ಸಂಘ ಬಿಟ್ಟವರು ಬಿಚ್ಚಿಟ್ಟ ಸತ್ಯ: ಯಾರ ಜಪ್ತಿಗೂ ಸಿಗದ ನವಿಲಿನ ಸಹಜ ನರ್ತನ- ಎಲ್‌ ಎನ್‌ ಮುಕುಂದರಾಜು

RSS swamsevakas

ಸಂಘ ಚಕ್ರವ್ಯೂಹವಿದ್ದಂತೆ. ಒಂದು ಸಲ ಒಳಗೆ ಹೋದರೆ ವಾಪಸ್ ಬರುವುದು ಬಹಳ ಕಷ್ಟ. ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಎಬಿವಿಪಿ ಸಂಘಟಿಸುತ್ತಿದ್ದೆ. ಅಂದು ನನ್ನ ಜೊತೆಯಲ್ಲಿದ್ದ ಅನೇಕ ಗೆಳೆಯರು ಇಂದು ರಾಜ್ಯ  ಮತ್ತು ಕೇಂದ್ರ ಸರ್ಕಾರಗಳಲ್ಲಿ ಮಂತ್ರಿ, ಶಾಸಕ, ಸಂಸದರಾಗಿ ವಿವಿಧ ಅಧಿಕಾರದ ಕೇಂದ್ರಗಳಲ್ಲಿ ವಿರಾಜಮಾನರಾಗಿದ್ದಾರೆ.

ನವಿಲಿನಂತೆ ನರ್ತಿಸಲು ಬಾರದ ಕೆಂಭೂತಗಳು ಪುಕ್ಕ ತರಿದುಕೊಂಡು ಅರಚುತ್ತಾ, ಪರಚುತ್ತಾ ಗೋಳಾಡುತ್ತಿರುವುದು ತಮಾಷೆಯಾಗಿ ಕಾಣುತ್ತಿದೆ. ದೇವನೂರು ಮಹದೇವ ಬರೆದ ಆರ್|ಎಸ್|ಎಸ್ ಆಳ ಮತ್ತು ಅಗಲ ಪುಸ್ತಕ; ಅವರ ಹಿಡನ್ ಅಜೆಂಡಾಗಳನ್ನು ಹಾಗೂ ಕುತಂತ್ರಗಳನ್ನು ಬಯಲು ಮಾಡಿದೆ. ಸತ್ಯ ಸಹಿಸಲು ಸಾಧ್ಯವಿಲ್ಲದ ಕಾಲಾಳು ಪಡೆಯ ಗುಲಾಮರು ಜೋರಾಗಿ ಕಿರುಚುತ್ತಿದ್ದಾರೆ.

Eedina App

ದೇವನೂರು ಒಂದು ಕಾಲದಲ್ಲಿ ಸಂಘದ ಸ್ವಯಂಸೇವಕರಾಗಿದ್ದವರು. ಕೃಷ್ಣ ಆಲನಹಳ್ಳಿ ಅವರಂತಹ ಸಮಾಜವಾದಿ ಲೇಖಕರ ಗೆಳೆತನ ಸಿಕ್ಕ ಮೇಲೆ ಅಲ್ಲಿಂದ ಹೊರಬಂದರು. ಆರೆಸ್ಸೆಸ್ಸಿನ ಅಂತರಂಗವನ್ನು ಈ ಪುಸ್ತಕದಲ್ಲಿ ಅವರು ಸರಿಯಾಗಿಯೇ ಜಾಲಾಡಿ ಜನರ ಕಣ್ಣು ತೆರೆಸಿದ್ದಾರೆ. ಹಿಂದೂ ಧರ್ಮವೆಂದರೆ ಚಾತುರ್ವಣ್ಯದ ಕೊಳಕು ತುಂಬಿರುವ ಜೀವನ ಪದ್ಧತಿ. ಇಲ್ಲಿ ಸ್ತ್ರೀ, ಶೂದ್ರ ಹಾಗೂ ದಲಿತ ಸಮುದಾಯಗಳ ಸ್ವಾಭಿಮಾನದ ಬದುಕಿಗೆ ಅವಕಾಶವಿಲ್ಲ. ಅನ್ನ ಅಕ್ಷರಗಳಿಂದ ವಂಚಿತರಾಗಿ, ಪ್ರಾಣಿಗಳಂತೆ ಜೀವನ ಮಾಡಬೇಕು. ಈ ವಾಸ್ತವ ಸಂಗತಿಗಳನ್ನು ದೇವನೂರು ಸರಳವಾಗಿ ಬರೆದಿದ್ದಾರೆ.

1977 ಇಸವಿ. ನಾನಾಗ ಪಿಯುಸಿ ಓದುವ ವಿದ್ಯಾರ್ಥಿ. ನನ್ನ ಬ್ರಾಹ್ಮಣ ಸ್ನೇಹಿತನೊಬ್ಬ ‘ಬಾ ಸಂಘಕ್ಕೆ ಹೋಗೋಣ’ ಎಂದು ಕರೆದುಕೊಂಡು ಹೋಗಿ ಆರೆಸ್ಸೆಸ್ಸಿಗೆ ಸೇರಿಸಿದ. ಆತ ತುಂಬಾ ಒಳ್ಳೆಯ ಗೆಳೆಯ. ನನ್ನ ಕಷ್ಟಸುಖಗಳಲ್ಲಿ ನೆರವಾಗುತ್ತಿದ್ದ. ಆತನ ತಂದೆ, ತಾಯಿ ಹಾಗೂ ಅಣ್ಣಂದಿರಿಗೆ ನನ್ನ ಮೇಲೆ ವಿಶೇಷ ಕಾಳಜಿಯಿತ್ತು. ‘ನಮ್ಮ ಮುಕುಂದ’ ಎಂದು ತಮ್ಮ ಮನೆಯ ಹುಡುಗನಂತೆ ಅವರೆಲ್ಲರೂ ನನ್ನನ್ನು ಪ್ರೀತಿಸುತ್ತಿದ್ದರು. ಆತನ ಹೆಸರು ನಟರಾಜ್ ಪಂಡಿತ್. ಅಲ್ಲಿ ಕಬಡ್ಡಿ ತರಹದ ನಾನಾ ಬಗೆಯ ಆಟಗಳನ್ನು ಆಡಿಸುತ್ತಿದ್ದರು. ಕತೆ, ಹಾಡು, ಹರಟೆಗಳ ಮೂಲಕ ದೇಶಪ್ರೇಮ ಕಲಿಸುತ್ತಿದ್ದರು. ದಕ್ಷಿಣ ಕನ್ನಡದಿಂದ ಶ್ರೀನಿವಾಸ್‍ರಾವ್ ಎಂಬ ಪ್ರಚಾರಕರು ಬಂದಿದ್ದರು. ಈಗಲೂ ನನ್ನ ಆತ್ಮೀಯನಾಗಿರುವ ಮುಜೀಬುಲ್ಲಾ ಖಾನ್ ಎಂಬ ಮುಸ್ಲಿಂ ಗೆಳೆಯನೂ ಸಂಘದ ಶಾಖೆಗೆ ಬರುತ್ತಿದ್ದ. ಇದೆಲ್ಲಾ ನಮಗೆ ಬಹಳ ಖುಷಿ ಕೊಡುವ ವಿಚಾರಗಳಾಗಿದ್ದವು.

AV Eye Hospital ad

ಸಾಹಿತ್ಯದ ಓದು ಹೊಸಬಗೆಯ ಅರಿವು ಮೂಡಿಸಿತು

ಆಗ ನನ್ನದು ಸಣ್ಣ ವಯಸ್ಸು. ಅಲ್ಲಿಂದಾಚೆಗೆ, ನನ್ನನ್ನು ಕರೆದುಕೊಂಡು ಹೋದವರೆಲ್ಲಾ ಆರ್‌ಎಸ್‍ಎಸ್ ಬಿಟ್ಟುಬಿಟ್ಟರು. ನಟರಾಜನೇ ಎಷ್ಟೋ ದಿನ ಚಕ್ಕರ್ ಹೊಡೆದು ಬಿಡುತ್ತಿದ್ದ. ಆದರೆ ನಾನು ಬಿಡುತ್ತಿರಲಿಲ್ಲ. ಬಹಳ ಶ್ರಮ, ಶ್ರದ್ಧೆ ಮತ್ತು ಆಸಕ್ತಿಯಿಂದ ಕೆಲಸ ಮಾಡುತ್ತಾ ಹೋದೆ. ತುಂಬಾ ವರ್ಷಗಳ ಕಾಲ ತೊಡಗಿಸಿಕೊಂಡೆ. ಬಹಳ ಚಿಕ್ಕ ವಯಸ್ಸಿನಲ್ಲಿ ತೀರಿಹೋದ ನನ್ನ ತಾಯಿಯನ್ನು ನಿತ್ಯ ಸ್ಮರಿಸುವಂತೆ ಆರೆಸ್ಸೆಸ್ ಅನ್ನೂ ಸ್ಮರಿಸುತ್ತಿದ್ದೆ. ಬಿಟ್ಟಿದ್ದು ಯಾಕೆ ಎಂದು ಕೆಲವರಿಗೆ ಅನುಮಾನ ಇರಬಹುದು. ಅದರಲ್ಲಿ ಅಂತಹ ದೊಡ್ಡ ವಿಚಾರವೇನೂ ಇಲ್ಲ. ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ನನಗೆ ಸಾಹಿತ್ಯದ ಓದು ಹೊಸಬಗೆಯ ಚಿಂತನೆಗಳ ಅರಿವು ಮೂಡಿಸಿದ್ದು ಇದಕ್ಕೆ ಕಾರಣವಿರಬಹುದು.

RSS baitak

ತುಮಕೂರಿನ ಸಿದ್ಧಗಂಗಾ ಸಂಜೆ ಕಾಲೇಜಿನಲ್ಲಿ ಓದುತ್ತಿದ್ದೆ. ಬಿಎ ಪಾಸು ಮಾಡಿದ ನಂತರ, ಸ್ನಾತಕೋತ್ತರ ಪದವಿ ಪಡೆಯಲು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರಕ್ಕೆ ಸೇರಿಕೊಂಡೆ. ಜಿ.ಎಸ್.ಶಿವರುದ್ರಪ್ಪ, ಚಿದಾನಂದಮೂರ್ತಿ, ಚಂದ್ರಶೇಖರ ಕಂಬಾರ, ಲಕ್ಷ್ಮೀನಾರಾಯಣ ಭಟ್, ಸಿ. ವೀರಣ್ಣ, ಹೆಚ್.ಕೆ. ಜಯದೇವ್, ಕಿ.ರಂ. ನಾಗರಾಜ, ಡಿ.ಆರ್.ನಾಗರಾಜು, ಕೆ.ವಿ.ನಾರಾಯಣ್, ಸುಮತೀಂದ್ರ ನಾಡಿಗ್, ಲಕ್ಷ್ಮೀನಾರಾಯಣ ಭಟ್, ಕೆ.ಪಿ. ಭಟ್, ಸಿದ್ದಲಿಂಗಯ್ಯ, ಕಾಳೇಗೌಡ ನಾಗವಾರ, ಬರಗೂರು ರಾಮಚಂದ್ರಪ್ಪ ಇವರೆಲ್ಲಾ ಅಲ್ಲಿ ಮೇಷ್ಟ್ರುಗಳಾಗಿದ್ದರು. ಅವರೆಲ್ಲರೂ ಆ ಕಾಲಕ್ಕೆ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ತುಂಬಾ ಹೆಸರು ಮಾಡಿದ್ದವರು. ಕನ್ನಡ ಸಾಹಿತ್ಯ, ಜಗತ್ತಿನ ತೌಲನಿಕ ಸಾಹಿತ್ಯ, ಭಾಷಾ ವಿಜ್ಞಾನ, ಕಾವ್ಯ ಮೀಮಾಂಸೆ ಇತ್ಯಾದಿ ಸಿಲಬಸ್‍ನಲ್ಲಿದ್ದ ಪಾಠಗಳನ್ನೇ ಎಲ್ಲರಿಗೂ ಹೇಳಿಕೊಡುವಂತೆ ನನಗೂ ಹೇಳಿಕೊಡುತ್ತಿದ್ದರು. ನನಗೊಬ್ಬನಿಗೇ ಪ್ರತ್ಯೇಕ ಪಾಠಗಳನ್ನು ಹೇಳಿಕೊಡುತ್ತಿರಲಿಲ್ಲ.

ಕಿರಂ ನಾಗರಾಜ್ ಮಾತ್ರ ನನಗೆ ಪ್ರತ್ಯೇಕವಾಗಿ ತರಗತಿಯ ಹೊರಗೂ ಹಲವು ವಿಷಯಗಳನ್ನು ಹೇಳುತ್ತಿದ್ದರು. ಕನ್ನಡ ಎಂಎ ಸಿಲಬಸ್‍ನಲ್ಲಿ ಇದ್ದ ಪಂಪ, ಕುಮಾರವ್ಯಾಸ, ಹರಿಹರ, ರಾಘವಾಂಕ, ಬಸವಣ್ಣ, ಅಲ್ಲಮ ಪ್ರಭು, ಸರ್ವಜ್ಞ, ಶಿಶುನಾಳ ಷರೀಫ, ಕುವೆಂಪು, ಬೇಂದ್ರೆ, ಅಡಿಗ, ಲಂಕೇಶ್, ತೇಜಸ್ವಿ, ಅನಂತಮೂರ್ತಿ ಮುಂತಾದವರನ್ನು ಎಲ್ಲಾ ವಿದ್ಯಾರ್ಥಿಗಳಂತೆ; ಒಬ್ಬ ಎಂಎ ವಿದ್ಯಾರ್ಥಿ ಏನನ್ನು ಓದಬೇಕಿತ್ತೋ ಅದನ್ನೆಲ್ಲ ಗಂಭೀರವಾಗಿ ಓದುತ್ತಿದ್ದೆ. ಕನ್ನಡ ಸಾಹಿತ್ಯವನ್ನು ಹಾಗೆ ಓದುತ್ತಿದ್ದಂತೆ, ಆರೆಸ್ಸೆಸ್‍ಗೆ ಸೇರಿ ಏನೋ ತಪ್ಪು ಮಾಡುತ್ತಾ ಇದೀನಿ ಅಂತ ಅನ್ನಿಸೋದಕ್ಕೆ ಶುರುವಾಯಿತು.

ಸಂಘದಲ್ಲಿ ಹೇಳುತ್ತಿರುವ ಪಾಠವೇ ಒಂದು. ದೇಶಪ್ರೇಮ, ಹಿಂದೂ ಧರ್ಮ ಹೀಗೆ ಏನೇನೋ ಹೇಳುತ್ತಿದ್ದಾರೆ. ಆದರೆ ನಾನು ಓದುತ್ತಿರುವ ರಾಮಾಯಣದಲ್ಲಿ ಹಿಂದು ಧರ್ಮಕ್ಕಿಂತ ಭಿನ್ನವಾದ ಮಾನವೀಯ ವಿಚಾರವಿದೆ. ಸಕಲ ಜೀವರಾಶಿಗಳನ್ನು, ಸರ್ವ ಜಾತಿ ಜನಾಂಗಗಳನ್ನು ಪ್ರೀತಿಸುವುದೇ ದೇಶ ಪ್ರೇಮವಾಗಿದೆ. ಕುಮಾರವ್ಯಾಸನ ಕರ್ನಾಟ ಭಾರತ ಕಥಾಮಂಜರಿ, ಪಂಪನ ವಿಕ್ರಮಾರ್ಜುನ ವಿಜಯ, ರನ್ನನ ಗದಾಯುದ್ಧ ಇವೆಲ್ಲವೂ ಮಹಾಭಾರತವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವ ಮಹಾಕಾವ್ಯಗಳು. ಇದರಲ್ಲಿ ಸಂಘ ಹೇಳುವುದಕ್ಕಿಂತಲೂ ವಿಭಿನ್ನವಾದ ಮತ್ತೇನೋ ವಿಶೇಷ ದೃಷ್ಟಿ ಇದೆಯಲ್ಲ! ಎಂಬ ಶಂಕೆ ಉಂಟಾಯಿತು. ಇವರೆಲ್ಲರೂ ಮಹಾಕವಿಗಳು. ಬಹಳ ಹಿಂದೆ, ಅಂದರೆ ನೂರಾರು ವರ್ಷಗಳ ಹಿಂದೆ ಮಹಾ ಕಾವ್ಯಗಳನ್ನು ಬರೆದವರು. ಈಗಿನ ಸಮಕಾಲೀನ ಸಂದರ್ಭದಲ್ಲಿ ನಿಂತು ಬರೆದವರಲ್ಲ. ಅವರಿಗೆ ಆರೆಸ್ಸೆಸ್ಸಿನ ಅರಿವೂ ಇರಲಿಲ್ಲ. ಆದರೆ ಇಂದಿನ ಆರೆಸ್ಸೆಸ್ ಪ್ರತಿಪಾದಿಸುವ ವಿಚಾರಗಳಿಗೆ ತದ್ವಿರುದ್ಧವಾಗಿ ಅವರು ತಮ್ಮ ಕೃತಿಗಳಲ್ಲಿ ಮನುಷ್ಯ ಕಾಳಜಿಯ ಸಾಮರಸ್ಯದ ನಡವಳಿಕೆಗಳನ್ನು ಚಿತ್ರಿಸಿದ್ದರು.

ಕನ್ನಡ ಸಾಹಿತ್ಯಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಪಂಪ ಕನ್ನಡದ ಮೊದಲ ಕವಿ. ಅವನು ಬರೆದದ್ದಕ್ಕಿಂತ ಭಿನ್ನವಾಗಿ ಈ ಸಂಘದ ವಿಚಾರಗಳಿದ್ದವು. ಈ ಸಂಗತಿ ನನ್ನ ಮನಸ್ಸಿಗೆ ನಾಟುತ್ತಾ ಹೋಯಿತು. ಆದರೆ, ಅಷ್ಟು ಸರಳವಾಗಿ ಆರ್‌ಎಸ್‍ಎಸ್ ಬಿಡಲು ಸಾಧ್ಯವಾಗುತ್ತಿರಲಿಲ್ಲ. ಸಂಘ ಚಕ್ರವ್ಯೂಹವಿದ್ದಂತೆ. ಒಂದು ಸಲ ಒಳಗೆ ಹೋದರೆ ವಾಪಸ್ ಹಿಂದಿರುಗಿ ಬರುವುದು ಬಹಳ ಕಷ್ಟ. ಆ ಸಂದರ್ಭದಲ್ಲಿ ನಾನು ಎಬಿವಿಪಿಯ ಸಕ್ರಿಯ ಕಾರ್ಯಕರ್ತನಾಗಿದ್ದೆ. ರಾಜ್ಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೆ. ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಎಬಿವಿಪಿ ಸಂಘಟಿಸುತ್ತಿದ್ದೆ. ಅಂದು ನನ್ನ ಜೊತೆಯಲ್ಲಿದ್ದ ಅನೇಕ ಗೆಳೆಯರು ಇಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಮಂತ್ರಿಗಳಾಗಿ, ಶಾಸಕರಾಗಿ, ಸಂಸದರಾಗಿ ಸುಖವಾಗಿದ್ದಾರೆ. ವಿವಿಧ ಅಧಿಕಾರದ ಕೇಂದ್ರಗಳಲ್ಲಿ ವಿರಾಜಮಾನರಾಗಿದ್ದಾರೆ.

ಆರ್‌ಎಸ್‌ಎಸ್‌ ಶಿಬಿರದಲ್ಲಿ ಮೋದಿ ಮತ್ತಿತರರು
ಆರ್‌ಎಸ್‌ಎಸ್‌ ಶಿಬಿರದಲ್ಲಿ ಮೋದಿ ಮತ್ತಿತರರು

ಪ್ರಚಾರಕರ ತ್ಯಾಗದ ಉದ್ದೇಶ
ನಾನು ಸಂಘದಲ್ಲಿದ್ದಾಗ ಪ್ರಚಾರಕರನ್ನು ನೋಡಿದರೆ ಗಾಬರಿಯಾಗಿ ಬಿಡುತ್ತಿದ್ದೆ. ಅವರು ಯಾರೂ ಮಾಂಸ ತಿನ್ನುತ್ತಿರಲಿಲ್ಲ, ತರಕಾರಿಯನ್ನು ಮಾತ್ರ ತಿನ್ನುತ್ತಿದ್ದರು. ಶುದ್ಧ ಬ್ರಾಹ್ಮಣರಾಗಿಯೇ ಬದುಕುತ್ತಿದ್ದರು. ನನ್ನಂತವರಿಗೆ ಒಂದು ವಾರ ಮಾಂಸ ತಿನ್ನದೇ ಇದ್ದರೆ ನಾಲಿಗೆ ಕೆಟ್ಟು ಹೋಗಿಬಿಡುತ್ತಿತ್ತು. ಆ ಕಾಲದಲ್ಲಿ ಶೇಷು ಎಂಬುವವರು ನಮ್ಮ ತುಮಕೂರು ವಿಭಾಗದ ಪ್ರಚಾರಕರಿದ್ದರು. ಅವರು ‘ಏನಯ್ಯ ನಿನ್ನ ನಾಲಿಗೆಗೆ ಮೂಳೆಯ ರಸ ಸೋಕದೇ ಇದ್ದರೆ ನಿನಗೆ ಬದುಕೋದಕ್ಕೆ ಸಾಧ್ಯವೇ ಇಲ್ಲವಾ’ ಎಂಬ ಪ್ರಶ್ನೆ ಕೇಳಿದ್ದರು. ಮಾಗಡಿ ರಸ್ತೆಯಲ್ಲಿರುವ ಆರೆಸ್ಸೆಸ್ ವಿದ್ಯಾಸಂಸ್ಥೆಯಾದ ಜನಸೇವಾ ವಿದ್ಯಾಕೇಂದ್ರದಲ್ಲಿದ್ದು ಈಚೆಗೆ ತೀರಿಕೊಂಡರು. ಅವರು ಬಿಜೆಪಿಯ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಕೂಡಾ ಆಗಿದ್ದರು.

ಮಾಂಸ ತಿನ್ನುವುದರಲ್ಲಿ ಎಂತಹಾ ಸಂತೋಷವಿರುತ್ತೆ. ಪಾಪ ಈ ಪ್ರಚಾರಕರು ಏನೂ ತಿನ್ನುವುದಿಲ್ಲವಲ್ವಾ! ಮದುವೆಯನ್ನೂ ಮಾಡಿಕೊಳ್ಳುವುದಿಲ್ಲ. ಯಾರಿಗಾಗಿ ಇವರು ತಮ್ಮ ಜೀವನವನ್ನು ತ್ಯಾಗ ಮಾಡುತ್ತಿದ್ದಾರೆ. ಹೆಂಡತಿ ಇಲ್ಲ, ಮಕ್ಕಳಿಲ್ಲ. ಮನೆ ಬಿಟ್ಟು ಬಂದವರೆ. ಇಂಜಿನಿಯರಿಂಗ್, ಮೆಡಿಕಲ್ ಹೀಗೆ ತುಂಬಾ ಓದಿಕೊಂಡಿದ್ದಾರೆ. ಇಷ್ಟೆಲ್ಲಾ ಓದಿದವರು ಸಂಘದ ಪ್ರಚಾರಕರಾಗಿದ್ದಾರೆ. ಇವರೆದುರು ನಾನು ಎಂತಹ ಕ್ಷುಲ್ಲಕ ಮನುಷ್ಯ. ಇವರ ತ್ಯಾಗದ ಎದುರು ನಾನು ಏನೂ ಅಲ್ಲವಲ್ಲ; ಎಂಬ ಕೀಳಿರಿಮೆ ನನ್ನನ್ನು ಕಾಡುತ್ತಿತ್ತು. ಅವರ ಮೇಲೆ ಅಭಿಮಾನ ಉಕ್ಕುತ್ತಿತ್ತು. ಹೀಗೆ ಒಂದು ದಿನ ಕುಳಿತು ತಣ್ಣಗೆ ಯೋಚನೆ ಮಾಡಿದೆ.  ಒಂದು ಸತ್ಯ ಹೊಳೆಯಿತು. ಹೇಳಿದರೆ ನಂಬುತ್ತೀರೋ ಇಲ್ಲವೊ ಗೊತ್ತಿಲ್ಲ.

ಶ್ರೀಸಾಮಾನ್ಯರಾದ ನಾವೆಲ್ಲಾ ಹೇಗೆ ಯೋಚನೆ ಮಾಡುತ್ತೀವಿ ಎಂದರೆ, ನಮ್ಮದೇನು ಮಹಾ. ನಮ್ಮ ಕಾಲದ ಯಾವುದೇ ರಾಜಕಾರಣಿಯನ್ನೋ, ಶ್ರೀಮಂತನನ್ನೋ ತೆಗೆದುಕೊಳ್ಳಿ. ದೇವೇಗೌಡರನ್ನೋ, ಸಿದ್ದರಾಮಯ್ಯ, ಯಡಿಯೂರಪ್ಪ, ಜನಾರ್ದನ ರೆಡ್ಡಿ, ಡಿ.ಕೆ. ಶಿವಕುಮಾರ್ ಹೀಗೆ ಯಾರನ್ನೇ ತೆಗೆದುಕೊಳ್ಳಿ.. ಅವರನ್ನೆಲ್ಲಾ ಭ್ರಷ್ಟರು ಅಂತಾನೇ ಬೇಕಾದ್ರೆ ಅಂದುಕೊಳ್ಳಿ. ಅವರೆಲ್ಲಾ ಹಣ ಸಂಪಾದನೆ ಮಾಡುತ್ತಿದ್ದಾರೆ ನಿಜ. 40% ಕಮಿಷನ್ ಖ್ಯಾತಿಯ ಈಶ್ವರಪ್ಪನವರಂತೂ ಹಣ ಎಣಿಸುವ ಯಂತ್ರವನ್ನೇ ಮನೆಯಲ್ಲಿ ಇಟ್ಟುಕೊಂಡಿದ್ದರಂತೆ! ದುಡ್ಡು ಸಂಪಾದನೆ ಮಾಡುವ ಅವರನ್ನು ‘ಯಾಕ್ರೀ ಇಷ್ಟೊಂದು ಹಣ ಗಳಿಸುತ್ತಿದ್ದೀರಿ’ ಎಂದು ಕೇಳಿದರೆ, ‘ನಮ್ಮ ಮಕ್ಕಳಿಗೆ ಬೇಕು ಅದಕ್ಕಾಗಿ ಗಳಿಸುತ್ತೇವೆ’ ಎನ್ನಬಹುದು. ಮತ್ತೆ ಕೆಲವರು ‘ನಮ್ಮ ಮೊಮ್ಮಕ್ಕಳಿಗೆ ಬೇಕು’ ಎನ್ನಬಹುದು. ಎರಡು ತಲೆಮಾರಿಗಷ್ಟೇ ದುಡ್ಡು ಸಂಪಾದನೆ ಮಾಡುವುದು ಅವರ ಉದ್ದೇಶ. ಮೂರನೇ ತಲೆಮಾರಿನ ಮರಿ ಮೊಮ್ಮಕ್ಕಳ ಬಗ್ಗೆ ಯೋಚನೆ ಮಾಡುವುದಿಲ್ಲ.

ಇದನ್ನೂ ಓದಿ? ಶಿಕ್ಷಣ ನೀತಿಯ ಶಿಫಾರಸುಗಳು ತೀವ್ರ ಅಪೌಷ್ಟಿಕತೆಗೆ ದಾರಿ

ದೇಶಕ್ಕಾಗಿ ಜೀವನವನ್ನೇ ತ್ಯಾಗ ಮಾಡುತ್ತೇವೆಂದು ಹೇಳುವ ಈ ಆರೆಸ್ಸೆಸ್ ಮಂದಿಯ ಮನದಾಳದ ಯೋಚನೆ ಹೇಗಿದೆ ಎಂದರೆ; 500 ವರ್ಷಗಳ ನಂತರ ಹುಟ್ಟುವ ತನ್ನ ಜಾತಿಯ ಒಬ್ಬ ವ್ಯಕ್ತಿಯನ್ನು ಸುಖವಾಗಿ ಇಡುವುದಕ್ಕೆ ಈ ಕ್ಷಣದಲ್ಲಿ ನಾವು ಯಾವ ತ್ಯಾಗವನ್ನು ಮಾಡಬೇಕು ಎಂಬ ಕಲ್ಪನೆ, ದೂರಾಲೋಚನೆ ಅವರಿಗಿದೆ. ಅದಕ್ಕಾಗಿಯೇ ಅವರು ಈಗ ಮದುವೆ ಆಗುತ್ತಿಲ್ಲ. ಅದಕ್ಕಾಗಿಯೇ ಅವರು ಪಂಚೆ ಕಟ್ಟಿಕೊಂಡು, ತಿಳಿಸಾರು ಅನ್ನ ತಿನ್ನುತ್ತಾ, ಪೇಪರ್ ಹಾಸಿಕೊಂಡು ಮಲಗಿಕೊಳ್ಳೋದು. ತುರ್ತುಪರಿಸ್ಥಿತಿಯ ಕಾಲದಲ್ಲಿ ಅವರು ಮಾಡಿದ ಹೋರಾಟದ ಕತೆ ಕೇಳಿದರಂತೂ ಬಹಳ ರೋಮಾಂಚನ ಆಗುತ್ತದೆ. ಕುಟುಂಬವನ್ನೇ ತೊರೆದು ಬರುತ್ತಾರೆ. ತಮ್ಮ ಇಡೀ ಜೀವನವನ್ನೇ ಸಂಘದ ಕೆಲಸಕ್ಕಾಗಿ ಮುಡಿಪಿಡುತ್ತಾರೆ. ಈ ಮಹಾನ್ ತ್ಯಾಗದ ಹಿಂದೆ ಇರಬಹುದಾಗಿರುವುದನ್ನು ಸ್ವಾರ್ಥ ಎಂದು ಕರೆಯುವುದೋ, ಏನೆಂದು ಕರೆಯುವುದೋ ನನಗೆ ಗೊತ್ತಿಲ್ಲ. ಇದು ಹೇಗೆ ಗೊತ್ತಾಗುತ್ತದೆ ಎಂದರೆ, ನಮ್ಮ ದೇಶದ ಚರಿತ್ರೆಯನ್ನು ಗಂಭೀರವಾಗಿ ಗಮನಿಸಿದರೆ ಮಾತ್ರ ಅರ್ಥವಾಗುತ್ತದೆ.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app