ಸುಳ್ಯದಲ್ಲಿ ವಾರದೊಳಗೆ ಎರಡು ಕೊಲೆ| ಹೆಣ ರಾಜಕಾರಣ ಮಾಡುತ್ತಿದ್ದವರಿಗೆ ಈಗ ಪರೀಕ್ಷೆಯ ಕಾಲ

Praveen Masood

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಿಕ್ಕ ಸಿಕ್ಕ ಹೆಣ ಇಟ್ಟುಕೊಂಡು ರಾಜಕಾರಣ ಮಾಡಿದವರು ಈಗ ಸಂಕಟಕ್ಕೆ ಸಿಲುಕಿದ್ದಾರೆ. ಅದರ ಪರಿಣಾಮವೇ ಬಿಜೆಪಿಯ ಸಿ ಟಿ ರವಿ ಮತ್ತು ರೇಣುಕಾಚಾರ್ಯ ಅವರ ಹೇಳಿಕೆಗಳು. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ರೇಣುಕಾಚಾರ್ಯ ಹೇಳಿದ್ದಾರೆ

ಪಶ್ಚಿಮಘಟ್ಟದ ಬುಡದಲ್ಲಿರುವ ಸುಳ್ಯ ತಾಲ್ಲೂಕು ದಕ್ಷಿಣಕನ್ನಡ ಜಿಲ್ಲೆಗೆ ಸೇರಿದರೂ, ಕರಾವಳಿಯ ಮಂಗಳೂರು ಸುತ್ತಮುತ್ತ ನಡೆಯುತ್ತಿರುವಂತೆ ಕೋಮುಗಲಭೆ, ಹಿಂದೂ-ಮುಸ್ಲಿಂ ಹತ್ಯೆಗಳು ನಡೆದ ಉದಾಹರಣೆ ಇಲ್ಲ. ಅಷ್ಟು ಕೋಮು ಸೂಕ್ಷ್ಮ ಪ್ರದೇಶವಲ್ಲ. ಇಲ್ಲವೇ ಇಲ್ಲ ಎಂದೇನಲ್ಲ. ಸುಳ್ಯ ಒಂದೇ ಒಂದು ಕೋಮುಗಲಭೆಗೆ ಸಾಕ್ಷಿಯಾಗಿದ್ದು 1991ರಲ್ಲಿ. ಆನಂತರ ಅಂತಹ ಘರ್ಷಣೆಗಳು ನಡೆದಿಲ್ಲ.

ಅಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸುಳ್ಯ ಮಾರ್ಗವಾಗಿ ಮೈಸೂರಿಗೆ ಹೊರಟಿದ್ದರು. ಸುಳ್ಯ ಪೇಟೆ ತಲುಪಲು 1 ಕಿಲೋಮೀಟರ್‌ ಇರುವಾಗ 'ಪೈಚಾರು' ಎಂಬ ಊರಿದೆ. ಅಲ್ಲಿ ಮುಸ್ಲಿಂ ಕುಟುಂಬಗಳು ಹೆಚ್ಚು. ಮುಖ್ಯರಸ್ತೆಯ ಬಲಗಡೆಗೆ ಹೊಳೆಯಿದೆ, ಎಡಗಡೆ ಎತ್ತರದ ದಿಬ್ಬ. ರಾತ್ರಿ ಅಲ್ಲಿ ಸ್ವಾಮೀಜಿಯ ಕಾರು ಸಾಗುವಾಗ ಕಾರಿನ ಹಿಂದೆ ಇದ್ದ ಅವರಿಗೆ ಸೇರಿದ್ದ ಮತ್ತೊಂದು ವಾಹನದ ಮೇಲೆ ಕಲ್ಲು ಬಿದ್ದಿದೆ ಎಂಬುದು ಆರೋಪ. ಯಾರಿಗೂ ಕಲ್ಲು ತಗುಲಿಲ್ಲ, ಗಾಜು ಒಡೆದಿಲ್ಲ. ಅಲ್ಲಿಂದ ಮುಂದೆ ಸಾಗಿದ ಸ್ವಾಮೀಜಿಯ ವಾಹನ ಸುಳ್ಯ ಪೇಟೆಯಲ್ಲಿ ಬಿಜೆಪಿ ಕಚೇರಿಯ ಮುಂದೆ ನಿಂತಿತು. ಕಾರಿನ ಚಾಲಕ ಬಿಜೆಪಿ ಅಧ್ಯಕ್ಷರಿಗೆ ಘಟನೆಯ ವಿವರ ತಿಳಿಸಿ ಮೈಸೂರು ಕಡೆ ಹೋಗಿದ್ದಾರೆ. ಇತ್ತ ರಾತ್ರಿಯೇ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದ ಸುಳ್ಯ ತಾಲ್ಲೂಕು ಘಟಕದ ಅಧ್ಯಕ್ಷರು ಮರುದಿನ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ಕೊಡುತ್ತಾರೆ. ಆ ಅಧ್ಯಕ್ಷ ಬೇರಾರೂ ಅಲ್ಲ, ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ.

ಸದಾನಂದ ಗೌಡರು ಆಗ ಸುಳ್ಯದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದರು. ಬಿಜೆಪಿ ತಳಮಟ್ಟದಲ್ಲಿ ಪಕ್ಷ ಕಟ್ಟುವ ಕಾರ್ಯ ಶುರು ಮಾಡಿತ್ತಷ್ಟೇ. ಮರುದಿನ ಬಿಜೆಪಿ ಕಚೇರಿಯಿಂದ ಹೊರಟ ಮೆರವಣಿಗೆ ಸುಳ್ಯ ಪೇಟೆಯ ಕೊನೆಗಿರುವ ಮುಸ್ಲೀಮರ ಅಂಗಡಿಗಳೇ ಹೆಚ್ಚಾಗಿರುವ ಗಾಂಧಿನಗರದ ಕಡೆ ಹೊರಟಿತ್ತು. ಕಾರ್ಯಕರ್ತರ ಸಂಖ್ಯೆ ಐವತ್ತೂ ದಾಟಿರಲಿಲ್ಲ. ಆದರೆ, ಮೆರವಣಿಗೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ಮುಸ್ಲಿಮರ ಅಂಗಡಿಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ದೋಚಿದ್ದರು. ಅದು ಥೇಟ್‌ ಹಗಲು ದರೋಡೆ. ಮೆರವಣಿಗೆ ಮುಗಿಸಿ ಮನೆಗೆ ಹೋಗುವಾಗ ಕಾಲಿನಲ್ಲೂ, ಕೈಯಲ್ಲೂ ಹೊಸ ಚಪ್ಪಲಿ ಹಿಡಿದವರು, ಕಂಕುಳಲ್ಲಿ ಮೂರ್ನಾಲ್ಕು ಗೋಡೆ ಗಡಿಯಾರ, ಜೀನ್ಸ್‌ ಪ್ಯಾಂಟು, ಶರ್ಟು ಹಿಡಿದು ಸಾಗುತ್ತಿದ್ದನ್ನು ನೋಡಿದವರು ಈಗಲೂ ಇದ್ದಾರೆ. ಅಷ್ಟೇ ಅಲ್ಲ ಸಿಕ್ಕ ಸಿಕ್ಕ ಮುಸ್ಲಿಮರನ್ನು ಥಳಿಸಿದ್ರು. ಸಾಕಷ್ಟು ದೋಚಿದ ನಂತರ ಅಂಗಡಿಗಳಿಗೆ ಬೆಂಕಿ ಇಟ್ಟಿದ್ದರು. ಸ್ವಾಮೀಜಿಯ ಕಾರಿಗೆ ಬಿದ್ದ ಒಂದು ಕಲ್ಲಿಗೆ ಸುಳ್ಯ ಭೀಕರ ಕೋಮುಗಲಭೆಯನ್ನು ನೋಡುವಂತಾಯಿತು. ಕಟ್ಟಡವೊಂದರ ಮೊದಲ ಮಹಡಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಮುಸ್ಲಿಂ ಆಟೋ ಚಾಲಕನೊಬ್ಬನನ್ನು ಗಲಭೆಕೋರರು ಎತ್ತಿ ಕೆಳಕ್ಕೆ ಎಸೆದಿದ್ದರು. ಒಂದು ಕಾಲು ಮುರಿದಿದ್ದ ಆತ ಅಂಗವಿಕಲನಾಗಿ ಕೋಮುವಾದಿಗಳ ಕ್ರೂರ ಮನಸ್ಥಿತಿಗೆ ಪುರಾವೆಯಾಗಿ ಸುಳ್ಯದ ಪೇಟೆಯಲ್ಲಿ ಹಲವು ವರ್ಷಗಳವರೆಗೆ ಆಟೋ ಓಡಿಸುತ್ತಿದ್ದ. ಈಗ ಆತ ಇದ್ದಾನೋ ಇಲ್ಲವೋ ಗೊತ್ತಿಲ್ಲ.  

ಅದು ಸುಳ್ಯದಲ್ಲಿ ಬಿಜೆಪಿ ತನ್ನ ಪಕ್ಷ ಸಂಘಟನೆಗೆ ಹಾಕಿದ ಅಡಿಗಲ್ಲು. ಆ ಅಡಿಗಲ್ಲು ಹಾಕಿದವರೇ ಸದಾನಂದ ಗೌಡರು. ಗೌಡರು ಗಲಭೆ ಮಾಡಬೇಡಿ ಎಂದು ಬೇಡಿಕೊಂಡರೂ ಕಾರ್ಯಕರ್ತರು ಕೇಳಲಿಲ್ಲ ಎಂಬುದು ಒಂದು ವಾದ. ಆದರೆ ಅಷ್ಟು ಸಣ್ಣ ವಿಷಯಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿರುವುದು ಕೋಮು ಗಲಭೆಗೆ ಕಾರಣವಾಗಿತ್ತು.  "ಕೋಮು ಗಲಭೆ ನಡೆಸಲೆಂದೇ ಬಿಜೆಪಿ ಕಾರ್ಯಕರ್ತರೇ ಮುಸ್ಲಿಮರಿರುವ ಪ್ರದೇಶದಲ್ಲಿ ಸ್ವಾಮೀಜಿಯ ಕಾರಿಗೆ ಕಲ್ಲು ಎಸೆದಿದ್ದಾರೆ" ಎಂಬ ಒಂದು ವಾದವೂ ಇತ್ತು. ಆಗ ಬಂಗಾರಪ್ಪ ಮುಖ್ಯಮಂತ್ರಿ, ಸುಳ್ಯದಲ್ಲಿ ಶಾಸಕರಾಗಿದ್ದವರು ಕಾಂಗ್ರೆಸ್‌ನ ಸೌಮ್ಯ ನಾಯಕ ಕುಶಲ. ನಂತರ ನಡೆದ ಚುನಾವಣೆಯಲ್ಲಿ ಎಸ್‌. ಅಂಗಾರ ಶಾಸಕರಾಗುತ್ತಾರೆ.  ಇಡೀ ತಾಲ್ಲೂಕಿನಲ್ಲಿ ಕಾಂಗ್ರೆಸ್‌ ಮಾಯವಾಗಿ ಕೇಸರಿಪಡೆ ವಿಜೃಂಭಿಸುತ್ತದೆ. ಆದರೆ, ಅಚ್ಚರಿಯ ಬೆಳವಣಿಗೆ ಎಂದರೆ, ಅಲ್ಲಿಂದ ನಂತರ ಸುಳ್ಯದಲ್ಲಿ ಹಿಂದೂ ಮುಸ್ಲೀಮರು ಕೊಚ್ಚಿ ಕೊಲ್ಲುವಂತಹ ಘಟನೆಗಳು ನಡೆದಿರಲಿಲ್ಲ. ಇತ್ತೀಚೆಗೆ ಕರಾವಳಿಯಲ್ಲಿ ಕೇಳಿಬಂದ ಬಹಿಷ್ಕಾರದ ಅಭಿಯಾನಗಳಿಗೂ ಸುಳ್ಯದ ಜನ ಕಿಮ್ಮತ್ತು ಕೊಟ್ಟಿರಲಿಲ್ಲ. ಆದರೆ ಈಗ ಸುಳ್ಯದ ಚಿತ್ರಣವೇ ಬದಲಾಗುವ ಲಕ್ಷಣ ಕಾಣುತ್ತಿದೆ. 1991ರ ಘಟನೆ ಮತ್ತೆ ಮರುಕಳಿಸದಿದ್ದರೆ ಸಾಕು ಎಂಬ ಆತಂಕ ಶುರುವಾಗಿದೆ.

ಆರೇ ದಿನಗಳಲ್ಲಿ ಎರಡು ಹೆಣ ಬಿತ್ತು
ಕಾಸರಗೋಡಿನ ಮೊಹಮ್ಮದ್‌ ಮಸೂದ್‌ ಸುಳ್ಯದ ಬೆಳ್ಳಾರೆಯ ಸಮೀಪದ ಕಳಂಜದ ಅಜ್ಜಿ ಮನೆಯಲ್ಲಿದ್ದುಕೊಂಡು ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಇದೇ ಜುಲೈ 19ರಂದು ಕಳಂಜದ ಬಸ್‌ ನಿಲ್ದಾಣದ ಬಳಿಯ ಅಂಗಡಿಯಲ್ಲಿ ಜ್ಯೂಸ್‌ ಕೊಳ್ಳುತ್ತಿದ್ದಾಗ ಸುಧೀರ್‌ ಎಂಬ ಯುವಕನಿಗೆ ಮಸೂದನ ಮೈ ತಾಗಿದೆಯಷ್ಟೇ. ಅಷ್ಟಕ್ಕೇ ಜಗಳ  ತೆಗೆದಿದ್ದಾನೆ. ಅದು ಶಮನವಾಗಿ ಮಸೂದ್ ಮನೆ ಸೇರಿದ್ದ. ಆ ದಿನ ರಾತ್ರಿ ಮಸೂದನ ಸಂಬಂಧಿಗೆ ಈ ವಿಷಯ ತಿಳಿಸಿದ ಆರೋಪಿಗಳು ʼಮಸೂದನನ್ನು ಕರೆದುಕೊಂಡು ಬಾ ರಾಜಿ ಮಾಡಿಸೋಣʼ ಎಂದು ಕರೆದಿದ್ದಾರೆ. ರಾತ್ರಿ 11 ಗಂಟೆಗೆ  ಅಲ್ಲಿಗೆ ಹೋದಾಗ ಆರೋಪಿಗಳು ಏಕಾಏಕಿ ಥಳಿಸಿದ್ದಾರೆ. ನಂತರ ಕೆಳಕ್ಕೆ ಬಿದ್ದ ಮಸೂದನ ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಓಡಿದ ಮಸೂದ್‌ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ನಂತರ ಸುಳ್ಯದ ಆಸ್ಪತ್ರೆಯಲ್ಲಿ ಜು 21 ರಂದು ಮೃತಪಟ್ಟಿದ್ದಾನೆ. ಬಂಧಿತರೆಲ್ಲ ಬಜರಂಗದಳ, ಗೋರಕ್ಷಕ್ ನ ಪದಾಧಿಕಾರಿಗಳು. ಶಿವ, ರಂಜಿತ್, ಜಿಮ್‌ ರಂಜಿತ್‌, ಸುಧೀರ್‌, ಅಭಿಲಾಷ್‌, ಸುನಿಲ್‌, ಭಾಸ್ಕರ್, ಸದಾಶಿವ ಒಟ್ಟು  ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಯಾರು ಎಂಬುದು ಸುಸ್ಪಷ್ಟವಾಗಿದ್ದರೂ ಯಾವ ಬಂದ್‌, ಗಲಭೆಯೂ ನಡೆಯಲಿಲ್ಲ. ಮಸೂದನ ಶವ ದಫನಕಾರ್ಯ ಶಾಂತ ರೀತಿಯಲ್ಲಿ ನಡೆಯಿತು.

ಮಸೂದ್‌ ಮಣ್ಣಾಗಿ ಆರು ದಿನವಷ್ಟೇ ಆಗಿತ್ತು. ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿರುವ ಬಜರಂಗದಳದ ಪ್ರವೀಣ್ ನೆಟ್ಟಾರ್ ಯುವಕ ಅಂಗಡಿ ಬಾಗಿಲು ಹಾಕಿ ಮನೆಗೆ ಹೋಗಲು ಅಣಿಯಾಗುತ್ತಿದ್ದಾಗ ಬೈಕಿನಲ್ಲಿ ಬಂದ ಮೂವರು ತಲವಾರಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ. ಆಸ್ಪತ್ರೆ ಸೇರುವ ಮುನ್ನವೇ ಪ್ರವೀಣ್‌ ಪ್ರಾಣ ಹೋಗಿತ್ತು. ಕೊಲೆಗಾರರು ಯಾರೆಂದು ಪತ್ತೆಯಾಗಿಲ್ಲ. ಆದರೆ, ಆಗಲೇ ಆಸ್ಪತ್ರೆ ಮುಂದೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದ್ದಾರೆ. ಸ್ಥಳಕ್ಕೆ ಎ ಸಿ ಬಂದರೂ ಸಮಾಧಾನವಾಗದೇ ಡಿ ಸಿ ಬಂದ ನಂತರ ಪ್ರತಿಭಟನೆ ನಿಲ್ಲಿಸಿದ್ದಾರೆ. ರಾತ್ರಿಯಿಂದಲೇ ಸುಳ್ಯ ತಾಲ್ಲೂಕು ಕೇಂದ್ರ ಮಾತ್ರವಲ್ಲ, ಸಣ್ಣಪುಟ್ಟ ಊರುಗಳ ಬಜಾರುಗಳನ್ನು ಮುಚ್ಚಿಸಿದ್ದಾರೆ, ಪ್ರಮುಖ ವ್ಯಾಪಾರ ಕೇಂದ್ರಗಳಾದ ಬೆಳ್ಳಾರೆ, ಸುಬ್ರಹ್ಮಣ್ಯ, ಪುತ್ತೂರುಗಳಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಕೆಲವರು ಸ್ವಯಂ ಪ್ರೇರಿತರಾಗಿ ಭಯದಿಂದಲೇ ಅಂಗಡಿ ಬಂದ್ ಮಾಡಿದ್ದಾರೆ. ಬಸ್‌ಗಳಿಗೆ ಕಲ್ಲು ತೂರಾಟ, ರಸ್ತೆ ತಡೆ ನಡೆಸಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಡಳಿತ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಹಿಂದೂ ಪರ ಸಂಘಟನೆಗಳಿಗೆ ಇಡೀ ಪ್ರಭುತ್ವ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಅನ್ನಿಸುತ್ತಿದೆ.

ಕೋಮು ರಾಜಕಾರಣಿಗಳಿಗೆ ಸಂಕಷ್ಟ
ಬಿಜೆಪಿ ಕಾರ್ಯಕರ್ತರ ಹೆಣ ಬಿದ್ದ ನಂತರ ತಕ್ಷಣ ರಣಹದ್ದುಗಳಂತೆ ಕಾಣಿಸಿಕೊಳ್ಳುವ ಬಿಜೆಪಿ ನಾಯಕರು ಈ ಸಲವೂ ತಡ ಮಾಡಲಿಲ್ಲ. "ಹಿಜಾಬಿನ ಹಿಂದೆ ಇದ್ದವರು ಈ ಕೊಲೆಯ ಹಿಂದೆ ಇದ್ದಾರೆ" ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಥೇಟ್‌ ಬೇಜವಾಬ್ದಾರಿ ಕಾರ್ಯಕರ್ತನ ರೀತಿ ಹೇಳಿಕೆ ನೀಡಿದ್ದಾರೆ. "ಕೇರಳದಿಂದ ಬಂದವರು ಕೊಲೆ ಮಾಡಿರಬಹುದು. ಅವರಿಗೆ ಸ್ಥಳೀಯರು ಪ್ರವೀಣ್‌ ನ ಮಾಹಿತಿ ಕೊಟ್ಟಿರಬಹುದು. ಈ ಪ್ರಕರಣವನ್ನು ಎನ್‌ಐಎಗೆ ಕೊಡುವಂತೆ ಕೇಂದ್ರ ಗೃಹಸಚಿವರಿಗೆ ಮನವಿ ಮಾಡುತ್ತೇನೆ" ಎಂದು ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಹೇಳಿಕೆಯ ವಿಡಿಯೊ ಹರಿಯಬಿಟ್ಟಿದ್ದಾರೆ.

Image
Shobha

ಕೇಂದ್ರ ಸಚಿವ ಪ್ರಲ್ಲಾದ ಜೋಷಿಯಂತೂ, "ಈ ಕೊಲೆಯ ಹಿಂದೆ ಎಸ್‌ಡಿಪಿಐ, ಪಿಎಫ್‌ಐ ಇದೆ. ಅವರಿಗೆ ಕಾಂಗ್ರೆಸ್‌ನ ಬೆಂಬಲ ನೀಡುತ್ತಿದೆ" ಎಂದು ಹೇಳಿಯಾಗಿದೆ. ಮಂಗಳವಾರ ರಾತ್ರಿ 9 ಗಂಟೆಗೆ ಕೊಲೆ ನಡೆದಿದ್ದರೂ ಜಿಲ್ಲೆಯ ಯಾವೊಬ್ಬ ನಾಯಕರೂ ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂದು ಪ್ರವೀಣ್‌ ಕುಟುಂಬದವರು ಆಸ್ಪತ್ರೆಯ ಬಳಿಯೇ ಆಕ್ರೋಶ ಹೊರ ಹಾಕಿದ್ದರು. ಈಗ ಬಿಜೆಪಿ ಸರ್ಕಾರವೇ ಎರಡೂ ಕಡೆ ಇದೆ. ಕಾರ್ಯಕರ್ತರ ಆಕ್ರೋಶ ಸಹಜವೇ. ಸಂಘಟನೆ ಎಂದು ಯುವಕರನ್ನು ಪ್ರಚೋದಿಸಿ ಬೀದಿಗೆ ಬಿಟ್ಟು ಸತ್ತಾಗ ಬಾರದಿದ್ದರೆ ದಿಕ್ಕಾರ ಕೂಗುವುದು ಅನಿವಾರ್ಯ. ಇಂದು ಸುಳ್ಯದಲ್ಲಿ ಪ್ರವೀಣ್‌ ಶವ ನೋಡಲು ಬಂದಿದ್ದ ಸಂಸದ ನಳಿನ್‌ ಕುಮಾರ್‌ ಮತ್ತು ಪುತ್ತೂರು ಶಾಸಕ ಮಠಂದೂರು, ಸಚಿವರಾದ ಸುನೀಲ್‌ ಕುಮಾರ್‌, ಅಂಗಾರರನ್ನು ಊರೊಳಗೆ ಬಿಟ್ಟಿಲ್ಲ. ದಾರಿಮಧ್ಯೆ ಶವ ನೋಡಿ ಜಾಗ ಖಾಲಿ ಮಾಡಿದ್ದಾರೆ.

ಬದುಕಿದ್ದವರನ್ನು ಸತ್ತವರ ಪಟ್ಟಿಗೆ ಸೇರಿಸಿದ್ದ ಶೋಭಾ

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 24 ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ ಎಂದು ಸಂಸತ್ತಿನಲ್ಲಿ ಪಟ್ಟಿ ಬಿಡುಗಡೆ ಮಾಡಿದ್ದ ಶೋಭಾ, ಬದುಕಿದ್ದ ಕಾರ್ಯಕರ್ತರ ಹೆಸರನ್ನು ಪಟ್ಟಿಗೆ ಸೇರಿಸಿ ಪೇಚಿಗೆ ಸಿಲುಕಿದ್ದರು. ಉತ್ತರಕನ್ನಡದ ಕಾರ್ಮಿಕ ಪರೇಶ್‌ ಮೇಸ್ತನ ಸಾವನ್ನು ಕೊಲೆ ಎಂದು ಬಿಂಬಿಸಿ ಹೋರಾಟ ಮಾಡಿದ್ದ ಶೋಭಾ ಅಂಡ್‌ ಟೀಂ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಲ್ಲಿ ಸಫಲರಾಗಿದ್ದರು. ಆದರೆ, ನಂತರ ಬಂದ ಬಿಜೆಪಿ ಸರ್ಕಾರ ವರದಿ ಬಹಿರಂಗಪಡಿಸಿಲ್ಲ. ವರದಿಯಲ್ಲಿ ಏನಿದೆ ಯಾರಿಗೂ ಗೊತ್ತಿಲ್ಲ. ಈಗ ಪರೇಶ್‌ ಮೇಸ್ತನ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂಬುದಕ್ಕೆ ʼಹೆಣರಾಜಕಾರಣʼವೇ ಉತ್ತರ. ದೀಪಕ್‌ ರಾವ್‌ ಕೊಲೆ ಪಾತಕಿಗಳು ಏನಾದರು? ಅದರ ತನಿಖೆ ಏನಾಯ್ತು? ಶಿಕ್ಷೆ ಕೊಡಿಸಿ ಕುಟುಂಬಕ್ಕೆ ನ್ಯಾಯ ಒದಗಿಸಲು ಯಾಕೆ ಉತ್ಸಾಹ ಇಲ್ಲ?

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಿಕ್ಕ ಸಿಕ್ಕ ಹೆಣ ಇಟ್ಟುಕೊಂಡು ರಾಜಕಾರಣ ಮಾಡಿದವರು ಈಗ ಸಂಕಟಕ್ಕೆ ಸಿಕ್ಕಿದ್ದಾರೆ. ಇದರ ಪರಿಣಾಮವೇ ಇವತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ಮತ್ತು ರೇಣುಕಾಚಾರ್ಯ ಅವರ ಹೇಳಿಕೆಗಳು. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ರೇಣುಕಾಚಾರ್ಯ ಹೇಳಿದರೆ, "ಕೇಂದ್ರ ರಾಜ್ಯ ಎರಡೂ ಕಡೆ ನಮ್ಮದೇ ಸರ್ಕಾರ ಇದ್ದೂ ಏನೂ ಮಾಡಲಾರದ ಸ್ಥಿತಿ ನಿರ್ಮಾಣವಾಗಿದೆ" ಎಂದು ಹತಾಶೆಯ ಮಾತನ್ನಾಡಿದ್ದಾರೆ. ಮಾಧ್ಯಮಗಳೂ ಅಷ್ಟೇ ಹಿಂದೂ ಕಾರ್ಯಕರ್ತರಿಂದ ಮುಸ್ಲಿಂ, ದಲಿತರ ಕೊಲೆಯಾದಾಗ ಬಿಜೆಪಿ ನಾಯಕರ ಹೇಳಿಕೆ ಪಡೆಯಲು ನಿರಾಸಕ್ತಿ ತೋರುತ್ತವೆ. ಮುಸ್ಲಿಮರಿಂದ ಹಿಂದೂಗಳ ಕೊಲೆಯಾದಾಗ  ಶೋಭಾ ಕರಂದ್ಲಾಜೆ, ಸಿ ಟಿ ರವಿ, ಪ್ರಮೋದ್‌ ಮುತಾಲಿಕರ ಮುಂದೆ ಮೈಕ್‌ ಹಿಡಿದು ನಿಲ್ಲುತ್ತವೆ.

ದೀಪಕ್‌ ರಾವ್‌ ಕೊಲೆಗೆ ಸಾಮ್ಯತೆ!
ಸಿದ್ದರಾಮಯ್ಯ ಸರ್ಕಾರದ ಅವರ ಅವಧಿ ಮುಗಿಯಲು ಕೇವಲ ಎರಡು ವರ್ಷ ಬಾಕಿ ಇದ್ದಾಗ ಮಂಗಳೂರಿನಲ್ಲಿ ನಡೆದ ದೀಪಕ್‌ ರಾವ್‌ ಹತ್ಯೆ ನೆನಪಿಸಿಕೊಳ್ಳಿ. ಆತ ಬಿಜೆಪಿ ಕಾರ್ಯಕರ್ತ, ಆದರೆ ಕ್ರಿಮಿನಲ್‌ ಆಗಿರಲಿಲ್ಲ. ಆತನ ಕೊಲೆ ಮಾಡಿದವರು ಮುಸ್ಲಿಮರಾಗಿದ್ದರೂ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ನಂಟಿದ್ದವರು. ಅದೇ ದಿನ ಆರೋಪಿಗಳ ಬಂಧನವಾಗಿತ್ತು. ಆದರೆ ಅದೇ ದಿನ ರಾತ್ರಿ ಅಮಾಯಕ ಮುಸ್ಲಿಂ ಹೊಟೇಲ್‌ ಮಾಲೀಕನನ್ನು ಹಿಂದೂ ಕಾರ್ಯಕರ್ತರು ಕೊಚ್ಚಿ ಹಾಕಿದ್ದರು. "ಒಂದು ಹಿಂದೂ ಹೆಣಕ್ಕೆ ಒಂದು ಮುಸ್ಲಿಂ ಹೆಣ" ಬೀಳಬೇಕಿತ್ತು ಬಿತ್ತು. ಸುಳ್ಯದಲ್ಲಿ ನಡೆದ ಮಸೂದ್‌ ಹತ್ಯೆಗೆ ಪ್ರತೀಕಾರವಾಗಿ ಪ್ರವೀಣನ ಹತ್ಯೆ ಆಗಿದ್ದರೆ, ಇದೂ ಅದೇ ತರ "ಒಂದು ಮುಸ್ಲಿಂ ಹೆಣಕ್ಕೆ ಒಂದು ಹಿಂದೂ ಹೆಣ" ಅಷ್ಟೇ. ಹೀಗೇ ಆದರೆ ಕೊನೆ ಹೇಗೆ?

ಇದನ್ನು ಓದಿದ್ದೀರಾ? ಹಿಂದೂ ಕಾರ್ಯಕರ್ತರ ಹತ್ಯೆಗೆ ನ್ಯಾಯ ಸಿಗದಿದ್ದರೆ ರಾಜೀನಾಮೆ; ಸ್ವಪಕ್ಷದ ಸರ್ಕಾರಕ್ಕೇ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

ಮುಸ್ಲಿಮರಿಂದ ಕೊಲೆಯಾದರೆ ಮಾತ್ರ ಪರಿಹಾರವೇ?
ಅಂದು ದೀಪಕ್‌ ರಾವ್‌ ಕುಟುಂಬಕ್ಕೆ ಸಿದ್ದರಾಮಯ್ಯ ಸರ್ಕಾರ ರೂ 10 ಲಕ್ಷ ಪರಿಹಾರ ಕೊಟ್ಟಿತ್ತು. ಬಿಜೆಪಿಯವರು ಸಂಗ್ರಹಿಸಿದ ದೇಣಿಗೆ ರೂ 50 ಲಕ್ಷದಷ್ಟು, ಆರು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಕುಟುಂಬಕ್ಕೆ ಬೊಮ್ಮಾಯಿ ಸರ್ಕಾರ ರೂ 25 ಲಕ್ಷ ಪರಿಹಾರ ಕೊಟ್ಟಿದೆ. ಇನ್ನು ಬಿಜೆಪಿ ನಾಯಕರು, ಶಾಸಕರು, ಸಚಿವರು, ಸ್ವಾಮೀಜಿಗಳು ನೀಡಿದ ಚೆಕ್‌ಗಳ ಒಟ್ಟು ಮೊತ್ತ ಸುಮಾರು ಮೂರು ಕೋಟಿ! ಈಗ ಪ್ರವೀಣನ ಕುಟುಂಬಕ್ಕೂ ಲಕ್ಷಾಂತರ ದೇಣಿಗೆ ಸಂಗ್ರಹವಾಗಬಹುದು, ಸರ್ಕಾರವೂ ಪರಿಹಾರ ಕೊಡಬಹುದು. ಆದರೆ, ಕೊಲೆಯಾದ ಮಸೂದನ ಕುಟುಂಬಕ್ಕೆ ಪರಿಹಾರ ಕೊಡುವವರಾರು? ಹಿಂದುತ್ವದ ಕಾರ್ಯಕರ್ತರಿಂದ ಕೊಲೆಯಾದ ನರಗುಂದದ ಅಮಾಯಕ ಮುಸ್ಲಿಂ ಯುವಕನಿಗೆ, ಧರ್ಮಸ್ಥಳದ ದಲಿತ ದಿನೇಶ್‌ಗೆ ಸರ್ಕಾರ ಏನು ಕೊಟ್ಟಿದೆ? ‌

ʼಸಂಘಟನೆಗೆ ಸೇರಿ ಕೊನೆಗೆ ಕೊಲೆಯಾದರೆ ಕನಿಷ್ಠಪಕ್ಷ ಕುಟುಂಬಕ್ಕೆ ಒಂದಷ್ಟು ಹಣ ಸಿಗುತ್ತದೆʼ,  ಎಂಬ ಮನಸ್ಥಿತಿಗೆ ಕಾರ್ಯಕರ್ತರು ಬಂದರೆ ಅದರಷ್ಟು ಅಪಾಯಕಾರಿ ನಡೆ ಬೇರೆ ಇರಲಾರದು. ಹರ್ಷನ ಕೊಲೆಯಾದಾಗ ಆತನ ಸಹೋದರಿಯ ಮೊದಲ ಹೇಳಿಕೆ, "ಸಂಘಟನೆ ಅಂತ ಹೋಗಿ ಈ ರೀತಿ ನನ್ನ ತಮ್ಮ ಸತ್ತ, ದಯವಿಟ್ಟು ಎಲ್ಲ ಯುವಕರಿಗೂ ಕೇಳಿಕೊಳ್ಳುವುದಿಷ್ಟೇ, ಮನೆಗೆ ಒಳ್ಳೆಯ ಮಕ್ಕಳಾಗಿ. ಸಂಘಟನೆ ಅಂತ ಹೋಗಬೇಡಿ" ಎಂದಾಗಿತ್ತು. ಇಂದು ಸುಳ್ಯದಲ್ಲೂ ಒಬ್ಬ ಹಿರಿಯರು ಇದೇ ಮಾತನ್ನು ಪುನರುಚ್ಛರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
3 ವೋಟ್