ಎನ್‌ಡಿಎ ತೊರೆದ ನಿತೀಶ್‌| ಬಿಜೆಪಿ ಎಂಬ ಭೂತದ ಸಹವಾಸ

ನಿತೀಶ್‌ ಕುಮಾರ್‌

ಬಿಹಾರದಲ್ಲಿ ಬಿಜೆಪಿ ಸಖ್ಯ ಕಡಿದುಕೊಂಡ ಜೆಡಿಯು ಮುಳುಗುವ ಮುಂಚೆ ಎಚ್ಚೆತ್ತುಕೊಂಡಿದೆ. ಪಾಟ್ನಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಪ್ರಾದೇಶಿಕ ಪಕ್ಷಗಳನ್ನು ನಿರ್ಮೂಲನೆ ಮಾಡಬೇಕೆಂಬ 'ಸಂಕಲ್ಪ' ವನ್ನು ಹೊರ ಹಾಕಿದ ಬೆನ್ನಲ್ಲೆ ಬಿಜೆಪಿಯ ಸಖ್ಯವನ್ನು ನಿತೀಶ್ ಕುಮಾರ್ ಕ್ಷಣ ಮಾತ್ರದೊಳಗೆ ಕಡಿದುಕೊಂಡಿದ್ದಾರೆ

ಬಿಹಾರದಲ್ಲಿ ನಿನ್ನೆ ಇಡೀ ದಿನ ನಡೆದ ರಾಜಕೀಯ ಕ್ಷಿಪ್ರ ಬದಲಾವಣೆಯಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಜೆಡಿಯುನ ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್ ಇನ್ಮುಂದೆ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಮುಂದುವರೆಯಲು ಸಾಧ್ಯವಿಲ್ಲ ಎಂಬುದು ಶಾಸಕರ ಒಮ್ಮತದ ನಿರ್ಣಯವಾಗಿದೆ. ಬಿಹಾರ ಜನತೆ ಕೂಡ ಇದನ್ನು ಬಯಸುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಅಲ್ಲಿಗೆ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳುವ ಸಂದೇಶವನ್ನು ರವಾನಿಸಿದ್ದರು.

ದೇಶದಲ್ಲಿ ಬಿಜೆಪಿಯ ವರ್ಚಸ್ಸು ಕುಸಿಯುತ್ತಿದೆ. ಇನ್ನು ಅದರ ಜೊತೆ ಹೆಜ್ಜೆ ಹಾಕುವುದು ಅಪಾಯಕಾರಿ ಎಂಬ ಅರ್ಥವೂ ನಿತೀಶ್ ಅವರ ಮಾತುಗಳಲ್ಲಿ ಅಡಗಿದ್ದನ್ನು ಗ್ರಹಿಸಬಹುದು.

ಬಿಹಾರದಲ್ಲಿ ಬಿಜೆಪಿಯ ಸಖ್ಯ ಕಡಿದುಕೊಂಡ ಜೆಡಿಯು ಮುಳುಗುವ ಮುಂಚೆ ಎಚ್ಚೆತ್ತುಕೊಂಡಿದೆ. ಪಾಟ್ನಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಪ್ರಾದೇಶಿಕ ಪಕ್ಷಗಳನ್ನು ನಿರ್ಮೂಲನೆ ಮಾಡಬೇಕೆಂಬ 'ಸಂಕಲ್ಪ' ವನ್ನು ಹೊರ ಹಾಕಿದ ಬೆನ್ನಲ್ಲೆ ಬಿಜೆಪಿಯ ಸಖ್ಯವನ್ನು  ಜೆಡಿಯುವಿನ ನಿತೀಶ್ ಕುಮಾರ್ ಕ್ಷಣಮಾತ್ರದೊಳಗೆ ಕಡಿದುಕೊಂಡಿದ್ದಾರೆ.

ಹಾಗೆಂದ ಮಾತ್ರಕ್ಕೆ ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಳ್ಳುವ ಜೆಡಿಯುವಿನ ನಿರ್ಧಾರ ಒಂದು ದಿನದೊಳಗೆ ಕೈಗೊಂಡಿದ್ದಲ್ಲ. ಕಳೆದ ಆರು ತಿಂಗಳಿನಿಂದ ನಡೆದ ರಾಜಕೀಯ ಮಂಥನ ಮತ್ತು ಮೈತ್ರಿ ಕಡಿದುಕೊಂಡ ಮೇಲೆ ಅಧಿಕಾರ ಉಳಿಸಿಕೊಳ್ಳಬಹುದಾದ ಯೋಜನೆ ಎಲ್ಲವೂ ಸಿದ್ಧವಾಗಿತ್ತು. ಅದರಂತೆ ಎಲ್ಲವೂ ನಡೆದಿದೆ. ಈ ವಿಷಯ ಬಿಜೆಪಿಗೆ ಗೊತ್ತಿದ್ದೂ ಜೆಡಿಯು ಜೊತೆಗಿನ ಘಟಬಂಧನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ  ಸ್ವತಂತ್ರವಾಗಿ ಸ್ಪರ್ಧಿಸುವ ಉದ್ದೇಶದಿಂದಲೇ ಬಿಜೆಪಿ ಈ ಸಖ್ಯ ಮುರಿದು ಹೋಗಲಿ ಎಂದು ಬಯಸಿತ್ತು ಎಂದೇ ಹೇಳಲಾಗುತ್ತಿದೆ. ಬಹುಶಃ ಜೆಡಿಯುವನ್ನು ಇಬ್ಭಾಗವಾಗಿಸುವ ಬಿಜೆಪಿಯ ತಂತ್ರ ಅರ್ಧಕ್ಕೆ ಉರಿದು ಬಿದ್ದ ರಾಕೆಟ್‌ನಂತಾಗಿ ವೈಫಲ್ಯದ ಮುಖ ಉಳಿಸಿಕೊಳ್ಳುವ ನೆಪವೂ ಆಗಿರಬಹುದು.

ಸ್ಪಷ್ಟ ಬಹುಮತ ಪಡೆಯದ ರಾಜ್ಯಗಳಲ್ಲಿ ಮೈತ್ರಿಯನ್ನೂ ಅಥವಾ ಶಾಸಕರನ್ನು ಖರೀದಿಸಿ (ಆಪರೇಷನ್ ಕಮಲ) ಸರ್ಕಾರ ರಚಿಸುವ ದಾರಿಗಳನ್ನು ಕಂಡುಕೊಂಡಿರುವ ಬಿಜೆಪಿ ಸಂವಿಧಾನಿಕ ಸಂಸ್ಥೆಗಳೇ ಆದ ಐಟಿ, ಇಡಿ, ಸಿಬಿಐಗಳನ್ನೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಗಂಭೀರ ಆರೋಪವನ್ನು ಎದುರಿಸಬೇಕಾಗಿದೆ.

ಬಿಹಾರದಲ್ಲಿ ಇನ್ನೂ ಜೆಡಿಯು, ಕಾಂಗ್ರೆಸ್, ಆರ್‌ಜೆಡಿ ಮತ್ತಿತರ ಮಹಾಘಟಬಂಧನ್ ಮೈತ್ರಿಯ ಶಾಸಕರು, ಸಂಸದರ ಮನೆಗಳ ಮೇಲೆ ಇಡಿ, ಐಟಿ ದಾಳಿಗಳು ನಡೆದರೂ ಆಶ್ಚರ್ಯಪಡುವಂತಿಲ್ಲ. ಅಧಿಕಾರವನ್ನು ಹಿಡಿಯಲು ಮತ್ತು ಉಳಿಸಿಕೊಳ್ಳಲು ಬಿಜೆಪಿ ಹೊಸ ಮಾದರಿಯನ್ನೆ ಹುಟ್ಟು ಹಾಕಿರುವುದನ್ನು ಸದ್ಯ ನವರಾಷ್ಟ್ರೀಯವಾದದ ನವಭಾರತ ಕಾಣುವಂತಾಗಿದೆ.

ಜೆಡಿಯು ಶಾಸಕ, ಸಂಸದರಿಗೂ ಹಣ, ಅಧಿಕಾರದ ಆಮಿಷವೊಡ್ಡಿ ಪಕ್ಷವನ್ನು‌ ಮುಗಿಸುವ  ಬಿಜೆಪಿಯ ಕುತಂತ್ರವನ್ನು ಗ್ರಹಿಸಿದ ನಿತೀಶ್ ಕುಮಾರ್ ಬಿಜೆಪಿಗೆ‌ ಮರ್ಮಾಘಾತ ಹೊಡೆತವನ್ನೇ ಕೊಟ್ಟಿದ್ದಾರೆ.  

ಬಿಹಾರದಲ್ಲಿ 80 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿರುವ ಆರ್‌ಜೆಡಿಯು 45 ಸ್ಥಾನಗಳ ಗೆದ್ದಿರುವ ಜೆಡಿಯುಗೆ ಬೆಂಬಲ ನೀಡುತ್ತಿರುವುದು ಶತ್ರು(ಬಿಜೆಪಿ) ವನ್ನು ಎದುರಿಸಲು ಕೆಲವೊಮ್ಮೆ ತ್ಯಾಗಗಳನ್ನು ಮಾಡಬೇಕಾಗುತ್ತದೆ ಎಂಬ ನಿಲುವಿಗೆ ಬಂದಂತಿರಬೇಕು. ಬಿಹಾರದಲ್ಲಿ ಬಿಜೆಪಿಯ ಬಲವರ್ಧನೆ ಅಲ್ಲಿನ ಪ್ರಾದೇಶಿಕ ಪಕ್ಷಗಳ ವಿನಾಶವೇ ಆಗಿದೆ ಎಂಬ ಸಕಾಲಿಕ ಎಚ್ಚರ ಹೊಸ ಮೈತ್ರಿಗೆ ಸೂಸೂತ್ರ ನಾಂದಿಯಾಗಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಒಡೆದು ಹೋಳು ಮಾಡಿ ಅಧಿಕಾರ ಸೂತ್ರ ಹಿಡಿದಿದ್ದ ಬಿಜೆಪಿ ಬಿಹಾರದಲ್ಲೂ ಇದೇ ತಂತ್ರ ಅನುಸರಿಸುವ ಹವಣಿಕೆಯಲ್ಲಿರುವಾಗಲೇ ಅದಕ್ಕೆ ಅವಕಾಶ ಸಿಗದಂತೆ ನಿತೀಶ್ ತನ್ನ ಸುದೀರ್ಘ ರಾಜಕೀಯ ಅನುಭವವನ್ನು ಬಳಸಿ ಬೆಚ್ಚಿಬೀಳಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷವೊಡ್ಡಿ  ಹೇಮಂತ್ ಸೊರೇನ್ - ಕಾಂಗ್ರೆಸ್ ಸರ್ಕಾರವನ್ನು ಕೆಡವಲು ನಡೆಸಿದ ಮಸಲತ್ತು ಬಯಲಾಗಿತ್ತು. ಬಿಜೆಪಿ ಮಿತ್ರಪಕ್ಷಗಳಾಗಿದ್ದ ಅಕಾಲಿದಳ, ಶಿವಸೇನೆ, ಜೆಡಿಯು ವಿಶ್ವಾಸದ್ರೋಹಕ್ಕೆ ತುತ್ತಾದ ಸಂತ್ರಸ್ಥರ ಪಟ್ಟಿಗೆ ಸೇರಿವೆ.

ಇದನ್ನು ಓದಿದ್ದೀರಾ? ಹರ್‌ ಘರ್‌ ತಿರಂಗಾ ಅಭಿಯಾನ; ಇದಲ್ಲವೇ ಇತಿಹಾಸದ ಕ್ರೂರ ವ್ಯಂಗ್ಯ !

ದೇಶದಲ್ಲಿ ಬಿಜೆಪಿಯ ಆಕ್ರಮಣಕಾರಿ ರಾಜಕಾರಣವನ್ನು ಹಿಮ್ಮೆಟ್ಟಿಸಲು ಸದೃಢವಾದ ಪರ್ಯಾಯ ರಾಜಕಾರಣದ ಧ್ರುವೀಕರಣವಲ್ಲದೆ ಬೇರೆ ಮಾರ್ಗ ಸದ್ಯ ಕಾಣುತ್ತಿಲ್ಲ. ಪ್ರಾದೇಶಿಕ ಪಕ್ಷಗಳು ತಮ್ಮ ಉಳಿವಿಗಾದರೂ ಒಂದೂಗೂಡುವಲ್ಲಿ ಹಿತವಿದೆ ಎಂದು ಭಾವಿಸಿದರೆ ತಪ್ಪೇನಿಲ್ಲ.

ನಿತೀಶ್ ಕುಮಾರ್ ಇಪ್ಪತ್ನಾಲ್ಕು ಗಂಟೆಯೊಳಗೆ ಬಿಜೆಪಿಯೊಂದಿಗಿನ ಮೈತ್ರಿ ಮುರಿದು ಮತ್ತೊಂದು ಮೈತ್ರಿಯನ್ನು ಕಟ್ಟಿಕೊಂಡು ಅಧಿಕಾರ ಉಳಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ‌ ಶಿವಸೇನೆಯನ್ನು ಒಡೆದು ಬೀಗಿದ್ದ ಬಿಜೆಪಿ ಸದ್ಯ ಬಿಹಾರದಲ್ಲಿ ಮಕಾಡೆ ಮಲಗಿದೆ.

ಭೂತಗಳ ಜೊತೆ ವಾಸಿಸಬಾರದು, ಏಕೆಂದರೆ ಭೂತಗಳು ಹಸಿವಾದಾಗ ಸಹವಾಸಿಯನ್ನೇ ತಿಂದು‌ ತೇಗುತ್ತವೆ. ಬಿಜೆಪಿ ಎಂಬ ಭೂತದ ಸಹವಾಸಕ್ಕೆ ಬಿದ್ದ ಪಕ್ಷಗಳ ಸ್ಥಿತಿಯೂ ಇದಕ್ಕಿಂತ ಭಿನ್ನ ಎಂದೆನಿಸುವುದಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್