ತೋಳ ಬಂತು ತೋಳ- 4 | ಜನಪ್ರತಿನಿಧಿಗಳ ನೈಜ ಕಾಳಜಿ ಮಲೆನಾಡಿನ ಬದುಕೇ? ಕ್ವಾರಿ ಲಾಬಿಯೇ?

ಮಲೆನಾಡಿನ ದಟ್ಟ ಅರಣ್ಯ ಪ್ರದೇಶ, ನದಿ ಕಣಿವೆಗಳಲ್ಲಿ ಈ ವರದಿಗಳ ಬಗ್ಗೆ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳಿಗೂ, ತೀರ್ಥಹಳ್ಳಿ, ಶಿವಮೊಗ್ಗ, ಹೊಸನಗರ, ಸಾಗರದ ಮರಳು ಮತ್ತು ಕ್ವಾರಿ ಚಟುವಟಿಕೆಗಳು ಬಿರುಸಾಗಿರುವ ಪ್ರದೇಶಗಳಲ್ಲಿ ಕೇಳಿಬರುತ್ತಿರುವ ಕೂಗಿಗೂ ವ್ಯತ್ಯಾಸವಿದೆ!
kasturirangan report

ಡಾ. ಕಸ್ತೂರಿ ರಂಗನ್ ವರದಿ ಜಾರಿಗೆ ಮಲೆನಾಡಿನಲ್ಲಿ ಪ್ರಬಲ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ಆ ಭಾಗದ ಶಾಸಕರು, ಸಂಸದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಹೋಗಿ ಕೇಂದ್ರ ಸಚಿವರನ್ನು ಭೇಟಿಯಾಗಿ, ವರದಿ ಜಾರಿ ಮಾಡದಂತೆ ಒತ್ತಡ ಹೇರಿದ್ದಾರೆ.

ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾದ ನಿಯೋಗ, ವರದಿಯ ಜಾರಿಯಿಂದಾಗಿ ಮಲೆನಾಡಿನ ಜನಜೀವನದ ಮೇಲೆ ಆಗುವ ಪರಿಣಾಮಗಳನ್ನು ವಿವರಿಸಿದೆ. ಜನರ ಬದುಕಿನ ಮೇಲೆ ವರದಿಯ ಕಠಿಣ ಶಿಫಾರಸುಗಳು ವ್ಯತಿರಿಕ್ತ ಪರಿಣಾಮ ಬೀರಲಿವೆ. ಈಗಾಗಲೇ ಹಲವು ಮುಳುಗಡೆ ಯೋಜನೆಗಳು, ಅಭಯಾರಣ್ಯಗಳಿಂದಾಗಿ ಮಲೆನಾಡಿನ ಜನ ಸಂಕಷ್ಟದಲ್ಲಿದ್ದಾರೆ. ಜೊತೆಗೆ ಈ ವರದಿಯನ್ನೂ ಅನುಷ್ಠಾನ ಮಾಡಿದರೆ ಜನ ಬದುಕುವುದೇ ದುಸ್ತರವಾಗಲಿದೆ ಎಂಬುದನ್ನು ಸಚಿವರಿಗೆ ಮನವರಿಕೆ ಮಾಡಿದೆ.

ಆ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ವರದಿ ಕುರಿತು ಇತ್ತೀಚಿನ ಅಧಿಸೂಚನೆಯನ್ನು ತಡೆಹಿಡಿಯುವುದಾಗಿ ತಿಳಿಸಿದ್ದಾರೆ ಎಂದು ನಿಯೋಗದಲ್ಲಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕೇಂದ್ರ ಪರಿಸರ ಸಚಿವಾಲಯದ ಮಾಜಿ ಕಾರ್ಯದರ್ಶಿ ಸಂಜೀವ್ ಕುಮಾರ್ ನೇತೃತ್ವದಲ್ಲಿ ಡಾ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳ ಅನುಷ್ಠಾನದ ಸಾಧಕ-ಬಾಧಕ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿಯೊಂದನ್ನು ಈಗಾಗಲೇ ನೇಮಿಸಲಾಗಿದೆ. ಆ ಸಮಿತಿ ಮುಂದಿನ ಒಂದು ವರ್ಷದಲ್ಲಿ ವರದಿ ಸಲ್ಲಿಸಲಿದೆ. ಕರ್ನಾಟಕವೂ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಸಂಚರಿಸಿ, ಜನರ ಅಹವಾಲು ಕೇಳಿ, ಸಂವಾದ ನಡೆಸಿ ಆ ಸಮಿತಿ ವರದಿ ಸಲ್ಲಿಸಲಿದೆ. ಆ ಸಮಿತಿಯ ವರದಿಯ ಮೇಲೆ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಸಚಿವ ಆರಗ ಹೇಳಿದ್ದಾರೆ.

ಆ ಮೂಲಕ ಕಳೆದ ವಾರ ತಾನೇ ಈ ಕುರಿತು ದೆಹಲಿಗೆ ನಿಯೋಗ ಹೋಗುವ ಮಾತು ಕೊಟ್ಟಿದ್ದ ಸಚಿವ ಆರಗ, ತಮ್ಮ ಮಾತು ಉಳಿಸಿಕೊಂಡಿದ್ದಾರೆ.

ಆದರೆ, ರಾಷ್ಟ್ರೀಯ ಹಸಿರು ಪೀಠ ಮತ್ತು ಸುಪ್ರೀಂಕೋರ್ಟ್‍ಗಳು ಕಸ್ತೂರಿ ರಂಗನ್ ವರದಿ ಜಾರಿಯ ವಿಷಯದಲ್ಲಿ ಸರ್ಕಾರದ ಕುತ್ತಿಗೆಯ ಮೇಲೆ ಕೂತಿರುವಾಗ, ಮೇಲಿಂದ ಮೇಲೆ ಗಡುವು ನೀಡುತ್ತಾ, ವರದಿ ಜಾರಿ ಮಾಡದೇ ಇದ್ದಲ್ಲಿ, ಹೊರಡಿಸಿರುವ ಕರಡು ಅಧಿಸೂಚನೆಯನ್ನೆ ಅಂತಿಮ ಅಧಿಸೂಚನೆ ಎಂದು ಘೋಷಿಸಿ, ಆ ಕ್ಷಣದಿಂದಲೇ ವರದಿ ಜಾರಿ ಎಂದು ತಾನೇ ಅಧಿಕೃತವಾಗಿ ಘೋಷಿಸುವುದಾಗಿ ಹೇಳುತ್ತಿರುವಾಗ ಕೇಂದ್ರ ಸಚಿವರ ಭರವಸೆ ಎಷ್ಟರಮಟ್ಟಿಗೆ ನಿಜವಾಗುವುದು? ಎಂಬುದು ಪ್ರಶ್ನೆ.

ಈ ನಡುವೆ, ಜನಪ್ರತಿನಿಧಿಗಳ ಈ ಕಾಳಜಿಯ ಹಿಂದೆ ನಿಜಕ್ಕೂ ಮಲೆನಾಡಿನ ರೈತರು, ಕಾಡಿನಂಚಿನ ಜನರ ಹಿತ ಕಾಯುವ ಉದ್ದೇಶವಿದೆಯೇ? ಅಥವಾ ಮಲೆನಾಡಿನ ಪರಿಸರ ಮತ್ತು ಜನಜೀವನ ಎರಡಕ್ಕೂ ಸಂಚಕಾರ ತಂದಿರುವ ಕಲ್ಲು, ಮರಳು ಗಣಿಗಾರಿಕೆ, ಪ್ರಭಾವಿಗಳ ಅರಣ್ಯ ಒತ್ತುವರಿ ಮತ್ತು ರೆಸಾರ್ಟ್, ಹೋಂ ಸ್ಟೇ, ರಿಯಲ್ ಎಸ್ಟೇಟ್ ವಿಸ್ತರಣೆಯಂತಹ ಪ್ರಬಲ ಲಾಬಿಗಳ ಹಿತ ಕಾಯುವ ಉದ್ದೇಶವಿದೆಯೇ ಎಂಬ ಪ್ರಶ್ನೆಯೂ ಇದೆ.

“ಕಸ್ತೂರಿ ರಂಗನ್ ವರದಿ ಮತ್ತು ಆ ಹಿಂದಿನ ಡಾ ಮಾಧವ್ ಗಾಡ್ಗೀಳ್ ವರದಿಯ ನಿಜವಾದ ಉದ್ದೇಶವೇ ಮಲೆನಾಡು ಜನರನ್ನು ಮತ್ತು ಅಲ್ಲಿನ ಪರಿಸರವನ್ನು ಉಳಿಸುವುದಾಗಿತ್ತು. ಸರಣಿ ಭೂಕುಸಿತ, ನೆರೆ-ಪ್ರವಾಹದಂತಹ ಅವಘಡಗಳಿಂದ ರಕ್ಷಣೆ ಎಂದರೆ ಕೇವಲ ಕಾಡು, ಕಾಡುಪ್ರಾಣಿಗಳಿಗೆ ಮಾತ್ರ ರಕ್ಷಣೆಯೆ? ಜನರ ರಕ್ಷಣೆ, ಜನರ ಕೃಷಿ, ಬದುಕಿನ ರಕ್ಷಣೆಯಾಗುವುದಿಲ್ಲವೆ?”

- ಜೋಸೆಫ್ ಹೂವರ್, ಪರಿಸರವಾದಿ ಹಾಗೂ ಪತ್ರಕರ್ತ

ಏಕೆಂದರೆ, ಕಳೆದ ಒಂದು ದಶಕದಲ್ಲಿ ಮಲೆನಾಡಿನಾದ್ಯಂತ ಕಲ್ಲು ಮತ್ತು ಮರಳು ಗಣಿಗಾರಿಕೆ ಲಾಬಿಗಳೇ ಗ್ರಾಮ ಪಂಚಾಯ್ತಿ ಮಟ್ಟದಿಂದ ವಿಧಾನಸಭಾ ಚುನಾವಣೆಗಳನ್ನು ನಿಯಂತ್ರಿಸುವ ಮಟ್ಟಿಗೆ ಬೆಳೆದುನಿಂತಿವೆ. ಅದರಲ್ಲೂ ತೀರ್ಥಹಳ್ಳಿ, ಸಾಗರ, ಶಿವಮೊಗ್ಗ ಗ್ರಾಮಾಂತರದಂತಹ ಕ್ಷೇತ್ರಗಳಲ್ಲಿ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹಿಂದೆಯೂ ಕ್ವಾರಿ ಮತ್ತು ಮರಳು ಲಾಬಿಗಳೇ ಪ್ರಬಲವಾಗಿ ನಿಂತಿವೆ.

ಕ್ವಾರಿ ಲಾಬಿಗಳ ಕೈವಾಡದ ಕಾರಣಕ್ಕೇ ಮಲೆನಾಡಿನ ಕೆಲವು ವಿಧಾನಸಭಾ ಕ್ಷೇತ್ರಗಳ ಫಲಿತಾಂಶಗಳು ಕೊನೇ ಕ್ಷಣದಲ್ಲಿ ತಿರುವುಮುರುವಾದ ನಿದರ್ಶನಗಳೂ ಇವೆ. ಹಾಗಾಗಿ ಆ ಲಾಬಿಗಳ ಹಿತಾಸಕ್ತಿಗಾಗಿ ಜನರನ್ನು ಬಳಸಿಕೊಂಡು ಕಸ್ತೂರಿ ರಂಗನ್ ವರದಿ ಜಾರಿಗೆ ಅಡ್ಡಗಾಲು ಹಾಕಲಾಗುತ್ತಿದೆ. ಆ ಲಾಬಿಗಳ ಕಾರಣಕ್ಕಾಗಿ "ಮಲೆನಾಡಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಿದರೆ ರಕ್ತಕ್ರಾಂತಿಯಾಗುತ್ತದೆ" ಎಂಬಂತಹ ಮಾತುಗಳನ್ನು ಅಲ್ಲಿನ ಜನಪ್ರತಿನಿಧಿಗಳು ಆಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಪರಿಸರವಾದಿ ಹಾಗೂ ಪತ್ರಕರ್ತ ಜೋಸೆಫ್ ಹೂವರ್ ಈ ಬಗ್ಗೆ ಪ್ರತಿಕ್ರಿಯಿಸಿ, “ಕಸ್ತೂರಿ ರಂಗನ್ ವರದಿ ಮತ್ತು ಆ ಹಿಂದಿನ ಡಾ ಮಾಧವ್ ಗಾಡ್ಗೀಳ್ ವರದಿಯ ನಿಜವಾದ ಉದ್ದೇಶವೇ ಮಲೆನಾಡು ಜನರನ್ನು ಮತ್ತು ಅಲ್ಲಿನ ಪರಿಸರವನ್ನು ಉಳಿಸುವುದಾಗಿತ್ತು. ಸರಣಿ ಭೂಕುಸಿತ, ನೆರೆ-ಪ್ರವಾಹದಂತಹ ಅವಘಡಗಳಿಂದ ರಕ್ಷಣೆ ಎಂದರೆ ಕೇವಲ ಕಾಡು, ಕಾಡುಪ್ರಾಣಿಗಳಿಗೆ ಮಾತ್ರ ರಕ್ಷಣೆಯೆ? ಜನರ ರಕ್ಷಣೆ, ಜನರ ಕೃಷಿ, ಬದುಕಿನ ರಕ್ಷಣೆಯಾಗುವುದಿಲ್ಲವೆ?” ಎಂದು ಪ್ರಶ್ನಿಸಿದರು.

ಡಾ ಕಸ್ತೂರಿ ರಂಗನ್ ವರದಿ ಜಾರಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜುಲೈ ಮೊದಲ ವಾರ ಪರಿಸರ ಸೂಕ್ಷ್ಮ ಪ್ರದೇಶ(ESA) ಕುರಿತ ಐದನೇ ಕರಡು ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಆಕ್ರೋಶದ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಗೆ ಪ್ರತಿಕ್ರಿಯಿಸಿದ ಅವರು, “ಮಲೆನಾಡು ಭಾಗದಲ್ಲಿ ರಾಜಕಾರಣವನ್ನು ನಿಯಂತ್ರಿಸುತ್ತಿರುವುದೇ ಕ್ವಾರಿ ಮತ್ತು ಮರಳು ಲಾಬಿಗಳು. ಅಷ್ಟೇ ಅಲ್ಲದೆ, ಬಹುತೇಕ ಮಲೆನಾಡು ಶಾಸಕರು, ಸಂಸದರೂ ಸ್ವಂತ ಕ್ವಾರಿ, ಮರಳು ಸಾಗಣೆಯ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವುಗಳ ಜೊತೆಗೆ ಮಲೆನಾಡಿನ ಕಾಡಿನಂಚಿನಲ್ಲಿ ಇರುವ ಐಷಾರಾಮಿ ರೆಸಾರ್ಟ್, ಹೋಂಸ್ಟೇಗಳಲ್ಲಿ ಕೂಡ ಬಹಳಷ್ಟು ಅಲ್ಲಿನ ಜನಪ್ರತಿನಿಧಿಗಳ ಪಾಲಿದೆ. ಅಷ್ಟೇ ಅಲ್ಲದೆ, ಕೆಲವರು ಕಾಡಿನಂಚಿನಲ್ಲೇ ಜಾಗ ಖರೀದಿಸಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ. ಹಾಗಾಗಿ ತಮ್ಮ ಅಂತಹ ಉದ್ಯಮ, ಆಸ್ತಿ ರಕ್ಷಣೆಗೆ ಜನರನ್ನು ಎತ್ತಿಕಟ್ಟುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

“ಜನರ ಹಿತ ಕಾಯುವುದು ಈ ಜನಪ್ರತಿನಿಧಿಗಳಲ್ಲ. ಬದಲಾಗಿ ನಿಜವಾಗಿಯೂ ಪರಿಸರವೇ. ಪರಿಸರ ಉಳಿಯಬೇಕಾದರೆ ಪರಿಸರ ಪೂರಕ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಇದು ಮಲೆನಾಡಿನ ಜನರಿಗೆ ಅರ್ಥವಾಗಿದೆ. ಅಷ್ಟಕ್ಕೂ ಕಸ್ತೂರಿ ರಂಗನ್ ವರದಿಯಲ್ಲಿ ನಿಷೇಧ, ನಿರ್ಬಂಧ ಹೇರಲು ಶಿಫಾರಸು ಮಾಡಿರುವುದು ಕೃಷಿಯ ಮೇಲಲ್ಲ, ಜನರ ಅಗತ್ಯ ಸೌಲಭ್ಯ, ಸೌಕರ್ಯಗಳ ಮೇಲಲ್ಲ. ಬದಲಾಗಿ ಕ್ವಾರಿ, ಗಣಿಗಾರಿಕೆ, ಲೇಔಟ್, ಐಷಾರಾಮಿ ರೆಸಾರ್ಟ್‍ಗಳಂತಹ ಚಟುವಟಿಕೆಗಳ ಮೇಲೆ ಅಲ್ಲವೆ? ಆ ಚಟುವಟಿಕೆಗಳಿಗೂ ಮಲೆನಾಡಿನ ಜನಸಾಮಾನ್ಯರಿಗೂ ಏನು ಸಂಬಂಧ? ನಿಜಕ್ಕೂ ಅವುಗಳನ್ನು ನಿಷೇಧಿಸಿದರೆ ಯಾರಿಗೆ ಆತಂಕ? ಎಂದು ಪ್ರಶ್ನಿಸಿಕೊಂಡರೆ ಜನರ ಹೆಸರಲ್ಲಿ ಹುಲಿಲೆಬ್ಬಿಸುತ್ತಿರುವುದರ ಹಿಂದಿನ ಹಕೀಕತ್ತು ಗೊತ್ತಾಗಲಿದೆ” ಎಂದು ಹೂವರ್ ಹೇಳಿದರು.

ಹಾಗೆ ನೋಡಿದರೆ, ಮಲೆನಾಡಿನ ದಟ್ಟ ಅರಣ್ಯ ಪ್ರದೇಶ, ನದಿ ಕಣಿವೆಗಳಲ್ಲಿ ಈ ವರದಿಗಳ ಬಗ್ಗೆ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳಿಗೂ, ತೀರ್ಥಹಳ್ಳಿ, ಶಿವಮೊಗ್ಗ, ಹೊಸನಗರ, ಸಾಗರದ ಮರಳು ಮತ್ತು ಕ್ವಾರಿ ಚಟುವಟಿಕೆಗಳು ಬಿರುಸಾಗಿರುವ ಪ್ರದೇಶಗಳಲ್ಲಿ ಕೇಳಿಬರುತ್ತಿರುವ ಕೂಗಿಗೂ ವ್ಯತ್ಯಾಸವಿದೆ.

ಈ ಸುದ್ದಿ ಓದಿದ್ದೀರಾ?

ತೋಳ ಬಂತು ತೋಳ-3 | ಕಸ್ತೂರಿ ರಂಗನ್ ವರದಿ ವಿಷಯವಲ್ಲ; ಇಲ್ಲಿರುವುದು ನಂಬಿಕೆಯ ಪ್ರಶ್ನೆ!

ಶರಾವತಿ ಕಣಿವೆಯ ಭಾಗದಲ್ಲಿ ದಶಕಗಳಿಂದ ಮೂಲಸೌಕರ್ಯಗಳಿಂದ ವಂಚಿತರಾಗಿರುವ ಜನರಿಗೆ ಈ ವರದಿ, 'ತಮ್ಮನ್ನು ನಾಗರಿಕ ಸೌಕರ್ಯಗಳಿಂದ ವಂಚಿತರನ್ನಾಗಿಸುವ ಮತ್ತೊಂದು ಹುನ್ನಾರವಿರಬಹುದೆ? ಎತ್ತಂಗಡಿಗೆ ಮತ್ತೊಂದು ತಂತ್ರವಿರಬಹುದೆ?' ಎಂಬ ಆತಂಕ ಹುಟ್ವಿಸಿದೆ. ಶೃಂಗೇರಿ, ಕೊಪ್ಪದಂತಹ ದಟ್ಟ ಮಲೆನಾಡು ಭಾಗದಲ್ಲಿ 'ಕೃಷಿ ಚಟುವಟಿಕೆಗೆ ಆತಂಕ ತರದೇ ಇದ್ದರೆ ಸಾಕು' ಎಂಬ ಬೇಗುದಿ ಇದೆ.

ಆದರೆ, ಮರಳು, ಮತ್ತು ಕಲ್ಲುಕ್ವಾರಿ ಚಟುವಟಿಕೆಗಳು ಬಿರುಸಾಗಿರುವ ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ ಗ್ರಾಮಾಂತರ ಮತ್ತು ಸಾಗರದ ಕೆಲವು ಭಾಗದಲ್ಲಿ ಮಾತ್ರ 'ಈ ವರದಿ ಬಂದರೆ, ಜನರನ್ನು ಒಕ್ಕೆಲೆಬ್ಬಿಸುತ್ತಾರೆ, ಜನ ಮನೆಮಠ, ತೋಟ-ಜಮೀನು ಬಿಟ್ಟು ಗುಳೇ ಹೋಗಬೇಕು' ಎಂಬಂತಹ ಭೀತಿ ಹುಟ್ಟಿಸಲಾಗಿದೆ. ಇಂತಹ ವದಂತಿಗಳ ಹಿಂದೆ ಇರುವುದು ಕೂಡ ಕ್ವಾರಿ- ಮರಳು ಲಾಬಿಗಳೇ ಎಂಬುದು ಕೂಡ ಗುಟ್ಟೇನಲ್ಲ!

ಆ ಅರ್ಥದಲ್ಲಿ ಜೋಸೆಫ್ ಹೂವರ್ ಅವರ ಮಾತುಗಳನ್ನು ಸಾರಾಸಗಟಾಗಿ ತಳ್ಳಿಹಾಕುವ ಸ್ಥಿತಿಯೂ ಇಲ್ಲ!

ನಿಮಗೆ ಏನು ಅನ್ನಿಸ್ತು?
0 ವೋಟ್