ಸ್ಮರಣೆ | ಶೂದ್ರ ಭಾರತದ ಅರಿವಿನ‌ ಕಣ್ಣುಗಳು ಪೆರಿಯಾರ್

Periyar-1

ʼಪೆರಿಯಾರ್' ಎಂದರೆ ನವಯುಗದ ಪ್ರವರ್ತಕ, ಆಗ್ನೇಯ ಏಷ್ಯಾದ ಸಾಕ್ರೇಟಿಸ್, ಸಾಮಾಜಿಕ‌ ಸುಧಾರಣೆಗಳ ತಂದೆ, ಅಜ್ಞಾನ, ಮೌಢ್ಯ, ಕಂದಾಚಾರಗಳ ಮತ್ತು ಹುಟ್ಟುಗುಣಗಳ ಪರಮ ಶತ್ರು" ಎಂಬ ಈ ಜಾಗತಿಕ ಮಾತುಗಳು ಭಾರತದ ಅರಿವಿನ ಘನತೆಯನ್ನು ಎತ್ತಿ ಹಿಡಿಯುವಂತಾಗಿದೆ. ಭಾರತ ಕಂಡ ಅದ್ವಿತೀಯ ಪ್ರಗತಿಪರ ಚಿಂತಕ ಪೆರಿಯಾರ್

"PERIYAR, the prophet of the new age;the SOCRATES of south east Asia ; father of the social reform movement, and ARCH enemy of ignorance, Superstition, meaningless customs and base manners."

'ಪರಿಯಾರ್' ಯಾರು ಎಂಬುದನ್ನು ವಿಶ್ವಮಾನ್ಯ ಸಂಸ್ಥೆ UNESCO ಹೇಳಿದ ಈ ಮೇಲಿನ ಮಾತುಗಳಿಂದ ಅನಾವರಣಗೊಳ್ಳುತ್ತದೆ.

ಮೌಢ್ಯ, ಜಾತಿ ವ್ಯವಸ್ಥೆ, ಧಾರ್ಮಿಕ ಶೋಷಣೆ, ಸನಾತನ ಪಿಡುಗುಗಳಿಂದ ಮನುಕುಲವನ್ನು ಬಿಡುಗಡೆಗೊಳಿಸಲು ದಟ್ಟ ವೈಚಾರಿಕತೆಯ ದಿಟ್ಟ ಚಳವಳಿಯನ್ನೆ ನಡೆಸಿದ ಪೆರಿಯಾರ್ ರಾಮಸ್ವಾಮಿ‌ ನಾಯ್ಕರ್ ಅವರಿಗೆ 1970ರಲ್ಲಿ ಯುನೆಸ್ಕೊ ಪ್ರಶಸ್ತಿ ನೀಡಿ ಗೌರವಿಸಿದ ಸಂದರ್ಭದಲ್ಲಿ ಈ ಮೇಲಿನ ವ್ಯಾಖ್ಯಾನವನ್ನು ಚಿರಸ್ಥಾಯಿಯಂತೆ ಪ್ರದಾನ ಮಾಡಿತು.

'ಪೆರಿಯಾರ್' ಎಂದರೆ ನವಯುಗದ ಪ್ರವರ್ತಕ, ಆಗ್ನೇಯ ಏಷ್ಯಾದ ಸಾಕ್ರೇಟಿಸ್, ಸಾಮಾಜಿಕ‌ ಸುಧಾರಣೆಗಳ ತಂದೆ, ಅಜ್ಞಾನ, ಮೌಢ್ಯ, ಕಂದಾಚಾರಗಳ ಮತ್ತು ಹುಟ್ಟುಗುಣಗಳ ಪರಮ ಶತ್ರು ಎಂಬ ಈ ಜಾಗತಿಕ ಮಾತುಗಳು ಭಾರತದ ಅರಿವಿನ ಘನತೆಯನ್ನು ಎತ್ತಿ ಹಿಡಿಯುವಂತಾಗಿದೆ.

1876, ಸೆ.17 ರಂದು ಈರೋಡ್ (ಇವತ್ತಿನ ಪೆರಿಯಾರ್ ಜಿಲ್ಲೆ) ಶ್ರೀಮಂತ ವರ್ತಕ, ಕಟ್ಟಾ ಹಿಂದೂ ವೈಷ್ಣವ ಸಂಪ್ರದಾಯ ಕುಟುಂಬದ ವೆಂಕಟಪ್ಪನಾಯಕ, ಚಿನ್ನತಾಯಿ ಅಮ್ಮಾಳ್ ದಂಪತಿಗಳ ಮಗನಾಗಿ ಹುಟ್ಟಿದ ಈ ವಿ ರಾಮಸ್ವಾಮಿ‌ ನಾಯ್ಕರ್ ಅವರು 'ಪೆರಿಯಾರ್' ಆಗಿ ರೂಪುಗೊಳ್ಳದೇ ಹೋಗಿದ್ದಿದ್ದರೆ, ಈ ದೇಶದ ದ್ರಾವಿಡ ಜನಸಮಯದಾಯಕ್ಕೊಂದು ಅಸ್ಮಿತೆಯ ಕುರುಹು ಆಗಲಿ, ಅರಿವು ಆಗಲಿ ದಕ್ಕುತ್ತಿರಲಿಲ್ಲ. ವೈದಿಕ ಪ್ರಣೀತ ಹಿಂದೂಧರ್ಮದ ದೌರ್ಜನ್ಯ, ಮೌಢ್ಯ, ಕಂದಾಚಾರಗಳು, ದೇವರು, ಧರ್ಮದ ಹೆಸರಿನಲ್ಲಿನ ಶೋಷಣೆಯ ವಿರುದ್ಧ ಚಾರ್ವಾಕರ ನಂತರ ನಾಸ್ತಿಕವಾದವನ್ನು ಪ್ರಖರವಾಗಿ ಪ್ರತಿಪಾದಿಸಿದ ಭಾರತ ಕಂಡ ಅದ್ವಿತೀಯ ಪ್ರಗತಿಪರ ಚಿಂತಕ ಪೆರಿಯಾರ್.

ಪೆರಿಯಾರ್ ಮೂಲತಃ ಕನ್ನಡಿಗರು, ಆದರೆ ಅವರ ವೈಚಾರಿಕ ಚಳವಳಿಯ ಬೇರುಗಳು ತಮಿಳುನಾಡಿನಲ್ಲಿ ವಿಸ್ತರಿಸಿ ದಕ್ಷಿಣ ಭಾರತದ ದ್ರಾವಿಡ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಮರುಕಟ್ಟಿಕೊಟ್ಟವರು.

Image
Periyar-3

ಮೌಢ್ಯ, ಜಾತಿವ್ಯವಸ್ಥೆ, ಕಂದಾಚಾರಗಳಿಗೆ ದೇವರು ಮತ್ತು ಧರ್ಮವೇ ಮೂಲ ಕಾರಣ ಎಂಬ ಹಗಲು ಸತ್ಯವನ್ನೆ ಜಗತ್ತಿಗೆ ತೋರಿದ ಪೆರಿಯಾರ್ ಬ್ರಾಹ್ಮಣ್ಯದ ಹುನ್ನಾರಗಳ ವಿರುದ್ಧ ಪ್ರತಿ ಕ್ರಾಂತಿಯಾಗಿ ಉಗ್ರ ನಾಸ್ತಿಕವಾದವನ್ನು ಪ್ರತಿಪಾದಿಸಿದರು.

ದೇವರುಗಳ ಹುಟ್ಟು, ನಂಬಿಕೆ, ಆರಾಧನೆಗಳ ಹಿಂದಿನ ಮಿಥ್ಯಗಳನ್ನು ವೈಜ್ಞಾನಿಕ, ವೈಚಾರಿಕ ಪ್ರಮೇಯಗಳಿಂದ ಬಯಲು ಮಾಡುವ ಮೂಲಕ ದೇವರು ಎಂಬ ಅಸ್ತಿತ್ವವೇ ಸುಳ್ಳು, ದೇವರು, ಧರ್ಮದ ಹೆಸರಿನಲ್ಲಿ ಸನಾತನಿಗಳು ಶೂದ್ರರನ್ನು ಶೋಷಿಸುವ ವಂಚಕ ಮಾರ್ಗ ಎಂಬುದನ್ನು ಜಗತ್ತಿಗೆ ಸಾರಿದರು. "ಮನುಷ್ಯನ ಗುಣ ಸ್ವಾಭಾವವೂ ಆತನ ಸಾಮಾಜಿಕ‌ ಪರಿಸರದಿಂದ ರೂಪುಗೊಳ್ಳುತ್ತದೆ ಎಂದಾದರೆ. ಸಾಮಾಜಿಕ ವ್ಯವಸ್ಥೆ ಹೆಚ್ಚು ಮಾನವೀಯಗುಣವುಳ್ಳದ್ದಾಗಿರಬೇಕು" ಎಂಬ ಕಾರ್ಲ್ ಮಾರ್ಕ್ಸ್ ಅವರ ಸಾಮಾಜಿಕ ಮೀಮಾಂಸೆಯಡಿಯಲ್ಲಿ ಈ ಸಮಾಜವನ್ನು ದೇವರು ಮುಕ್ತ,ಧರ್ಮ ಮುಕ್ತ , ಇವುಗಳ ಹೆಸರಿನಲ್ಲಿ ನಡೆಯುವ ಮೌಢ್ಯ,ಶೋಷಣೆ ಮುಕ್ತ, ಹಾಗೂ ಅದಕ್ಕೆ ಪ್ರತಿಯಾಗಿ ಮಾನವೀಯತೆ, ಅಂತಃಕರಣ, ಸಮಾನತೆ ಯುಕ್ತ ಸಮಾಜದ ನಿರ್ಮಾಣಕ್ಕೆ ಪೆರಿಯಾರ್ ಸದಾ ಬೆಂಕಿಯಂತೆ ಉರಿದರು.

ಬ್ರಾಹ್ಮಣ ಮತ್ತು ದ್ರಾವಿಡ ಶೂದ್ರ ನಡುವಿನ ಹಿಂಸಾ ಸಂಘರ್ಷ ಪೆರಿಯಾರ್ ಚಳವಳಿಯ ಕೊಡುಗೆ ಎಂದೇ ಪೆರಿಯಾರ್ ಅವರನ್ನು 1958 ರಲ್ಲಿ ಆರು ತಿಂಗಳ ಜೈಲಿನಲ್ಲಿಡಲಾಗುತ್ತದೆ. ಈ ಸಂದರ್ಭದಲ್ಲಿ ಸಮಾಜವಾದಿ ಚಳವಳಿಯ ಧೀಮಂತ‌ನಾಯಕ ರಾಮಮನೋಹರ ಲೋಹಿಯಾ ಜೈಲು ಆಸ್ಪತ್ರೆಯಲ್ಲೆ ಪೆರಿಯಾರ್ ಅವರನ್ನು ಭೇಟಿ ಮಾಡಿದಾಗ 'ಆದರ್ಶಗಳಿಗೋಸ್ಕರ ನಾನು ಶಿಕ್ಷೆ ಅನುಭವಿಸಬೇಕಾಗಿದೆ. ಶಾಂತ ರೀತಿಯ ಸಾಧನಗಳಿಂದ ಬ್ರಾಹ್ಮಣತ್ವವನ್ನು ನಿರ್ಮೂಲನೆಗೊಳಿಸದಿದ್ದಲ್ಲಿ ಜನ ಹಿಂಸೆಗಿಳಿದರೆ ಆಶ್ಚರ್ಯಪಡಬೇಕಾಗಿಲ್ಲ' ಎಂಬ ತಮ್ಮ ಅನುಯಾಯಿಗಳಿಗೆ ಕೊಟ್ಟ ಕರೆಯನ್ನು ಪೆರಿಯಾರ್ ಸಮರ್ಥಿಸಿಕೊಳ್ಳುತ್ತಾರೆ. ಇದು ಅವರ ಸೈದ್ಧಾಂತಿಕ ಗಟ್ಟಿತನಕ್ಕೆ ಸಾಕ್ಷಿ.

ಈ ದೇಶದ ಮೂಲ ನಿವಾಸಿಗಳೇ ತನ್ನ ನೆಲದಲ್ಲಿ ವಲಸೆ ಬಂದ ಆರ್ಯ ಜಾತಿಗಳ ಜೀತದಾಳುಗಳೂ, ಪಶುಗಳಿಗಿಂತಲೂ ಹೀನಾಯ ಬದುಕನ್ನು ಅನುಭವಿಸುವಾಗ ನೆಲಮೂಲದ ಬಹುಜನ ದ್ರಾವಿಡ ಸಂಸ್ಕೃತಿಯನ್ನು ಉತ್ಕನನ ಮಾಡಿದ ಪೆರಿಯಾರ್ ಬ್ರಾಹ್ಮಣೇತರ ಸ್ವಾಭಿಮಾನಿ ಸಮಾವೇಶವನ್ನು ಸಂಘಟಿ ಸುವುದರೊಂದಿಗೆ ದ್ರಾವಿಡ ಶೂದ್ರರಲ್ಲಿ ರಾಜಕೀಯ ಶಕ್ತಿ ಮತ್ತು ಎಚ್ಚರ ತುಂಬುವ ಚಳವಳಿಯನ್ನು ಬಡಿದೆಬ್ಬಿಸಿದರು.

ಭಾರತದ ಮೂಲ ನಿವಾಸಿಗಳು ಅಂದರೆ, ದ್ರಾವಿಡರ ಸ್ವಾಭಿಮಾನದ ಸಂಕೇತವಾಗಿ 'ಕಪ್ಪು' ಬಣ್ಣವನ್ನು ಘನಗೊಳಿಸಿದರು. ಮೀಸಲಾತಿ, ಸ್ವಾತಂತ್ರ್ಯದ ಪರಿಕಲ್ಪನೆಗಳೊಂದಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೂ ಆದರ್ಶ ದಾರಿಯೊಂದನ್ನು ಕಟ್ಟಿಕೊಟ್ಟಿದ್ದರು ಎಂಬುದನ್ನು ಮರೆಯಲಾಗದು.

ಮತ್ತದೆ ದೇವರು, ಧರ್ಮ, ಮೌಢ್ಯ,ಜಾತಿಯ ವಂಚಕ‌ ಮಾರ್ಗಗಳಿಂದ ರಾಜಕೀಯಾಧಿಕಾರದ ರಕ್ತ- ಮಾಂಸ ಮೈಗೂಡಿಸಿಕೊಂಡು ದಷ್ಟಪುಷ್ಟವಾಗುತ್ತಿರುವ ಹಿಂದೂತ್ವವು‌ ಬಹುತ್ವ ಭಾರತವನ್ನು ಹಿಮ್ಮುಖ ಚಲನೆಗೆ ದೂಡಲಾಗುತ್ತಿದೆ. ಈ ಹೊತ್ತಿನಲ್ಲಿ ಬಹುಜನರ ಅಂದರೆ ದ್ರಾವಿಡ ಭಾರತವನ್ನು ಉಳಿಸಿಕೊಳ್ಳಲು ಪೆರಿಯಾರ್ ಅವರ ಚಿಂತನೆ, ಕ್ರಿಯಾಮಾರ್ಗ, ಚಳವಳಿಯ ಬದ್ಧತೆ, ವೈಚಾರಿಕ ಸ್ಪಷ್ಟತೆ ಅಗತ್ಯವಿದೆ.  'ಹಿಂದೂತ್ವ ಬಿಟ್ಟರೆ ಶೂದ್ರರ ಏಳಿಗೆ ಸಾಧ್ಯ' ಎಂದು ಹೇಳಿದರಷ್ಟೆ ಅಲ್ಲ, ನಾವಿನ್ನೂ ಹಿಂದೂಗಳಲ್ಲ, ಹಿಂದೂ ಧರ್ಮದ ಅನುಯಾಯಿಗಳಲ್ಲ ನಿಶ್ಚಯಿಸುವವರೆಗೂ ನಾವು ಶೂದ್ರರಾಗಿಯೇ, ಹಾರುವರ ದಾಸೀಪುತ್ರರೇ ಆಗಿ ಉಳಿಯಬೇಕಾಗುತ್ತದೆ ಎಂದ ಪೆರಿಯಾರ್ ಅವರು ಶೂದ್ರತನವನ್ನು ಉಳಿಸಿಕೊಳ್ಳುವ, ಹಿಂದೂತ್ವವನ್ನು ಧಿಕ್ಕರಿಸುವ ಅರಿವಿನ‌ ಕಣ್ಣುಗಳ ಮೂಡಿಸಲು ಅವಿರತ ದುಡಿದರು.   

ಈ ಸುದ್ದಿ ಓದಿದ್ದೀರಾ? ನಾಳೆ (ಸೆ. 18) ಕಲೇಸಂ ಚುನಾವಣೆ| ಯೋಗ್ಯರನ್ನು ಆಯ್ಕೆ ಮಾಡುವ ಮೂಲಕ ಲೇಖಕಿಯರು ಪ್ರಜ್ಞಾವಂತಿಕೆ ತೋರುವರೇ?

ಹಿಂದುತ್ವದ ಹೆಸರಿನ ಯಾತ್ರೆಗಳಲ್ಲಿ ತ್ರಿಶೂಲ, ಕೇಸರಿ ಬಾವುಟ ಹಿಡಿದು ಉನ್ಮತ್ತರಾಗಿರುವ, ಧರ್ಮದ್ವೇಷದ ರಕ್ತದೊಕುಳಿಯಲ್ಲಿ ಹೆಣವಾಗುವ, ಇಲ್ಲವೆ ಜೈಲು ಸೇರುವ ʼಶೂದ್ರ ಭಾರತʼ ಈ ಹೊತ್ತಿನಲ್ಲಿ ಪೆರಿಯಾರ್ ಮೂಡಿಸಿದ ಅರಿವಿನ ಕಣ್ಣುಗಳನ್ನು ಧರಿಸಬೇಕಿದೆ. ತನ್ನತನದ ಸ್ವಾಭಿಮಾನವನ್ನು ಉಳಿಸಿಕೊಳ್ಳಬೇಕಿದೆ.

ಸಮಾಜ ಸುಧಾರಕ, ಅಪ್ರತಿಮ ಮಾನವತಾವಾದಿ, ರಾಜಕಾರಣಿ, ತತ್ವಜ್ಞಾನಿ, ಉಗ್ರ ಹೋರಾಟಗಾರ, ಪತ್ರಕರ್ತ ಹೀಗೆ ಬಹುಪಾತ್ರಗಳಿಂದ ಸಮಸಮಾಜ, ವೈಚಾರಿಕಯುಕ್ತ  ಸಮಾಜವನ್ನು ಕಟ್ಟಲು ಇಡೀ ತಮ್ಮ ಬದುಕನ್ನೆ ಸವೆಸಿದ ಪೆರಿಯಾರ್ ವರ್ತಮಾನ ಭಾರತದ ಎಲ್ಲಾ ತಲ್ಲಣಗಳಿಗೆ, ಉಗ್ರ ಹಿಂದುತ್ವದ ರಣಕೇಕೆಗೆ ಒಂದು ದಿಟ್ಟ ಉತ್ತರವಾಗಿಯೂ, ಪರಿಹಾರವಾಗಿಯೂ ಕಾಣಬಲ್ಲರು. ಪೆರಿಯಾರ್ ರಾಮಸ್ವಾಮಿ ಎಂಬ ವ್ಯಕ್ತಿತ್ವದ ಹುಟ್ಟು ಸದಾ ಬಹುತ್ವ ಭಾರತದ ಘನತೆ.

ನಿಮಗೆ ಏನು ಅನ್ನಿಸ್ತು?
0 ವೋಟ್