ನೆನಪು | ಈ ಕಾಲಕ್ಕೂ ಬೇಕಾದ ಲಂಕೇಶ್ ಚಿಂತನೆ

ಲಂಕೇಶ್‌

ನಾವೆಲ್ಲ ಏನೇನೋ ಮಾಡುತ್ತಾ ಏನೇನನ್ನೋ ಕಂಡುಕೊಳ್ಳುತ್ತೇವೆ; ಬದುಕು ನೀಡಿದ್ದು ಕಂಡು ಚಕಿತಗೊಳ್ಳುತ್ತೇವೆ. ಮನುಷ್ಯ ಮರೆಯಲಾರದ್ದು ಯಾವುದು ಎಂದು ನೋಡಿ ಚಕಿತನಾದೆ. ವಿಶೇಷ ಔದಾರ್ಯ, ಪ್ರೀತಿ, ಭಯ, ಆತಂಕ ಇವುಗಳೆಲ್ಲ ನಮ್ಮ ಮನಸ್ಸಿನಲ್ಲಿ ನೆಲೆಸುತ್ತವೆ; ಆದರೆ ಎಲ್ಲಕ್ಕಿಂತ ಗಟ್ಟಿಯಾಗಿ ನಿಲ್ಲುವುದು ಬಾಲ್ಯದ ಹಸಿವು, ಹಿಂಸೆ, ಅವಮಾನ...

ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ ಪಿ.ಲಂಕೇಶರು ಜನವರಿ 25, 2000ರಂದು ಇಹಲೋಕ ತ್ಯಜಿಸಿದರು. ಅವರು ಭೌತಿಕವಾಗಿ ಇಲ್ಲವಾಗಿ ಇಂದಿಗೆ, ಬರೋಬ್ಬರಿ 23 ವರ್ಷಗಳಾದವು. ಕಾವೇರಿ ನದಿಯಲ್ಲಿ ನೀರು ಹರಿದುಹೋದಷ್ಟೇ ಸಹಜವಾಗಿ ದೇಶದಲ್ಲೂ ಹಲವು ಬದಲಾವಣೆಗಳಾದವು. ಕಾಲದ ಚಕ್ರಕ್ಕೆ ಸಿಕ್ಕಿ ಎಂಥೆಂಥವರೋ ಏನೇನೋ ಆಗಿಹೋದರು. ಅವುಗಳ ನಡುವೆಯೇ ನಾಡಿನ ದೈತ್ಯಪ್ರತಿಭೆ ಲಂಕೇಶರು ಮಾತ್ರ ನಾಡಿನ ಜನತೆಯ ಮನಃಪಟಲದಿಂದ ಮರೆಯಾಗಲಿಲ್ಲ. ಅವರ ಬೌದ್ಧಿಕ ಚಿಂತನೆ ಮಸುಕಾಗಲಿಲ್ಲ. ಹೊಸ ತಲೆಮಾರಿನ ಯುವಕ-ಯುವತಿಯರು ಲಂಕೇಶರ ಪ್ರಭಾವಕ್ಕೊಳಗಾಗುವುದು ನಿಂತಿಲ್ಲ. ಲಂಕೇಶರು ಲೇಖಕರಾಗಿ, ಸಂಪಾದಕರಾಗಿ, ಚಲನಚಿತ್ರ ನಿರ್ದೇಶಕರಾಗಿ ಈ ನಾಡಿಗೆ ಕೊಟ್ಟ ಕೊಡುಗೆ, ಮುಂದಿನ ತಲೆಮಾರಿಗೆ ತಲುಪಿಸಲು ಯೋಗ್ಯವಾದದು ಎಂಬ ಕಾರಣಕ್ಕಾಗಿ.. ಅವರ ಬರಹಗಳಿಂದ ಹೆಕ್ಕಿ ತೆಗೆದ ಒಂದಷ್ಟು `ಲಂಕೇಶ್ ಚಿಂತನೆ’ ಇಲ್ಲಿದೆ.

ಇದು ಗೋಡೆಗಳ ದೇಶ. ನಾಲ್ಕು ವಾಕ್ಯ ಇಂಗ್ಲಿಷ್ ಕಲಿತವನು ಬಡಬಗ್ಗರ ನಿಟ್ಟುಸಿರಿನಿಂದ ದೂರವಾಗುತ್ತಾನೆ. ನಾಲ್ಕು ಕಾಸು ಗಳಿಸಿದವನು ತನ್ನೆಲ್ಲ ಮಾನವತೆ ಕಳೆದುಕೊಂಡು ತನ್ನ ಕಾಸನ್ನು ಉಳಿಸಿಕೊಳ್ಳಲು ರೌಡಿಗಳ, ದೇವರುಗಳ, ಪೊಲೀಸರ ಮೊರೆಹೋಗುತ್ತಾನೆ. ತನ್ನದು ಉತ್ತಮಜಾತಿ ಎಂದು ನಂಬಿಕೊಂಡವನು ತನ್ನೆಲ್ಲ ಶಾಣ್ಯತನ ಬಳಸಿಕೊಂಡು ಜನರನ್ನು ಮೋಸಗೊಳಿಸಲು ಹಗಲಿರುಳು ಸಂಚು ನಡೆಸುತ್ತಾನೆ. (ಬಿಟ್ಟು ಹೋದ ಪುಟಗಳು, 1980)

ಜಗತ್ತಿನ ಎಲ್ಲ ಜನರೂ ಒಂದೇ ಎನ್ನುತ್ತೇವೆ. ಹಾಗೆಯೇ ಒಂದೇ ತರಹ ಎಂದೂ ಹೇಳಿಬಿಡಬಹುದು. ಆದರೆ ಅದು ಸುಳ್ಳು. ಪ್ರತಿಯೊಬ್ಬ ಮನುಷ್ಯನ ವೈಶಿಷ್ಟ್ಯವೇ ಆತನ ನಿಜವಾದ ಸಂಪತ್ತು. ಪ್ರತಿಯೊಬ್ಬನೂ, ಪ್ರತಿಯೊಬ್ಬರೂ ವಿಶಿಷ್ಟ- ಏಕೆಂದರೆ, ಅವರು ತಮ್ಮವೇ ಆದ ನೆನಪು ಮತ್ತು ಕನಸುಗಳನ್ನು ಪಡೆದಿರುತ್ತಾರೆ; ತಮ್ಮದೇ ಅಭ್ಯಾಸಗಳು, ಕಾತರಗಳು ಅವರಲ್ಲಿರುತ್ತವೆ. ಇದರಿಂದಾಗಿಯೇ ಮನುಷ್ಯ ಸದಾ ಪ್ರಕ್ಷುಬ್ಧ. ಸಾವು ಮತ್ತು ಬದುಕಿನ ನಡುವೆ ತುಯ್ಯುವ ಜೀವ ಅದು. (ಟೀಕೆ-ಟಿಪ್ಪಣಿ, 1997)

ಭಾರತೀಯರ ಘೋರ ಅಪರಾಧ ಯಾವುದೆಂದರೆ, ಕಾಲದ ನಿರಂತರತೆ; ಮೈಲಿಗಲ್ಲುಗಳು, ನಕಾಶೆಗಳೇ ಇಲ್ಲದ ಕಾಲವನ್ನು ಪಡೆದಿರುವುದು. Punctuality ಎಂಬ ಪದವನ್ನೇ ಪಡೆಯದ ನಮ್ಮ ವೈಯಕ್ತಿಕ ಆಶಯಗಳು ವ್ಯರ್ಥವಾಗುವುದು, ನಮ್ಮ ರಾಷ್ಟ್ರದ ಯೋಜನೆಗಳೆಲ್ಲ ಮುಗ್ಗರಿಸುವುದು ಇದರಿಂದಾಗಿಯೇ. ನೀನು ನಿನಗೆ ಟೈಂ ಕೊಟ್ಟುಕೊಂಡಿದ್ದರೆ ಅದಕ್ಕೆ ಬದ್ಧವಾಗಿರುವುದು, ಇತರರಿಗೆ ಕೊಟ್ಟಿದ್ದರೆ ಅದನ್ನು ಗೌರವಿಸುವುದು ನನ್ನ ಬೇರೆ ಎಲ್ಲ ಹಿತವಚನಕ್ಕಿಂತ ಮುಖ್ಯವಾದುದು. ಎಲ್ಲ ಪ್ರತಿಭೆಯ ವಿಕಾಸಕ್ಕೆ, ಸಮಾಜದ ಮುನ್ನಡೆಗೆ ಇದು ಅತ್ಯಂತ ಮುಖ್ಯವಾದದ್ದು, ನಮ್ಮ ಸೃಷ್ಟಿ, ಸೆಕ್ಸ್, ರಂಜನೆ, ವಿದ್ಯೆಗೆ ಆಧಾರ ಇದು. (ಟೀಕೆ-ಟಿಪ್ಪಣಿ, 1991)

ನಾವೆಲ್ಲ ಏನೇನೋ ಮಾಡುತ್ತಾ ಏನೇನನ್ನೋ ಕಂಡುಕೊಳ್ಳುತ್ತೇವೆ; ಬದುಕು ನೀಡಿದ್ದು ಕಂಡು ಚಕಿತಗೊಳ್ಳುತ್ತೇವೆ. ಮನುಷ್ಯ ಮರೆಯಲಾರದ್ದು ಯಾವುದು ಎಂದು ನೋಡಿ ಚಕಿತನಾದೆ. ವಿಶೇಷ ಔದಾರ್ಯ, ಪ್ರೀತಿ, ಭಯ, ಆತಂಕ ಇವುಗಳೆಲ್ಲ ನಮ್ಮ ಮನಸ್ಸಿನಲ್ಲಿ ನೆಲೆಸುತ್ತವೆ; ಆದರೆ ಎಲ್ಲಕ್ಕಿಂತ ಗಟ್ಟಿಯಾಗಿ ನಿಲ್ಲುವುದು ಬಾಲ್ಯದ ಹಸಿವು, ಹಿಂಸೆ, ಅವಮಾನ; ಜಾತಿಯಿಂದ ಬಂದ ಅವಮಾನ ಎಲ್ಲಕ್ಕಿಂತ ಆಳವಾದದ್ದು. (2-11-1992)

ಲಂಕೇಶ್‌

ಮನುಷ್ಯ ಎಲ್ಲ ಜೀವಿಗಳಲ್ಲಿ ಶ್ರೇಷ್ಠಜೀವಿ ಎಂದು ಕೆಲವರು, ಹುಂಬರು ಹೇಳಿಕೊಳ್ಳುತ್ತಾರೆ. ಅದು ಅಪ್ಪಟ ಸುಳ್ಳು. ಲಕ್ಷಾಂತರ ವರ್ಷದಿಂದ ಅಣಬೆ ಮಾಡಿಕೊಂಡ, ಮಣ್ಣು ರೂಢಿಸಿಕೊಂಡ, ತಮ್ಮ ಕುಲಕ್ಕೆ ಬೇಕಾದ ಬೆಳೆ ಬೆಳೆದುಕೊಂಡ ಇರುವೆಗಳಿಗಿರುವ ವಿವೇಕ ಕೂಡ ಮನುಷ್ಯನಿಗಿಲ್ಲ. ಈತನ ಕೈ, ಬಾಯಿ, ಆಯುಧ, ವಿಜ್ಞಾನವನ್ನು ನೋಡಿದರೆ ಎಲ್ಲ ಜೀವಿಗಳಿಗೆ ಅಸಹ್ಯವಾಗುತ್ತದೆ; ಈತನ ನೆನಪು ಮತ್ತು ಸೇಡು ಗಮನಿಸಿದರೆ ಭಯವಾಗುತ್ತದೆ. ಮನುಷ್ಯನ ನೆನಪು, ಆತನ ವಿದ್ಯೆ ಮತ್ತು ವಿವೇಕ, ನೂರಾರು ಧರ್ಮಗಳು, ವಿಶ್ವವಿದ್ಯಾನಿಲಯಗಳು, ವಿನಯ, ಪ್ರೇಮ ಬೋಧಿಸುವ ಸಂಸ್ಥೆಗಳು, ವ್ಯಕ್ತಿಗಳು, ಇಷ್ಟಿದ್ದರೂ ಇಲ್ಲಿ ವಿಚಾರಹೀನತೆ, ಸೇಡು, ಕ್ರೌರ್ಯ ಕಡಿಮೆಯಾಗಿಲ್ಲ.
(ಟೀಕೆ-ಟಿಪ್ಪಣಿ, 1994)

ನನ್ನ ಪ್ರಕಾರ ಇಲ್ಲಿಯ ಪ್ರಕೃತಿ, ಜನ, ಸಂಪತ್ತು, ಆತ್ಮಗೌರವ ಇವೆಲ್ಲವುಗಳ ಬಗ್ಗೆ ಯಾವುದೇ ಪ್ರೀತಿ, ಗೌರವ ಇಲ್ಲದವನು ಪರಕೀಯ. ಇಂಥ ಪರಕೀಯತೆಗೆ ಉದಾಹರಣೆಯಾಗಿ ದಿವಾನ್ ಪೂರ್ಣಯ್ಯನವರನ್ನು ನೋಡಬಹುದು. ಮೈಸೂರು ರಾಜ್ಯದ ಸೋಲು, ಟಿಪ್ಪುವಿನ ಸಾವು, ಇಂಗ್ಲಿಷರ ದಬ್ಬಾಳಿಕೆ ಎಲ್ಲವೂ ಈ ದೇಶದ ಚೈತನ್ಯವನ್ನು ಮುರಿಯುತ್ತಿದ್ದಾಗ ಪೂರ್ಣಯ್ಯನವರು ದಿವಾನ ಸ್ಥಾನದಲ್ಲಿ ನೆಮ್ಮದಿಯಾಗಿದ್ದರು. ಆದರೆ ಫ್ರೆಂಚರ ದುಬಾಯಿ ಪಾದ್ರಿ ಸಾವಿರಾರು ಜನರಿಗೆ ನೆರವಾದ; ಸಿಡುಬು ಬಂದಾಗ ಲಸಿಕೆ ಹಾಕಿಸಿ ಜೀವ ಉಳಿಸಿದ. ಇಲ್ಲಿಯ ಅನಕ್ಷರತೆ, ಅಸಹಾಯಕತೆಯನ್ನು ತಮ್ಮ ವೈಭವಕ್ಕಾಗಿ ಬಳಸಿಕೊಂಡ ಪೂರ್ಣಯ್ಯ ಈ ದೇಶದವರು, ಇಲ್ಲಿಯ ಜನರನ್ನು ಪೊರೆದ ದುಬಾಯಿ ಪಾದ್ರಿ ಪರಕೀಯ ಎಂದು ನಾನು ನಂಬುವುದಿಲ್ಲ. ಆದ್ದರಿಂದಲೇ ನನ್ನ ದೃಷ್ಟಿಯಲ್ಲಿ ಪೂರ್ಣಯ್ಯ ಪರಕೀಯ, ವಿಶ್ವೇಶ್ವರಯ್ಯ ಸ್ವಕೀಯ. ಅನ್ಯಜಾತಿಯ ದೇವಾಲಯಗಳನ್ನು ಬೀಳಿಸುವ ಅಡ್ವಾಣಿ, ವಾಜಪೇಯಿಗಳು ಪರಕೀಯ, ಸೋನಿಯಾ ಈ ದೇಶದ ಹೆಣ್ಣುಮಗಳು. ನಮ್ಮ ಜನಕ್ಕೆ ಎಲ್ಲ ದೇಶಗಳಿಂದ, ಎಲ್ಲ ಬಗೆಯ ಜನರಿಂದ ಆರ್ಥಿಕ ನೆರವು, ಬೆಚ್ಚನೆಯ ಪ್ರೀತಿ, ವೈಜ್ಞಾನಿಕ ದೃಷ್ಟಿ, ಆಧುನಿಕ ಧೋರಣೆ ಬೇಕಾಗಿದೆ.
(ಬಿಟ್ಟು ಹೋದ ಪುಟಗಳು, 1998)

ಮಾತು ಮತ್ತು ಜಾಣತನ ಯಾವಾಗಲೂ ಮನುಷ್ಯನನ್ನು ನಿಜವಾದ ಸ್ಥಿತಿಯಿಂದ ದೂರಕ್ಕೆ ಒಯ್ಯುತ್ತದೆ. ಇದು ಭಾರತೀಯನಾದ ಹೊಸ ಮನುಷ್ಯ ಧೈರ್ಯವಾಗಿ ಎದುರಿಸಬೇಕಾದ ಸಮಸ್ಯೆ. ಭಾಷೆಯೊಂದು ಮೌಲ್ಯವಾಗುವುದು ಅದು ಸತ್ಯಕ್ಕೆ ಹತ್ತಿರ ಹತ್ತಿರ ಹೋದಾಗ; ಸತ್ಯದಿಂದ ದೂರದೂರ ಹೋಗಿ ತೀರಾ ಸುಂದರವೂ ಪರಿಷ್ಕೃತವೂ ಆದಾಗ ಅಲ್ಲ. ಈ ಕಾರಣದಿಂದಲೇ ಕೆಲವರ ಭಾಷೆಯಾಗಿ ಉಳಿದ ಸಂಸ್ಕೃತ ಉಳಿದ ಭಾರತೀಯರಿಗೆ ಬೇಡವಾಯಿತು; ಈ ಕಾರಣದಿಂದಲೇ ನಮ್ಮ ಆಧುನಿಕ ಸಮಸ್ಯೆಗಳನ್ನು, ಪ್ರಜ್ಞೆಯನ್ನು ಹೇಳಲಾಗದಿದ್ದರೆ ಕನ್ನಡ ಕೂಡ ಬೇಡವಾಗುತ್ತದೆ. (ಕಂಡದ್ದು ಕಂಡ ಹಾಗೆ‌, 1975)

ಪ್ರತಿಯೊಬ್ಬನೂ ದುರ್ಬಲ ಜಾತಿಗಳ ಬಗ್ಗೆ ಸಹನೆ, ಪ್ರೀತಿಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುವುದು ಜಾತ್ಯತೀತ ನಡವಳಿಕೆಯ ಮೊದಲ ಘಟ್ಟ. ಆದರೆ ಇದೊಂದು ಕಲೆ ಕೂಡ. ಅಸಹಾಯಕ ಜಾತಿಗಳಿಗೆ ಅವಮಾನವಾಗದ ರೀತಿಯಲ್ಲಿ ಉದಾರಿಯಾಗಿರುವುದು, ಅವರ ನೊಂದ ಮನಸ್ಸಿಗೆ ಇನ್ನಷ್ಟು ನೋವಾಗದಂತೆ ವಸ್ತುನಿಷ್ಠ ಪ್ರೀತಿ ತೋರುವುದು, ಅವರು ಕೂಡ ತಮ್ಮಷ್ಟಕ್ಕೆ ತಾವಿರಲು ಯತ್ನಿಸುವ ಜನ ಎನ್ನುವುದನ್ನು ಮರೆಯದೆ ವರ್ತಿಸುವುದು ಜಾತ್ಯತೀತತೆಯ ಕಲೆ.
(ಟೀಕೆ-ಟಿಪ್ಪಣಿ, 1991)

ಲಂಕೇಶ್‌

ಜಾತಿಗಳ ಬಗ್ಗೆ ಭಾವುಕರಾಗುವವರು ಜಾತಿಗಳ ವೈಶಿಷ್ಟ್ಯ, ವೈಚಿತ್ರ್ಯ ಗ್ರಹಿಸುವುದಿಲ್ಲ. ಎಲ್ಲ ಕಷ್ಟಗಳು ಶುರುವಾಗುವುದು ಅವರಿಬ್ಬರ ನಡುವೆ ದುಷ್ಟರು ಕಟ್ಟಿರುವ ಗೋಡೆಗಳಿಂದ. ಮುಸ್ಲಿಮರೆಂದರೆ ಎಲ್ಲೋ ಗುಂಪಾಗಿ ವಾಸಿಸುವ, ಹಿಂದೂಗಳನ್ನು ಮುಗಿಸಲು ಕತ್ತಿ ಮಸೆಯುತ್ತಿರುವ, ಬುರ್ಖಾಗಳ ಹಿಂದಿನ, ಮುಲ್ಲಾಗಳ ಸಾನಿಧ್ಯದಲ್ಲೇ ಇರುವ, ಮೆಕ್ಕಾ ಬಗ್ಗೆ ಸದಾ ಚಿಂತಿಸುವ ಜನರೆಂದು ಅನೇಕ ಹಿಂದೂಗಳು ತಿಳಿಯುತ್ತಾರೆ; ಜಿಹಾದ್ ಘೋಷಿಸಿ ಎಲ್ಲವನ್ನೂ ಭಗ್ನಗೊಳಿಸಲು ತುದಿಗಾಲಲ್ಲಿ ನಿಂತಿರುವ ಜನರೆಂದು ತಿಳಿಯುತ್ತಾರೆ.

ಹಾಗೆಯೇ ಹಿಂದೂಗಳೆಂದರೆ ಒಂದು ಕೊನೆಯಲ್ಲಿ ಪುರಿ ಜಗದ್ಗುರುವಿನಂತಿರುವ, ಇನ್ನೊಂದು ಕೊನೆಯಲ್ಲಿ ಮುಸ್ಲಿಮರನ್ನು ಅವಮಾನಿಸುವುದಕ್ಕಾಗಿಯೇ ಹಂದಿ ತಿನ್ನುವ, ಓದು ಬರಹ, ತಿನಿಸು, ಹಬ್ಬ, ಪೂಜೆ ಎಲ್ಲದರಲ್ಲಿ ಮುಸ್ಲಿಮರಿಂದ ಭಿನ್ನರಾದ ಜನರೆಂದೂ, ಎಂದೋ ತನ್ನ ಪೂರ್ವಿಕರು ತೋರಿದ ಕ್ರೌರ್ಯ, ಪರಾಕ್ರಮಕ್ಕಾಗಿ ಸೇಡು ತೀರಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವ ಜನರೆಂದೂ ಮುಸ್ಲಿಮರು ತಿಳಿಯುತ್ತಾರೆ.

ಇಬ್ಬರಿಗೂ ಗೊತ್ತಿಲ್ಲದ ಸಮಾನ ಅಂಶಗಳಿವೆ. ಉದ್ಯೋಗವಿಲ್ಲದ ಮಗನನ್ನು ಕಂಡು ಎರಡೂ ಧರ್ಮದ ಹೆತ್ತವರು ತಾಪ ಅನುಭವಿಸುತ್ತಾರೆ; ತಮ್ಮ ಆಚರಣೆಯಿಂದಲೇ ಜನರನ್ನು ಸಂಪರ್ಕಿಸುವ ಸವಲತ್ತು ಕಳೆದುಕೊಂಡ ಜಾತಿ ದುರ್ಬಲವಾಗುತ್ತಾ ಹೋಗುತ್ತದೆ. ಹೆಣ್ಣುಗಳನ್ನು ಬುರ್ಖಾದ ಹಿಂದೆ ಇಡುವ ಮುಸ್ಲಿಮರಲ್ಲಿ ಹೆಣ್ಣನ್ನು ಹಾಗೆ ಇಡದ ಹಿಂದೂಗಳಲ್ಲಿರುವಂತೆಯೇ ದುರಹಂಕಾರದ ಗಂಡ, ದುರ್ಬಲ ಗಂಡ, ಅಮ್ಮಾವ್ರ ಗಂಡ ಎಲ್ಲರೂ ಇದ್ದಾರೆ.
ಎರಡು ಜಾತಿಗಳಲ್ಲೂ ಉದಾರಿಗಳೂ, ಜಿಪುಣರೂ, ಹಾಸ್ಯಪಟುಗಳೂ, ಕ್ರಿಯಾಶಾಲಿಗಳೂ, ಕಲಾವಿದರೂ, ವಿಚಾರವಂತರೂ, ತರಲೆಗಳೂ, ಕಳ್ಳರೂ, ಭ್ರಷ್ಟರೂ ಇದ್ದಾರೆ. ಈ ಯಾರೂ ಒಂದೇ ಜಾತಿಗೆ ಸೀಮಿತರಲ್ಲ, ಒಂದೇ ಧರ್ಮದ ಸ್ವತ್ತಲ್ಲ. ಇದನ್ನು ಮೀರಿದ ಸತ್ಯವಿದೆ. ಎರಡೂ ಧರ್ಮಗಳಲ್ಲಿ ಪ್ರೀತಿ, ವಿಶ್ವಾಸಕ್ಕಾಗಿ ಹಸಿವೆ ಇದೆ.

ಯಾಕೆ ಹೇಳುತ್ತಿದ್ದೇನೆಂದರೆ ಮುಸ್ಲಿಮರೆಲ್ಲ ದುಷ್ಟರೆಂದಾಗಲಿ, ದೇವತೆಗಳೆಂದಾಗಲಿ ತಿಳಿಯುವುದು, ಹಿಂದೂಗಳೆಲ್ಲ ಆರೆಸೆಸ್ ಗಳೂ, ಜಾತಿವಾದಿಗಳೂ, ದುಷ್ಟರು ಎಂದು ಕರೆಯುವುದು - ಎರಡೂ ತಪ್ಪು. (ಟೀಕೆ-ಟಿಪ್ಪಣಿ)

ಪ್ರೀತಿ, ಕರುಣೆ, ದಾಕ್ಷಿಣ್ಯವಿಲ್ಲದ ಯಾವನೂ ಸಾಹಿತಿಯಾಗಲಾರ. ಒಂದು ನಾಡಿನ ಭ್ರಷ್ಟತೆ ಮತ್ತು ಅದಕ್ಷತೆ ಕ್ರಮೇಣ ಹಿಂಸೆಗೆ ದಾರಿ ಮಾಡಿಕೊಡುತ್ತದೆ; ಹಿಂಸೆಯೇ ಬಹುಸಂಖ್ಯಾತರ ಜೀವನಕ್ರಮವಾಗುತ್ತದೆ. (ಟೀಕೆ-ಟಿಪ್ಪಣಿ)

ಹುಲಿಗಳ ಜಗತ್ತಿನಲ್ಲಿ ಬಡಹುಲಿ, ಶ್ರೀಮಂತ ಹುಲಿ; ಪುರೋಹಿತ ಹುಲಿ, ಹೊಲೆಯ ಹುಲಿ ಇರುವುದಿಲ್ಲ. ಇದೆಲ್ಲ ಮನುಷ್ಯರಲ್ಲಿ ಮಾತ್ರ. ಸಮುದ್ರಕ್ಕೆ ಕೂಡ ಮೇಲು-ಕೀಳಿನ ಪರಿವೆ ಇಲ್ಲ. ಸೂರ್ಯ ಅರಮನೆ, ದೇವಸ್ಥಾನಗಳ ಮೇಲೆ ಮಾತ್ರ ಬೆಳಗುವುದಿಲ್ಲ. ಆದರೆ ಅದು ಮನುಷ್ಯನ ಕೈಯಲ್ಲಿದ್ದಿದ್ದರೆ ಅದನ್ನೂ ಮಾಡಿಸುತ್ತಿದ್ದ. ('ಸಂಕ್ರಾಂತಿ' ನಾಟಕದಲ್ಲಿ ಬಸವಣ್ಣ ಬಿಜ್ಜಳನಿಗೆ ಹೇಳುವ ಮಾತು)

ರಾಹುಕಾಲ, ಗುಳಿಕಕಾಲವನ್ನು ನೋಡದೆ 'ಪಲ್ಲವಿ' ಸಿನಿಮಾ ಆರಂಭಿಸಿದ ನನಗೆ, ಯಾವುದೇ ಕಾಲವೂ ಅತ್ಯಂತ ಸುಂದರವಾಗಿ, ಶುಭಗಳಿಗೆಯಾಗಿ ಕಾಣುವ ನನಗೆ, ಜನರ ಜಾತಿ, ಹಿನ್ನೆಲೆಯ ಗೋಳುಗಳೆಲ್ಲ ವಿಷಾದಕರವಾಗಿ ಕಾಣುತ್ತವೆ. ನಮ್ಮ ನಿಮ್ಮಲ್ಲಿ ಒಳ್ಳೆಯತನದ ಲವಲೇಶವಾದರೂ ಇದ್ದರೆ ಜನ ಜನರಾಗಿ, ದಿನಗಳು ಕೇವಲ ದಿನಗಳಾಗಿ, ಇಡೀ ಬದುಕು ಆರೋಗ್ಯಕರ ಸ್ಪಂದನವಾಗಿ ಕಾಣುತ್ತದೆ. (ಬಿಟ್ಟು ಹೋದ ಪುಟಗಳು)

ನಿಮಗೆ ಏನು ಅನ್ನಿಸ್ತು?
0 ವೋಟ್
eedina app