ಸ್ಮರಣೆ | ಭಾರತದ ವೈಚಾರಿಕತೆಯ ಸಾಕ್ಷಿಪ್ರಜ್ಞೆ ಪೆರಿಯಾರ್ ರಾಮಸ್ವಾಮಿ

periyar

ತಮಿಳುನಾಡಿನಲ್ಲಿ ದ್ರಾವಿಡ  ಚಳವಳಿಯ ಮೂಲಕ ಮೌಢ್ಯದ ವಿರುದ್ಧ ಸಮರ ಸಾರಿದ್ದ  ಪೆರಿಯಾರ್‌ ರಾಮಸ್ವಾಮಿ ನಾಯ್ಕರ್‌ ಅವರ 143ನೇ ಜನ್ಮದಿನವಿಂದು. ತಮಿಳುನಾಡಿನ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರ ನೇಮಕಾತಿಗಾಗಿ ಚಳವಳಿ ಆರಂಭಿಸಿದ ಪೆರಿಯಾರ್ ಅವರು ಇಂದಿಗೂ ಪ್ರಗತಿಪರರಿಗೆ ಚಳವಳಿಯ ಸ್ಪೂರ್ತಿಯಾಗಿದ್ದಾರೆ

ತೆಲುಗು ಮೂಲದ ಮತ್ತು ಕನ್ನಡದ ನಂಟುಳ್ಳ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ತಮಿಳುನಾಡಿನ ಸದೃಢ ದ್ರಾವಿಡ ಚಳವಳಿಯ ದಿಟ್ಟ ನಾಯಕ. ನವಯುಗದ ಪ್ರವಾದಿˌಏಷ್ಯಾದ ಸಾಕ್ರಟೀಸ್ ಮುಂತಾಗಿ ಗುರುತಿಸಲ್ಪಡುವ ಪೆರಿಯಾರ್ ಅವರು ಸೆಪ್ಟೆಂಬರ್ 17ˌ1879ರಲ್ಲಿ ತಮಿಳುನಾಡಿನ ಈರೋಡಿನಲ್ಲಿ ಜನಿಸುತ್ತಾರೆ. ಶಾಲೆಯನ್ನು ತೊರೆದು ತಂದೆಯ ವ್ಯಾಪಾರದಲ್ಲಿ ನೆರವಾಗುತ್ತಾ ಬುದ್ಧನ ಪ್ರಶ್ನಿಸುವ ಗುಣವನ್ನು ಮೈಗೂಡಿಸಿಗೊಂಡು ಬೆಳೆದವರು. ಇಂದು ಅವರ 143ನೇ ಜನ್ಮದಿನ.

Eedina App

ಭಾರತೀಯ ಜನಮಾನಸದಲ್ಲಿ ಆಳವಾಗಿ ಬೇರೂರಿದ್ದ ಬ್ರಾಹ್ಮಣವಾದದ ಮೌಢ್ಯಗಳ ಮೂಲೋತ್ಪಾಟನೆಗೆ ತೊಡೆತಟ್ಟಿದ ಮಹಾನ್ ವಿಚಾರವಾದಿ ಪೆರಿಯಾರ್. ’ಕುಡಿಯರಸು’ ಎಂಬ ನಿಯತಕಾಲಿಕದ ಮೂಲಕ ಹಿಂದಿಯೇತರರ ಮೇಲೆ ಹಿಂದಿ ಹೇರಿಕೆಯನ್ನು ಮೊದಲು ವಿರೋಧಿಸಿದವರು. ತಮಿಳುನಾಡಿನ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರ ನೇಮಕಾತಿಗಾಗಿ ಚಳುವಳಿ ಆರಂಭಿಸಿದ ಪೆರಿಯಾರ್ ಅವರು, ಬ್ರಾಹ್ಮಣರು ಗಾಂಧಿಜೀಯವರನ್ನು ಕೊಲೆ ಮಾಡುತ್ತಾರೆಂದು ಮೊದಲೇ ಊಹಿಸಿದ್ದ ದಾರ್ಶನಿಕ.

ಪೆರಿಯಾರ್ ಅವರ 'ಸತ್ಯ ರಾಮಾಯಣ' ಎಂಬ ಗ್ರಂಥವನ್ನು ಲಲಾಯಿಸಿಂಗ್ ಯಾದವ್ ಅವರು ಹಿಂದಿಗೆ ಅನುವಾದಿಸಿದ್ದರು. ಅದನ್ನು ಆಗಿನ ಉತ್ತರ ಪ್ರದೇಶ ಸರಕಾರ ನಿಷೇಧಿಸಿತ್ತು. ಆ ಕುರಿತ ಮೊಕದ್ದಮೆಯು ಅಲಹಾಬಾದ್ ನ್ಯಾಯಾಲಯದಲ್ಲಿ ಕೇಸ್ ಸಂಖ್ಯೆ 412/1970 ನೋಂದಾಯಿಸಿದ್ದು ಅದು ಸರ್ವೋಚ್ಛ ನ್ಯಾಯಾಲಯದಲ್ಲಿ 1971-76ರಲ್ಲಿ (ಮನವಿ ಸಂಖ್ಯೆ 291/1971) ವಿಚಾರಣೆ ನಡೆದಿತ್ತು.

AV Eye Hospital ad

ನ್ಯಾಯಮೂರ್ತಿಗಳಾದ ಪಿ ಎಸ್ ಭಗವತಿˌ ಕೃಷ್ಣಯ್ಯರ್‌ ಮತ್ತು ಫಾಜೀಲ್ ಅಲಿಯವರನ್ನೊಳಗೊಂಡ ನ್ಯಾಯಪೀಠವು 16ˌಸೆಪ್ಟೆಂಬರ್ 1976ರಂದು ಪೆರಿಯಾರ್ ಬರೆದ ಸತ್ಯ ರಾಮಾಯಣ ಸತ್ಯ ಸಂಗತಿಗಳನ್ನೆ ಒಳಗೊಂಡಿದೆ ಎಂದು ತೀರ್ಪನ್ನಿತ್ತಿದೆ. ಪೆರಿಯಾರ್ ಅವರು ಜಗತ್ತಿನಲ್ಲಿ ಇದುವರೆಗೆ ಬರೆದ ಎಲ್ಲಾ ರಾಮಾಯಣಗಳ ಗ್ರಂಥಗಳು ಕಾಲ್ಪನಿಕ ಆಧಾರದಲ್ಲಿ ಬರೆದವುˌಅವುಗಳಿಗೆ ಯಾವುದೇ ಐತಿಹಾಸಿಕ ಅಥವಾ ಪುರಾತತ್ವ ಪುರಾವೆಗಳಿಲ್ಲವೆಂದು ವಾದಿಸಿದ್ದರು.

ಹಿಂದುತ್ವವಾದಿಗಳಿಗೆ ಸಿಂಹಸ್ವಪ್ನ: ಕಲ್ಪನೆಯ ಆಧಾರದಲ್ಲಿ ದೇವರು ಮತ್ತು ಧರ್ಮವನ್ನು ಸೃಷ್ಠಿಸಿ ಭಾರತದ ಮೂಲನಿವಾಸಿಗಳ ಸಂಸ್ಕೃತಿ, ಇತಿಹಾಸವನ್ನು ನಾಶಗೊಳಿಸಿ ಭಾರತವನ್ನು ಅತ್ಯಂತ ದುರ್ಬಲ ದೇಶವಾಗಿಸಿದ ವಿದೇಶಿ ಆರ್ಯರ ಬಗ್ಗೆ ಪೆರಿಯಾರ್ ಅವರು ತೀಕ್ಷ್ಣವಾಗಿ ಬರೆಯುತ್ತಿದ್ದರು. ಭಾರತವನ್ನು ದುರ್ಬಲಗೊಳಿಸಿದ ವೈದಿಕ ಮೌಢ್ಯಗಳ ವಿರುದ್ಧ ಬಹುದೊಡ್ಡ ಚಳವಳಿ ಹುಟ್ಟುಹಾಕಿದ ಪೆರಿಯಾರ್ ಅವರು ನೆಲಮೂಲದ ವೈಚಾರಿಕತೆಯ ಸಾಕ್ಷಿಪ್ರಜ್ಞೆಯಾಗಿ ಕಾಣುತ್ತಾರೆ.

ದಕ್ಷಿಣ ಭಾರತದ ದ್ರಾವಿಡ ವೈಚಾರಿಕತೆಯ ಚಿಂತನೆಯ ಚಿಲುಮೆಯಾಗಿ ಪೆರಿಯಾರ್ ಅವರು ಹಿಂದಿ ನೆಲದ ಹಿಂದುತ್ವವಾದಿಗಳಿಗೆ ಸಿಂಹಸ್ವಪ್ನವಾಗಿದ್ದರು. ನೈಜ ದ್ರಾವಿಡ ಭಾರತವನ್ನು ಜನಸಾಮಾನ್ಯರಿಗೆ ಪರಿಚಯಿಸಿದ ಪೆರಿಯಾರ್ ವಲಸಿಗ ಆರ್ಯ ವೈದಿಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇಂತಹ ಪೆರಿಯಾರ್ ಅವರು ಮನೆಗೊಬ್ಬರಂತೆ ಹುಟ್ಟಬೇಕಾದ ಅಗತ್ಯ ಇಂದು ತುಂಬಾ ಇದೆ.

21 ನೇ ಶತಮಾನದಲ್ಲಿ ಭಾರತವು ಆರ್ಯ ವೈದಿಕರ ಆಳ್ವಿಕೆಗೆ ಒಳಪಟ್ಟು ಅವರಿಂದ ಇಲ್ಲಿನ ವೈಚಾರಿಕ ಹಾಗು ವೈಜ್ಞಾನಿಕ ಪರಂಪರೆಗಳು ನಾಶಗೊಳ್ಳುತ್ತಿರುವ ಈ ಸಂದಿಗ್ಧ ಕಾಲಘಟ್ಟದಲ್ಲಿ ಭಾರತವನ್ನು ಆರ್ಯ ಗಿಡುಗಗಳಿಂದ  ರಕ್ಷಿಸಲು ಪೆರಿಯಾರ ಅವರ ಚಿಂತನೆಗಳು ಮರು ಹುಟ್ಟು ಪಡೆಯಬೇಕಾದ ಅಗತ್ಯವಿದೆ. ಬನ್ನಿ ನಾವೆಲ್ಲರೂ ಬುದ್ದˌ ಬಸವಣ್ಣˌ ನಾರಾಯಣಗುರು, ಸರ್ವಜ್ಞˌ ಶರೀಫ್ˌ ಪೆರಿಯಾರರ ಚಿಂತನೆಗಳನ್ನು ಮರುಸೃಷ್ಟಿಸಿ ಭಾರತವನ್ನು ವಿದೇಶಿ ಆರ್ಯ ಗಿಡುಗಗಳ ಕಪಿಮುಷ್ಠಿಯಿಂದ ವಿಮೋಚನೆಗೊಳಿಸೋಣˌಪೆರಿಯಾರ್ ಅವರ ಜನ್ಮದಿನವನ್ನು ಅರ್ಥಪೂರ್ಣಗೊಳಿಸೋಣ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app