ಪಠ್ಯಪರಿಷ್ಕರಣೆ: ಬಲಪಂಥೀಯರಲ್ಲಿ ಬೇರೆ ವಿದ್ವಾಂಸರಿಲ್ಲವೇ? (ಭಾಗ 2)- ಪುರುಷೋತ್ತಮ ಬಿಳಿಮಲೆ

Karnataka textbook

ಈಗ ಆಗಿರುವ ಪರಿಷ್ಕರಣೆ ತರಾತುರಿಯಲ್ಲಿ ಮಾಡಿರುವುದು. ಅದು ಪೂರ್ವಾಗ್ರಹ ಪೀಡಿತವಾಗಿದೆ. ಮುಖ್ಯವಾಗಿ ಹೊಸ ಶಿಕ್ಷಣ ನೀತಿಯ ಆಶಯಗಳಿಗೆ ಅನುಗುಣವಾಗಿ ಪರಿಷ್ಕರಣೆ ಮಾಡಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡು ಉನ್ನತ ಮಟ್ಟದ ಪಠ್ಯಪುಸ್ತಕ ಸಮಿತಿ ರಚನೆ ಮಾಡಿ ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯಪುಸ್ತಕ ರಚನೆ ಮಾಡಬೇಕು.

2011ರ ಜನಗಣತಿಯ ಪ್ರಕಾರ ಸುಮಾರು 19,568 ಮಾತೃಭಾಷೆಗಳಿವೆ ಎಂದು ಸರ್ಕಾರವೇ ಹೇಳಿದೆ. ಆ ಭಾಷೆಗಳಲ್ಲಿ ಮುಖ್ಯವಾದ ಕೆಲವು ಭಾಷೆಗಳನ್ನಾದರೂ ಉಳಿಸಬೇಕಾದರೆ ಶಿಕ್ಷಣ ಪದ್ದತಿಯಲ್ಲಿ ನಾವು ಬಹಳ ಕೆಲಸ ಮಾಡಬೇಕಾಗಿದೆ. ಈಗ ನಮ್ಮ ಸರ್ಕಾರ ಹೊಸ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುವಾಗ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಪಠ್ಯ ಪರಿಷ್ಕರಣೆ ಮಾಡುವಾಗ ಈ ವಿಷಯವನ್ನು ಎಲ್ಲಿ ಗಮನದಲ್ಲಿ ಇಟ್ಟುಕೊಂಡಿದೆ? ಏನು ತಯಾರಿ ಮಾಡಿಕೊಂಡಿದೆ ? ಈ ಕೆಲಸಕ್ಕೆ ಸರ್ಕಾರವು ತನ್ನ ಜಿಡಿಪಿಯ ಶೇ 6ರಷ್ಟು ಹಣವನ್ನು ಮೀಸಲಿಡಬೇಕು ಎಂದು ಹೊಸ ಶಿಕ್ಷಣ ನೀತಿ ಹೇಳಿದೆ. ಆದರೆ ಈಗ ಸರ್ಕಾರ ಮೀಸಲಿಟ್ಟ ಹಣ ಶೇ 3ಕ್ಕಿಂತ ಹೆಚ್ಚಿಲ್ಲ. ರಾಜ್ಯ ಸರ್ಕಾರಕ್ಕೆ ಅದನ್ನು ಡಬಲ್‌ ಮಾಡಲು ಇನ್ನು ಹತ್ತು ವರ್ಷಗಳಲ್ಲಿಯೂ ಸಾಧ್ಯವಿಲ್ಲ ಎಂದು ನನಗನ್ನಿಸುತ್ತದೆ. ಯಾಕೆಂದರೆ ಈಗಿನ ಸರ್ಕಾರದ ಪ್ರಿಯಾರಿಟಿಗಳು ಬೇರೆಯೇ ಇವೆ. ಅದರ ಬಗ್ಗೆ ಹೆಚ್ಚು ಆಳವಾಗಿ  ಚರ್ಚೆ ಮಾಡಲು ಹೋಗುತ್ತಿಲ್ಲ. ಆದರೆ, ಖಾಸಗಿಯವರ ಮೇಲೆ ಹಾಕಿ ಸುಮ್ಮನೆ ಕುಳಿತುಕೊಳ್ಳುತ್ತದೆ. ಖಾಸಗಿಯವರಿಗೆ ಸುಲಿಗೆ ಮಾಡಲು ಸುಲಭವಾಗಲಿದೆ. ಆಗ ಏನಾಗುತ್ತದೆ ಎಂದರೆ, ದೇಶದ ಶೇ 45ರಷ್ಟು ಬಡ ಮಕ್ಕಳು ಶಿಕ್ಷಣ ಕ್ಷೇತ್ರದಿಂದ ಹೊರಗುಳಿಯುವ ಅಪಾಯವಿದೆ.

ಈಗ  ರಾಜ್ಯ ಸರ್ಕಾರ ಇಟ್ಟ ಹಣ ಜಿಡಿಪಿಯ 3% ಅಷ್ಟೇ. ಅದು ಅಖಿಲಭಾರತ ಮಟ್ಟದಲ್ಲಿ ಕೇವಲ 2%. ಅದನ್ನು ಹೆಚ್ಚಿಸಬೇಕು. ಅದನ್ನು 6% ಗೆ ಏರಿಸಲು ಬಹಳ ಕೆಲಸ ಮಾಡಬೇಕಿದೆ. ಶಿಕ್ಷಣ ಇಲಾಖೆ, ಅಧ್ಯಾಪಕರು, ಬುದ್ಧಿಜೀವಿಗಳು, ಸಾಹಿತಿಗಳು ಸೇರಿ ಅದೊಂದು ಆಂದೋಲನದ ರೀತಿಯಲ್ಲಿ ಆಗಬೇಕಿದೆ. ಹಾಗಾಗಿ ಅಧ್ಯಾಪಕರಿಗೆ ತರಬೇತಿ, ಪಠ್ಯಪುಸ್ತಕಗಳ ಸೂಕ್ತ ಪರಿಷ್ಕರಣೆ ಆಗಬೇಕು. ಸೂಕ್ತ ಪರಿಷ್ಕರಣೆ ಎಂದ ಕೂಡಲೇ ನಾರಾಯಣಗುರುಗಳನ್ನು ತೆಗೆದು ಹೆಡಗೇವಾರ್ ಅವರನ್ನು ಸೇರಿಸುವುದಲ್ಲ. ಯಾರನ್ನೋ ತೆಗೆದ್ರಿ ಮತ್ಯಾರನ್ನೋ ಸೇರಿಸಿದ್ರಿ ಎಂದು ಆರೋಪ ಮಾಡುತ್ತಿಲ್ಲ. ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದೀರಾ? ಅಥವಾ ಕೇವಲ ರಾಜಕೀಯ ಉದ್ದೇಶದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರನ್ನು ಮೆಚ್ಚಿಸಲು ಯಾರನ್ನೋ ಸೇರಿಸಿದ್ದೀರಾ ಅಥವಾ ಯಾರನ್ನೋ ಮೆಚ್ಚಿಸಲು ಇನ್ಯಾರನ್ನೋ ಸೇರಿಸಿದ್ರಾ ಅಂತ ಸರ್ಕಾರ ಸ್ಪಷ್ಟಪಡಿಸಬೇಕು.

ಈಗ ಮಾಡಿದ ಆಯ್ಕೆ ತಪ್ಪಾಗಿದೆ. ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಮುಖ್ಯಮಂತ್ರಿಗಳು ಮತ್ತು ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಮಹನೀಯರು ಗಂಭೀರವಾಗಿ ಪರಿಗಣಿಸಬೇಕು. ಈಗ ಆಗಿರುವುದು ತರಾತುರಿಯಲ್ಲಿ ನಾಲ್ಕೈದು ಜನ ಸೇರಿ ಮಾಡಿರುವುದು. ಮತ್ತು ಅದು ಪೂರ್ವಾಗ್ರಹಪೀಡಿತವಾಗಿದೆ. ಮುಖ್ಯವಾಗಿ ಹೊಸ ಶಿಕ್ಷಣ ನೀತಿಯ ಆಶಯಗಳಿಗೆ ಅನುಗುಣವಾಗಿ ಪರಿಷ್ಕರಣೆ ಮಾಡಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಉನ್ನತ ಮಟ್ಟದ ಪಠ್ಯಪುಸ್ತಕ ಸಮಿತಿ ರಚನೆ ಮಾಡಿ ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಕು. ಅದರಲ್ಲಿ ಪ್ರಮುಖ ಅನೇಕರು ಇರಬೇಕು. ಬರಗೂರು ಅವರ ಸಮಿತಿಯಲ್ಲಿ ಸುಮಾರು 172ಸದಸ್ಯರು ಒಂದೂವರೆ ವರ್ಷ ಅದಕ್ಕಾಗಿ ಕೆಲಸ ಮಾಡಿದ್ದಾರೆ ಎಂಬುದು ಆ ಸಮಿತಿಯ ಪ್ರಜಾಸತ್ತಾತ್ಮಕ ಧೋರಣೆಯನ್ನು ತೋರಿಸುತ್ತದೆ.

ಬಲಪಂಥೀಯರಲ್ಲಿ ಬೇರೆ ವಿದ್ವಾಂಸರಿಲ್ಲವೇ?

ಈಗ ಪಠ್ಯಪರಿಷ್ಕರಣೆ ಮಾಡಿರುವುದರಲ್ಲಿ ಕೇವಲ ಎಂಟು ಜನ ಮಾತ್ರ ಇದ್ದರು. ಅವರೆಲ್ಲರೂ ಒಂದೇ ಧೋರಣೆಯ ಜನ. ಅವರಿಗೆ ಅಲ್ಲಿ ಕೆಲಸ ಏನೂ ಇರಲಿಲ್ಲ. ಪೂರ್ವ ನಿರ್ಧಾರಿತವಾಗಿ ನಡೆದಿದೆ. ಅದನ್ನು ಜಾರಿಗೆ ತರಲು ಸದಸ್ಯರಿಂದ ಒಂದು ಸಹಿ ಪಡೆಯಲಾಗಿದೆಯಷ್ಟೇ. ಪಠ್ಯದ ಬಗ್ಗೆ ಮಹತ್ವದ ಚರ್ಚೆ ನಡೆದಿದೆ ಅನ್ನಿಸುತ್ತಿಲ್ಲ. ಈ ತರಾತುರಿಯ ಸಮಿತಿಯನ್ನು ಬಿಟ್ಟು ಉನ್ನತಮಟ್ಟದ ಸಮಿತಿ ರಚಿಸಬೇಕು. ಈಗ ಬಲಪಂಥೀಯ ಸರ್ಕಾರ ಇದೆ. ಬಲಪಂಥೀಯರಲ್ಲಿಯೇ ಉನ್ನತ ಶಿಕ್ಷಣ, ಪ್ರೌಢಶಿಕ್ಷಣ, ಪ್ರಾಥಮಿಕ ಶಿಕ್ಷಣದ ಬಗ್ಗೆ ಯೋಚನೆ ಮಾಡಬಲ್ಲ ಬಹಳ ದೊಡ್ಡ ವಿದ್ವಾಂಸರಿದ್ದಾರೆ. ನನ್ನ ಸ್ನೇಹಿತ ಚಂದ್ರಶೇಖರ ದಾಮ್ಲೆ ಅವರು 40 ವರ್ಷ ಸಮಾಜಶಾಸ್ತ್ರ ಪಾಠ ಮಾಡಿದ್ದಾರೆ. ಅವರು ನಿವೃತ್ತರಾದ ನಂತರ ʼಸ್ನೇಹʼ ಎಂಬ ಕನ್ನಡ ಶಾಲೆ ನಡೆಸುತ್ತಿದ್ದಾರೆ. ಅವರು ಕೇವಲ ಪಠ್ಯ ಬರೆದವರಲ್ಲ, ಪಾಠ ಮಾಡಿದವರು. ಪ್ರಾಥಮಿಕ ಶಾಲೆಯ ಮಕ್ಕಳ ಅವಶ್ಯಕತೆ ಏನೆಂದು ಅವರಿಗೆ ಅರಿವಿದೆ. ಅಂಥವರ ಅನುಭವವನ್ನು ಸರ್ಕಾರ ಯಾಕೆ ಪಡೆಯುತ್ತಿಲ್ಲ?

ಕೃಷ್ಣಶಾಸ್ತ್ರಿಗಳು ದೆಹಲಿಯ ಸಂಸ್ಕೃತಪೀಠದಲ್ಲಿ ಕೆಲಸ ಮಾಡಿದ್ದಾರೆ. ಮಂಗಳೂರಿನ ಡಾ. ಪ್ರಭಾಕರ ಜೋಷಿ ಅವರು ವೇದ, ವೇದೋಪನಿಷತ್‌, ವೇದಾಂಗ, ಸ್ಮೃತಿ, ಪಂಪ, ರನ್ನ, ಕುಮಾರವ್ಯಾಸ, ರಾಮಾಯಣ, ಮಹಾಭಾರತ ಮುಂತಾದವುಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡಬಲ್ಲ ಕಲಾವಿದರು. ಅವರ ಜೊತೆ ಮಾತನಾಡಿದರೆ ನಮಗೊಂದು ವಿಶ್ವಕೋಶ ಪ್ರವೇಶ ಮಾಡಿದಂತಾಗುತ್ತದೆ. ಅಂಥವರನ್ನು ಕರೆಸಿ ಪಠ್ಯಪುಸ್ತಕ ರಚನೆ ಮಾಡಿಸಲ್ಲ ಯಾಕೆ?

ಇದನ್ನು ಓದಿದ್ದೀರಾ?: ಪಠ್ಯಪುಸ್ತಕದಲ್ಲಿ ವಿಕೃತಿ ಮೆರೆದ ಬ್ರಾಹ್ಮಣ್ಯ: ಡಾ. ಜೆ. ಎಸ್‌. ಪಾಟೀಲ್

ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯಲ್ಲಿ ಕೆಲಸ ಮಾಡಿದ ತೇಜಸ್ವಿ ಕಟ್ಟಿಮನಿ ಅವರು ಹಿಂದಿ ಪಾಠ ಮಾಡಿದರೂ ಕನ್ನಡದ ಬಗ್ಗೆ ಬಹಳ ಪ್ರೀತಿ ಇಟ್ಟುಕೊಂಡವರು. ಮಧ್ಯಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲಯವನ್ನು ಬಹಳ ಅದ್ಭುತವಾಗಿ ಕಟ್ಟಿ ಬೆಳೆಸಿದವರು. ಅವರು ಕನ್ನಡದವರು. ಎನ್‌ಇಪಿಯಲ್ಲಿ ಕೆಲಸ ಮಾಡಿದವರು. 5-3-3-4 ಹಂತಗಳ ಪಠ್ಯಕ್ರಮ ಹೇಗಿರಬೇಕು, ಅದನ್ನು ಹೇಗೆ ಜಾರಿ ಮಾಡಬೇಕೆಂದು ಬರೆದವರು. ಅವರನ್ನೆಲ್ಲ ಕರೆದು ಕೂರಿಸಿ ಒಂದು ಉತ್ತಮ ಪಠ್ಯ‌ ಬರೆಸಬಹುದಲ್ವೇ?.

ಪಠ್ಯದ ಆಯ್ಕೆಯ ಹಿಂದೆ ಒಂದು ರಾಜಕೀಯ ಇದ್ದೇ ಇರುತ್ತದೆ. ಅದನ್ನು ಬಿಟ್ಟು ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ ಪವರ್‌ ಪಾಲಿಟಿಕ್ಸ್  ಬೇರೆ. ಅದರಲ್ಲಿ 40% ಕಮಿಷನ್‌ ಬರುತ್ತದೆ. ಇನ್ಯಾರ ಜೊತೆಗೋ ಜಗಳಾಡುವುದು, ಹೊಡೆದಾಡುವುದು ಇರುತ್ತದೆ. ಅದು ನಮ್ಮ ರಾಜಕಾರಣದ ಭಾಗವಾಗಿದೆ. ಅದಕ್ಕೆ ಯಾರೂ ಹೊರತಲ್ಲ. ಆದರೆ ಕನ್ನಡದ ಮಕ್ಕಳಿಗೆ ಮುಂದಿನ 15-20 ವರ್ಷಗಳ ಮಟ್ಟಿಗೆ  ಓದಬಲ್ಲ, ಉತ್ತಮ ಪಠ್ಯ ತಯಾರಿಸುವ ವಿದ್ವಾಂಸರು ಕನ್ನಡ ನಾಡಿನಲ್ಲಿ ಇದ್ದಾರೆ. ಅಂತವರಿಂದ ಒಂದು ಪಠ್ಯ ತಯಾರಿಸಿದರೆ ನನ್ನಂತವರಿಗೂ ಪಠ್ಯದ ಬಗ್ಗೆ ಮಾತನಾಡಲು ಧೈರ್ಯ ಬರುವುದಿಲ್ಲ. ಅಂಥಹದೊಂದು ಹೊಸ ಪಠ್ಯ ತಯಾರಿಸಿದರೆ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ. ಹಾಗಾಗಿ ಹೊಸ ಶಿಕ್ಷಣ ನೀತಿಯ ಮಾನದಂಡಕ್ಕೆ ಪೂರಕವಾದ ಹೊಸಪಠ್ಯ ತಯಾರಿಸಬೇಕು. ಈಗ ಮಾಡಿದಂತೆ ತರಾತುರಿಯಲ್ಲಿ ಏನೋ ಒಂದು ಮಾಡಿ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ಕರ್ನಾಟಕವನ್ನು ಬದುಕಿಸಿ, ಕರ್ನಾಟಕದ ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿ ಎಂಬುದಷ್ಟೇ ನನ್ನ ಕಳಕಳಿ.

(ಮುಗಿಯಿತು)

ನಿಮಗೆ ಏನು ಅನ್ನಿಸ್ತು?
0 ವೋಟ್