ಸುದ್ದಿಯಾದವರು | ನಿಖತ್‌ ಝರೀನ್‌ ವಿಶ್ವ ಬಾಕ್ಸಿಂಗ್‌ನಲ್ಲಿ ಭಾರತದ ಮಿಂಚು

ಇಸ್ತಾಂಬುಲ್‌ನಲ್ಲಿ ನಡೆದ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನ ಫ್ಲೈವೇಟ್ (52 ಕೆಜಿ) ವಿಭಾಗದಲ್ಲಿ, ನಿಖತ್ ಝರೀನ್ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುತಾಮಾಸ್ ಅವರನ್ನು 5-0 ಅಂತರದಿಂದ ಸೋಲಿಸಿ ಕ್ರೀಡಾಕೂಟದ ಚಾಂಪಿಯನ್ ಆದರು. ಇಂತಹ ಹೆಗ್ಗಳಿಕೆಗೆ ಪಾತ್ರರಾದ ಝರೀನ್ ವಿಶ್ವ ಚಾಂಪಿಯನ್ ಭಾರತದ 5ನೇ ಮಹಿಳಾ ಬಾಕ್ಸರ್

ಅವಮಾನಗಳನ್ನು ಸವಾಲುಗಳ ಮೆಟ್ಟಿಲಾಗಿ ಬದಲಾಯಿಸಿ ವಿಶ್ವ ಬಾಕ್ಸಿಂಗ್‌ನ ರಾಣಿಯಾದ ನಿಖತ್‌ ಝರೀನ್‌ ಈಗ ಭಾರತೀಯರ ಮನೆಮಗಳಾಗಿದ್ದಾಳೆ. ಟರ್ಕಿಯಲ್ಲಿ ನಡೆದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 52 ಕೆ.ಜಿ ವಿಭಾಗದಲ್ಲಿ ಬಂಗಾರದ ಪದಕ ಗೆದ್ದು ಮಿಂಚುತ್ತಿದ್ದಾರೆ. ಈ ಸಾಧನೆಯ ಈ ಘಟ್ಟ ತಲುಪುವುದಕ್ಕೆ ಈ ಬಾಕ್ಸಿಂಗ್ ಪ್ರತಿಭೆ ಸಾಗಿ ಬಂದ ಜೀವನ ಪಯಣ ನಿಜಕ್ಕೂ ರೋಚಕ.

ಹೈದರಾಬಾದ್‌ನ ಮಧ್ಯಮ ವರ್ಗದ ಮುಸ್ಲಿಮ್ ಕುಟುಂಬದ 25 ವರ್ಷದ ನಿಖತ್‌ ಝರೀನ್‌, ಬಾಕ್ಸಿಂಗ್‌ನ ಆರಂಭದ ಪಾಠವನ್ನು ಕಲಿತದ್ದು ನಿಜಾಮಾಬಾದ್‌ನ ಸೆಕ್ರೆಟರಿಯೇಟ್ ಸ್ಟೇಡಿಯಂನಲ್ಲಿ.  ಹನ್ನೆರಡು ವರ್ಷದವಳಿದ್ದಾಗ ತಂದೆ ಮುಹಮ್ಮದ್‌ ಜಮೀಲ್‌ ಅಹ್ಮದ್‌ ಎದುರಲ್ಲೇ ತರಬೇತಿಯ ಮೊದಲ ದಿನವೇ ಎದುರಾಳಿಯ ಬಲಿಷ್ಠ ಪಂಚ್‌, ಝರೀನ್‌ ಎಡಗಣ್ಣಿನ ಸುತ್ತಲೂ ಕಪ್ಪಗಾಗುವಂತೆ ಮಾಡಿತ್ತು. ಮನೆಗೆ ಮರಳಿದಾಗ ಅಮ್ಮ ಪರ್ವೀನ್ ಕೋಪದ ಮಾತುಗಳನ್ನು ಇಬ್ಬರೂ ಕೇಳಿಸಿಕೊಳ್ಳಬೇಕಾಯಿತು. ಕುಟುಂಬಸ್ಥರು, ನೆರೆಹೊರೆಯವರೂ, ಝರೀನ್‌ ಬಾಕ್ಸಿಂಗ್‌ ತರಬೇತಿ ಪಡೆಯುವುದನ್ನು ಬಲವಾಗಿಯೇ ವಿರೋಧಿಸಿದರು. ಆದರೆ ಸ್ವತಃ ಕ್ರೀಡಾಪಟುವಾಗಿದ್ದ ತಂದೆ ಮುಹಮ್ಮದ್‌ ಜಮೀಲ್‌ ಅಹ್ಮದ್‌ ಯಾರ ಮಾತನ್ನೂ ಕೇಳಿಸಿಕೊಳ್ಳಲಿಲ್ಲ. ಮಗಳ ಆಸಕ್ತಿಯ ಭವಿಷ್ಯದ ಕುರಿತು ಅಹ್ಮದ್‌ ಅವರಿಗೆ ಬಲವಾದ ನಂಬಿಕೆಯಿತ್ತು. ಆರಂಭದಲ್ಲಿ ಮಾವ ಸಂಶುದ್ದೀನ್ ಝರೀನ್‌ಗೆ ಮೊದಲ ಕೋಚ್ ಆಗಿದ್ದರು.

ಹದಿನೈದು ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ಮಾರಾಟ ವಿಭಾಗದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮುಹಮ್ಮದ್‌ ಜಮೀಲ್‌ ಅಹ್ಮದ್‌, ಮಗಳ ಬಾಕ್ಸಿಂಗ್‌ ಭವಿಷ್ಯವನ್ನು ಮತ್ತಷ್ಟು ಉತ್ತುಂಗಕ್ಕೇರಿಸುವ ಉದ್ದೇಶದೊಂದಿಗೆ ಕೆಲಸಕ್ಕೆ ರಾಜೀನಾಮೆ ನೀಡಿ ತವರೂರಿಗೆ ಮರಳಿದ್ದರು.

Image
Nikhat Zareen

2008ರಲ್ಲಿ ತಮ್ಮ 12ನೇ ವಯಸ್ಸಿನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಬಂಗಾರದ ಪದಕ ಜಯಿಸುವ ಮೂಲಕ ತಮ್ಮ ಗೆಲುವಿನ ಪಯಣ ಆರಂಭಿಸಿದ ಝರೀನ್‌, ಆ ವರ್ಷ ನಡೆದ ರಾಜ್ಯ ಮಟ್ಟದ ಬಾಕ್ಸಿಂಗ್‌ನಲ್ಲಿ ನಾಲ್ಕನೆಯ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದರು.

ಬಳಿಕ ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಸ್ವರ್ಣ ಗೆದ್ದರು. ಮೂರು ತಿಂಗಳ ಬಳಿಕ ತಮಿಳುನಾಡಿನ ಈರೋಡ್‌ನಲ್ಲಿ ನಡೆದ ರಾಷ್ಟ್ರೀಯ ಸಬ್ ಜೂನಿಯರ್ ಮಟ್ಟದಲ್ಲಿ ಚಾಂಪಿಯನ್ ಪಟ್ಟ ಒಲಿಯಿತು. ನಂತರ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ಐ ವೆಂಕಟೇಶ್ವರ ರಾವ್ ಅವರ ಗರಡಿಯಲ್ಲಿ ಪಳಗಿದ ಯುವ ಬಾಕ್ಸರ್‌, ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನ ಛಾಪು ಮೂಡಿಸಲು ಆರಂಭಿಸಿದ್ದಳು. ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚಿದ ಝರೀನ್‌, ವಿಶ್ವ ಕಿರಿಯರ ಮತ್ತು 2011ರಲ್ಲಿ ಟರ್ಕಿಯಲ್ಲಿ ನಡೆದ ಯುವ ಚಾಂಪಿಯನ್‌ಷಿಪ್‌ನಲ್ಲೂ ಪದಕವನ್ನು ಕೊರಳಿಗೇರಿಸಿಕೊಂಡರು.

ಕಣ್ಣೀರಿಟ್ಟಿದ್ದ ಝರೀನ್‌!
ಅದು 2019. ಟೋಕಿಯೊ ಒಲಿಂಪಿಕ್ಸ್- 2020ರ ಬಾಕ್ಸಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ತಯಾರಿ ನಡೆಸಿದ್ದರು. ಭಾರತದಲ್ಲಿ ಮೇರಿಗೆ ಸವಾಲೊಡ್ಡಬಲ್ಲ ಬಾಕ್ಸರ್‌ಗಳು ಇಲ್ಲದಿದ್ದ ಕಾರಣ ನೇರ ಆಯ್ಕೆ ಬಹುತೇಕ ಖಚಿತವಾಗಿತ್ತು. ಆದರೆ ಆ ವೇಳೆಗೆ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಪತ್ರವೊಂದು ಬರುತ್ತದೆ. ʻ'ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಟೂರ್ನಿಗೆ ತಮ್ಮನ್ನೂ ಪರಿಗಣಿಸಬೇಕು. ಅದಕ್ಕಾಗಿ ಮೇರಿ ಕೋಮ್ ವಿರುದ್ಧ ಆಯ್ಕೆ ಟ್ರಯಲ್ಸ್ ಏರ್ಪಡಿಸಿ, ನಮ್ಮಿಬ್ಬರಲ್ಲಿ ಗೆದ್ದವರಿಗೆ ಭಾರತನ್ನು ಪ್ರತಿನಿಧಿಸುವ ಅವಕಾಶ ಕೊಡಿ'ʼ, ಎಂದು ಪತ್ರದಲ್ಲಿ ಮನವಿ ಮಾಡಲಾಗಿತ್ತು. ಈ ಪತ್ರವನ್ನು ಸ್ವತಃ ನಿಖತ್‌ ಝರೀನ್‌ ಬರೆದಿದ್ದರು.

ಈ ಸುದ್ದಿ ಓದಿದ್ದೀರಾ? ಹಿಜಾಬ್ ಹಕ್ಕು ಮತ್ತು ಆಯ್ಕೆ | ಬಾಕ್ಸಿಂಗ್ ವಿಶ್ವ ಚಾಂಪಿಯನ್ ನಿಖತ್ ಝರೀನ್

ಈ ಸುದ್ದಿ ತಿಳಿದ ಮೇರಿ ಕೋಮ್ ಕೋಪದ ಭರದಲ್ಲಿ "ಯಾರಾಕೆ? ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲುವ ಸಾಮರ್ಥ್ಯ ಅವರಿಗಿದೆಯೇ", ಎಂದು ಪ್ರಶ್ನಿಸಿದ್ದರು. ಬಳಿಕ ನಡೆದ ಟ್ರಯಲ್ಸ್‌ನಲ್ಲಿ 9-1 ಅಂತರದಿಂದ ಮೇರಿ ಗೆಲುವು ಸಾಧಿಸಿದ್ದರು. ಗೆಲುವು ಸಾಧಿಸುತ್ತಲೇ ಕ್ರೀಡಾ ಸ್ಫೂರ್ತಿ ಮರೆತ ಮೇರಿ ಕೋಮ್, ಝರೀನ್ ಅವರನ್ನು ಬಾಕ್ಸಿಂಗ್ ರಿಂಗ್‌ನಲ್ಲೇ ನಿಂದಿಸಿದರು. ಪಂದ್ಯದ ಬಳಿಕ ಆಲಂಗಿಸುವ ಅಥವಾ ಕನಿಷ್ಠ ಪಕ್ಷ ಕೈಕುಲುಕಲು ಮೇರಿ ಕೋಮ್ ಒಪ್ಪಲಿಲ್ಲ, ಅವಮಾನಕ್ಕೊಳಗಾದ ನಿಖತ್‌ ಝರೀನ್‌ ರಿಂಗ್‌ನಲ್ಲೇ ಕಣ್ಣೀರಿಟ್ಟಿದ್ದರು.

ಬಾಲ್ಯದಿಂದಲೇ ಮೇರಿ ಕೋಮ್‌ ಸಾಧನೆಯನ್ನು ಕಂಡು-ಕೇಳಿ ಬೆಳೆದಿದ್ದ ಝರೀನ್‌, ಅದೇ ಹಿರಿಯ ತಾರೆಯಿಂದಲೇ ಅವಮಾನಕ್ಕೆ ಒಳಗಾಗಿದ್ದರು. ಆದರೆ, ಕುಗ್ಗಲಿಲ್ಲ. ಹೋರಾಟವನ್ನು ಕೈಬಿಡಲಿಲ್ಲ. ಮುಂದಿನ ಸವಾಲಿಗೆ ಸಿದ್ದರಾದರು. ಮತ್ತೆ ಗೆಲುವಿನ ಲಯಕ್ಕೆ ಮರಳಿದರು. ಗೆಲುವಿನ ಓಟ ಇದೀಗ ಟರ್ಕಿಯ ಇಸ್ತಾಂಬುಲ್‌ನಲ್ಲಿ ವಿಶ್ವ ಚಾಂಪಿಯನ್‌ಷಿಷ್‌ವರೆಗೂ ಮುಂದುವರಿದಿದೆ. ಮಹಿಳೆಯರ 52 ಕೆಜಿ ವಿಭಾಗದಲ್ಲಿ ಥಾಯ್ಲೆಂಡ್‌ನ ಜುಟಾಮಾಸ್ ಜಿಟ್‌ಪಾಂಗ್ ಅವರನ್ನು 5-0 ಅಂತರದಿಂದ ಏಕಪಕ್ಷೀಯವಾಗಿ ಸೋಲಿಸಿದ ಝರೀನ್‌, ವಿಶ್ವ ವಿಜೇತಳಾಗಿ ಹೊರಹೊಮ್ಮಿದ್ದಾರೆ. ಭಾರತೀಯ ಬಾಕ್ಸಿಂಗ್‌ ಚರಿತ್ರೆಯಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾಳೆ.

2016ರಲ್ಲಿ ಹರಿದ್ವಾರದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಚಾಂಪಿಯನ್‌ಷಿಪ್‌ನ (ಫೈವೇಟ್‌ ವಿಭಾಗ) ಫೈನಲ್‌ನಲ್ಲಿ ಮನೀಷಾರನ್ನು ಮಣಿಸುವ ಮೂಲಕ ಝರೀನ್‌ ಚೊಚ್ಚಲ ಸೀನಿಯರ್‌ ಪ್ರಶಸ್ತಿ ಗೆದ್ದಿದ್ದರು. ಆದರೆ 2017ರಲ್ಲಿ ನಡೆದ ಅಂತರ್‌ ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಯ ವೇಳೆ ಬಲಭುಜದ ಮೂಳೆ ಮುರಿತಕ್ಕೊಳಗಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಆ ಬಳಿಕ ಒಂದು ವರ್ಷಗಳ ಕಾಲ ಬಾಕ್ಸಿಂಗ್ ರಿಂಗ್‌ನಿಂದ ದೂರ ಉಳಿದರು. ಎದೆಗುಂದದೆ ಅಭ್ಯಾಸಕ್ಕೆ ಮರಳಿ 2018ರಲ್ಲಿ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಕಾಣಿಸಿಕೊಂಡರು. ಅದೇ ವರ್ಷ ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು. ಆದರೆ 2018ರಲ್ಲಿ ನಡೆದ ಏಷ್ಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ ಕೂಟಗಳಲ್ಲಿ ಝರೀನಾಗೆ ಅವಕಾಶ ದೊರೆಯಲಿಲ್ಲ. ಹೋರಾಟವನ್ನು ಚಾಲ್ತಿಯಲ್ಲಿರಿಸಿದ್ದ ನಿಖತ್‌, 2019ರಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ ಮತ್ತು ಥಾಯ್ಲೆಂಡ್‌ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಮಿಂಚಿದರು.

ತೆಲಂಗಾಣದ ಗೋಲ್ಕೊಂಡಾದ ಆರ್ಟಿಲರಿ ರೆಜಿಮೆಂಟಲ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ಯುವ ಬಾಕ್ಸರ್ ಝರೀನ್‌, ಕಳೆದ ಮೂರು ವರ್ಷಗಳಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಈ ನಡುವೆ ಮಾಜಿ ಲೈಟ್ ಫ್ಲೈವೇಟ್ (51-ಕೆಜಿ) ವಿಭಾಗದ ಮಾಜಿ ವಿಶ್ವ ಚಾಂಪಿಯನ್ ರಷ್ಯಾದ ಎಕಟೆರಿನಾ ಪಾಲ್ಟ್ಸೆವಾ ಮತ್ತು ಎರಡು ಬಾರಿ ಮಾಜಿ ಲೈಟ್ ಫ್ಲೈವೇಟ್ ವಿಶ್ವ ಚಾಂಪಿಯನ್ ಕಜಕಿಸ್ತಾನ್‌ನ ನಜಿಮ್ ಕೈಜೈಬೇ ಅವರಂತಹ ದಿಗ್ಗಜರನ್ನು ಝರೀನ್‌ ತಮ್ಮ ಮುಷ್ಠಿ ಯುದ್ಧದಲ್ಲಿ ಸೋಲಿಸಿದ್ದಾರೆ. ಈ ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ಗೂ ಮುನ್ನ ಟೋಕಿಯೊ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ಟರ್ಕಿಯ ಬುಸ್ ನಾಜ್ ಕಾಕಿರೋಗ್ಲು ಅವರನ್ನೂ ಝರೀನ್‌ ಹಿಮ್ಮೆಟ್ಟಿಸಿದ್ದರು.

ಪ್ರಸ್ತುತ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಹೈದರಾಬಾದ್‌ನ ಬಾಕ್ಸಿಂಗ್‌ ಸೆನ್ಸೇಷನ್‌ ಝರೀನ್‌, ಮುಂದಿನ ದಿನಗಳಲ್ಲಿ 54-ಕೆಜಿ ತೂಕದ ವಿಭಾಗಕ್ಕೆ ಬದಲಾಯಿಸುವ ಸೂಚನೆ ನೀಡಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದೇ ತಮ್ಮ ಮುಂದಿನ ಗುರಿ ಎಂದು ಝರೀನ್‌ ಅತ್ಮವಿಶ್ವಾಸದಿಂದಲೇ ಹೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್