ಕವಿತೆ | ನನ್ನದೆ ಮನೆಕೂಸು ನೀರು ಮುಟ್ಟಿ ಹೆಣವಾಗಿದೆ

ಭಾರತಕ್ಕೆ ನಲವತ್ತೇಳರಂದು ಬಂದ ಸ್ವಾತಂತ್ರ್ಯಕ್ಕೆ ಎಪ್ಪತೈದು ವರ್ಷಗಳಾಯಿತಂತೆ. ಆದರೆ ದೇಶದ ಅಸಂಖ್ಯ ಜನರ ಬದುಕಿಗೆ ಸ್ವಾತಂತ್ರ್ಯದ ಕಿರು ಹಾದಿಯೂ ಕಂಡಿಲ್ಲ. ಇದೆಲ್ಲ ಒಂಬತ್ತು ವಯಸ್ಸಿನ ಕೂಸಿಗೇನು ತಿಳಿದೀತು ಹೇಳಿ? ದಾಹ ತೀರಿಸಿಕೊಳ್ಳಲು ನೀರಿನ ಮಡಿಕೆ ಮುಟ್ಟಿದ ಕಾರಣಕ್ಕೆ ಪ್ರಾಣವನ್ನು ಕಳೆದುಕೊಂಡ..
Inder

ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿ ಖಾಸಗಿ ಶಾಲೆಯ ಶಿಕ್ಷಕನೊಬ್ಬ ಇಂದ್ರ ಮೇಘವಾಲ್ ಎಂಬ ಒಂಬತ್ತರ ಕೂಸಿನ ಮೇಲೆ ಹಲ್ಲೆ ಮಾಡಿದ್ದ. ಘಾಸಿಗೊಂಡಿದ್ದ ಆ ಮಗು ಕೊನೆಯುಸಿರೆಳೆದಿದೆ. ಕಾರಣ ಕೇಳಿದರೆ ಜಗತ್ತು ಬೆಚ್ಚಿ ಬೀಳುತ್ತದೆ. ನೀರು ಮುಟ್ಟಿದ, ದೇವಸ್ಥಾನದ ಮೆಟ್ಟಿಲೇರಿದ ಕಾರಣಕ್ಕೆ ಇಲ್ಲಿ ದಿನ ಬೆಳಗಾದರೆ ಸಾಲುಸಾಲು ಹೆಣಗಳು ಬಿದ್ದಿರುತ್ತವೆ. ಅಂತಹದ್ದೇ ಒಂದು ಕಾರಣಕ್ಕೆ ಇಂದರ್‌ ಜೀವ ಬಿಟ್ಟಿದ್ದಾನೆ.

ದೇಶವಿಡೀ ಅಮೃತ ಮಹೊತ್ಸವದ ಸಂಭ್ರಮ ಆವರಿಸಿಕೊಂಡಿದೆ. ತಾರತಮ್ಯವೇ ಅರಿಯದ ಮುಗ್ದ ಮಗುವಿನ ಸಾವು ಯಾರನ್ನೂ ತಟ್ಟಿದಂತೆ ಕಾಣುತ್ತಿಲ್ಲ.  ನೀರು ಮುಟ್ಟಿದ ಕಾರಣಕ್ಕೆ ನಿರ್ದಯವಾಗಿ ಪೆಟ್ಟು ತಿಂದು, ಜೀವ ಬಿಡುವಂತಾಗುವುದಕ್ಕಿಂತ ಕ್ರೂರವಾದದ್ದು ಇನ್ನೇನಿರಲು ಸಾಧ್ಯ! ಆದರೆ ದೇಶ ಮಾತ್ರ ಸ್ವಾತಂತ್ರ್ಯದ ಸಂಭ್ರಮದಲ್ಲಿದೆ !

ಮುಗ್ದ ಇಂದ್ರ ಮೇಘವಾಲ್‌ ಜೀವ ತೊರೆದ ಕೆಲವೇ ಸಮಯದಲ್ಲಿ, ಡ್ಯಾನ್ಸ್‌ ಮಾಡುವ ವಿಡಿಯೊಂದು ವೈರಲ್‌ ಆಗಿದೆ. ಮನುಷ್ಯತ್ವವುಳ್ಳವರ ಎದೆಯೊಳಗೆ ಆ ಮುಗ್ದ ಕುಣಿತ ಸಂಭ್ರಮವನ್ನೂ, ಅದೇ ಮಗು ಈಗಿಲ್ಲವೆಂಬ ಸಂಕಟವನ್ನು ಏಕಕಾಲಕ್ಕೆ ಮುಟ್ಟಿಸುತ್ತದೆ.  ಹೂವಿನಂತಹ ಮಗುವನ್ನು ಹೊಸಕಿ ಹಾಕಿದ ಜಾತಿಯ ಸೊಕ್ಕು, ಅಮಾನವೀಯವಾದ ಅಹಂಕಾರ ನನ್ನನ್ನು ತೀವ್ರವಾಗಿ ಅಲುಗಿಸಿದೆ. ಮನುಷ್ಯತ್ವವುಳ್ಳವರ ಯಾರ ಎದೆಯೊಳಗೂ ಹುಟ್ಟಬಹುದಾದ ಕೋಪ, ಆಕ್ರೋಶಗಳು ನನ್ನೊಳಗೆ ಉಕ್ಕಿದವು. ಅವುಗಳ ಮೊತ್ತ ಈ ಕವಿತೆ.

ನನಗೆ ಸಂಭ್ರಮವಿಲ್ಲ ನನ್ನದೆ ಮನೆಕೂಸು ನೀರು ಮುಟ್ಟಿ ಹೆಣವಾಗಿದೆ

ಜೋರಾಗಿ ಕೂಗಿ 
ಜೋರಾಗಿ... ಕೇಳಿಸುತ್ತಿಲ್ಲ ಇನ್ನೂ ಜೋರಾಗಿ
ನಲವತ್ತೇಳರ ಸಂಭ್ರಮದ ಜೈಕಾರ 
ನೀರು ಮುಟ್ಟಿ ಹೆಣವಾದ 
ಒಂಬತ್ತರ ಕೂಸಿನ
ಹೆತ್ತವರ ಆಕ್ರಂಧನ ಕೇಳಕೂಡದು
ಕೂಗಿ... ಸಾಲುತ್ತಿಲ್ಲ ಇನ್ನೂ ಜೋರಾಗಿ

ಹಾಡಿ... ಹೊಗಳಿ 
ಮೈಕಿನ ಪದರು ಹರಿದು ಕೇಳಿಸಬೇಕು
ತ್ಯಾಗ ಬಲಿದಾನದ ಮಾತುಗಳು, ಘೋಷಣೆಗಳು
ಕೊಂಚ ಜಾರಿಯೂ
ಬೆಂಕಿ ಹಚ್ಚಿ ಗಹಗಹಿಸಿದ ಬಿಳಿ ಅಂಗಿ
ದೊಡ್ಡ ಬೂಟಿನವರ 
ಎದುರು ಅತ್ತ, ಧಗೆಗೆ ಸತ್ತವರ 
ಬದುಕಿನ ಕಡೆ ಹೊರಳಬಾರದು 
ಹೊಗಳಿ... ಸಾಲುತ್ತಿಲ್ಲ ಇನ್ನೂ ಜೋರಾಗಿ

ಕುಣಿಯಿರಿ ಇನ್ನೂ... 
ದಣಿಯುವವರೆಗೂ ಕುಣಿಯಿರಿ 
ತುಳಿತಕ್ಕೆ ಮೃತಪಟ್ಟ ಯಾವೊಬ್ಬ ಸಣಕಲನ  
ಸಣ್ಣ ಎಲುಬು ತೇಲಬಾರದು 
ಕುಣಿಯಿರಿ ಸಾಲುತ್ತಿಲ್ಲ ಇನ್ನೂ ...

ನಡೆಸಿ ನೆಲ ನಡುಗವಂತೆ
ಲೆಫ್ಟ್ ರೈಟ್ ಲೆಫ್ಟ್ ರೈಟ್
ಬೂಟಿನ ಸದ್ದು 
ಬೆವರು ಉಣಿಸಿ ಅನ್ನ ತೆಗೆವ 
ಕಾರಣಕೆ ಹಿಡಿಜಾಗ ಬೇಡುವ
ಬೆನ್ನು ಬಾಗಿದವನ ಉಸಿರು
ಸುಳಿಯಬಾರದು
ನಡೆಸಿ ಲೆಫ್ಟ್ ರೈಟ್ ಲೆಫ್ಟ್ ರೈಟ್...

ನನಗೆ ಸಂಭ್ರಮವಿಲ್ಲ 
ನನ್ನದೆ ಮನೆಕೂಸು 
ನೀರು ಮುಟ್ಟಿ ಹೆಣವಾಗಿದೆ
ನನ್ನಪ್ಪನ ಹಸಿರು ಶಾಲಿಗೆ
ಪೊಲೀಸಪ್ಪನ ಲಾಟಿಯ 
ಏಟು ಬಿದ್ದಿದೆ
ಭಾರತವ್ವಳ ಮಡಿಲಿಗೆ
ಬಂದೂಕು ಗ್ರೆನೇಡು 
ಚಾಕು ಚೂರಿ
ಮುಚ್ಚಿಡಲು ಬಣ್ಣಗಳೇ ತುಂಬಿವೆ
ಹೌದು ಖಂಡಿತ ನನಗೆ ಸಂಭ್ರಮವಿಲ್ಲ
ಸೂತಕವಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್