ಸುದ್ದಿ ಪ್ಲಸ್ | ಕೇವಲ ರಫ್ತು ಹೆಚ್ಚಾದರೆ ಸಾಕೇ?

PM Modi

ಭಾರತದ ವಹಿವಾಟು ಕುರಿತು ಮಾತನಾಡುತ್ತ ಪ್ರಧಾನಿಯವರು ರಫ್ತಿನ ಬಗ್ಗೆಯಷ್ಟೇ ಹೇಳಿದ್ದಾರೆ. ಆಮದು ಮತ್ತು ವ್ಯಾಪಾರ ಕೊರತೆ ವಿಪರೀತ ಏರಿಕೆ ಆಗಿರುವ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಆಮದು ಭಾರೀ ಏರಿಕೆ ಕಂಡಿದೆ. ಅಷ್ಟೇ ಅಲ್ಲ, ಆಮದಿನ ಒಟ್ಟು ಮೊತ್ತವು ಸಾರ್ವತ್ರಿಕ ದಾಖಲೆಯನ್ನೂ ಮುಟ್ಟಿದೆ!

"ದೇಶದ ರಫ್ತಿನ ಪ್ರಮಾಣದಲ್ಲಿ ಭಾರತ ಹೊಸ ಮೈಲುಗಲ್ಲು ಸಾಧಿಸಿದೆ," ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 23ರಂದು ಟ್ವೀಟ್ ಮಾಡಿದ್ದರು. 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ರಫ್ತು ವಹಿವಾಟಿನ ಮೊತ್ತವು 40.38 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟಾಗಿತ್ತು ಎಂದು ಅವರು ಟ್ವೀಟಿನಲ್ಲಿ ಹೇಳಿದ್ದಾರೆ. ಇದು ನಿಜ. ಆದರೆ, ಒಂದು ದೇಶದ ಆರ್ಥಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಆ ದೇಶದ ರಫ್ತನ್ನು ಮಾತ್ರ ನೋಡಿದರೆ ಸಾಲದು. ಆಮದನ್ನೂ ಗಮನಿಸಬೇಕು.

ರಫ್ತು ಆಮದಿಗಿಂತ ಹೆಚ್ಚಿದ್ದರೆ ಅದು ಒಳ್ಳೆಯ ಸೂಚನೆ ಅನ್ನಬಹುದು. ಅಲ್ಲೂ ನಾವು ಯಾವುದನ್ನು ಆಮದನ್ನು ಮಾಡಿಕೊಳ್ಳುತ್ತೇವೆ. ಯಾವುದನ್ನು ರಫ್ತು ಮಾಡುತ್ತೇವೆ. ಯಾವ ದರದಲ್ಲಿ ವಹಿವಾಟು ನಡೆಯುತ್ತದೆ ಎಂಬುದನ್ನೂ ಗಮನಿಸಬೇಕಾಗುತ್ತದೆ. ಇರಲಿ, ಅವೆಲ್ಲವನ್ನು ಬದಿಗಿಟ್ಟು ಕೇವಲ ಆಮದು, ರಫ್ತನ್ನು ನೋಡಿದರೂ ಭಾರತ ಸಂತೋಷಪಡುವ ಸ್ಥಿತಿಯಲ್ಲೇನೂ ಇಲ್ಲ.

ವಾಣಿಜ್ಯ ಮಂತ್ರಾಲಯ ಮಾರ್ಚ್ ತಿಂಗಳಿಗೆ ಸಂಬಂಧಿಸಿದಂತೆ ಮೊನ್ನೆ ಸೋಮವಾರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.  2022ನೇ ಆರ್ಥಿಕ ವರ್ಷದಲ್ಲಿ ಭಾರತ 610.2 ಬಿಲಿಯನ್ ಡಾಲರ್ ಪ್ರಮಾಣದ ಸರಕನ್ನು ಆಮದು ಮಾಡಿಕೊಂಡಿತ್ತು. ಇದೂ ಕೂಡ ದಾಖಲೆಯ ಪ್ರಮಾಣ ಅನ್ನುವುದನ್ನು ಗಮನಿಸಬೇಕು. ಇದು ಈವರೆಗಿನ ಗರಿಷ್ಠ ಮೊತ್ತ. ಕಳೆದ ವರ್ಷಕ್ಕೆ ಹೋಲಿಸಿದರೆ ನಮ್ಮ ಆಮದಿನ ಪ್ರಮಾಣ ಶೇಕಡ 54.7ರಷ್ಟು ಹೆಚ್ಚಾಗಿದೆ. ಕೋವಿಡ್‌ಪೂರ್ವ ಅವಧಿಗೆ ಹೋಲಿಸಿದರೆ ಶೇಕಡ 28.6ರಷ್ಟು ಹೆಚ್ಚಾಗಿದೆ.

Image
Nirmala Sitharaman
ಒಕ್ಕೂಟ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಮಾರ್ಚ್ ತಿಂಗಳಿನಲ್ಲಿ ಒಟ್ಟಾರೆ ಆಮದಿನ ಪ್ರಮಾಣ 59.07 ಬಿಲಿಯನ್ ಡಾಲರ್‌ಗಳಷ್ಟಾಗಿತ್ತು. ಅಂದರೆ, ಕಳೆದ ವರ್ಷಕ್ಕಿಂತ ಶೇಕಡ 20.8ರಷ್ಟು ಹೆಚ್ಚಾಗಿತ್ತು. ಎರಡು ವರ್ಷದ ಹಿಂದಕ್ಕೆ ಹೋಲಿಸಿದರೆ ಅದು ಶೇಕಡ 87.7ರಷ್ಟು ಹೆಚ್ಚು. ಆ ತಿಂಗಳಿನಲ್ಲಿ ಆದ ರಫ್ತು 40.38 ಬಿಲಿಯನ್ನಿನಷ್ಟು ಆಗಿತ್ತು. ಅಂದರೆ, ವ್ಯಾಪಾರ ಕೊರತೆ 18.29 ಬಿಲಿಯನ್ ಡಾಲರ್ ಅಷ್ಟಾಗಿತ್ತು.

2021-22ರಲ್ಲಿ ಭಾರತ ಸುಮಾರು 418 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿತ್ತು. ಹಾಗಾಗಿ, ಆ ವರ್ಷದ ಒಟ್ಟಾರೆ ವ್ಯಾಪಾರದ ಕೊರತೆ 192.4 ಬಿಲಿಯನ್ ಡಾಲರ್‌ಗಳಷ್ಟಿತ್ತು. ಅಂದರೆ, ೨೦೨೧ಕ್ಕೆ ಹೋಲಿಸಿದರೆ, ವ್ಯಾಪಾರದ ಕೊರತೆ ಶೇಕಡ 87.5ರಷ್ಟು ಹೆಚ್ಚಾಗಿತ್ತು. ಪಿಡುಗಿನ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 19.3ರಷ್ಟು ಹೆಚ್ಚಿದೆ. ಅಂದರೆ, ಉದ್ಕಕ್ಕೂ ರಫ್ತಿಗಿಂತ ಆಮದು ಹೆಚ್ಚಾಗುತ್ತಲೇ ಇದೆ.

ಮೋದಿ ಅವರು ಭಾರತದ ವಹಿವಾಟನ್ನು ಕುರಿತು ಘೋಷಿಸುವಾಗ, ರಫ್ತಿಗೆ ಸಂಬಂಧಿಸಿದ ದತ್ತಾಂಶವನ್ನು ಮಾತ್ರ ಉಲ್ಲೇಖಿಸಿದ್ದಾರೆ. ಆಮದು ಮತ್ತು ವ್ಯಾಪಾರ ಕೊರತೆ ವಿಪರೀತ ಏರಿಕೆಯಾಗಿರುವುದರ ಮಾಹಿತಿಯನ್ನು ಅವರು ತಮ್ಮದೇ ಆದ ಕಾರಣಗಳಿಂದಾಗಿ ಬಹಿರಂಗಪಡಿಸಿಲ್ಲ. ಸರ್ಕಾರವೇ ತಿಳಿಸಿರುವ ಅಂಕಿ-ಅಂಶಗಳನ್ನು ಗಮನಿಸಿದರೆ, 2021-22ರಲ್ಲಿ ದೇಶದ ಆಮದು ವಹಿವಾಟಿನ ಮೊತ್ತವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದು ತಿಳಿದುಬರುತ್ತದೆ. ಅಷ್ಟೇ ಅಲ್ಲ, ಆಮದಿನ ಒಟ್ಟು ಮೊತ್ತವು ಸಾರ್ವತ್ರಿಕ ದಾಖಲೆಯನ್ನು ಮುಟ್ಟಿದೆ. ಹಾಗಾಗಿ, ವ್ಯಾಪಾರದ ಕೊರತೆ (ಅಂದರೆ, ಆಮದು ಮತ್ತು ರಫ್ತು ನಡುವಿನ ವ್ಯತ್ಯಾಸ) ಕೂಡ ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿರುವುದು ತಿಳಿದುಬರುತ್ತದೆ. ಹಾಗಾಗಿ, “ರಫ್ತು ವಹಿವಾಟಿನಲ್ಲಿ ಆಗಿರುವ ಏರಿಕೆಯು, ದೇಶದ ಆರ್ಥಿಕ ಪ್ರಾಬಲ್ಯವನ್ನು ಸೂಚಿಸುತ್ತದೆ,” ಎನ್ನುವ ಮಾತನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಅದು ಆಮದನ್ನು ಮೀರಿ ಬೆಳೆದಿದ್ದರೆ ಮಾತ್ರ ಆ ಮಾತಿಗೆ ಒಂದಿಷ್ಟು ಬೆಲೆ ಬರುತ್ತಿತ್ತು.

ಇದನ್ನು ಓದಿದ್ದೀರಾ?: ಅರ್ಥ ಪಥ | ಬೆಲೆ ಏರುತ್ತಲೇ ಇದ್ದರೂ ಸರ್ಕಾರ ಸುಮ್ಮನಿರುವುದಕ್ಕೆ ಕಾರಣಗಳಿವೆ

ಜೊತೆಗೆ, ಮತ್ತೊಂದು ಕಳವಳದ ಅಂಶವೆಂದರೆ, ವಾಣಿಜ್ಯ ವಹಿವಾಟಿನ ಬೆಳವಣಿಗೆಯ ಸ್ಥಿತಿಯಲ್ಲಿ ಸ್ಥಿರತೆ ಇಲ್ಲ. ಕೆಲವೊಮ್ಮೆ ಅದು ಋಣಾತ್ಮಕವಾಗಿಯೂ ಇದೆ. ಈ ಬಗ್ಗೆ ನಮ್ಮ ಆರ್ಥಿಕ ತಜ್ಞರು, ನೀತಿ ರೂಪಿಸುವವರು ಗಮನ ಹರಿಸಬೇಕು. ನಮ್ಮ ಮಕ್ಕಳಿಗೆ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಭಾರತವನ್ನು ಬಿಟ್ಟುಹೋಗುವ ನೈತಿಕ ಹೊಣೆ ನಮ್ಮ ಮೇಲಿದೆ. ನಮ್ಮ ದೇಶದ ಸಂಪತ್ತನ್ನು  ಹೆಚ್ಚಿಸುವುದಕ್ಕೆ ನಮಗೆ ಸಾಧ್ಯವಾಗದಿದ್ದರೆ ಬೇಡ, ನಮ್ಮ ಹಿರಿಯರು ಮಾಡಿಟ್ಟ ಆಸ್ತಿಯನ್ನು ಮಾರಿಕೊಂಡು ಜೀವನ ನಡೆಸಿ, ಮುಂದಿನ ಪೀಳಿಗೆಯವರನ್ನು ಭಿಕ್ಷೆಗೆ ನಿಲ್ಲಿಸುವುದು ಬೇಡ.

ನಿಮಗೆ ಏನು ಅನ್ನಿಸ್ತು?
1 ವೋಟ್