ತೋಳ ಬಂತು ತೋಳ-3 | ಕಸ್ತೂರಿ ರಂಗನ್ ವರದಿ ವಿಷಯವಲ್ಲ; ಇಲ್ಲಿರುವುದು ನಂಬಿಕೆಯ ಪ್ರಶ್ನೆ!

ಒಕ್ಕೆಲೆಬ್ಬಿಸುವುದು, ಮನೆ ಕಟ್ಟಲು ಅವಕಾಶವಿಲ್ಲ ಎಂಬಂತಹ ಭೀತಿಯ ಜೊತೆಗೆ ಮಲೆನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ವ್ಯಕ್ತವಾಗುತ್ತಿರುವ ವಿರೋಧಕ್ಕೆ ಮೂಲ ಕಾರಣ; ಭೂಮಿ ಮಂಜೂರಾತಿ ಕುರಿತ ಕಠಿಣ ಕಾನೂನು. ಮುಖ್ಯವಾಗಿ ಭೂ ಮಂಜೂರಾತಿ ವಿಷಯದಲ್ಲಿ ಸರ್ಕಾರ ಮತ್ತು ಜನರ ನಡುವಿನ ಅಪನಂಬಿಕೆಯ ವಿಷಯ ಕೂಡ ಈ ಮಟ್ಟದ ವಿರೋಧಕ್ಕೆ ಅಸಲೀ ಕಾರಣ.
westernghats

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಡಾ ಕಸ್ತೂರಿ ರಂಗನ್‌ ಸಮಿತಿ ವರದಿಯ ಕುರಿತು ಮುಖ್ಯವಾಗಿ ಕೇಳಿಬರುತ್ತಿರುವ ವಿರೋಧ, ಆ ವರದಿ ಜಾರಿಗೆ ಬಂದರೆ ಈಗಾಗಲೇ ಪರಿಸರ ಸೂಕ್ಷ್ಮ ಪ್ರದೇಶ(ESA) ಎಂದು ಘೋಷಿಸಿರುವ ಹಳ್ಳಿಗಳಿಂದ ಜನರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂಬುದು. 

ಮತ್ತೊಂದು ಪ್ರಮುಖ ಆತಂಕ; ವರದಿ ಜಾರಿಗೆ ಬಂದರೆ ಯಾರಿಗೂ ಬಗರ್‌ ಹುಕುಂ, ಅರಣ್ಯ ಹಕ್ಕು ಕಾಯ್ದೆ, ಇನಾಂ ಭೂಮಿ, ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ಭೂಮಿ ಸೇರಿದಂತೆ ಯಾವುದೇ ಭೂಮಿಯ ಮಂಜೂರಾತಿ ಸಾಧ್ಯವಿಲ್ಲ ಎಂಬುದು. 

ಪರಿಸರ ಸೂಕ್ಷ್ಮ ಪ್ರದೇಶ ಕುರಿತ 2014ರ ಮೊಟ್ಟಮೊದಲ ಕರಡು ಅಧಿಸೂಚನೆ ಮತ್ತು ಆ ಬಳಿಕ ಕಳೆದ ವಾರದ ಐದನೇ ಕರಡು ಅಧಿಸೂಚನೆಯವರೆಗೆ ಎಲ್ಲಾ ಅಧಿಸೂಚನೆಗಳಲ್ಲಿಯೂ ಅಧಿಸೂಚಿತ ಪ್ರದೇಶದಿಂದ ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ. “ಪರಿಸರ ಸೂಕ್ಷ್ಮ ಪ್ರದೇಶ ಎಂದು ಅಧಿಸೂಚನೆಯಲ್ಲಿ, ಘೋಷಿಸಿತ ಪ್ರದೇಶದ ವ್ಯಾಪ್ತಿಯೊಳಗೆ ಹಾಲಿ ಇರುವ ಜನರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದು ಅಥವಾ ಎತ್ತಂಗಡಿ ಮಾಡುವುದಿಲ್ಲ. ಹಾಗೇ ಆ ಪ್ರದೇಶದ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಮಾಡುವುದಿಲ್ಲ” ಎಂದು ಕಳೆದ ವಾರದ ಮರು ಅಧಿಸೂಚನೆಯಲ್ಲೂ ಸ್ಪಷ್ಟವಾಗಿ ನಮೂದಿಸಲಾಗಿದೆ.

ಯಾವುದಕ್ಕೆ ನಿರ್ಬಂಧ ಎಂದು ಅಧಿಸೂಚನೆ ಹೇಳಿದೆ?
ಜನರನ್ನು ಒಕ್ಕಲೆಬ್ಬಿಸುವುದಿಲ್ಲ ಎಂಬ ವಿಷಯವನ್ನು, ಅಧಿಸೂಚನೆಯ ಕುರಿತು 2015ರ ಜುಲೈ 7 ಮತ್ತು ಆಗಸ್ಟ್‌ 3ರಂದು ದೆಹಲಿಯಲ್ಲಿ ನಡೆದ ಪಶ್ಚಿಮಘಟ್ಟ ವ್ಯಾಪ್ತಿಯ ರಾಜ್ಯಗಳ ಅರಣ್ಯ ಸಚಿವರು ಮತ್ತು ಸಂಸದರ ಪ್ರತ್ಯೇಕ ಸಭೆಗಳಲ್ಲಿಯೇ ಸ್ಪಷ್ಟಪಡಿಸಲಾಗಿದೆ ಎಂದೂ ಹೇಳಲಾಗಿದೆ.

ಹಾಗೇ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ 2013ರ ಏಪ್ರಿಲ್‌ 17ಕ್ಕೆ ಮುಂಚೆ ಅನುಮತಿ ಪಡೆದಿರುವ ಗಣಿಗಾರಿಕೆ, ಶಾಖೋತ್ಪನ್ನ ವಿದ್ಯುತ್‌ ಘಟಕ, ಅಪಾಯಕಾರಿ ಕೆಂಪು ವರ್ಗ(ರೆಡ್‌ ಕೆಟಗರಿ)ದ ಎಲ್ಲಾ ಉದ್ದಿಮೆ, ಕೈಗಾರಿಕೆಗಳು, 20 ಸಾವಿರ ಚದರ ಮೀಟರ್‌ಗಿಂತ ಅಧಿಕ ವಿಸ್ತೀರ್ಣದ ಕಟ್ಟಡಗಳು, 50 ಹೆಕ್ಟೇರ್‌ಗಿಂತ ಹೆಚ್ಚಿನ ವ್ಯಾಪ್ತಿಯ ಭೂ ಅಭಿವೃದ್ಧಿ(ಟೌನ್‌ ಶಿಪ್) ಯೋಜನೆಗಳಿಗೆ ಅವಕಾಶವಿಲ್ಲ. ಆದರೆ, ನಿಗದಿತ ದಿನಾಂಕಕ್ಕಿಂತ ಹಿಂದೆಯೇ ಅನುಮತಿ ಪಡೆದು ಈಗಾಗಲೇ ಸ್ಥಾಪಿತವಾಗಿರುವ ಈ ಚಟುವಟಿಕೆಗಳಿಗಾಗಲೀ, ಅವುಗಳ ವಿಸ್ತರಣೆ, ದುರಸ್ತಿ ಚಟುವಟಿಕೆಗಳಿಗೆ ಯಾವ ನಿರ್ಬಂಧವೂ ಇಲ್ಲ. 

ಹಾಗೇ ಈಗಾಗಲೇ ಇರುವ ಮತ್ತು ಮುಂದೆ ಬರಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಜೊತೆಗೆ ಭೂಮಿಯ ಹಕ್ಕಿನ ಬದಲಾವಣೆಗೆ ಕಸ್ತೂರಿ ರಂಗನ್‌ ವರದಿ ಜಾರಿಯಿಂದಾಗಿ ಯಾವುದೇ ನಿರ್ಬಂಧ ಜಾರಿಯಾಗುವುದಿಲ್ಲ. 

ಅರಣ್ಯ ಹಕ್ಕು, ಬಗರ್ ಹುಕುಂ ಕಾನೂನುಗಳ ಗತಿ ಏನು?
ಇನ್ನು ಅರಣ್ಯ ಹಕ್ಕು ಕಾಯ್ದೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಭೂಮಿ ಮಂಜೂರಾತಿಗೆ ಪೂರ್ವ ಅನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ಯೋಜನೆ ಅಥವಾ ಚಟುವಟಿಕೆಗಳಿಗೆ ಗ್ರಾಮ ಸಭೆಯ ಅನುಮತಿ ಕೂಡ ಅಗತ್ಯ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಈ ಸುದ್ದಿ ಓದಿದ್ದೀರಾ?

ತೋಳ ಬಂತು ತೋಳ- 1| ಕಸ್ತೂರಿ ರಂಗನ್‌ ವರದಿ ಹೇಳಿದ್ದೇನು? ಘೋಷಿತ ಪರಿಸರ ಸೂಕ್ಷ್ಮ ಪ್ರದೇಶವೆಷ್ಟು?

ಇನ್ನುಳಿದಂತೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಬಗೆಯ ಭೂ ಮಂಜೂರಾತಿಗೆ ಅವಕಾಶವಿಲ್ಲ. ಒಂದು ವೇಳೆ ಸರ್ಕಾರಿ ಯೋಜನೆಗಳಿಗಾಗಿ ಅರಣ್ಯೇತರ ಉದ್ದೇಶಕ್ಕೆ ಭೂಮಿ ಮಂಜೂರಾತಿ ಆಗಬೇಕಿದ್ದರೆ, ಆ ಕುರಿತ ಅರ್ಜಿ ಹಂತದಿಂದ ಮಂಜೂರಾತಿ ಹಂತದವರೆಗಿನ ಎಲ್ಲಾ ಮಾಹಿತಿಯನ್ನು ಆಯಾ ರಾಜ್ಯ ಸರ್ಕಾರಳ ಪರಿಸರ ಮತ್ತು ಅರಣ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಅದು ಎಲ್ಲರಿಗೂ ಮುಕ್ತವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. 

ಮಲೆನಾಡಿನ ರೈತಾಪಿ ವರ್ಗದ ಆತಂಕಕ್ಕೆ ಮೂಲ ಕಾರಣವೇನು?
ಒಕ್ಕೆಲೆಬ್ಬಿಸುವುದು, ಮನೆ ಕಟ್ಟಲು ಅವಕಾಶವಿಲ್ಲ ಎಂಬಂತಹ ಭೀತಿಯ ಜೊತೆಗೆ ಮಲೆನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ವ್ಯಕ್ತವಾಗುತ್ತಿರುವ ವಿರೋಧಕ್ಕೆ ಮೂಲ ಕಾರಣ; ಭೂಮಿ ಮಂಜೂರಾತಿ ಕುರಿತ ಕಠಿಣ ಕಾನೂನು. ಅರಣ್ಯ ಹಕ್ಕು ಕಾಯ್ದೆಯಡಿ ಕೂಡ ಭೂಮಿ ಮಂಜೂರಾತಿಗೆ ರಾಜ್ಯ ಪರಿಸರ ಸೂಕ್ಷ್ಮ ಪ್ರದೇಶ ನಿರ್ವಹಣಾ ಪ್ರಾಧಿಕಾರದಂತಹ ಪ್ರತ್ಯೇಕ ವ್ಯವಸ್ಥೆಯ ಪೂರ್ವಾನುಮತಿ ಪಡೆಯಬೇಕಿದೆ. ಅದೂ ಕೂಡ ಆ ಕುರಿತ ನಿಬಂಧನೆಯಲ್ಲಿ ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಾಂಪ್ರದಾಯಿಕ ಅರಣ್ಯ ಹಕ್ಕಿನ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆಯೇ ವಿನಃ ಇನ್ನುಳಿದ ಸಮುದಾಯಗಳ ಅರಣ್ಯವಾಸಿಗಳು ಮತ್ತು ಅರಣ್ಯದಂಚಿನ ಜನಸಮುದಾಯಗಳ ಅರಣ್ಯ ಹಕ್ಕುಗಳ ಬಗ್ಗೆ ಯಾವ ಪ್ರಸ್ತಾಪವನ್ನೂ ಮಾಡಿಲ್ಲ.

ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಮಡಿಕೇರಿ ಮತ್ತಿತರ ಜಿಲ್ಲೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅರಣ್ಯ ಹಕ್ಕು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಸುಮಾರು 80 ಸಾವಿರ ಅರ್ಜಿಗಳು ಅರಣ್ಯ ಹಕ್ಕು ಕಾಯ್ದೆಯಡಿ ಇತ್ಯರ್ಥಕ್ಕೆ ಬಾಕಿ ಇವೆ. ಕಳೆದ 15 ವರ್ಷಗಳಿಂದ ಆ ಅರ್ಜಿಗಳ ಕುರಿತು ಅಧಿಕಾರಶಾಹಿ ಮತ್ತು ಜನಪ್ರತಿನಿಧಿಗಳು ಜಾಣಕುರುಡು ನೀತಿ ಅನುಸರಿಸಿದ್ದಾರೆ. ಹೀಗೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಮಂಜೂರಾತಿಗೆ ಕಾಯುತ್ತಿರುವವರಲ್ಲಿ ದೊಡ್ಡ ಸಂಖ್ಯೆಯ ರೈತರು ಬೇರೆಬೇರೆ ಮುಳುಗಡೆ ಸಂತ್ರಸ್ತರು ಎಂಬುದು ಗಮನಾರ್ಹ.

ಸಾಗುವಳಿದಾರರ ಆತಂಕಕ್ಕೆ ಕಾರಣವೇನು?
ಇನ್ನು ಬಗರ್‌ ಹುಕುಂ ಅರ್ಜಿದಾರರಂತೂ ಕಸ್ತೂರಿ ರಂಗನ್‌ ವರದಿ ಜಾರಿಗೆ ಬಂದರೆ ತಮ್ಮ ಸಾಗುವಳಿ ಭೂಮಿ ತಮ್ಮ ಕೈಗೆ ಸಿಗುವುದೇ ಇಲ್ಲ ಎಂಬ ಆತಂಕದಲ್ಲಿದ್ದಾರೆ.

"ನೋಡಿ ನಾವು ಮೂಲತಃ ಕಸ್ತೂರಿ ರಂಗನ್‌ ವರದಿ ಜಾರಿಯ ವಿರುದ್ಧವಿಲ್ಲ. ನಮಗೂ ನಮ್ಮ ಕಾಡು, ಪರಿಸರ, ನದಿ ಉಳಿಯಬೇಕು ಎಂಬ ಕಾಳಜಿ ಇದೆ. ಅದಕ್ಕೆ ಈಗ ಬೇರೆಬೇರೆ ಕಾರಣಕ್ಕೆ ಎದುರಾಗಿರುವ ಆತಂಕದ ಅರಿವೂ ಇದೆ. ಆದರೆ, ಸರ್ಕಾರದ ವಿಳಂಬ ನೀತಿ, ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವ ನೀತಿಗಳಿಂದಾಗಿ ಮಲೆನಾಡಿನ ಜನ ಇಂದು ಬದುಕುವುದೇ ದುಸ್ತರವಾಗಿದೆ. ಜನರ ಮನೆ ಮುಂದೆ ದಿನಬೆಳಗಾಗುವುದರಲ್ಲಿ ಅರಣ್ಯ ಇಲಾಖೆ ಟ್ರೆಂಚ್‌ ಹೊಡೆಯಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಯಾರನ್ನು ನಂಬುವುದು? ಯಾರನ್ನು ಬಿಡುವುದು? ಹಾಗಾಗಿ ಮಲೆನಾಡಿನ ಸಾಗುವಳಿದಾರರು, ಅರಣ್ಯವಾಸಿಗಳು, ವಿವಿಧ ಯೋಜನೆ ಸಂತ್ರಸ್ತರ ಹಕ್ಕುಗಳನ್ನು ಮಾನ್ಯಮಾಡದ ಹೊರತು ಯಾವುದೇ ಹೊಸ ಅಧಿಸೂಚನೆಗೂ ನಾವು ಬಿಡುವುದಿಲ್ಲ."
-    ಬಿ ಎ ರಮೇಶ್‌ ಹೆಗ್ಡೆ, ಜಿಲ್ಲಾ ಅಡಿಕೆ ಬೆಳೆಗಾರರ ಸಂಘ, ಶಿವಮೊಗ್ಗ.

ಅದರಲ್ಲೂ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಎರಡು ಲಕ್ಷಕ್ಕೂ ಅಧಿಕ ಎಕರೆ ಕಂದಾಯ ಭೂಮಿಯನ್ನು 2011-12ರಲ್ಲಿ ಆ ಭೂಮಿಯ ಅನುಭೋಗದಾರರಿಗೆ ಯಾವ ತಿಳಿವಳಿಕೆ, ಸೂಚನೆಯನ್ನೂ ನೀಡದೆ ಏಕಾಏಕಿ ಅರಣ್ಯ ಭೂಮಿ ಎಂದು ದಾಖಲೆ ತಿದ್ದುಪಡಿ ಮಾಡಿದ ʼಅರಣ್ಯ ಭೂಮಿ ಇಂಡೀಕರಣʼದಲ್ಲಿ ಕನಿಷ್ಟ ಮೂರು ಜಿಲ್ಲೆಗಳ 50 ಸಾವಿರ ಸಾಗುವಳಿದಾರರು ಶಾಶ್ವತವಾಗಿ ಭೂಮಿ ಹೊಂದುವ ಅವಕಾಶ ಕಳೆದುಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಆ ಬಾರಿ 1.80 ಲಕ್ಷ ಎಕರೆ ಭೂಮಿಯನ್ನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಹಸ್ತಾಂತರಿಸಿ ದಾಖಲೆ ತಿದ್ದುಪಡಿ ಮಾಡಲಾಗಿದೆ. ಆ ಪೈಕಿ ಸುಮಾರು 1.50 ಲಕ್ಷ ಎಕರೆ ಭೂಮಿ ಬಗರ್‌ ಹುಕುಂ ಸಾಗುವಳಿ ನೆಲ. ಮನೆ, ತೋಟ, ಜಮೀನು, ಕೊಟ್ಟಿಗೆ, ಶಾಲೆ, ಆಸ್ಪತ್ರೆ, ಕೆರೆಕಟ್ಟೆಗಳಿರುವ ಭೂಮಿಯನ್ನು ಇಡಿ-ಇಡಿಯಾಗಿ ಸರ್ವೆನಂಬರ್‌ ವಾರು ಯಾವುದೇ ಸ್ಥಳಪರಿಶೀಲನೆ ಮಾಡದೆ, ಹಕ್ಕುಪತ್ರ ನೀಡಿರುವುದನ್ನು ಕೂಡ ಪರಿಶೀಲಿಸದೆ ರಾತ್ರೋರಾತ್ರಿ ದಾಖಲೆ ತಿದ್ದುಪಡಿ ಮಾಡಲಾಗಿದೆ. 

ಹೀಗೆ ಸರ್ಕಾರದ ʼರಹಸ್ಯ ಕಾರ್ಯಾಚರಣೆʼಯಲ್ಲಿ ಭೂಮಿ ಕಳೆದುಕೊಂಡವರಲ್ಲಿ ಬಹುತೇಕರು ಲಿಂಗನಮಕ್ಕಿ ಸೇರಿದಂತೆ ಶರಾವತಿ ಕಣಿವೆಯ ವಿವಿಧ ಜಲಾಶಯಗಳ ಮುಳುಗಡೆ ಸಂತ್ರಸ್ತ ಹಿಂದುಳಿದ ಮತ್ತು ದಲಿತ ಸಮುದಾಯದವರು ಎಂಬುದು ಗಮನಾರ್ಹ.

ಕಸ್ತೂರಿ ರಂಗನ್‌ ವರದಿಯಲ್ಲಿ ಕೃಷಿ ಬೆಳೆಗಳಿಗೆ ರಾಸಾಯನಿಕ ಕೀಟನಾಶಕ ಮತ್ತು ಗೊಬ್ಬರ ಬಳಕೆಗೆ ಅವಕಾಶವಿಲ್ಲ. ಜೊತೆಗೆ ಜಮೀನು ಮಾರಾಟಕ್ಕೆ ಬೆಲೆ ಕಡಿಮೆಯಾಗಲಿದೆ, ಅಥವಾ ಭೂಮಿ ಕೊಳ್ಳಲು ಯಾರೂ ಮುಂದೆ ಬರುವುದಿಲ್ಲ ಎಂಬ ಆತಂಕವಿದೆ. ಹಾಗಾಗಿಯೇ ಆತಂಕಗೊಂಡಿದ್ದಾರೆ. ಇಂತಹ ತಪ್ಪು ಕಲ್ಪನೆಗಳಿಗೆ, ಆತಂಕಗಳಿಗೆ ಕಾರಣ ಆ ವರದಿಯನ್ನು ಸರ್ಕಾರ ಜನರ ಭಾಷೆಯಲ್ಲಿ ಅವರಿಗೆ ಅರ್ಥವಾಗುವಂತೆ ನೀಡದೇ ಇರುವುದು. ಜನರ ಆತಂಕವನ್ನು ರಾಜಕಾರಣಿಗಳು ಮತಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ. 
-    ಕಿಶೋರ್‌ ಕುಮಾರ್‌, ಮಲೆನಾಡು ಜನಪರ ಹೋರಾಟ ಸಮಿತಿ, ಹಾಸನ.

ಶರಾವತಿ ಸಂತ್ರಸ್ತರ ಆತಂಕಕ್ಕೆ ಪರಿಹಾರವೇನು?
ಇನ್ನು ಶರಾವತಿ ನದಿಯ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣವಾಗಿ 75 ವರ್ಷ ಸಮೀಪಿಸಿದರೂ ಆ ಮುಳುಗಡೆ ಸಂತ್ರಸ್ತರಲ್ಲಿ ಸಾವಿರಾರು ಮಂದಿಗೆ ಇಂದಿಗೂ ಕಾನೂನುಬದ್ಧ ಪುನರ್ವಸತಿ ಆಗಿಲ್ಲ. ಅವರಿಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಮೀಸಲಿಟ್ಟಿದ್ದ ಮೂರು ಸಾವಿರ ಎಕರೆ ಭೂಮಿಯನ್ನು ಅವರಿಗೆ ಹಂಚಲು ಕೂಡ ಅರಣ್ಯ ಕಾಯ್ದೆಗಳು ಈಗ ದೊಡ್ಡ ಅಡ್ಡಿಯಾಗಿವೆ. ಹಾಗಾಗಿ ಇಂದಿಗೂ ಅವರು ಹೋರಾಟ ನಡೆಸುತ್ತಲೇ ಇದ್ದಾರೆ.

ಈ ಸುದ್ದಿ ಓದಿದ್ದೀರಾ? ತೋಳ ಬಂತು ತೋಳ-2 | ಅಷ್ಟಕ್ಕೂ ಕಸ್ತೂರಿ ರಂಗನ್‌ ಹೆಸರು ಕೇಳಿದರೆ ಮಲೆನಾಡಿನ ಜನ ಬೆಚ್ಚಿಬೀಳೋದು ಯಾಕೆ?

ಕಾಯ್ದೆ, ಕಾನೂನುಗಳ ಹೊರತಾಗಿಯೂ ಮಲೆನಾಡಿನ ಬೇರೆ ಬೇರೆ ಯೋಜನೆಗಳ ಸಂತ್ರಸ್ತರಿಗೆ ಇಂದಿಗೂ ನ್ಯಾಯಬದ್ಧವಾಗಿ ಸಿಗಬೇಕಾದ ಪುನರ್ವಸತಿ, ಪರ್ಯಾಯ ಭೂಮಿ, ಪರ್ಯಾಯ ನೆಲೆಯ ಅವಕಾಶಗಳನ್ನು ಸರ್ಕಾರ ಕದ್ದುಮುಚ್ಚಿ ಕಿತ್ತುಕೊಳ್ಳುತ್ತಲೇ ಇದೆ ಎಂಬುದು ಮಲೆನಾಡಿನ ರೈತಾಪಿ ವರ್ಗ ಸರ್ಕಾರಿ ವ್ಯವಸ್ಥೆಯನ್ನೇ ನಂಬದ ಸ್ಥಿತಿಗೆ ತಳ್ಳಿದೆ.

ಇಂತಹ ಅಪನಂಬಿಕೆ ಮತ್ತು ಆತಂಕದ ನಡುವೆ ಇದೀಗ ಮತ್ತೆ ಕಸ್ತೂರಿ ರಂಗನ್‌ ವರದಿ ಜಾರಿಯ ಕಾರ್ಮೋಡ ಕವಿದಿದೆ. ವಾಸ್ತವವಾಗಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಕೃಷಿಗೆ, ಜನವಸತಿಗೆ ಯಾವುದೇ ಅಡ್ಡಿ-ಆತಂಕವಿಲ್ಲ ಎಂದು ಅಧಿಕೃತ ಅಧಿಸೂಚನೆ ಹೇಳಿದ್ದರೂ, ಜನಸಾಮಾನ್ಯರ ಆತಂಕ ದೂರವಾಗಿಲ್ಲ. ಅದಕ್ಕೆ ಕಾರಣ, ಮಲೆನಾಡಿನ ಜನರ ಮೇಲೆ ನಡೆದ ಸಾಲು ಸಾಲು ಎತ್ತಂಗಡಿ ಯೋಜನೆಗಳ ಹೇರಿಕೆ ಮತ್ತು ʼಒಂದು ಕೈಯಲ್ಲಿ ಕೊಟ್ಟಂತೆ ಮಾಡಿ ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿರುವʼ ಸರ್ಕಾರದ ನೀತಿಗಳು!

ನಿಮಗೆ ಏನು ಅನ್ನಿಸ್ತು?
3 ವೋಟ್