ತೋಳ ಬಂತು ತೋಳ-5 | ಜನರನ್ನು ಆತಂಕಕ್ಕೆ ತಳ್ಳಿ ರಾಜಕೀಯ ಲಾಭ ಬಾಚುವ ಕ್ಷುಲ್ಲಕ ರಾಜಕಾರಣ

ಕರ್ನಾಟಕ ರಾಜ್ಯದ ಮಟ್ಟಿಗೆ; ಅದರಲ್ಲೂ ನಾನು ವಾಸಿಸುತ್ತಾ ಇರುವ ಶರಾವತಿ ನದಿ ದಂಡೆಯ ನೆಲದಲ್ಲಿ ನಿಂತು ಯೋಚನೆ ಮಾಡಿದರೆ, ಮುಳುಗಡೆ ಸಂತ್ರಸ್ತ ಜನರ ವಿಚಾರದಲ್ಲಿ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಅತ್ಯಂತ ಕೃತಜ್ಞಹೀನವಾಗಿ ನಡೆದುಕೊಂಡಿದೆ. ಈಗ ಅದು ಕಸ್ತೂರಿರಂಗನ್ ವರದಿ ಜಾರಿಯಲ್ಲಿ ಪುನಃ ಸಾಬೀತಾಗುತ್ತಿದೆ.
esa notification

ಡಾ. ಕಸ್ತೂರಿರಂಗನ್ ವರದಿ ಜಾರಿಯ ಬಗ್ಗೆ ಸುದ್ದಿ ಆಗುತ್ತಿರುವ ಈ ಹೊತ್ತಿನಲ್ಲಿ ಮಲೆನಾಡಿನಲ್ಲಿ ಎರಡು ದೃಶ್ಯಗಳು ನಮ್ಮ ಕಣ್ಣೆದುರು ಇವೆ.

ಮೊದಲ ದೃಶ್ಯ ಬೆಂಗಳೂರಿನಲ್ಲಿ ವಿಶೇಷವಾಗಿ ಸ್ಥಾಪಿತವಾಗಿರುವ ಭೂ ಕಬಳಿಕೆ ತಡೆ ವಿಶೇಷ ನ್ಯಾಯಲಯದಲ್ಲಿ ಮಲೆನಾಡು ರೈತರು ಹಳ್ಳಿ ಮೂಲೆಗಳಿಂದ ಹೋಗಿ ಕೊಲೆ, ಖೂನಿ ಮಾಡಿದವರಂತೆ ಆತಂಕದಿಂದ ಕೈಕಟ್ಟಿ, ನಡುಬಗ್ಗಿಸಿ ನಿಂತಿರುವುದು. ಎರಡನೆಯದು; ರೈತರ ಪ್ರತಿನಿಧಿಯಾಗಿ ರಾಜ್ಯ ಹಾಗೂ ಕೇಂದ್ರದ ಶಾಸನಸಭೆ ಪ್ರತಿನಿಧಿಸುವ ಶಾಸಕರು, ಸಂಸದರು ತಮ್ಮ ಪಕ್ಷದ ನಿಯೋಗದ ಜತೆ ದೆಹಲಿಯಲ್ಲಿ ಸೂಟು- ಬೂಟಿನಲ್ಲಿ ಕಂಗೊಳಿಸುತ್ತಾ, ಕಸ್ತೂರಿರಂಗನ್ ವರದಿ ಜಾರಿಗೆ ಬರದಂತೆ ತಡೆಯುವ ಹೇಳಿಕೆ ನೀಡುತ್ತಿರುವುದು. 

ಇವೆರೆಡೂ ಏಕ ಕಾಲದಲ್ಲಿ ಪಶ್ಚಿಮಘಟ್ಟದ, ಅದರಲ್ಲೂ ಕರ್ನಾಟಕದಲ್ಲಿ ಕಂಡುಬರುತ್ತಿರುವ ವೈರುಧ್ಯ ಮತ್ತು ವಿರೋಧಾಭಾಸದ ದೃಶ್ಯ. ಸ್ಪಲ್ಪ ಇದರ ಒಳ ಹೊಕ್ಕು ನೋಡಿದರೆ, ಸೋಗಲಾಡಿ ರಾಜಕೀಯದ ಮತ ಬೇಟೆಯ ಸರ್ಕಸ್ಸಿನ ಜನ ವಿರೋಧಿ ರಾಜಕೀಯದ ಮಜಲುಗಳು ಢಾಳಾಗಿ ಕಾಣಸಿಗುತ್ತವೆ. ಇದರಲ್ಲಿ ಪಕ್ಷಗಳ ವ್ಯತ್ಯಾಸ ಇಲ್ಲದೇ ಇರುವುದು ಕೂಡ ವಿಶೇಷ.

ಕರ್ನಾಟಕ ರಾಜ್ಯದ ಮಟ್ಟಿಗೆ; ಅದರಲ್ಲೂ ನಾನು ವಾಸಿಸುತ್ತಾ ಇರುವ ಶರಾವತಿ ನದಿ ದಂಡೆಯ ನೆಲದಲ್ಲಿ ನಿಂತು ಯೋಚನೆ ಮಾಡಿದರೆ, ಮುಳುಗಡೆ ಸಂತ್ರಸ್ತ ಜನರ ವಿಚಾರದಲ್ಲಿ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಅತ್ಯಂತ ಕೃತಜ್ಞಹೀನವಾಗಿ ನಡೆದುಕೊಂಡಿದೆ. ಈಗ ಅದು ಕಸ್ತೂರಿರಂಗನ್ ವರದಿ ಜಾರಿಯಲ್ಲಿ ಪುನಃ ಸಾಬೀತಾಗುತ್ತಿದೆ.

ಮೈಸೂರು ರಾಜ್ಯದ ಅಭಿವೃದ್ಧಿಗಾಗಿ ಅಗಾಧ ವಿದ್ಯುತ್ ಅಗತ್ಯವಾದಾಗ ಕಣ್ಣಿಗೆ ಬಿದ್ದಿದ್ದು ಪಶ್ಚಿಮಘಟ್ಟದಲ್ಲಿ ಹರಿಯುವ ನದಿಗಳು. ಅವುಗಳಿಗೆ ಒಡ್ಡು ಕಟ್ಟುವ ಅಭಿವೃದ್ಧಿಯ ಹೊಸ ದೇವಾಲಯಗಳಾದ ಅಣೆಕಟ್ಟುಗಳು. ಅಭಿವೃದ್ಧಿಯ ಮಹಾ ಹಸಿವು ಇಂಗಿಸಲು ನನ್ನ ನೆಲದಲ್ಲಿ ಶರಾವತಿ ನದಿಗೆ ಸಮುದ್ರ ಮಟ್ಟದಿಂದ 1800 ಅಡಿ ಎತ್ತರದಲ್ಲಿ ಕಟ್ಟಲಾದ ಹಿರೆಬಾಸ್ಕರ(1942-46) ನಂತರ 1963ರಲ್ಲಿ ನಿರ್ಮಿಸಿದ ಲಿಂಗನಮಕ್ಕಿ ಜಲಾಶಯಗಳು ನೆಲದ ನಾಗರಿಕತೆಯ ಜತೆಯಲ್ಲಿ ಮುಳುಗಿಸಿದ್ದು ಸುಮಾರು 62 ಸಾವಿರ ಎಕರೆ ದಟ್ಟ ಕಾಡು(ಜನವಸತಿ, ಸಾಗುವಳಿ ಭೂಮಿ ಲೆಕ್ಕ ಬೇರೆ!). ಪಶ್ಚಿಮಘಟ್ಟದ ಕಾಡು, ಬೆಟ್ಟ ಮುಳುಗಿಸಿ ಅಣೆಕಟ್ಟು ನಿರ್ಮಾಣ ಮಾಡಿ ರಾಜ್ಯಕ್ಕೇ ಬೆಳಕು ಕೊಟ್ಟರೂ ಇವತ್ತಿಗೂ ಕೂಡ ಯೋಜನೆಗಾಗಿ ತ್ಯಾಗ ಮಾಡಿದವರ ಬದುಕು ದೀಪದ ಬುಡದ ಕತ್ತಲಿನ ಕಥೆಯಾಗಿದೆ.

ಈ ಮೊದಲೇ ನಾನು ಹೇಳಿದ ಮೊದಲ ದೃಶ್ಯದಲ್ಲಿ ಅಕ್ರಮ ಭೂ ಕಬಳಿಕೆ ಕೇಸಿನಲ್ಲಿ ರಾಜಧಾನಿಯ ನ್ಯಾಯಾಲಯದ ಮುಂದೆ ನಿಂತವರು ಇದೇ ನೆಲದ ಜನ. ಈಗ ಕಸ್ತೂರಿರಂಗನ್ ವರದಿ ಈಗಿರುವ ರೀತಿಯಲ್ಲೇ ಜಾರಿಗೆ ಬಂದರೆ ಅದರ ಮೊದಲ ಏಟು ತಿಂದು ಹೈರಾಣಾಗುವವರು ಕೂಡ ಇಡೀ ರಾಜ್ಯದ ಬೆಳಕಿಗಾಗಿ ಬದುಕನ್ನೇ ತ್ಯಾಗ ಮಾಡಿದ ಅದೇ ಜನ. 

ಆದರೆ, ಕರ್ನಾಟಕ ರಾಜ್ಯ ಸರ್ಕಾರಕ್ಕೆ ಇದು ಮರೆತು ಹೋದಂತೆ ಕಾಣುತ್ತಿದೆ. ಅಪ್ಪಿತಪ್ಪಿಯೂ ಅದು ಮನೆಯ ಬೆಳಕಿಗೆ ಬದುಕು ಕೊಟ್ಟು ಪಂಜರದಲ್ಲೀ ಉಳಿದ ತ್ಯಾಗ ಮಾಡಿದ ಜನರ ಬಗ್ಗೆ ಉಲ್ಲೇಖ ಮಾಡುತ್ತಿಲ್ಲ. ಯೋಚನೆ ಮಾಡಿದರೆ ತಾನೇ ಮಾತಿಗೆ, ಕೃತಿಗೆ ದಕ್ಕುವುದು..? ಅಂತಹ ಯೋಚನೆಯೇ ಸರ್ಕಾರಕ್ಕಾಗಲೀ, ನಾಡಿನ ಬಹುಸಂಖ್ಯಾತ ಜನರಿಗಾಗಲೀ ಇಲ್ಲ.

ಮಾನವೀಯತೆ ಮೀರಿದ ಕ್ರೌರ್ಯದ ಪರಮಾವಧಿ

ರೈತರ ಮೇಲೆ ಅರಣ್ಯ ಮತ್ತು ಕಂದಾಯ ಭೂಮಿ ಅತಿಕ್ರಮಣ ಕೇಸು ಯಾವ ಮಟ್ಟಕ್ಕೆ ಸರಣಿಯೋಪಾದಿಯಲ್ಲಿ ದಾಖಲಾಗುತ್ತಿವೆ ಎಂದರೆ; ಶೇಕಡಾ 70ಕ್ಕೂ ಹೆಚ್ಚು ಸಂತ್ರಸ್ತರು ನ್ಯಾಯಾಲಯದ ಕೇಸು, ಕೋಟಲೆಗಳನ್ನು ಎದುರಿಸಲಿದ್ದಾರೆ. ವೃದ್ಧರು, ಮಹಿಳೆಯರು, ಮಕ್ಕಳು ಎಂದು ಯಾವ ಮಾನವೀಯ ಮಿತಿಯೂ, ಕೇಸು ದಾಖಲು ಮಾಡುವ ರಾಜ್ಯ ಸರ್ಕಾರದ ಅಧೀನ ಅಧಿಕಾರಿಗಳಿಗೆ ಇಲ್ಲ ಎನ್ನುವುದು ಅಧಿಕಾರಶಾಹಿ ಮತ್ತು ಆಡಳಿತದ ಸೂತ್ರ ಹಿಡಿದವರ ಕ್ರೌರ್ಯದ ಪರಮಾವಧಿಯ ಮುಖವನ್ನು ಅನಾವರಣಗೊಳಿಸುತ್ತಿದೆ.

ಹಾಗೆ ನೋಡಿದರೆ; ಈ ವಿಶೇಷ ಭೂ ಅತಿಕ್ರಮಣ ತಡೆ ನ್ಯಾಯಾಲಯ ಆರಂಭವಾಗಿದ್ದೇ ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ. ಡಾ ಕಸ್ತೂರಿರಂಗನ್ ವರದಿಯ ವಿಚಾರದಲ್ಲಿ ಪ್ರತಿಭಟನೆಯನ್ನು ದಾಖಲು ಮಾಡುತ್ತಾ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತ, ಬೀದಿಯಲ್ಲಿ ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ಸೇ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ ರೈತರನ್ನು ರಾಜಧಾನಿಯ ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಿದೆ.

ಕಸ್ತೂರಿರಂಗನ್ ವರದಿಯ ಅಧಿಸೂಚನೆ ಹೊರಡಿಸಿರುವ ವಿವಿಧ ದಿನಾಂಕಗಳನ್ನು ಒಮ್ಮೆ ಗಮನಿಸಿದರೆ ಅನುಮಾನ ಮೂಡದೇ ಇರದು. ಅಧಿಸೂಚನೆ ಹೊರಡಿಸಿ ಈ ವರದಿಯ ಜಾರಿಗೆ ಬಂದರೆ ಆಗುವ ಕಷ್ಟಗಳ ಬಗ್ಗೆ ವ್ಯಾಪಕ ಜನರ ಗಮನ ಸೆಳೆಯುವಂತೆ ಮಾಡುವುದು, ಜನರಲ್ಲಿ ಆತಂಕ ಒಂದು ಮಟ್ಟ ತಲುಪಿದೆ ಎಂದಾಗ ಪಶ್ಚಿಮಘಟ್ಟಗಳ ಜನಪ್ರತಿನಿಧಿಗಳು ಸಭೆ ಕರೆಯುವುದು, ಖಂಡನಾ ನಿರ್ಣಯ ಮಾಡುವುದು, ಯಾವುದೇ ಕಾರಣಕ್ಕೂ ವರದಿ ಜಾರಿಗೆ ಅವಕಾಶ ಮಾಡಿ ಕೊಡುವುದಿಲ್ಲ ಎಂದು ಹೇಳಿಕೆ ಕೊಡುವುದು ಒಂದು ರಿವಾಜು ಎನ್ನುವ ಹಾಗೆ ಕಳೆದ ಒಂದು ದಶಕದಿಂದಲೂ, ಪಕ್ಷ-ಪಾರ್ಟಿ ವ್ಯತ್ಯಾಸವಿಲ್ಲದೆ ಪಾಲಿಸಿಕೊಂಡು ಬರಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ?

ತೋಳ ಬಂತು ತೋಳ- 4 | ಜನಪ್ರತಿನಿಧಿಗಳ ನೈಜ ಕಾಳಜಿ ಮಲೆನಾಡಿನ ಬದುಕೇ? ಕ್ವಾರಿ ಲಾಬಿಯೇ?

ಚುನಾವಣೆ ಸಮೀಪಿಸಿದಾಗಲೇ, ಇನ್ನೇನು ಚುನಾವಣೆಗೆ ವರ್ಷ ಒಪ್ಪತ್ತಿದೆ ಎನ್ನುವಾಗಲೇ ಈ ಎಲ್ಲಾ ವಿದ್ಯಮಾನಗಳು ಪುನರಾವರ್ತನೆಯಾಗುತ್ತಿರುವುದು ಈ ವರದಿ ರಾಜಕಾರಣಿಗಳಿಗೆ ಮತ ನೀಡುವ ಕಾಮಧೇನುವಾಗಿದೆಯೇ ಎಂಬ ಗಂಭೀರ ಅನುಮಾನ ಹುಟ್ಟಿಸುತ್ತಿದೆ.

ಕ್ಷುಲ್ಲಕ ರಾಜಕಾರಣದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳೆರಡೂ ಪೈಪೋಟಿ

ಈ ಹಿನ್ನೆಲೆಯಲ್ಲಿ ಎರಡನೇ ದೃಶ್ಯದಲ್ಲಿ ಕಾಣುವ ಸಭೆ ನಡೆಸುವ, ದೆಹಲಿ ಭೇಟಿ ಮಾಡುವ ನಮ್ಮ ರಾಜಕಾರಣಿಗಳು ಕಾಣುತ್ತಾರೆ. ಮೊನ್ನೆಯಷ್ಟೇ ಬಿಜೆಪಿ ನಿಯೋಗ ಮುಖ್ಯಮಂತ್ರಿ ನೇತೃತ್ವದಲ್ಲಿ ಕೇಂದ್ರ ಪರಿಸರ ಖಾತೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಮಾದ್ಯಮದಲ್ಲಿ ʼಕಸ್ತೂರಿರಂಗನ್ ವರದಿಯಿಂದ ಸದ್ಯಕ್ಕೆ ಇಲ್ಲ ಅಪಾಯʼ ಎನ್ನುವ ತಲೆಬರಹದ ವಿಸೃತ ವರದಿ ನಿರೀಕ್ಷಿತ. ಜನರನ್ನು ಆತಂಕಕ್ಕೆ ತಳ್ಳಿ ರಾಜಕೀಯ ಲಾಭ ಬಾಚುವ ಈ ಕ್ಷುಲ್ಲಕ ರಾಜಕಾರಣವನ್ನು ಕಾಂಗ್ರೆಸ್, ಬಿಜೆಪಿ ಪಕ್ಷಗಳೆರಡೂ ಪೈಪೋಟಿಗೆ ಬಿದ್ದು ಮಾಡುತ್ತಿವೆ.

ಮುಖ್ಯಮಂತ್ರಿಗಳ ದೆಹಲಿ ನಿಯೋಗದಲ್ಲೀ ನಮ್ಮ ಶಿವಮೊಗ್ಗ ಜಿಲ್ಲೆಯ ಸಂಸದರು, ಮಂತ್ರಿಗಳು, ಶಾಸಕರು ಇದ್ದರು. ಅವರು ಭೇಟಿಗೆ ತೆರಳುವ ಎರಡು ದಿನದ ಮುಂಚೆ ಜಿಲ್ಲೆಯಲ್ಲಿ ಒಂದು ಪ್ರಮುಖ ಘಟನೆ ನಡೆದದ್ದು ಹೆಚ್ಚು ಸುದ್ದಿ ಆಗಲೇ ಇಲ್ಲ. ಶರಾವತಿ ನದಿ ದಂಡೆಯಲ್ಲಿ ಇವತ್ತಿಗೂ ರಸ್ತೆ, ವಿದ್ಯುತ್, ಶಾಲೆ ಮುಂತಾದ ಸಕಲ ಸೌಲಭ್ಯವಂಚಿತ ಕುಗ್ರಾಮ ಉರಳುಗಲ್ಲುನ ರೈತರು ತಮ್ಮ ಊರಿನ ರಸ್ತೆ, ವಿದ್ಯುತ್‌ಗಾಗಿ ದಾರಿಯಂಚಿನ ನಾಲ್ಕಾರು ಮರ ಕಡಿದರು ಎಂದು ಒಂಭತ್ತು ಮಂದಿಯ ಮೇಲೆ ಕೇಸು ದಾಖಲು ಮಾಡಿ, ಅವರ ಕೈಗೆ ಸ್ಲೇಟು ಕೊಡಿಸಿ ʼಕೊಲೆಗಡುಕರು, ಡಕಾಯಿತರು, ಮರಗಳ್ಳರುʼ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಗಿದೆ. ಬರೋಬ್ಬರಿ ಆರು ದಶಕದಿಂದ ತಮ್ಮನ್ನು ಕತ್ತಲಲ್ಲಿಟ್ಟಿರುವ ಸರ್ಕಾರದ ನಿರ್ಲಕ್ಷ್ಯಕ್ಕೆ ರೋಸಿ, ದಾರಿಗಾಗಿ ಮರ ಕಡಿದ ಹಳ್ಳಿಯ ಈ ರೈತಾಪಿ ಮಕ್ಕಳು ನಾಲ್ಕು ದಿನ ನ್ಯಾಯಾಂಗ ಬಂಧನ ಹೆಸರಿನಲ್ಲಿ ಜೈಲಿನಲ್ಲಿದ್ದು ಬಂದರು.

ತಮ್ಮ ಜಿಲ್ಲೆಯಲ್ಲೇ ಈ ರೀತಿ ತಮ್ಮ ಅಧೀನದ ಅರಣ್ಯಾಧಿಕಾರಿಗಳು ದರ್ಪ ಮೆರೆದು ರೈತರನ್ನು ಅಮಾನುಷವಾಗಿ ನಡೆಸಿಕೊಂಡರೂ ಆ ಬಗ್ಗೆ ತುಟಿ ಪಿಟಿಕ್ ಎನ್ನದ ಈ ಜನಪ್ರತಿನಿಧಿಗಳು ದೆಹಲಿಗೆ ಹೋಗಿ ರೈತರ ಪರ ಕಾಳಜಿ ಮೆರೆಯುತ್ತಿರುವುದು ಮತ ಬೇಟೆಯ ಕಸರತ್ತು ಎಂದು ಯಾರಿಗಾದರೂ ಅನ್ನಿಸದೇ ಇರದು; ಅಲ್ಲವೇ...?

ನಿಮಗೆ ಏನು ಅನ್ನಿಸ್ತು?
1 ವೋಟ್