ಸ್ಮರಣೆ | ʼರಾಚಯ್ಯನವರು ಮುಖ್ಯಮಂತ್ರಿಯಾಗಬೇಕು ಎಂದು ಲಂಕೇಶ್‌ ಬಯಸಿದ್ದರುʼ

ಬಿ ರಾಚಯ್ಯ

ರಾಚಯ್ಯನವರು ಅತ್ಯಂತ ಸಜ್ಜನರು, ದಕ್ಷರು, ಪ್ರಾಮಾಣಿಕರು, ಯಾವುದೇ ಅಬ್ಬರವಿಲ್ಲದೆ ರಾಜಕಾರಣ ಮಾಡಬಹುದಾದ ಮುತ್ಸದ್ದಿ , ಮಾನವೀಯತೆಯ ಸಾಕಾರಮೂರ್ತಿ. ನಿಜಕ್ಕೂ ಈ ರಾಜ್ಯಕ್ಕೆ ರಾಚಯ್ಯನವರಂತ ಮುಖ್ಯಮಂತ್ರಿಯ ಅವಶ್ಯಕತೆ ಇದೆ. ಆದರೆ ಈ ಜಾತಿಗ್ರಸ್ತ, ಭ್ರಷ್ಟ ರಾಜಕಾರಣದಲ್ಲಿ ಅವರನ್ನು ಹೇಗೆ ಮುಖ್ಯಮಂತ್ರಿ ಮಾಡುತ್ತಾರೆ ಎಂದಿದ್ದರು ಲಂಕೇಶ್‌

ನಾನು ʼಲಂಕೇಶ್ ಪತ್ರಿಕೆʼಯ ವಿಶೇಷ ವರದಿಗಾರನಾಗಿ ಕೆಲಸ ಮಾಡುತಿದ್ದೆ, ಆಗ ನಮ್ಮ ಪತ್ರಿಕಾ ಕಚೇರಿಯಲ್ಲಿ ಒಬ್ಬ ಹೆಣ್ಣುಮಗಳು ಅಚ್ಚು ತಿದ್ದುವ ಕೆಲಸ ಮಾಡುತಿದ್ದಳು. ಆಕೆ ತನ್ನ ತಾಯಿಯೊಂದಿಗೆ ಬಸವನಗುಡಿಯ ಮಾರ್ವಾಡಿಯೊಬ್ಬರ ಔಟ್‌ಹೌಸ್ ನಲ್ಲಿ ಬಾಡಿಗೆಗಿದ್ದಳು. ಆ ಮನೆ ಮಾಲೀಕ ಮಾರ್ವಾಡಿ ಆ ಭಾಗದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ. ಬಸವನಗುಡಿಯ ಪೊಲೀಸ್ ಠಾಣೆಯ ಪೇದೆಗಳಿಂದ ಹಿಡಿದು ಸರ್ಕಲ್ ಇನ್‌ಸ್ಪೆಕ್ಟರ್‌ವರೆಗೂ ಠಾಣೆಯಲ್ಲಿ ಪ್ರತಿಯೊಬ್ಬರೂ ಈತನಿಗೆ ಅಪಾರ ಗೌರವ ತೋರುತ್ತಿದ್ದರು.

ಈ ಎಲ್ಲಾ ಪ್ರಭಾವದಿಂದಾಗಿ ಆ ಮಾರ್ವಾಡಿ ಇದ್ದಕ್ಕಿದ್ದಂತೆ ಆ ಹೆಣ್ಣುಮಗಳಿರುವ ಬಾಡಿಗೆ ಮನೆಯನ್ನು ಖಾಲಿ ಮಾಡಿಸಲು ತೀರ್ಮಾನಿಸಿ ಇದ್ದಕ್ಕಿದ್ದಂತೆ  ಅವರ ಪಾತ್ರೆಪಗಡೆ, ಬಟ್ಟೆಬರೆಯೊಂದಿಗೆ ಎಲ್ಲವನ್ನೂ ಬೀದಿಗೆಸೆದು ಆ ಹೆಣ್ಣುಮಗಳು ಮತ್ತು ಆಕೆಯ ವಯಸ್ಸಾದ ತಾಯಿಯನ್ನು ಹೊರಕ್ಕೆ ದಬ್ಬಿ ಬೀಗ ಹಾಕಿದ! ಬಾಡಿಗೆದಾರರಿಗೆ ಒಂದು ಮುನ್ಸೂಚನೆಯನ್ನು ಕೊಡದೆ ಹೊರದಬ್ಬಿದ ಪರಿಣಾಮ ತಾಯಿ-ಮಗಳು ಏನೂ ಮಾಡಲು ದಿಕ್ಕುತೋಚದೆ ಅಸಹಾಯಕರಾಗಿ ಗೊಳೋ ಎಂದು ಅಳುತ್ತಾ ದಿಕ್ಕಾಪಾಲಾದರು. ಲಂಕೇಶ್ ಅವರಿಗೆ ವಿಷಯ ತಿಳಿದು, ವರದಿಗಾರ ಮತ್ತು ವಕೀಲನೂ ಆಗಿದ್ದ ನನ್ನನ್ನು ಕರೆಸಿ ಆ ಮಾರ್ವಾಡಿಯ ಮೇಲೆ ದೂರು ನೀಡಿ ಆ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡಿಸಲು ಬಸವನಗುಡಿ ಪೊಲೀಸ್ ಠಾಣೆಗೆ ಕಳಿಸಿದರು. ನಾನು ಆ ಅಸಹಾಯಕ ಹೆಂಗಸರನ್ನು ಕರೆದುಕೊಂಡು ಬಸವನಗುಡಿ ಪೊಲೀಸ್ ಠಾಣೆಗೆ ಹೋದೆ.

ಅಲ್ಲಿದ್ದ ಸರ್ಕಲ್ ಇನ್‌ಸ್ಪೆಕ್ಟರ್‌ ಗೆ ಇವರ ಸಮಸ್ಯೆಯನ್ನು ವಿವರವಾಗಿ ಹೇಳಿ "ಕಾನೂನು ಪ್ರಕಾರ ಬಾಡಿಗೆದಾರರಿಗೆ ಖಾಲಿ ಮಾಡಲು ಕನಿಷ್ಟ ಸಮಯಾವಕಾಶ ನೀಡಬೇಕು.. ಇದ್ದಕಿದ್ದಂತೆ ಈ ರೀತಿ ಬಲ ಉಪಯೋಗಿಸಿ ಪಾತ್ರೆಪಗಡ ಬೀದಿಗೆ ಎಸೆಯಬಾರದು.. ಅದರಲ್ಲೂ ಅವರು ಅಸಹಾಯಕ ಮಹಿಳೆಯರಾಗಿದ್ದಾರೆ.. ಅವರಿಗೆ ಆದ ಅನ್ಯಾಯಕ್ಕೆ ಅವರ ದೂರನ್ನು ದಾಖಲಿಸಿಕೊಂಡು ತಪ್ಪಿತಸ್ಥನಾದ ಮಾರ್ವಾಡಿಯ ವಿರುದ್ದ ಕಾನೂನು ಕ್ರಮ ಜರಗಿಸಬೇಕು.." ಅಂತ ಹೇಳುತ್ತಿದ್ದರೆ ಆ ಸರ್ಕಲ್ ಇನ್‌ಸ್ಪೆಕ್ಟರ್‌ ಕೇಳಿಸಿಕೊಳ್ಳಲೇ ಇಲ್ಲ! ಮಾರ್ವಾಡಿಗೆ ಆಪ್ತನಾಗಿದ್ದ ಆತ ನಮ್ಮ ಮೇಲೆಯೇ ಜೋರು ಮಾಡಲು ಆರಂಭಿಸಿದ. ಅಷ್ಟರಲ್ಲಿ ಠಾಣೆಯಲ್ಲಿನ ಪೊಲೀಸರು ವಿಷಯ ಮುಟ್ಟಿಸಿದ್ದರಿಂದ ಮಾರ್ವಾಡಿಯೂ ಠಾಣೆಗೆ ಬಂದ. ಠಾಣೆಯಲ್ಲಿ ಅವನಿಗೆ ರಾಜಮರ್ಯಾದೆ! ಅವನನ್ನು ಕುರ್ಚಿಯಲ್ಲಿ ಕೂರಿಸಿ, ನಿಂತಿದ್ದ ನಮ್ಮನ್ನು ಅತ್ಯಂತ ನಿಕೃಷ್ಟವಾಗಿ ನೋಡುತ್ತಾ "ಒಳ್ಳೇ ಮಾತಿನಲ್ಲಿ ಇಲ್ಲಿಂದ ಹೋಗಿ.. ಇಲ್ಲದಿದ್ದಲ್ಲಿ ನಿಮ್ಮ ಮೇಲೆಯೇ ಕೇಸ್ ಬುಕ್ ಮಾಡಿ ಒಳಗೆ ಹಾಕುತ್ತೇನೆ.." ಎಂದು ಸರ್ಕಲ್ ಇನ್‌ಸ್ಪೆಕ್ಟರ್‌ ಹೆದರಿಸಿದ. ಆ ಹೆಣ್ಣುಮಕ್ಕಳಂತೂ ಗಡಗಡ ನಡುಗುತ್ತಾ ಚಿಂತಾಕ್ರಾಂತರಾಗಿ ಅಳತೊಡಗಿದರು. ನಾನೂ ಅಸಹಾಯಕನಾಗಿದ್ದೆ. ಆ ಸರ್ಕಲ್ ಇನ್‌ಸ್ಪೆಕ್ಟರ್‌ ತೀರಾ ದರ್ಪ ಮತ್ತು ಅಹಂಕಾರದಿಂದ ಮಾತಾಡುತ್ತಿದ್ದ. ಅತ್ಯಂತ ಕೆಟ್ಟ ಭಾಷೆ ಬಳಸುತ್ತಿದ್ದ. ಆ ಮಾರ್ವಾಡಿ ಆಗಾಗ ಆ ಠಾಣೆಯಲ್ಲಿರುವವರಿಗೆ ಹಣ ನೀಡುತ್ತಿದ್ದನಲ್ಲದೆ ಹಬ್ಬ ಹರಿದಿನಗಳಿಗೆ, ಬಟ್ಟೆ, ಪಟಾಕಿ, ಸ್ವೀಟ್ ಬಾಕ್ಸ್ ನಂತಹ ಗಿಫ್ಟ್ ಗಳನ್ನು ನೀಡುತಿದ್ದ. ಆದ್ದರಿಂದ ಎಲ್ಲರೂ ಆ ಮಾರ್ವಾಡಿಗೆ ಗೌರವ ಕೊಟ್ಟು, ಇಡೀ ಠಾಣೆ ನಮ್ಮ ಮೇಲೆ ಮುಗಿಬಿತ್ತು!

ನಮಗೆ ದಿಕ್ಕು ತೋಚದೆ ನಾವು ಪತ್ರಿಕೆ ಕಚೇರಿಗೆ ವಾಪಸ್ಸು ಹೋಗಿ ನಮ್ಮ ಸಂಪಾದಕರಾದ ಲಂಕೇಶ್ ಅವರಿಗೆ ವಿಷಯ ತಿಳಿಸಿದೆವು. ಅಧಿಕಾರದಲ್ಲಿರುವ ಯಾರಿಗೂ ಎಂದೂ ಫೋನ್ ಮಾಡದ ಲಂಕೇಶರು ತಕ್ಷಣ ಗೃಹಮಂತ್ರಿಗಳಾದ ರಾಚಯ್ಯನವರಿಗೆ ಫೋನ್ ಮಾಡಿ ವಿವರವಾಗಿ ವಿಷಯವನ್ನು ವಿಷದಪಡಿಸಿ "ನಿಮ್ಮಂತವರು ಗೃಹಮಂತ್ರಿಗಳಾಗಿರುವಾಗ ನಿಮ್ಮ ಪೊಲೀಸ್ ಠಾಣೆಗಳು ಅಸಹಾಯಕರಿಗೆ ರಕ್ಷಣೆ ನೀಡದಿದ್ದರೆ ನಿಮಗೆ ಕೆಟ್ಟ ಹೆಸರು ಬರಲ್ಲವೆ..?" ಎಂದರು. ಆ ಕಡೆಯಿಂದ ರಾಚಯ್ಯನವರು ಲಂಕೇಶರಿಗೆ ಏನು ಹೇಳಿದರೋ ಗೊತ್ತಾಗಲಿಲ್ಲ. ಅಷ್ಟರಲ್ಲಿ ಊಟದ ಸಮಯ ಮೀರಿತ್ತು. ಆ ತಾಯಿಮಗಳು ಆಕಾಶವೇ ಕಳಚಿಬಿದ್ದಂತೆ ತಲೆಮೇಲೆ ಕೈಹೊತ್ತು ಕೂತಿದ್ದರು. ಅವರಿಗೆ ಊಟ ತರಿಸಿಕೊಟ್ಟ ಲಂಕೇಶರು ಧೈರ್ಯ ಹೇಳುವಷ್ಟರಲ್ಲಿ ಒಂದರ್ಧ ಗಂಟೆಯಾಗಿತ್ತು. ಅಷ್ಟರಲ್ಲಿ ಪೊಲೀಸ್ ಜೀಪು ನಮ್ಮ 'ಲಂಕೇಶ್ ಪತ್ರಿಕೆ' ಕಚೇರಿ ಬಳಿ ನಿಂತ ಸದ್ದಾಯಿತು, ಠಾಣೆಯಲ್ಲಿ ಅಷ್ಟು ಅಹಂಕಾರದಿಂದ ಮೆರೆದಿದ್ದ ಸರ್ಕಲ್ ಇನ್‌ಸ್ಪೆಕ್ಟರ್‌ ನಮ್ಮ ಪತ್ರಿಕಾ ಕಚೇರಿಗೆ ಮೆಲ್ಲಗೆ ಬಂದು ಕ್ಷಮೆಯಾಚಿಸತೊಡಗಿದ. ನಾವು ಆತನನ್ನು ಕೇರ್ ಮಾಡಲಿಲ್ಲ. ಅಷ್ಟರಲ್ಲಿ ಲಂಕೇಶರು ತಮ್ಮ ಚೇಂಬರಿಗೆ ಆ ಸರ್ಕಲ್ ಇನ್‌ಸ್ಪೆಕ್ಟರ್‌ ನನ್ನು ಕರೆಸಿಕೊಂಡು "ಪೊಲೀಸ್ ಠಾಣೆಗಳು ನ್ಯಾಯದ ಪರವಿರಬೇಕು. ಅಸಹಾಯಕರಿಗೆ ರಕ್ಷಣೆ ನೀಡಬೇಕೆ ಹೊರತು ಹಣವಂತರ ಮಲ ತಿಂದು ಅವರ ಪರವಾಗಿರಬಾರದು" ಎಂದು ಉಗಿದರು. ಆ ಅಹಂಕಾರಿ ಸಿ.ಐ. ತಲೆಬಾಗಿ ನಿಂತಿದ್ದ. "ಆಯ್ತು ಹೋಗಿ" ಎಂದರು ಲಂಕೇಶ್. ಆತ ನಮ್ಮನ್ನೇ ದಿಟ್ಟಿಸಿಕೊಂಡು ವಾಪಸ್ಸು ಹೋದ.

ಅದೇ ದಿನ ಸಂಜೆ ಅದೇ ಸರ್ಕಲ್ ಇನ್‌ಸ್ಪೆಕ್ಟರ್‌ ತನ್ನ ಸಂಸಾರವನ್ನು ಕರೆದುಕೊಂಡು ನಮ್ಮ ಪತ್ರಿಕಾ ಕಛೇರಿಗೆ ಮತ್ತೇ ಬಂದು ಅಳುತ್ತಾ ತನ್ನ ಕೈಯಲ್ಲಿದ್ದ ಆತನನ್ನು "ಸೇವೆಯಿಂದ ವಜಾ" ಮಾಡಿದ ಟೆಲಿಗ್ರಾಫಿಕ್ ಸಂದೇಶ ತೋರಿಸಿದ! ಗೃಹ ಮಂತ್ರಿ ರಾಚಯ್ಯ ಸಾಹೇಬರು ಆತನನ್ನು ಕೆಲಸದಿಂದ ವಜಾ ಮಾಡಿದ್ದರು! ಆತ ನಮ್ಮೆಲ್ಲರ ಕಾಲು ಹಿಡಿಯಲು ಬಂದ, ಆ ತಾಯಿಮಗಳನ್ನು ಪರಿಪರಿಯಾಗಿ ಕ್ಷಮೆ ಕೇಳತೊಡಗಿದ. ಆತನ ಹೆಂಡತಿ ಮಕ್ಕಳು ಅಳುತಿದ್ದರು. ಅವನ ಗೋಳು ನೋಡಲಾರದೆ ಲಂಕೇಶರು ಮತ್ತೆ ರಾಚಯ್ಯನವರಿಗೆ ಫೋನ್ ಮಾಡಿ ಆ ಸರ್ಕಲ್ ಇನ್‌ಸ್ಪೆಕ್ಟರ್‌ ಅನ್ನು ವಜಾ ಮಾಡಿರುವ ಆದೇಶವನ್ನು ವಾಪಸ್ಸು ಪಡೆಯಲು ಹೇಳಿದರು. ಮಾನವೀಯತೆಯ ದೃಷ್ಟಿಯಿಂದ ರಾಚಯ್ಯನವರು ತಾವು ನೀಡಿದ್ದ ವಜಾ ಆದೇಶವನ್ನು ವಾಪಸ್ಸು ಪಡೆದರು. ಆ ತಾಯಿ ಮಗಳು ಅದೇ ಮನೆ ಸೇರಿಕೊಂಡರು, ಮಾರ್ವಾಡಿಯ ವಿರುದ್ದ ಕೇಸ್ ಬುಕ್ ಆಯಿತು.

ಇದು ಗೃಹಮಂತ್ರಿಯಾಗಿದ್ದ ರಾಚಯ್ಯನವರ ಮಾನವೀಯ ಕಾರ್ಯವೈಖರಿ. ಸಹಜವಾಗಿ ಅಧಿಕಾರದಲ್ಲಿರುವ ರಾಜಕಾರಣಿಗಳನ್ನು ಎಂದೂ ಹೊಗಳದ ಲಂಕೇಶರು ಅಂದು ರಾಚಯ್ಯನವರ ಕುರಿತು ನಮಗೆ ಹೇಳಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿವೆ.. "ರಾಚಯ್ಯನವರ ಜಾಗದಲ್ಲಿ ಮತ್ಯಾರೆ ಮಂತ್ರಿ ಇದ್ದಿದ್ದರೂ ನಾನು ಪೋನ್ ಮಾಡುತ್ತಿರಲಿಲ್ಲ.. ರಾಚಯ್ಯನವರು ಅತ್ಯಂತ ಸಜ್ಜನರು, ದಕ್ಷರು, ಪ್ರಾಮಾಣಿಕರು, ಯಾವುದೇ ಅಬ್ಬರವಿಲ್ಲದ ದಲಿತ ರಾಜಕಾರಣ ಮಾಡಬಹುದಾದ ಮುತ್ಸದ್ದಿ ಮತ್ತು ಮಾನವೀಯತೆಯ ಸಾಕಾರಮೂರ್ತಿ. ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನಿಜಕ್ಕೂ ಈ ರಾಜ್ಯಕ್ಕೆ ರಾಚಯ್ಯನವರಂಥ ಮುಖ್ಯಮಂತ್ರಿಯ ಅವಶ್ಯಕತೆ ಇದೆ. ಆದರೆ ಈ ಜಾತಿಗ್ರಸ್ತ, ಭ್ರಷ್ಟ ರಾಜಕಾರಣದಲ್ಲಿ ಅವರನ್ನು ಹೇಗೆ ಮುಖ್ಯಮಂತ್ರಿ ಮಾಡುತ್ತಾರೆ ಎಂದು ನಿಟ್ಟುಸಿರು ಬಿಟ್ಟರು.

ಇದನ್ನು ಓದಿದ್ದೀರಾ? ದುಬಾರಿ ದುನಿಯಾ, ಜನರ ನಿದ್ದೆಗೆಡಿಸುವ ಆಗಸ್ಟ್‌ ತಿಂಗಳ ಮೂರು ಆತಂಕಕಾರಿ ವಿದ್ಯಮಾನ

ಈ ಘಟನೆಯಿಂದಾಗಿ ನಾನೂ ರಾಚಯ್ಯನವರಿಗೆ ಅತ್ಯಂತ ಹತ್ತಿರವಾದೆ. ಅದೇ ಸಂದರ್ಭದಲ್ಲಿ ಬಿ. ಬಸವಲಿಂಗಪ್ಪನವರು ದಲಿತ ಪೈರ್ ಬ್ರಾಂಡ್ ಆಗಿ ಪ್ರಚಾರದಲ್ಲಿದ್ದಿದ್ದರಿಂದ ಸೌಮ್ಯ ಸ್ವಭಾವದ ರಾಚಯ್ಯನವರು ಸ್ವಲ್ಪ ಮಂಕಾಗಿ ಕಾಣುತ್ತಿದ್ದರು ಅಷ್ಟೇ. ಆದರೆ ಅವರ ದಲಿತಪರ ಕಾಳಜಿ, ರಾಜಕೀಯ ಚತುರತೆ, ಸಜ್ಜನಿಕೆಗಳು ನಿಚ್ಚಳವಾಗಿದ್ದವು. ಅವರ ಪತ್ರಿಕಾ ಗೋಷ್ಠಿಗಳಿಗೆ ನಾನೇ ಹೋಗ ತೊಡಗಿದೆ. ಲಂಕೇಶರು ಹೇಳಿದಂತೆ ಪ್ರತಿಯೊಂದು ಗುಣವನ್ನೂ ರಾಚಯ್ಯನವರಲ್ಲಿ ಕಂಡೆ. ನಿಜಕ್ಕೂ ಈ ರಾಜ್ಯಕ್ಕೆ ರಾಚಯ್ಯನಂತವರು ಒಮ್ಮೆ ಮುಖ್ಯಮಂತ್ರಿ ಆಗಬೇಕಿತ್ತು.

ನಿಮಗೆ ಏನು ಅನ್ನಿಸ್ತು?
2 ವೋಟ್