ತೋಳ ಬಂತು ತೋಳ-7| ನಾಯಕರ ಮಾತಿಗೆ ಮರುಳಾದ್ರೆ ಭವಿಷ್ಯವೇ ಮಣ್ಣುಪಾಲಾಗುತ್ತೆ ಹುಷಾರು!

ಡಾ. ಕಸ್ತೂರಿರಂಗನ್ ವರದಿ ಸೇರಿದಂತೆ ಪರಿಸರ ಕಾಯ್ದೆಗಳ ಬಗೆಗಿನ ಜನರ ಅಜ್ಞಾನ, ಅರಿವಿನ ಕೊರತೆಯನ್ನೇ ಬಂಡವಾಳ ಮಾಡಿಕೊಂಡಿರುವ ರಾಜಕೀಯ ಪಕ್ಷಗಳ ಹೊಸ ನಾಟಕ ತೀವ್ರವಾಗಿದೆ. ಶ್ರೀಮಂತರ, ಪ್ರಭಾವಿಗಳ, ಉದ್ಯಮಿಗಳ, ರಾಜಕಾರಣಿಗಳ, ಕಂಟ್ರಾಕ್ಟರುಗಳ, ಎಂಜಿನಿಯರುಗಳ ಧನದಾಹದ ಹಿತಾಸಕ್ತಿಗಳು 'ಬಡ ರೈತರನ್ನು ರಕ್ಷಿಸುವ' ಹೆಸರಿನಲ್ಲಿ ಮೇಳೈಸುತ್ತಿವೆ.
westernghats

ಕಸ್ತೂರಿರಂಗನ್ ವರದಿ ಜಾರಿಯಾದರೆ ಜನರನ್ನು ಒಕ್ಕಲೆಬ್ಬಿಸುತ್ತಾರೆ. ಕಾಫಿ-ಅಡಿಕೆ ಬೆಳೆಯೋದಕ್ಕೆ ಬಿಡೋದಿಲ್ಲ, ರಸ್ತೆ ಮಾಡೋದಕ್ಕೆ ಅವಕಾಶ ಕೊಡೋದಿಲ್ಲ, ಸೇತುವೆ ಮಾಡೋ ಹಂಗಿಲ್ಲ, ಯಾವುದೇ ಕಟ್ಟಡ ಕಟ್ಟಕೂಡದು, ಅಡಿಕೆಗೆ ಬರುವ ಕೊಳೆ ರೋಗ ತಡೆಯೋದಕ್ಕೆ ಬೋರ್ಡೋ ದ್ರಾವಣ ಹೊಡೆಯೋದಕ್ಕೂ ಬಿಡೋದಿಲ್ಲ... ಅದು, ಇದು ಎಂದು ಸುಳ್ಳು ಕಥೆ ಹೇಳಿಕೊಂಡು ತಿರುಗುವವರು ಊರು ಊರುಗಳಲ್ಲೂ ಹೆಚ್ಚುತ್ತಿದ್ದಾರೆ. ಸಹ್ಯಾದ್ರಿಯ ತಪ್ಪಲಿನ ಹಸಿರು ಊರುಗಳಲ್ಲಿ ದಿಗಿಲು ಎದ್ದಿದೆ.

'ಮುಂದೆ ನಮ್ಮ ಕಥೆ ಏನು?' ಎಂಬ ಆತಂಕದಲ್ಲಿ ದಿನಗಳು ಸರಿಯುತ್ತಿವೆ. ಡಾ. ಕಸ್ತೂರಿರಂಗನ್ ವರದಿ ಸೇರಿದಂತೆ ಪರಿಸರ ಕಾಯ್ದೆಗಳ ಬಗೆಗೆ ಜನಗಳಿಗಿರುವ ಅಜ್ಞಾನ, ಅರಿವಿನ ಕೊರತೆಯನ್ನೇ ಬಂಡವಾಳ ಮಾಡಿಕೊಂಡಿರುವ ರಾಜಕೀಯ ಪಕ್ಷಗಳ ಹೊಸ ನಾಟಕ ತೀವ್ರವಾಗಿದೆ. ಶ್ರೀಮಂತರ, ಪ್ರಭಾವಿಗಳ, ಉದ್ಯಮಿಗಳ, ರಾಜಕಾರಣಿಗಳ, ಕಂಟ್ರಾಕ್ಟರುಗಳ, ಎಂಜಿನಿಯರುಗಳ ಧನದಾಹದ ಹಿತಾಸಕ್ತಿಗಳು 'ಬಡ ರೈತರನ್ನು ರಕ್ಷಿಸಬೇಕು' ಎಂಬ ಹೆಸರಿನಲ್ಲಿ ಮೇಳೈಸುತ್ತಿವೆ. 

ಕಸ್ತೂರಿರಂಗನ್ ವರದಿಯಲ್ಲಿ ಕರ್ನಾಟಕದ ಬೆಳಗಾವಿ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ಉಡುಪಿ, ಕೊಡಗು, ಹಾಸನ, ಮೈಸೂರು, ಚಾಮರಾಜನಗರದ ಪಶ್ಚಿಮಘಟ್ಟದ ವ್ಯಾಪ್ತಿಯ 20,668 ಚದರ ಕಿ.ಮೀ ಪ್ರದೇಶವನ್ನು, ಅಲ್ಲಿಯ 1576 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿಸಲಾಗಿದೆ. ಇಲ್ಲಿ ಬೃಹತ್ ಎನ್ನಿಸುವ ಕಲ್ಲು ಗಣಿಗಾರಿಕೆ, ಜಲವಿದ್ಯುತ್ ಯೋಜನೆ, ಅಣುವಿದ್ಯುತ್ ಸ್ಥಾವರ, ಪವನ ವಿದ್ಯುತ್ ಯೋಜನೆ, ಮರಳು ದಂಧೆಗೆ ನಿಯಂತ್ರಣ ಹೇರಲಾಗಿದೆ.

ವರದಿಯಲ್ಲಿ ಎಲ್ಲೂ ನೀವು ಮನೆ ಕಟ್ಟಬೇಡಿ ಅಂತಲೋ, ಅದಕ್ಕೆ ಬೇಕಾದ ಕಚ್ಚಾ ಸಾಮಾಗ್ರಿ ಪೂರೈಕೆಯಾಗೊಲ್ಲ ಅಂತಲೋ ಹೇಳಿಲ್ಲ‌. ಕಿರು ನೀರಾವರಿಗೆ, ಚೆಕ್ ಡ್ಯಾಂ ನಿರ್ಮಾಣಕ್ಕೆ ಯಾವ ನಿರ್ಬಂಧವನ್ನೂ ಹೇರಲಾಗಿಲ್ಲ. ಕೆಲವು ಷರತ್ತುಗಳನ್ನು ಒಳಪಡಿಸಿ ಜಲವಿದ್ಯುತ್ ಯೋಜನೆಗಳಿಗೆ ಅವಕಾಶ ಕೊಡಬಹುದು ಎಂದು ಹೇಳಿರುವ ವರದಿಯು, ಕಡಿಮೆ ನೀರು ಹರಿಯುವ ಸಮಯದಲ್ಲಿ ಶೇಕಡಾ ಮೂವತ್ತರಷ್ಟು ನೀರನ್ನು ಖಚಿತಪಡಿಸಿಕೊಂಡು, ನದಿ ಹರಿವುಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಲು ಸೂಚಿಸಿದೆ. ಇದೆಲ್ಲಾ ಯಾವ ಸಣ್ಣ ಹಿಡುವಳಿದಾರರಿಗೆ ಹೇಗೆ ತೊಂದರೆ ಮಾಡುತ್ತದೆ?

ನದಿಗಳಲ್ಲಿ ಯಾವುದೇ ಒಂದು ಯೋಜನೆಯಿಂದ ಮತ್ತೊಂದು ಯೋಜನೆಗೆ ಕನಿಷ್ಠ ಪಕ್ಷ ಮೂರು ಕಿ.ಮೀ ಅಂತರ ಇರಬೇಕು. ನದಿ ಪಾತ್ರದ ಅರ್ಧಭಾಗ(ಶೇ.50) ಯಾವುದೇ ಉದ್ದೇಶಗಳಿಂದ ನಲುಗಬಾರದು ಅಂತ ವರದಿಯಲ್ಲಿದೆ. ಇದು ಯಾರ ಬದುಕನ್ನು ಕಸಿಯಬಲ್ಲದು? ವರದಿಯ ಎಲ್ಲೂ 'ಗ್ರಾಮಗಳನ್ನು ಸ್ಥಳಾಂತರಿಸಲಾಗುವುದು' ಎಂಬ ಒಂದೇ ಒಂದು ಮಾತು ಕೂಡಾ ಇಲ್ಲ. ಬದಲಾಗಿ ಕರಡು ಅಧಿಸೂಚನೆಯಲ್ಲಿ ಪರಿಸರಸೂಕ್ಷ್ಮ ಪ್ರದೇಶದ ವ್ಯಾಪ್ತಿಗೊಳಪಡುವ ಯಾವುದೇ ಜನವಸತಿ ಪ್ರದೇಶವನ್ನು ಸ್ಥಳಾಂತರಿಸುವುದಿಲ್ಲ ಮತ್ತು ಆ ಭಾಗದಲ್ಲಿ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

'ಇನ್ನು ನೀವು ಮನೆ ಕಟ್ಟಂಗಿಲ್ಲ ಮಾರಾಯಾ, ರಸ್ತೆ ಆಸೆ ಬಿಡು, ಕರೆಂಟ್ ಬಗ್ಗೆ ಮಾತಾಡ್ಬೇಡ' ಅಂತೆಲ್ಲಾ ಮುಗ್ಧರಿಗೆ ಪುಂಗಿ ಉದುವವರಿಗೆ ಇಪ್ಪತ್ತು ಸಾವಿರ ಚದರ ಮೀಟರ್(ಸುಮಾರು ಐದು ಎಕರೆ ವಿಸ್ತೀರ್ಣ)ಗಿಂತ ದೊಡ್ಡದಾದ ಕಟ್ಟಡ ನಿರ್ಮಾಣಕ್ಕೆ ಮಾತ್ರ ನಿರ್ಬಂಧವಿದೆ ಎಂದು ಗೊತ್ತಿಲ್ಲವೇ? ಪಶ್ಚಿಮಘಟ್ಟದ ತಪ್ಪಲಿನ ಯಾರು ಐದು ಎಕರೆಯಷ್ಟು ದೊಡ್ಡ ಮನೆ ಕಟ್ಟಿಕೊಳ್ಳುತ್ತಾರೆ?

ಹೀಗಿರುವಾಗ 'ನಿಮ್ಮನ್ನು ಒಕ್ಕಲೆಬ್ಬಿಸಲಾಗುತ್ತದೆ' ಎಂದು ಕಾಡಂಚಿನ ಜನಕ್ಕೆ ಅದೇಕೆ ಸುಳ್ಳು ಸುಳ್ಳು ಕಥೆ ಹೇಳಿ ಅವರ ದಾರಿ ತಪ್ಪಿಸಬೇಕು? 'ಅಡಿಕೆಗೆ ಬೋರ್ಡೋ ದ್ರಾವಣ ಹೊಡೊಯೋಕೂ ಬಿಡಲ್ಲ ಮಾರಾಯಾ, ಮಲೆನಾಡಲ್ಲಿ ಔಸ್ತಿ ಹೊಡಿದೇ ಅಡಿಕೆ ಉಳಿಯುತ್ತೇನಾ?' ಎಂದು ಪಾಪದ ರೈತರನ್ನು ಸುಳ್ಳು ಸುಳ್ಳೇ ಆತಂಕಕ್ಕೆ ದೂಡುವ ಸ್ಥಳೀಯ ರಾಜಕಾರಣಿಗಳು ಮೊದಲು ಕೀಟನಾಶಕ, ರಾಸಾಯನಿಕ, ಸಾವಯವ ಮೊದಲಾದವುಗಳ ನಡುವಿನ ಸಾಮಾನ್ಯ ಭಿನ್ನತೆಗಳನ್ನು ಅರ್ಥಮಾಡಿಕೊಳ್ಳಲಿ.

ಕೃಷಿ ಮಾಡೋದಕ್ಕೆ ಬಿಡೋದಿಲ್ಲ, ವಾಣಿಜ್ಯ ಬೆಳೆ ಬೆಳೆಯೋಕೆ ಅವಕಾಶವಿಲ್ಲ ಅಂತ ಸೃಷ್ಟಿ ಮಾಡಿರೋರು, ಬೇಕಾಬಿಟ್ಟಿ ಸಾವಿರಾರು ಎಕರೆ ಅರಣ್ಯ ಒತ್ತುವರಿ ಮಾಡಿದವರೇ ಹೊರತು ವರದಿಯ ಎಲ್ಲೂ ಅದಿಲ್ಲ. ಕಾಡಂಚಿನ ಜನರು ಅರಣ್ಯ ಉತ್ಪನ್ನ ಸಂಗ್ರಹಿಸಬೇಡಿ, ಕಟ್ಟಿಗೆ ಒಟ್ಟುಮಾಡಬೇಡಿ, ಸೊಪ್ಪು ತರಬೇಡಿ, ದರಗು ಗುಡಿಸಬೇಡಿ ಎಂದು ವರದಿಯ ಎಲ್ಲೂ ಹೇಳಿಲ್ಲ. ತಮ್ಮ ತಮ್ಮ ರಾಜಕೀಯ ಉದ್ದೇಶಗಳ ಸಾಧನೆಗೆ ಮುಗ್ಧ ಜನರನ್ನು ಬಳಸಿಕೊಂಡವರು/ ಬಳಸಿಕೊಳ್ಳುವ ಹವಣಿಕೆಯಲ್ಲಿರುವವರು ಹೇಳುತ್ತಿದ್ದಾರಷ್ಟೇ.

ಐದು ಎಕರೆಯಷ್ಟು ದೊಡ್ಡ ಮನೆ ಯಾರು ಕಟ್ತಾರೆ?

'ಇನ್ನು ನೀವು ಮನೆ ಕಟ್ಟಂಗಿಲ್ಲ ಮಾರಾಯಾ, ರಸ್ತೆ ಆಸೆ ಬಿಡು, ಕರೆಂಟ್ ಬಗ್ಗೆ ಮಾತಾಡ್ಬೇಡ' ಅಂತೆಲ್ಲಾ ಮುಗ್ಧರಿಗೆ ಪುಂಗಿ ಉದುವವರಿಗೆ ಇಪ್ಪತ್ತು ಸಾವಿರ ಚದರ ಮೀಟರ್(ಸುಮಾರು ಐದು ಎಕರೆ ವಿಸ್ತೀರ್ಣ)ಗಿಂತ ದೊಡ್ಡದಾದ ಕಟ್ಟಡ ನಿರ್ಮಾಣಕ್ಕೆ ಮಾತ್ರ ನಿರ್ಬಂಧವಿದೆ ಎಂದು ಗೊತ್ತಿಲ್ಲವೇ? ಪಶ್ಚಿಮಘಟ್ಟದ ತಪ್ಪಲಿನ ಯಾರು ಐದು ಎಕರೆಯಷ್ಟು ದೊಡ್ಡ ಮನೆ ಕಟ್ಟಿಕೊಳ್ಳುತ್ತಾರೆ? ಇಲ್ಲಿನವರು ಎರಡ್ಮೂರು ಪುಟ್ಬಾಲ್ ಗ್ರೌಂಡ್ನಷ್ಟರ ಮನೆ ಮಾಡ್ತಾರಾ? ರಸ್ತೆ ಮಾಡುವಾಗ ಸ್ಥಳೀಯ ಗ್ರಾಮ ಪಂಚಾಯಿತಿಯ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿರುವುದನ್ನು ಈ ಭೂಪರು 'ರಸ್ತೆಯೇ ಮಾಡೋ ಹಾಗಿಲ್ಲ' ಎಂದು ಕಥೆ ಹೊಡೆಯುತ್ತಾರೆ.

ಕೆಂಪು ವಲಯದ ಕೈಗಾರಿಕೆ ಅಂತ ಕರೆಯುವ ದೊಡ್ಡ ದೊಡ್ಡ ಇಂಡಸ್ಟ್ರಿ ಯಾವ ಮಲೆನಾಡಿಗನ ನೆಮ್ಮದಿಯ ಬದುಕಿಗೆ ಬೇಕಾಗಿದೆ? ಕಿತ್ತಳೆ ವಲಯದ ಕೈಗಾರಿಕೆಗೆ ಪ್ರೋತ್ಸಾಹ ನೀಡಿ ಅಂತಿರುವುದು ಪರಿಸರಕ್ಕೆ ಪೂರಕವಲ್ಲವೇ? ಇದರಿಂದ ಹಣ್ಣು, ಕಾಡು ಉತ್ಪನ್ನಗಳು, ಪರಿಸರ ಸ್ನೇಹಿ ಸಂಸ್ಕರಣಾ ಘಟಕಗಳಿಗೆ ಅವಕಾಶ ಒದಗಿ ಇಲ್ಲಿನ ಯುವಕರು ಉದ್ಯೋಗಕ್ಕಾಗಿ ಪೇಟೆಗಳ ಕಡೆ ಮುಖ ಮಾಡುವುದಕ್ಕೆ ವಿರುದ್ಧವಾಗಿ ಹೊಸತೊಂದು ಪರ್ಯಾಯ ಆಯ್ಕೆ ಸೃಷ್ಟಿಯಾಗಬಹುದಲ್ಲವೇ? ನೈಸರ್ಗಿಕ ಕೃಷಿಗೆ, ಸಾವಯವ ಬೇಸಾಯಕ್ಕೆ ಉತ್ತೇಜನ ಕೊಡುವುದರಲ್ಲಿ ಯಾವ ತಪ್ಪಿದೆ?(ಈ ಕುರಿತು ವೈಜ್ಞಾನಿಕ ಸಂಶೋಧನೆಯ ಅವಶ್ಯಕತೆ ಇದೆ) ಇಲ್ಲಿಯವರೆಗಿನ ಅಭಿವೃದ್ಧಿ ಮಾದರಿಗಳ ದುಷ್ಪರಿಣಾಮಗಳು ಕಣ್ಣಿಗೆ ರಾಚುತ್ತಿರುವಾಗ ಹೊಸ ರೀತಿಯಲ್ಲಿ ಬದುಕು ಕಟ್ಟಿಕೊಳ್ಳುವ ಯೋಚನೆಗಳಿಗೆ ಉತ್ತೇಜನ ಒದಗಬೇಕಲ್ಲವೇ?

Image
landslide

ಇಲ್ಲಿನ ನದಿಗಳ ದಾರುಣ ಸ್ಥಿತಿ ನೋಡಿರುವ ಯಾವ ಮನುಷ್ಯನೂ, ಭೂಕುಸಿತಗಳ ದುಷ್ಪರಿಣಾಮ ಎದುರಿಸಿರುವ ಯಾವ ಸಂತ್ರಸ್ತನೂ ಇಲ್ಲಿ ಗಣಿಗಾರಿಕೆ ಮಾಡಿ ಅಂತ ಹೇಳಲಾರ. ಪರಿಸರದ ಸ್ವರೂಪದಲ್ಲಿ ಪ್ರತಿಕೂಲ ಪರಿಣಾಮ ಎಬ್ಬಿಸುವ ಯಾವ ಗಣಿಗಾರಿಕೆಯೂ ಉದ್ಯಮಿಗಳ ಹೊರತಾಗಿ ಇಲ್ಲಿನ ಸ್ಥಳೀಯರಿಗೆ ಬೇಕಾಗಿಲ್ಲ. ಅಂತಹ ಗಣಿಗಾರಿಕೆಗೆ ನಿರ್ಬಂಧ ವಿಧಿಸುವಲ್ಲಿ ಯಾವ ತಪ್ಪಿದೆ? ಟೌನ್ ಶಿಫ್ ಮಾಡಬೇಡಿ ಅಂತ ಹೇಳುವುದರಲ್ಲಿ ಯಾವ ಅನರ್ಥಕಾರಿ ಅಂಶವಿದೆ? ವಸತಿ ಉದ್ದೇಶಕ್ಕೆ ಮಾಡುವ ಕಟ್ಟಡ, ಅದರ ನವೀಕರಣ, ವಿಸ್ತರಣೆ, ದುರಸ್ತಿಗೆ ಸ್ಥಳೀಯ ಪ್ರಾಧಿಕಾರಗಳ ಅನುಮತಿ ಪಡೆಯಬೇಕು ಅಂತಿರುವುದು ಆಕ್ಷೇಪಾರ್ಹವಂತೂ ಅಲ್ಲ.

ಒಂದೂವರೆ ಲಕ್ಷ ಚದರ ಮೀಟರ್ ಮೇಲ್ಪಟ್ಟ ಅಭಿವೃದ್ಧಿ ಯೋಜನೆ ನಿರ್ಬಂಧಿಸಬೇಕು ಅಂತಿರುವುದು ಯಾವ ಆಸ್ಪತ್ರೆ, ಶಾಲಾ-ಕಾಲೇಜು ಇನ್ನೊಂದು ಮತ್ತೊಂದನ್ನು ತಡೆದೀತು? ಪಶ್ಚಿಮಘಟ್ಟಕ್ಕೆ ಅವಶ್ಯಕತೆ ಇಲ್ಲದ ಹೊಸ ಚತುಷ್ಪಥ ಹೆದ್ದಾರಿ ಯಾವ ಚಂದಕ್ಕೆ? ಪವನಶಕ್ತಿ ಯೋಜನೆ ಮಾಡಬೇಕು ಎಂದರೆ ಪರಿಸರ ಪರಿಣಾಮ ಅಂದಾಜು(EIA) ವ್ಯಾಪ್ತಿಗೆ ತರಬೇಕು ಅನ್ನೋದರಲ್ಲಿ ಏನಾದರೂ ತಪ್ಪಿದೆಯಾ?

ಅರಿವಿನ ಕೊರತೆ ಮೂಲನಿವಾಸಿಗಳ ಚಿಂತೆ ಹೆಚ್ಚಿಸಿದೆ

ಘಟ್ಟದ ವಿಚಾರ ಬಂದಾಗಲೆಲ್ಲಾ 'ನಾವು ವರದಿ ಜಾರಿಗೆ ಅವಕಾಶ ನೀಡುವುದೇ ಇಲ್ಲ' ಅಂತ ಪಕ್ಷಾತೀತವಾಗಿ ಪುಂಖಾನುಪುಂಖವಾಗಿ ಭಾಷಣ ಹೊಡೆಯುವವರೇ ಎಲ್ಲಾ. ವರದಿ ಕುರಿತು ಅರಿವು ಮೂಡಿಸುವ ಕೆಲಸ ಇಲ್ಲಿಯವರೆಗೆ ಆಗಲೇ ಇಲ್ಲ. ಇಂದಿಗೂ ಆಗುತ್ತಿಲ್ಲ. ತಮ್ಮ ತಮ್ಮ ರಾಜಕಾರಣದ ತೆವಲುಗಳಲ್ಲಿ ಜನಪ್ರತಿನಿಧಿಗಳು ಮುಳುಗಿ ಹೋಗಿದ್ದರೆ ಅಧಿಕಾರಿಗಳಿಗೆ ಹಳ್ಳಿಯ ರಸ್ತೆಗಳು ಕಾಣಿಸುವುದೇ ಇಲ್ಲ. 'ಜಾಗೃತಿ ಮೂಡಿಸಲು ಸಮಿತಿ ಮಾಡಿದ್ದರು' ಅಂತಲೂ ಜನರಿಗೆ ಗೊತ್ತಿಲ್ಲದಷ್ಟು ಅದು ನಿಷ್ಕ್ರಿಯ. ಅರಿವಿನ ಕೊರತೆ ಮೂಲನಿವಾಸಿಗಳ ಮನಸ್ಸುಗಳಲ್ಲಿ ಚಿಂತೆ ಹೆಚ್ಚಿಸಿದೆ.

'ನಾವೇ ಪರಿಸರ ಉಳಿಸಿದ್ದು' ಅಂತ ಈಗ ಭಾಷಣ ಹೊಡೆಯುವವರ ಮಧ್ಯೆ, ಅವರ ಮಾತಿಗೆ 'ಹೌದು ಹೌದು' ಅಂತ ಮಂಡೆ ಆಡಿಸುವ ಹಿಂಬಾಲಕರ ನಡುವೆ ಮಲೆನಾಡಿನಲ್ಲಿ ಹಾದು ಹೋಗಿರುವ ರಾಜ್ಯ- ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗಳು, ಹೊಸ ಹೊಸ ರೈಲು ಮಾರ್ಗಗಳ ಪ್ರಸ್ತಾವನೆಗಳು, ಭೂಗರ್ಭ ವಿದ್ಯುತ್ ಯೋಜನೆಗಳು, ಅಣುವಿದ್ಯುತ್ ಸ್ಥಾವರಗಳ ವಿಸ್ತರಣೆ, ನೀರು ಸಾಗಿಸುವ ಯೋಜನೆಗಳು, ಗಣಿಗಾರಿಕೆಗಳು ಇತ್ಯಾದಿ ಇತ್ಯಾದಿ, ಇದರಿಂದ ಆಗಿರುವ ಜೀವವೈವಿಧ್ಯದ ನಾಶ ಆ ಮಾತನ್ನು ಅಣಕಿಸುತ್ತಿದೆ. ಅಭಿವೃದ್ಧಿ ಯೋಜನೆಗಳ ಹೆಸರಿನ ವಿವಿಧ ರೂಪದ ಪ್ರಾಕೃತಿಕ ಅತ್ಯಾಚಾರಗಳಿಂದ ಕಾಣೆಯಾಗಿರುವ ಜೀವಪರಿಸರ ವ್ಯವಸ್ಥೆ ಜನಪ್ರತಿನಿಧಿಗಳ ಪರಿಸರ ಪ್ರೇಮದ ಮುಖವಾಡಗಳಿಗೆ ಗಹಗಹಿಸಿ ನಗುತ್ತಿದೆ.

ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಗಾರರು ಅಂತ ಗುರುತಿಸಿಕೊಂಡವರಿಗೆ ವರದಿಯ ನಿಜವಾದ ಲೋಪದೋಷಗಳನ್ನು ಹುಡುಕಲಾಗಿಲ್ಲ. ಒತ್ತುವರಿ(ಭೂಮಿ) ಕುರಿತು ಇರುವ ವ್ಯಾಖ್ಯಾನದಲ್ಲಿ ತಿದ್ದುಪಡಿ ತರುವಂತೆ ಒತ್ತಾಯಿಸುವ ಮನಸ್ಸಿಲ್ಲ! ಭೂದಾಹದ ಒತ್ತುವರಿ ಬೇರೆ, ದಾಖಲೆ ಇಲ್ಲದ ಐದೆಕರೆಯೊಳಗಿನ ಸಾಗುವಳಿ ಬೇರೆ ಅಂತ ತಿದ್ದುಪಡಿ ಮಾಡಿ ಅಂತ ಹೇಳಲು ಬಾಯಿ ಇಲ್ಲ. ಮಳೆ ವೈಪರೀತ್ಯಗಳನ್ನು ಪರಿಗಣಿಸದ, ಭೂಸ್ವರೂಪದ ವ್ಯತ್ಯಾಸಗಳನ್ನು ಗಮನಿಸದಿರುವುದು ವರದಿ ಹುಳುಕು ಅನ್ನಿಸುತ್ತಿಲ್ಲ. 

ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಗಾರರು ಅಂತ ಗುರುತಿಸಿಕೊಂಡವರಿಗೆ ವರದಿಯ ನಿಜವಾದ ಲೋಪದೋಷಗಳನ್ನು ಹುಡುಕಲಾಗಿಲ್ಲ. ಒತ್ತುವರಿ(ಭೂಮಿ) ಕುರಿತು ಇರುವ ವ್ಯಾಖ್ಯಾನದಲ್ಲಿ ತಿದ್ದುಪಡಿ ತರುವಂತೆ ಒತ್ತಾಯಿಸುವ ಮನಸ್ಸಿಲ್ಲ! ಭೂದಾಹದ ಒತ್ತುವರಿ ಬೇರೆ, ದಾಖಲೆ ಇಲ್ಲದ ಐದೆಕರೆಯೊಳಗಿನ ಸಾಗುವಳಿ ಬೇರೆ ಅಂತ ತಿದ್ದುಪಡಿ ಮಾಡಿ ಅಂತ ಹೇಳಲು ಬಾಯಿ ಇಲ್ಲ. ಮಳೆ ವೈಪರೀತ್ಯಗಳನ್ನು ಪರಿಗಣಿಸದ, ಭೂಸ್ವರೂಪದ ವ್ಯತ್ಯಾಸಗಳನ್ನು ಗಮನಿಸದಿರುವುದು ವರದಿ ಹುಳುಕು ಅನ್ನಿಸುತ್ತಿಲ್ಲ. 

ವರದಿಯ ಧನಾತ್ಮಕ ಅಂಶಗಳನ್ನು ಒತ್ತಿ ಹೇಳಬೇಕಾದ್ದು ಪ್ರಸ್ತುತವಾದರೂ ಅದು ಅವರಿಗೆ ಬೇಕಾಗಿಲ್ಲ. ಜನಜಾಗೃತಿ ನಮ್ಮ ಹೋರಾಟಕ್ಕೆ ಮಾರಕ ಅಂತ ರಾಜಕಾರಣಿಗಳಿಗೆ, ಪ್ರಭಾವಿಗಳಿಗೆ ಗೊತ್ತು. ತಪ್ಪು ತಿಳಿವಳಿಕೆ, ಅರಿವಿನ ಕೊರತೆಯೇ ಅವರನ್ನು ಸದಾ ಜೀವಂತವಾಗಿಡೋದು ಜೀವವೈವಿಧ್ಯತೆಯ ಮರು ಸ್ಥಾಪನೆಯ ದೃಷ್ಟಿಯಲ್ಲಾಗಲಿ, ಅದರ ಜೊತೆಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿರುವ ಪಶ್ಚಿಮಘಟ್ಟದ ತಪ್ಪಲಿನ ಬದುಕಿನ ಹಿತದ ವಿಷಯದಲ್ಲಾಗಲಿ ಕಸ್ತೂರಿರಂಗನ್ ವರದಿ ಏನೇನೂ ಅಲ್ಲ. ಅದಕ್ಕೆ ಮಾಧವ ಗಾಡ್ಗೀಳ್ ವರದಿಯೇ ಬೇಕು ಅಂತ ಎರಡೂ ವರದಿ ನೋಡಿರುವ, ಸುಸ್ಥಿರ ಬದುಕನ್ನು ಪ್ರೋತ್ಸಾಹಿಸುವವರಿಗೆ ಸ್ಪಷ್ಟವಾಗಿ ಅರ್ಥವಾಗಿದೆ. ವರದಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದರೆ ಜನರಿಗೂ ಅರ್ಥವಾಗುತ್ತದೆ. ಕಾರ್ಪೊರೇಟ್ ಶಕ್ತಿಗಳು, ಬಂಡವಾಳಶಾಹಿಗಳ ಹಿತಾಸಕ್ತಿ ಕಾಯುವ ಸರ್ಕಾರಗಳ ಪರಿಸರ ಉಳಿಸಬೇಕೆಂಬ ಪ್ರಹಸನಕ್ಕೆ, ಜಾಗತಿಕ ಒತ್ತಡಕ್ಕೆ ವರದಿಯೊಂದನ್ನು ಜಾರಿ ಮಾಡಬೇಕಾದ ಅನಿವಾರ್ಯಕ್ಕೆ ಕಸ್ತೂರಿರಂಗನ್ ವರದಿ ಒಂದು ನಿಮಿತ್ತ ಅಷ್ಟೇ. 

ಸಹ್ಯಾದ್ರಿ ಉಳಿಸಿಕೊಳ್ಳಲು ಬೇಕು ಮಾಧವ್‌ ಗಾಡ್ಗೀಳ್‌ ವರದಿ

ಮಾಧವ ಗಾಡ್ಗೀಳ್ ಕೊಟ್ಟಿರುವ ವರದಿಯಲ್ಲಿ, 'ಈಗಿನ ಅರಣ್ಯ ಸಂರಕ್ಷಣಾ ಕಾನೂನುಗಳು, ಕಾಯ್ದೆಗಳು, ಯೋಜನೆಗಳು, ಅರಣ್ಯ ಇಲಾಖೆ, ಸರ್ಕಾರ ಎಲ್ಲವೂ ಸಂರಕ್ಷಣೆಯಲ್ಲಿ ಪಶ್ಚಿಮಘಟ್ಟದ ತಪ್ಪಲಿನ ಬದುಕನ್ನು ಹೊರಗಿಟ್ಟು ಶೋಷಿಸಿವೆ. ಈ ಆಡಳಿತ ವ್ಯವಸ್ಥೆಯ ಲೋಪಗಳನ್ನು ನೀಗಿಸಲು ಸರ್ಕಾರವೇ ತಕ್ಷಣ ಕ್ರಮಕೈಗೊಳ್ಳಬೇಕು. ಪರಿಸರದ ಬಗೆಗೆ ಇಲ್ಲಿನ ಜನರ ಆಸಕ್ತಿ ಕಂಡು ನಮ್ಮ ತಂಡಕ್ಕೆ ಸಂತೋಷವಾಗಿದೆ. ಸರ್ಕಾರಗಳ ಪರಿಸರ ನೀತಿಗಳಿಂದ ಅಸಹಾಯಕರಾಗಿರುವ ಅವರನ್ನು ನಾವು ಆಡಳಿತ ವ್ಯವಸ್ಥೆಯೊಳಗೆ ಒಳಗೊಳ್ಳುವಂತೆ ಮಾಡಲು ಆಗ್ರಹಿಸುತ್ತೇವೆ' ಎಂಬರ್ಥದ ನೇರ ಮಾತುಗಳಿವೆ.

ಈ ಸುದ್ದಿ ಓದಿದ್ದೀರಾ?

ತೋಳ ಬಂತು ತೋಳ-6| ಇಎಸ್‌ಎ ವಿರುದ್ಧ ದೆಹಲಿಗೆ ದೌಡಾಯಿಸಿದ ಜನಪ್ರತಿನಿಧಿಗಳಿಗೆ ಮಲೆನಾಡಿಗನ ಹತ್ತು ಪ್ರಶ್ನೆ

ಆಡಳಿತದ ವಿಕೇಂದ್ರೀಕರಣಕ್ಕೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆ ನೀಡಿದ್ದಾರೆ. ಆ ವರದಿ ಜಾರಿಯಾದರೆ ಇಲ್ಲಿನ ಪ್ರಭಾವಿಗಳ ತಲೆಹರಟೆಗಳು ಬದಿಗೆ ಸರಿಯುತ್ತವೆ. ಕಾಡಂಚಿನ ನಿರುಪದ್ರವಿ ಬದುಕು ನೆಮ್ಮದಿಯ ಉಸಿರಾಟ ನಡೆಸಲು ಕಾನೂನಿನ ಬಲ ಸಿಗುತ್ತದೆ. ಈಗಿರುವ ನೂರೆಂಟು ಕಾನೂನುಗಳು ಹಿಂದೆ ಸರಿಯುತ್ತವೆ. ಅದೇ ಸಮಗ್ರವಲ್ಲದಿದ್ದರೂ ಪ್ರಶ್ನಿಸಲು ಪ್ರಜಾಸತ್ತಾತ್ಮಕ ದಾರಿಯಿದೆ. ಆದರೆ ಅದು ಜಾರಿಯಾಗುವುದು ಮಾತ್ರ ಇಲ್ಲಿನ ಯಾವ ಲಾಭಿಗಳಿಗೂ ಬೇಕಾಗಿಲ್ಲ.

ಈಗಂತೂ ರಾಜಕಾರಣಿಗಳು ಕನಿಷ್ಠ ಕಸ್ತೂರಿ ರಂಗನ್ ವರದಿ ಕೂಡಾ ಬೇಡ ಅನ್ನುತ್ತಿದ್ದಾರೆ. ನಾಳೆ ದಿನ ಕೃಷಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗಳ ತಿದ್ದುಪಡಿ ಪಶ್ಚಿಮ ಘಟ್ಟದಲ್ಲಿ ಉಂಟುಮಾಡುವ ಅನಾಹುತಗಳಿಗೆ ಕಸ್ತೂರಿ ರಂಗನ್ ವರದಿಯೇ ಕಾರಣ ಅಂತ ಅಸಂಬದ್ಧ ಮಾತಾಡುವವರು ಇವರೇ. ಇವತ್ತು ಅರಣ್ಯ ಇಲಾಖೆಯ ಮೂಲಕ ಆದಿವಾಸಿಗಳು, ಬಡಜನರ ಮೇಲೆ ಕ್ಷುಲ್ಲಕ ವಿಚಾರಗಳಿಗೆಲ್ಲಾ ಕೇಸ್ ದಾಖಲಿಸುತ್ತಾ ಅವರಿಗೆ ಸಂರಕ್ಷಣೆ ಬಗೆಗೇ ಅಸಹನೆ ಏಳುವಂತೆ ಮಾಡುವ ಹುನ್ನಾರಗಳು ಹಂತಹಂತವಾಗಿ ಜರುಗುತ್ತಿವೆ.

ಹೊಟ್ಟೆ ತುಂಬಿರುವ ಯಾರಿಗೂ ಬಡವರ ಹಿತವೂ ಬೇಕಾಗಿಲ್ಲ, ಮತ್ತವರ ಪರಿಸರ ಕಾಳಜಿಗಳ ಅಸಲೀಯತ್ತು ಎಲೆಲ್ಲೂ ಕಣ್ಣಿಗೆ ರಾಚುತ್ತಿದೆ. ನೆನಪಿರಲಿ ಈ ಪಶ್ಚಿಮಘಟ್ಟ ಸೇರಿದ್ದು ಇಡೀ ಜಗತ್ತಿಗೆ. ಅದು ಯಾರ ಖಾಸಗಿ ಆಸ್ತಿಯೂ ಅಲ್ಲ. ನಿಮ್ಮ ನಿಮ್ಮ ಹಿತಾಸಕ್ತಿಗೆ ಭವಿಷ್ಯವನ್ನು ಬಲಿಕೊಡಬೇಡಿ. ಜಾಗತಿಕ ತಾಪಮಾನ ಏರಿಕೆಯೇ ಸುಳ್ಳು, ಪರಿಸರ ನಾಶ ಅದಕ್ಕೆಲ್ಲಾ ಕಾರಣ ಎಂಬುದು ಮಹಾಸುಳ್ಳು ಅನ್ನೋದು ಅಜ್ಞಾನದ ಪರಮಾವಧಿ. ಅದು ಸತ್ಯ ಅನ್ನೋದಕ್ಕೆ ಇಡೀ ಜಗತ್ತಿನಲ್ಲಿ ಕಣ್ಣೆದುರಿಗೇ ಸಾಕ್ಷ್ಯಗಳು ಎದ್ದೆದ್ದು ಕುಣಿಯುತ್ತಿವೆ. ಇವತ್ತಿನ ವಿವಿಧ ಸ್ವರೂಪದ ಬಿಕ್ಕಟ್ಟಿನ ನಡುವೆ ಸಹ್ಯಾದ್ರಿ ಉಳಿಸಿಕೊಳ್ಳಲು ನಮಗೆ ಉಳಿದಿರುವ ಏಕೈಕ ಅಸ್ತ್ರವೆಂದರೆ ಅದು ಮಾಧವ ಗಾಡ್ಗೀಳ್ ವರದಿ.

ನಿಮಗೆ ಏನು ಅನ್ನಿಸ್ತು?
9 ವೋಟ್