ಕಾನೂನು ಅರಿವು | ಪೊಲೀಸರಿಗೆ ದೂರು ಕೊಡಲು ಹೋಗುವ ಮುನ್ನ ಈ ವಿಚಾರಗಳು ನಿಮಗೆ ತಿಳಿದಿರಲಿ

FIR

ಸಾಧ್ಯವಾದಷ್ಟು ಬಾಧಿತರು/ಅವರ ಕುಟುಂಬದವರು ಸ್ಥಳೀಯ ಠಾಣೆಗೆ ಹೋಗಿ ದೂರು ನೀಡಬೇಕು. ಆಗದಿದ್ದಲ್ಲಿ ಘಟನೆಯನ್ನು ನೇರವಾಗಿ ನೋಡಿದ ಕಾಳಜಿಯುಳ್ಳ ನಾಗರಿಕರೊಬ್ಬರು ದೂರನ್ನು ನೀಡಬಹುದು. ದೂರು ನೀಡಿದ ತಕ್ಷಣ ಠಾಣಾಧಿಕಾರಿಗಳು ಭಾರತದ ದಂಡ ಸಂಹಿತೆ, 1860ರ ಕಲಂ 154ರ ಕಾನೂನಿನ ಅಡಿಯಲ್ಲಿ ಎಫ್.ಐ.ಆರ್. ದಾಖಲಿಸಬೇಕು

ದೌರ್ಜನ್ಯಕ್ಕೆ ಒಳಗಾದಂತಹ ಸಂದರ್ಭದಲ್ಲಿ ಮೊದಲಿಗೆ ನಾವು ಅಪರಾಧವೆಂದರೆ ಏನು ಎಂದು ನಮ್ಮ ದೇಶದ ಕಾನೂನು ವ್ಯವಸ್ಥೆಯಡಿಯಲ್ಲಿ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಉದಾ: ಕೊಲೆ, ಬೆದರಿಕೆ, ಆತ್ಮಹತ್ಯೆಗೆ ಪ್ರೇರಣೆ, ಗರ್ಭಪಾತ, ತೀವ್ರ ಗಾಯ, ಅಕ್ರಮ ಬಂಧನ, ಅಪರಾಧಿಯ ಬಲಪ್ರಯೋಗ ಮತ್ತು ಹಲ್ಲೆ, ಅಪಹರಣ, ಜೀತ, ಅತ್ಯಾಚಾರ, ಸ್ವತ್ತಿನ ವಿರುದ್ಧವಾದ ಅಪರಾಧಗಳು, ಸುಲಿಗೆ ಮತ್ತು ದರೋಡೆಗಳು, ನಂಬಿಕೆ ದ್ರೋಹ, ವಂಚನೆ, ಮೋಸದ ಪತ್ರಗಳು, ಅಪರಾಧಿಕ ಅತಿಕ್ರಮಣ, ನಗದು ಮತ್ತು ಬ್ಯಾಂಕ್ ವಂಚನೆಗಳು, ವಿವಾಹಕ್ಕೆ ಸಂಬಂಧಿಸಿದ ಅಪರಾಧಗಳು.

ಪ್ರಥಮ ವರ್ತಮಾನ ವರದಿ (ಎಫ್.ಐ.ಆರ್) ಹೇಗೆ ಬರೆಯುವುದು, ಇದರಲ್ಲಿ ಯಾವ ಯಾವ ಅಂಶಗಳು ಇರಬೇಕು?
ಯಾರು?
ಅ) ಮಾಹಿತಿ ನೀಡುವ ವ್ಯಕ್ತಿ ಯಾರು
ಆ) ನೊಂದವರು ಯಾರು
ಇ) ಆರೋಪಿಗಳು
ಈ) ಸಾಕ್ಷಿಗಳು
ಉದಾ:- ಪ್ರತಿಯೊಬ್ಬರಿಗೂ- ಅವರ ಹೆಸರು, ಅಡ್ಡ ಹೆಸರು, ತಂದೆಯ ಹೆಸರು, ಜಾತಿ, ವಯಸ್ಸು, ಲಿಂಗ, ಧರ್ಮ, ಉದೋಗ್ಯ, ಹಾಗೂ ಆರೋಪಿಗಳ ಹೆಸರು ಗೊತ್ತಿಲ್ಲದೆ ಇರುವಾಗ, ಅವರ ದೈಹಿಕ ವಿವರಗಳು.
ಘಟನೆ ಏನು?
ಅ) ಘಟನೆಯ ವಿವರಗಳು.  
ಉದಾ:- ಕೆಳಗೆ ವಿವರಿಸಿದಂತೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು.
ಯಾಕಾಯಿತು?
ಅ) ಘಟನೆ ನಡೆಯಲು ಕಾರಣ ಏನು?  
ಉದಾ:- ಘಟನೆಯ ಹಿನ್ನಲೆ ಹಾಗೂ ಈ ಹಿಂದೆ ಅಪರಾಧ ನಡೆದಿದ್ದರೆ ಅದರ ವಿವರ, ಇತ್ಯಾದಿಯ ಮಾಹಿತಿ, ಆಧಾರವಿಲ್ಲದ ಆರೋಪಗಳನ್ನು ನೀಡಬಾರದು.
ಹೇಗಾಯಿತು?
ಅ) ಅಪರಾಧ/ ದೌರ್ಜನ್ಯ ನಡೆದಿದ್ದು ಹೇಗೆ?
ಉದಾ:- ಯಾವ ರೀತಿ ದೌರ್ಜನ್ಯ/ ಅಪರಾಧಕ್ಕೆ ಒಳಪಟ್ಟರು( ಮೌಖಿಕ/ದೈಹಿಕ), ಅಯುಧಗಳು ಉಪಯೋಗಿಸಲ್ಪಟ್ಟಿದ್ದಲ್ಲಿ ಅದರ ವಿವರಗಳು, ಸ್ವತ್ತು ನಾಶವಾಗಿದ್ದರೆ ಅದರ ವಿವರಗಳು, ಪ್ರತಿ ಆರೋಪಿಯ ಪಾಲ್ಗೊಳ್ಳುವಿಕೆ ಇತ್ಯಾದಿ.
ಎಲ್ಲಿ ನಡೆಯಿತು?
ಅ) ಘಟನೆ ಎಲ್ಲಿ ನಡೆಯಿತು?
ಉದಾ:- ಘಟನೆಯು ನಡೆದ ಸ್ಥಳದ ಚಕ್ಕುಬಂದಿ, ಗ್ರಾಮ, ಕೇರಿ, ಹೋಬಳಿ, ತಾಲ್ಲೂಕು, ಜಿಲ್ಲೆ, ಸ್ಥಳ ಗುರುತಿಸಲು ಹೆಗ್ಗುರುತುಗಳ ವಿವರ ಹಾಗೂ ಸ್ಥಳದ ಜನಪ್ರಿಯ ಹೆಸರು, ಇವುಗಳನ್ನು ದಾಖಲಿಸಬೇಕು.
ಯಾವಾಗ ನಡೆಯಿತು?
ಅ) ಘಟನೆ ಯಾವಾಗ ನಡೆಯಿತು?
ಉದಾ:- ದಿನಾಂಕ, ತಿಂಗಳು, ವರ್ಷ, ಸಮಯ, ಬಗ್ಗೆ ಸ್ಪಷ್ಟವಾಗಿ ವಿವರ ನೀಡಬೇಕು, ಸ್ಪಷ್ಟ ಮಾಹಿತಿ ಇಲ್ಲದಿದ್ದಲ್ಲಿ,  ಸಮಯ ಗುರುತಿಸಲು ಇತರ ವಿವರಗಳು ನೀಡಬಹುದು- ಉದಾಹರಣೆ, ಆ ದಿವಸ ಸಂತೆ ಅಥವ ಹಬ್ಬ ಯಾವುದಾದರು ನಡೆಯುತಿತ್ತು ಇತ್ಯಾದಿ.

ಸಾಧ್ಯವಾದಷ್ಟು ಬಾಧಿತರು/ಅವರ ಕುಟುಂಬದವರು ಸ್ಥಳೀಯ ಠಾಣೆಗೆ ಹೋಗಿ ದೂರು ನೀಡಬೇಕು. ಆಗದಿದ್ದಲ್ಲಿ ಘಟನೆಯನ್ನು ನೇರವಾಗಿ ನೋಡಿದ ಕಾಳಜಿಯುಳ್ಳ ನಾಗರಿಕರೊಬ್ಬರು ದೂರನ್ನು ನೀಡಬಹುದು. ದೂರು ನೀಡಿದ ತಕ್ಷಣ ಠಾಣಾಧಿಕಾರಿಗಳು ಭಾರತದ ದಂಡ ಸಂಹಿತೆ, 1860ರ ಕಲಂ 154ರ ಕಾನೂನಿನ ಅಡಿಯಲ್ಲಿ ಎಫ್.ಐ.ಆರ್. ದಾಖಲಿಸಬೇಕು.

ಪೊಲೀಸ್ ಅಧಿಕಾರಿಗಳು, ಎಫ್.ಐ.ಆರ್. ದಾಖಲು ಆದ ತಕ್ಷಣದಲ್ಲಿ ದೂರುದಾರರಿಗೆ ಅದರ ಪ್ರತಿಯನ್ನು ಉಚಿತವಾಗಿ ನೀಡಬೇಕು. ದೂರುದಾರರು ಎಫ್.ಐ.ಆರ್. ಪ್ರತಿಯನ್ನು ಕೇಳದಿದ್ದರೂ ಅದರ ಪ್ರತಿಯನ್ನು ನೀಡಬೇಕು.

ಸದರಿ ಘಟನೆಗಳು ನಡೆದಂತಹ ಸಂದರ್ಭದಲ್ಲಿ ಮೊದಲು ದೂರು ಬರೆಯುವುದು ಹೇಗೆ? ದೂರಿನಲ್ಲಿ  ಯಾವ ಯಾವ ಅಂಶಗಳು ಇರಬೇಕು?
1. ಯಾವ ಸ್ಥಳದಲ್ಲಿ ಘಟನೆಯಾಗಿದೆ, ಯಾವ ಪೊಲೀಸ್‌ ಠಾಣೆಯ ಸರಿಹದ್ದಿಗೆ ಬರುತ್ತದೆ ಮತ್ತು ಠಾಣೆಯ ವಿಳಾಸವನ್ನು ಗುರುತಿಸಿಕೊಳ್ಳಬೇಕು.
2. ನಂತರ ದೂರಿನಲ್ಲಿ ಘಟನೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಸ್ಪಷ್ಟವಾಗಿ ಬರೆಯಬೇಕು. ಸಮಯ, ದಿನಾಂಕ, ವಾರ, ಘಟನೆಯ ಸ್ಥಳ ಘಟನೆಯಲ್ಲಿ ಯಾರು ಯಾರು ಭಾಗಿಯಾಗಿದ್ದರು.  
3. ಘಟನೆಯಲ್ಲಿ ಯಾವ ರೀತಿಯ ವಸ್ತುಗಳನ್ನು ಬಳಸಲಾಗಿದೆ. ಹಾಗೂ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಮುಖ ಚಹರೆ ಮತ್ತು ಬಳಸುವ ವಾಹನಗಳ ವಿವರಗಳು ತಿಳಿದುಕೊಳ್ಳಬೇಕು.
4. ಜೊತೆಗೆ ಘಟನೆಗೆ ಸಂಬಂಧಿಸಿದಂತೆ ಫೋಟೋ ಮತ್ತು ವಿಡಿಯೋ ರೆಕಾರ್ಡ್, ಘಟನೆಯನ್ನು ನೋಡಿದ ಸಾಕ್ಷಿಗಳು ಮತ್ತು ಸಾಕ್ಷಿದಾರರು ಅವರ ವಿವರಗಳು ತಿಳಿದುಕೊಳ್ಳಬೇಕು.
5. ಮುಖ್ಯವಾಗಿ ದೂರನ್ನು ಸ್ಥಳೀಯ ಭಾಷೆಯಲ್ಲಿ ಬರೆಯಬೇಕು. ಸ್ಥಳಿಯರು ಅಲ್ಲದೇ ಇದ್ದರೆ ಅವರ ಭಾಷೆಯಲ್ಲಿ ಬರೆದು ಅದನ್ನು ಸ್ಥಳೀಯ ಭಾಷೆಗೆ ಅನುವಾದ ಮಾಡಿ ಓದಿ ತಿಳಿಸಿ ಸಹಿಯನ್ನು ಮಾಡಬೇಕು.
6. ಸ್ಥಳೀಯ ಭಾಷೆ ಬರೆಯವುದು ತಿಳಿದಿಲ್ಲ ಎಂದರೆ ಠಾಣೆಯ ಸಿಬ್ಬಂದಿಯವರ ಸಹಾಯ ಪಡೆದು, ದೂರನ್ನು ಬಾಯಿ ಮಾತಿನ ಮೂಲಕ ತಿಳಿಸಿದರೂ ಅದನ್ನು ಬರೆದುಕೊಳ್ಳಬೇಕು. ಹಾಗೂ ಬೇರೆ ಭಾಷೆ ಆಗಿದ್ದರೆ ಸ್ಥಳೀಯ ಭಾಷೆಗೆ ಅನುವಾದ ಮಾಡಿ, ಓದಿ ತಿಳಿಸಿ ನಂತರ ಸಹಿಯನ್ನು ಪಡೆಯಬೇಕು.
7. ದಿನಾಂಕ, ಸಮಯ, ದೂರುದಾರರ ವಿಳಾಸ ಮತ್ತು ಪೋನ್ ನಂಬರ್‌ ಸಹ ಬರೆಯಬೇಕು.
8. ಜೊತೆಗೆ ದೂರಿನ ಕೊನೆಯಲ್ಲಿ ಸಹಿ ಮಾಡಬೇಕು, ದೂರು ನೀಡಿದ ನಂತರ ದೂರಿನ ಪ್ರತಿಯನ್ನು ನಕಲು ಪಡೆದು ಅದರಲ್ಲಿ ಸಂಬಂಧ ಪಟ್ಟ ಪೊಲೀಸ್ ಠಾಣೆಯ ಮೊಹರು ಮತ್ತು ಸಹಿ ಪಡೆಯಬೇಕು.

ಒಂದು ವೇಳೆ ಯಾವುದೇ ವ್ಯಕ್ತಿಗೆ ಗಾಯ/ತೀವ್ರ ಗಾಯವಾದ ಸಂದರ್ಭದಲ್ಲಿ ‘ಭಾರತದ ದಂಡ ಸಂಹಿತೆ’ 1860ರ ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಬಹುದು. ಇಂತಹ ಸಮಯದಲ್ಲಿ ನೀವು ಮಾಡಬಹುದಾದ ಮೊದಲ ಕೆಲಸವೆಂದರೆ ನಿಮ್ಮ ಹತ್ತಿರದ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಹೋಗಿ, ನಿಮಗೆ ಆಗಿರುವ ಗಾಯ/ತೀವ್ರ ಗಾಯಗಳ ಬಗ್ಗೆ ಸಂಬಂಧಪಟ್ಟ ವೈದ್ಯರನ್ನು ಭೇಟಿ ಮಾಡಿ, ಪರೀಕ್ಷೆಗೆ ಒಳಪಟ್ಟ ನಂತರ ಅದೇ ಆರೋಗ್ಯ ಕೇಂದ್ರದ ಮುಖ್ಯಸ್ಥರಿಂದ “ಎಂ.ಎಲ್.ಸಿ.” ವರದಿಯನ್ನು ಪಡೆಯಬೇಕು (ವೈದ್ಯಕೀಯ ಕಾನೂನು ಪ್ರಮಾಣಪತ್ರ). ನಂತರ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ನಡೆದಿರುವ ಘಟನೆ ಬಗ್ಗೆ¸ ದೂರು ನೀಡಬಹುದು, ದೂರು ನೀಡಿವ ಸಂದರ್ಭದಲ್ಲಿ ಸ್ನೇಹಿತರು, ಸಂಘಟನೆಯವರು, ಅಕ್ಕಪಕ್ಕದವರು, ವಕೀಲರ ಸಹಾಯವನ್ನು ಪಡೆಯಬಹುದು.

ನಿಮ್ಮ ದೂರನ್ನು ದಾಖಲಿಸಲು ಪೊಲೀಸರು ನಿರಾಕರಿಸಿದರೆ ನೀವೇನು ಮಾಡಬೇಕು ?
ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಗಮನಕ್ಕೆ ತರಬೇಕು. ಅವರು ನಿಮ್ಮ ದೂರಿನಲ್ಲಿ ಸೂಕ್ತ ಆಧಾರಗಳು ಮತ್ತು ಸ್ಪಷ್ಟ ಹೇಳಿಕೆಗಳು ಇರುವುದು ಕಂಡು ಬಂದರೆ ದೂರು ದಾಖಲು ಮಾಡಿಕೊಳ್ಳಬೇಕು. ನಿಮ್ಮ ದೂರನ್ನು ನಿರಾಕರಿಸಿದರೆ ಅಂತಹ ಸಂದರ್ಭದಲ್ಲಿ ನಿಮಗೆ ತಿಳಿದಿರುವ ವಕೀಲರ, ಸ್ನೇಹಿತರು ಅಥವಾ ಅಕ್ಕಪಕ್ಕದವರ ಸಹಾಯದೊಂದಿಗೆ ದೂರು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ದ ಮೇಲಿನ ಅಧಿಕಾರಿಗಳಿಗೆ ದೂರು ನೀಡಬೇಕು.

Image
ಕಾನೂನು ನೆರವು

ಉದಾ: ಸಬ್ ಇನ್‌ಸ್ಪೆಕ್ಟರ್ ದೂರನ್ನು ನಿರಾಕರಿಸಿದರೆ ಅದೇ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್, ಜಿಲ್ಲೆಯ ಸೂಪರಿಂಟೆಂಡೆಂಟ್ ಆಫ್‌ ಪೊಲೀಸ್, ರಾಜ್ಯದಲ್ಲಿ ಪೊಲೀಸ್ ಆಯುಕ್ತರು ಮತ್ತು ಮಹಾನಿರ್ದೇಶಕರಿಗೆ ದೂರು ನೀಡಬಹುದು. ನಂತರ ದೂರನ್ನು ಸ್ವೀಕರಿಸಿ ಪೊಲೀಸ್ ಅಧಿಕಾರಿಗಳು ಭಾರತದ ದಂಡ ಸಂಹಿತೆ 1860ರ ಕಲಂ 154ರ ಅಡಿಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್.ಐ.ಆರ್) ದಾಖಲು ಮಾಡಬೇಕು. ಪೊಲೀಸು ಇಲಾಖೆಯಲ್ಲಿ ನಿಮ್ಮ ಘಟನೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸದೇ, ಎಫ್.ಐ.ಆರ್, ದಾಖಲು ಮಾಡದೇ ಇದ್ದರೆ ದಂಡ ಪ್ರಕ್ರಿಯಾ ಸಂಹಿತೆ, 1973ರ ಕಲಂ 200ರ ಅಡಿಯಲ್ಲಿ ನಿಮ್ಮ ತಾಲ್ಲೂಕಿನ ದಂಡಾಧಿಕಾರಿಗಳಿಗೆ ದೂರು (ಫಿರ್ಯಾದು) ನೀಡಬಹುದು.

ಭಾರತದ ಸರ್ವೋಚ್ಚ ನ್ಯಾಯಾಲಯ ಆದೇಶದಲ್ಲಿ ಪ್ರಿಯಾಂಕಾ ಶ್ರೀವಾಸ್ತವ ಮತ್ತು ಎಎನ್‌ಆರ್ ವಿರುದ್ಧ ಸ್ಟೇಟ್ ಆಫ್ ಉತ್ತರ ಪ್ರದೇಶ ಮತ್ತು ಒಆರ್‌ಎಸ್, ಕ್ರಿಮಿನಲ್ ಮನವಿ ನಂ. 781/2012, ದಿನಾಂಕ: 19ಮಾರ್ಚ್, 2015. ಈ ಆದೇಶದಲ್ಲಿ ಪೊಲೀಸ್‌ ಠಾಣೆಯಲ್ಲಿ ದೂರು ತೆಗೆದುಕೊಳ್ಳಲಿಲ್ಲದಿದ್ದರೆ ಅಂತಹ ಸಂದರ್ಭದಲ್ಲಿ ಏನು ಮಾಡಬೇಕು, ಎಲ್ಲಿಗೆ ಹೋಗಿ ದೂರನ್ನು ದಾಖಲು ಮಾಡಬೇಕೆಂದು ಸ್ಪಷ್ಟವಾಗಿ ಹೇಳಿದೆ. ಕಲಂ 156(3) ದಂಡ ಪ್ರಕ್ರಿಯಾ ಸಂಹಿತೆ, 1973ರಲ್ಲಿ ಅರ್ಜಿಗಳನ್ನು ಮ್ಯಾಜಿಸ್ಟ್ರೇಟ್‌ನ ಅಧಿಕಾರ ವ್ಯಾಪ್ತಿಯನ್ನು ಕೋರುವ ಅರ್ಜಿದಾರರು ಸರಿಯಾಗಿ ಪ್ರಮಾಣೀಕರಿಸಿದ ಅಫಿಡವಿಟ್‌ನಿಂದ ನೀಡಬೇಕು. ಅದಲ್ಲದೆ, ಸೂಕ್ತವಾದ ಪ್ರಕರಣದಲ್ಲಿ, ಮ್ಯಾಜಿಸ್ಟ್ರೇಟ್ (ದಂಡಾಧಿಕಾರಿಗಳು) ಸತ್ಯವನ್ನು ಪರಿಶೀಲಿಸಲು ಉತ್ತಮ ಸಲಹೆ ನೀಡುವುದು ಮತ್ತು ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು.

ಲಲಿತಾ ಕುಮಾರಿ ಅವರ ಆದೇಶದಲ್ಲಿ ಕಲಂ 156(3) ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಅಧಿಕಾರವನ್ನು ಆಕಸ್ಮಿಕವಾಗಿ ಆಹ್ವಾನಿಸಲು ಇದು ಅವರನ್ನು ತಡೆಯುತ್ತದೆ. ಅದರ ಹೊರತಾಗಿ, ಪ್ರಕರಣದ ಆರೋಪಗಳು ಸ್ವರೂಪವನ್ನು ಪರಿಗಣಿಸಿ, ಅದರ ಸತ್ಯಾಸತ್ಯತೆಯನ್ನು ಮ್ಯಾಜಿಸ್ಟ್ರೇಟ್ ಕೂಡ ಪರಿಶೀಲಿಸಬಹುದು ಎಂದು ಈಗಾಗಲೇ ಹೇಳಿದ್ದೇವೆ. ಹಣಕಾಸಿನ ಅಪರಾಧಗಳು, ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳು, ಭ್ರಷ್ಟಾಚಾರ ಪ್ರಕರಣಗಳು ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸುವಲ್ಲಿ ಅಸಹಜ ವಿಳಂಬ/ ದೋಷಗಳಿರುವ ಪ್ರಕರಣಗಳಿಗೆ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ಎಫ್.ಐ.ಆರ್ ದಾಖಲಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಮ್ಯಾಜಿಸ್ಟ್ರೇಟ್ ಗೂ ತಿಳಿದಿರುತ್ತದೆ.

ಮೊದಲು ಪೊಲೀಸ್ ಅಧಿಕಾರಿಗಳ ವರ್ತನೆಯ ಬಗ್ಗೆ ದೂರು ನೀಡಬೇಕೆಂದು ನಿರ್ಧಾರ ಮಾಡಬೇಕು. ಉದಾಹರಣೆ ನಿಮ್ಮೊಡನೆ ಪೊಲೀಸ್ ಅಧಿಕಾರಿ ದೂರು ಕೊಡುವ ಸಂದರ್ಭದಲ್ಲಿ ಅವರ ವರ್ತನೆಯ ಬಗ್ಗೆ ಸ್ಪಷ್ಟವಾಗಿ ವಿವರಿಸಬೇಕು. ಅಧಿಕಾರಿಯ ಅಧಿಕಾರವನ್ನು ದುರುಪಯೋಗ ಮಾಡಿಕೊಂಡರೆ, ಕಾನೂನುಬಾಹಿರವಾಗಿ ದಸ್ತಗಿರಿ ಮಾಡಿದ್ದರೆ, ನಿಮ್ಮ ಹಕ್ಕನ್ನು ದುರುಪಯೋಗ ಪಡಿಸಿಕೊಂಡರೆ, ಸದರಿ ವಿಷಯಗಳು ಕಂಡು ಬಂದರೆ ತಕ್ಷಣ ಅಂತಹ ಅಧಿಕಾರಿಯ ವರ್ತನೆಯ ಮೇಲೆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರನ್ನು ಸಲ್ಲಿಸಬಹುದು.

ಉದಾಹರಣೆಗೆ, ಪರಿಶಿಷ್ಟ ಜಾತಿ (ಮಾದಿಗ ಸಮುದಾಯ) ತುಮಕೂರು ಜಿಲ್ಲೆ, ತುರುವೆಕೆರೆ ತಾಲ್ಲೂಕು, ಒಬ್ಬ ದಲಿತ ವ್ಯಕ್ತಿಯ ನಿಗೂಢ ಸಾವಿನ ವಿಷಯವಾಗಿ, ದಿನಾಂಕ: 14/04/2020ರಂದು ಒಂದು ಸಣ್ಣ ಗ್ರಾಮಕ್ಕೆ ಸೇರಿದ ವ್ಯಕ್ತಿ ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದು ಇವರು ಮಾಸ್ತಿಗೊಂಡನಹಳ್ಳಿ ಪಂಚಾಯ್ತಿಯ ಕಂದಾಯ ಕಚೇರಿಯ ನಿವೃತ್ತ ಗ್ರಾಮ ಸಹಾಯಕರಾಗಿ ಗಿರಿಯನಹಳ್ಳಿಯ ಸುತ್ತಮುತ್ತಲು ಕೆಲಸ ನಿರ್ವಹಿಸುತ್ತಿದ್ದರು. ದಿನಾಂಕ: 14/04/2020 ರಂದು ಈ ಗ್ರಾಮದ ಶೇಖರಯ್ಯನ ತೋಟದ ನೀರಿನ ತೊಟ್ಟಿ ಬಳಿ ನಿಗೂಢ ಸಾವನ್ನಪ್ಪಿರುತ್ತಾರೆ.

ಮೃತ ಕುಟುಂಬದ ಸದಸ್ಯರು ಹಾಗೂ ಮೃತರ ಮಗಳು ದೂರು ಬರೆದು ಪೊಲೀಸ್‌ ಅಧಿಕಾರಿಗಳಿಗೆ ಎಪ್.ಐ.ಅರ್. ದಾಖಲಿಸುವಂತೆ ಒತ್ತಾಯಿಸಿದ್ದರು, ಅವರು ಅದನ್ನು ಮಾಡಲು ನಿರಾಕರಿಸುತ್ತಾರೆ ಮತ್ತು ಅಸ್ವಾಭಾವಿಕ ಸಾವಿನ ವರದಿ (ಯುಡಿಆರ್) ಸಲ್ಲಿಸುತ್ತಾರೆ. ಕುಟುಂಬದ ಸದಸ್ಯರು ಜಿಲ್ಲಾಧಿಕಾರಿಗಳಿಗೆ, ಪೊಲೀಸ್‌ ಅಪರ ಮಹಾನಿರ್ದೇಶಕರು ಹಾಗೂ ಇನ್‌ಸ್ಪೆಕ್ಟರ್ ಜನರಲ್ ಆಫ್‌ ಪೊಲೀಸ್‌ನವರಿಗೆ, ದಂಡಿನಶಿವರ ಪೊಲೀಸ್‌ ಠಾಣೆಯ ಪೊಲೀಸ್ ಅಧಿಕಾರಿಗಳ ಎಫ್.ಐ.ಆರ್. ದಾಖಲಿಸಲು ನಿರಾಕರಿಸಿರುವುದರಿಂದ ಹಾಗೂ ನಿರಾಸಕ್ತರಾಗಿ ತನಿಖೆಯನ್ನು ಕೈಗೊಂಡಿರುವ ವಿರುದ್ದ ದೂರು ನೀಡಿರುತ್ತಾರೆ. ಈ ದೂರಿನ ಆಧಾರದ ಮೇಲೆ, ಪೊಲೀಸ್ ಅಪರ ಮಹಾನಿರ್ದೇಶಕರಿಂದ ಖಂಡಿಸಲ್ಪಟ್ಟ ನಂತರ 16/05/2020 ರಂದು ದಂಡಿನಶಿವರ ಪಿ.ಎಸ್. ಠಾಣೆಯ ಪೊಲೀಸ್ ಅಧಿಕಾರಿಗಳು ಮೃತ ಕೆಂಪಯ್ಯನವರ ಕೊಲೆ ಪ್ರಕರಣದಲ್ಲಿ ಕ್ರೆöÊಂ ನಂ: 17/2020 ರಲ್ಲಿ ಸೆಕ್ಷನ್ ನಂ. 504, 506, 302, 24, ಮತ್ತು ಎಸ್.ಸಿ./ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ ನಂ. 3(1) (ಆರ್), 3(1) (ಎಸ್), 3 (2) (ವಿ) ಮಹೇಶ್ ಸೇರಿದಂತೆ 4 ಜನರನ್ನು ಆರೋಪಿಗಳ ವಿರುದ್ದ ಎಫ್.ಐ.ಆರ್. ದಾಖಲಾಗಿರುತ್ತದೆ.

ಇದನ್ನು ಓದಿದ್ದೀರಾ? ಶಾಸಕರ ಖರೀದಿ ಆರೋಪ | ಅರ್ಜಿಗೆ ತಡೆ ನೀಡಲು ತೆಲಂಗಾಣ ಹೈಕೋರ್ಟ್‌ ನಕಾರ; ಬಿ ಎಲ್‌ ಸಂತೋಷ್‌ಗೆ ಸಂಕಷ್ಟ

ನಮ್ಮ ದೇಶದಲ್ಲಿ ಪ್ರತಿಯೊಂದು ತಾಲ್ಲುಕು/ ಜಿಲ್ಲೆ/ ರಾಜ್ಯ ಮಟ್ಟದಲ್ಲಿ ಇರುವ ಎಲ್ಲಾ ಕೆಳಹಂತದ ಪೊಲೀಸ್ ಅಧಿಕಾರಗಳು ಮಟ್ಟದಲ್ಲಿ 50% ಅಹಿತಕರ ಘಟನೆಗಳಲ್ಲಿ ಸ್ಥಳೀಯ ಹಂತದಲ್ಲಿ ಪ್ರಕರಣಗಳ ರಾಜಿ ಮಾಡಿಸುವ ಪ್ರಯತ್ನ ಪೊಲೀಸ್ ಠಾಣೆಯಲ್ಲಿ ನಡೆಯುತ್ತದೆ. ಉದಾ: ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ಬಲಾಢ್ಯರ ವಿರುದ್ದ ದೂರು ನೀಡಿದಂತಹ ಸಮಯದಲ್ಲಿ ದೂರುದಾರರ ಎಫ್.ಐ.ಆರ್ ಮಾಡುವುದಕ್ಕೆ ಮುಂಚೆ ಪೊಲೀಸ್ ಅಧಿಕಾರಿಗಳು ಶ್ರೀಮಂತರ ಪರವಾಗಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳು ದೂರದಾರರ ವಿರುದ್ಧ ಪ್ರತಿದೂರು ನೀಡುವುದಕ್ಕೆ ಪ್ರೇರಣೆ ನೀಡಿ ದೂರುದಾರರ ವಿರುದ್ದ ದೂರು ದಾಖಲು ಮಾಡಿ, ರಾಜಿ ಸಂದಾನ ಮಾಡುತ್ತಾರೆ.

ಐಪಿಸಿ ಸೆಕ್ಷನ್ 166ಎ ಪ್ರಕಾರ, ಯಾವುದೇ ಪೊಲೀಸ್ ಅಧಿಕಾರಿ ನಿಮ್ಮ ಯಾವುದೇ ದೂರುಗಳನ್ನು ದಾಖಲಿಸಲು ನಿರಾಕರಿಸಬಾರದು. ಇಂತಹ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆತನ ವಿರುದ್ದ ದೂರು ಸಲ್ಲಿಸಬಹುದು. ಆ ಪೊಲೀಸ್ ಅಧಿಕಾರಿ ದೋಷಿ ಎಂದು ಖಚಿತವಾದರೆ ಅವರಿಗೆ ಕಡಿಮೆ ಎಂದರೆ 6 ತಿಂಗಳಿಂದ 1 ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸಬಹುದು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180