ರುದ್ರಮ್ಮದೇವಿಯ ಕಲ್ಲಾನೆಗೆ ನಿಜಾಮರ ಬಣ್ಣದ ಕಂದೀಲು...

ರುದ್ರಮ್ಮದೇವಿ ಕಲ್ಲಾನೆ

ರಾಯಚೂರಿನ ಪ್ರತಿಯೊಂದು ಹಳ್ಳಿಗಳಲ್ಲಿ ಹಿಂದೂಗಳು ಮುಸ್ಲಿಂ ದೇವರುಗಳ ಹೆಸರುಗಳನ್ನು ಇಟ್ಟುಕೊಂಡಿರುವುದು, ಮುಸ್ಲಿಮರೇ ಇಲ್ಲದ ಊರುಗಳಲ್ಲಿ ಹಿಂದೂಗಳೇ ದರ್ಗಾಗಳನ್ನು ನೋಡಿಕೊಳ್ಳುತ್ತಿರುವ ವಿಶೇಷ ಭಾವೈಕ್ಯತೆಯನ್ನು ಕಾಣಬಹುದು. ​ಮುಸ್ಲಿಂ ದರ್ಗಾಗಳಿಗೆ ಹಿಂದೂಗಳು ಹೋಗಿ ಪೂಜೆ ಮಾಡಿ ಬರುವುದು ಇಲ್ಲಿನ ಇನ್ನೊಂದು ವಿಶೇಷ

ತೆಲಂಗಾಣ ಮತ್ತು ಆಂದ್ರಪ್ರದೇಶ ಗಡಿಭಾಗದಲ್ಲಿರುವ ರಾಜ್ಯದ ಪ್ರಮುಖ ನಗರ ರಾಯಚೂರು. ಇದು ಬಿಸಿಲಿಗೆ ಹೆಸರುವಾಸಿಯಾಗಿರುವ ಊರು. ಅಷ್ಟೇ ಅಲ್ಲ ಕೋಮು ಸೌಹಾರ್ದತೆಗೂ ಸಾಕ್ಷಿಯಾಗಿದೆ. ಉತ್ತರಕ್ಕೆ ಕೃಷ್ಣ, ದಕ್ಷಿಣಕ್ಕೆ ತುಂಗಭದ್ರೆ ನದಿಗಳು ಅಂಟಿಕೊಂಡು ಹರಿಯುವುದಕ್ಕೆ ರಾಯಚೂರನ್ನು ʼಎಡೆದೊರೆನಾಡುʼ ಅಥವಾ ʼದೋ-ಹಬ್ʼ ಪ್ರದೇಶ ಎಂದು ಕರೆಯುತ್ತಾರೆ. 

ರಾಣಿ ರುದ್ರಮ್ಮದೇವಿ, ಹೈದರಾಬಾದ್ ನಿಜಾಮ, ವಿಜಯನಗರ ಅರಸರು, ಆಳಿದ ಪ್ರದೇಶವಿದು. ಅಂದಿನಿಂದಲೇ ಇದು ಹಿಂದೂ-ಮುಸ್ಲೀಮರ ಭಾವೈಕ್ಯತೆಯ ಶಾಂತಿ-ಸೌಹಾರ್ದ ಪರಂಪರೆಯಾಗಿ ರಾಜರ ಕಾಲದಿಂದಲೂ  ಸೌಹಾರ್ದ ಸಹಬಾಳ್ವೆ ಪರಂಪರೆಗೆ ಹೆಸರುವಾಸಿಯಾಗಿದೆ. ಇಲ್ಲಿನ ವಿಶೇಷ ಎಂದರೆ ಮುಸ್ಲಿಂ ದರ್ಗಾಗಳಿಗೆ ಹಿಂದೂಗಳು ಹೋಗಿ ಪೂಜೆ ಮಾಡಿ ಬರುವುದು. ರಾಯಚೂರಿನ ಪ್ರತಿಯೊಂದು ಹಳ್ಳಿಗಳಲ್ಲಿ ಹಿಂದೂಗಳು ಇಂದಿಗೂ ಮುಸ್ಲಿಮರ ದೇವರುಗಳ ಹೆಸರುಗಳನ್ನು ಇಟ್ಟುಕೊಂಡಿದ್ದು ಗಮನಿಸಬಹುದು. ಮುಸ್ಲಿಮರೇ ಇಲ್ಲದ ಊರುಗಳಲ್ಲಿ ಹಿಂದೂಗಳೇ ದರ್ಗಾಗಳನ್ನು ನೋಡಿಕೊಳ್ಳುತ್ತಿರುವುದನ್ನು ಇಲ್ಲಿ ಕಾಣಬಹುದು. 

ಇಲ್ಲಿನ ವಿಶೇಷ ಅಂದರೆ ಹುಸೇನಿ, ಜೆಂಗ್ಲಿಪ್ಪ, ಲಿಂಗಪ್ಪ, ಬಡೇಸಾಬ್, ಅಲ್ಯಪ್ಪ, ಗೋಕರಪ್ಪ, ಮೌಲಪ್ಪ, ಖಾಸಿಂ, ದಸ್ತಾಗೀರ… ಇದು ಹಿಂದೂಗಳ ಹೆಸರುಗಳು.  ಯಾವ ಕೋಮುಗಲಭೆಗಳಿಲ್ಲದೆ ಭೇದ-ಭಾವವಿಲ್ಲದೆ ಅವಿನಾಭಾವ ಸಂಬಂಧದಿಂದ ಹಿಂದೂ ಮುಸ್ಲಿಮರು ನಿತ್ಯ ಕೂಡಿಬಾಳುತ್ತಿದ್ದಾರೆ.

ಈ ಭಾವೈಕ್ಯತೆಯ ಸ್ನೇಹ ಪ್ರೀತಿ ನಿನ್ನೆ-ಇಂದಿನದಲ್ಲ. 13ನೆಯ ಶತಮಾನದಿಂದಲೂ ನಡೆದುಕೊಂಡು ಬಂದ ಇತಿಹಾಸ ಇಲ್ಲಿದೆ. ರಾಯಚೂರು ನಗರದ ಹೃದಯಭಾಗದಲ್ಲಿರುವ ಕಲ್ಲಾನೆ ವೃತ್ತ ಅಥವಾ ತೀನ್ ಕಂದೀಲ್ ವೃತ್ತ(ಸರ್ಕಲ್) ಇದಕ್ಕೊಂದು ಭಾಳ ಹಿಂದಿನ ಇತಿಹಾಸ ಇದೆ. ಸುಮಾರು ಹದಿಮೂರನೆಯ ಶತಮಾನದಾಗ ಆಗಿನ ವರಂಗಲ್ ರಾಣಿ ರುದ್ರಮ್ಮದೇವಿ ತಾನು ಈ ಪ್ರಾಂತ್ಯವನ್ನು ಗೆದ್ದಿದ್ದರ ನೆನಪಿಗೆ ಕಲ್ಲಾನೆಗಳನ್ನು ಕೆತ್ತಿಸಲಾಗುತ್ತೆ. ಆ ಏಕಶಿಲಾ ಕೆತ್ತನೆಯ ಆನೆಗಳನ್ನು ಇಲ್ಲಿ ನಿಲ್ಲಿಸಿದ್ದು ಆಕೆಯ ವಿಜಯದ ಗುರುತಿಗೆ. 

Image
ನಿಜಾಮರು ಸ್ಥಾಪಿಸಿದ್ದ ಬಣ್ಣದ ಕಂದೀಲು ಸ್ತಂಭ
ನಿಜಾಮರು ಸ್ಥಾಪಿಸಿದ್ದ ಬಣ್ಣದ ʼತೀನ್ಕಂದೀಲ್ʼ ಸ್ತಂಭ

ಮುಂದೆ ಹದಿನೇಳನೆಯ ಶತಮಾನದಲ್ಲಿ ಈ ಪ್ರಾಂತ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಪಡುತ್ತದೆ. ಆಗಲೂ ಅವರು ಇದನ್ನು ಹಂಗೆ ಉಳಿಸಿಕೊಂಡು ಕಾಪಾಡಿಕೊಂಡು ಬರುತ್ತಾರೆ. ಅಷ್ಟಲ್ಲದೆ ಈಗಿನ ಮಾವಿನಕೆರೆಯನ್ನು “ಆಮ್ ತಾಲಾಬ್” ಅಂದರೆ ಸಾಮಾನ್ಯ ಜನರ ಕೆರೆ ಎಂದು ಅಭಿವೃದ್ಧಿಪಡಿಸಿದ್ದು ಕೂಡ ಈ ಸುಲ್ತಾನರ ಕಾಲದಲ್ಲಿಯೇ. ಬಹಮನಿ ಸುಲ್ತಾನರ 3ನೇ ಮೊಹಮ್ಮದ್ ಷಾ ಈಗಿನ ಮಕ್ಕಾ ದರ್ವಾಜ, ನವರಂಗ ದರ್ವಾಜ (ಈ ಕೋಟೆಯ ದ್ವಾರ ಬಾಗಿಲಲ್ಲೇ ವೀರ ಹನುಮಾನ್ ಮಂದಿರವನ್ನು ನೋಡಬಹುದು ಅದು ಅಂದಿನಿಂದ ಇಂದಿನವರಗೂ ಹಾಗೇ ಇದೆ) ಕಟಿ ದರ್ವಾಜ ಮತ್ತು ದೊಡ್ಡಿ ದರ್ವಾಜಗಳನ್ನು ಕಟ್ಟಿಸಿದನಂತೆ. ಹಂಗೆ ನಿಜಾಮರ ಕಾಲದಾಗ ಅಂದರೆ ಅಂದಾಜು 1913ರ ಇಸವಿಯಲ್ಲಿ ಈ ರುದ್ರಮ್ಮದೇವಿ ಕಟ್ಟಿಸಿದ ಕಲ್ಲಾನೆಗಳ ಮೇಲೆ ಬೆಳಕು ಬೀಳಲಿ,  ಎಲ್ಲರಿಗೂ ಆನೆಗಳು ಕಾಣಲಿ ಎಂದು ಮೂರು ಬಣ್ಣದ ಕಂದೀಲುಗಳನ್ನು ಇಲ್ಲಿ ನೇತು ಹಾಕಿಸಿದ್ದರಂತೆ. ಹಿಂದೂ ರಾಜರು ತಮ್ಮ ವಿಜಯದ ಗುರುತಿಗೆ ಕಟ್ಟಿಸಿದ ಕಲ್ಲಾನೆಗಳನ್ನು ಉಳಿಸಿಕೊಂಡು ಜೋಪಾನವಾಗಿ ಕಾಪಾಡಿದ್ದು ಅಂದಿನ ಮುಸ್ಲಿಂ ರಾಜರ ಇತಿಹಾಸವನ್ನ ನಾವು ನೋಡಬಹುದು. ಇದನ್ನು ತೀನ್ಕಂದೀಲ್ ಅಥವಾ ತೆಲುಗಿನಲ್ಲಿ ʼಏನುಗರಾಯಿʼ ಅಂತ ಕರೆಯಲಾಗುತ್ತದೆ.

ಜಿಲ್ಲೆಯ ಇನ್ನೊಂದು ವಿಶೇಷವೆಂದರೆ ದರ್ಗಾದ ಪಕ್ಕದಲ್ಲಿ ದುರ್ಗಮ್ಮ, ದುರಗಮ್ಮನ ಬತ್ಯಾಗ ಮಠ, ಮಸೀದಿ ಪಕ್ಕದಾಗ ಮಂದಿರ, ಮಂದಿರ ಬತ್ಯಾಗ ಮಸೀದಿ ಇರೋದು ಸಾಮಾನ್ಯ ಹಾಗೂ ಮಾರೆಮ್ಮ ಪಕ್ಕದಲ್ಲಿ ಜೈನ ಮಂದಿರ, ಅದರ ಪಕ್ಕದಾಗ ಮಸೀದಿ ಇರೋದು ನೋಡಬಹುದು. ಈಗಲೂ ಹಳ್ಳಿಗಳಲ್ಲಿರುವ ದರ್ಗಾಗಳಿಗೆ ಹಿಂದೂಗಳು ಒಳಗಡೆ ಹೋಗಿ ಪೂಜೆ ಮಾಡಿಕೊಂಡು ಬರುವುದನ್ನು ಕಾಣುತ್ತೇವೆ.

ಈ ಸುದ್ದಿ ಓದಿದ್ದೀರಾ? ರಾಯಚೂರು| ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ: ಕಾನೂನು ಕ್ರಮಕ್ಕೆ ಆಗ್ರಹ

ಇಲ್ಲಿನ ಮೊಹರಂ ಹಬ್ಬವಂತೂ ಇಡೀ ದೇಶಕ್ಕೆ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಹಬ್ಬವಾಗಿ ಮಾದರಿಯಾಗಿದೆ. ಮೊಹರಂ ಹಬ್ಬವನ್ನು ಹಿಂದೂಗಳೆ ಹೆಚ್ಚಾಗಿ ಆಚರಣೆ ಮಾಡುತ್ತಾರೆ. ಅಲೈ ಕುಣಿತವನ್ನು ಹೆಣ್ಣು-ಗಂಡು, ಜಾತಿ-ಧರ್ಮ, ಭೇದ-ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಆಚರಣೆ ಮಾಡುವ ಹಬ್ಬವಾಗಿದೆ. ಹನುಮಾನ ಮಂದಿರ, ಅಲೈ ಮಸೀದಿ ಒಟ್ಟಾಗಿರುವುದನ್ನು ಇಲ್ಲಿನ ಹಳ್ಳಿಗಳಲ್ಲಿ ಹೆಚ್ಚಾಗಿ ನೋಡಬಹುದು. ಇಲ್ಲಿನ ದರ್ಗಾದ ಉರುಸುಗಳು ನಡೆಯುವಾಗ ಮುಸ್ಲಿಮರಗಿಂತ ಹಿಂದೂಗಳೆ ಮುಂಚೂಣಿಯಲ್ಲಿರುತ್ತಾರೆ!

ರಾಯಚೂರಿನಲ್ಲಿ ಶತಮಾನಗಳ ಕಾಲದಿಂದಲೂ ಹಿಂದೂ-ಮುಸ್ಲಿಂ ಎಂಬ ಭೇದಭಾವವಿಲ್ಲದೆ, ಕೋಮು ಸಂಘರ್ಷಗಳಿಲ್ಲದೆ ಶಾಂತಿ-ಸೌಹಾರ್ದತೆಯಿಂದ ಬಾಳಿ ಬದುಕುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್