ಜಾತ್ರೆ, ಉತ್ಸವ, ಸಂತೆಗಳೆಲ್ಲ ನಮಗಾಗಿ ಆ ದೇವರೇ ಸೃಷ್ಟಿಸಿದ ಬೆಳಕಿಂಡಿಗಳು

ರೈತನ ಕೊಡಲಿ, ಪಿಕಾಸಿ, ಹಾರೆ, ಕತ್ತಿ, ಮಚ್ಚುಗಳೆಲ್ಲ ಮೊಂಡುತನ ಕಳೆದು ಮತ್ತೆ ತಮ್ಮ ಚೂಪನ್ನು ಗಳಿಸಿಕೊಳ್ಳುವಂತೆ, ಪ್ರತಿಯೊಬ್ಬರ ಮನಸ್ಸೂ ಪ್ರೀತಿ, ಸಹಬಾಳ್ವೆಯೆಂಬ ತನ್ನ ಮೂಲಕ್ಕೆ ಹಿಂತಿರುಗುವ ತಾಣದಂತಿತ್ತು ಆ ಜಾತ್ರೆ, ಆ ಸಂತೆ
Jathra 5

ಏನಿತ್ತು ಏನಿರಲಿಲ್ಲ ಆ ಜಾತ್ರೆಯಲ್ಲಿ! ಊರಿಗೂರೇ ಅಲ್ಲಿ ನೆರೆಯುತ್ತಿತ್ತು - ಆ ಜಾತಿ, ಈ ಜಾತಿ, ಆ ಈ ಕಸುಬು, ಬಡವ-ಶ್ರೀಮಂತ, ಗಂಡು-ಹೆಣ್ಣೆಂಬ ಒಡಕುಗಳಿಲ್ಲದೆ. ಅಲ್ಲೊಬ್ಬ ಗೋಲಿ ಸೋಡದ ಸಾಬಣ್ಣ. ಅವನು ಬಾಟಲಿಯನ್ನು ಮೇಲೆ ಕೆಳಗಾಡಿಸಿ ಅದರ ಬಿರಡೆ ಬಿಚ್ಚೋ ರೀತಿಯಲ್ಲೇ ಮಾಯಾವಿ ಲೋಕವೊಂದು ಹುಟ್ಟುತ್ತಿತ್ತು. ಚುಸ್... ಎಂದು ನೊರೆಗರೆಯುತ್ತ ಉಕ್ಕುತ್ತಿದ್ದ ಸೋಡಕ್ಕೆ ಬಾಯಾರಿಲ್ಲದವರಿಗೂ ಬಾಯಾರಿಕೆ ಹುಟ್ಟಿಸುವ ತಾಕತ್ತು.

ಸಾಬಣ್ಣನ ಬಾಜೂಗೆ ತಳ್ಳುಗಾಡಿ. ಅದು, ದೊಡ್ಡಾತಿದೊಡ್ಡ ಚಿಪ್ಪುಗಳ ಪಚ್ಚಬಾಳೆ ಪೇರಿಸಿಕೊಂಡ ಶಂಕರಣ್ಣನ ಗಾಡಿ. ಚಿನ್ನದ ಬಣ್ಣದ ಹದಕಳಿತ ಆ ಚುಕ್ಕಿಬಾಳೆಯ ಅಂದಕ್ಕೆ ಮರುಳಾಗದಿದ್ದವರೇ ಇಲ್ಲ. "ಬಣ್ಣಾ... ನನ್ನ ಬಾಳೆಹಣ್ಣಿನ ಬಣ್ಣಾ... ಬನ್ರವ್ವಾ ತಗಳಿ," ಅಂತ ‘ಬಂಧನ’ ಸಿನಿಮಾ ಹಾಡನ್ನು ತನ್ನದೇ ರೀತಿಯಲ್ಲಿ ಮರುಸೃಷ್ಟಿಸಿ ತೋರಿಸುತ್ತ, ಶಂಕರಣ್ಣ ಮುಗ್ಧವಾಗಿ ಕರೆಯುತ್ತಿದ್ದಾನೆ ಎನಿಸಿದರೂ, ಹೆಣ್ಣುಮಕ್ಕಳನ್ನೇ ಕರೆಯುತ್ತಿದ್ದುದ್ದರಲ್ಲಿ ಏನೇನೋ ಅರ್ಥಛಾಯೆಗಳಿದ್ದವು ಅನ್ನುವುದು ನಮ್ಮಂತ ಪುಟ್ಟಮಕ್ಕಳಿಗೂ ತಿಳಿಯುತ್ತಿತ್ತು. ಶಂಕರಣ್ಣ ಹಾಗೆ ಹಾಡಿದಾಗೆಲ್ಲ ಪಕ್ಕದಂಗಡಿ ಸಾಬಣ್ಣ, "ಬಂಚೋತ್ ಸೂ...ಮಗ," ಎಂದು ಹಲ್ಲು ಬಿಟ್ಟಾಗ, ಶಂಕರಣ್ಣ ತುಟಿತುದಿಯಲ್ಲಿ ನಕ್ಕರೆ, ಸಾಬಣ್ಣನ ಕರೀಮುಖದ ತುಂಬ ಬಿಳೀ ಹಲ್ಲುಗಳು ಮಿಂಚಿನಂತೆ ತೋರಿ ಮಾಯವಾಗುತ್ತಿದ್ದವು. "ಈ ಶಂಕರಣ್ಣನ ಗಂಟ್ಲುನ್ನ ಕುಯ್ದು ಊರಿಗೆಲ್ಲ ಹಂಚಬೋದು," ಅಂತ ಹೆಂಗಸರು ಸೆರಗನ್ನು ಬಾಯಿಗೆ ಅಡ್ಡ ಹಿಡಿದು ಒಳಗೊಳಗೇ ನಕ್ಕು ಬಾಳೆಹಣ್ಣು ವ್ಯಾಪಾರ ಮಾಡಿಯೇ ಮಾಡುತ್ತಿದ್ದರು.

Eedina App

ಇಲ್ಲಿಂದ ಒಂದು ನಾಲ್ಕು ಹೆಜ್ಜೆ ಅತ್ತತ್ತ ಥರಾವರಿ ಮಡಿಕೆ ಕುಡಿಕೆಗಳು. ಇನ್ನೂ ಆ ಕಡೆ ಮರ, ಕುಕ್ಕೆ, ಚಿಬ್ಬಲಿನ ಲೋಕ. ಅಲ್ಲಲ್ಲೇ ಚದುರಿದಂತೆ ಇರುತ್ತಿದ್ದ ಎತ್ತು, ಕುದುರೆಗೆ ಲಾಳ ಹೊಡೆಯುವವವರೇನು ಕೇಳ್ತಿರಾ... ಇಲಿ, ಹೆಗ್ಗಣ, ತಿಗಣೆ ಪಾಶಾಣ ಮಾರುವವರೇನು. "ಕೋಡುಬಳೆ, ಚಕ್ಲಿ, ಪುರಿ ಬೆಂಡು ಬತ್ತಾಸು..." ಅಂತ ಕೂಗುವವರ ವಯ್ಯಾರವೇನು ಹೇಳೋದು! ಬಳೆ, ಬಿಚ್ಚೋಲೆ ವ್ಯಾಪಾರವೇನು... ಹಗ್ಗ, ಕತ್ತಿ, ಕೊಡಲಿ, ಹಾರೆ, ಪಿಕಾಸಿಗಳ ಹುರುಪೇನು... ಒಂದು ಕಡೆ ಸಾಮಾನು ಸರಂಜಾಮು ಹೇರಿಕೊಂಡು ಸುತ್ತಲ ಹಳ್ಳಿಗಳಿಂದ ಬಂದ ಎತ್ತಿನಗಾಡಿಗಳ ಕೆಳಗೆ ಕುದಿಯುತ್ತಿರುತ್ತಿದ್ದ ಬಾಡೆಸರು, ಇನ್ನೊಂದು ಕಡೆ ಸಂತೆಬೋಂಡದ ಪರಿಮಳ. ಇಂಥ ಹತ್ತಾರು ಪರಿಮಳಗಳು ಗಾಳಿಯಲ್ಲಿ ಕೂಡಿಕೊಂಡು ಅಲ್ಲೇ ತಮ್ಮ ಸಂಸಾರವನ್ನೂ ಹೂಡುತ್ತಿದ್ದವೇನೋ ಅನ್ನಿಸುವ ದಿವ್ಯ ಅದು. ಒಂದೇ ಎರಡೇ... ನೂರಾರು ಸದ್ದುಗಳು, ಸಾವಿರಾರು ಪರಿಮಳಗಳು, ಅಸಂಖ್ಯ ಜೀವಗಳು ಕೂಡಿ ಹದಗೊಂಡ ಅದ್ಭುತ ಲೋಕ ಅಲ್ಲಿ ಸೃಷ್ಟಿಯಾಗುತ್ತಿತ್ತು.

Jathra 3

ಕೆಲವು ವರ್ಷಗಳ ಕೆಳಗೆ ಯು ಆರ್ ಅನಂತಮೂರ್ತಿ ಅವರ ಜೊತೆಗಿನ ಒಂದು ಮಾತುಕತೆ: ಅವರು ತಮ್ಮ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದ್ದ ಹಾಸನದ ಸಂತೆ, ಜಾತ್ರೆಯ ಕುರಿತು ಹೇಳುತ್ತ, "ಹಾಸನದಲ್ಲಿ ಇನ್ನೂ ಜಾತ್ರೆ, ಸಂತೆ ನಡೆಯುತ್ತಾ?" ಎಂದು ಕೇಳಿದರು. ನಾನು, "ಹಿಂದಿನ ವೈಭವ ಈಗ ಇಲ್ಲವಾದರೂ ಹೇಗೋ ಇನ್ನೂ ನಡೆಯುತ್ತಿದೆ ಸಾರ್," ಎಂದೆ. ಎಸ್ತರ್ ಮೇಡಂ, "ಅಯ್ಯೋ... ಇನ್ನೂ ಅವೆಲ್ಲ ನಡೆಯುತ್ತಾ! ಹಾಗಾದ್ರೆ ಹಾಸನ ಇನ್ನೂ ಡೆವಲಪ್ ಆಗಿಲ್ಲ..." ಎಂದು ನಕ್ಕರು.

AV Eye Hospital ad

ಅನಂತಮೂರ್ತಿಯವರು, "ಹಾಗಲ್ಲ ಎಸ್ತರ್.. ಎಲ್ಲಿ ಜಾತ್ರೆ, ಸಂತೆಗಳಿರುತ್ತೋ ಅಲ್ಲಿ ಮನುಷ್ಯತ್ವ ಇನ್ನೂ ಉಳ್ಕೊಂಡಿರುತ್ತೆ ಅಂತ ಅರ್ಥ. ಅಲ್ಲಿ ವ್ಯಾಪಾರ ಮಾಡೋ ಒಬ್ಬ ರೈತನ ಹತ್ರ ನೀನು ಚೌಕಾಸಿ ಮಾಡಬಹುದು. ಆಗ ಅಲ್ಲೊಂದು ಸಂಬಂಧ ಏರ್ಪಡುತ್ತೆ. ದೊಡ್ಡ ಊರುಗಳ ಬಜಾರ್, ಮಾಲ್‌ಗಳಲ್ಲಿ ನೀನು ಕೇವಲ ಒಬ್ಬ ಗಿರಾಕಿ. ಹಣವಿದ್ರೆ ಅಷ್ಟೆ ನಿನ್ನ ಜೊತೆ ಅವನ ಮಾತು..." ಅಂದಿದ್ದರು. ಹೌದಲ್ಲ! ಎಷ್ಟು ಸತ್ಯದ ಮಾತು.

ಇದಕ್ಕೆ ಹೊಂದಿಕೊಂಡಂತೆ ಒಂದು ತಮಾಷೆ ಘಟನೆ ನೆನಪಾಗುತ್ತಿದೆ. ನನ್ನ ದೊಡ್ಡಪ್ಪನ ಮಗ ನಟರಾಜ ಒಂದು ಸಂತೆಯ ದಿನ ನನ್ನನ್ನೂ ಕರೆದುಕೊಂಡು ಹೋದ. ನಾವು ಆಗ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು. ಕೊಳ್ಳುವುದು ಏನೂ ಇಲ್ಲದಿದ್ದರೂ, ಸಂತೆಯಲ್ಲಿ ಒಂದು ಸುತ್ತು ಹಾಕಿ ಬಂದರೆ ಮನಸ್ಸಿಗೆ ವಿಚಿತ್ರ ಸಮಾಧಾನ. ಎಲ್ಲ ಕಡೆ ಸುತ್ತು ಹಾಕಿ ಕಡೆಗೆ ತನ್ನ ಜೇಬಿನಲ್ಲಿದ್ದ ಐವತ್ತು ಪೈಸೆಗೆ ಸೌತೆಕಾಯಿ ಕೊಂಡು, ಅದಕ್ಕೆ ಉಪ್ಪು-ಕಾರ ಹಚ್ಚಿಸಿ ತಿನ್ನುತ್ತ ಹೋಗೋಣ ಅಂತ ನಟರಾಜನ ಯೋಜನೆ. ಎಳೆಯ ನಾಟಿ ಸೌತೆ ಮಾರುತ್ತಿದ್ದ ಒಬ್ಬಾತನ ಹತ್ತಿರ ಹೋದೆವು. ನಟರಾಜ, "ಎಷ್ಟು ಗೌಡ್ರೆ ಸೌತೆಕಾಯಿ?" ಕೇಳಿದ. ಅವರು, "ರೂಪಾಯಿಗೆ ನಾಲ್ಕು ತಗಳಿ," ಎಂದು ನಾಲ್ಕು ಸೌತೆಕಾಯನ್ನು ಎತ್ತಿ ಕೊಡಲು ಹೋದರು. ನಟರಾಜ, "ಐದು ಬತ್ತದೆ ಕೊಡಿ," ಅಂದ. ಅವರು, "ಇಲ್ಲಣ್ಣ ಬರಕುಲ," ಅಂದರು. ಹೀಗೇ ಮೂರು-ನಾಲ್ಕು ಸಲ ಇವನು, "ಬತ್ತದೆ ಕೊಡಿ," ಅನ್ನೋಕೆ, ಅವರು, "ಏ... ಇಲ್ಲ ಬರಕುಲ ಬುಡಿ," ಅನ್ನೋಕೆ. ಚೌಕಾಸಿ ನಡೆದು, ಕಡೆಗೆ ಆ ರೈತ, "ಅಯ್ಯೋ... ಬರಕುಲ ಅಂತಿನಿ, ಹಂಗೇನಾರ ಬಂದ್ರೆ ನೀವೆ ಮಾರ‍್ಕ ಓಗಿ," ಅಂದು ಸುಮ್ಮನೆ ಕೂತುಬಿಟ್ಟ. ಅವನ ಮಾತು, ಅದರ ಧ್ವನಿ, ಅದರೊಳಗಿನ ಹಾಸ್ಯ ಎಲ್ಲವೂ ನಮ್ಮೊಳಗೆ ಹುಚ್ಚು ನಗೆಯುಕ್ಕಿಸಿ, ಅದಕ್ಕೆ ನಾವು ನಕ್ಕ ಬಗೆಗೆ ಆ ರೈತನೂ ನಗತೊಡಗಿದ. ಇದ್ದ ಐವತ್ತು ಪೈಸೆಯಲ್ಲಿ ಎರಡು ಸೌತೆಕಾಯಿ ಕೊಂಡು, ಅದನ್ನು ತಿನ್ನುತ್ತ ಮನೆಗೆ ನಡೆದಿದ್ದ ನೆನಪು ಇನ್ನೂ ಮಾಸಿಲ್ಲ.

ಜಾತ್ರೆಯಲ್ಲಿ ನೆರೆದ ಎಲ್ಲರ ಕೈಯೊಳಗೂ ಸಿಕ್ಕಿ ತೇರು ಚಲಿಸುವುದು; ನಾನೇ ಎಲ್ಲರಲ್ಲಿಗೆ ಹೋಗುತ್ತೇನೆ ಅಂತ ದೇವರೇ ಉತ್ಸವಮೂರ್ತಿಯಾಗಿ ಜಾತಿ-ಮತವೆಣಿಸದೆ ಎಲ್ಲರ ಮನೆಬಾಗಿಲಿಗೂ ಹೋಗುವುದೇ ಜೀವಂತಿಕೆಯ ಕುರುಹು. "ಇಂಥವರು ಮಾತ್ರ ಬನ್ನಿ, ಇಂಥವರಿಗೆ ಪ್ರವೇಶವಿಲ್ಲ," ಎನ್ನುವ ನರಮನುಷ್ಯನ ನಿಲುವಿಗೆ ದೇವರು ನಕ್ಕಿರುತ್ತಾನೆ!

ಜಾತ್ರೆ, ಸಂತೆಗಳ ಗುಣವೇ ಅದು: ಎಲ್ಲರನ್ನೂ, ಎಲ್ಲವನ್ನೂ ಅಪ್ಪಿಕೊಳ್ಳುವುದು; ಮನುಷ್ಯ ಸಂಬಂಧಗಳನ್ನು ಕಾಪಿಡುವುದು. ದೂರದೂರಿನ ಮುಮ್ತಾಜ್ ಬೀಬಿ, "ನನಗೊಂದು ಮಗು ನೀಡಿ ಆಶೀರ್ವದಿಸು ತಾಯಿ," ಅಂತ ಕೇಳಿಕೊಂಡು ಆ ವರ್ಷ ಊರಿನ ತಾಯಿಗೆ ಹರಕೆ ಹೊತ್ತಿದ್ದಳು. ತಾಯಿಯೂ ಅವಳನ್ನು ಬೇವಿನೆಲೆ, ನಿಂಬೆಹಣ್ಣು ಕೊಟ್ಟು ಹರಸಿ ಪ್ರತಿವರ್ಷ ತನ್ನನ್ನು ನೋಡುವಂತೆ ಹೇಳಿಕಳಿಸಿತು. ಅಂತೆ, ಅವಳೂ ಪ್ರತಿವರ್ಷ ಬರುತ್ತಿದ್ದಳು - ಮಕ್ಕಳ ವರ ಸಿಕ್ಕಿದ ಮೇಲೂ. ಇದಲ್ಲವೇ ನಿಜವಾದ ಬದುಕಿನ ಕುಲುಮೆ? ನಿಜಾರ್ಥದ ಪ್ರಜಾಪ್ರಭುತ್ವ? ಜಾತ್ರೆಯಲ್ಲಿರುತ್ತಿದ್ದ ಕಮ್ಮಾರನ ಕುಲುಮೆಯೊಳಗೆ ನಿಗಿನಿಗಿ ಕೆಂಡ ಉರಿಯುತ್ತ, ಬೆಂಕಿ ಕಿಡಿಗಳು ಚಟ್‌ಚಟನೆ ಹಾರುತ್ತ, ಆಯುಧಗಳ ಜೊತೆ ಅಲ್ಲಿ ಕಮ್ಮಾರನೂ ಬೇಯುತ್ತಿರುತ್ತಿದ್ದ. ಅವನನ್ನು, ಅವನ ಕೈಚಳಕವನ್ನು ನೋಡುತ್ತ ಕೂರುವುದೇ ಧ್ಯಾನದಂತಿರುತ್ತಿತ್ತು. ಲೋಹ ಕರಗುತ್ತ, ಅದು ಕರಗುವ ಹದಕ್ಕೆ ಅವನೂ ಕಾಯುತ್ತ... ಒಂದು ನಿಮಿಷ ಆ ಹದ ಅತ್ತ ಕಡೆ ಅಥವಾ ಇತ್ತ ಕಡೆಯಾದರೂ ಕೆಲಸ ಕೆಡ್ತು... ಆಹಾ, ಆ ಲೋಹ ತಟ್ಟಿಸಿಕೊಳ್ಳುವ ಸುಖವೋ, ಅದು ಅದರದ್ದು ಮಾತ್ರ, ಮತ್ತಿನ್ಯಾರಿಗೂ ಅದರಲ್ಲಿ ಪಾಲಿಲ್ಲ ಅನ್ನುವಂತಹ ಕೊಟ್ಟುಕೊಳ್ಳುವಿಕೆ. ಆ ಕುಲುಮೆ ಹರಿತಗೊಳಿಸುತ್ತಿದ್ದುದು ಆಯುಧಗಳನ್ನು ಮಾತ್ರವೇ? ಊಹುಂ... ಅದು ಕುಟ್ಟಿ, ಉಜ್ಜಿ, ತಟ್ಟಿ ಸೂಕ್ಷ್ಮಗೊಳಿಸುತ್ತಿದ್ದುದು ನಮ್ಮ ಮನಸ್ಸನ್ನೂ ಅಲ್ಲವೇ? ರೈತನ ಕೊಡಲಿ, ಪಿಕಾಸಿ, ಹಾರೆ, ಕತ್ತಿ, ಮಚ್ಚುಗಳೆಲ್ಲ ಮೊಂಡುತನ ಕಳೆದು ಮತ್ತೆ ತಮ್ಮ ಚೂಪನ್ನು ಗಳಿಸಿಕೊಳ್ಳುವಂತೆ, ಅಲ್ಲಿ ನೆರೆಯುವ ಪ್ರತಿಯೊಬ್ಬರ ಮನಸ್ಸೂ ಪ್ರೀತಿ, ಸಹಬಾಳ್ವೆಯೆಂಬ ತನ್ನ ಮೂಲಕ್ಕೆ ಹಿಂತಿರುಗುವ ತಾಣದಂತಿತ್ತು ಆ ಜಾತ್ರೆ, ಆ ಸಂತೆ, ಅಲ್ಲಿನ ದೇವರುಗಳು. ಆ ನಮ್ಮ ದೇವರು ತಾನೇ ಅದೆಷ್ಟು ಜನರ ಕಷ್ಟ ಕೇಳಿಕೊಳ್ಳುತ್ತಿದ್ದ! ಅದೇನು ಥರಾವರಿ ಮನಸ್ಸನ್ನು ಹೊಕ್ಕು ಬರುತ್ತಿದ್ದ ಎಂದು ನೆನೆದರೆ ಕಣ್ಣು ತೇವಗೊಳ್ಳುತ್ತದೆ. ಅದೆಲ್ಲ ಮಾಡಲು ದೇವರೂ ಸೂಕ್ಷ್ಮಗೊಳ್ಳುವ, ಹರಿತಗೊಳ್ಳುವ ಆಟವೂ ಇದಾಗಿದೆಯೇನೋ ಅನ್ನಿಸಿ ಮನಸ್ಸು ಅಡ್ಡೆ ಹೊತ್ತ ದೇವರಂತೆ ಅಲೆಯುತ್ತಿದೆ.

ಸಂತ ಶಿಶುನಾಳ ಶರೀಫ ಹಾಡಿದ...
“ನಡಿಯೋ ದೇವರ ಜಾತರಿಗೆ
ಮುಕ್ತಿಗೊಡೆಯ ಖಾದರಲಿಂಗ
ನೆಲೆಸಿರ್ಪ ಗಿರಿಗೆ...”

ಖಾದರನೂ, ಲಿಂಗವೂ ಒಟ್ಟಾಗಿ ನೆಲೆಸಿರುವ ತಾಣ ಈಗ ಅದೆಲ್ಲಿ ಹೋಯಿತು? ಅವರಿಬ್ಬರೂ ‘ಮುಕ್ತಿ’ಗೆ ಮಾತ್ರ ಒಡೆಯರು; ದರ್ಪ, ಸೇಡು, ಅಹಂಕಾರ, ಮದ, ಮಾತ್ಸರ್ಯಕ್ಕಲ್ಲ ಅನ್ನುವ ಶರೀಫನ ತಾಯಿಯೆದೆಯ ಹಾಲು ಕುಡಿದು ಬೆಳೆದವರಲ್ಲವೇ ನಾವೆಲ್ಲ?

“ಆ ಮಹಾಮಹಿಮ ಪೇಳಿದನು ಈ ಭೂಮಿಯೊಳು ಹುಲಗೂರ ಗ್ರಾಮಕ್ಕಿಳಿದನು... ನಾಮರೂಪದಿ ಆ ಪ್ರಲಾಪದಿ ಸೀಮೆಯನು ಗೆಲಿದಂಥ ಸ್ವಾಮಿಯ/ ನೇಮ ಹಿಡಿದಾತ್ಮವನು ಭಜಿಸುತ ಕಾಮಕ್ರೋಧವ ಕಾಲಿಲೊದೆದು...”

ಶರೀಫಜ್ಜ ಅಂದಂತೆ, ‘ಕಾಮ-ಕ್ರೋಧ’ವನ್ನು ಕಾಲಲ್ಲಿ ಒದೆದು ಭಜಿಸುವವನಿಗೆ ಮಾತ್ರ ಇಲ್ಲಿ ‘ಮುಕ್ತಿ’ ಎಂದೇ ಇಲ್ಲಿತನಕ ಬದುಕಿದವರಲ್ಲವೇ ನಾವು? ಒಮ್ಮೆಗೇ ಇದೆಲ್ಲ ಹೇಗೆ ಪಲ್ಟಾಯಿಸಿಬಿಟ್ಟಿತು? ಅವ್ಯಕ್ತ ‘ಭಯ’ವನ್ನು ಹುಟ್ಟಿಸುತ್ತಿರುವರ‍್ಯಾರು? ಮನುಷ್ಯ-ಮನುಷ್ಯರ ನಡುವೆ ದ್ವೇಷದ ಹೊಗೆ ಏಕೆ ಕಮರಿಕೊಳ್ಳುತ್ತಿದೆ?

Jathra 2

ಇದನ್ನು ಓದಿದಿರಾ?: ಕರುಣೆಯ ಕೃಷಿ | ನೆಯೋಮಿ ಶೀಹಾಬ್ ನೈ ಕವಿತೆ 'ಹೆಗಲು'

ಜಾತ್ರೆ, ಸಂತೆಗಳಂತ ಸಾಮೂಹಿಕ ಸಂಭ್ರಮಗಳು ಮನುಷ್ಯರಿಗೆ ತಮ್ಮ ಕೀಳು ನೆಲೆಗಳಿಂದ ಹೊರಬರುವ ಅವಕಾಶದಾಣಗಳು. ಬೇರೆ-ಬೇರೆ ಸಮುದಾಯಗಳು ತಮ್ಮ ಸುತ್ತಲೂ ಕಟ್ಟಿಕೊಂಡಿರುವ ಕೋಟೆಗಳ ಒಳಗಡೆಯೇ ಸಂತೋಷ ಪಡುತ್ತವೆ. ಇಂತಹ ಸಂಭ್ರಮಗಳಲ್ಲಿ ಕೋಟೆಯಾಚೆಗೂ ಅಷ್ಟಿಷ್ಟು ಇಣುಕುತ್ತವೆ. ನಮ್ಮನ್ನು ಸಂಪೂರ್ಣ ನುಂಗಿ ನೊಣೆಯುತ್ತಿರುವ ಇಂದಿನ ರೂಕ್ಷತೆ ಮತ್ತು ದುಡ್ಡುಬಾಕತನಗಳಿಂದ ರಕ್ಷಿಸಿ, ಮೌಲ್ಯ, ನಂಬಿಕೆಗಳ ಆಸರೆಯಲ್ಲಿ ಬದುಕುವ ಸುಖವನ್ನು ಉಳಿಸಿಕೊಂಡಿರುವ ಜಾಗ ಈ ಸಂಭ್ರಮಗಳು. ಅವರಿವರೆನ್ನದೆ ಜಾತ್ರೆಯಲ್ಲಿ ನೆರೆದ ಎಲ್ಲರ ಕೈಯೊಳಗೂ ಸಿಕ್ಕಿ ತೇರು ಚಲಿಸುವುದು; ಎಲ್ಲರೂ ಗುಡಿಯೊಳಕ್ಕೆ ಬರಲಾರರು, ನಾನೇ ಅವರಲ್ಲಿಗೆ ಹೋಗುತ್ತೇನೆ ಅಂತ ದೇವರೇ ಉತ್ಸವಮೂರ್ತಿಯಾಗಿ ಜಾತಿ-ಮತವೆಣಿಸದೆ ಎಲ್ಲರ ಮನೆಬಾಗಿಲಿಗೂ ಹೋಗುವುದೇ ಈ ಜೀವಂತಿಕೆಯ ಕುರುಹು. "ಇಂಥವರು ಮಾತ್ರ ಬನ್ನಿ, ಇಂಥವರಿಗೆ ಪ್ರವೇಶವಿಲ್ಲ," ಎನ್ನುವ ನರಮನುಷ್ಯನ ನಿಲುವಿಗೆ ದೇವರು ನಕ್ಕಿರುತ್ತಾನೆ! ಮನುಷ್ಯನ ಮನಸ್ಸಿನ ಭೂಮಿಕೆಯಾದ ಪ್ರೀತಿ, ಕಾರುಣ್ಯಕ್ಕೆ ತದ್ವಿರುದ್ಧವಾದ ಇಂತಹ ನಿಲುವುಗಳು ಜನರನ್ನು, ವಿಶೇಷವಾಗಿ ರೈತ ಸಮುದಾಯವು ಆಶ್ರಯಿಸಿದ ಉಪಕಸುಬುಗಳಿಂದ ಅದನ್ನು ವಂಚಿತಗೊಳಿಸುವ ನಡೆ.

ಮನುಷ್ಯ ಸಂಬಂಧವೆಂಬುದು ಒಂದು ಜಾಲ. ಇದಕ್ಕೆ ಆದಿ-ಅಂತ್ಯಗಳೆಂಬುದಿಲ್ಲ. ಒಂದರೊಳಗೆ ಮತ್ತೊಂದು, ಅವನೊಳಗೆ ಅವಳು, ಅವರೊಳಗೆ ಇವರು ಕೂಡಿಕೊಂಡ ಹೆಣಿಗೆಯಿಂದಾದ ಜಾಲ ಇದು. ಈ ಜಾಲದೊಳಗೆ ನಾನೊಂದು ಕೊಂಡಿ ಮಾತ್ರ. ಇದು ನನ್ನ ಒಡಲಿನಿಂದಲೇ ಆದ ಕೊಂಡಿ. ಈ ಒಡಲು ಇರುವವರೆಗೂ ಅದು ಹಾಗೇ ಇರುತ್ತದೆ ಕೂಡ. 'ಜಾಲ’ವು ಬೇಟೆಯ ಉರುಳು ಹೇಗೋ, ಪ್ರಪಂಚದ ಜೊತೆ ನಾನು ಸಂಬಂಧಿಸಿಕೊಳ್ಳುವ ಏಕೈಕ ಮಾರ್ಗವೂ ಹೌದು. ಲೋಕದ ಎಲ್ಲ ಆಲೋಚನೆಗಳನ್ನು ಮೀರಿದ ಉದ್ದೇಶ ಈ ಜಾಲಕ್ಕಿದೆ. ಇದು ಸೃಷ್ಟಿಸ್ಥಿತಿ, ಇದೇ ಸೃಜನಶೀಲತೆಯ ಒರತೆ ಕೂಡ. ಇದನ್ನು ಹೀಗೆ ನೋಡದೆ, ‍"ಇದರಲ್ಲಿ ಈ ಹೆಣಿಗೆ ನನ್ನದು, ಇದು ನಾನು ಮಾಡಿದ ಕೊಂಡಿ, ಇವನು ಹಿಂದೂ - ಇವನು ಮುಸಲ್ಮಾನ, ಕ್ರೈಸ್ತ, ಸಿಖ್..." ಎಂದು ಕತ್ತರಿಸಲು ತೊಡಗಿದ ಕೂಡಲೇ, ಯಾವ ಜಾಲ ನನ್ನನ್ನು ಇಡೀ ಸೃಷ್ಟಿ ವ್ಯವಸ್ಥೆಯೊಳಗೆ ಬೆಸೆದಿತ್ತೋ, ಅದೇ ನನ್ನನ್ನು ಬಂಧಿಸುವ ಬಲೆಯಾಗಿಬಿಡುತ್ತದೆ.

ಇಂತಹ ಮಿತಿಗಳನ್ನು ಮೀರಲೆಂದೇ ಜಾತ್ರೆ, ಉತ್ಸವ, ಸಂತೆಗಳೆಲ್ಲ ನಮಗೆ ಆ ದೇವರೇ ಸೃಷ್ಟಿಸಿದ ಬೆಳಕಿಂಡಿಗಳು. ಮನಸ್ಸಿನ ಬೆಳಕಿಂಡಿಯನ್ನು ತೆರೆದೇ ಇರೋಣ, ಯಾರಿಗೆ ಗೊತ್ತು, ದೇವರು ಅಲ್ಲಿಂದಲೂ ಬರಬಹುದು, ಯಾವುದಾದರೂ ರೂಪದಲ್ಲಿ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app