ಸುದ್ದಿ ಪ್ಲಸ್ | ಸರ್ಕಾರ ಹೀಗೆ ಮಾಡದಿದ್ದರೆ ಅಡುಗೆ ಎಣ್ಣೆ ಬೆಲೆ ಇನ್ನಷ್ಟು ದುಬಾರಿ

Indonesian Palm Field

ದಿನನಿತ್ಯದ ಅವಶ್ಯಕತೆಗಳಿಗೆ ಆಮದನ್ನು ಅತಿಯಾಗಿ ಅವಲಂಬಿಸುವುದು ನಿಲ್ಲಬೇಕು. ಆಂತರಿಕವಾಗಿ ಉತ್ಪಾದನೆಯನ್ನು ಬಲಗೊಳಿಸಬೇಕು. ಜೊತೆಗೆ, ಅದು ಜನರಿಗೆ ತಲುಪುವ ರೀತಿಯ ಕಡೆಗೂ ಗಮನ ಕೊಡಬೇಕು. ಹೀಗೆ ಮಾಡಲು ಇದು ಸಕಾಲ. ಜಾಗತಿಕ ಆರ್ಥಿಕತೆಯ ಅವಲಂಬನೆಯಿಂದ ಹೊರಬರಲು ತಾಳೆ ಎಣ್ಣೆ  ಒಂದು ದಾರಿಯಾಗಲಿ

'ಏಪ್ರಿಲ್ 28ರಿಂದ ಇಂಡೋನೇಷ್ಯಾ ತಾಳೆ ಎಣ್ಣೆಯ ರಫ್ತನ್ನು ಸಂಪೂರ್ಣ ನಿಷೇದಿಸಿದೆ' ಎಂಬ ಘೋಷಣೆ ಜಗತ್ತಿನ ಅಡುಗೆ ಎಣ್ಣೆ ಮಾರುಕಟ್ಟೆಯಲ್ಲಿ ಚಂಡಮಾರುತವನ್ನೇ ಸೃಷ್ಟಿಸಿತು. ನಂತರ, ಕೇವಲ ಸಂಸ್ಕರಿಸಿದ ತಾಳೆ ಎಣ್ಣೆಯ ರಫ್ತನ್ನು ಮಾತ್ರ ನಿಷೇಧಿಸಲಾಗುವುದು, ಕಚ್ಚಾ ಎಣ್ಣೆಗೆ ನಿರ್ಬಂಧ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿತು. ಆದರೆ, ಹಾಗೆ ಹೇಳಿದ ಕೆಲವೇ ಗಂಟೆಗಳಲ್ಲಿ, "ಕಚ್ಚಾ ತಾಳೆ ಎಣ್ಣೆ ರಫ್ತನ್ನೂ ನಿಷೇಧಿಸಲಾಗಿದೆ," ಎಂದು ಇಂಡೋನೇಷ್ಯಾ ಹಣಕಾಸು ಸಚಿವಾಲಯ ಘೋಷಿಸಿ, ಮತ್ತೆ ಆತಂಕ ಮೂಡಿಸಿದೆ. ಜಗತ್ತು ತಾಳೆ ಎಣ್ಣೆಯನ್ನು ತುಂಬಾ ಅವಲಂಬಿಸಿದೆ. ನಾವು ಬಳಸುವ 240 ಮಿಲಿಯನ್ ಟನ್ ಅಡುಗೆ ಎಣ್ಣೆಯಲ್ಲಿ ಶೇಕಡ 30ರಷ್ಟು, ಅಂದರೆ, 80 ಮಿಲಿಯನ್ ಟನ್ ತಾಳೆ ಎಣ್ಣೆಯೇ ಆಗಿದೆ.

ಇಂಡೋನೇಷ್ಯಾ ಸರ್ಕಾರ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆಹಾರ ಪದಾರ್ಥಗಳ ಬೆಲೆ ವಿಪರೀತ ಹೆಚ್ಚಿದೆ. ಕೇವಲ ಅಡುಗೆ ಎಣ್ಣೆಯ ಬೆಲೆಯೇ ಈ ವರ್ಷ ಅಲ್ಲಿ ಸರಾಸರಿ ಶೇಕಡ 40ರಷ್ಟು ಹೆಚ್ಚಿದೆ. ಕೆಲವು ಕಡೆ ಎರಡು ಪಟ್ಟು ಹೆಚ್ಚಿದೆ. ಈ ಬಗ್ಗೆ ಜನರಲ್ಲಿ ತೀವ್ರ ಅಸಮಾಧಾನ ಇದೆ. ವಿದ್ಯಾರ್ಥಿಗಳು ಚಳವಳಿ ನಡೆಸಿದ್ದಾರೆ. ಹಾಗಾಗಿ, ಅಡುಗೆ ಎಣ್ಣೆಯ ಬೆಲೆಯನ್ನು ನಿಯಂತ್ರಿಸಿ, ಮಾರುಕಟ್ಟೆಯಲ್ಲಿ ಅದರ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಅದರಿಂದಾಗಿ ತಾಳೆ ಎಣ್ಣೆಯ ರಫ್ತನ್ನು ಕಡಿಮೆ ಮಾಡದೆ ಅಥವಾ ನಿಷೇಧಿಸದೆ ಸರ್ಕಾರಕ್ಕೆ ಅನ್ಯ ಮಾರ್ಗ ಇರಲಿಲ್ಲ. “ರಫ್ತನ್ನು ನಿಷೇಧಿಸಿದರೆ, ದೇಶಿ ಮಾರುಕಟ್ಟೆಯಲ್ಲಿ ಅದರ ಲಭ್ಯತೆ ಹೆಚ್ಚುತ್ತದೆ ಮತ್ತು ಜನರ ಕೈಗೆಟಕುವ ಬೆಲೆಯಲ್ಲಿ ಸಿಗುತ್ತದೆ,” ಎಂದು ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೊಡೊ ತಿಳಿಸಿದ್ದಾರೆ. ಜೊತೆಗೆ, ಇದರ ಅನುಷ್ಠಾನವನ್ನು ತಾವೇ ಖುದ್ದಾಗಿ ಗಮನಿಸುವುದಾಗಿಯೂ ತಿಳಿಸಿದ್ದಾರೆ.

Image
Joko Widodo
ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೊಡೊ

ಜಗತ್ತಿಗೆ ಅತಿ ಹೆಚ್ಚು ಖಾದ್ಯ ತೈಲ ಒದಗಿಸುತ್ತಿರುವುದು ಇಂಡೋನೇಷ್ಯಾ. 2021ರಲ್ಲಿ ಪ್ರತೀ ತಿಂಗಳು ಸುಮಾರು 6.20 ಲಕ್ಷ ಟನ್ ಸಂಸ್ಕರಿಸಿದ ತಾಳೆ ಎಣ್ಣೆಯನ್ನು, ಒಂದು ಲಕ್ಷ ಟನ್ ಕಚ್ಚಾ ತಾಳೆ ಎಣ್ಣೆಯನ್ನು ರಫ್ತು ಮಾಡಿತ್ತು ಈ ದೇಶ. ರಷ್ಯಾ-ಉಕ್ರೇನ್ ಯುದ್ಧದಿಂದ ಜಾಗತಿಕ ಅಡುಗೆ ಎಣ್ಣೆಯ ಮಾರುಕಟ್ಟೆ ಈಗಾಗಲೇ ಬಿಕ್ಕಟ್ಟಿನಲ್ಲಿದೆ. ಶ್ರೀಲಂಕಾ, ಈಜಿಪ್ಟ್ ಮೊದಲಾದ ಪ್ರಗತಿಶೀಲ ರಾಷ್ಟ್ರಗಳ ಸ್ಥಿತಿಯಂತೂ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಸ್ಥಿತಿಯೂ ಉತ್ತಮವೇನಲ್ಲ. ಹಣದುಬ್ಬರ ಅಂಕೆಗೇ ಸಿಗುತ್ತಿಲ್ಲ. ಆಹಾರ ಪದಾರ್ಥಗಳ ಬೆಲೆ ವಿಪರೀತ ಏರುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದಿಂದ ಶೇಕಡ 80ರಷ್ಟು ಸೂರ್ಯಕಾಂತಿ ಎಣ್ಣೆಯ ರಫ್ತು ನಿಂತುಹೋಯಿತು. ಪರ್ಯಾಯವಾಗಿ ಜಗತ್ತು ಬೇರೆ ಅಡುಗೆ ಎಣ್ಣೆಯನ್ನು ಹುಡುಕತೊಡಗಿತು. ತಾಳೆ ಎಣ್ಣೆ, ಸೋಯಾ ಎಣ್ಣೆಯಂತಹ ಪರ್ಯಾಯ ಎಣ್ಣೆಗಳ ಬೆಲೆ ಗಗನದಲ್ಲಿದೆ. ತಾಳೆ, ಸೋಯಾ ಹಾಗೂ ಸೂರ್ಯಕಾಂತಿ ಎಣ್ಣೆಯನ್ನು ಭಾರತ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ; ಅವುಗಳನ್ನು ಆಮದು ಮಾಡಿಕೊಳ್ಳುತ್ತಿರುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿಯೂ ಇದೆ. ರಷ್ಯಾ ಮತ್ತು ಉಕ್ರೇನಿನಿಂದ ಸೂರ್ಯಕಾಂತಿ ಎಣ್ಣೆ ಬರುವುದು ನಿಂತ ತಕ್ಷಣ, ಭಾರತದಲ್ಲಿ ಅಡುಗೆ ಎಣ್ಣೆಯ ಬೆಲೆ ಶೇಕಡ 12ರಿಂದ 17ರಷ್ಟು ಏರಿದೆ.

"ಭಾರತದಲ್ಲಿ ಪ್ರತೀ ವರ್ಷ ಸುಮಾರಾಗಿ 2.25 ಕೋಟಿ ಟನ್ ಅಡುಗೆ ಎಣ್ಣೆ ಬಳಸುತ್ತೇವೆ. ಅದರಲ್ಲಿ ಸುಮಾರು 95 ಲಕ್ಷ ಟನ್ ಅಡುಗೆ ಎಣ್ಣೆ ಭಾರತದಲ್ಲೇ ಉತ್ಪಾದನೆಯಾಗುತ್ತದೆ. ಇನ್ನುಳಿದದ್ದನ್ನು ಆಮದು ಮಾಡಿಕೊಳ್ಳಲಾಗುತ್ತದೆ," ಎಂದು ಎಸ್‌ಇಎ-ಸಾಲ್ವಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಮಹಾನಿರ್ದೇಶಕ ಬಿ ವಿ ಮೆಹ್ತಾ ತಿಳಿಸಿದ್ದಾರೆ. ಭಾರತದಲ್ಲಿ 2021ರ ನವೆಂಬರ್‌ನಿಂದ 2022ರ ಏಪ್ರಿಲ್ 1ರವರೆಗೆ ಒಟ್ಟು 56.42 ಲಕ್ಷ ಟನ್ ಅಡುಗೆ ಎಣ್ಣೆ (10.55 ಲಕ್ಷ ಟನ್ ಸೂರ್ಯಕಾಂತಿ ಎಣ್ಣೆ + 18.47 ಲಕ್ಷ ಟನ್ ಕಚ್ಚಾ ತಾಳೆ ಎಣ್ಣೆ + 7.71 ಲಕ್ಷ ಟನ್ ಸಂಸ್ಕರಿಸಿದ ತಾಳೆ ಎಣ್ಣೆ + 34,671 ಟನ್ ಕಚ್ಚಾ ತಾಳೆ ಕರ್ನೆಲ್ ಎಣ್ಣೆ + 19.33 ಲಕ್ಷ ಟನ್ ಕಚ್ಚಾ ಸೋಯಾ ಎಣ್ಣೆ) ಆಮದು ಮಾಡಿಕೊಳ್ಳಲಾಗಿತ್ತು. ಹಾಗೆ ಆಮದು ಮಾಡಿಕೊಂಡ ಕಚ್ಚಾ ತಾಳೆ ಎಣ್ಣೆಯಲ್ಲಿ 11.52 ಲಕ್ಷ ಟನ್ ಮಲೇಷ್ಯಾದಿಂದ, 5 ಲಕ್ಷ ಟನ್ ಇಂಡೋನೇಷ್ಯಾದಿಂದ, 1.94 ಲಕ್ಷ ಟನ್ ಥಾಯ್‌ಲ್ಯಾಂಡ್‌ನಿಂದ ಆಮದಾಗುತ್ತಿತ್ತು. ಸಂಸ್ಕರಿಸಿದ ತಾಳೆ ಎಣ್ಣೆಯಲ್ಲಿ 4.74 ಲಕ್ಷ ಟನ್ ಇಂಡೋನೇಷ್ಯಾದಿಂದ, 2.89 ಲಕ್ಷ ಟನ್ ಮಲೇಷ್ಯಾದಿಂದ ಹಾಗೂ 7,000 ಟನ್ ಥಾಯ್‌ಲ್ಯಾಂಡ್‌ನಿಂದ ಆಮದಾಗಿತ್ತು.

ಇದನ್ನು ಓದಿದ್ದೀರಾ?: ಅರ್ಥ ಪಥ | ಢಾಕಾದ ಖಾದರ್ ಮಿಯಾ ಮತ್ತು ದೆಹಲಿಯ ಹಿಂದು ವ್ಯಾಪಾರಿ

ಭಾರತೀಯರು ತಾಳೆ ಎಣ್ಣೆಯನ್ನು ಹೆಚ್ಚು ಬಳಸುತ್ತಾರೆ. ಯಾಕೆಂದರೆ, ಇದು ಬೇರೆ ಕೊಬ್ಬಿನ ಜೊತೆ ಸಲೀಸಾಗಿ ಬೆರೆಯುತ್ತದೆ. ಹೆಚ್ಚು ದಿನ ಬಾಳಿಕೆ ಬರುತ್ತದೆ. ಹೋಟೆಲ್‌ಗಳಲ್ಲೂ ಇದನ್ನೇ ಬಳಸುತ್ತಾರೆ. ನೆಸ್ಲೆ, ಯುನಿಲಿವರ್ ಮೊದಲಾದ ಹಲವು ಕಂಪನಿಗಳು ತಮ್ಮ ಉತ್ಪನ್ನಗಳ ತಯಾರಿಕೆಯಲ್ಲಿ ಇದನ್ನು ಬಳಸುತ್ತವೆ. ನ್ಯೂಡಲ್ಸ್, ಕೇಕ್, ಅಲೂ ಚಿಪ್ಸ್ ತಯಾರಿಕೆಗೆಲ್ಲ ಇದಕ್ಕೇ ಮೊದಲ ಆದ್ಯತೆ. ಸೋಪು, ಸೌಂದರ್ಯವರ್ಧಕಗಳು ಮುಂತಾದವುಗಳ ಉತ್ಪಾದನೆಯಲ್ಲೂ ತಾಳೆ ಎಣ್ಣೆ ಬಳಕೆಯಾಗುತ್ತದೆ. ನಾವು ಭಾರತದಲ್ಲಿ ಉತ್ಪಾದನೆಯಾಗುವ ಅಡುಗೆ ಎಣ್ಣೆಗಿಂತ ಸುಮಾರು 13 ಮಿಲಿಯನ್ ಟನ್ ಹೆಚ್ಚು ಅಡುಗೆ ಎಣ್ಣೆಯನ್ನು ಬಳಸುತ್ತವೆ. ಈ ಕೊರತೆಯನ್ನು ಸರಿದೂಗಿಸುವುದಕ್ಕೆ ಸೂರ್ಯಕಾಂತಿ ಎಣ್ಣೆ, ತಾಳೆ ಎಣ್ಣೆ ಹಾಗೂ ಸೋಯಾ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ರಷ್ಯಾ-ಯಕ್ರೇನ್ ಯುದ್ಧದಿಂದ ಮತ್ತು ದಕ್ಷಿಣ ಅಮೆರಿಕದಲ್ಲಿ ಆದ ಬೆಳೆ ನಾಶದಿಂದ ಸೂರ್ಯಕಾಂತಿ ಮತ್ತು ಸೋಯಾ ಎಣ್ಣೆಯ ಪೂರೈಕೆಯಲ್ಲಿ ಏರುಪೇರಾಗಿತ್ತು. ಅದರಿಂದ ಭಾರತ ತಾಳೆ ಎಣ್ಣೆಯನ್ನು ಹೆಚ್ಚು ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು. ತಾಳೆ ಎಣ್ಣೆಯ ಪಾಲು ಒಟ್ಟು ಆಮದಿನ ಶೇಕಡ 63ರಷ್ಟಾಗಿಬಿಟ್ಟಿತ್ತು. ಜೊತೆಗೆ, ಇಂಡೋನೇಷ್ಯಾ ಮತ್ತು ಮಲೇಷ್ಯಾ ಕಚ್ಚಾ ತಾಳೆ ಎಣ್ಣೆಯ ಮೇಲೆ ಸಾಕಷ್ಟು ರಫ್ತು ಸುಂಕವನ್ನು ವಿಧಿಸುತ್ತಿದೆ. ಹಾಗಾಗಿ, ಅಲ್ಲಿಂದ ಆಮದು ಮಾಡಿಕೊಳ್ಳುವುದು ದುಬಾರಿ ಕೂಡ.

ಎಲ್ಲ ದೇಶಗಳನ್ನು ವ್ಯಾಪಾರದ ಮೂಲಕ ಒಟ್ಟಿಗೆ ಬೆಸೆಯಲು ಪ್ರಯತ್ನಿಸುತ್ತಿರುವ ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯನ್ನು ಜಗತ್ತಿನ ಎಲ್ಲ ಆರ್ಥಿಕ ಬಿಕ್ಕಟ್ಟುಗಳಿಗೆ ಪರ್ಯಾಯವೆಂದು ಭಾವಿಸಲಾಗಿತ್ತು. ಆದರೆ, ಅದರೊಳಗಿನ ನ್ಯೂನತೆಗಳು ಎದ್ದುಕಾಣುತ್ತಿವೆ. ಜಗತ್ತಿನ ಒಂದು ಮೂಲೆಯಲ್ಲಿ ಸೃಷ್ಟಿಯಾಗುವ ಒಂದು ಬಿಕ್ಕಟ್ಟು ಇಡೀ ಜಗತ್ತನ್ನೇ ಅಲ್ಲಾಡಿಸಿಬಿಡುತ್ತಿದೆ. ಶ್ರೀಮಂತ ರಾಷ್ಟ್ರಗಳಿಗೆ ತಮ್ಮ ಆಧಿಪತ್ಯ ಸ್ಥಾಪಿಸಬೇಕು. ಅದಕ್ಕಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಉಕ್ರೇನ್ ಮೇಲೆ ರಷ್ಯಾ ಮಾಡಿರುವ ದಾಳಿ, ಪಾಶ್ಚಾತ್ಯ ದೇಶಗಳು ರಷ್ಯಾ ಮೇಲೆ ಜಾರಿಗೊಳಿಸಿರುವ ನಿರ್ಬಂಧಗಳಿಂದ ಹಲವಾರು ರಾಷ್ಟ್ರಗಳು ತತ್ತರಿಸಿಹೋಗಿವೆ. ಹಲವು ದೇಶಗಳು ತಮ್ಮ ಜರೂರು ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನಿರ್ಬಂಧಗಳನ್ನು ಮೀರಿಕೊಳ್ಳುತ್ತಿವೆ. ಎಷ್ಟೋ ಆರ್ಥಿಕತೆಗಳು ತಮಗೆ ಬೇಕಾದ ವಸ್ತುಗಳ ಪೂರೈಕೆಯನ್ನು ತಮ್ಮಲ್ಲೇ ಅಥವಾ ಹತ್ತಿರದಲ್ಲಿ ಕಂಡುಕೊಳ್ಳುವುದಕ್ಕೆ ಪೂರಕವಾದ ಯೋಜನೆಗಳ ಬಗ್ಗೆ ಚಿಂತಿಸುತ್ತಿವೆ. ಅಂದರೆ, ಜಾಗತೀಕರಣದ ಅನುಕೂಲದ ಬಗ್ಗೆ ಅನುಮಾನಗಳು ಪ್ರಾರಂಭವಾಗಿವೆ. ಹಾಗಾಗಿ, ನಾವು ಕೂಡ ಸ್ವಾವಲಂಬಿಗಳಾಗುವ ದಿಕ್ಕಿನಲ್ಲಿ ಯೋಚಿಸುವುದು ಅನಿವಾರ್ಯ.

Image
Palm Oil 2
ಸಾಂದರ್ಭಿಕ ಚಿತ್ರ

ಅಡುಗೆ ಎಣ್ಣೆಯ ಉತ್ಪಾದನೆಯಲ್ಲೂ ಆ ದಿಸೆಯಲ್ಲಿ ಹೆಜ್ಜೆ ಹಾಕುವುದಕ್ಕೆ ಇದು ಸಕಾಲ. ನಿಜ, ಸರ್ಕಾರ ತಾಳೆ ಎಣ್ಣೆಯನ್ನು ಉತ್ಪಾದಿಸುವ ನಿಟ್ಟಿನಲ್ಲಿ ಸುಮಾರು 1.25 ಲಕ್ಷ ಹೆಕ್ಟೇರ್ ಭೂಮಿಯನ್ನು ತಾಳೆ ಕೃಷಿಗೆ ಒಳಪಡಿಸುವುದಕ್ಕೆ ಯೋಚಿಸುತ್ತಿದೆ. ಸಬ್ಸಿಡಿಯನ್ನು ಒದಗಿಸುವ ಚಿಂತನೆ ಇದೆ. ಆದರೆ, ತಾಳೆ ಫಸಲು ಬರುವುದಕ್ಕೆ ಐದಾರು ವರ್ಷ ಬೇಕು. ಹಾಗಾಗಿ, ಜೊತೆಜೊತೆಯಲ್ಲೇ ಸಾಂಪ್ರದಾಯಿಕ ಅಡುಗೆ ಎಣ್ಣೆ ಮೂಲಗಳಾದ ಎಳ್ಳು, ಸಾಸಿವೆ, ನೆಲಗಡಲೆ ಇತ್ಯಾದಿಗಳ ಕೃಷಿಯತ್ತ ರೈತರ ಮನವೊಲಿಸುವುದು ಸೂಕ್ತವಾಗಬಹುದು.

ದಿನನಿತ್ಯದ ಅವಶ್ಯಕತೆಗಳಿಗೆ ಆಮದನ್ನು ಅತಿಯಾಗಿ ಅವಲಂಬಿಸುವುದು ನಿಲ್ಲಬೇಕು. ಇಲ್ಲದಿದ್ದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯ ವೈಪರೀತ್ಯಕ್ಕೆ ಸಿಕ್ಕಿ ನಲುಗಿಬಿಡುತ್ತೇವೆ. ಒಂದರ್ಥದಲ್ಲಿ ಇವೆಲ್ಲ ಜಾಗತಿಕ ವ್ಯವಸ್ಥೆಯ ಒಳಗೆ ಅಥವಾ ಅದಕ್ಕೆ ಪರ್ಯಾಯವಾಗಿ ನಮ್ಮ ಆರ್ಥಿಕತೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಕೆಲವು ಚಿಂತನೆಗಳು. ಆಂತರಿಕವಾಗಿ ಉತ್ಪಾದನೆಯನ್ನು ಬಲಗೊಳಿಸಬೇಕು. ಜೊತೆಗೆ ಅದು ಜನರಿಗೆ ತಲುಪುವ ರೀತಿ, ವಿತರಣೆಯ ಕಡೆಗೂ ಗಮನ ಕೊಡಬೇಕು. ಉದಾಹರಣೆಗೆ, ಉತ್ಪಾದಿಸಿದ ಅಡುಗೆ ಎಣ್ಣೆಯನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸುವ ಸರಕುಗಳ ಜೊತೆಯಲ್ಲಿ ವಿತರಣೆ ಮಾಡಬೇಕು. ಆಂತರಿಕ ಸಾಮರಸ್ಯವನ್ನು ಕಾಪಾಡಿಕೊಂಡರೆ ಆರ್ಥಿಕತೆ ಸುಧಾರಿಸುತ್ತದೆ. ಸುಧಾರಿತ ಉತ್ಪಾದನೆಯಿಂದ ರಫ್ತಿನ ಸ್ಥಿತಿಯೂ ಸುಧಾರಿಸುತ್ತದೆ. ಪಾವತಿ ಬಾಕಿಯ ಸಮಸ್ಯೆಗೂ ಉತ್ತರ ಸಿಗಬಹುದು.

ನಿಮಗೆ ಏನು ಅನ್ನಿಸ್ತು?
0 ವೋಟ್