ರಾಷ್ಟ್ರೀಯ ಪತ್ರಿಕಾ ದಿನ | ಗಿಫ್ಟ್‌ ಟ್ರ್ಯಾಪ್‌ಗೆ ಬಿದ್ದ ಮಾಧ್ಯಮಗಳು; ವಿರೋಧಿಸದ ʼರಾಷ್ಟ್ರವಾದಿʼ ಸಂಘಟನೆಗಳು!

K Sudhakar

ಸರ್ಕಾರ, ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು ಅಲ್ಲದೆ ದೊಡ್ಡ ದೊಡ್ಡ ವ್ಯವಹಾರ ಸಂಸ್ಥೆಗಳಲ್ಲಿರುವ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು-ಹೀಗೆ ಬಲೆಹಿಡಿದು ನಿಂತವರು ಎಷ್ಟೊಂದು ಜನ; ಎಷ್ಟೊಂದು ರೂಪಗಳು; ಎಷ್ಟೊಂದು ವೇಷಗಳು. ಹೆಸರು ಬೇರೆ ಬೇರೆಯಾದರೂ ಉದ್ದೇಶ ಒಂದೇ. ಇದು ಮಾಧ್ಯಮದವರಿಗೆ ತಿಳಿಯದ ಸಂಗತಿಯೇನೂ ಅಲ್ಲ.

ಹಿಂದೂ ಎನ್ನುವ ಪದದ ಮೂಲವನ್ನು ಮತ್ತು ಅರ್ಥವನ್ನು ವಿವರಿಸಲು ಹೊರಟ ಕಾಂಗ್ರೆಸ್‌ ಶಾಸಕ ಸತೀಶ್‌ ಜಾರಕಿಹೊಳಿ ಅವರ ಮೇಲೆ ಮುಗಿಬಿದ್ದ 'ರಾಷ್ಟ್ರವಾದಿ' ಎಂದು ಹೇಳಿಕೊಳ್ಳುವ ಸಂಘಟನೆಗಳು ಅವರ ಕ್ಷಮಾಪಣೆಗೆ ಒತ್ತಾಯಿಸಿದವು. ಇದಕ್ಕಾಗಿ ಹಲವು ಸಂಘಟನೆಗಳಿಂದ ರಾಜ್ಯವ್ಯಾಪಿ ಪ್ರತಿಭಟನೆಗಳೂ ನಡೆದುವು. ಯಾವುದೇ ಪದದ ಅರ್ಥ ಸರಿಯಾಗಿಲ್ಲದಿದ್ದರೆ ತಮ್ಮ ಪಾಂಡಿತ್ಯದಿಂದ, ತಿಳಿವಳಿಕೆಯ ನೆಲೆಯಿಂದ ಅದನ್ನು ಅಲ್ಲಗಳೆಯಬಹುದು; ಸರಿಯಾದ ಅರ್ಥವನ್ನು ಹೇಳಿ ಸಮರ್ಥಿಸಬಹುದು. ಇದೆಲ್ಲವನ್ನು ಬಿಟ್ಟು ಬೀದಿಗಿಳಿದು, ʼಹಿಂದೂ ಭಾವನೆಗಳಿಗೆ ಧಕ್ಕೆಯಾಗಿದೆʼ ಎಂದು ಹೇಳುತ್ತ ಪ್ರತಿಭಟನೆ ನಡೆಸಿದವು.

Eedina App

ಇವೇ ಸಂಘಟನೆಗಳು ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಹಣದ ಥೈಲಿ ಹೋದಾಗ ತುಟಿಬಿಚ್ಚಲಿಲ್ಲ. ದೀಪಾವಳಿಯ ಕೊಡುಗೆಯೆಂದು ಸಿಹಿ ಪೊಟ್ಟಣವನ್ನು ಕೊಟ್ಟು ಅದರಲ್ಲಿ ಲಕ್ಷಗಟ್ಟಲೆ ಹಣ ಇಟ್ಟದ್ದು ಈ ಸಂಘಟನೆಗಳಿಗೆ ದೊಡ್ಡ ಸಂಗತಿಯೇ ಆಗಲಿಲ್ಲ. ತಮ್ಮ ಕಚೇರಿಯಿಂದಲೇ ಈ ವ್ಯವಹಾರ ನಡೆದರೂ ಮುಖ್ಯಮಂತ್ರಿ ಬೆಚ್ಚಿಬೀಳಲಿಲ್ಲ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವುದನ್ನು ಇವರಿಂದ ನಿರೀಕ್ಷಿಸುವುದೂ ಸಾಧ್ಯವಿರಲಿಲ್ಲ.

ಪತ್ರಕರ್ತರ ಗಿಫ್ಟ್‌ ಪ್ರಕರಣದ ಬಗ್ಗೆ ಕಾಂಗ್ರೆಸ್‌ ಪಕ್ಷ ನ್ಯಾಯಾಂಗ ತನಿಖೆಗೆ ಒತ್ತಾಯಿಸಿತು. ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರ ಗುಂಪೊಂದು ಲೋಕಾಯುಕ್ತಕ್ಕೆ ದೂರು ನೀಡಿತು. ಮುಖ್ಯಮಂತ್ರಿಗಳು, ʼತನಿಖೆಗೆ ನಡೆಯಲಿʼ ಎಂಬ ಮಾಮೂಲಿ ಮಾತನ್ನು ಆಡಿ ಪಾರಾದರು. ಬೇರೆ ಯಾವ ರಾಜಕೀಯ ಪಕ್ಷಗಳೂ ಈ ಬಗ್ಗೆ ಮಾತನಾಡಲಿಲ್ಲ. ಮಾಧ್ಯಮದವರ ಜೊತೆಗಿನ ವ್ಯವಹಾರ ಎಷ್ಟು ಸೂಕ್ಷ್ಮ ಮತ್ತು ಯಾರ್ಯಾರು ಇದರಲ್ಲಿ ಪಾಲುದಾರರು ಎಂಬುದನ್ನೂ ಈ ಪ್ರಕರಣ ಸೂಚ್ಯವಾಗಿ ಹೇಳುವಂತಿದೆ.

AV Eye Hospital ad

ಪ್ರಜಾಪ್ರಭುತ್ವ ವ್ಯವಸ್ಥೆ ವ್ಯವಸ್ಥಿತವಾಗಿ ನಡೆದುಕೊಂಡು ಹೋಗಲು ಶಾಸಕಾಂಗ, ಆಡಳಿತಾಂಗ ಮತ್ತು ನ್ಯಾಯಾಂಗ ಎಂಬ ಮೂರು ಪ್ರಧಾನ ಕಂಬಗಳಿವೆ. ನಾಲ್ಕನೆಯ ಕಂಬವೇ ಈ ಪತ್ರಿಕೆಗಳು ಅಥವಾ ಮಾಧ್ಯಮಗಳು. ಮುಖ್ಯಮಂತ್ರಿಗಳ ಕಚೇರಿಯಿಂದ ಮೊದಲ ಮೂರು ಅಂಗಗಳ ಯಾರಿಗೂ ದೀಪಾವಳಿ ಗಿಫ್ಟ್‌ ಹೋದಂತೆ ಕಾಣುವುದಿಲ್ಲ. ಮಾಧ್ಯಮಗಳಿಗೆ ಮಾತ್ರ ಹೋಗಿರುವುದು ಗೊತ್ತಾಗುತ್ತದೆ. ಸ್ವೀಟ್‌ ಬಾಕ್ಸ್‌ ಕಳಿಸುವುದು ಅಪರಾಧವಾಗಬೇಕಾಗಿಲ್ಲ. ಆದರೆ ಅದರೊಳಗೆ ಲಕ್ಷಗಟ್ಟಲೆ (ಒಂದರಿಂದ ಮೂರು ಲಕ್ಷ ರೂ. ವರೆಗೆ ಎಂದು ಹೇಳಲಾಗುತ್ತಿದೆ) ಹಣ ಇಡುವುದು ಯಾವುದರ ಸೂಚನೆ? ಮುಖ್ಯಮಂತ್ರಿಗಳ ಕಚೇರಿಯಿಂದಲೇ ಇದು ಹೋಗುವುದು ಏನನ್ನು ಸೂಚಿಸುತ್ತಿದೆ?

ಗಿಫ್ಟ್‌ ಹೆಸರಲ್ಲಿ ಪತ್ರಕರ್ತರನ್ನು ಬಲೆಗೆ ಬೀಳಿಸುವುದು ಇಂದಿನ ವಿದ್ಯಮಾನ ಮಾತ್ರವಲ್ಲ. ಅನೇಕ ದಶಕಗಳಿಂದ ತೆರೆ ಮರೆಯಲ್ಲಿಯೇ ನಡೆದುಕೊಂಡು ಬಂದಿದೆ. ಪಾನಗೋಷ್ಠಿಗಳು, ಪಾರ್ಟಿಗಳು, ಪತ್ರಿಕಾಗೋಷ್ಠಿಗಳು, ಪ್ರವಾಸಗಳು ಎಲ್ಲವೂ ಒಂದರೊಳಗೊಂದು ಬೆರೆತು ಮಾಧ್ಯಮದವರನ್ನು ಬಲೆಗೆ ಬೀಳಿಸುತ್ತಲೇ ಇವೆ. ಸರ್ಕಾರ, ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು ಅಲ್ಲದೆ ದೊಡ್ಡ ದೊಡ್ಡ ವ್ಯವಹಾರ ಸಂಸ್ಥೆಗಳಲ್ಲಿರುವ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು-ಹೀಗೆ ಬಲೆಹಿಡಿದು ನಿಂತವರು ಎಷ್ಟೊಂದು ಜನ; ಎಷ್ಟೊಂದು ರೂಪಗಳು; ಎಷ್ಟೊಂದು ವೇಷಗಳು. ಹೆಸರು ಬೇರೆ ಬೇರೆಯಾದರೂ ಉದ್ದೇಶ ಒಂದೇ. ಇದು ಮಾಧ್ಯಮದವರಿಗೆ ತಿಳಿಯದ ಸಂಗತಿಯೇನೂ ಅಲ್ಲ. ಆದರೆ  ಆಮಿಷಗಳನ್ನು ಮೀರುವ, ಮೌಲ್ಯಗಳನ್ನು ಆರಾಧಿಸುವ ಮನಸ್ಸು ಎಷ್ಟು ಜನ ಮಾಧ್ಯಮದವರಿಗಿದೆ ಎನ್ನುವುದು ಇಲ್ಲಿನ ಪ್ರಶ್ನೆ.

bommai

ಗಿಫ್ಟ್‌ ನಿರಾಕರಿಸಲು ಒಪ್ಪದ ಪತ್ರಕರ್ತರ ಸಂಘ: ಕೆಲ ದಶಕಗಳ ಹಿಂದೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಒಂದು ಚರ್ಚೆ, ಸಂವಾದ ನಡೆಯಿತು. ಪತ್ರಕರ್ತರು (ಆಗಿನ್ನು ಇತರ ಮಾಧ್ಯಮಗಳು ಹೆಚ್ಚಾಗಿರಲಿಲ್ಲ) ಗಿಫ್ಟ್‌ ಸ್ವೀಕರಿಸಬೇಕೇ, ನಿರಾಕರಿಸಬೇಕೇ? ಎನ್ನುವ ಪ್ರಶ್ನೆಯೇ ಮುಖ್ಯ ಸಂವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಒಂದರ್ಥದಲ್ಲಿ ಇದು ಆಂತರಿಕ ಸಭೆ. ಪತ್ರಕರ್ತರೇ ತಮ್ಮೊಳಗೆ ನಡೆಸಿದ ಸಂವಾದ. ಚರ್ಚೆ ಆರಂಭವಾಗುತ್ತಿದ್ದಂತೆ ಹಿರಿಯ ಪತ್ರಕರ್ತರು ಜಾಗ ಖಾಲಿಮಾಡಿದರು. ಯುವಕರಲ್ಲೂ ಭಿನ್ನ ಅಭಿಪ್ರಾಯಗಳು. ನಾಲ್ಕಾರು ಯುವಕರು ಮಾತ್ರ ಯಾವುದೇ ರೂಪದಲ್ಲಿ ಬಂದರೂ, ಗಿಫ್ಟ್‌ಗಳನ್ನು ಒಪ್ಪಿಕೊಳ್ಳಬಾರದು ಎಂದು ಹೇಳಿ ಇದನ್ನು ಸಂಘ ನಿರ್ಣಯ ಮಾಡಬೇಕು ಎಂದು ಪಟ್ಟುಹಿಡಿದರು. ಸಂಘ ಅಂಥ ನಿರ್ಣಯವನ್ನೇನೂ ಕೈಗೊಳ್ಳಲಿಲ್ಲ. ಸಭೆ ನಿರ್ಣಯವಿಲ್ಲದೆ ಬರಖಾಸ್ತಾಯಿತು. ಗಿಫ್ಟ್‌ಗಳು ಎಂದಿನಂತೆ ಹಲವು ರೂಪಗಳಲ್ಲಿ, ವೇಷಗಳಲ್ಲಿ ಮುಂದುವರಿದವು. ರಾಜಕಾರಣಿಗಳು ಮತ್ತು ಮಾಧ್ಯಮದವರ ನಡುವಣ ʼಆಪ್ತʼ ಸ್ನೇಹ ಎಂದಿಗಿಂತ ಹೆಚ್ಚಾಗಿಯೇ ಮುಂದುವರಿಯಿತು.

ಇವತ್ತು ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಮಾಧ್ಯಮದ ಜುಟ್ಟನ್ನು ಹಿಡಿಯಲು ಬಗೆಬಗೆಯ ಕಸರತ್ತುಗಳನ್ನು ಮಾಡುತ್ತಿವೆ. ತಾವೇ ಪತ್ರಿಕೆ ಆರಂಭಿಸುವುದು, ತಾವೇ ಟಿವಿ ಚಾನಲ್‌ಗಳನ್ನು ಕೊಳ್ಳುವುದು, ಸರ್ಕಾರಿ ಸ್ವಾಮ್ಯದಲ್ಲಿರುವ ಮಾಧ್ಯಮಗಳನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳುವುದು, ಪ್ರಭಾವೀ ಮಾಧ್ಯಮಗಳಲ್ಲಿ ವಿಭಿನ್ನ ರೀತಿಯಲ್ಲಿ ತಮ್ಮ ನಿಯಂತ್ರಣವನ್ನು ಬಳಸುವುದು ಇತ್ಯಾದಿ ಸಂಗತಿಗಳು ಇವತ್ತು ಗುಟ್ಟಾಗಿ ಉಳಿದಿಲ್ಲ. ಗಟ್ಟಿನಿಲುವಿಲ್ಲದ ಮಾಧ್ಯಮದವರನ್ನು, ಸಂಪಾದಕರನ್ನು ಕೊಳ್ಳುವುದು ಅಥವಾ ಓಲೈಸಿ ತಮ್ಮ ಅಧೀನದಲ್ಲಿಟ್ಟುಕೊಳ್ಳುವುದು ನಡೆದೇ ಇದೆ. (ಲೋಕಸಭೆ ಅಥವಾ ವಿಧಾನ ಸಭೆಗಳಿಗೆ ಆಯ್ಕೆಯಾದ ಜನಪ್ರತಿನಿಧಿಗಳನ್ನೇ ಕೊಳ್ಳುವ ಸಂಗತಿ ಅಪಮಾನಕರವಾಗಿ ಕಾಣದ ಸಾಮಾಜಿಕ ಸನ್ನಿವೇಶ ನಮ್ಮಲ್ಲಿ ಈಗ ಜಾರಿಯಲ್ಲಿದೆ) ಜೊತೆಗೆ ಜಾಹಿರಾತು ಎನ್ನುವ ಅಪರೂಪದ ಮತ್ತು ಪ್ರಭಾವಶಾಲಿಯಾದ ಅಸ್ತ್ರವನ್ನು ಸರ್ಕಾರ ತನ್ನ ಕೈಯ್ಯಲ್ಲಿಟ್ಟುಕೊಂಡಿದೆ. ರಾಜಕೀಯ ಪಕ್ಷಗಳೂ ಈ ಜಾಹಿರಾತನ್ನು ಅಸ್ತ್ರವಾಗಿ ಬಳಸುತ್ತಿವೆ. ಸಣ್ಣ ಪತ್ರಿಕೆಗಳಿಗೆ ಜಾಹಿರಾತನ್ನು ನೀಡುವ ಮೂಲಕ ಅವುಗಳನ್ನು ಬೆಂಬಲಿಸುವುದು ತನ್ನ ಕರ್ತವ್ಯ ಎಂದು ಹೇಳಿ ಸರ್ಕಾರ ಈ ಜಾಹಿರಾತು ಅಸ್ತ್ರವನ್ನು ಬಳಸಿತು. ಸಣ್ಣ ದೊಡ್ಡ ಎಂಬ ತಾರತಮ್ಯ ಇಲ್ಲದೆ ಎಲ್ಲರಿಗೂ ಜಾಹಿರಾತನ್ನು ನೀಡುವುದು, ಆ ಮೂಲಕ ಎಲ್ಲರನ್ನೂ ಸಂಪ್ರೀತಗೊಳಿಸುವುದು ಕೂಡಾ ನಡೆದುಕೊಂಡು ಬಂದಿರುವ ಪರಿಪಾಠವಾಗಿದೆ.

ಸರ್ಕಾರದಿಂದ ಪ್ರತಿವರ್ಷ ಕೋಟಿಗಟ್ಟಲೆ ಹಣ ಪಡೆಯುವ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ಸರ್ಕಾರವನ್ನು ಎದುರು ಹಾಕಿಕೊಳ್ಳುವುದು ಸಾಧ್ಯವಾಗದ ಮಾತು ಎನ್ನುವಂತಾಗಿದೆ. ಇವತ್ತಿಗೂ ಸಾರ್ವಜನಿಕ ಹಣ ಈ ಜಾಹಿರಾತು ಹೆಸರಲ್ಲಿ ಪೋಲಾಗುತ್ತಿರುವುದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಜಾಹಿರಾತು ಎನ್ನುವುದು ಪ್ರಚಾರ ಎನ್ನುವುದಕ್ಕಿಂತ ಹೆಚ್ಚಾಗಿ ಮಾಧ್ಯಮ ಸಂಸ್ಥೆಗಳನ್ನು ನಿಯಂತ್ರಿಸಲು ಬಳಸುತ್ತಿರುವ ಅಸ್ತ್ರ ಎಂಬುದು ನಿಜ.

ಶೇಷಪ್ಪನವರ ʼಕಿಡಿʼ ಪತ್ರಿಕೆ : ಗಾಂಧೀಜಿ ತಮ್ಮ ಪತ್ರಿಕೆ ಹರಿಜನವನ್ನು ಜಾಹಿರಾತಿಲ್ಲದೆ ನಡೆಸಿದರು. ಇದೇ ಮಾದರಿಯನ್ನು ಅನುಸರಿಸಿ ಕೆಲವು ಪತ್ರಿಕೆಗಳೂ ನಡೆದವು. ಲಂಕೇಶರು ಗಾಂಧೀಜಿಯವರ ಈ ನಿಲುವನ್ನು ಮೆಚ್ಚಿ ತಮ್ಮ ʼಲಂಕೇಶ್‌ ಪತ್ರಿಕೆʼಯನ್ನು ಜಾಹಿರಾತಿಲ್ಲದೆಯೇ ಸಮರ್ಥವಾಗಿ ನಡೆಸಿದರು. ಯಾವ ಹಂಗೂ ಇಟ್ಟುಕೊಳ್ಳದೆ, ಸರ್ಕಾರಗಳ, ರಾಜಕೀಯ ವ್ಯಕ್ತಿಗಳ, ಪಕ್ಷಗಳ ಅವ್ಯವಹಾರವನ್ನು ಬಯಲಿಗೆಳೆಯುವ ದಿಟ್ಟತನವನ್ನು ತೋರಿಸಿಕೊಟ್ಟರು. ಲಂಕೇಶರಿಗೆ ಪ್ರೇರಣೆ ನೀಡಿದ್ದ ಶೇಷಪ್ಪನವರ ʼಕಿಡಿʼ ಪತ್ರಿಕೆ ಕೂಡಾ ಬಹಳ ದಿಟ್ಟತನದಿಂದ ಭ್ರಷ್ಟರಿಗೆ ದೊಡ್ಡ ತಲೆನೋವಾಗಿತ್ತು ಎಂದು ಹೇಳುತ್ತಾರೆ.

ಕಿಡಿ ಪತ್ರಿಕೆ ಶೇಷಪ್ಪನವರು

ಸ್ವಾತಂತ್ರ್ಯ ಎನ್ನುವುದು ಒಂದು ಅಪರೂಪದ ಮೌಲ್ಯ; ಹಾಗೆಯೇ ನೈತಿಕತೆ ಎನ್ನುವುದು ಕೂಡಾ. ಈ ಎರಡು ಮೌಲ್ಯಗಳು ಪರಸ್ಪರ ಪೂರಕ. ಇವು ಸುಮ್ಮನೇ ಸಿಕ್ಕುವುದಿಲ್ಲ. ಎಲ್ಲ ಬಗೆಯ ಕಷ್ಟನಷ್ಟಗಳಿಗೆ ಎದೆಯೊಡ್ಡಿ ದಿಟ್ಟತನ ತೋರುವ ಮೌಲಿಕರಿಗೆ, ಧೀರರಿಗೆ ಇವು ಸ್ನೇಹಹಸ್ತವನ್ನು ಸದಾ ಚಾಚಿರುತ್ತವೆ. ಇಂಥ ಪತ್ರಕರ್ತರುʼ ಮಾಧ್ಯಮ ಧೀರರು ಒಂದು ಸಮಾಜವನ್ನು ಮುನ್ನಡೆಸಬಲ್ಲರು; ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಬಲ್ಲರು. ಎಲ್ಲರ ಮುನ್ನಡೆ ಬಯಸುವ ಸಂವಿಧಾನಕ್ಕೆ ಒಂದಿಷ್ಟೂ ಧಕ್ಕೆ ಆಗದಂತೆ ನೋಡಿಕೊಳ್ಳಬಲ್ಲರು. ಸ್ವಾತಂತ್ರ್ಯ ಪೂರ್ವದಲ್ಲಿ, ಸ್ವಾತಂತ್ರ್ಯ ಬಂದ ಹೊಸದರಲ್ಲಿ ಹಾಗೂ 1975ರಲ್ಲಿ ಘೋಷಣೆಯಾದ ʼತುರ್ತುಪರಿಸ್ಥಿತಿʼ  ಸಂದರ್ಭದಲ್ಲಿ ಇಂಥ ಪತ್ರಕರ್ತರು ಕಾಣಿಸಿದರು. ಅವರ ದಿಟ್ಟತನ, ನಿಲುವುಗಳೂ ಕಾಣಿಸಿದವು. ಇಂಥವರು ಆಕಾಶದಿಂದ ಬೀಳುವುದಿಲ್ಲ. ಈ ಸಮಾಜದಿಂದ, ಅದರ ಚಿಂತನೆಯಿಂದ, ದಿಟ್ಟತನದಿಂದ ಎದ್ದುಬರಬೇಕು. ಅಂಥ ಸಮಾಜವನ್ನು ಕಟ್ಟುವುದು ಕೂಡಾ ನಮ್ಮೆಲ್ಲರ ಹೊಣೆ.

ಇದನ್ನು ಓದಿದ್ದೀರಾ? EWS | ಶೇ.10ರ ಮೀಸಲಾತಿಯ ಒಳನೋಟದ ಚರ್ಚೆಯಾಗಲಿ, ಜನರಲ್ ಮೆರಿಟ್ ವ್ಯಾಪ್ತಿಯ ಜಾತಿಗಳನ್ನು ಬಹಿರಂಗಪಡಿಸಲಿ

ನಮ್ಮ ಪತ್ರಿಕಾ ಸಂಸ್ಥೆಗಳು, ಪತ್ರಕರ್ತರ ಸಂಘಟನೆಗಳು ಎಳೆಯ ತಲೆಮಾರಿಗೆ ಮಾರ್ಗದರ್ಶನ ನೀಡುವುದು ಸಾಧ್ಯವಾಗಬೇಕಾದರೆ, ಇಂಥ ಸಾರ್ವಕಾಲಿಕ ಸವಾಲುಗಳಿಗೆ ಎದುರಾಗುತ್ತಲೇ ಇರಬೇಕು. ತಮ್ಮ ನಿಲುವನ್ನು ದಿಟ್ಟತನದಿಂದ ಪ್ರತಿಪಾದಿಸುತ್ತಲೇ ಇರಬೇಕು. ಯಾವ ಭೀತಿಯೂ ಇಲ್ಲದೆ, ಯಾವ ಲಜ್ಜೆಯೂ ಇಲ್ಲದೆ ಒಂದು ರಾಜ್ಯದ ಮುಖ್ಯಮಂತ್ರಿ ಕಚೇರಿಯಲ್ಲಿಯೇ ಇಂಥ ಭ್ರಷ್ಟಾಚಾರ ತಲೆ ಎತ್ತಿದಾಗ ಅದನ್ನು ಖಂಡತುಂಡವಾಗಿ ವಿರೋಧಿಸುವ ತಾತ್ವಿಕ ನಿಲುವನ್ನು ತೋರಿಸುವ ಎದೆಗಾರಿಕೆ ನಮ್ಮ ಪತ್ರಕರ್ತರ ಸಂಘಟನೆಗಳಿಗೆ, ಪತ್ರಿಕಾ ಸಂಸ್ಥೆಗಳಿಗೆ ಇರಬೇಕು. ಇಲ್ಲವಾದರೆ ನಮ್ಮ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ; ಅರ್ಥ ಕಳೆದುಕೊಳ್ಳುತ್ತದೆ. ಮಾಧ್ಯಮ ಪ್ರಜಾತಂತ್ರದ ನಾಲ್ಕನೇ ಸ್ತಂಭ ಎನ್ನುವ ಮಾತು ಕೇವಲ ಅಲಂಕಾರಿಕ ಭಾಷೆಯಾಗುತ್ತದೆ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app