ಮೋದಿ 8 | ಹೆಣ್ಣು ಜೀವಗಳ ಕೊರಳಿಗೆ ಬಿಗಿದ ದುರಾಡಳಿತದ ಗಂಟು

MOdi

ಮನೆಯಲ್ಲಿ ದುರ್ಘಟನೆಯೊಂದು ನಡೆದಾಗ ಮೊದಲು ಆಘಾತ ಅನುಭವಿಸುವುದು ಮನೆ ಯಜಮಾನ. ದೇಶವನ್ನು ಒಂದು ಕುಟುಂಬ ಎಂದು ನೋಡುವುದಾದರೆ ಪ್ರಧಾನಿಯೇ ಯಜಮಾನ. ಅತ್ಯಾಚಾರ, ಹಿಂಸೆಗೆ ಒಳಗಾಗುವ ಪ್ರತಿಯೊಬ್ಬರೂ ಆ ಮನೆಯ ಸದಸ್ಯರು. ಆದರೆ, ಒಬ್ಬ ʼಬೇಜವಾಬ್ದಾರಿ ಯಜಮಾನʼ ನ ರೀತಿಯಲ್ಲಿ ಮೋದಿ ಕಾಣುತ್ತಿರುವುದು ದುರಂತ

ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಎಂಟು ವರ್ಷಗಳನ್ನು ಪೂರೈಸಿದ್ದಾರೆ. ತನ್ನ ಎಂಟುವರ್ಷಗಳ ಆಡಳಿತದಲ್ಲಿ ʼದೇಶ ತಲೆ ತಗ್ಗಿಸುವಂಥ ಕೆಲಸ ಮಾಡಿಲ್ಲʼ ಎಂದು ತನಗೆ ತಾನೇ ಸರ್ಟಿಫಿಕೇಟ್‌ ಕೊಟ್ಟುಕೊಂಡಿದ್ದಾರೆ. ಹೀಗೆ ತಲೆ ತಗ್ಗಿಸದ ಅವರ ದೇಶದಲ್ಲಿ ಬಡ ಮಹಿಳೆಯರು, ದಲಿತ ಮತ್ತು ಅಲ್ಪಸಂಖ್ಯಾತ ಹೆಣ್ಣುಮಕ್ಕಳು ಇಲ್ಲವೇನೋ ಅನ್ನಿಸುತ್ತಿದೆ.
ಯಾಕೆಂದರೆ ಈ ಎಂಟು ವರ್ಷಗಳಲ್ಲಿ ಜಗತ್ತಿನ ಮುಂದೆ ಇಡೀ ದೇಶದ ನಾಗರಿಕರು ತಲೆ ತಗ್ಗಿಸುವಂಥ ಹತ್ತಾರು ಘಟನೆಗಳು ನಡೆದಿವೆ. ಮುಸ್ಲಿಮರ ಮೇಲಿನ ಗುಂಪು ಹಲ್ಲೆ, ಪ್ರಗತಿಪರರ ಹತ್ಯೆ, ಪ್ರಭುತ್ವದ ವಿರೋಧಿಗಳ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಜೈಲಿನಲ್ಲಿ ಕೂಡಿಹಾಕಲಾಗಿದೆ.

ʼಬೇಟಿ ಬಚಾವೊ ಬೇಟಿ ಪಡಾವೊʼ ಎಂದಿರುವ ಮೋದಿ ಆಡಳಿತಾವಧಿಯಲ್ಲಿ ನಡೆದ ಕಥುವಾ, ಉನ್ನಾವೊ, ಹತ್ರಾಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರಗಳು ಎಂತಹ ಕಲ್ಲು ಹೃದಯಗಳನ್ನೂ ಕಲಕುವಂಥವು. ಹಾಗೆಯೇ ಮೋದಿ ಮಹಾಮೌನಕ್ಕೆ ಜಾರಿದ ಪ್ರಮುಖ ಪ್ರಕರಣಗಳಿವು.

ಮನೆಯಲ್ಲಿ ದುರ್ಘಟನೆಯೊಂದು ನಡೆದಾಗ ಮೊದಲು ಆಘಾತ ಅನುಭವಿಸುವುದು ಮನೆ ಯಜಮಾನ. ಒಂದೆಡೆ ವೈಯಕ್ತಿಕ ನಷ್ಟವಾದರೆ, ಮನೆಯಲ್ಲಿರುವ ಸಕಲರಿಗೂ ಅಭಯ ನೀಡಿ ಸಾಂತ್ವನ ನೀಡಬೇಕಾಗುವ ಜವಾಬ್ದಾರಿ ಯಜಮಾನನ ಹೆಗಲ ಮೇಲಿರುತ್ತದೆ. ದೇಶವನ್ನು ಒಂದು ಕುಟುಂಬ ಎಂದು ನೋಡಿದರೆ ಪ್ರಧಾನಿಯೇ ಯಜಮಾನ. ಅತ್ಯಾಚಾರ, ಹಿಂಸೆಗೆ ಒಳಗಾಗುವ ಪ್ರತಿಯೊಬ್ಬರೂ ಆ ಮನೆಯ ಸದಸ್ಯರು. ದುರಂತವೆಂದರೆ ಒಬ್ಬ ʼಬೇಜವಾಬ್ದಾರಿ ಯಜಮಾನʼನ ರೀತಿಯಲ್ಲಿ ದೇಶದ ಪ್ರಧಾನಿಯನ್ನು ನೋಡಬೇಕಾಗಿರುವುದು ನಮ್ಮ ದುರ್ದೈವ.

ಎನ್‌ ಡಿಎ ಸರ್ಕಾರದ ಮೊದಲ ಅವಧಿ 2014ರ ಮೇನಲ್ಲಿ ಆರಂಭವಾಗುತ್ತದೆ. 2015ರ ಜನವರಿ 22ರಂದು ಹರಿಯಾಣದ ಪಾನೀಪತ್‌ ನಲ್ಲಿ ನರೇಂದ್ರ ಮೋದಿ ಅವರು ʼಬೇಟಿ ಬಚಾವೊ ಬೇಟಿ ಪಡಾವೊʼ ಯೋಜನೆಯನ್ನು ಘೋಷಿಸುತ್ತಾರೆ. ʼಎನ್‌ ಡಿಎ ಸರ್ಕಾರವು ಹೆಣ್ಣುಮಕ್ಕಳ ಬಗೆಗಿನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವ ಉದ್ದೇಶ ಹೊಂದಿದೆʼ ಎಂದು ಭಾಷಣ ಮಾಡುತ್ತಾರೆ. ದೇಶದ ಎಲ್ಲಾ ಹೆಣ್ಣುಮಕ್ಕಳ ತಂದೆಯಂದಿರು ತಮ್ಮ ಮಗಳೊಂದಿಗಿರುವ ಸೆಲ್ಫಿ ತೆಗೆದು ಕಳಿಸಿಕೊಡಿ ಎಂದು ಕರೆ ನೀಡಿದ್ದರು. ಅಪ್ಪಂದಿರು ಸೆಲ್ಫಿ ಕಳಿಸಿ ಸಂಭ್ರಮಿಸಿದ್ದರು. ವಿದೇಶದಿಂದಲೂ ಭಾರಿ ಪ್ರತಿಕ್ರಿಯೆ ಬಂದಿತ್ತು.

Image
Modi with students

ನಂತರ ನಡೆದಿದ್ದೇನು? ಸಾಲು ಸಾಲು ಹೆಣ್ಣುಮಕ್ಕಳ ಅತ್ಯಾಚಾರ ನಡೆದರೂ ಮೋದಿ ಮಹಾಮೌನಕ್ಕೆ ಶರಣಾಗಿದ್ದು ಯಾಕೆ ಎಂಬ ಪ್ರಶ್ನೆಗೆ ಇನ್ನೂ ಎರಡು ವರ್ಷ ಕಾದರೂ ಉತ್ತರ ಸಿಗಲಿಕ್ಕಿಲ್ಲ. ಮೋದಿ ವಿದೇಶಕ್ಕೆ ತೆರಳಿದಾಗ ಭಾರತದಲ್ಲಿ ನಡೆಯುತ್ತಿರುವ ಪುಟ್ಟಮಕ್ಕಳ ಅತ್ಯಾಚಾರ ಖಂಡಿಸಿ ಅಲ್ಲಿನ ಜನ Go back Modi ಫಲಕ ತೋರಿಸಿ ಛೀಮಾರಿ ಹಾಕಿದರೂ ಒಂದು ಪ್ರತಿಕ್ರಿಯೆ ನೀಡದಷ್ಟು ಸೂಕ್ಷ್ಮತೆ ಇಲ್ಲದ ಪ್ರಧಾನಿ, ದೇಶ ತಲೆ ತಗ್ಗಿಸುವಂತೆ ನಡೆದುಕೊಂಡಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ.

ಕಂದಮ್ಮಗಳ ಅತ್ಯಾಚಾರಕ್ಕೆ ಮರುಗದ ಕಲ್ಲು ಹೃದಯಿ
2018ರ ಒಂದು ದಿನ ಸಂಜೆ ಆಟವಾಡುತ್ತಾ ಊರಿನ ದೇವಸ್ಥಾನದ ಬಳಿ ಹೋದ 7ವರ್ಷದ ಪುಟ್ಟ ಬಾಲಕಿ ಅಸೀಫಾಳನ್ನು ದೇವಾಲಯದೊಳಗಿದ್ದ ಕಿರಾತಕರು ಕಿತ್ತು ಮುಕ್ಕಿದ್ದರು. ಸಾಮೂಹಿಕ ಅತ್ಯಾಚಾರ ಎಸಗಿದ್ದ ರಾಕ್ಷಸರು  ಅಸೀಫಾಳ ಎಳೆ ತಲೆಯನ್ನು ಕಲ್ಲಿನಿಂದ ಜಜ್ಜಿ ವಿಕೃತಿ ಮೆರೆದಿದ್ದರು. ಹಿಂದೂಗಳ ಶ್ರದ್ಧಾ ಭಕ್ತಿಯ ಕೇಂದ್ರವಾಗಿದ್ದ ದೇವಸ್ಥಾನದೊಳಗೆ ಇಂತಹ ಭೀಭತ್ಸ ಘಟನೆ ನಡೆದಾಗ  ದೇಶವೇ ತಲೆ ತಗ್ಗಿಸುವ ವಿಚಾರ ಎನಿಸಿಲ್ಲವೇ? ಹೃದಯವಂತರು ತಲೆ ತಗ್ಗಿಸಿದ್ದಾರೆ. ಆದರೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಒಂದೇ ಒಂದು ಸಾಲಿನ ಖಂಡನೆಯನ್ನೂ ವ್ಯಕ್ತಪಡಿಸಿಲ್ಲ. ಮೋದಿ ಭಕ್ತರಂತು ಅಸೀಫಾಳ ಧರ್ಮ ನೋಡಿ ಅತ್ಯಾಚಾರಿಗಳ ಪರ ನಿಂತು ವಿಕೃತಿ ತೋರಿದ್ದರು.

Image
Priyanka Gandhi

2017ರಲ್ಲಿ ಉತ್ತರಪ್ರದೇಶದ ಉನ್ನಾವೊನಲ್ಲಿ ನಡೆದ 17 ವರ್ಷ ಬಾಲಕಿಯ ಸಾಮೂಹಿಕ ಅತ್ಯಾಚಾರದ ಪ್ರಮುಖ ಅಪರಾಧಿ ಬಿಜೆಪಿ ಶಾಸಕ ಕುಲದೀಪ್‌ ಸೆಂಗಾರ್. ಅತ್ಯಾಚಾರ ಮಾಡಿದ್ದಲ್ಲದೇ ಬಾಲಕಿಯ ತಂದೆಯನ್ನು ಪೊಲೀಸ್‌ ಠಾಣೆಯಲ್ಲೇ ಕೊಲೆ ಮಾಡಿಸಿದ್ದ. ಪಟ್ಟು ಬಿಡದೇ ಆಕೆಯನ್ನು ಕಾಡಿದ್ದ ಕಿರಾತಕರು ಆಕೆ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಲಾರಿ ಹತ್ತಿಸಿ ಕೊಲೆಗೆ ಯತ್ನಿಸಿದ್ದರು. ಆಕೆಯ ಸಂಬಂಧಿಗಳಿಬ್ಬರು ಆ ಸಂದರ್ಭದಲ್ಲಿ ಮೃತಪಟ್ಟಿದ್ದರು. ಕೊಲೆಯತ್ನ ಮಾಡಿದ್ದು ಅದೇ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದ ಆರೋಪಿಗಳು. ಇದೆಲ್ಲ ಶಾಸಕನ ಕುಮ್ಮಕ್ಕಿನಿಂದಲೇ ನಡೆದಿತ್ತು. 2019ರಲ್ಲಿ ಸಂತ್ರಸ್ಥೆ ರಾಯ್‌ ಬರೇಲಿ ಕೋರ್ಟ್‌ಗೆ ಹೋಗುತ್ತಿದ್ದಾಗ ನಡು ರಸ್ತೆಯಲ್ಲೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು. ನಂತರ ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಳು. ಒಂದು ಅತ್ಯಾಚಾರದ ಕೇಸಿನಿಂದ ಬಚಾವ್‌ ಆಗುವ ಪ್ರಯತ್ನದಲ್ಲಿ ನಾಲ್ಕು ಪ್ರಾಣ ತೆಗೆದ ಈ ಕಿರಾತಕ ಕೃತ್ಯ ನಡೆದಿದ್ದು ಮೋದಿಯ ಭಾರತದಲ್ಲಿ ಅಲ್ಲವೇ? ಇದು ತಲೆ ತಗ್ಗಿಸುವ ವಿಚಾರವಲ್ಲವೇ? ಇಂತಹ ಘಟನೆ ಪ್ರಧಾನಿಯ ಮನಸ್ಸಿಗೆ ಘಾಸಿ ಮಾಡಿಲ್ಲ. ಅವರು ಯಾವ ಭಾಷಣದಲ್ಲೂ ಈ ಘಟನೆಯನ್ನು ಖಂಡಿಸಿಲ್ಲ.

2020 ಸೆಪ್ಟಂಬರ್‌ 14ರಂದು ಮತ್ತೆ ಅದೇ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಬಾಲಕಿಯೊಬ್ಬಳ ಸಾಮೂಹಿಕ ಅತ್ಯಾಚಾರ ನಡೆಯುತ್ತದೆ. ಮೇಲ್ವರ್ಗದ ನಾಲ್ವರು ಯುವಕರಿಂದ ಅತ್ಯಾಚಾರಕ್ಕೊಳಗಾದ ಯುವತಿ ಸೆ.29ರಂದು ಸಫ್ದರ್‌ ಜಂಗ್‌ ಆಸ್ಪತ್ರೆಯಲ್ಲಿ ಮೃತಪಡುತ್ತಾಳೆ. ಪೋಷಕರಿಗೂ ತಿಳಿಸದೇ ಆ ಬಾಲಕಿಯ ಮೃತದೇಹವನ್ನು ಪೊಲೀಸರೇ ಗ್ರಾಮಕ್ಕೆ ತಂದು ಪೋಷಕರಿಗೂ ನೋಡಲು ಬಿಡದೇ ಸುಟ್ಟುಬಿಡುತ್ತಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರಿಯಾಂಕ ಗಾಂಧಿ ನೇತೃತ್ವದ  ಕಾಂಗ್ರೆಸ್‌ ನಾಯಕರ ತಂಡ ಮೃತ ಬಾಲಕಿಯ ಮನೆಗೆ ಭೇಟಿ ನೀಡಲು ಹೊರಟಾಗ ಗ್ರಾಮಕ್ಕೆ ಭೇಟಿ ನೀಡದಂತೆ ಯೋಗಿ ಸರ್ಕಾರ ತಡೆಯೊಡ್ಡಿತ್ತು. ದೇಶ ವಿದೇಶದಲ್ಲಿ ವ್ಯಾಪಕ ಖಂಡನೆಗೆ ಒಳಗಾದ ಈ ಪ್ರಕರಣದ ಬಗ್ಗೆ ಪ್ರಧಾನಿ ಕಚೇರಿಯಿಂದ ಒಂದೇ ಒಂದು ಹೇಳಿಕೆ  ಹೊರಬರಲಿಲ್ಲ. ಬದಲಿಗೆ ನವಿಲಿಗೆ ಕಾಳು ತಿನ್ನಿಸುತ್ತಿರುವ ಫೋಟೋ ಶೂಟ್‌ನಲ್ಲಿ ಪ್ರಧಾನಿ ಕಾಲ ಕಳೆದಿದ್ದರು. ಮೊದಲು ತಮ್ಮ ಪಕ್ಷದ ಮುಖಂಡರು, ಆರ್‌ಎಸ್‌ಎಸ್‌ ನಾಯಕರ ಸ್ತ್ರೀವಿರೋಧಿ ಹೇಳಿಕೆಗಳಿಂದ ದೇಶದ ಬೇಟಿಯರನ್ನು ಬಚಾವ್‌ ಮಾಡಬೇಕಿದೆ.
ಜಾಹೀರಾತಿನಲ್ಲಷ್ಟೇ ಹೆಣ್ಣುಮಕ್ಕಳ ಕಾಳಜಿ
ಹೆಣ್ಣುಮಕ್ಕಳ ಕಣ್ಣೀರು ಒರೆಸಲು ಮುಂದಾದ ಪ್ರಧಾನಿ ಮೋದಿ ಬಿಪಿಎಲ್‌ ಕಾರ್ಡು ಹೊಂದಿರುವ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಕೊಡುವ ʼಉಜ್ವಲʼ ಯೋಜನೆ ಜಾರಿಗೆ ತಂದ್ರು. ಯೋಜನೆಯ ವೆಚ್ಚಕ್ಕಿಂತ ದುಪ್ಪಟ್ಟು ಹಣ ಜಾಹಿರಾತಿಗೇ ವಿನಿಯೋಗಿಸಲಾಯಿತು. ತನ್ನ ವರ್ಚಸ್ಸು ಹೆಚ್ಚಿಸುವತ್ತಲೇ ಸದಾ ಚಿತ್ತ ಹರಿಸಿರುವ ಎನ್‌ಡಿಎ ಅಡುಗೆ ಅನಿಲದ ಮೇಲಿನ ಸಬ್ಸಿಡಿ ತೆಗೆದು ಹಾಕಿದ್ದಲ್ಲದೇ ನಿರಂತರವಾಗಿ ತೆರಿಗೆ ಹೆಚ್ಚಿಸಿ ಸುಲಿಗೆಗಿಳಿದ ಪರಿಣಾಮ ಈಗ ಮತ್ತೆ ಆ ಮನೆಗಳಲ್ಲಿ ಹೊಗೆಯೇಳುತ್ತಿದೆ. ಜೀವಂತ ಚಿಮಿಣಿಗಳು ಉಜ್ವಲ ಯೋಜನೆಯ ವೈಫಲ್ಯಕ್ಕೆ ಸಾಕ್ಷಿ ನುಡಿಯುತ್ತಿವೆ.  ಪೆಟ್ರೋಲ್‌ ಬಂಕ್‌ಗಳಲ್ಲಿ ಈಗಲೂ ರಾರಾಜಿಸುತ್ತಿರುವ ಉಜ್ವಲ ಯೋಜನೆಯ ಬೃಹತ್‌ ಬೋರ್ಡುಗಳು ಜನರನ್ನು ಅಣಕಿಸುತ್ತಿವೆ. ಒಲೆಯ ಉರಿಯ ಮುಂದೆ ಕೂತ ಅಮ್ಮಂದಿರ ಕಣ್ಣಿನಲ್ಲಿ ನೀರಿನ ಜೊತೆ ರಕ್ತವೂ ಬರುತ್ತಿದೆ.

Image
P M Awas

ಮಾಧ್ಯಮಗಳಲ್ಲಿ ಪ್ರಕಟಗೊಂಡ ಪ್ರಧಾನಮಂತ್ರಿ ಆವಾಜ್‌ ಯೋಜನೆಯ ಜಾಹೀರಾತಿನಲ್ಲಿರುವ ಮಹಿಳೆಯನ್ನು ಪತ್ತೆ ಮಾಡಿ ವಿಚಾರಿಸಿದಾಗಿ ಆಕೆಗೆ ಸ್ವಂತ ಮನೆಯೇ ಇಲ್ಲ, ಪುಟ್ಟ ಗುಡಿಸಿಲಿನಂಥ ಬಾಡಿಗೆ ಮನೆಯಲ್ಲಿ ಆಕೆ ವಾಸ ಮಾಡುತ್ತಿದ್ದಾಳೆ ಎಂಬುದು ಬಯಲಾಗಿತ್ತು. ಮಾಧ್ಯಮವೊಂದು ಈ ಸಾಹಸ ಮಾಡಿತ್ತು. ಕನಿಷ್ಠ ಜಾಹೀರಾತಿನಲ್ಲಿ ಆಕೆಯ ಫೋಟೋ ಬಳಸುವ ಬಗ್ಗೆ ಆಕೆಗೆ ತಿಳಿಸಿರಲಿಲ್ಲ. ಇದು ಮೋದಿ ಸರ್ಕಾರ ಹೆಣ್ಣುಮಕ್ಕಳ ಬಗ್ಗೆ ತೋರುತ್ತಿರುವ ಅಸಡ್ಡೆಗೆ ಉದಾಹರಣೆಯಷ್ಟೇ. ಬಿಜೆಪಿಯ ನಾಯಕರಲ್ಲೇ ಬಹುತೇಕರು ಅತ್ಯಾಚಾರದ ಪ್ರಕರಣಗಳಲ್ಲಿ ಭಾಗಿಯಾದವರಿದ್ದಾರೆ. ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಮೋದಿ ಮತ್ತು ಬಿಜೆಪಿ ಹೆಣ್ಣುಮಕ್ಕಳಿಗೆ ಈ ಎಂಟು ವರ್ಷಗಳಲ್ಲಿ ಏನು ಸುರಕ್ಷತೆ ನೀಡಿದೆ, ಅವರ ಸಬಲೀಕರಣಕ್ಕೆ  ಏನು ಮಾಡಿದೆ ಎಂದರೆ ಭಾಷಣ ಮತ್ತು ಜಾಹೀರಾತಷ್ಟೇ ಕಾಣಸಿಗುತ್ತದೆ.
ಬೇಟಿ ಪಡಾವೊ  ಆಯ್ತಾ?
ಎರಡು ವರ್ಷ ಶಾಲೆ, ಕಾಲೇಜುಗಳು ಮುಚ್ಚಿದ್ದವು. ರಾಜ್ಯದಲ್ಲಿ 2021 ಸೆಪ್ಟೆಂಬರ್‌ ನಂತರ ಶಾಲೆ ಕಾಲೇಜುಗಳು ಬಾಗಿಲು ತೆರೆದವು. ಜನವರಿ ವೇಳೆಗೆ ಹೊಸದೊಂದು ವಿವಾದ ಸೃಷ್ಟಿಯಾಯಿತು. ಉಡುಪಿಯ ಕಾಲೇಜಿನಲ್ಲಿ ಹಿಜಾಬ್‌ ವರ್ಸಸ್‌ ಕೇಸರಿ ಶಾಲು ವಿವಾದ ಶುರುವಾಗಿ, ಅದಕ್ಕೆ ವಿದೇಶದ ಕೆಲ ನಾಯಕರು ಪ್ರತಿಕ್ರಿಯೆ ನೀಡಿದ್ದರು. ಬೇಟಿ ಪಡಾವೋ ಎಂದಿದ್ದ ಮೋದಿಯವರು ಹಿಜಾಬ್‌ ವಿವಾದದ ಬಗ್ಗೆ ಚಕಾರ ಎತ್ತಿಲ್ಲ. ರಾಜ್ಯದ ಬಿಜೆಪಿ ನಾಯಕರ ಮೂಲಕ ಹಿಜಾಬ್‌ ವಿವಾದ ಬೆಳೆಸದಂತೆ ಸೂಚಿಸಿದ್ದರೂ ಕೇಸರಿಶಾಲು ಹಂಚುವ ಪುಂಡರಿಗೆ ಕಡಿವಾಣ ಹಾಕಬಹುದಿತ್ತು. ಅನೇಕ ಮುಸ್ಲಿಂ ವಿದ್ಯಾರ್ಥಿನಿಯರು ಈ ಬಾರಿ ಪರೀಕ್ಷೆ ಬರೆಯಲಿಲ್ಲ. ಮೋದಿಯ ʼಬೇಟಿ ಪಡಾವೋʼ ಅಭಿಯಾನದಲ್ಲಿ ಮುಸ್ಲಿಂ ಬೇಟಿಯರು ಇರಲಿಲ್ಲವೆ ಎಂಬ ಪ್ರಶ್ನೆಗೆ ಉತ್ತರವಿದೆಯೇ?

ಇದನ್ನು ಓದಿದ್ದೀರಾ? ಪಠ್ಯಪುಸ್ತಕ ವಿವಾದ| ರಾಷ್ಟ್ರಕವಿ ಜಿಎಸ್‌ ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಸ್.ಜಿ. ಸಿದ್ದರಾಮಯ್ಯ

ಸೆಲಬ್ರಿಟಿಗಳಿಗಷ್ಟೇ ಮರುಗುವ ಪ್ರಧಾನಿ
ಅಸೀಫಾಳಂಥ ಎಳೆ ಜೀವದ ಅಮಾನುಷ ಹತ್ಯೆಗೆ ಮನಸ್ಸು ಕಲಕದ ವ್ಯಕ್ತಿಗೆ ಕ್ರಿಕೆಟರ್ ಒಬ್ಬನ ಕಿರು ಬೆರಳಿಗೆ ಆದ ಗಾಯ ಬಹಳ ನೋವು ತಂದಿತ್ತು. ಅದನ್ನು ತಮ್ಮ ಟ್ವೀಟ್‌ ಮೂಲಕ ಹೇಳಿಕೊಂಡಿದ್ದರು ನಮ್ಮ ಪ್ರಧಾನಿ. 2020ರ ಬೇಜವಾಬ್ದಾರಿಯ ಲಾಕ್‌ ಡೌನ್‌ ಹೇರಿಕೆಯಿಂದ ಸಾವಿರಾರು ಕಾರ್ಮಿಕರು ಹಗಲು- ರಾತ್ರಿ ರಸ್ತೆಯಲ್ಲಿ ನಡೆಯುವಂತೆ ಮಾಡಿ ಹಲವರ ಜೀವ ಹಾನಿಯಾದಾಗ ಮರುಗದ ಪ್ರಧಾನಿಗೆ ಚಿತ್ರನಟಿ ಮಾಧುರಿ ದೀಕ್ಷಿತಳ ಕಿಚನ್‌ ಗಾರ್ಡನ್‌ ಮುದ ನೀಡಿತ್ತು. ಕೊರೊನಾ ಎರಡನೇ ಅಲೆ ದೇಶಕ್ಕೆ ಅಪ್ಪಳಿಸಿ ಹಾದಿಬೀದಿಯಲ್ಲಿ ಜನ ಸಾಯುತ್ತಿದ್ದಾಗ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಗರ್ಭಿಣಿಯಾದ ವಿಷಯ ಮೋದಿಗೆ ತಿಳಿಯುತ್ತದೆ. ಅಪಾರ ಕಾಳಜಿಯಿಂದ ಟ್ವೀಟ್‌ ಮಾಡಿ ದಂಪತಿಗೆ ಶುಭಾಶಯ ಕೋರಿದ್ದರು.

ದೇಶ ಕೊರೊನಾ ಸಂಕಷ್ಟದಲ್ಲಿರುವಾಗ ದೀಪ ಹಚ್ಚಿ, ಗಂಟೆ ಬಾರಿಸಿ ಎಂದು ಹೇಳುತ್ತಾ ಭಾವನಾತ್ಮಕವಾಗಿ ಜನರನ್ನು ಹಿಡಿದಿಡುವ ಯತ್ನ ಮಾಡಿದ ಸರ್ಕಾರ ಕೊರೊನಾದಿಂದ ಸತ್ತವರ ಕುಟುಂಬಗಳಿಗೆ ಇದುವರೆಗೂ ನೆರವು ನೀಡಿಲ್ಲ. ಅದೆಷ್ಟೋ ಮಹಿಳೆಯರು ವಿಧವೆಯರಾದರು, ಹೆಣ್ಣುಮಕ್ಕಳು ಅಪ್ಪನಿಲ್ಲದೇ, ಅಮ್ಮನಿಲ್ಲದೇ, ಅಣ್ಣನಿಲ್ಲದೇ ಅನಾಥರಾಗಿದ್ದಾರೆ. ಅವರ ಸಮೀಕ್ಷೆಯಾಗಲಿ, ಅವರ ರಕ್ಷಣೆಗೆ ಯೋಜನೆಯಾಗಲಿ ಇಲ್ಲದೇ, ದೇಶದ ಬೇಟಿಯರು ಬಚಾವ್‌ ಆಗೋದಾದರೂ ಹೇಗೆ?!

ನಿಮಗೆ ಏನು ಅನ್ನಿಸ್ತು?
4 ವೋಟ್