ತೋಳ ಬಂತು ತೋಳ-6| ಇಎಸ್‌ಎ ವಿರುದ್ಧ ದೆಹಲಿಗೆ ದೌಡಾಯಿಸಿದ ಜನಪ್ರತಿನಿಧಿಗಳಿಗೆ ಮಲೆನಾಡಿಗನ ಹತ್ತು ಪ್ರಶ್ನೆ

ಪರಿಸರ ಸೂಕ್ಷ್ಮ ಪ್ರದೇಶ ಅಧಿಸೂಚನೆ ವಿಷಯ ಮತ್ತೊಮ್ಮೆ ಮಲೆನಾಡಿನ ಜನಪ್ರತಿನಿಧಿಗಳು ಮತ್ತು ಪರಿಸರ ಪರ ಹೋರಾಟಗಾರರು, ಕಾರ್ಯಕರ್ತರ ನಡುವಿನ ಜಿದ್ದಾಜಿದ್ದಿನ ವಿಷಯವಾಗಿ ಹೊರಹೊಮ್ಮಿದೆ. ಆ ಹಿನ್ನೆಲೆಯಲ್ಲಿ ಮಲೆನಾಡಿನ ಯುವ ಪರಿಸರ ಕಾರ್ಯಕರ್ತರಲ್ಲಿ ಒಬ್ಬರಾದ ಸಹದೇವ್‌ ಶಿವಪುರ ಅವರು ಒಬ್ಬ ಮಲೆನಾಡಿಗನಾಗಿ ಹತ್ತು ಪ್ರಶ್ನೆಗಳನ್ನು ಮಲೆನಾಡಿನ ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರ ಮುಂದಿಟ್ಟಿದ್ದಾರೆ.
shimoga blast

ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ(esa) ಘೋಷಣೆಯ ಅಧಿಸೂಚನೆಯ ಬೆನ್ನಲ್ಲೇ ಮಲೆನಾಡಿನಲ್ಲಿ ಆತಂಕ ಮನೆ ಮಾಡಿದೆ. ಒಂದು ಕಡೆ ಜನಪ್ರತಿನಿಧಿಗಳು ಡಾ ಕಸ್ತೂರಿ ರಂಗನ್‌ ವರದಿಯ ಜಾರಿಯಿಂದಾಗಿ ಮಲೆನಾಡಿನಲ್ಲಿ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗಲಿದೆ ಎಂಬ ಆತಂಕದ ಮಾತುಗಳನ್ನು ಆಡುತ್ತಿದ್ದರೆ, ಪರಿಸರ ಪರ ವಾದಿಸುವವರು ವರದಿ ಜಾರಿಯಿಂದ ಮಲೆನಾಡಿನ ಕೃಷಿಕರಿಗಾಗಲೀ ಸಹಜ ಬದುಕಿಗಾಗಲೀ ಯಾವುದೇ ತೊಂದರೆಯಾಗದು ಎಂದು ವಾದಿಸುತ್ತಿದ್ದಾರೆ.

ಈ ವಾದ ಮತ್ತು ವಿವಾದದ ಹಿನ್ನೆಲೆಯಲ್ಲಿ ಮಲೆನಾಡಿನುದ್ದಗಲಕ್ಕೇ ಡಾ ಕಸ್ತೂರಿ ರಂಗನ್‌ ವರದಿ ಆಧಾರಿತ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಅಧಿಸೂಚನೆ ಭಾರೀ ಸಂಚಲನ ಮೂಡಿಸಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಪ್ರಕಟಿಸಿರುವ ಈ ಅಧಿಸೂಚನೆ, ಇದೇ ಮೊದಲನೆಯದೇನಲ್ಲ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಐದು ಬಾರಿ ಕರಡು ಅಧಿಸೂಚನೆ ಪ್ರಕಟಿಸಿದೆ. ಇದೀಗ ಈ ಐದನೇ ಬಾರಿಯ ಅಧಿಸೂಚನೆಗೂ ಮಲೆನಾಡಿನ ಜನಪ್ರತಿನಿಧಿಗಳು ತೀವ್ರ ವಿರೋಧಿ ವ್ಯಕ್ತಪಡಿಸಿ, ದೆಹಲಿಗೆ ನಿಯೋಗ ಹೋಗಿ ಕೇಂದ್ರ ಪರಿಸರ ಸಚಿವರನ್ನು ಭೇಟಿ ಮಾಡಿ ಅಧಿಸೂಚನೆ ವಾಪಸ್‌ ಪಡೆಯುವಂತೆ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಗಳ ನೇತೃತ್ವದ ನಿಯೋಗದ ಮನವಿಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಅಧಿಸೂಚನೆಯನ್ನು ಒಂದು ವರ್ಷ ಕಾಲ ಯಥಾಸ್ಥಿತಿಯಲ್ಲಿಡುವುದಾಗಿಯೂ ಮತ್ತು ಈಗಾಗಲೇ ಕರ್ನಾಟಕವೂ ಸೇರಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ ರಾಜ್ಯಗಳ ತೀವ್ರ ಆಕ್ಷೇಪಗಳ ಕುರಿತು ಅಧ್ಯಯನ ನಡೆಸಲು ನೇಮಕ ಮಾಡಿರುವ ಸಮಿತಿಯ ವರದಿಯ ಬಳಿಕ ಅಧಿಸೂಚನೆಯ ಕುರಿತು ಮುಂದಿನ ಕ್ರಮಕೈಗೊಳ್ಳುವುದಾಗಿಯೂ ಸಚಿವರು ಹೇಳಿರುವುದಾಗಿ ವರದಿಯಾಗಿದೆ. ಆ ಹಿನ್ನೆಲೆಯಲ್ಲಿ ಮಲೆನಾಡಿನ ಜನರ ಮೇಲೆ ತೂಗುಗತ್ತಿಯಂತಾಗಿರುವ ಡಾ ಕಸ್ತೂರಿ ರಂಗನ್‌ ವರದಿ ಜಾರಿಯ ವಿಷಯ ಇನ್ನೊಂದು ವರ್ಷ ಮುಂದೆ ಹೋಗಿದೆ ಎಂದು ದೆಹಲಿಗೆ ನಿಯೋಗ ತೆರಳಿದ್ದ ಆ ಭಾಗದ ಸಂಸದರು, ಶಾಸಕರು ಹೇಳಿಕೆ ನೀಡಿದ್ದಾರೆ.

ಆದರೆ, ಜನಪ್ರತಿನಿಧಿಗಳ ನಿಜವಾದ ಹಿತಾಸಕ್ತಿ ಇರುವುದು ಕಸ್ತೂರಿ ರಂಗನ್‌ ವರದಿ ಜಾರಿಯಿಂದಾಗಿ ಮಲೆನಾಡು ಭಾಗದಲ್ಲಿ ಕಡಿವಾಣ ಬೀಳಲಿರುವ ಕ್ವಾರಿ, ಕ್ರಶರ್‌, ಮರಳು ಗಣಿಗಾರಿಕೆ, ರೆಸಾರ್ಟ್‌ ಉದ್ಯಮದಂತಹ ಪರಿಸರ ವಿರೋಧಿ ಕೃತ್ಯಗಳನ್ನು ಉಳಿಸುವುದೇ ವಿನಃ; ವರದಿಯಿಂದಾಗಿ ಯಾವ ಸಮಸ್ಯೆಗೂ ಈಡಾಗದೇ ಇರುವ ಅಲ್ಲಿನ ಕೃಷಿ, ಜನಜೀವನದ ಹಿತ ಅಲ್ಲ. ತಮ್ಮ ಹಿತಾಸಕ್ತಿಯ ಪರಿಸರ ವಿರೋಧಿ ಉದ್ಯಮ, ದಂಧೆಗಳನ್ನು ರಕ್ಷಿಸಿಕೊಳ್ಳಲು ಜನಪ್ರತಿನಿಧಿಗಳು ಮಲೆನಾಡಿನ ಹಿತರಕ್ಷಣೆಯ ನಾಟಕವಾಡುತ್ತಿದ್ದಾರೆ. ಈ ವಾಸ್ತವಾಂಶವನ್ನು ನಾವು ನ್ಯಾಯಾಲಯದ ಗಮನಕ್ಕೆ ತರುತ್ತೇವೆ ಮತ್ತು ವರದಿ ಜಾರಿ ಮುಂದೆ ಹೋಗದಂತೆ ನೋಡಿಕೊಳ್ಳುತ್ತೇವೆ ಎಂದು ಪರಿಸರ ಪರ ಹೋರಾಟಗಾರರು ಸವಾಲು ಹಾಕಿದ್ದಾರೆ. 

Image
malnad flood

ಹಾಗಾಗಿ ಇದೀಗ ಈ ವಿಷಯ ಮತ್ತೊಮ್ಮೆ ಮಲೆನಾಡಿನ ಜನಪ್ರತಿನಿಧಿಗಳು ಮತ್ತು ಪರಿಸರ ಪರ ಹೋರಾಟಗಾರರು, ಕಾರ್ಯಕರ್ತರ ನಡುವಿನ ಜಿದ್ದಾಜಿದ್ದಿನ ವಿಷಯವಾಗಿ ಹೊರಹೊಮ್ಮಿದೆ. 
ಆ ಹಿನ್ನೆಲೆಯಲ್ಲಿ ಮಲೆನಾಡಿನ ಯುವ ಪರಿಸರ ಕಾರ್ಯಕರ್ತರಲ್ಲಿ ಒಬ್ಬರಾದ ಸಹದೇವ್‌ ಶಿವಪುರ ಅವರು ಒಬ್ಬ ಮಲೆನಾಡಿಗನಾಗಿ ಹತ್ತು ಪ್ರಶ್ನೆಗಳನ್ನು ಮಲೆನಾಡಿನ ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರ ಮುಂದಿಟ್ಟಿದ್ದಾರೆ. ಅವರ ಪ್ರಶ್ನೆಗಳು ಇಂತಿವೆ;

ಪಶ್ಚಿಮಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ಕರಡು ಅಧಿಸೂಚನೆಗೆ ಆಕ್ಷೇಪಣೆ/ ಸಲಹೆ ನೀಡಲು ಈ ವರ್ಷದ ಸೆಪ್ಟೆಂಬರ್ 6ರ ವರೆಗೆ ಸಮಯವಿತ್ತು. ಆದರೂ ತರಾತುರಿಯಲ್ಲಿ ಮಲೆನಾಡಿನ ಶಾಸಕರು ಮತ್ತು ಸಂಸದರು ಅದರ ವಿರುದ್ಧ ದೆಹಲಿಗೆ ತರಾತುರಿಯಲ್ಲಿ ಓಡಿಹೋಗಿದ್ದಾರೆ. ಅವರ ಈ ಧಾವಂತದ ಹಿಂದೆ ಕೇವಲ ಜನರ ಹಿತ ಮಾತ್ರ ಇದೆ ಎಂಬುದನ್ನು ನಂಬಲಾಗದು. ಬದಲಾಗಿ, ಪಶ್ಚಿಮಘಟ್ಟದ ಮರಳು, ಕಲ್ಲು ಗಣಿಗಾರಿಕೆ, ರೆಸಾರ್ಟ್‌ ಮುಂತಾದ ಅವರ ಉದ್ಯಮ, ದಂಧೆಗಳ ಕೋಟ್ಯಾಂತರ ರೂಪಾಯಿ ಆದಾಯಕ್ಕೆ ಪೆಟ್ಟು ಬೀಳುವ ಆತಂಕ ಎದುರಾಗಿದೆ ಎಂದೇ ಅರ್ಥ. ಮಲೆನಾಡಿನ ಶಾಸಕರು, ಸಂಸದರು, ಸಚಿವರುಗಳ ಧಾವಂತದ ದೆಹಲಿ ಭೇಟಿಯ ಅಸಲೀ ಕಾಳಜಿಯ ಕುರಿತು ಇಲ್ಲಿವೆ ಹತ್ತು ಪ್ರಶ್ನೆ.

1. 2018ರಲ್ಲಿ ಕೊಡಗಿನಲ್ಲಿ ಮತ್ತು 2019ರಲ್ಲಿ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ಭೂ ಕಸಿತವಾದಾಗ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ಇಷ್ಟೇ ಆಸಕ್ತಿ ತೋರಿಸಿದ್ದಾರೆಯೇ? ಇವತ್ತಿನ ಮೂಡಿಗೆರೆಯ ಭೂ ಕುಸಿತ ಸಂತ್ರಸ್ತರಿಗೆ ಪರಿಹಾರವೂ ಸಿಕ್ಕಿಲ್ಲ. ಪರ್ಯಾಯ ಭೂಮಿಯೂ ಸಿಕ್ಕಿಲ್ಲ. ದಿನನಿತ್ಯ ಬದುಕಲು ಕಷ್ಟಪಡಬೇಕಾದ ಪರಿಸ್ಥಿತಿ ಅವರಿಗಿದೆ.

2. ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯದ ಬಿಸಿ ಈಗಾಗಲೇ ಮಲೆನಾಡಿಗರಿಗೆ ತಟ್ಟುತಿದೆ. ಹಲವು ದೇಶಗಳು ಈಗಾಗಲೇ ಹವಾಮಾನ ವೈಪರೀತ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ನಿಜವಾಗಿಯೂ ನಮ್ಮ ಶಾಸಕರು ಮತ್ತು ಸಂಸದರು ಜನಪರ ಕಾಳಜಿ ಇದ್ದರೆ ಪಶ್ಚಿಮಘಟ್ಟದಲ್ಲಿ ತುರ್ತಾಗಿ ಈ ವಿಷಯದ ಬಗ್ಗೆ ಸ್ಥಳೀಯರಿಗೆ ಯಾಕೆ ಅರಿವು ಮೂಡಿಸುತ್ತಿಲ್ಲ?

ಈ ಸುದ್ದಿ ಓದಿದ್ದೀರಾ? ತೋಳ ಬಂತು ತೋಳ- 4 | ಜನಪ್ರತಿನಿಧಿಗಳ ನೈಜ ಕಾಳಜಿ ಮಲೆನಾಡಿನ ಬದುಕೇ? ಕ್ವಾರಿ ಲಾಬಿಯೇ?

3. ಶಿಥಿಲಾವಸ್ಥೆಯಲ್ಲಿರುವ ಮಲೆನಾಡಿನ ಸರ್ಕಾರಿ ಶಾಲೆಗಳು ಮತ್ತು ದುಸ್ಥಿತಿಯಲ್ಲಿರುವ ಆಸ್ಪತ್ರೆಗಳನ್ನು ಉತ್ತಮಪಡಿಸುವ ಕುರಿತಾಗಿ ಮಲೆನಾಡಿನ ರಾಜಕಾರಣಿಗಳು ಯಾಕೆ ಈ ಅವಸರ ತೋರಿಸುತ್ತಿಲ್ಲ? ಬಹುತೇಕ ಮಲೆನಾಡಿಗರು ಆರ್ಥಿಕ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತಿರುವುದು ಆರೋಗ್ಯ ಸಮಸ್ಯೆಯಿಂದ ಮತ್ತು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಖಾಸಗಿ ಸಂಸ್ಥೆಗಳಿಗೆ ದುಬಾರಿ ಶುಲ್ಕವನ್ನು ಕೊಟ್ಟು ಸೇರಿಸುತ್ತಿರುವುದರಿಂದ. ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಸಾಮಾನ್ಯ ಜನರಿಗೆ ಕೈಗೆಟುಕುವ ಹಾಗೆ ಇಲ್ಲಿನ ರಾಜಕಾರಣಿಗಳು ಈ ತನಕ ಮಾಡಿದ ಪ್ರಯತ್ನಗಳಾದರು ಏನು? 

4. ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ(kfd)ಗೆ ಕಳೆದ ಹತ್ತು ವರ್ಷದಿಂದ ನೂರಾರು ಜನರು ಸತ್ತರೂ ಪರಿಣಾಮಕಾರಿ ಲಸಿಕೆ ತರಿಸಲು ರಾಜಕಾರಣಿಗಳು ಯಾಕೆ ಮನಸ್ಸು ಮಾಡುತ್ತಿಲ್ಲ?
5. ಮಲೆನಾಡಿನಲ್ಲಿ ಭತ್ತ ಬೆಳೆಯುವವರಿಗೆ ವೈಜ್ಞಾನಿಕ ಬೆಲೆ ಸರಿಯಾಗಿ ಕೈಗೆಟುಕುತ್ತಿಲ್ಲ. ಆದ್ದರಿಂದ ಮಲೆನಾಡಿನ ಭತ್ತದ ಗದ್ದೆಗಳು ವಾಣಿಜ್ಯ ಬೆಳೆ ಇಲ್ಲವೇ, ಲೇಔಟ್ ಗಳಾಗಿ ಪರಿವರ್ತನೆವಾಗುತ್ತಿದೆ. ಭತ್ತಕ್ಕೆ ಬೆಂಬಲ ಬೆಲೆ ಕೊಡಿಸಲು ಮತ್ತು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ನಿಲ್ಲಿಸಲು ಮಲೆನಾಡಿನ ರಾಜಕಾರಣಿಗಳು ಎಷ್ಟು ಆಸಕ್ತಿ ತೋರಿಸಿದ್ದಾರೆ?. 

6. ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಹಳದಿರೋಗ ಕಾಡುತ್ತಿದ್ದು, ಮೂರ್ನಾಲ್ಕು ದಶಕಗಳಿಂದ ಆ ರೋಗ ಹತೋಟಿಗೆ ಪರಿಹಾರವೇ ಸಿಕ್ಕಿಲ್ಲ. ಮಲೆನಾಡು ರೈತರ ಜೀವನಾಡಿಯಾದ ಈ ಅಡಿಕೆಯ ಹಳದಿ ರೋಗಕ್ಕೆ ಪರಿಹಾರ ಕಂಡುಕೊಳ್ಳಲು ಯಾಕೆ ಆಸಕ್ತಿ ತೋರಿಸುತಿಲ್ಲ? 

7. ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಾಡುಮಾವು, ಉಪ್ಪಿನಕಾಯಿ ಮಾಡುವ ಮಾವಿನಮಿಡಿ, ಹಲಸಿನ ಹಣ್ಣು, ಅಂಟ್ವಾಳ, ನೇರಳೆ ಹಣ್ಣು, ಬಟರ್ ಫ್ರೂಟ್, ನಿಂಬೆಹಣ್ಣು, ಬಾಳೆಹಣ್ಣು, ಸೀಗೆಕಾಯಿ, ಜಾಯಿಕಾಯಿ, ರಾಮಪತ್ರೆ ಮುಂತಾದ ಅರಣ್ಯ ಕೃಷಿ ಮತ್ತು ಸಾಂಬಾರ್ ಬೆಳೆಗಳಿಗೆ ಒಳ್ಳೆಯ ಬೆಲೆ ಇದೆ. ಆದರೆ ಮಲೆನಾಡಿನಲ್ಲಿ ನೈಸರ್ಗಿಕವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಬೆಳೆಯುವ ಇಂತಹ ಬೆಳೆಗಳಿಗೆ ತುಂಬಾ ಕಡಿಮೆ ಬೆಲೆ ಕೊಟ್ಟು ರೈತರಿಂದ ಮಧ್ಯವರ್ತಿಗಳು ಖರೀದಿಸಿ ಅಪಾರ ಲಾಭ ಮಾಡಿಕೊಳ್ಳುತ್ತಿದ್ದಾರೆ. ಸಣ್ಣಪುಟ್ಟ ರೈತರು, ಕೃಷಿ ಕಾರ್ಮಿಕರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಈ ಕಾಡು ಕೃಷಿ ಬೆಳೆಗಳಿಗೆ ನ್ಯಾಯಸಮ್ಮತ ಬೆಲೆ ಕೊಡಿಸುವಲ್ಲಿ ನಮ್ಮ ಮಲೆನಾಡಿನ ರಾಜಕಾರಣಿಗಳಿಗೇಕೆ ಆಸಕ್ತಿ ಇಲ್ಲ?

8. ಬಯಲು ನಾಡಿಗೆ ಹೋಲಿಸಿದರೆ ಮಲೆನಾಡಿನಲ್ಲಿ ಅರಣ್ಯಭೂಮಿ ಹೆಚ್ಚು ಇರುವುದರಿಂದ ಭೂಮಿ ಇಲ್ಲದ ಸ್ಥಳೀಯರಿಗೆ ಜಾಗ ಕೊಡುವುದು ತುಂಬಾ ಕಷ್ಟವಾಗಿದೆ. ಆದ್ದರಿಂದ ಅಕ್ರಮ ಸಕ್ರಮ ಮತ್ತು ಅರಣ್ಯ ಹಕ್ಕು ಕಾಯ್ದೆ ಅಡಿ ಮಾತ್ರ ಭೂಮಿ ಸಿಗುವ ಪರಿಸ್ಥಿತಿ ಉದ್ಭವವಾಗಿದೆ. ಅದಕ್ಕೆ ತುಂಬಾ ಕಾಯುವ ಪರಿಸ್ಥಿತಿ ಕೂಡ ಇದೆ. ಮಲೆನಾಡಿನಲ್ಲಿ ಸಾವಿರಾರು ಹೆಕ್ಟೇರ್ ಕೃಷಿ ಮತ್ತು ಪ್ಲಾಂಟೇಶನ್ ಭೂಮಿ ಮಾರಾಟಕ್ಕಿವೆ. ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯೆಲ್ಲಂತೂ ನೂರಾರು ಎಕರೆ ಕಾಫಿ ತೋಟಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಈ ಭೂಮಿಗಳು ಮೋಜು ಮಸ್ತಿ ಮಾಡಲು, ರೆಸಾರ್ಟ್ ಹೋಂ ಸ್ಟೇ ಮಾಡುವ ಉದ್ದೇಶಕ್ಕೆ ಹೊರ ರಾಜ್ಯದ ಹಣವಂತರ ಪಾಲಾಗುತ್ತಿದೆ. ಇಂತಹ ಭೂಮಿಯನ್ನು ಸರ್ಕಾರ ಖರೀದಿಸಿ ಭೂರಹಿತರಿಗೆ ಹಂಚಬಹುದಲ್ಲವೇ? ವಾರ್ಷಿಕ 2,65,000 ಕೋಟಿ ಬಜೆಟ್ ಮಂಡಿಸುವ ಕರ್ನಾಟಕ ಸರ್ಕಾರಕ್ಕೆ ಇದು ಯಾವ ಲೆಕ್ಕ? ಕನಿಷ್ಠ ಪಕ್ಷ 30ರಿಂದ 40% ಭೂರಹಿತರಿಗಾದರೂ ಭೂಮಿ ನೀಡಬಹುದು. ಇಂತಹ ರಚನಾತ್ಮಕ ಚಿಂತನೆ ನಮ್ಮ ಮಲೆನಾಡಿನ ಜನಪ್ರತಿನಿಧಿಗಳಿಗೆ ಯಾಕೆ ಇಲ್ಲ? 

ಈ ಸುದ್ದಿ ಓದಿದ್ದೀರಾ? ತೋಳ ಬಂತು ತೋಳ-5 | ಜನರನ್ನು ಆತಂಕಕ್ಕೆ ತಳ್ಳಿ ರಾಜಕೀಯ ಲಾಭ ಬಾಚುವ ಕ್ಷುಲ್ಲಕ ರಾಜಕಾರಣ

9. ಅತಿಯಾದ ವಾಣಿಜ್ಯೀಕರಣ ಮಾಡಬಾರದೆಂಬ ಉದ್ದೇಶದಿಂದಲೇ ಕೃಷಿ ಮತ್ತು ಸರ್ಕಾರಿ ಜಾಗಗಳನ್ನೂ ಕರಡು ಅಧಿಸೂಚನೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸಲಾಗಿದೆ. ರಕ್ಷಿತಾರಣ್ಯಗಳಿಗೆ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಯ ರಕ್ಷಣೆ ಈಗಾಗಲೇ ಇದೆ. ರಾಜಕಾರಣಿಗಳು ಪರಿಸರ ಸೂಕ್ಷ್ಮ ಪ್ರದೇಶವನ್ನು ಬರೀ ಅರಣ್ಯ ಪ್ರದೇಶಗಳಿಗೆ ಸೀಮಿತವಾಗಿಡಿ ಎಂದು ಹೇಳುತ್ತಿರುವುದೇ ಹಾಸ್ಯಾಸ್ಪದ. ಅವರಿಗೆ ಗೊತ್ತು ಅರಣ್ಯ ಪ್ರದೇಶದಲ್ಲಿ ಹೇಗೂ ಮರಳು ಮತ್ತು ಕಲ್ಲುಗಣಿಗಾರಿಕೆ ಮಾಡಲು ಸಾಧ್ಯವಿಲ್ಲ. ಅವರಿಗೆ ಸೇರಿರುವ ಗಣಿಗಾರಿಕೆ, ಕ್ರಷರ್‌, ಮರಳು ಕ್ವಾರಿ, ರೆಸಾರ್ಟ್‌ಗಳ ಜಾಗ ಎಲ್ಲ ಇರುವುದು ಕೃಷಿ ಮತ್ತು ಸರ್ಕಾರಿ ಭೂಮಿಯಲ್ಲಿ. ಅದನ್ನು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸಿದರೆ ಇವರ ಆದಾಯ ಶೂನ್ಯವಾಗುತ್ತದೆ. ಆ ಆತಂಕವೇ ಜನಪ್ರತಿನಿಧಿಗಳು ಹೀಗೆ ದೆಹಲಿಗೆ ಓಡಲು ಕಾರಣ ಅಲ್ಲವೆ?

10. ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲೇ 2021ರ ಜನವರಿಯಲ್ಲಿ ಸಂಭವಿಸಿದ ಕಲ್ಲು ಕ್ವಾರಿ ಸ್ಪೋಟದಲ್ಲಿ ಐದು ಮಂದಿ ಸಾವನ್ನಪ್ಪಿದ್ದರು. ಆ ಘಟನೆಯಲ್ಲಿ ಇಡೀ ಶಿವಮೊಗ್ಗ ನಗರದಾದ್ಯಂತ ಹಲವು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಭೀಕರ ಸ್ಫೋಟದ ಸ್ಫೋಟಕಗಳನ್ನು ಹೊತ್ತ ಲಾರಿ ಶಿವಮೊಗ್ಗ ನಗರದ ಮಧ್ಯದಲ್ಲೇ ಯಾವುದೇ ಪರವಾನಗಿ, ಮುಂಜಾಗ್ರತೆಗಳಿಲ್ಲದೆ ಹಾದುಹೋಗಿತ್ತು. ಒಂದು ವೇಳೆ ಅದು ನಗರದ ಮಧ್ಯಭಾಗದಲ್ಲಿ ಸ್ಫೋಟಗೊಂಡಿದ್ದರೆ ಇಡೀ ನಗರ ಕ್ಷಣಮಾತ್ರದಲ್ಲಿ ಸ್ಮಶಾನವಾಗಿರುತ್ತಿತ್ತು. ಆ ಘಟನೆಗೆ ನೇರ ಕಾರಣ ಕ್ವಾರಿ ಮಾಲೀಕರು ಮತ್ತು ಸ್ಫೋಟಕ ಸಾಗಣೆದಾರರು. ಆದರೆ, ಆ ಎಲ್ಲರೂ ಪ್ರಭಾವಿ ರಾಜಕಾರಣಿಗಳ ಆಪ್ತರು ಎಂಬುದು ಕೂಡ ಗುಟ್ಟೇನಲ್ಲ. ಒಂದು ವೇಳೆ, ಸರ್ಕಾರದ ಮೊದಲ ಅಧಿಸೂಚನೆಯಂತೆ 2014ರಲ್ಲಿಯೇ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಾಗಿದ್ದರೆ, ಶಿವಮೊಗ್ಗದ ಹುಣಸೋಡು ಸ್ಫೋಟವೇ ಸಂಭವಿಸುತ್ತಿರಲಿಲ್ಲ! ಇಂತಹ ಸಮೂಹನಾಶಕ ಭಯೋತ್ಪಾದಕ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ನಿಜಕ್ಕೂ ಕಾಳಜಿ ಇದ್ದಿದ್ದರೆ, ಈ ಜನಪ್ರತಿನಿಧಿಗಳು ತಮ್ಮ ದಂಧೆಗಿಂತ ಜನರ ಜೀವ ಮುಖ್ಯ, ಬದುಕು ಮುಖ್ಯ ಎನ್ನುವುದಾಗಿದ್ದರೆ ಕೂಡಲೇ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ಆಗ್ರಹಿಸಬೇಕಿತ್ತಲ್ಲವೆ? ಅದರ ಬದಲಾಗಿ ಕ್ವಾರಿ ದಂಧೆಕೋರರ ಪರ ನಿಂತು ವಕಾಲತು ವಹಿಸಿದ ಈ ಜನಪ್ರತಿನಿಧಿಗಳ ʼಜನಪರ ಕಾಳಜಿʼ ಯಾವುದು?

ನಿಮಗೆ ಏನು ಅನ್ನಿಸ್ತು?
2 ವೋಟ್