ಸಂಘ ಬಿಟ್ಟವರು ಬಿಚ್ಚಿಟ್ಟ ಸತ್ಯ (ಭಾಗ 3): ಆರೆಸ್ಸೆಸ್‌ ಷಡ್ಯಂತ್ರಗಳಿಗೆ ಬಲಿಯಾಗದಂತೆ ಪ್ರಗತಿಪರರು ಎಚ್ಚರಿಸಿದರು

RSS karyakarthas

ಕೋಮು ಸೌಹಾರ್ದತೆ, ಬಹುತ್ವವನ್ನು ಹಾಳು ಮಾಡುವಲ್ಲಿ ಆರೆಸ್ಸೆಸ್ ಹೇಗೆ ಕಾರ್ಯನಿರತವಾಗಿದೆ ಎಂಬುದನ್ನು ಮುರಳಿ ಮೋಹನ್ ಕಾಟಿ ನನ್ನೊಂದಿಗೆ ಚರ್ಚಿಸಿದರು. ಆರೆಸ್ಸೆಸ್ ಸಿದ್ಧಾಂತಕ್ಕಿಂತ ಸಾಮಾಜಿಕ ಹೋರಾಟಗಳು ಎಷ್ಟು ಅಗತ್ಯ ಎಂಬುದನ್ನು ಪುರುಷೋತ್ತಮ ಚಿಕ್ಕಹಾಗಡೆ ತನ್ನ ಹೋರಾಟದ ಮೂಲಕ ತಿಳಿಸಿಕೊಟ್ಟಿದ್ದರು

ಮತೀಯ ಶಕ್ತಿಗಳ ಇಂತಹ ಅಸ್ತ್ರಗಳಿಗೆ, ಷಡ್ಯಂತ್ರಗಳಿಗೆ ಬಳಕೆಯಾಗದಂತೆ ನನ್ನನ್ನು ಬಹುಬೇಗನೆ ಎಚ್ಚರಿಸಿದ್ದು, ಪಾರು ಮಾಡಿದ್ದು ಪ್ರಗತಿಪರ ಸ್ನೇಹಿತರು. ನಾನು ಸೆಕೆಂಡ್ ಪಿಯುಸಿ ಬೇಸಿಗೆ ರಜೆಯಲ್ಲಿ ಮಂಗಳೂರಿನ ಸೂರತ್ಕಲ್‍ನಲ್ಲಿ ನಡೆದ ಒಂದು ವಾರದ ಆರೆಸ್ಸೆಸ್‍ ನ  ಐಟಿಸಿ ಕ್ಯಾಂಪ್‍ನಲ್ಲಿ ಭಾಗವಹಿಸಿ ಬಂದು, ಬೇಗೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮತ್ತಷ್ಟು ಶಾಖೆಗಳನ್ನು ಪ್ರಾರಂಭ ಮಾಡಬೇಕೆಂಬ ಹಂಬಲದಲ್ಲಿದ್ದೆ. ಆದರೆ, ಬದಲಾದ ಕುಟುಂಬದ ಸನ್ನಿವೇಶದಿಂದಾಗಿ ನಾನು ನನ್ನಜ್ಜಿ ಊರಾದ ಬೇಗೂರು ಬಿಟ್ಟು, ಸ್ವಂತ ಊರಾದ ದಾಸನಪುರಕ್ಕೆ ಬರಬೇಕಾಯಿತು.

ಆನೇಕಲ್ ತಾಲ್ಲೂಕಿನ ಹಳ್ಳಿಗಳಲ್ಲೇ ಶಾಖೆಗಳನ್ನು ಪ್ರಾರಂಭಿಸಬೇಕೆಂದು ಚಿಂತನೆಯಲ್ಲಿರುವಾಗಲೇ, ನಾನು ಬಿಕಾಂ ಓದುತ್ತಿದ್ದ ವಿವಿ ಪುರಂ ಕಾಲೇಜಿನಲ್ಲಿ ಆಸಕ್ತ ವಿದ್ಯಾರ್ಥಿಗಳಿಂದ ಎನ್ನೆಸ್ಸೆಸ್‍ಗೆ ಅರ್ಜಿ ಆಹ್ವಾನಿಸಿದ್ದರು. ನಾನು ಬಿಕಾಂನ ಮೊದಲ ಪದವಿಯಲ್ಲಿದ್ದೆ. ಎನ್ನೆಸ್ಸೆಸ್‍ಗೆ ಸೇರ್ಪಡೆಗೊಳ್ಳಲು ಎನ್ನೆಸ್ಸೆಸ್ ಕಚೇರಿಗೆ ಹೋದೆ. ಅಲ್ಲಿ ಅಂತಿಮ ಬಿಎ ಓದುತ್ತಿದ್ದ ರಾಮಮೂರ್ತಿ ಎಂಬುವವರು ಎಲ್ಲರ ಹೆಸರು, ವಿಳಾಸ ಪಡೆಯುತ್ತಿದ್ದರು. ನಾನು ವಿಳಾಸ, ಹೆಸರು, ಊರಿನ ಹೆಸರು ಹೇಳುತ್ತಿದ್ದಂತೆ, ದಾಸನಪುರನ ನಿಂದು, ನಂದು ಕರ್ಪೂರು ಅಂದ. ಅಕ್ಕಪಕ್ಕದ ಊರಾದ್ದರಿಂದ ಅಲ್ಲಿಂದ ಇಬ್ಬರಿಗೂ ಆತ್ಮೀಯತೆ ಬೆಳೆಯಿತು. ಒಮ್ಮೆ ಕಾಲೇಜು ಮುಗಿಸಿಕೊಂಡು ನಾವಿಬ್ಬರು ಕೆ.ಆರ್.ಮಾರ್ಕೆಟ್‍ನ ಬಸ್‍ಸ್ಟಾಂಡ್‍ಗೆ ನಡೆದುಕೊಂಡು ಬರುವಾಗ ಪುಸ್ತಕಗಳ ಕುರಿತು ಮಾತು ಬಂತು. ಇತ್ತೀಚೆಗೆ ಯಾವ ಪುಸ್ತಕ ಓದಿದೆ ಅಂದ. ಎಸ್.ಎಲ್. ಬೈರಪ್ಪ ಅವರ ಧರ್ಮಶ್ರೀ ಪುಸ್ತಕ ಓದಿದೆ ಎನ್ನುತ್ತಿದ್ದಂತೆ, ಆತ ಆರೆಸ್ಸೆಸ್ ಸಿದ್ಧಾಂತದ ಪ್ರತಿಪಾದಕರು ಅಲ್ವ ಅಂದ. ನಾನು ಖುಷಿಯಿಂದಲೇ ನಾನು ಸಹ ಆರೆಸ್ಸೆಸ್ಸಿಗನೇ ಅಂದೆ. ನನ್ನ ಮುಖವನ್ನು ಆಶ್ಚರ್ಯದಿಂದ ನೋಡಿದ ರಾಮಮೂರ್ತಿ, ಆರೆಸ್ಸೆಸ್ ಕುರಿತು ನಾನು ಅರ್ಥ ಮಾಡಿಕೊಂಡಿದ್ದ ರೀತಿಗಿಂತ ಭಿನ್ನವಾಗಿ, ಬೇರೆ ಬೇರೆ ರೀತಿಯಲ್ಲಿ ಯೋಚಿಸುವಂತೆ ಒಂದಷ್ಟು ಅಂಕಿಅಂಶ, ಮಾಹಿತಿಯನ್ನು ನೀಡಿದ.

ಅಲ್ಲಿಯವರೆಗೂ ನನಗೆ ಆರೆಸ್ಸೆಸ್‌ ಕುರಿತಾಗಲಿ, ಸಮಾಜ ಹಾಗೂ ವೈಯಕ್ತಿಕ ಬದುಕು, ಆಲೋಚನೆ ಕುರಿತು ಈ ರೀತಿಯ ಭಿನ್ನ ನೋಟಗಳನ್ನು ಯಾರಿಂದಲೂ ಕೇಳಿರಲಿಲ್ಲ. ರಾಮಮೂರ್ತಿ ಮಾತುಗಳು ನನ್ನೊಳಗೆ ಮತ್ತೆ, ಮತ್ತೆ ಮೆಲುಕು ಹಾಕುವಂತೆ ಮಾಡಿತು. ನಾಲ್ಕೈದು ಬಾರಿ ಕಾಲೇಜು, ಬಸ್‍ನಲ್ಲಿ ನಮ್ಮ ಆಲೋಚನಾ ಕ್ರಮಗಳು ಹೇಗಿದ್ದರೆ ಒಳ್ಳೆಯದು ಎಂಬುದರ ಕುರಿತು ಚರ್ಚೆ ಮಾಡಿದೆವು. ನಂತರ ರಾಮಮೂರ್ತಿ ಆ ವರ್ಷದ ಎನ್ನೆಸ್ಸೆಸ್ ಶಿಬಿರವನ್ನು ತನ್ನೂರಾದ ಕರ್ಪೂರಕ್ಕೆ ಹಾಕಿಸಿಕೊಂಡ. ಕ್ಯಾಂಪ್‍ನಲ್ಲಿ ಶ್ರಮದಾನದ ಜೊತೆಗೆ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಕರ್ಪೂರಿನ ಮುರಳಿಧರ, ಪುರುಷೋತ್ತಮ್ ಚಿಕ್ಕಹಾಗಡೆ, ಆನೇಕಲ್ ಮುರಳಿ ಮೋಹನ್ ಕಾಟಿ ಉಸ್ತುವಾರಿಯಲ್ಲಿ ನಡೆದಿತ್ತು. ಹೀಗೆ ಇವರೆಲ್ಲರ ಪರಿಚಯ ಆ ನಂತರ ಸ್ನೇಹ ಬೆಳೆಯಿತು.

ಗೋಪಿಜೀ ಸಂಪರ್ಕ ಬಿಟ್ಟು ಹೋರಾಟದ ಹಾದಿ ಹಿಡಿದೆ

ಕೋಮು ಸೌಹಾರ್ದತೆ, ಬಹುತ್ವವನ್ನು ಹಾಳು ಮಾಡುವಲ್ಲಿ ಆರೆಸ್ಸೆಸ್ ಹೇಗೆ ಕಾರ್ಯನಿರತವಾಗಿದೆ ಎಂಬುದನ್ನು ಮುರಳಿ ಮೋಹನ್ ಕಾಟಿ ನನ್ನೊಂದಿಗೆ ಚರ್ಚಿಸಿದರು. ಆರೆಸ್ಸೆಸ್ ಸಿದ್ಧಾಂತಕ್ಕಿಂತ ಸಾಮಾಜಿಕ ಹೋರಾಟಗಳು ಎಷ್ಟು ಅಗತ್ಯ ಎಂಬುದನ್ನು ಪುರುಷೋತ್ತಮ ಚಿಕ್ಕಹಾಗಡೆ ತನ್ನ ಹೋರಾಟದ ಮೂಲಕ ತಿಳಿಸಿಕೊಟ್ಟಿದ್ದರು. ಒಮ್ಮೆ ಆನೇಕಲ್ ಹುಡುಗ, ಹುಡುಗಿಯರು ನೀರಿನ ಖಾಸಗೀಕರಣ ವಿರೋಧಿಸಿ ಆನೇಕಲ್‍ನಿಂದ ಬೆಂಗಳೂರಿನ ಟೌನ್‍ಹಾಲ್‍ವರೆಗೂ ಜಾಗೃತಿ ಕಾಲ್ನಡಿಗೆ ಜಾಥಾ ಮಾಡಿದೆವು. ಎರಡು ದಿನ ನಿರಂತರವಾಗಿ ನಡೆದ ಕಾಲ್ನಡಿಗೆಯ ಸಂದರ್ಭದಲ್ಲಿ ಸಾಮಾಜಿಕ ಸಮಸ್ಯೆಗಳಾದ ಜಾತಿ ಪದ್ಧತಿ, ಅಸ್ಕೃಶ್ಯತೆ, ಬಡತನದಂತಹ ಸಮಸ್ಯೆಗಳ ಕುರಿತು ಆರೆಸ್ಸೆಸ್-ಬಿಜೆಪಿ ರಾಜಕೀಯ ನಿಲುವುಗಳು ಹಾಗೂ ಆ ಸಮಸ್ಯೆಗಳನ್ನು ಹಾಗೆಯೇ ಉಳಿಸಿಕೊಳ್ಳುವುದು ಕೂಡ ಆರೆಸ್ಸೆಸ್ ಸಿದ್ದಾಂತ ಒಂದು ಭಾಗವಾಗಿರುವುದರ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಸಾಧ್ಯವಾಯಿತು. ಆ ನಂತರದ ದಿನಗಳಲ್ಲಿ ಬೇಗೂರು ಹಾಗೂ ಗೋಪಿಜೀ ಸಂಪರ್ಕವನ್ನು ಸಂಪೂರ್ಣ ಕಳೆದುಕೊಂಡಿದ್ದೆ. ಹಾಗೂ ಕಾಲೇಜಿನ ಜೊತೆ ಜೊತೆಗೆ ಸಾಮಾಜಿಕ ಹೋರಾಟಗಳಲ್ಲಿ ಹೆಚ್ಚು ಹೆಚ್ಚು ತೊಡಗಿಕೊಂಡೆ.

ಈ ವೇಳೆ ಹಲವು ಕಮ್ಯೂನಿಸ್ಟ್ ನಾಯಕರೊಂದಿಗಿನ ಪರಿಚಯ, ಚರ್ಚೆಯಿಂದಾಗಿ ಭಾರತದ ಮಟ್ಟಿಗೆ ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿಗಳು ಹೇಗೆ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ ಎಂಬುದು ಅರಿವಿಗೆ ಬಂತು. ಹಾಗೂ ಸ್ವಾಭಿಮಾನಿ ದಲಿತ ಶಕ್ತಿಯ ರಾಜ್ಯಾಧ್ಯಕ್ಷ ಶಿವಲಿಂಗಂ ಅವರ ಮೂಲಕ ಭಾರತದಲ್ಲಿರುವ ಜಾತಿಯ ಬಿಕ್ಕಟ್ಟು ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಡಾ.ಬಿ.ಆರ್. ಅಂಬೇಡ್ಕರ್ ಚಿಂತನೆ, ಮಾರ್ಗದಲ್ಲಿಯೇ ಪರಿಹಾರ ಇರುವುದರ ಕುರಿತು ಸ್ಪಷ್ಟವಾಗಿ ತಿಳಿಯತೊಡಗಿತು. ಈ ರೀತಿ ನನ್ನಂತೆ ಎಷ್ಟೊ ಮಂದಿ ಆರೆಸ್ಸೆಸ್‍ನ ಕೂಪದಿಂದ ದೂರ ಸರಿದಿದ್ದರೂ, ಆ ಸಂಘಟನೆ ಬೇರೆ ಬೇರೆ ಸ್ವರೂಪಗಳಲ್ಲಿ ತನ್ನ ಮನುವಾದಿ ಸಿದ್ಧಾಂತವನ್ನು ಮಕ್ಕಳ ತಲೆಗೆ ತುಂಬಲು ಷಡ್ಯಂತ್ರಗಳನ್ನು ರೂಪಿಸುತ್ತಲೇ ಇರುವುದನ್ನು ನಾವು ನೋಡಬಹುದಾಗಿದೆ.

ಇದನ್ನು ಓದಿದ್ದೀರಾ? ಸಂಘ ಬಿಟ್ಟವರು ಬಿಚ್ಚಿಟ್ಟ ಸತ್ಯ| ಆಳ ಅಗಲವಿಲ್ಲದ ಹುಸಿ ದೇಶಭಕ್ತರ ಕಥೆಗಳು: ಕೆ ಎನ್‌ ಭಗವಾನ್

ಇತ್ತೀಚಿನ ದಿನದಲ್ಲಿ ದಲಿತ ಸಮುದಾಯದ ಪೋಷಕರು ಸುಶಿಕ್ಷಿತರಾಗಿ ತಮ್ಮ ಮಕ್ಕಳಿಗೆ ಏನು ಬೇಕು, ಏಳು ಬೇಡವೆಂದು ಜಾಗ್ರತೆ ವಹಿಸುತ್ತಿದ್ದಂತೆ ಆರ್‌ಎಸ್‍ಎಸ್ ತನ್ನ ಕಾರ್ಯತಂತ್ರವನ್ನು ಒಂದು ಹೆಜ್ಜೆ ಮುಂದಿಟ್ಟು, ಸರಕಾರಿ ಶಾಲೆಯಲ್ಲಿರುವ ಶೇ 90ರಷ್ಟು ದಲಿತ ವಿದ್ಯಾರ್ಥಿಗಳ ಎಳೆಯ ಮನಸ್ಸಿಗೆ ಪಠ್ಯಪುಸ್ತಕದ ಮೂಲಕವೇ ಮತೀಯ ಚಿಂತನೆಯನ್ನು ಬಿತ್ತುವಂತಹ ಕಾರ್ಯಕ್ಕೆ ಮುಂದಾಗಿದೆ. ಇದಕ್ಕೆ ಪ್ರತಿರೋಧವಾಗಿ ದಲಿತ ಸಮುದಾಯ ಅಂಬೇಡ್ಕರ್, ಜ್ಯೋತಿ ಬಾಫುಲೆ, ಸಾವಿತ್ರಿ ಬಾಫುಲೆ ಕೊಟ್ಟಂತೆ ಶಿಕ್ಷಣದ ಕ್ರಾಂತಿಯ ಜ್ಯೋತಿಯನ್ನು ಪ್ರತಿ ದಲಿತ ಮನೆಗಳಲ್ಲೂ ಬೆಳಗಿಸುವಂತಹ ಕಾರ್ಯಕ್ಕೆ ಮುಂದಾಗುವುದೊಂದೇ ಪರಿಹಾರವಾಗಿದೆ.

ನಿಮಗೆ ಏನು ಅನ್ನಿಸ್ತು?
16 ವೋಟ್