿಸುವುದು ಪರಿಷ್ಕರಿಸುವುದು ಯಾವಾಗಲೂ ಜವಾಬ್ದಾರಿಯುತ ಮತ್ತು ಮೌಲ್ಯಯುತವಾದ ಕೆಲಸ. ಸಾಕಷ್ಟು ಬೇರೆ-ಬೇರೆ ಅಗತ್ಯಗಳನ್ನು ಪೂರೈಸಬೇಕಾಗಿರುವುದರಿಂದ ಭಿನ್ನಾಭಿಪ್ರಾಯಗಳು, ವಿವಾದಗಳು ಬರುವುದು ಕೂಡ ಸಹಜ. ಆದರೆ, ಈ ಬಾರಿಯ ಪರಿಷ್ಕರಣೆಯಿಂದ ಹಿಂದೆಂದೂ ಕಾಣದಂತಹ ವಿವಾದಗಳು ಉಂಟಾಗಿವೆ.

ಪಠ್ಯಗಳಲ್ಲಿ ಸೇರಿಸಲು ಅರ್ಹತೆ ಪಡೆಯುವ ಮೌಲ್ಯಯುತವಾದ ಸಾವಿರಾರು ಬರಹಗಳಿರಬಹುದು. ಎಲ್ಲವನ್ನೂ ಸೇರಿಸುವುದು ಸಾಧ್ಯವಿಲ್ಲದಿದ್ದರೂ, ಸೇರಿಸುವ ಬರಹಗಳು ಕೆಲವು ಕನಿಷ್ಠ ಅರ್ಹತೆಯನ್ನಾದರೂ ಪಡೆದಿರಲೇಬೇಕು. ಉದಾಹರಣೆಗೆ, ಪಠ್ಯಗಳು ಸಂವಿಧಾನದ ಆಶಯಗಳಿಗೆ ಪೂರಕವಾಗಿರಬೇಕು, ವೈಜ್ಞಾನಿಕವಾಗಿರಬೇಕು, ಮಕ್ಕಳ ಬೌದ್ಧಿಕ ಮಟ್ಟಕ್ಕೆ ಸೂಕ್ತವಾಗಿರಬೇಕು, ಉಪಯುಕ್ತವಾಗಿರಬೇಕು ಮುಂತಾದವು. ಇವೆಲ್ಲಕ್ಕಿಂತ ಮುಖ್ಯವಾಗಿ, ಜಾತಿ-ಧರ್ಮಗಳ ಕುರಿತಾದ ಮಾಹಿತಿಗಳನ್ನು ಮಕ್ಕಳಿಗೆ ಒದಗಿಸಿದರೂ, ಪಠ್ಯಗಳು ಧರ್ಮನಿರಪೇಕ್ಷವಾಗಿರಬೇಕು.

ಈ ಬಾರಿಯ ಪರಿಷ್ಕರಣೆಯಲ್ಲಿ ಸ್ಥಾನ ಪಡೆದ ಮೂರು ಬರಹಗಳು ಭಾರೀ ವಿವಾದವೆಬ್ಬಿಸಿವೆ. ಈ ಬರಹಗಳ ಲೇಖಕರ ಹಿನ್ನೆಲೆ, ರಾಜಕೀಯ ಮತ್ತು ಧಾರ್ಮಿಕ ನಿಲುವುಗಳು ಮುಂತಾದವುಗಳನ್ನು ಕಡೆಗಣಿಸಿ, ಇವುಗಳು ಶಾಲಾ ಕಲಿಕೆಗೆ ಯೋಗ್ಯವಾಗಿವೆಯೇ ಎನ್ನುವುದನ್ನು ಮಾತ್ರ ನೋಡೋಣ.   

ಆರೆಸ್ಸೆಸ್ ಸಂಸ್ಥಾಪಕರಾದ ಹೆಡಗೆವಾರ್‌ ಅವರ, 'ನಿಜವಾದ ಆದರ್ಷ ಪುರುಷ ಯಾರಾಗಬೇಕು?' ಎನ್ನುವ ಪಠ್ಯ ಮೇಲುನೋಟಕ್ಕೆ ಉತ್ತಮ ಉದ್ದೇಶಗಳನ್ನು ಹೊಂದಿರುವ ಬರಹ ಎನ್ನಿಸಿದರೂ, ಇದರಲ್ಲಿ ಕೆಲವು ಮೂಲಭೂತ ಗೊಂದಲಗಳಿವೆ. ಜೀವನ ಮೌಲ್ಯಗಳು ಮಾತ್ರ ಆದರ್ಶವಾಗಬೇಕು ಎನ್ನುವುದನ್ನು ಜಗತ್ತಿನ ಎಲ್ಲ ಮಹಾತ್ಮರೂ ಹೇಳುತ್ತ ಬಂದಿದ್ದಾರೆ. ವ್ಯಕ್ತಿಗಳನ್ನು ಆದರ್ಶಗಳನ್ನಾಗಿ ಮಾಡಿಕೊಳ್ಳುವುದನ್ನು ಮಕ್ಕಳಿಗೆ ತಿಳಿಸಿದರೆ ವ್ಯಕ್ತಿಪೂಜೆಯ ಮೊದಲ ಪಾಠವನ್ನು ಕಲಿಸಿದಂತೆ. ಇದು ಮಕ್ಕಳ ಚಿಂತನೆಗೆ, ಪ್ರಶ್ನಿಸುವ ಪ್ರವೃತ್ತಿಗೆ, ಸೃಜನಾತ್ಮಕತೆಗೆ ಮಿತಿಯನ್ನು ಹಾಕುತ್ತದೆ. ವ್ಯಕ್ತಿ ಯಾವಾಗಲೂ ದೋಷಪೂರ್ಣನೇ. ಆದರೆ, ತನ್ನ ದೋಷಗಳ ಅರಿವಿದ್ದು, ಪ್ರಾಮಾಣಿಕವಾಗಿ, ಮುಕ್ತವಾಗಿ ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಲೇ ಅವುಗಳನ್ನು ಮೀರಲು ಪ್ರಯತ್ನಿಸುತ್ತ ಇರುವ ವ್ಯಕ್ತಿಗಳು ಹೆಚ್ಚು ಸ್ವೀಕಾರಾರ್ಹರಾಗುತ್ತಾರೆ. ಬುದ್ಧ, ಬಸವ, ಗಾಂಧಿ, ದಾಸರು, ಶರಣರು, ಅನುಭಾವಿಗಳು ಬದುಕಿದ ದಾರಿಯಿದು. ಪ್ರಕೃತಿಯ ಸೃಷ್ಟಿಯಲ್ಲಿ ದೋಷ ಎನ್ನುವುದು ಇಲ್ಲವೇ ಇಲ್ಲ, ಇರುವುದು ಭಿನ್ನತೆ ಮಾತ್ರ. ಒಂದು ಸಾಮಾಜಿಕ ವ್ಯವಸ್ಥೆಗೆ ಅಡ್ಡಗಾಲು ಹಾಕುವವರನ್ನು ತಡೆಯಲು ಕಾನೂನುಗಳಿರಬೇಕು. ದೋಷರಹಿತವಾಗಿರುವುದೇ ಆದರ್ಶವಾದರೆ ಅಸಾಧ್ಯವನ್ನು ಗುರಿಯಾಗಿಸಿಕೊಂಡು ನಾವೆಲ್ಲ ನಿರಂತರ ಹಿಂಜರಿಕೆ, ಕೀಳರಿಮೆಗಳಿಂದ ನರಳುತ್ತೇವೆ. ಹಾಗಾಗಿ, ಇಡೀ ಬರಹ ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಯಾವುದೇ ಸಹಾಯ ಮಾಡುವುದಕ್ಕಿಂತ ಅಪಾಯ ಮಾಡುವ ಸಾಧ್ಯತೆಗಳೇ ಹೆಚ್ಚು.

ಎರಡನೆಯದು, ಆರ್‌ ಗಣೇಶ್‌ ಅವರ, “ಶ್ರೇಷ್ಠ ಭಾರತೀಯ ಚಿಂತನೆಗಳು.' ಇಲ್ಲಿ ಹೇಳಿರುವುದೆಲ್ಲ ಹಿಂದೂ ಧರ್ಮದ ಚಿಂತನೆಗಳು. ಇದಕ್ಕೆ 'ಭಾರತೀಯ ಚಿಂತನೆಗಳು' ಎನ್ನುವ ಹಣೆಪಟ್ಟಿಯಡಿಯಲ್ಲಿ ಹೆಚ್ಚು ಒಪ್ಪಿತವಾಗುವಂತೆ ಮಾಡುವ ಪ್ರಯತ್ನವಿದೆ. ಲೇಖನದ ಹೂರಣವಂತೂ ಅಪಾಯಕಾರಿ ಎನ್ನುವಷ್ಟು ಅವೈಜ್ಞಾನಿಕ ಮತ್ತು ಲಿಂಗ ತಾರತಮ್ಯ ಧೋರಣೆಯನ್ನು ಮುಂದಿಡುತ್ತದೆ.

ಈ ಸುದ್ದಿ ಓದಿದ್ದೀರಾ?: ಪರಿಷ್ಕೃತ ಪಠ್ಯಪುಸ್ತಕ ವಿರೋಧಿಸಿ ಟ್ವಿಟ್ಟರ್‌ ಅಭಿಯಾನ; ಸರ್ಕಾರದ ಬೆವರಿಳಿಸಿದ ನೆಟ್ಟಿಗರು

ಗಣೇಶ್‌ ಬರೆದಿದ್ದಾರೆ, “Struggle for existence ಎಂದು ಚಾರ್ಲ್ಸ್‌ ಡಾರ್ವಿನ್‌ ಹೇಳಿರುವಂತೆ ಹೊತ್ತು ಹೊತ್ತಿನ ತುತ್ತಿಗಾಗಿ, ಅನ್ನ-ಚಿನ್ನಗಳಿಗಾಗಿ, ಹೆಣ್ಣು-ಹೆಸರುಗಳಿಗಾಗಿ ಸೆಣಸಿ ಹೆಣಗುತ್ತಿರುವ ಮಾನವ ಸಹಜವಾಗಿ ಲೋಭಿ. ಪ್ರಕೃತಿ ಅವನಿಗೆ ಹೇಳಿಕೊಟ್ಟಿದ್ದೇ ಇಂತಹ ಜಿಪುಣತನವನ್ನು… ಲೋಭಿಯಾದ ಅವನಿಗೆ ಔದಾರ್ಯದ ಹಾದಿಯನ್ನು ಅದು ಕೊಡುವ ನೆಮ್ಮದಿಯನ್ನು ತಿಳಿಸಿಕೊಡುವ ತಾಯಿ ಸಂಸ್ಕೃತಿ...”

-ಇದೆಂತಹ ಕಲಿಕೆ ಎನ್ನುವುದು ನನ್ನ ತಿಳಿವಳಿಕೆಗೆ ಮೀರಿದ್ದು. ಒಂದು ಕಡೆ ಡಾರ್ವಿನ್‌ನನ್ನು ಬಳಸಿಕೊಂಡು, ಮತ್ತೆ ಅದೇ ಉಸಿರಿನಲ್ಲಿ ಮಾನವ ಲೋಭಿ ಎನ್ನುವುದು ಎಲ್ಲಿಂದ ಬಂದ ಸಂಶೋಧನೆ ಅಥವಾ ಯಾವ ವಿಜ್ಞಾನ? ಪ್ರಕೃತಿ ಮಾನವನಿಗೆ ಜಿಪುಣತನವನ್ನು ಕಲಿಸಿದೆ ಎನ್ನುವುದಕ್ಕಿಂತ ಕ್ರೌರ್ಯ ಇನ್ನೇನಿದೆ? ವಿಫುಲವಾಗಿ ಕೊಡುವ ಪ್ರಕೃತಿ ಮಾನವನಿಗೆ ಔದಾರ್ಯವನ್ನು ಮಾತ್ರ ಕಲಿಸಲು ಸಾಧ್ಯ. ಧರ್ಮ, ಸಂಸ್ಕೃತಿಗಳೆಲ್ಲ ಹುಟ್ಟಿದ್ದು ಹೆಚ್ಚೆಂದರೆ 5,000 ವರ್ಷಗಳ ಹಿಂದಷ್ಟೇ. ಅದಕ್ಕಿಂತ ಹಿಂದಿನ ಲಕ್ಷಾಂತರ ವರ್ಷ ಜಿಪುಣ ಮಾನವ ಮಾತ್ರ ಭೂಮಿಯಲ್ಲಿದ್ದನೇ? ಅವರಿಂದ ಮನುಕುಲ ಏನನ್ನೂ ಕಲಿತೇ ಇಲ್ಲವೇ? ಧರ್ಮಗಳು ಹುಟ್ಟುವುದಕ್ಕಿಂತ ಮೊದಲು ಜೀವಿಸಿದ್ದವರನ್ನು 'ಸಂಸ್ಕೃತಿಹೀನರು' ಎಂದು ಸಾರಾಸಗಟಾಗಿ ಅವಮಾನಿಸುವುದು ಯಾವ ಸಂಸ್ಕೃತಿ?

ಇನ್ನು, “ಹೆಣ್ಣು-ಹೆಸರುಗಳಿಗಾಗಿ ಹೆಣಗುತ್ತಿರುವ ಮಾನವ...” ಎನ್ನುವ ಮಾತುಗಳಂತೂ, ಮಹಿಳೆಯರ ಮೇಲಿನ ಅತ್ಯಂತ ಹೀನ ಆಪಾದನೆ. ಇಡೀ ಬರಹ ಪುರುಷಕೇಂದ್ರಿತ. ಇದನ್ನೂ ನಮ್ಮ ಮಕ್ಕಳು ಕಲಿಯಬೇಕೇ?

ಗೋವಿಂದಾಚಾರ್ಯರ, 'ಶುಕನಾಸನ ಉಪದೇಶ' ಕೂಡ ಮೇಲುನೋಟಕ್ಕೆ ಹಣದ ಬೆನ್ನು ಹತ್ತಬಾರದು ಎಂಬ ಸಂದೇಶವನ್ನು ಹೇಳುವಂತಿದ್ದರೂ, ಲಿಂಗ ತಾರತಮ್ಯವನ್ನು ಢಾಳಾಗಿ ಎತ್ತಿ ಹಿಡಿಯುತ್ತದೆ. ಹಿಂದೂ ಮಾನ್ಯತೆಯಂತೆ ಲಕ್ಷ್ಮಿ ಹಣದ ದೇವತೆ. ಆದರೆ, ಲಕ್ಷ್ಮಿಯನ್ನೇ ಹಣಕ್ಕೆ ಸಮೀಕರಿಸಿ ಸ್ತ್ರೀಲಿಂಗ ಮಾಡುವುದು ಮೌಢ್ಯ ಮತ್ತು ಅನ್ಯಾಯ. ಹಣವನ್ನೇ ಲಕ್ಷ್ಮಿಯನ್ನಾಗಿಸಿ, ಸ್ತ್ರೀಯನ್ನಾಗಿಸಿ, 'ಚಂಚಲೆ,' 'ಕೆಟ್ಟ ನಡತೆಯುಳ್ಳವಳು' ಎನ್ನುವುದು ಕೇವಲ ಭಾಷೆಯ ದೃಷ್ಟಿಯಿಂದಲ್ಲ, ಕಲಿಕೆಯ ದೃಷ್ಟಿಯಿಂದಲೂ ಸ್ತ್ರೀಯರಿಗೆ ಮಾಡುವ ಅವಮಾನ. ದೇವರು ಎಂದುಕೊಂಡಿರುವ ಲಕ್ಷ್ಮಿಗೂ ತೋರಿಸುವ ಅಗೌರವವಿದು. ಇದನ್ನು ಒಬ್ಬ ಅಧ್ಯಾಪಕಿ ತನ್ನ ಮಕ್ಕಳಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ಹೇಗೆ ಕಲಿಸಬೇಕೆಂದು ನಿರೀಕ್ಷಿಸುತ್ತೀರಿ?

ಸರ್ಕಾರದ ಒಟ್ಟಾರೆ ಧೋರಣೆ ಮತ್ತು ಪರಿಷ್ಕರಣಾ ಸಮಿತಿಯ ಸದಸ್ಯರ ಹಿನ್ನೆಲೆಯನ್ನು ನೋಡಿದರೆ, ಧಾರ್ಮಿಕ ಅಂಶಗಳನ್ನು, ಅದರಲ್ಲೂ ಹೆಚ್ಚಾಗಿ ಹಿಂದೂ ಧರ್ಮದ ಚಿಂತನೆಗಳನ್ನು ಪಠ್ಯಗಳಲ್ಲಿ ಸೇರಿಸುವುದು ಇಲ್ಲಿನ ಉದ್ದೇಶ ಎನ್ನುವುದು ಎಲ್ಲರಿಗೂ ತಿಳಿಯುವಂತಹುದು. ಧರ್ಮದ ವಿಚಾರಗಳನ್ನು ಪಠ್ಯಗಳಲ್ಲಿ ಸೇರಿಸಬಾರದೆಂದು ಎಲ್ಲಿ ಹೇಳಲಾಗಿದೆ? ಕಲಿಸುವುದಾದರೆ ನೇರವಾಗಿ ಧಾರ್ಮಿಕ ಅಂಶಗಳನ್ನು ಮಾತ್ರ ಏಕೆ ಕಲಿಸಬಾರದು? ಅವುಗಳ ವ್ಯಾಖ್ಯೆ, ವಿವರಣೆಗಳಲ್ಲಿ ವ್ಯತ್ಯಾಸ, ಭಿನ್ನಾಭಿಪ್ರಾಯಗಳಿರುವ ಸಾಧ್ಯತೆ ಇರುವುದರಿಂದ ವಿವಾದಗಳಾಗುತ್ತದೆ. ಬದಲಾಗಿ, ಎಲ್ಲ ಧರ್ಮದ ಮೂಲ ಪಠ್ಯದ ಭಾಗಗಳನ್ನು ಮಕ್ಕಳ ಮುಂದಿಡೋಣ. ಮಕ್ಕಳ ತಿಳಿವಳಿಕೆಗೆ ದಕ್ಕಿದಂತೆ ಅವರು ಅರ್ಥ ಮಾಡಿಕೊಳ್ಳಲಿ. ಇಂತಹ ಗೈರತ್ತನ್ನು ಸರ್ಕಾರಗಳು ತೋರಿಸದೆ, ಎಲ್ಲವನ್ನೂ ಮುಸುಕಿನಲ್ಲಿ ಮಾಡುವುದೇ ದೊಡ್ಡ ಅಪಾಯ. ಹೀಗೆ ಮುಸುಕಿನಲ್ಲಿ ಮಾಡುವುದರಿಂದ ಅವರು ನಿಜವಾಗಿ ಹಿಂದೂ ಧರ್ಮಕ್ಕೂ ಅನ್ಯಾಯ ಮಾಡುತ್ತಿರುತ್ತಾರೆ. ಹಿಂದೂ ಧರ್ಮದ ಚಿಂತನೆಗಳಿಗೆ 'ಭಾರತೀಯತೆ'ಯ ಮುಖವಾಡ ಹಾಕುವುದು ಯಾವ ಪುರುಷಾರ್ಥಕ್ಕೆ?

ನಿಮಗೆ ಏನು ಅನ್ನಿಸ್ತು?
12 ವೋಟ್