ನೂತನ ಸಂಸದ್‌ ಭವನ – ವಿಕೃತಗೊಳಿಸಿರುವ ಸಾರನಾಥ ಸಿಂಹದ ಲಾಂಛನ

National emblem

ಪ್ರಸ್ತುತ ಉದ್ಘಾಟನೆಗೊಂಡ ಪ್ರತಿಮೆಯಲ್ಲಿ ಸಿಂಹಗಳು ಉಗ್ರಸ್ವರೂಪವನ್ನು ಹೊಂದಿವೆ.  ಆದರೆ ಸಾರನಾಥದಲ್ಲಿರುವ ನಮ್ಮ ರಾಷ್ಟ್ರೀಯ ಲಾಂಛನದ ಸಿಂಹಗಳು ಪ್ರಶಾಂತ ಮುಖಭಾವವನ್ನು ಹೊಂದಿವೆ. ಈ ವ್ಯತ್ಯಾಸ ಢಾಳಾಗಿಯೇ ಗೋಚರಿಸುತ್ತದೆ. ʼದಿ ಸ್ಟೇಟ್‌ ಎಂಬ್ಲಮ್‌ ಆಫ್‌ ಇಂಡಿಯಾʼ ಕಾಯ್ದೆಯ ಅನ್ವಯ ಈ ಲಾಂಛನವನ್ನು ವಿರೂಪಗೊಳಿಸುವುದು ಅಪರಾಧ

ನಿನ್ನೆ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಸೆಂಟ್ರಲ್‌ ವಿಸ್ತಾದ ಭಾಗವಾಗಿರುವ ನೂತನ ಸಂಸದ್‌ ಭವನದ ಮೇಲೆ ಪ್ರದರ್ಶಿಸಲಾಗುವ ʼಲಯನ್‌ ಕ್ಯಾಪಿಟಲ್‌ʼ ಎಂದು ಕರೆಯಲ್ಪಡುವ ನಮ್ಮ ರಾಷ್ಟ್ರೀಯ ಲಾಂಛನದ ಪ್ರತಿಮೆಯನ್ನು(ಪ್ರತಿಕೃತಿ) ಉದ್ಘಾಟಿಸಿದರು. ಕಂಚಿನಿಂದ ತಯಾರಿಸಲಾಗಿರುವ ಈ ಲಾಂಛನದ ಎತ್ತರ 6.5 ಮೀಟರ್‌ಗಳು, ತೂಕ 9500 ಕಿಲೋಗ್ರಾಮ್ ಮತ್ತು ಅಗಲ 4.‌ 34 ಮೀಟರ್‌ಗಳು. ಇದರ ತೂಕವನ್ನು ತಡೆಯಲು 6500ಕೆಜಿ ತೂಕದ ಒಂದು ಸ್ಟೀಲ್‌ ರಚನೆಯನ್ನೂ ಮಾಡಲಾಗಿದೆ. ಸುಮಾರು ಒಂಬತ್ತು ತಿಂಗಳ ಅವಧಿಯಲ್ಲಿ ಈ ಪ್ರತಿಮೆಯನ್ನು ಪೂರ್ಣಗೊಳಿಸಲಾಗಿದೆ.

ಸುಮಾರು ಕ್ರಿ ಪೂ 250ರಲ್ಲಿ ಸಾರನಾಥದಲ್ಲಿ ಸ್ಥಾಪಿಸಲಾದ ಅಶೋಕ ಸ್ತಂಭದ ಮೇಲೆ ಈ ಲಾಂಛನವಿದೆ. ಸಾರನಾಥದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಈ ಲಾಂಚನವನ್ನು ಸಂರಕ್ಷಿಸಲಾಗಿದೆ. ಇದರಲ್ಲಿರುವ ನಾಲ್ಕು ಏಷ್ಯಾ ಸಿಂಹಗಳು ಶಕ್ತಿ, ಧೈರ್ಯ, ಹೆಮ್ಮೆ ಮತ್ತು ಭರವಸೆಯನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಇದು ನಮ್ಮ ದೇಶಕ್ಕೆ ಸಂಬಂಧಿಸಿದ ಪುರಾತನ ಆದರ್ಶಗಳಾದ ಶಾಂತಿ ಮತ್ತು ಸಹಿಷ್ಣುತೆಯ ಪ್ರತೀಕವೂ ಆಗಿದೆ. ಇದೊಂದು ನಮ್ಮ ರಾಷ್ಟ್ರೀಯ ಅಸ್ಮಿತೆಯನ್ನು ಸಂಕೇತಿಸುವ ಲಾಂಛನವೂ ಹೌದು. ಇದರ ಜೊತೆಗೆ ಮಂಡೂಕ ಉಪನಿಷತ್ತಿನ ʼ ಸತ್ಯಮೇವ ಜಯತೆʼ ಎಂಬ ವಾಕ್ಯವನ್ನು ಜನವರಿ 26, 1950ರಂದು ಅಂಗೀಕರಿಸಲಾಯಿತು.

ಪ್ರಸ್ತುತ ಉದ್ಘಾಟನೆಗೊಂಡಿರುವ ಪ್ರತಿಮೆಯಲ್ಲಿರುವ ಸಿಂಹಗಳು ಉಗ್ರಸ್ವರೂಪವನ್ನು ಹೊಂದಿವೆ.  ಆದರೆ ಸಾರನಾಥದಲ್ಲಿರುವ ನಮ್ಮ ರಾಷ್ಟ್ರೀಯ ಲಾಂಛನದ ಸಿಂಹಗಳು ಪ್ರಶಾಂತ ಮುಖಭಾವವನ್ನು ಹೊಂದಿವೆ. ಈ ವ್ಯತ್ಯಾಸ ಢಾಳಾಗಿಯೇ ಗೋಚರಿಸುತ್ತದೆ. 2005ರಲ್ಲಿ ಜಾರಿಯಾದ ʼದಿ ಸ್ಟೇಟ್‌ ಎಂಬ್ಲಮ್‌ ಆಫ್‌ ಇಂಡಿಯಾ (ಪ್ರಾಹಿಬಿಷನ್‌ ಆಫ್‌ ಇಮ್ಪ್ರಾಪರ್‌ ಯೂಸ್‌)ʼ ಎಂಬ ಕಾಯ್ದೆಯ ಅನ್ವಯ ಈ ಲಾಂಛನವನ್ನು ವಿರೂಪಗೊಳಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೇ, ಮನಸೋಯಿಚ್ಛೆಯಂತೆ ಇದರ ಸ್ವರೂಪವನ್ನು ಬದಲಿಸಲು ಅವಕಾಶವಿಲ್ಲ. ಈಗಾಗಲೇ ಪ್ರಶಾಂತ್‌ ಭೂಷಣ್‌ ಈ ಲೋಪದ ಬಗೆಗೆ ತಮ್ಮ ಟ್ವೀಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ಪ್ರಜ್ಞಾವಂತರು ಪ್ರಶ್ನಿಸಬೇಕು

ಕೇಂದ್ರ ಸರ್ಕಾರಕ್ಕೆ ಇಂತಹ ಸೂಕ್ಷ್ಮ ವಿಚಾರಗಳ ಬಗೆಗೆ ಮಾಹಿತಿ ಇರಲಿಲ್ಲವೇ? ಇದನ್ನು ರಚಿಸುವಾಗ ಕೃತಿಕಾರರಿಗೆ ಸೂಕ್ತ ನಿರ್ದೇಶನವನ್ನು ನೀಡಿರಲಿಲ್ಲವೇ? ಈ ತೆರನಾದ ರಾಷ್ಟ್ರೀಯ ಲಾಂಛನ ತಮ್ಮ ಆಡಳಿತಾವಧಿಯಲ್ಲಿ ಉದ್ಘಾಟಿಸಲಾಯಿತು ಎಂದು ಹೆಮ್ಮೆಯಿಂದ ಜಗಜ್ಜಾಹೀರುಗೊಳಿಸಬಹುದೆಂದು ಈ ಕ್ರಮಕ್ಕೆ ಕೈಹಾಕಲಾಯಿತೇ? ಅಥವಾ ಇದು ಒಂದು ಇತಿಹಾಸವನ್ನು ತಿರುಚುವ ದುಸ್ಸಾಹಸವೇ? ಇಂತಹ ಪ್ರಶ್ನೆಗಳಿಗೆ ಸರ್ಕಾರದ ಬಳಿ ಏನು ಉತ್ತರಗಳಿವೆ?

ʼನನ್ನ ನಡೆಯೇ ಹೆದ್ದಾರಿ ನಡಿಗೆʼ ಎಂಬುದು ಕೇಂದ್ರ ಸರ್ಕಾರದ ಕಾರ್ಯವೈಖರಿಯಾಗಿದೆ.  ಅದರಂತೆ ಈ ವಿಷಯವೂ ಕಾರ್ಪೆಟ್ಟಿನಡಿ ತಳ್ಳಲಾಗುತ್ತದೆಯೇ? ಪ್ರಜ್ಞಾವಂತರು ಕೇಂದ್ರ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಬೇಕು

ನಿಮಗೆ ಏನು ಅನ್ನಿಸ್ತು?
13 ವೋಟ್