ಪಠ್ಯಪುಸ್ತಕ ವಿವಾದ| ಪಠ್ಯದಲ್ಲಿ ಮಾಯವಾದ ಲಿಂಗ ಸಮಾನತೆ

Gender inequlity

ಪಠ್ಯಪುಸ್ತಕ ರಚನೆಯಲ್ಲಿ ಸಮಾನತೆ, ಸೌಹಾರ್ದತೆ, ಜಾತ್ಯತೀತ ಆಶಯಗಳಿಗೆ ಬದ್ಧವಾಗಿರಬೇಕೆಂಬ ಮಾರ್ಗಸೂಚಿ ಇದೆ. ವಾಸ್ತವದಲ್ಲಿ ಇದ್ಯಾವುದನ್ನು ಪಠ್ಯ ಮರುಪರಿಷ್ಕರಣೆಯಲ್ಲಿ ಪಾಲನೆ ಮಾಡಿಲ್ಲ. ಪಠ್ಯಪುಸ್ತಕ ರಚನೆಯಿರಲಿ ಪಠ್ಯಪುಸ್ತಕ ರಚನಾ ಸಮಿತಿಯಲ್ಲೇ ಲಿಂಗಸಮಾನತೆ ಸಾಧಿಸಿಲ್ಲ. ಒಬ್ಬರೇ ಒಬ್ಬ ಮಹಿಳೆಯೂ ಸಮಿತಿಯಲ್ಲಿಲ್ಲ!

ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದರೂ ಸಮಾಜದಲ್ಲಿ ಮಹಿಳೆಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆ ಮರೀಚಿಕೆಯ ಮಾತಾಗಿದೆ. ಲಿಂಗ ರಾಜಕಾರಣದ ಛದ್ಮವೇಷ ಕುಣಿದಾಡುತ್ತಿದೆ. ಇದರ ಮೂರ್ತ ನೆಲೆಗಳಿಗಿಂತ ಅಮೂರ್ತ ನೆಲೆಗಳೇ ಹೆಚ್ಚು. ಲಿಂಗನ್ಯಾಯದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಮೂಡಿಸಿದ್ದು 12ನೇ ಶತಮಾನದ ಶರಣ ಚಳವಳಿ.

ಗಂಡು ಗಂಡಾದೆಡೆ ಹೆಣ್ಣಿನ ಸೂತಕ
ಹೆಣ್ಣು ಹೆಣ್ಣಾದೆಡೆ ಗಂಡಿನ ಸೂತಕ
ಮನದ ಸೂತಕ ಹಿಂಗಿದೆಡೆ
ತನುವಿನ ಸೂತಕಕ್ಕೆ ತೆರಹುಂಟೆ
ಮುನ್ನಿಲ್ಲದ ಸೂತಕಕ್ಕೆ
ಜನ ಮರುಳಾಯಿತು ನೋಡಾ ಚನ್ನಮಲ್ಲಿಕಾರ್ಜುನ....ಎಂದು ಅಕ್ಕಮಹಾದೇವಿಯ ಗಂಡು ಹೆಣ್ಣಿನ ಜೈವಿಕ ಲಕ್ಷಣದ ಕುರಿತು ಹೇಳುತ್ತ ಗಂಡು ಹೆಣ್ಣು ಭೇದ ಮನಸ್ಸಿಗೆ ಅಂಟಿದ ಮೈಲಿಗೆಯಿಂದಾಗಿಯೇ ಹೊರತು ನಿಸರ್ಗಜನ್ಯ ತಾರತಮ್ಯವಲ್ಲ, ಸೃಷ್ಟಿಯ ನಿರಂತರ ಚಲನೆಗಾಗಿ ಹೆಣ್ಣು ಗಂಡು ಎಂಬ ಲಿಂಗ ವೈವಿಧ್ಯ ಅತ್ಯಂತ ಅವಶ್ಯಕ ಮತ್ತು ಅನಿವಾರ್ಯ ಎನ್ನುತ್ತಾಳೆ.

ಕೋವಿಡ್ ಕಾರಣದಿಂದಾಗಿ ಅನೇಕ ಸಂಕಷ್ಟಗಳು ತಲೆದೋರಿ ಶಿಕ್ಷಣದಿಂದ ವಂಚಿತರಾಗುತ್ತಿರುವುದು ಹೆಣ್ಣುಮಕ್ಕಳೇ. ಅನೇಕರು ಶಾಲೆ ಬಿಟ್ಟು ಕೂಲಿನಾಲಿ ಮಾಡುತ್ತಿದ್ದಾರೆ. ಇನ್ನೂ ಹಲವರು ಬಾಲ್ಯವಿವಾಹಗೊಳಗಾಗಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಗಾಯದ ಮೇಲೆ ಬರೆ ಎಳೆದಂತೆ ಪಠ್ಯಕ್ರಮ ಮರುಪರಿಷ್ಕರಣೆ ಅವಶ್ಯಕತೆ ಇತ್ತೇ? ಅದರಲ್ಲೂ ಮರುಪರಿಷ್ಕರಣೆಯಲ್ಲಿ ಸಾಮಾಜಿಕ ನ್ಯಾಯ, ಲಿಂಗನ್ಯಾಯ ಗಾಳಿಗೆ ತೂರಿದ್ದು ಯಾವ ನ್ಯಾಯ?

ಈಗ ಕೆಲವು ವಾರಗಳಿಂದ ಪಠ್ಯಪುಸ್ತಕ ಕುರಿತ ವಿವಾದಗಳು ನೆಡೆಯುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಶಾಲಾಕಾಲೇಜುಗಳಲ್ಲಿ ಯಾವುದೇ ವಿದ್ಯಾರ್ಥಿ/ನಿಗೆ ಲಿಂಗ, ಧರ್ಮ, ಜಾತಿ ಆಧಾರದಲ್ಲಿ ತಾರತಮ್ಯ ಮಾಡಬಾರದು. ಪಠ್ಯಪುಸ್ತಕ ರಚನೆಯಲ್ಲಿ ಸಮಾನತೆ, ಸೌಹಾರ್ದತೆ, ಜಾತ್ಯಾತೀತ ಆಶಯಗಳಿಗೆ ಬದ್ಧವಾಗಿರಬೇಕೆಂಬ ಮಾರ್ಗಸೂಚಿ ಇದೆ. ವಾಸ್ತವದಲ್ಲಿ ಇದ್ಯಾವದನ್ನು ಪಠ್ಯ ಮರುಪರಿಷ್ಕರಣೆಯಲ್ಲಿ ಪಾಲನೆ ಮಾಡಿಲ್ಲ. ಪಠ್ಯಪುಸ್ತಕ ರಚನೆಯಿರಲಿ, ಪಠ್ಯಪುಸ್ತಕ ರಚನಾ ಸಮಿತಿಯಲ್ಲೇ ಲಿಂಗಸಮಾನತೆ ಸಾಧಿಸಿಲ್ಲ. ಒಬ್ಬರೇ ಒಬ್ಬ ಮಹಿಳೆಯೂ ಸಮಿತಿಯಲ್ಲಿಲ್ಲ. ಪ್ರಜಾಸತ್ತಾತ್ಮಕ ವಿಧಾನ ಅನುಸರಿಸಿಲ್ಲ. ಮಹಿಳಾ ಸಂವೇದನೆ ಮಾಯವಾಗಿದೆ.

ಮಹಿಳೆಯರನ್ನು ‘ಮಾತೆ’ಯರು ಎಂದು ಗೌರವಿಸುವಂತಹ ಸಮಾಜ ನಮ್ಮದು ಎಂದು ಸಂಸ್ಕೃತಿ ರಕ್ಷಕರು ಮರೆಯುತ್ತಿದ್ದಾರೆ. ವಿದ್ಯಾಧಿದೇವತೆ ಶಾರದೆ ಎಂದು ಸರಸ್ವತಿ ಪೂಜೆಯನ್ನು ಶಾಲೆಯಲ್ಲಿ ಮಾಡಿಕೊಂಡು ಬರುತ್ತಿದ್ದೇವೆ. ವೈರುಧ್ಯವೆಂದರೆ ಹೆಣ್ಣುಮಕ್ಕಳನ್ನು ಶಿಕ್ಷಣದಿಂದಲೇ ವಂಚಿತರನ್ನಾಗಿಸುತ್ತೇವೆ. ಸಂಪತ್ತಿನ ದೇವತೆ ಲಕ್ಷ್ಮಿ ಎಂದು ಪೂಜಿಸುತ್ತೇವೆ. ಆದರೆ ಅವಳಿಗೆ ಆಸ್ತಿಯಲ್ಲಿ  ಪಾಲು ಕೊಡುವುದಿಲ್ಲ. ಅವಳ ಮೇಲೆ ಹಿಂಸೆ, ದೌರ್ಜನ್ಯ, ಅತ್ಯಾಚಾರದಂತಹ ಘಟನೆಗಳು ಸರ್ವೆಸಾಮಾನ್ಯವೆಂಬಂತೆ ಜರುಗುತ್ತಲೇ ಇದೆ.

ಮಹಿಳೆಯರ ಬರಹ ತೆಗೆದಿರುವುದು ಖಂಡನೀಯ

ಪಿತೃಪ್ರಧಾನ ವ್ಯವಸ್ಥೆ ಕೊಟ್ಟ ದೈವತ್ವದ ಬಗ್ಗೆ ಅತ್ಯಂತ ಕೀಳಾಗಿ ಚಿತ್ರಿಸಿರುವ ಪಠ್ಯವನ್ನು ಮಕ್ಕಳ ಕಲಿಕೆಯಲ್ಲಿ ಸೇರಿಸಲಾಗಿದೆ. ಐಶ್ವರ್ಯ ಲಕ್ಷ್ಮಿಯನ್ನ ತುಚ್ಛೀಕರಿಸಿ ಅತ್ಯಂತ ಕೀಳುಮಟ್ಟದಲ್ಲಿ ನಡತೆಗೆಟ್ಟವಳು ಎಂದು ಚಿತ್ರಿಸಿರುವ ಪಠ್ಯವನ್ನ ಕಲಿಸುವುದರಿಂದ ಗಂಡುಮಕ್ಕಳು ಹೆಣ್ಣುಮಕ್ಕಳನ್ನ ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಇಂತಹದನ್ನು ವಿದ್ಯಾರ್ಥಿಗಳು ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಲು ಸಾಧ್ಯವೇ? ಪಠ್ಯಕ್ರಮದಿಂದ ಸಾರಾ ಅಬೂಬಕರ್, ಬಿ.ಟಿ. ಲಲಿತಾನಾಯಕ್, ಕೆ. ನೀಲಾ ಅವರ ಲೇಖನಗಳನ್ನು ತೆಗೆದುಹಾಕಿರುವುದು ಖಂಡನೀಯ.

ಇದನ್ನು ಓದಿದ್ದೀರಾ? ಪಠ್ಯಪುಸ್ತಕ ಪರಿಷ್ಕರಣೆಯ ಹಿಂದಿದೆ ʼಬ್ರಾಹ್ಮಣ್ಯವೇ ಶ್ರೇಷ್ಠʼ ಎಂಬ ಅಹಂ: ರಾಜೇಂದ್ರ ಚೆನ್ನಿ

ಬನ್ನಂಜೆ ಗೋವಿಂದಚಾರ್ಯರ ‘ಶುಕನಾಸನ ಉಪದೇಶ’ ಅಧ್ಯಯದಲ್ಲಿ ಎರಡು ಪ್ಯಾರ ಹೀಗಿದೆ. ‘ಲಕ್ಷ್ಮೀಯೆಂಬ ಚಂಚಲೆ ಹಾಲುಗಡಲಿನಿಂದ ಮೇಲೆದ್ದು ಬರುವಾಗಲೇ ತನ್ನ ಜತೆಗಾರರಿಂದ ಹಲವೆಲ್ಲ ದುರ್ಗುಣಗಳನ್ನು ಹೊತ್ತುಕೊಂಡೇ ಬಂದಿದ್ದಾಳೆ. ಚಂದ್ರಕಲೆಯ ವಕ್ರತೆ, ಉಚ್ಚೈಃ, ಶವಸ್ಸಿನ ಚಾಪಲ್ಯ, ಕಾಲಕೂಟದ ಮೋಹಕತ್ವ, ಮದ್ಯದ ಮಾದಕತ್ವ, ಕೌಸ್ತುಭದ ಕಾಠಿಣ್ಯ ಈ ಎಲ್ಲ ಗುಣಗಳು ಸಂಪತ್ತಿನ ಸಹಕಾರಿಗಳು. ಈ ಸಿರಿಯೆಂಬ ಹೊಸ ಹೆಣ್ಣನ್ನು ಕಂಡು ಮರುಳಾಗದವರನ್ನ ನಾನು ಕಂಡಿಲ್ಲ. ಎಲ್ಲರೂ ಆಕೆಯತ್ತ ಆಕರ್ಷಿತರಾದವರೆ ಎಲ್ಲರೂ ಆಕೆಯಿಂದ ಮೋಸಹೋಗುವವರೇ, ಯಾವನೇ ಒಬ್ಬನನ್ನು ನಿರ್ವಹಣೆಯಿಂದ ಪ್ರೇಮಿಸುವುದು ಆಕೆಯ ಜಾಯಮಾನಕ್ಕೆ ಸಲ್ಲದು. ಕೆಟ್ಟ ನಡತೆಯ ಸಿರಿಯೆಂಬ ಹೆಣ್ಣು ಹೇಗೋ ದೈವಯೋಗದಿಂದ ಕೆಲಮಂದಿ ರಾಜರಿಗೆ ಒಲಿಯುತ್ತಾಳೆ. ಅಲ್ಲಿಗೆ ಮುಗಿಯಿತು ಅವರ ಕತೆ ಏನು ಸಂಭ್ರಮ, ಏನು ಕೋಲಾಹಲ! ಜಗತ್ತಿನ ಎಲ್ಲ ದೌರ್ಜನ್ಯಗಳಿಗೆ ಅವರು ಆಸರೆ’.

ಇಂತಹ ಪಠ್ಯ ಮಕ್ಕಳು ಕಲಿಯಬೇಕೆ? ಈ ಪಠ್ಯವನ್ನು ಶಿಕ್ಷಕ/ಕಿಯರು ಹೇಗೆ ಪಾಠ ಮಾಡಬೇಕು? ಇದರಿಂದ ಮಕ್ಕಳು ಏನು ಕಲಿಯಲು ಸಾಧ್ಯ? ಇಂತಹ ಮಹಿಳಾ ಸಂವೇದನೆ ವಿರೋಧಿ ಪಠ್ಯ ರದ್ದುಪಡಿಸಬೇಕು. ಇಂತಹ ಪಠ್ಯದಿಂದ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯಲು ಸಾಧ್ಯವೇ?

ಸಂವಿಧಾನದ ಆಶಯಗಳನ್ನು, ಪ್ರಜಾಪ್ರಭುತ್ವದ ಮೌಲ್ಯಗಳು, ಸಾಮಾಜಿಕ ನ್ಯಾಯ ಮೂಡಿಸುವ, ಲಿಂಗ ಸಮಾನತೆಯನ್ನು ಗೌರವಿಸುವ, ಬಹುಸಂಸ್ಕೃತಿಯನ್ನು ಬಿಂಬಿಸುವ ಪಠ್ಯಕ್ರಮ ರೂಪಿಸಬೇಕಾಗಿದೆ. ಆದ್ದರಿಂದ ಮರುಪರಿಷ್ಕರಣಾ ಸಮಿತಿ ರಚಿಸಿರುವ ಪಠ್ಯಕ್ರಮವನ್ನು ತಕ್ಷಣದಿಂದ ರದ್ದುಪಡಿಸಬೇಕು.

ನಿಮಗೆ ಏನು ಅನ್ನಿಸ್ತು?
2 ವೋಟ್