ನಮ್ಮೂರ ಶಾಲೆ| ಅಧ್ಯಕ್ಷರಿಗೆ ಮತ ನೀಡಿ, ಶಾಲೆಗೆ ಜಮೀನು ಪಡೆದ ಗ್ರಾಮ ಪಂಚಾಯತಿ ಸದಸ್ಯರು

Mandalgera school

ಪಂಚಾಯತಿ ಅಧ್ಯಕ್ಷರ ಆಯ್ಕೆ ಎಂದರೆ ಹಣದ ಹರಿವು ಚೆನ್ನಾಗಿಯೇ ಇರುತ್ತದೆ. ಆದರೆ ಮಂಡಲಗೇರಾ ಗ್ರಾ. ಪಂಚಾಯತಿಯ ಸದಸ್ಯರಾದ ಪಾಗುಂಟಮ್ಮ , ನಾಗರಾಜ, ತಿಮಲಮ್ಮ , ಮಲ್ಲೇಶ ಮತಕ್ಕಾಗಿ ಹಣ ಪಡೆಯದೇ ಊರಿನ ಶಾಲೆಗೆ ಒಂದೆಕರೆ ಜಮೀನು ಕೊಡುವವರಿಗೆ ತಮ್ಮ ಮತ ನೀಡುವುದಾಗಿ ಪಟ್ಟು ಹಿಡಿದು, ಜಮೀನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ

ಗ್ರಾಮ ಪಂಚಾಯತಿ ಸದಸ್ಯರಿಗೆ ಸಮಾಜಸೇವೆ ಮಾಡಬೇಕು ಎಂಬ ಬದ್ಧತೆಯಿದ್ದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ರಾಯಚೂರು ಜಿಲ್ಲೆಯ ಮಂಡಲಗೇರಾ ಗ್ರಾಮ ಪಂಚಾಯಿತಿ ಸದಸ್ಯರು ಸಾಕ್ಷಿಯಾಗಿದ್ದಾರೆ. ಶಿಥಿಲಗೊಂಡ ಸರ್ಕಾರಿ ಶಾಲೆಗೆ ಹೊಸ ಕಟ್ಟಡ ಕಟ್ಟಿಸುವ ಉದ್ದೇಶದಿಂದ ಶಾಲೆಗಾಗಿ ಒಂದು ಎಕರೆ ಜಮೀನು ಪಡೆಯುವಲ್ಲಿ ಇವರು ಮಾಡಿರುವ ಸಾಹಸ ಸಣ್ಣದೇನಲ್ಲ. ಅಲ್ಲೀಗ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣವಾಗುತ್ತಿದೆ.

ತೆಲಂಗಾಣ ರಾಜ್ಯಕ್ಕೆ ಅಂಟಿಕೊಂಡಿರುವ ರಾಯಚೂರು ಜಿಲ್ಲೆಯ ಈ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ. ಕಳೆದ 30 ವರ್ಷಗಳಿಂದ ಕೇವಲ ಮೂರು ಕೊಠಡಿಗಳಲ್ಲಿ ಶಾಲೆ ನಡೆಯುತ್ತಿದೆ. ಈಗಲೂ ಅಲ್ಲಿ 170ರಿಂದ 180 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕಟ್ಟಡದ ಕೊರತೆಯಷ್ಟೇ ಅಲ್ಲ, ಊರಿನ ಅಗಸಿ ಬಾಗಿಲು (ದ್ವಾರ ಬಾಗಿಲು) ಅಲ್ಲೆ ಇರುವುದರಿಂದ ಜನರ ಓಡಾಟ, ದನಕರಗಳು ಓಡಾಟ, ವಾಹನಗಳ ಓಡಾಟ ಹೀಗೆ ಹಲವು ಸಮಸ್ಯೆಗಳಿಂದ ಶಾಲಾ ಶಿಕ್ಷಕರಿಗೆ ಪಾಠ ಮಾಡಲೂ ತೊಂದರೆ ವಿದ್ಯಾರ್ಥಿಗಳಿಗೆ ಪಾಠ ಕೇಳಲು ಆವರಣದಲ್ಲಿ ಆಟ ಆಡಲೂ ತೊಂದರೆಯಾಗಿತ್ತು.

ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಮಸ್ಯೆಯನ್ನು ಬಗೆಹರಿಸಲು ಪ್ರತೀ ಬಾರಿ ಆಯ್ಕೆಯಾಗುವ ಗ್ರಾ. ಪಂ. ಸದಸ್ಯರು, ಜಿ.ಪಂ ಸದಸ್ಯರು, ಶಾಸಕರು, ಸಂಸದರು ಹೀಗೆ ಎಲ್ಲಾ ಜನಪ್ರತಿನಿಧಿಗಳಿಗೆ ಊರಿನ ಜನರು ಕೇಳಿಕೊಂಡರೂ ಯಾರೊಬ್ಬರೂ ಈ ಊರಿನ ಸರ್ಕಾರಿ ಶಾಲೆಯನ್ನು ಉಳಿಸಲು ಸಹಾಯ ಮಾಡಲೇ ಇಲ್ಲ. ಆಸಕ್ತಿಯೂ ತೋರಲೇ ಇಲ್ಲ. ಹೀಗಾಗಿ ಈ ಶಾಲೆಯನ್ನು ಸಮಸ್ಯೆಗಳಿಂದ ಪಾರು ಮಾಡಲು ಆಗಲೇ ಇಲ್ಲ. ಹೀಗೆ ಕುಂಟುತ್ತ ನಾಲ್ಕೈದು ದಶಕಗಳು ಕಳೆದು ಹೋಯಿತು.

ಕಳೆದ 2020-21 ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಾದ ಪಾಗುಂಟಮ್ಮ,, ನಾಗರಾಜ, ತಿಮಲಮ್ಮ,  ಮಲ್ಲೇಶ ಒಂದು ಗಟ್ಟಿ ತೀರ್ಮಾನ ಮಾಡಿ ತಮ್ಮ ಊರಿನ ಈ ಶಾಲೆಯನ್ನು ಉಳಿಸಬೇಕೆಂದು ಪಣತೊಟ್ಟರು. ಧೈರ್ಯಮಾಡಿ ಗ್ರಾ.ಪಂ ಅಧ್ಯಕ್ಷರ ಚುನಾವಣೆ ಸಂದರ್ಭವನ್ನು ಅದಕ್ಕಾಗಿ ಬಳಸಿಕೊಂಡರು. ನಾಲ್ಕೂ ಜನ ಒಗ್ಗಟ್ಟಾಗಿ ಪಕ್ಷ, ವ್ಯಕ್ತಿ ಎಂದು ನೋಡದೇ, ಊರ ಶಾಲೆಗೆ ಒಂದು ಎಕರೆ ಜಮೀನು ಕೊಡುಗೆಯಾಗಿ ನೀಡುವವರಿಗೆ ನಮ್ಮ ಮತ ಹಾಕುತ್ತೇವೆ ಎಂದು ಪಟ್ಟು ಹಿಡಿದರು.

Image
ನಿರ್ಮಾಣ ಹಂತದ ಹೊಸ ಶಾಲಾ ಕಟ್ಟಡ
ನಿರ್ಮಾಣ ಹಂತದ ಹೊಸ ಶಾಲಾ ಕಟ್ಟಡ

ಗ್ರಾಮಪಂಚಾಯತಿ ಅಧ್ಯಕ್ಷರ ಆಯ್ಕೆ ಎಂದರೆ ಹಣದ ಹರಿವು ಚೆನ್ನಾಗಿಯೇ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಲ್ಲೂ ಹಾಗೆಯೇ ಆಗಿತ್ತು. ಪ್ರತಿ ಸದಸ್ಯರಿಗೆ ಹಣದ ಆಮಿಷ ನೀಡಲಾಗಿತ್ತು.  ಅಧ್ಯಕ್ಷ ಆಕಾಂಕ್ಷಿಯಾಗಿದ್ದ ಜೊತೆಗೆ ಈ ಊರಿನ ಪಕ್ಕದಲ್ಲಿಯೇ ಜಮೀನು ಇರುವ ಸಿಂಗನೋಡಿ ಗ್ರಾಮದ ಭೀಮಪ್ಪ ಗೌಡರು ಈ ಸದಸ್ಯರನ್ನು ಸಂಪರ್ಕಿಸಿದಾಗ ʼಶಾಲೆಗಾಗಿ ಒಂದೆಕರೆ ಜಮೀನು ಕೊಡಬೇಕು, ನಮಗೆ ಹಣ ಬೇಡʼ ಎಂದು ಹೇಳುತ್ತಾರೆ. ಗೌಡರು ಮಾತು ಕೊಟ್ಟರಾದರೂ, ನಂತರ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗುತ್ತದೆ. ಆಗ ಗೌಡರು ತಮ್ಮದೇ ತಂಡದ ಒಬ್ಬರನ್ನು ಅಧ್ಯಕ್ಷೆಯನ್ನಾಗಿ ಮಾಡುವ ಕಾರ್ಯಕ್ಕೆ ಮುಂದಾಗುತ್ತಾರೆ. ಆ ಸಂದರ್ಭದಲ್ಲಿಯೂ ಸದ್ರಿ ನಾಲ್ವರು ಸದಸ್ಯರ ನಿರ್ಧಾರ ಬದಲಾಗಲಿಲ್ಲ.

ಅಧ್ಯಕ್ಷರಾಗುವ ಉಮೇದಿನಲ್ಲಿದ್ದ ಗೌಡರು ಶಾಲೆಗಾಗಿ ಜಮೀನು ನೀಡುವ ವಾಗ್ದಾನ ಮಾಡಿದ್ದರು. ಆದರೆ ಆ ಅವಕಾಶ ತಪ್ಪಿದರೂ ಮಾತಿಗೆ ತಪ್ಪದಂತೆ ನಡೆದುಕೊಂಡರು. ತಾವು ಆಯ್ಕೆ ಮಾಡಿದ ಮಹಿಳೆಯನ್ನು ಅಧ್ಯಕ್ಷೆಯನ್ನಾಗಿ ಮಾಡುವ ಸಲುವಾಗಿ ಹಣ ನೀಡಲು ಮುಂದಾಗುತ್ತಾರೆ. ಆದರೆ ಜಮೀನು ನೀಡಬೇಕು ಎಂಬ ಒತ್ತಾಯದಿಂದ ಸದಸ್ಯರು ಹಿಂದೆ ಸರಿಯಲಿಲ್ಲ. ಆ ಹಣವನ್ನು ಗೌಡರಿಗೆ ನೀಡಿ ಸುಮಾರು ರೂ. 20ಲಕ್ಷ ಬೆಲೆಬಾಳುವ ಜಮೀನನ್ನು ಕೇವಲ ಆರು ಲಕ್ಷ ಪಡೆದು ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡುತ್ತಾರೆ. ಅದಾಗಿ ಎರಡು ವರ್ಷ ಆಗಿದೆ. ಈಗ ಮೂರು ಕೊಠಡಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಕಟ್ಟಡ ಕಾಮಗಾರಿ ನಡೆಯುತ್ತಿದೆ.

Image
ನಾಗರಾಜ್‌, ಮಲ್ಲೇಶ್‌, ಪಾಗುಂಟಮ್ಮ, ತಿಮಲಮ್ಮ
ಗ್ರಾ. ಪಂಚಾಯತಿ ಸದಸ್ಯರಾದ ನಾಗರಾಜ್‌, ಮಲ್ಲೇಶ್‌, ಪಾಗುಂಟಮ್ಮ , ತಿಮಲಮ್ಮ

ಈದಿನ.ಕಾಮ್‌ ಜೊತೆ ಮಾತನಾಡಿದ ನಾಗರಾಜ್‌, "ನಮ್ಮ ಊರಿನ ಸರ್ಕಾರ ಶಾಲೆ ಊರಿನ ಮಧ್ಯ ಭಾಗದಲ್ಲಿ ಇರುವುದರಿಂದ ಹೊಸ ಕಟ್ಟಡಗಳನ್ನು ಕಟ್ಟುವುದಕ್ಕಾಗಿ ತುಂಬಾ ಸಮಸ್ಯೆ ಎದುರಾಗಿತ್ತು. ಈ ಶಾಲೆಯನ್ನು ಬೇರೆಕಡೆಗೆ ಸ್ಥಳಾಂತರಿಸಲು ಸುಮಾರು ವರ್ಷಗಳಿಂದ ಪ್ರಯತ್ನ ಮಾಡಿದ್ವಿ, ಜಾಗ ಎಲ್ಲೂ ಸಿಗಲಿಲ್ಲ.  ಮತ್ತೆ ಜನಪ್ರತಿನಿಧಿಗಳನ್ನು ಹೊಸ ಜಾಗ ಕೊಡಿಸಿ ಎಂದು ಕೇಳಿಕೊಂಡ್ವಿ. ಆದರೆ ಯಾರೂ ಸ್ಪಂದಿಸಲಿಲ್ಲ.  ಈ ಬಾರಿ ಗ್ರಾ.ಪಂ ಚುನಾವಣೆಯಲ್ಲಿ ಜನ ನಮ್ಮನ್ನು ಆಯ್ಕೆ ಮಾಡಿದರು. ಆಯ್ಕೆಯಾದ ನಾವು ನಾಲ್ವರು ಮಾತಾಡಿಕೊಂಡು ಒಂದು ತೀರ್ಮಾನಕ್ಕೆ ಬಂದ್ವಿ. ನಮ್ಮೂರು ಪಕ್ಕದ ಸಿಂಗನೋಡಿ ಗ್ರಾಮದ ಭೀಮಪ್ಪಗೌಡ ಅವರನ್ನು ಸಂಪರ್ಕಿಸಿ, ʼನಾವು  ನಿಮ್ಮೊಂದಿಗೆ ಇರುತ್ತೇವೆ ನಮ್ಮೂರು ಪಕ್ಕದಲ್ಲಿ ಇರುವ ಒಂದೆಕೆರೆ ಜಮೀನು ಶಾಲೆಗಾಗಿ ದಾನವಾಗಿ ಕೊಡಬೇಕುʼ ಎಂದು ಕೇಳಿಕೊಂಡಾಗ ಒಪ್ಪಿಕೊಂಡರು. ಈ ರೀತಿಯಿಂದ ಒಂದೆಕೆರೆ ಜಮೀನು ನಮ್ಮೂರು ಶಾಲೆಗೆ ರಾಜ್ಯಪಾಲರ ಹೆಸರಲ್ಲಿ ನೋಂದಣಿಯಾಗಿದೆ" ಎಂದು ವಿವರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
6 ವೋಟ್