ಸಿಂಹದ ಲಾಂಛನದಿಂದ ಧ್ವಜ ಸಂಹಿತೆಯವರೆಗೆ ಭಾರತದ ಚಿಹ್ನೆಗಳ ಅರ್ಥವನ್ನೇ ಮೋದಿ ಸರ್ಕಾರ ಬದಲಾಯಿಸುತ್ತಿದೆ

lion capital

ರಾಷ್ಟ್ರೀಯ ಲಾಂಛನದ ಹೊಸ ಆವೃತ್ತಿಯು ರಾಷ್ಟ್ರೀಯ ಚಿಹ್ನೆಗೆ ಎಸೆಯಲಾಗಿರುವ ಅವಮಾನವೇ ಎಂಬ ತಾಂತ್ರಿಕಾಂಶದ ಬಗ್ಗೆ ನಾನು ಚಿಂತಿಸುತ್ತಿಲ್ಲ. ಇಲ್ಲಿ ನನ್ನ ಆಸಕ್ತಿ ಕೆರಳಿಸಿರುವುದು ಚಿಹ್ನೆಯ ಒಳಾರ್ಥದಲ್ಲಿನ ಬದಲಾವಣೆ. ಅಶೋಕನ ಲಾಂಛನದಲ್ಲಿರುವ ಸಿಂಹಗಳು ಧರ್ಮಚಕ್ರದ ಮೇಲೆ ನಿಂತಿವೆ. ಸೆಂಟ್ರಲ್ ವಿಸ್ತಾದಲ್ಲಿರುವ ಸಿಂಹಗಳು ಧರ್ಮಚಕ್ರದ ಮೇಲೆ ಹೆಜ್ಜೆ ಹಾಕುತ್ತವೆ

ಭಾರತ ಗಣರಾಜ್ಯವು ತನ್ನ ಎರಡನೇ ಆವೃತ್ತಿಗೆ ದಾರಿ ಮಾಡಿಕೊಡುತ್ತಿರುವಾಗ ಅದರ ಚಿಹ್ನೆಗಳು ಸಹ ಬದಲಾಗಬೇಕು. ಈ ಬದಲಾವಣೆಗಳನ್ನು ಅಧಿಕೃತವಾಗಿ ಇನ್ನೂ ಘೋಷಿಸಲಾಗಿಲ್ಲವಾದ್ದರಿಂದ ಬದಲಾವಣೆಗಳು ಹಿಂಬಾಗಿಲಿಂದಲೇ, ಸಂಚುಗಳ ಮೂಲಕವೇ ಪ್ರವೇಶಿಸಬೇಕು: ಅದು ವಿರೂಪಗೊಳಿಸುವಿಕೆ, ಅಳಿಸುವಿಕೆ ಮತ್ತು ಪ್ರಕ್ಷೇಪಣೆ ಆದರೂ ಸರಿಯೇ. ಆದರೂ ಸಂಚಿಗೆ ಸ್ಪಷ್ಟವಾದ ಸಿದ್ಧಾಂತವಿದೆ: ಇದು ನಮ್ಮನ್ನು ಸ್ವಾತಂತ್ರ್ಯ ಹೋರಾಟದ ಹಿನ್ನಲೆಯಲ್ಲಿ ಉದಯಿಸಿದ ರಾಷ್ಟ್ರೀಯತೆಯನ್ನೂ, ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳನ್ನೂ ಮತ್ತು 20 ನೇ ಶತಮಾನದಲ್ಲಿ ರೂಪುಗೊಂಡ ಐತಿಹಾಸಿಕ ಸ್ಮೃತಿಗಳಿಂದ ಬೇರ್ಪಡಿಸುತ್ತದೆ. ಹೀಗೆ ನಿರ್ಮಾಣವಾದ ನಿರ್ವಾತವನ್ನು ಹೊಸ ಮೌಲ್ಯಗಳು, ತಾಜಾ ನೆನಪುಗಳು ಮತ್ತು ದೊಡ್ಡ ಸಂಗತಿಗಳು ತುಂಬುತ್ತಿವೆ. ನಮ್ಮ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವಾದ ಅಮೃತ ಮಹೋತ್ಸವವು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಹಾದಿಯನ್ನು ಸ್ಮರಿಸುವ ನಿಟ್ಟಿನಲ್ಲಿರದೆ ಅದನ್ನು ಮರೆಸುತ್ತದೆ ಮತ್ತು Tryst with Destiny ಯಿಂದ ಅಂತರವನ್ನು ಕಾಯ್ದುಕೊಳ್ಳುವ "ಹೊಸ ಭಾರತ"ಕ್ಕೆ ಸಂಬಂಧಿಸಿದೆ.

ಸಂಕೇತಗಳ ಅರ್ಥವನ್ನು ಬದಲಾಯಿಸುವುದು
ಹೊಸ ಸಂಸತ್ತಿನ ಕಟ್ಟಡದ ಮೇಲೆ ಸ್ಥಾಪಿಸಲಾದ ಹೊಸ ಸಿಂಹಗಳ ಲಾಂಛನವು ಈ ಹೊಸ ಸಾಂಕೇತಿಕ ಮಾರ್ಗದಲ್ಲಿ ಒಂದು ಸಣ್ಣ ಭಾಗವಾಗಿದೆ. ನಿಸ್ಸಂದೇಹವಾಗಿ, ಸಾರಾನಾಥ್ ಮೂಲದ ಲಾಂಛನಕ್ಕೂ ಮತ್ತದರ ಇತ್ತೀಚಿನ "ವ್ಯಾಖ್ಯಾನ"ದ ನಡುವೆ ಇರುವ ವ್ಯತ್ಯಾಸವು ಕೇವಲ ಕ್ಯಾಮೆರಾದ ದೃಷ್ಠಿಕೋನಕ್ಕೆ ಸಂಬಂಧಿಸಿಲ್ಲ. ಬದಲಿಗೆ, ಅಶೋಕನ ಸಿಂಹಗಳ ಮೂಲ ಲಾಂಛನವು "ಸದಾಚಾರ ಗಣರಾಜ್ಯ" (righteous republic) ಎಂದು ಯಾವುದನ್ನು ಕರೆಯಲಾಗುತ್ತದೆಯೋ ಅದರ ಸಂಕೇತವಾಗಿದೆ: ಸದಾಚಾರದ ಚಕ್ರವಾದ ಧರ್ಮಚಕ್ರದಿಂದ ಮಾರ್ಗದರ್ಶಿಸಲ್ಪಟ್ಟ ಶಾಂತ ಮತ್ತು ಭವ್ಯ ರೂಪದ ಶಕ್ತಿಯನ್ನು ಹೊಂದಿದೆ. ಚೂಸಿಂಗ್‌ ದಿ ನ್ಯಾಷನಲ್‌ ಸಿಂಬಲ್ಸ್‌ ಆಫ್‌ ಇಂಡಿಯಾ (Choosing the National Symbols of India) ಎಂಬ ಪ್ರಬಂಧದಲ್ಲಿ, ಪ್ರೊಫೆಸರ್ ಭಿಖು ಪರೇಖ್ ಅವರು ರಾಷ್ಟ್ರೀಯ ಲಾಂಛನವನ್ನು: " ಒಂದಕ್ಕೊಂದು ಬೆನ್ನು ಮಾಡಿ ನಾಲ್ಕು ದಿಕ್ಕುಗಳತ್ತ ಮುಖ ಮಾಡಿ ಕೂರುವ ಸಿಂಹಗಳನ್ನು ಸದಾಚಾರ ಸಂಹಿತೆಯ ಗುರುತಾಗಿರುವ ಚಕ್ರದಿಂದ ಮಾರ್ಗದರ್ಶಿಸಲ್ಪಟ್ಟಾಗ ಮಾತ್ರವೇ ಅಪೇಕ್ಷಣೀಯವಾಗಿರುವ ಮತ್ತು ಸ್ಥಿರವಾಗಿರುವ ಅಧಿಕಾರದ ಪ್ರಾಮುಖ್ಯತೆಯನ್ನು ಸೂಚಿಸಲು ಆಯ್ದುಕೊಳ್ಳಲಾಗಿದೆ” ಎಂದು ಅರ್ಥೈಸುತ್ತಾರೆ.

ಇತ್ತೀಚಿನ ಆವೃತ್ತಿಯಲ್ಲಿನ ಸಿಂಹಗಳು ಸ್ಪಷ್ಟವಾಗಿ ಹೆಚ್ಚು ಭಯಂಕರವಾಗಿವೆ, ಕ್ರೂರವಾಗಿವೆ ಮತ್ತು ಕುಪಿತಗೊಂಡಿವೆ. ಅವು ನೋಡಲಿಕ್ಕೆಯೇ ಹೆಚ್ಚು ಸ್ನಾಯುಗಳನ್ನೂ ಅಗಲವಾದ ಎದೆಯನ್ನೂ ಹೊಂದಿವೆ. ಈ ಹೊಸ ಆವೃತ್ತಿಯು ನಿಜವಾಗಿಯೂ ಬೃಹತ್ತಾಗಿದೆ - ಹೊಸ ಲಾಂಛನವು 6.5 ಮೀಟರ್ ಉದ್ದವಿದ್ದರೆ ಮೂಲ ಲಾಂಛನವು 1.6 ಮೀಟರ್‌ ಉದ್ದವಿತ್ತು. ರಾಜ್ಯಸಭಾ ಸದಸ್ಯ ಮತ್ತು ಸಾಂಸ್ಕೃತಿಕ ಇತಿಹಾಸಕಾರ ಜವಹರ್ ಸಿರ್ಕಾರ್ ಅವರು ಈ ಎರಡೂ ಚಿತ್ರಗಳನ್ನು ಲಗ್ಗತಿಸಿ ಮಾಡಿರುವ ಟ್ವೀಟ್ನಲ್ಲಿ: “ಎಡಭಾಗದಲ್ಲಿರುವ ಮೂಲ [ಲಾಂಛನ] ಆಕರ್ಷಕ, ರಾಜಗಾಂಭೀರ್ಯತೆಯ ಆತ್ಮವಿಶ್ವಾಸದಿಂದ ಕೂಡಿದೆ. ಬಲಭಾಗದಲ್ಲಿರುವುದು ಮೋದಿಯವರ ಆವೃತ್ತಿಯಾಗಿದ್ದು, ಹೊಸ ಸಂಸತ್ತಿನ ಕಟ್ಟಡದ ಮೇಲೆ ಇರಿಸಲಾಗಿದೆ - ಗುರುಗುಟ್ಟುತ್ತಾ, ಅನಗತ್ಯವಾಗಿ ಆಕ್ರಮಣಕಾರಿ ಮತ್ತು ಅಸಮಂಜಸವಾಗಿದೆ.

AV Eye Hospital ad

ಇತ್ತೀಚಿನ ಆವೃತ್ತಿಯು ರಾಷ್ಟ್ರೀಯ ಚಿಹ್ನೆಗೆ ಎಸೆಯಲಾಗಿರುವ ಅವಮಾನವೇ ಎಂಬ ತಾಂತ್ರಿಕಾಂಶದ ಬಗ್ಗೆ ನಾನು ಚಿಂತಿಸುತ್ತಿಲ್ಲ. ಇಲ್ಲಿ ನನ್ನ ಆಸಕ್ತಿಯನ್ನು ಕೆರಳಿಸಿರುವುದು ಚಿಹ್ನೆಯ ಒಳಾರ್ಥದಲ್ಲಿನ ಬದಲಾವಣೆ. ಅಶೋಕನ ಲಾಂಛನದಲ್ಲಿರುವ ಸಿಂಹಗಳು ಧರ್ಮಚಕ್ರದ ಮೇಲೆ ನಿಂತಿವೆ. ಅವು ತಮ್ಮ ಶಕ್ತಿಯನ್ನು ಧರ್ಮದಿಂದ ಪಡೆದುಕೊಳ್ಳುತ್ತವೆ. ಮೋದಿಯ ಸೆಂಟ್ರಲ್ ವಿಸ್ತಾದಲ್ಲಿರುವ ಸಿಂಹಗಳು ಧರ್ಮಚಕ್ರದ ಮೇಲೆ ಹೆಜ್ಜೆ ಹಾಕುತ್ತವೆ;  ಆ ಸಿಂಹಗಳಿಗೆ ತಮಗೆ ತಾವೇ ಶಕ್ತಿ. ಈ ಹಿಂದಿನ ಹನುಮಂತನ ಚಿತ್ರಗಳಿಗೆ ಹೊಸ ರೌದ್ರ ಹನುಮಂತನು ಹೇಗೆ ಸಂಬಂಧಿಸಿರುವನೋ ಹಾಗೆಯೇ ಮೂಲ ಸಿಂಹಗಳಿಗೆ ಇಲ್ಲಿನ ಸಿಂಹಗಳು. ಅಥವಾ, ಬುಲ್ಡೋಜರುಗಳ ರಾಜ್ಯಭಾರವು ಕಾನೂನಿನ ಕಟ್ಟುಪಾಡುಗಳಿಗೆ ಹೇಗೆ ಸಂಬಂಧಿಸಿವೆಯೋ ಹಾಗೆಯೇ ಇವೂ ಕೂಡ.

ಧ್ವಜ ಸಂಹಿತೆಯ ಬದಲಾವಣೆ
ಈ ಬದಲಾವಣೆಯು ನಮ್ಮ ರಾಷ್ಟ್ರೀಯ ಚಿಹ್ನೆಗಳಿಗೆ ತರಲಾಗಿರುವ, ಆದರೆ ಹಚ್ಚು ಸುದ್ದಿಯಾಗದ ಮತ್ತೊಂದು ಬದಲಾವಣೆಯೊಂದಿಗೆ ಕಾಲಿರಿಸಿದೆ. ಇತ್ತೀಚೆಗೆ, ಸರ್ಕಾರವು ಭಾರತದ ಧ್ವಜ ಸಂಹಿತೆ, 2002 ಅನ್ನು ಬದಲಾಯಿಸಿ ಯಂತ್ರ-ನಿರ್ಮಿತ ಪಾಲಿಯೆಸ್ಟರ್ ತಿರಂಗವನ್ನು ಅನುಮತಿಸಿತು. ಇದು ರಾಷ್ಟ್ರಧ್ವಜವು ಮಹಾತ್ಮ ಗಾಂಧಿಯವರೊಂದಿಗೆ ಹೊಂದಿದ್ದ ಕೊನೆಯ ಕೊಂಡಿಯನ್ನೂ ಕಡಿತಗೊಳಿಸಿದೆ. ಎಲ್ಲರಿಗೂ ತಿಳಿದಿರುವಂತೆ, ಇಂದು ನಾವು ಹೊಂದಿರುವ ತ್ರಿವರ್ಣ ಧ್ವಜವನ್ನು ರಚಿಸಲು ಗಾಂಧಿಯವರು ಭಾರತದ ರಾಷ್ಟ್ರೀಯ ಧ್ವಜದ ಹಿಂದಿನ ಆವೃತ್ತಿಗಳನ್ನು ಸುಧಾರಿಸಿದರು. ಅದಕ್ಕೆ ಅವರ ಪ್ರಮುಖ ಕೊಡುಗೆಯೆಂದರೆ ಅದರ ಮಧ್ಯೆಯಿರಿಸಲಾಗಿದ್ದ ಚರಕ. ಸಂವಿಧಾನ ರಚನಾಸಭೆಯು ಚರಕವನ್ನು ಧರ್ಮಚಕ್ರವನ್ನು ಆಧರಿಸಿದ ಚಕ್ರದೊಂದಿಗೆ ಬದಲಾಯಿಸಿತು. ಆದರೆ ಧ್ವಜ ಸಂಹಿತೆಯು ಕೊನೆಯದೊಂದು ಗಾಂಧೀಜಿಯವರ ಅಂಶವೊಂದನ್ನು ಉಳಿಸಿಕೊಂಡಿತು: "ಭಾರತದ ರಾಷ್ಟ್ರಧ್ವಜವನ್ನು ಕೈನೂಲು ಮತ್ತು ಕೈಮಗ್ಗದ ಉಣ್ಣೆ/ರೇಷ್ಮೆ/ಖಾದಿ ಬಂಟಿಂಗ್‌ನಿಂದ ತಯಾರಿಸಲಾಗುತ್ತದೆ."

flag

ಹೆಚ್ಚಿನ ಸಂಹಿತೆಗಳಂತೆಯೇ ಈ ಸಂಹಿತೆಯನ್ನೂ ಉಲ್ಲಂಘಿಸುವುದೇ ವಾಡಿಕೆಯಾಗಿತ್ತು. ಹೆಚ್ಚಾಗಿ ಚೀನಾದಲ್ಲಿ ತಯಾರಿಸಲಾದ ಪ್ಲಾಸ್ಟಿಕ್ನಿಂದ ಮತ್ತು ಖಂಡಿತವಾಗಿಯೂ ತಳೀಯವಾಗಿ ವಂಶಾಂತರಿ ಬಿಟಿ ಹತ್ತಿಯಿಂದ ತಯಾರಿಸಲಾದ ಬಟ್ಟೆಯ ಧ್ವಜಗಳು ದೇಶವನ್ನೇ ಆವರಿಸಿವೆ. ಆದರೂ ರಾಷ್ಟ್ರಧ್ವಜವನ್ನು ತಯಾರಿಸಲು ಮತ್ತು ಪೂರೈಸಲು ಮಾನ್ಯತೆ ಪಡೆದಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಿಂದಲೇ ಖಾದಿ ತಿರಂಗಗಳನ್ನು ಕೊಂಡು ಬಳಸಲು ಸರ್ಕಾರ ಮತ್ತು ಇತರೆ ಸರ್ಕಾರಿ ಸಂಸ್ಥೆಗಳನ್ನು ಧ್ವಜ ಸಂಹಿತೆಯು ಒತ್ತಾಯಿಸುತ್ತಿತ್ತು. ಸಾಂಕೇತಿಕ ಮತ್ತು ಭಾವನಾತ್ಮಕ ಮೌಲ್ಯದ ಜೊತೆಯಲ್ಲೇ ಇದು ಸಾವಿರಾರು ಕುಟುಂಬಗಳಿಗೆ ಜೀವನೋಪಾಯದ ಮೂಲವೂ ಆಗಿತ್ತು. ಸಿಂಥೆಟಿಕ್ ಧ್ವಜಗಳಿಗೆ ನೀಡಿರುವ ಅನುಮತಿಯ ವಿರುದ್ಧ ಇಂಡಿಯಾ ಹ್ಯಾಂಡ್‌ಮೇಡ್ ಕಲೆಕ್ಟಿವ್ ಪ್ರತಿಭಟಿಸಿತು.

ಇಲ್ಲಿ ಕೂಡ , ಕಾನೂನಾತ್ಮಕ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬದಿಗಿರಿಸಿ ಕೇವಲ ಪ್ರಾಯೋಗಿಕತೆ ಸಾಂಕೇತಿಕತೆಯ ಬಗ್ಗೆ ಗಮನ ಹರಿಸೋಣ. ಕಳೆದ ಕೆಲವು ವರ್ಷಗಳಿಂದ, ಮೋದಿ ಸರ್ಕಾರವು ಪ್ರಮುಖ ಸ್ಥಳಗಳಲ್ಲಿ ಬೃಹತ್ತಾದ ರಾಷ್ಟ್ರಧ್ವಜಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುತ್ತಿದೆ. ದೆಹಲಿಯ ಆಮ್ ಆದ್ಮಿ ಪಕ್ಷ (ಎಎಪಿ)ದ ಸರ್ಕಾರವು ಕೂಡ ಈ ನಡೆಯನ್ನು ಅನುಕರಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಜನ ಗಣ ಮನವನ್ನು ಎಂದಿಗೂ ಸ್ವೀಕರಿಸಿಲ್ಲ. ಅಂತೆಯೇ ತಿರಂಗವನ್ನು ಎಂದಿಗೂ ಅನುಮೋದಿಸಿಲ್ಲ - ಮತ್ತು ಅರ್ಧ ಶತಮಾನದುದ್ದಕ್ಕೂ ನಾಗಪುರದ ತನ್ನ ಪ್ರಧಾನ ಕಛೇರಿಯಲ್ಲಿ ಒಮ್ಮೆಯೂ ತಿರಂಗವನ್ನು ಹಾರಿಸಲಿಲ್ಲ.

ಈಗ ಅವರು ತ್ರಿವರ್ಣ ಧ್ವಜದ ಮುಖಭಾವವನ್ನು ಸ್ವೀಕರಿಸಿದ್ದಾರೆ. ಆದ್ದರಿಂದ, ಈ ಹೊಸ ಆಡಳಿತಗಾರರು ಅಕ್ಷರಶಃ ಅದರ ಮೇಲ್ಮೈಗುಣವನ್ನು ಬದಲಾಯಿಸುವ ಮೂಲಕ ಅದರಲ್ಲಿ ಗರೀತವಾಗಿರುವ ಅರ್ಥವನ್ನೇ ಬದಲು ಮಾಡಬೇಕು. ಖಾದಿಯ ಒರಟಾದ, ಅಸಮವಾದ ಮತ್ತು ನೈಜ ಸೌಂದರ್ಯವು ಧ್ವಜವನ್ನು ಜನರ ಜೀವನಕ್ಕೆ ಹತ್ತಿರವಾಗಿಸಿತು. ಇದು ವಸಾಹತುಶಾಹಿ ವಿರುದ್ಧದ ಹೋರಾಟದ ಕಠೋರ ಅನುಭವವನ್ನು ನೆನಪಿಸುತ್ತದೆ. ತಾತ್ವಿಕ ನೆಲೆಯಲ್ಲಿ, ಇದು ಕಾರ್ಮಿಕರ ಘನತೆಯನ್ನು ಎತ್ತಿಹಿಡಿಯುತ್ತದೆ. ಹೊಳೆಯುವ, ನಯವಾದ ಒಂದು ದೊಡ್ಡ ಸಿಂಥೆಟಿಕ್ ಧ್ವಜಗಳು ನಿಮ್ಮ ಮುಖದ-ಮುಂದಿರಿಸಲಾಗಿರುವ ಹೊಸ ರಾಷ್ಟ್ರೀಯತೆಯನ್ನು ಸಂಕೇತಿಸುತ್ತದೆ. ಬೆಂಗಳೂರಿನ ಐಟಿ ಉದ್ಯೋಗಿಗಳು ತಮ್ಮ ಗ್ರಾಮೀಣ ಸೋದರ ಸಂಬಂಧಿಗಳಿಗೆ ಎಷ್ಟು ಮತ್ತು ಹೇಗೆ ಸಂಬಂಧಿತರೋ ಅಷ್ಟೇ ಸಂಬಂಧವನ್ನು ಈ ಧ್ವಜವು ಕೂಡ ತನ್ನ ಹಳೆಯ ಸೋದರರೊಂದಿಗೆ ಹೊಂದಿದೆ.

ಅಧಿಕಾರ ಸಂಕೇತದ ರಚನೆ
ಇತ್ತೀಚಿಗಷ್ಟೇ ಸ್ಥಾಪಿಸಲಾಗಿರುವ ಪ್ರಧಾನಮಂತ್ರಿ ಸಂಗ್ರಹಾಲಯದ ವಿಮರ್ಶೆಯಲ್ಲಿ, ದಿ ಪ್ರಿಂಟ್‌ನ ಒಪೀನಿಯನ್‌  ಸಂಪಾದಕರಾದ ರಮಾ ಲಕ್ಷ್ಮಿ ಅವರು ಅದರ ವಿಧಾನವನ್ನು ವಿವರಿಸುತ್ತಾ ಅದು "ದೊಡ್ಡದ್ದಾಗಿದ್ದರೆ ಉತ್ತಮ, ಯಂತ್ರೋಪಕರಣಗಳನ್ನು ಅತಿಯಾಗಿ ಹೊತ್ತ, ಬೆರಗುಗೊಳಿಸುವ " ರೀತಿಯಲ್ಲಿದೆ ಎಂದಿದ್ದಾರೆ. ಅದು ಎಚ್ಚರಿಕೆಯಿಂದ ರಚಿಸಲಾದ ಮೋದಿಯವರ ಅಧಿಕಾರದ ಸಂಕೇತವನ್ನು ರಚನೆಯ ನಿರೂಪಣೆಯೂ ಆಗಿದೆ. ರಾಷ್ಟ್ರೀಯ ಯುದ್ಧ ಸ್ಮಾರಕವು ನಮ್ಮ ಸ್ಮರಣೆಯನ್ನು ಸ್ವಾತಂತ್ರ್ಯ ಸಂಗ್ರಾಮದಿಂದ ಸ್ವತಂತ್ರ್ಯಾನಂತರದ ಯುದ್ಧಗಳತ್ತ ಬದಲಾಯಿಸುವ ಪ್ರಯತ್ನವಾಗಿದ್ದರೆ, ಭವ್ಯವಾದ ಏಕತೆಯ ಪ್ರತಿಮೆ (statue of unity) ಮತ್ತು ಅಂಬೇಡ್ಕರ್ ಸ್ಮಾರಕವು ಈಗಿನ ಆಡಳಿತಗಾರರು ಸ್ವಾತಂತ್ರ್ಯಪೂರ್ವ ಕಾಲದಿಂದ ಏನನ್ನು ಕದಿಯಬಹುದೆಂಬುದನ್ನು ಗುರುತಿಸಿ ಅದನ್ನು ಸ್ವಾಧೀನಪಡಿಸಿಕೊಳ್ಳಲು ನಡೆಸಿರುವ ಪ್ರಯತ್ನವಾಗಿದೆ.

ಸೆಂಟ್ರಲ್ ವಿಸ್ತಾ ಇನ್ನೂ ಉದ್ಘಾಟನೆಗೊಂಡಿಲ್ಲವಾದರೂ ಇದು ತನ್ನ ಭವ್ಯತೆಯಿಂದ ನಮ್ಮನ್ನು ಬೆರಗುಗೊಳಿಸುತ್ತದೆ ಎಂಬುದನ್ನು ಊಹಿಸಬಹುದಾಗಿದೆ. ಇದನ್ನೇ ವಾಲ್ಟರ್ ಬೆಂಜಮಿನ್ ಅವರು ‘ರಾಜಕೀಯದ ಸೌಂದರ್ಯೀಕರಣ’ ಎಂದು ಕರೆದಿದ್ದರು ಎಂದು ಭಾಸವಾಗುತ್ತಿದೆ: ಜನಸಾಮಾನ್ಯರ(ಜೀವನದ) ಮೇಲೆ ಯಾವುದೇ ನೈಜ ಪರಿಣಾಮವಿಲ್ಲದೆ ಅಭಿವ್ಯಕ್ತಿಯನ್ನು ಒದಗಿಸಿದಾಗ, ಕಲೆಯು ಜನರನ್ನು ರಂಜಿಸುವ ಮತ್ತು ಬೆರಗುಗೊಳಿಸುವ, ಅವರ ಜೀವನ ಪರಿಸ್ಥಿತಿಗಳನ್ನು ಮರೆತುಬಿಡಲು ಸಹಾಯ ಮಾಡುವ ಸಂಗತಿಗಳನ್ನು ರಚಿಸುತ್ತದೆ.

ಇದನ್ನು ಓದಿದ್ದೀರಾ? ಹಾವನೂರು ವರದಿ ಹಿಂದುಳಿದ ವರ್ಗಗಳ ಚರಿತ್ರೆಗೆ ಹೊಸ ಹಾದಿಯನ್ನೇ ನಿರ್ಮಿಸಿತು

ಹೆಚ್ಚಿನ ರಾಜಕೀಯ ನಾಯಕರಿಗಿಂತ ಮೋದಿಯವರು ಸಾಂಕೇತಿಕತೆಯನ್ನು ತುಸು ಹೆಚ್ಚಾಗಿಯೇ ಅರ್ಥಮಾಡಿಕೊಂಡಿದ್ದಾರೆ. ಪ್ರಭುತ್ವಕ್ಕೆ ಬೇಕಾದ ಅಚ್ಚಿನಂತೆಯೇ ಸಮೂಹವನ್ನು ಸೃಷ್ಟಿಸಲು ವಾಸ್ತುಶಿಲ್ಪ, ಶಿಲ್ಪಗಳು, ವರ್ಣಚಿತ್ರಗಳು ಮತ್ತು ಉಪನ್ಯಾಸಗಳನ್ನು ಹೇಗೆ ಬಳಸಿಕೊಳ್ಳಬೇಕೆಂದು ಅವರಿಗೆ ತಿಳಿದಿದೆ. ದೈತ್ಯಾಕಾರವು ಬೆರಗುಗೊಳಿಸುತ್ತದೆ ಮಾತ್ರವಲ್ಲದೇ ಜೀವನದ ಸಣ್ಣತನವನ್ನು ಇನ್ನಷ್ಟೂ ಕುಬ್ಜಗೊಳಿಸುತ್ತದೆ. ತಾಂತ್ರಿಕ ಯಂತ್ರೋಪಕರಣಗಳು ನನ್ನ ಸ್ವಂತ ಜೀವನ ಪಥವನ್ನೂ ಲೆಕ್ಕಿಸದಂತೆ ಮಾಡಿ ಪ್ರಗತಿಯನ್ನು ಖಾತ್ರಿಪಡಿಸುತ್ತದೆ. ಸಿಂಥೆಟಿಕ್‌ ಆದಂತಹ ನೋಟವು ನಿಜ ಜೀವನದ ಎಲ್ಲಾ ಸುಕ್ಕುಗಳನ್ನು ಮರೆಯಾಗಿಸುತ್ತದೆ. ಆಕ್ರಮಣಶೀಲತೆಯು ಸಾಮೂಹಿಕ ವಿಶ್ವಾಸವನ್ನು ಆಳವಾದ ಕೀಳರಿಮೆಯನ್ನು ಹುದುಗಿಸಿಟ್ಟು ನಿರ್ಮಿಸುತ್ತದೆ. ಶಾಂತ (ನೆಮ್ಮದಿ) ರಸದಿಂದ ರೌದ್ರ [ಉಗ್ರ] ರಸ ದೆಡೆಗಿನ ಮತ್ತು ಆಂತರಿಕದಿಂದ ಬಾಹ್ಯದೆಡೆಗಿನ ಪರಿವರ್ತನೆಯು ಹೊಸ ರಾಜಕೀಯ ಸಮುದಾಯವೊಂದಕ್ಕೆ ನೀಡುತ್ತಿರುವ ಆಹ್ವಾನವಾಗಿದೆ. ಅದನ್ನವರು 'ಹೊಸ ಭಾರತ' ಎಂದು ಕರೆಯುತ್ತಾರೆ.

ಅನುವಾದ: ಶಶಾಂಕ್‌ ಎಸ್‌ ಆರ್‌, ಬೆಂಗಳೂರಿನ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಸಮಾಜ ವಿಜ್ಞಾನ ವಿಭಾಗದಲ್ಲಿ ಪಿ.ಹೆಚ್.ಡಿ ಸಂಶೋಧನಾರ್ಥಿ
ನಿಮಗೆ ಏನು ಅನ್ನಿಸ್ತು?
3 ವೋಟ್
eedina app