ನುಡಿನಮನ| ಸಾದತ್ ಹಸನ್ ಮಾಂಟೊವನ್ನು ನಮ್ಮ ಎದೆಗಿಳಿಸಿದವರು ಜಿ ಆರ್‌

G Rajashekhar

ನಮ್ಮ ತಲೆಮಾರಿಗೊಂದು ಬೌದ್ಧಿಕ ಸ್ಪಷ್ಟತೆಯನ್ನು ತಂದುಕೊಟ್ಟಿದ್ದು ಜಿ ರಾಜಶೇಖರ್. ಹಿಂದೆ ನಾನು ಜಿ ರಾಜಶೇಖರ್ ಮತ್ತು ಫಣಿರಾಜ್ ಅವರನ್ನು ಎಷ್ಟು ಪ್ರೀತಿಸುತ್ತಿದ್ದೇನೊ ಅಷ್ಟೇ ದ್ವೇಷಿಸುತ್ತಿದ್ದೆ. ಕರಾವಳಿಯಲ್ಲಿ ಮುಸ್ಲಿಂ ಕೋಮುವಾದ ಬೆಳೆಯಲು, ಹಿಂದೂ ಕೋಮುವಾದಕ್ಕೆ ಆಹಾರ ಒದಗಿಸಲು ಇವರಿಬ್ಬರೇ ಕಾರಣ ಎಂದು ಬಲವಾಗಿ ನಂಬಿದ್ದೆ. ಜಗಳವನ್ನೂ ಆಡಿದ್ದೆ

ಬಹುಶಃ 2007 ಇರಬಹುದು. 'ಕೋಮುವಾದಿಗಳ ದೌರ್ಜನ್ಯ ವಿರೋಧಿಸಿ ಬೃಹತ್ ಪ್ರತಿಭಟನೆ' ಎಂದು ಮಂಗಳೂರಿನಲ್ಲಿ ಕರಪತ್ರ ಹಂಚಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಎದುರು, ಬೆಳಿಗ್ಗೆ 11 ಗಂಟೆಗೆ ಎಂದು ಕರಪತ್ರದಲ್ಲಿ ಮುದ್ರಿಸಲಾಗಿತ್ತು. ಪೊಲೀಸರು ಬೆಳಿಗ್ಗೆ 8 ಗಂಟೆಗೆ ಡಿಸಿ ಕಚೇರಿ ಎದುರು ಬ್ಯಾರಿಕೇಟ್ ಹಾಕಲು ಶುರು ಮಾಡಿದರು. ಒಂದು ಪೊಲೀಸ್ ಬಸ್ ಅನ್ನು ತಂದು ನಿಲ್ಲಿಸಲಾಯ್ತು. ನಾನು ಮತ್ತು ಸುದಿಪ್ತೋ ಮೊಂಡಲ್ ಮತ್ತಿತರರು ವರದಿ ಮಾಡಲು ಬಹಳ ಜೋಶ್‌ನಿಂದ ಡಿಸಿ ಕಚೇರಿ ಎದುರು ಬೆಳಿಗ್ಗೆ  10 ಗಂಟೆಗೇ ಹಾಜರಾಗಿದ್ದೆವು.

ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದ ಡಿ ಸಿ ಕಚೇರಿ ಎದುರು ಹೆಗಲಿಗೆ ಜೋಳಿಗೆ ಹಾಕಿಕೊಂಡು ಜಿ ರಾಜಶೇಖರ್ ಬಂದರು. ಅವರ ಜೊತೆಗೆ ಸುರೇಶ್ ಭಟ್ ಬಾಕ್ರಬೈಲ್, ಪಿ ಬಿ ಡೇಸಾ ಇನ್ನೊಬ್ಬರು ಯಾರೋ ಇದ್ದರು. ಭದ್ರತೆಯ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಪೊಲೀಸ್ ಇನ್ಸ್ ಸ್ಪೆಕ್ಟರ್ ಒಬ್ಬರು ಜಿ ರಾಜಶೇಖರ್ ಬಳಿ ಓಡಿ ಬಂದು "ಸರ್, ಕೇವಲ ಐದು ಜನರ ನಿಯೋಗಕ್ಕೆ ಮಾತ್ರ ಡಿಸಿ ಭೇಟಿಗೆ ಅವಕಾಶ ಕಲ್ಪಿಸುತ್ತೇವೆ. ಪ್ರತಿಭಟನೆಯ ಬಳಿಕ ಐದು ಜನ ಮಾತ್ರ ಒಳಹೋಗಿ ಮನವಿ ಸಲ್ಲಿಸಿ ಬನ್ನಿ ಸರ್" ಅಂದ್ರು. ಜಿ ರಾಜಶೇಖರ್ ಅಕ್ಕಪಕ್ಕ ನೋಡಿದ್ರು. ನಾಲ್ಕೇ ನಾಲ್ಕು ಜನ ಮಾತ್ರ ಇದ್ರು.

ಈ ಘಟನೆಯನ್ನು ನಾವು ವೈಭವೀಕರಿಸಿ ರೇಗಿಸಲು, ಕಾಲೆಳೆಯಲು ಆಗಾಗ ಬಳಸಿಕೊಂಡು ನಕ್ಕಿದ್ದಿದೆ. ಆದರೆ ಇದು ಜಿ ರಾಜಶೇಖರ್, ಸುರೇಶ್ ಭಟ್ ಬಾಕ್ರಬೈಲ್, ಪ್ರೊ ಫಣಿರಾಜ್, ಪಿ ಬಿ ಡೇಸಾ, ಪಟ್ಟಾಭಿರಾಮ ಸೋಮಯಾಜಿಯವರ ಕೋಮುವಾದದ ವಿರುದ್ದದ ಧೈರ್ಯ ಮತ್ತು ಬದ್ಧತೆಯನ್ನು ತೋರಿಸುತ್ತದೆ. ನಾಲ್ಕೇ ಜನ ಇದ್ದು ಪ್ರತಿಭಟನೆ ದಾಖಲಿಸಲೂ ಗೊತ್ತು, ಅಬ್ಬರಗಳಿಲ್ಲದ ತಗ್ಗಿದ ಧ್ವನಿಯಲ್ಲೇ ಭಾಷಣ ಮಾಡಿ ಲಕ್ಷಾಂತರ ಜನರನ್ನು ಸೂಜಿಗಲ್ಲಿನಂತೆ ಸೆಳೆಯಲೂ ಗೊತ್ತು ಎಂಬುದನ್ನು ಸಾಬೀತುಪಡಿಸಿದವರು ಜಿ ರಾಜಶೇಖರ್.

ಆ ಕಾಲದಲ್ಲಿ ಈಗಿನಂತೆ ಸಾಮಾಜಿಕ ಜಾಲತಾಣಗಳ ಅಬ್ಬರವಿರಲಿಲ್ಲ. ಬ್ಲಾಗುಗಳು, ಬೆರಳೆಣಿಕೆಯ ವೆಬ್‌ಸೈಟ್ ಗಳನ್ನು ಬಿಟ್ಟರೆ ಸಾಮಾಜಿಕ ಜಾಲತಾಣವೆಂಬ ಮಾತೇ ಇರಲಿಲ್ಲ. ಆ ಕಾಲದಲ್ಲೂ ಕರಾವಳಿಯಲ್ಲಿ ಕೋಮುವಾದದ ವಿರುದ್ದದ ದ್ವನಿ ಎಂದರೆ ಜಿ ರಾಜಶೇಖರ್, ಪ್ರೊ ಫಣಿರಾಜ್, ಪಟ್ಟಾಭಿರಾಮ ಸೋಮಯಾಜಿ, ಸುರೇಶ್ ಭಟ್ ಬಾಕ್ರಬೈಲ್, ಪಿ ಬಿ ಡೇಸಾ ಎಂದು ಖ್ಯಾತರಾಗಿದ್ದರು. ಮುಸ್ಲೀಮರು, ದಲಿತರ ಮೇಲೆ ಎಲ್ಲೇ ಹಲ್ಲೆಯಾದರೂ ನಿರ್ಭೀತಿಯಿಂದ ಬೀದಿಗೆ ಬಂದು ನಿಂತು ಪ್ರತಿಭಟಿಸುವ ಛಾತಿ ಹೊಂದಿದ್ದರು.

ಇಬ್ಬರು ಜಿ ಆರ್ ಗಳು ನಮ್ಮ ತಲೆಮಾರನ್ನು ಬಹಳ ಪ್ರಭಾವಿಸಿದವರು. ಬರೆದು ಸಾಹಿತಿಯೋ, ಚಿಂತಕನೋ ಎಂದು ಕರೆಸಿಕೊಳ್ಳುವುದಷ್ಟೇ ಅಲ್ಲ. ಧಮನಿತರು, ಶೋಷಿತರಿಗೆ ಧ್ವನಿಯಾಗಿ ಬೀದಿಗಿಳಿಯಬೇಕು ಎಂದು ಹೇಳಿಕೊಟ್ಟವರು ಇಬ್ಬರು ಜಿಆರ್‌ಗಳು. ಒಬ್ಬರು ಜಿ ರಾಜಶೇಖರ್, ಇನ್ನೊಬ್ಬರು ಜಿ ರಾಮಕೃಷ್ಣ.

Image
ಚಿತ್ರಗಳು: ಕಂಟಾಡಿ ನಿತೇಶ್
ಚಿತ್ರಗಳು: ಕುಂಟಾಡಿ ನಿತೇಶ್

ನಮ್ಮ ತಲೆಮಾರಿಗೊಂದು ಬೌದ್ಧಿಕ ಸ್ಪಷ್ಟತೆಯನ್ನು ತಂದುಕೊಟ್ಟಿದ್ದು ಜಿ ರಾಜಶೇಖರ್. ಹಿಂದೆ ನಾನು ಜಿ ರಾಜಶೇಖರ್ ಮತ್ತು ಫಣಿರಾಜ್ ರನ್ನು ಎಷ್ಟು ಪ್ರೀತಿಸುತ್ತಿದ್ದೇನೊ ಅಷ್ಟೇ ದ್ವೇಷಿಸುತ್ತಿದ್ದೆ. ಕರಾವಳಿಯಲ್ಲಿ ಮುಸ್ಲಿಂ ಕೋಮುವಾದ ಬೆಳೆಯಲು, ಹಿಂದೂ ಕೋಮುವಾದಕ್ಕೆ ಆಹಾರ ಒದಗಿಸಲು ಇವರಿಬ್ಬರೇ ಕಾರಣ ಎಂದು ಬಲವಾಗಿ ನಂಬಿದ್ದೆ. ತೀವ್ರವಾಗಿ ಜಗಳವನ್ನೂ ಆಡಿದ್ದೆ. ಅವರಿಬ್ಬರೂ ಅದನ್ನು ನಗಣ್ಯ ಮಾಡಿದ್ದರು. ಸಿಕ್ಕಾಗೆಲ್ಲಾ ಏನೂ ನಡೆದಿಲ್ಲ ಎಂಬಂತೆ ಪ್ರೀತಿ ತೋರಿಸುತ್ತಿದ್ದರು. ಇದೇ ಕಾರಣಕ್ಕೆ ಮೊದಲ ಜನನುಡಿಯಿಂದಲೂ ಜಿ ರಾಜಶೇಖರ್ ಮತ್ತು ಫಣಿರಾಜ್‌ರನ್ನು ದೂರ ಇಟ್ಟಿದ್ದೆವು. ಕೋಮುವಾದ, ಶಿಕ್ಷಣ ವ್ಯಾಪಾರದ ವಿರುದ್ದ ನಡೆಯುತ್ತಿರುವ ಜನನುಡಿಯಲ್ಲಿ ಜಿ ರಾಜಶೇಖರ್, ಫಣಿರಾಜ್ ಯಾಕಿಲ್ಲ ಎಂದು ಬೆಂಗಳೂರಿನ ಸಾಹಿತಿಗಳು, ಹೋರಾಟಗಾರರು ಕೇಳಿದಾಗ ಖಾರವಾಗಿ ಪ್ರತಿಕ್ರಿಯಿಸಿದ್ದಿದೆ. ಆ ಬಳಿಕ ತಪ್ಪಿನ ಅರಿವಾಗಿತ್ತು. 2018ರ ಜನನುಡಿಯಲ್ಲಿ ಭಾರತದ ಭವಿಷ್ಯ : ಮಾರ್ಕ್ಸ್ -ಅಂಬೇಡ್ಕರ್- ಗಾಂಧಿ- ಲೋಹಿಯಾ ಎಂಬ ಗೋಷ್ಠಿಯಲ್ಲಿ ಜಿ ರಾಜಶೇಖರ್ ಉಪನ್ಯಾಸ ನೀಡಿದ್ದರು. ಅಮೆರಿಕ ನೇತೃತ್ವದ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಕಮ್ಯುನಿಷ್ಟರು ಹೇಗೆ ಜಾಗತಿಕವಾಗಿ ಸಮರ್ಥವಾಗಿ ಎದುರಿಸಿದ್ದರು ಎಂಬುದನ್ನು ಚಿಕ್ಕ ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದರು.

ಬಹಳಷ್ಟು ಕಾರ್ಯಕ್ರಮಗಳಲ್ಲಿ ಭೇಟಿಯಾದಾಗ ಕೋಮುವಾದದ ಬಗ್ಗೆ ಚರ್ಚೆ ಮಾಡುವುದಿತ್ತು. ನೀವು ಹಿಂದೂ ಕೋಮುವಾದವನ್ನು ಮಾತ್ರ ವಿರೋಧಿಸುತ್ತೀರಿ, ಅದೂ ಮುಸ್ಲಿಂ ಕೋಮುವಾದಿಗಳ ವೇದಿಕೆಯಲ್ಲಿ ನಿಂತು ಹಿಂದೂ ಕೋಮುವಾದಿಗಳನ್ನು ಖಂಡಿಸುತ್ತೀರಿ ಎಂದು ಅವರೆದರು ಕೂತು ಅವರಿಗೇ ಪಾಠ ಮಾಡಿದ್ದೆ. ಯಾವ ಹಮ್ಮುಬಿಮ್ಮೂ ಇಲ್ಲದೇ, ದೊಡ್ಡಸ್ಥಿಕೆಯೂ ಇಲ್ಲದೇ ನಮ್ಮನೆಯ ಹುಡುಗ ಮಾತನಾಡುತ್ತಿದ್ದಾನೆ ಎಂಬಂತೆ ಎಲ್ಲದಕ್ಕೂ ಕಿವಿಗೊಟ್ಟು ಕೇಳುತ್ತಿದ್ದರು. ನನ್ನ ತಲೆಯೊಳಗಿನ ಜ್ಞಾನಭಂಡಾರ ಖಾಲಿಯಾದ ಬಳಿಕ ನಿಧಾನಕ್ಕೆ ಕೋಮುವಾದದ ಹಲವು ಆಯಾಮಗಳನ್ನು ವಿವರಿಸುತ್ತಿದ್ದರು. ಅವರನ್ನು ಟೀಕಿಸಿದೆ ಎಂಬ ಯಾವ ಕೋಪವೂ ಅವರಿಗೆ ಇರುತ್ತಿರಲಿಲ್ಲ‌. ಈ ವಿಷಯದಲ್ಲಿ  ಫಣಿರಾಜ್ ಅವರ ಪಡಿಯಚ್ಚು.

ಇದನ್ನು ಓದಿದ್ದೀರಾ? ಸಂಘ ಬಿಟ್ಟವರು ಬಿಚ್ಚಿಟ್ಟ ಸತ್ಯ| ʼರೂಪ್‌ ಕನ್ವರ್‌ʼ ಸತಿಸಹಗಮನವನ್ನು ಬೆಂಬಲಿಸಿದ್ದ ಆರೆಸ್ಸೆಸ್‌!

2012ರಲ್ಲಿ ಕತೆಗಾರ ಸಾದತ್ ಹಸನ್ ಮಾಂಟೊ ಅವರ 100ನೇ ಜನ್ಮ ದಿನದ ಪ್ರಯುಕ್ತ ಪತ್ರಕರ್ತರ ಅಧ್ಯಯನ ಕೇಂದ್ರದ  ಮೂಲಕ  "ಮಾಂಟೊ ನೆನಪು" ಹಾಗೂ ಪತ್ರಕರ್ತ ಬಿ.ಎಂ.ಬಶೀರ್ ಅವರ "ಅಂಗೈಯಲ್ಲೇ ಆಕಾಶ" ಹನಿಕತೆಗಳ ಜೊತೆ ಒಂದು ಸಂಜೆ ಎಂಬ ಕಾರ್ಯಕ್ರಮ ಆಯೋಜಿಸಿ ಮುಖ್ಯ ಭಾಷಣಕಾರರಾಗಿ ಜಿ ರಾಜಶೇಖರ್ ಅವರನ್ನು ಕರೆದಿದ್ದೆ. ನನ್ನ ಆಗಿನ ಪ್ರಗತಿಪರತೆಯ ಅಹಂಕಾರದ ಬಗ್ಗೆ ಯಾವ ಕೋಪ ಇಟ್ಟುಕೊಳ್ಳದ ಜಿ ರಾಜಶೇಖರ್ ಅವರು ಸಮಯಕ್ಕೂ ಮೊದಲೇ ಬಂದು ಸಭಾಂಗಣದಲ್ಲಿ ಕುಳಿತಿದ್ದರು. ʼಕತೆಗಾರ ಸಾದತ್ ಹಸನ್ ಮಾಂಟೊ ಅವರ ಪ್ರತಿ ಕತೆಗೂ ನೂರಾರು ಅರ್ಥಗಳನ್ನು ಧ್ವನಿಸುವ ಶಕ್ತಿ ಇತ್ತು. ಗಾಂಧೀಜಿ ರಾಜಕೀಯದ ಸತ್ಯ ಹೇಳುತ್ತಿದ್ದರೆ, ಮಾಂಟೊ ಸಾಹಿತ್ಯದ ಮೂಲಕ ವಾಸ್ತವವನ್ನು ಅನಾವರಣಗೊಳಿಸುತ್ತಿದ್ದರು. ಅವರಿಬ್ಬರ ಸತ್ಯನಿಷ್ಠೆ ಒಂದೆ ತೆರನಾದದ್ದು. ಮಾಂಟೊ ಬದುಕಿದ್ದುದು ಕೇವಲ 43 ವರ್ಷ. ವೃತ್ತಿ ಮತ್ತು ಪ್ರವೃತ್ತಿ ಬಗ್ಗೆ ಆಧುನಿಕ ಪ್ರಜ್ಞೆ ರೂಢಿಸಿಕೊಂಡಿದ್ದ ಮಾಂಟೊ ನಿರುದ್ಯೋಗ ಹಾಗೂ ಬಡತನದಿಂದ ಕಂಗೆಟ್ಟಿದ್ದರು. ದೇಶ ವಿಭಜನೆ ಹಿನ್ನೆಲೆಯಲ್ಲಿ ಭಾರತದಿಂದ ನಿರ್ಗಮಿಸುವಾಗ  ಅವರು ಸಂಕಟ ಅನುಭವಿಸಿದ್ದರುʼ ಎಂದು ಮಾಂಟೋವನ್ನು ನಮ್ಮ ಎದೆಗಿಳಿಸಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್