ಬಹುತ್ವ ಭಾರತ | ಮನುಷ್ಯ ಮನಸ್ಸುಗಳನ್ನು ಬದುಕಲು ಬಿಡಿ

ಪ್ರೀತಿ, ಪ್ರೇಮಗಳಿಗೆ ಜಾತಿ, ಧರ್ಮ, ಬಣ್ಣ, ಭಾಷೆಗಳಿಲ್ಲ ಅದೊಂದು ಮಾನಸಿಕ ಕ್ರಿಯೆ. ಮನಸ್ಸಿನ ಭಾವ. ಕೇವಲ‌ ಮಾಂಸದ‌ ಮುದ್ದೆಯಾಗಿ ಹುಟ್ಟಿದ ಮಕ್ಕಳನ್ನು ನಾವು ಬುದ್ಧರನ್ನಾಗಿ ಬೆಳೆಯಲು ಬಿಡದೆ ಬದ್ಧರನ್ನಾಗಿ ಮಾಡಿ ಜಾತಿ ಧರ್ಮಗಳ ಸಂಕೋಲೆಯಲ್ಲಿ ಬಂಧಿಸಿಡುತ್ತೇವೆ. ವರ್ತಮಾನದ ಈ‌ ದುರಂತಗಳಿಗೆ ಇದೇ ಮುಖ್ಯ ಕಾರಣವಾಗುತ್ತದೆ. 

ನಮ್ಮದು ಬಹುತ್ವ ಭಾರತ; 140 ಕೋಟಿಗೂ ಅಧಿಕ ಜನಸಂಖ್ಯೆ, ಕೆಲವು ಧರ್ಮಗಳು, ಹಲವು ಜಾತಿಗಳು, ವಿವಿಧ ಭಾಷೆ-ಸಂಸ್ಕೃತಿಗಳು... ಇವೆಲ್ಲವೂ ನಮ್ಮ ದೇಶದ ಜೀವಾಳ. ವಿವಿಧತೆಯಲ್ಲಿ ಏಕತೆ ನಮ್ಮ ಬದುಕಿನ, ನಮ್ಮ ಮಣ್ಣಿನ ಸಹಜತೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ದಿನಗಳ ಆರಂಭದಲ್ಲಿ ರಾಷ್ಟ್ರೀಯ ವಿಚಾರ ಬಂದಾಗ ನಾವೆಲ್ಲರೂ ಒಗ್ಗೂಡಿ ಹೋರಾಡಿದ್ದೇವೆ; ಯಶಸ್ಸನ್ನೂ ಗಳಿಸಿದ್ದೇವೆ. ಸರ್ವಜನಾಂಗದ ಶಾಂತಿಯ ತೋಟ ನಮ್ಮದು. ಕಣ್ಣುಗಳು ಹಲವಾರು; ನೋಟ ಮಾತ್ರ ಒಂದೇ. ಭಾಷೆಗಳು ಬೇರೆ ಬೇರೆ; ಭಾವ ಮಾತ್ರ ಒಂದೇ. ಇವೆಲ್ಲವೂ ನಮ್ಮ ಏಕತೆಯ, ಸಮನ್ವಯತೆಯ, ಧರ್ಮ ಸಹಿಷ್ಣುತೆಯ ಆಧಾರ ಸ್ಥಂಭಗಳಾಗಿರುವ ಸಿದ್ಧಾಂತಗಳು. ಆದರೆ ಇತ್ತೀಚಿನ ದಿನಗಳಲ್ಲಿ ಏನಾಗುತ್ತಿದೆ? ಪ್ರೀತಿಯ ಬದಲು ದ್ವೇಷ, ಒಳಿತಿನ ಬದಲು ಕೆಡುಕುಗಳು...... ಏಕೆ ಹೀಗಾಗುತ್ತಿವೆ? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇಂದಿನ ತುರ್ತು.

Eedina App

ಪ್ರೀತಿಯೆಂದರೆ ಅದೊಂದು ಭಾವ, ಅದಕ್ಕೆ ಬೆಲೆ ಕಟ್ಟಲಾಗದು. ಅದು ಪ್ರೇಮಕ್ಕೆ ತಿರುಗಿದಾಗ, ನಂಬಿಕೆಯ, ಸ್ವಂತಿಕೆಯ ಮತ್ತು ಆಯ್ಕೆಯ ವಿಚಾರವಾಗುತ್ತದೆ. ಮತ್ತು ತೀರಾ ಖಾಸಗಿಯಾದ ಸಂಗತಿಯಾಗುತ್ತದೆ. ಪ್ರೀತಿಸುವ ಮನಸ್ಸುಗಳಿಗೆ, ಹೃದಯಗಳಿಗೆ ಗಂಡು ಹೆಣ್ಣಿನ ಜಾತಿ, ಮತ, ಪಂಥ, ಭಾಷೆ, ದೇಶ, ಪ್ರದೇಶ, ಸಂಸ್ಕೃತಿಗಳು ಮುಖ್ಯವಾಗುವುದಿಲ್ಲ. ಅಲ್ಲಿ ಹೃದಯದ ಸಂಬಂಧಗಳು ಮತ್ತು ಮನಸ್ಸಿನ ಭಾವಗಳು ಮಾತ್ರ ಮುನ್ನಲೆಗೆ ಬರುತ್ತವೆ. ಬದುಕುವ ಆಯ್ಕೆ ಮತ್ತು ವಿಧಾನಗಳು ವೈಯಕ್ತಿಕವಾಗುತ್ತವೆ. ಯಾವುದೇ ಜಾತಿ ಅಥವಾ ಧರ್ಮಗಳಿಗೆ ಚ್ಯುತಿ ಬಾರದಂತೆ ಮನುಷ್ಯರಾಗಿ ಬದುಕಲು ಹಂಬಲಿಸುವ ಮನಸ್ಸುಗಳು ನಿರಾಳವಾಗಬೇಕು. ಆಗ ಮಾತ್ರ ಗಾಂಧೀಜಿಯವರ ಸಮನ್ವಯ ಭಾರತದ ಕನಸು ನನಸಾಗಲು ಸಾಧ್ಯ ಎನ್ನುವುದು ನನ್ನ ಅಚಲವಾದ ನಂಬಿಕೆ.

ಜಾತಿ, ಧರ್ಮಗಳ ಅಡ್ಡಗೋಡೆಗಳನ್ನು ಕೆಡವಿ, ಪ್ರೀತಿ, ಪ್ರೇಮದ ಸೇತುವೆಯನ್ನು ನಿರ್ಮಿಸಿ ಬದುಕಿನ ದಡ ಮುಟ್ಟುವ ಸಾಹಸ ಸಮಕಾಲೀನ ಸಂದರ್ಭದಲ್ಲಿ ಬಹಳ ಸುಲಭವಾದ ಕೆಲಸ ಅಲ್ಲದಿದ್ದರೂ ಅಸಾಧ್ಯ ಅಂತು ಅಲ್ಲವೇ ಅಲ್ಲ. ಬುದ್ಧ, ಬಸವ, ಗಾಂಧಿ, ನಾರಾಯಣ ಗುರುಗಳಂತಹ ಧೀಮಂತರು ಬದುಕಿದ ನಾಡು ನಮ್ಮದು. ಶಾಂತಿ, ನೆಮ್ಮದಿ, ಸಹಬಾಳ್ವೆ, ಪ್ರೀತಿ, ನಂಬಿಕೆ ಇತ್ಯಾದಿ ಮೌಲ್ಯಗಳನ್ನು ತುಳಿದು ಜಾತಿವಾದ, ಕೋಮುದ್ವೇಷಗಳು ಎಂದಿಗೂ ಮುನ್ನಲೆಗೆ ಬರಬಾರದು ಎಂಬ ನಿಲುವು ಮತ್ತು ಆಶಯ ನಮ್ಮದಾಗಿರಬೇಕು. ಆದರೆ ಈಗ ಏನಾಗುತ್ತಿದೆ? ಪ್ರೀತಿಸಿ ಮದುವೆಯಾದವರನ್ನು ಬದುಕಲು ಬಿಡದ ವಾತಾವರಣ ನಿರ್ಮಾಣವಾಗಿದೆ. ಅನೈತಿಕ ಪೊಲೀಸ್ ಕಾರ್ಯಾಚರಣೆ, ಮರ್ಯಾದಾಗೇಡು ಹತ್ಯೆಗಳು ದಿನೇ ದಿನೇ ಸುದ್ದಿಯಾಗುತ್ತವೆ. ಮನುಷ್ಯ ಬದುಕು ದುಸ್ತರವಾಗುತ್ತದೆ. ಶಾಲಾ ಕಾಲೇಜುಗಳಲ್ಲಿ, ಆಡಳಿತ ಕಚೇರಿಗಳಲ್ಲಿ, ಪ್ರಯಾಣ ಸಂದರ್ಭಗಳಲ್ಲಿ ಮತ್ತು ಇನ್ನಿತರ ಕೆಲಸ ಮಾಡುವ ಜಾಗಗಳಲ್ಲಿ ಎಲ್ಲರೂ ಲಿಂಗ ಭೇದ, ಜಾತಿಮತ ಭೇದವಿಲ್ಲದೆ ಒಟ್ಟಿಗೆ ಸೇರಿ ಕೆಲಸ ಮಾಡುವಂತಿಲ್ಲ. ನಮ್ಮಲ್ಲಿ ಬಹುತೇಕ ಕಡೆಗಳಲ್ಲಿ  ಸಹ ಶಿಕ್ಷಣ ವ್ಯವಸ್ಥೆ, ಸಹ ಪ್ರಯಾಣ, ಸಹ ಭೋಜನ, ಸಹ ದುಡಿಮೆಯ ವ್ಯವಸ್ಥೆಗಳೇ ಇರುವುದು. ಗಂಡು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಬಸ್ಸು, ರೈಲು, ವಿಮಾನಗಳಾಗಲಿ, ಪ್ರತ್ಯೇಕ ಕಚೇರಿಗಳಾಗಲಿ, ಪ್ರತ್ಯೇಕ ದುಡಿಮೆಯ ಸೌಕರ್ಯಗಳಾಗಲಿ ಇರುವುದಿಲ್ಲ. ಒಟ್ಟಿಗೆ ಒಂದೇ ವ್ಯವಸ್ಥೆಯಲ್ಲಿ ಬದುಕಬೇಕು. ಹಾಗಿರುವಾಗ ಈ ಅನೈತಿಕ ಪೊಲೀಸ್‌ಗಿರಿ ಏಕೆ? ಇದನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲವೇ? ಸರ್ಕಾರ ಮತ್ತು ಆಡಳಿತ ಸುಮ್ಮನಿರುವುದು ಏಕೆ?

AV Eye Hospital ad

ನಿರ್ದಿಷ್ಟ ಸಮುದಾಯದ ಹೆಣ್ಣು ಮಕ್ಕಳನ್ನು ರಕ್ಷಿಸುತ್ತೇವೆ ಎಂಬ ಸ್ವಯಂ ಘೋಷಣೆ, ಅದಕ್ಕಾಗಿ ಗೂಂಡಾಗಿರಿ ನಡೆಯುತ್ತಲೇ ಇರುತ್ತದೆ. ರಕ್ಷಿಸಬೇಕಾದ ಪೊಲೀಸರು ದಿವ್ಯಮೌನ ವಹಿಸುತ್ತಾರೆ. ಒಂದು ವೇಳೆ ತಪ್ಪು ಮಾಡಿದವರನ್ನು ಹಿಡಿದು ಬಂಧಿಸಿದರೆ, ರಾಜಕೀಯ ಅಥವಾ ಕೋಮುವಾದಿ ನಾಯಕರ ಪ್ರಭಾವಕ್ಕೆ ಮಣಿದು ಅವರನ್ನು ಬಿಡುಗಡೆ ಮಾಡುತ್ತಾರೆ. ಇದೆಂತಹ ಪ್ರಜಾಪ್ರಭುತ್ವ, ಎಂತಹ ನ್ಯಾಯಾಧಿಕರಣ, ಎಂತಹ ಸರ್ಕಾರ, ಎಂತಹ ಆಡಳಿತ ಇತ್ಯಾದಿ ಪ್ರಶ್ನೆಗಳು ಜನ ಸಾಮಾನ್ಯರಲ್ಲಿ ಮೂಡುವುದು ಸಹಜವಲ್ಲವೇ?

ನಾವು ಯಾರು ಕೂಡಾ ಇಂತಹದ್ದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿದವರಲ್ಲ. ಆಕಸ್ಮಿಕವಾಗಿ, ಅನಿವಾರ್ಯವಾಗಿ ನಾವೇ ನಿರ್ಮಿಸಿಕೊಂಡ ವ್ಯವಸ್ಥೆಯಡಿಯಲ್ಲಿ ಹುಟ್ಟಿದ್ದೇವೆ. ನಮ್ಮದನ್ನು ಇಷ್ಟ ಪಟ್ಟುಕೊಂಡು, ಬೇರೆಯದನ್ನು ಗೌರವಿಸಿಕೊಂಡು ಬದುಕಲು ಏನು ಕಷ್ಟ? ಇಂತಹ ಒಂದು ಮನೋಭಾವ ಎಲ್ಲರಲ್ಲೂ ಇರುತ್ತಿದ್ದರೆ ನಮ್ಮ ದೇಶದ ದೊಡ್ಡ ಸಮಸ್ಯೆಯೊಂದು ಕಣ್ಮುಚ್ಚಿ ಹೋಗುತ್ತಿತ್ತು. ಆದರೆ ಇಲ್ಲಿ ಜಾತಿ ಧರ್ಮಗಳನ್ನು ರಕ್ಷಿಸುವ ಗುತ್ತಿಗೆಯನ್ನು ಪಡೆದುಕೊಂಡವರ ಹಾಗೆ ಕೆಲವು ಜನರು, ಸಂಘಟನೆಗಳು, ಸಂಘ ಸಂಸ್ಥೆಗಳು ಪ್ರತಿದಿನ ಸಮಾಜದ ಸ್ವಾಸ್ಥ್ಯ ವನ್ನು ಹಾಳು ಮಾಡುವಂತಹ ಕೆಲಸಗಳನ್ನು ಮಾಡುತ್ತವೆ.

ಇದನ್ನು ಓದಿದ್ದೀರಾ?: ಅಂತರ್‌ಧರ್ಮೀಯ ಮದುವೆ | ‘ಪ್ರೀತಿಯೇ ನಮಗೆ ಧರ್ಮ’

ಮದುವೆ ಎನ್ನುವುದು ತೀರಾ ಖಾಸಗಿಯಾದ, ಒಂದು ಕುಟುಂಬಕ್ಕೆ ಸಂಬಂಧಿಸಿದ ವಿಚಾರ, ಅಂತರ್ ಜಾತಿ ಮದುವೆಯಾಗಲಿ, ಅಂತರ್ ಮತೀಯ ಮದುವೆಯಾಗಲಿ ಅದು ಆ ಕುಟುಂಬದ ಹೊಣೆಗಾರಿಕೆ. ಈ ರೀತಿಯಲ್ಲಿ ಮದುವೆ ಮಾಡಿಕೊಂಡು ಮನುಷ್ಯರಾಗಿ ಬದುಕಲು ಸಾಧ್ಯವಿಲ್ಲವೇ? ಬದುಕುತ್ತಿಲ್ಲವೇ? ಇಂತಹ ಸನ್ನಿವೇಶದಲ್ಲಿ ಹೆತ್ತವರು ಬೆಂಬಲ ಕೊಟ್ಟಿದ್ದರೂ ಈ ಸ್ವಯಂ ಘೋಷಿತ ಧರ್ಮ ರಕ್ಷಕರು ಅಡ್ಡ ಬಂದು ಬೆದರಿಕೆಗಳನ್ನು ಒಡ್ಡಿಯೋ, ಹೊಡೆದು ಬಡಿದು, ಗೂಂಡಾಗಿರಿ ಮಾಡಿ ಮದುವೆಯನ್ನು ನಿಲ್ಲಿಸುವುದು ಎಂತಹ ನಾಚಿಕೆಗೇಡಿನ ವಿಚಾರ. ಹೆತ್ತವರ ಬೆಂಬಲ ಇಲ್ಲದಿದ್ದರಂತೂ ಹೇಳುವುದೇ ಬೇಡ. ಎಲ್ಲಾ ಇವರದ್ದೇ ಕಾರುಬಾರು. ಇಂತಹ ಜೋಡಿಗಳನ್ನು ಪತ್ತೆ ಹಚ್ವುವುದೇನು, ಹೊಡೆಯುವುದೇನು, ಅಸಭ್ಯವಾಗಿ ವರ್ತಿಸುವುದೇನು, ಅಹಸ್ಯವಾಗಿ ಬಯ್ಯುವುದೇನು? ಇಂತಹ ಅಧಿಕಾರವನ್ನು ಇವರಿಗೆ ಕೊಟ್ಟವರು ಯಾರು? ಇವನ್ನೆಲ್ಲಾ ಇವರೇ ಮಾಡುವುದಾದರೆ ಪೊಲೀಸ್ ವ್ಯವಸ್ಥೆ ಏಕೆ? ಆಡಳಿತ ಏಕೆ? ಇದರ ಹಿಂದೆಲ್ಲಾ ಸಾಮಾನ್ಯವಾಗಿ ಈ ಸರ್ಕಾರದ, ಆಡಳಿತದ ಹುನ್ನಾರವೇ ಇರುತ್ತದೆ. ಯಾವ ಉದ್ಯೋಗವೂ ಇಲ್ಲದೆ ಇವರಂತಹವರ ಕೈಯಲ್ಲಿ ಒಂದು ಧರ್ಮದ ಧ್ವಜವನ್ನು ಕೊಟ್ಟು  ಧರ್ಮ ರಕ್ಷಣೆ ಮಾಡುವ ಅಮಲು ತುಂಬಿಸಿರುತ್ತಾರೆ. ಸರ್ಕಾರದ ಉತ್ತಮ ಸ್ಥಾನದ ಉದ್ಯೋಗವೆಲ್ಲಾ "ಎಲ್ಲಾ ಇದ್ದವರಿಗೆ" ಸಿಗುತ್ತದೆ.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗದ ಯುವಕರಿಗೆ ಕೇವಲ ಧರ್ಮದ ಧ್ವಜ ಮಾತ್ರ. ಈ ಕಟು ಸತ್ಯ ನಮ್ಮ ಯುವಜನಾಂಗಕ್ಕೆ ಗೊತ್ತಿಲ್ಲ. ಹೀಗೆ ಧರ್ಮದ ಹೆಸರಿನ ಹೊಡೆದಾಟದಲ್ಲಿ ಸತ್ತರೆ  'ಧರ್ಮಕ್ಕಾಗಿ ಸತ್ತ' ಎಂಬ ಹಣೆಪಟ್ಟಿ ಕೊಟ್ಟು ಬಿಡುತ್ತಾರೆ. ಸಾಯುವುದು ಯಾರೋ ಬಡ ಮನೆಯ ಮಕ್ಕಳು, ಪ್ರಭುತ್ವಕ್ಕೆ ಏನೂ ನಷ್ಟ ಆಗದು. ಬೆಂಕಿಯ ಸುತ್ತ ಸುತ್ತುತ್ತಾ ಬೆಂಕಿಗೇ ಬಲಿಯಾಗುವ ಪತಂಗಗಳಂತೆ ಸಾಯುತ್ತಾರೆ.

ಅಂತರ್ ಜಾತಿ, ಅಂತರ್ ಮತೀಯ ಮದುವೆಯಾದ ಎಷ್ಟೋ ಕುಟುಂಬಗಳು ಚೆನ್ನಾಗಿ ಬದುಕುತ್ತಿರುವ ನಿದರ್ಶನಗಳು ನಮ್ಮ ಮುಂದೆ ಇವೆ. ಹಾಗೆಯೇ ಒಂದೇ ವರುಷಕ್ಕೆ ಮದುವೆ ಮುರಿದು ಬಿದ್ದು, ಆತ್ಮಹತ್ಯೆ ಮಾಡಿಕೊಂಡು ಅಥವಾ ವಿಚ್ಛೇದನ ಪಡೆದುಕೊಂಡವರೂ ಇದ್ದಾರೆ. ಹಾಗೆಯೇ ಒಂದೇ  ಧರ್ಮದ ಒಂದೇ ಜಾತಿಯಲ್ಲಿ ಮದುವೆಯಾಗಿ ಸುಖವಾಗಿದ್ದವರೂ ಇದ್ದಾರೆ. ಒಂದೆರಡು ತಿಂಗಳಲ್ಲಿ ಡೈವೋರ್ಸ್ ಆಗಿ ಮೂಲೆ ಗುಂಪಾದವರೂ ತುಂಬಾ ಸಂಖ್ಯೆಯಲ್ಲಿ ಇದ್ದಾರೆ. ಇದರಿಂದ ನಾವು ತಿಳಿದುಕೊಳ್ಳಬೇಕಾದದ್ದು ನಾವು ಯಾರನ್ನು, ಹೇಗೆ, ಎಲ್ಲಿ ಮದುವೆಯಾಗುತ್ತೇವೆ ಎನ್ನುವುದು ಮುಖ್ಯ ಅಲ್ಲ. ಮದುವೆಯಾದ ಮೇಲೆ ಪರಸ್ಪರ ಹೇಗೆ ಅರ್ಥ ಮಾಡಿಕೊಂಡು ಪ್ರೀತಿಯಿಂದ, ನಂಬಿಕೆಯಿಂದ ಹೊಂದಾಣಿಕೆಯಿಂದ, ಗೌರವದಿಂದ, ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಬದುಕುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಆದುದರಿಂದ ನಮ್ಮ ಮಕ್ಕಳು ಬೇರೆ ಜಾತಿ, ಧರ್ಮದ ವ್ಯಕ್ತಿಯನ್ನು ಮದುವೆಯಾಗುತ್ತೇವೆ ಎಂದು ಹೊರಟಾಗ ಹೆತ್ತವರು ನೋಡಬೇಕಾದದ್ದು ಅವನ/ಅವಳ ಜಾತಿಯನ್ನಲ್ಲ. ಬದಲಿಗೆ ಅವನ / ಅವಳ ಗುಣ ಸ್ವಭಾವ, ವಿದ್ಯಾರ್ಹತೆ, ಉದ್ಯೋಗ ಇವುಗಳ ಬಗೆಗೆ ವಿಚಾರಿಸ ಬೇಕು. ಅವರ ಕನಸುಗಳನ್ನು ಮುರಿದು ನಮ್ಮ ಕನಸುಗಳಿಗೆ ಅವರನ್ನು ಬಲಿ ಮಾಡಿದರೆ ನಾಳೆ ಕೊರಗುವುದು ಯಾರು? ನಮ್ಮ ಮಕ್ಕಳು ತಾನೆ? ಯಾವುದೋ ಸಂಘಟನೆಯವರಿಗೆ ಈ ಮಕ್ಕಳು ಯಾರದೋ ಮನೆಯ ಮಕ್ಕಳಾಗಿರುತ್ತಾರೆ. ಇವರ ಬದುಕು ಹರಿದು ಹೋದರೆ, ಆತ್ಮಹತ್ಯೆ ಮಾಡಿಕೊಂಡರೆ ಇವರಿಗೇನು ನಷ್ಟವಿಲ್ಲ. ಯೋಚಿಸಬೇಕಾದದ್ದು ಹೆತ್ತವರು.

ಹಾಗೆಯೇ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುವ ಯುವ ಮನಸ್ಸುಗಳೂ ಕೂಡಾ ತುಂಬಾ ಆಲೋಚನೆ ಮಾಡಿ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆಯಲ್ಲಿ ಸೋತರೆ ಅದರ ಹೊಣೆಯನ್ನು ನಾವೇ ಹೊರಬೇಕಾಗುತ್ತದೆ. ಯಾವುದೋ ಆಕರ್ಷಣೆಗೆ ಒಳಗಾಗದೆ, ಕೇವಲ ಕ್ರಾಂತಿಗಾಗಿ, ಸಮಾಜದ ನಿಯಮಾವಳಿಗಳನ್ನು ಮೀರುವ ಗುರಿಯನ್ನು ಮಾತ್ರ ಇಟ್ಟುಕೊಳ್ಳದೆ ಪ್ರೀತಿಗಾಗಿ, ಬದುಕಿಗಾಗಿ ಆಯ್ಕೆ ಮಾಡಬೇಕು. ಹತ್ತರಲ್ಲಿ ಒಂದು ಆಯ್ಕೆ ಅಲ್ಲ, ಒಂದನ್ನೇ ಆರಿಸಿಕೊಳ್ಳುವ ಪ್ರೌಢಿಮೆ ಇದ್ದಾಗ ಮಾತ್ರ ಪ್ರೇಮ ವಿವಾಹಗಳು ಗೆಲ್ಲುತ್ತವೆ. ಇಲ್ಲದಿದ್ದರೆ ಸಮಾಜಕ್ಕೆ ಕೆಟ್ಟ ಸಂದೇಶವನ್ನು ರವಾನಿಸಬೇಕಾಗುತ್ತದೆ ಮತ್ತು ಧರ್ಮ ರಕ್ಷಕರೆಂದು ಘೋಷಿಸಿಕೊಳ್ಳುವವರ ಬಾಯಿಗೆ ಆಹಾರವಾಗಬೇಕಾಗುತ್ತದೆ.

ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಪ್ರೇಮಿಗಳನ್ನು ಗುರುತಿಸಿ ಹತ್ತಿಕ್ಕುವಂತಹ ಘಟನೆಗಳು ಹೆಚ್ಚಾಗುತ್ತವೆ. ಆದ್ದರಿಂದ ಇಂತಹ‌ ಚಟುವಟಿಕೆಗಳ ಹಿಂದೆ ದೊಡ್ಡ ರಾಜಕೀಯ ಹುನ್ನಾರವಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದನ್ನು ನಮ್ಮ ಯುವಕರು ಅರ್ಥ ಮಾಡಿಕೊಳ್ಳದಿರುವುದು ವರ್ತಮಾನದ ದೊಡ್ಡ ದುರಂತ. ಲವ್ ಜಿಹಾದ್, ಗೋಹತ್ಯಾ ನಿಷೇಧ, ಸಮಾನ ನಾಗರಿಕ ಸಂಹಿತೆ ಇತ್ಯಾದಿ ವಿಚಾರಗಳನ್ನು ಸ್ವಾರ್ಥ ರಾಜಕಾರಣಿಗಳು ಯುವಕರ ತಲೆಗೆ ತುರುಕಿ ಸಮಾಜದ ಸ್ವಾಸ್ಥ್ಯ ವನ್ನು ಹಾಳುಗೆಡಹುತ್ತಾರೆ. ಈ ಕುರಿತಂತೆ ನಮ್ಮ ಯುವಕರಿಗೆ ಅರಿವು ಮೂಡಿಸಬೇಕು‌. ನಮ್ಮ ಸಂವಿಧಾನ, ನಿಜವಾದ ರಾಷ್ಟ್ರೀಯತೆ, ನಮ್ಮ ಬಹುತ್ವದ ಪರಂಪರೆ, ನಮ್ಮ ವೈವಿಧ್ಯಮಯ ಸಂಸ್ಕೃತಿ.. ಇವುಗಳ ಬಗೆಗೆ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾಗಿದೆ. ದೇಶ, ದೇಶಪ್ರೇಮ, ಮನುಷ್ಯ , ಮನುಷ್ಯ ಪ್ರೇಮದ ಬಗೆಗೆ ಅರಿವಿನ ಕೊರತೆಯಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಸರಿ ದಾರಿ ತೋರಿಸುವ ಅಗತ್ಯ ಇದೆ.

ಜಾತಿ, ಧರ್ಮಗಳ ಕುರಿತಂತೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಇವೆಲ್ಲವೂ ಮಧ್ಯಮ ದರ್ಜೆ, ಕೆಳ ಮಧ್ಯಮ ದರ್ಜೆಯ ಜನರು ತಮಗೆ ತಾವೇ ಹಾಕಿಕೊಂಡ ಬೇಲಿ. ಶ್ರೀಮಂತ ಕುಟುಂಬಗಳಲ್ಲಿ ಇವುಗಳ ವ್ಯತ್ಯಾಸವೇ ಇರುವುದಿಲ್ಲ. ನಮ್ಮ ದೇಶದ ದೊಡ್ಡ ದೊಡ್ಡ ರಾಜಕಾರಣಿಗಳ, ಬಂಡವಾಳಶಾಹಿಗಳ, ಶ್ರೀಮಂತರ ಮಕ್ಕಳು ಅನ್ಯ ಮತೀಯ ಸಂಗಾತಿಯ ಜೊತೆಗೆ ಮದುವೆ ಮಾಡಿಕೊಂಡು ಸಂತೋಷದಿಂದ ಇದ್ದಾರೆ. ಅಲ್ಲಿ ಧರ್ಮ ರಕ್ಷಕರ ಭಯವಿಲ್ಲ, ಆತಂಕಗಳಿಲ್ಲ, ಸಮಸ್ಯೆಗಳಿಲ್ಲ, ದೇಶದ್ರೋಹದ ಆರೋಪಗಳಿಲ್ಲ. ಸಿರಿವಂತರಿಗಿಲ್ಲದ ಧರ್ಮ, ಅನ್ಯಧರ್ಮಗಳ ಸಂಬಂಧಗಳ ಸಮಸ್ಯೆಗಳು ಬಡವರ ಮಕ್ಕಳನ್ನು ಕಿತ್ತುತಿನ್ನುತ್ತಿವೆ.

ಪ್ರೀತಿ, ಪ್ರೇಮಗಳಿಗೆ ಜಾತಿ, ಧರ್ಮ, ಬಣ್ಣ, ಭಾಷೆಗಳಿಲ್ಲ ಅದೊಂದು ಮಾನಸಿಕ ಕ್ರಿಯೆ. ಮನಸ್ಸಿನ ಭಾವ. ಕೇವಲ‌ ಮಾಂಸದ‌ ಮುದ್ದೆಯಾಗಿ ಹುಟ್ಟಿದ ಮಕ್ಕಳನ್ನು ನಾವು ಬುದ್ಧರನ್ನಾಗಿ ಬೆಳೆಯಲು ಬಿಡದೆ ಬದ್ಧರನ್ನಾಗಿ ಮಾಡಿ ಜಾತಿ ಧರ್ಮಗಳ ಸಂಕೋಲೆಯಲ್ಲಿ ಬಂಧಿಸಿಡುತ್ತೇವೆ. ವರ್ತಮಾನದ ಈ‌ ದುರಂತಗಳಿಗೆ ಇದೇ ಮುಖ್ಯ ಕಾರಣವಾಗುತ್ತದೆ. ಪ್ರೀತಿಯ ಮನಸ್ಸುಗಳನ್ನು ಅರಿಯುವ ಶಕ್ತಿ ಇರಬೇಕಾದರೆ ಅವರ ಮನಸ್ಸಿನಲ್ಲಿಯೂ ಪ್ರೀತಿಯ ಒರತೆ ಇರಬೇಕು ತಾನೆ? ಇಂತಹ ಪ್ರೀತಿಯ ಒರತೆಯನ್ನು ಚಿಮುಕಿಸುವ ಮಕ್ಕಳನ್ನು ಸಮಾಜದ ಪ್ರಜೆಗಳನ್ನಾಗಿ ಮಾಡುವುದು ಎಲ್ಲರ ಆದ್ಯ ಕರ್ತವ್ಯ. ಆಗ ಇಡೀ ಜಗತ್ತೇ ಆನಂದಮಯವಾಗುತ್ತದೆ. ಕುವೆಂಪು ಹೇಳಿದ್ದು ಇದನ್ನೇ.. "ಆನಂದಮಯ ಈ‌ ಜಗ ಹೃದಯ, ಏತಕೆ ಭಯ ಮಾಣೋ..."

ನಿಮಗೆ ಏನು ಅನ್ನಿಸ್ತು?
3 ವೋಟ್
eedina app