ಪಿಎಂ ಕಿಸಾನ್‌ ಸಮ್ಮಾನ್ ನಿಧಿಯ ₹ 2,000 ನಿಮ್ಮ ಖಾತೆಗೆ ಬಂತೇ? ಕೂಡಲೇ ಜಿಎಸ್‌ಟಿ ಪಾವತಿಸಿ!

ದೇಶಾದ್ಯಂತ 10.26 ಕೋಟಿ ಅರ್ಹ ರೈತರಿದ್ದು, ಎಲ್ಲರ ಬ್ಯಾಂಕ್ ಖಾತೆಗಳಿಗೆ 21,924 ಕೋಟಿ ರೂಪಾಯಿ ವರ್ಗಾಯಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವರು ಸಂಸತ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ಹಣವೇನೋ ನಿಮ್ಮ ಖಾತೆ ತಲುಪಬಹುದು. ಆದರೆ, ನಿಮ್ಮನ್ನು ಹುರಿದು ಮುಕ್ಕಲು 'ಜಿಎಸ್‌ಟಿ' ಕಾದು ಕುಳಿತಿದೆ. ಈ ಕುರಿತ ಸುದ್ದಿ ವಿಡಂಬನೆ ಇಲ್ಲಿದೆ

ನೀವು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳೇ? ಒಂದು ಪಕ್ಷ ಆಗಿದ್ದಲ್ಲಿ, ಈವರೆಗೆ ನೀವು 11 ಕಂತುಗಳನ್ನು ಪಡೆದಿರುತ್ತೀರಿ. 12ನೇ ಕಂತಿಗಾಗಿ ಕಾಯುತ್ತಿರುತ್ತೀರಿ! ಆದರೆ, 11ನೇ ಕಂತು ತುಂಬಾ ವಿಳಂಬವಾದ ಕಾರಣ ಕಾದೂ-ಕಾದೂ ನಿಮ್ಮ ಕಣ್ಣು ಬೆಳ್ಳಗಾಗಿದ್ದಂತೂ ನಿಜ. ಈ ಬಾರಿಯಾದರೂ ಸಕಾಲದಲ್ಲಿ ಬಂದೀತೇ ಎಂಬ ನಿರೀಕ್ಷೆ ನಿಮ್ಮದಾಗಿರುತ್ತದೆ. 

ಅದರೆ, ನೀವು ನವನವೀನ ಕೆವೈಸಿ ಮಾಡಿಸಿದ್ದೀರಾ? ಅದರಲ್ಲಿ ನಿಮ್ಮ ಫೋನ್ ನಂಬರ್, ಆಧಾರ್ ನಂಬರ್ ಎಲ್ಲವನ್ನೂ ಅಪ್ಡೇಟ್ ಮಾಡಿ, ಅಪ್ಲೋಡ್ ಮಾಡಿದ್ದೀರಾ? ಹೀಗೆ ಮಾಡಿಲ್ಲದ ಎಷ್ಟೋ ರೈತರನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಭಾರೀ ಸುದ್ದಿ ಆಗಿದೆ. "ಇಲ್ಲ, ಅದರ ಕೊನೆಯ ದಿನಾಂಕ ಮುಗಿಯುವವರೆಗೆ ಆ ಆ್ಯಪ್ ಓಪನ್ ಆಗುತ್ತಿರಲಿಲ್ಲ," ಎಂದು ಅನೇಕರು ಮೊರೆ ಇಟ್ಟಿದ್ದಾರೆ. ಅಂತೂ ಕೆವೈಸಿ ಆಗಿದ್ದರೆ ಸರಿ.

ಗುಡ್, ಹಾಗಾದರೆ ಕೇಳಿ...

ಪ್ರಸಕ್ತ ವರ್ಷದ ಎರಡನೇ ಕಂತಿನ ಮೊತ್ತವನ್ನು ಈಗಾಗಲೇ ಕೆಲವು ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಮಾತ್ರ ಬಿಡುಗಡೆ ಮಾಡಲಾಗಿದೆ. ಅವುಗಳೆಂದರೆ, ಉತ್ತರ ಪ್ರದೇಶದ 5,063.25 ಕೋಟಿ ರೂಪಾಯಿ, ಮಹಾರಾಷ್ಟ್ರದ 2,053 ಕೋಟಿ ರೂಪಾಯಿ, ಬಿಹಾರದಲ್ಲಿ 1,684 ಕೋಟಿ ರೂಪಾಯಿ ಹಾಗೂ ಮಧ್ಯಪ್ರದೇಶದಲ್ಲಿ 1,680 ಕೋಟಿ ರೂಪಾಯಿಗಳನ್ನು ಈ ಹಣಕಾಸು ವರ್ಷದಲ್ಲಿ ಈವರೆಗೆ ವರ್ಗಾಯಿಸಲಾಗಿದೆ ಎಂದು ಕೇಂದ್ರ ಕೃಷಿ ಮಂತ್ರಿ ತೋಮರ್ ಲೋಕಸಭೆಗೆ ತಿಳಿಸಿದ್ದಾರೆ. 

ಈ ಬಾರಿ ದೇಶಾದ್ಯಂತ 10.26 ಕೋಟಿ ಅರ್ಹ ರೈತರಿದ್ದು, ಅವರ ಬ್ಯಾಂಕ್ ಖಾತೆಗಳಿಗೆ 21,924 ಕೋಟಿ ರೂಪಾಯಿಗಳ ಆರ್ಥಿಕ ಲಾಭವನ್ನು ವರ್ಗಾಯಿಸಲಾಗಿದೆ ಎಂದು ಕೃಷಿ ಮಂತ್ರಿಗಳು ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 

ಈಗಿನ ಅಂದಾಜಿನ ಪ್ರಕಾರ, ಜುಲೈ 31 ಇಲ್ಲವೇ ಸೆಪ್ಟೆಂಬರ್ 1 ಅಥವಾ 2ನೇ ತಾರೀಖಿನ ಒಳಗೆ 2,000 ರೂಪಾಯಿ ನಿಮ್ಮ ಖಾತೆಗೆ ಬಂದು ಬೀಳುವ ಸಾಧ್ಯತೆ ಇದೆ. ಬೀಳಬಹುದು, ಬೀಳುತ್ತದೆ.  ನಿರೀಕ್ಷಿಸಿ.

ಈ ಲೇಖನ ಓದಿದ್ದೀರಾ?: ʼಫ್ರೀಬಿʼ ಒಂದು ರೋಗವೇ?| 'ಸುಪ್ರೀಂ'ನಲ್ಲಿರುವ ಪ್ರಕರಣಗಳು ದೇಶದ ಪ್ರಜಾಪ್ರಭುತ್ವದ ತರ್ಕದೊಂದಿಗೆ ಹೊಂದುವುದೇ ಇಲ್ಲ

ದುರಂತವೆಂದರೆ, ಬಡ ರೈತರ ಕೃಷಿ ಉತ್ಪನ್ನಗಳಾದ ಮಜ್ಜಿಗೆ, ಮೊಸರು, ಹಪ್ಪಳ, ರಸಗೊಬ್ಬರ, ಕೀಟನಾಶಕಗಳಿಗೆ ಜಿಎಸ್‌ಟಿ ವಿಧಿಸಿರುವುದು; ಕುದುರೆ ಜೂಜು, ಬೆಟ್ಟಿಂಗ್, ಕ್ಯಾಸಿನೋ, ಪೆಟ್ರೋಲ್, ಡೀಸೆಲ್‌ಗಳಿಗೆ ವಿನಾಯಿತಿ ನೀಡಿರುವುದು ಅಪರೂಪಕ್ಕೆ ಈ ದೇಶದಲ್ಲಿ ಮುಕ್ತವಾಗಿ ನಡೆದಿದೆ. ನೀವು ಇದಕ್ಕಾಗಿ ಪಿಎಮ್‌ವೈಗೆ ಬೆಂಬಲ ನೀಡಬೇಕು, ನೀಡಿ.

ಆ ಕಡೆ ಸರ್ಕಾರ ರೈತರಿಗೆ ಸಹಾಯಧನ, ಪ್ರೋತ್ಸಾಹಧನದ ಹೆಸರಿನಲ್ಲಿ 2,000 ರೂಪಾಯಿ ದೇಣಿಗೆ ನೀಡುತ್ತದೆ. ಕೆಲವರು ಇದನ್ನು 'ಭಿಕ್ಷೆ,' 'ಪ್ರಲೋಭನೆ,' 'ಒಂಥರಾ ರುಷುವತ್ತು' ಎನ್ನುತ್ತಾರೆ. ಸದ್ಯಕ್ಕೆ ಅವರನ್ನು ಬದಿಗಿಡಿ. ಲಕ್ಷ್ಮೀಕಟಾಕ್ಷ ಸರ್ಕಾರದ ಕಡೆಯಿಂದ ನಿಮ್ಮ ಖಾತೆಗೆ ಬರುತ್ತಿರುವುದೇ ನಿಮ್ಮ ಪೂರ್ವಜನ್ಮದ ಸುಕೃತವೆಂದು ಹೇಳಲಾಗಿದೆ!

ಆದರೆ, ಮತ್ತೊಂದು ಕಡೆ ಅದೇ ಸರ್ಕಾರಿ ಅನ್ನದಾತರು ಜಿಎಸ್‌ಟಿ ವಿಧಿಸಿ, ಅದರ ಹತ್ತು ಪಟ್ಟು ನಿಮ್ಮಿಂದ ವಸೂಲಿ ಮಾಡುತ್ತಿದ್ದರೆ ಚಿಂತಿಸಬೇಡಿ... ಕಟ್ಟಿ! ಕಟ್ಟುವುದರ ಮೂಲಕವೇ ನೀವು ದೇಶಭಕ್ತರಾಗಬಹುದು! ಇದು ಉಚಿತಾತಿ ಉಚಿತ ಅವಕಾಶ. ನಿರಾಕರಿಸಿ ದೇಶದ್ರೋಹಿಗಳ ಪಟ್ಟ ಸಂಪಾದಿಸಬೇಡಿ! 

ಇದು ಸರ್ಕಾರದ ದ್ವಂದ್ವ ನೀತಿಯಲ್ಲವೇ?

ಇಂತಹ ಸರ್ಕಾರದ ನಿಲುವಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಬರಲಿರುವ 2,000 ರೂಪಾಯಿಗಳನ್ನು ಕನಿಷ್ಠ ಈ ಜಿಎಸ್‌ಟಿ ಕಟ್ಟಲಾದರೂ ಬಳಸಿ, ನೆಮ್ಮದಿ ಹೊಂದಿ. ಜಗತ್ತಿನಲ್ಲಿ ನೆಮ್ಮದಿ ಎಂಬುದು ಬಹು ಮಹತ್ವದ್ದು ಎಂದು ಪಕ್ಷಾತೀತವಾಗಿ ಅನುಮೋದಿಸಲ್ಪಟ್ಟ ಋಷಿ-ಮುನಿಗಳೆಲ್ಲ ಪ್ರೀತಿಯಿಂದಲೇ ಹೇಳಿದ್ದಾರೆ. ಅವರನ್ನು ಅನುಸರಿಸಿ!

ಸ್ಮಶಾನವಾಸಿಯಾದ ಶಿವ ಸದಾ ನಿಮ್ಮೊಂದಿಗಿರುತ್ತಾನೆ!

ಇನ್ನೇನು ಬೇಕು? ನವ ಶಿವರೂಪಿಯ ಕೃಪೆ ನಿಮ್ಮ ಮೇಲಿರುವಾಗ?

ಜೈ ಬಲವಾನ್…  ಜೈ ಕಿಸ್ಮತ್ವಾನ್...!

ನಿಮಗೆ ಏನು ಅನ್ನಿಸ್ತು?
0 ವೋಟ್