ಸಿದ್ಧಾಂತವನ್ನು ಬದಿಗಿರಿಸಿ ಸಂವಿಧಾನಾತ್ಮಕ ಪಠ್ಯವನ್ನು ಮುದ್ರಿಸಿ ಮಕ್ಕಳಿಗೆ ತಲುಪಿಸಿ: ಮೌನೇಶ್‌ ಎಲ್‌ ಬಡಿಗೇರ್

Constitution

ಕೇಶವ ಬಲಿರಾಮ ಹೆಡಗೇವಾರ್, ಚಕ್ರವರ್ತಿ ಸೂಲಿಬೆಲೆ ಇವರಿಬ್ಬರ ಪರಿಚಯವನ್ನು ಇಲ್ಲಿ ಮಾಡುವ ಅಗತ್ಯ ಇಲ್ಲ. ಸುಮ್ಮನೆ ಒಮ್ಮೆ ಗೂಗಲ್ ಸರ್ಚ್ ಮಾಡಿದರೆ ಅವರ ನಿಲುವು ಏನಾಗಿತ್ತು ಎಂದು ತಿಳಿಯುತ್ತದೆ. ಈ ವಿವಾದಿತ ವ್ಯಕ್ತಿತ್ವಗಳನ್ನು ಶಾಲೆಯ ಮಕ್ಕಳ ತಲೆಗೆ ತುಂಬಲು ಹೊರಟಿರುವ ಸರ್ಕಾರದ ನಡೆಯನ್ನು ಪ್ರಶ್ನಿಸಿ ಚರ್ಚೆಗಳು ನಡೆಯುತ್ತಿವೆ

ಸದ್ಯದ ನಮ್ಮ ನಾಡಿನ ಪಠ್ಯ ಪುಸ್ತಕ ವಿವಾದ ಮುಗಿಯುವಂತೆಯೇ ಕಾಣುತ್ತಿಲ್ಲ. ಒಂದು ಕಡೆ ರಾಜಕೀಯ ನಾಯಕರು, ಮತ್ತೊಂದು ಕಡೆ ಎಡ ಬಲ ಕೇಂದ್ರಿತ ವಿಚಾರವಾದಿಗಳು ಒಬ್ಬರ ಮೇಲೊಬ್ಬರು ಕೆಸರೆರಚಾಟಗಳಲ್ಲಿ ಮುಳುಗಿರುವಾಗ ನಿಜವಾಗಿಯೂ ಬಲಿಪಶುಗಳಾಗುತ್ತಿರುವವರು ನಮ್ಮ ನಿಮ್ಮ ಸರ್ಕಾರಿ ಶಾಲೆಯ ಬಡ ಮಕ್ಕಳು. ಈ ಕೆಸರೆರಚಾಟ ಮಾಡುತ್ತಿರುವ ರಾಜಕಾರಣಿಗಳ ಮಕ್ಕಳ್ಯಾರೂ ಈ ವಿವಾದಿತ ಪಠ್ಯಪುಸ್ತಕಗಳ ಬಗ್ಗೆ ತಲೆಯೇ ಕೆಡಿಸಿಕೊಳ್ಳಬೇಕಾಗಿಲ್ಲ. ಯಾಕೆಂದರೆ ಅವರೆಲ್ಲ ಸಿಬಿಎಸ್‍ಸಿ, ಐಸಿಎಸ್‍ಸಿ ಪಠ್ಯಕ್ರಮಗಳನ್ನು ಒಳಗೊಂಡ ಶ್ರೀಮಂತ ಶಾಲೆಗಳಲ್ಲಿ ನಿಶ್ಚಿಂತೆಯಿಂದ ಓದುತ್ತಿರುತ್ತಾರೆ; ಈ ಎಲ್ಲಾ ವಿವಾದಗಳ ಎಲ್ಲಾ ಪರಿಣಾಮ ಎದುರಿಸುವವರು ನಮ್ಮ ನಿಮ್ಮ ಬಡ ಮಕ್ಕಳು.

ಇಂದು ಬಹು ಚರ್ಚಿತವಾಗಿರುವ ವಿಷಯ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯು ರಾಜ್ಯದ ಹತ್ತನೆಯ ತರಗತಿಯ ಕನ್ನಡ ಪಠ್ಯಪುಸ್ತಕದ ಪಾಠಗಳನ್ನು ಪರಿಷ್ಕರಣೆ ಮಾಡುವ ನೆಪದಲ್ಲಿ ಹಲವು ಮಾರ್ಪಾಟುಗಳನ್ನು ಮಾಡಿ ತಮ್ಮ ರಾಜಕೀಯ ಹಾಗೂ ಸೈದ್ಧಾಂತಿಕ ಚಿಂತನೆಗಳಿಗೆ ಪ್ರತ್ಯಕ್ಷ ಸಂಪರ್ಕ ಹೊಂದಿರುವ ವ್ಯಕ್ತಿತ್ವಗಳು ಬರೆದ ಲೇಖನಗಳನ್ನು ಹಾಗೂ ಭಾಷಣದ ಭಾಗಗಳನ್ನು ಸೇರಿಸಿರುವುದು. ಇದು ಇಂದು ಜಾತ್ಯತೀತ ಮನಸ್ಥಿತಿ ಹಾಗೂ ಸಮ ಬಾಳಿನ ಬಹುತ್ವದ ಆಶಯಗಳನ್ನು ಹೊಂದಿರುವ ಅನೇಕ ಕವಿ, ಲೇಖಕರು, ಚಿಂತಕರು, ಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತು ಈ ಆಕ್ರೋಶವು ಎಷ್ಟು ಸಕಾರಣವಾಗಿದೆ ಎಂಬುದನ್ನು ಇವರು ಯಾವ ವ್ಯಕ್ತಿತ್ವಗಳ ಬರಹಗಳನ್ನು ಸೇರಿಸಿದ್ದಾರೆ ಎಂದು ಒಮ್ಮೆ ನೋಡಿದರೆ ತಿಳಿಯುತ್ತದೆ.

ಒಬ್ಬರು ಕೇಶವ ಬಲಿರಾಮ ಹೆಡಗೇವಾರ್ ಮತ್ತೊಬ್ಬರು ಚಕ್ರವರ್ತಿ ಸೂಲಿಬೆಲೆ. ಇವರಿಬ್ಬರ ಪರಿಚಯವನ್ನು ಇಲ್ಲಿ ಮಾಡುವ ಅಗತ್ಯ ಇಲ್ಲ ಎನಿಸುತ್ತದೆ. ಸುಮ್ಮನೆ ಒಮ್ಮೆ ಗೂಗಲ್ ಸರ್ಚ್ ಮಾಡಿದರೆ ತಿಳಿಯುತ್ತದೆ ಇವರ ರಾಜಕೀಯ ನಿಲುವುಗಳು ಹಾಗೂ ಇವರ ಆಶಯಗಳು. ಈ ಎರಡು ವಿವಾದಿತ ವ್ಯಕ್ತಿತ್ವಗಳನ್ನು ಶಾಲೆಯ ಮಕ್ಕಳ ತಲೆಗೆ ತುಂಬಲು ಹೊರಟಿರುವ ಸರ್ಕಾರದ ನಡೆಯನ್ನು ಪ್ರಶ್ನಿಸಿ ರಾಜ್ಯದಾದ್ಯಂತ ಚರ್ಚೆಗಳು, ವಿವಾದಗಳು, ಪ್ರತಿಭಟನೆಗಳು ನಡೆಯುತ್ತಿವೆ.

ಈ ಆಯ್ಕೆಗೆ ಅವರು ಕೊಡುತ್ತಿರುವ ಸಮರ್ಥನೆ- ನೀವು ವ್ಯಕ್ತಿಗಳನ್ನು ನೋಡಬೇಡಿ, ಅವರು ಬರೆದಿರುವ ಪಾಠಗಳನ್ನು, ಅದರ ಮೂಲಕ ಅದು ಮಕ್ಕಳಲ್ಲಿ ರಾಷ್ಟ್ರೀಯತೆ ಮೊದಲಾದ ಗುಣಗಳನ್ನು ಬೆಳೆಸುವಲ್ಲಿ ಹೇಗೆ ಸಹಕಾರಿಯಾಗುತ್ತದೆ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಅವರಿಗೂ ತಿಳಿದಿದೆ- ಇಲ್ಲಿ ಬರೀ ಮಕ್ಕಳಲ್ಲಿ ರಾಷ್ಟ್ರಭಕ್ತಿ, ರಾಷ್ಟ್ರೀಯತೆ, ಉದಾತ್ತ ಗುಣಗಳನ್ನು ಬೆಳೆಸುವುದೇ ಅವರ ಪ್ರಾಮಾಣಿಕ ಯತ್ನವಾಗಿದ್ದರೆ ಮೇಲೆ ಅವರು ಆರಿಸಿದ ವ್ಯಕ್ತಿತ್ವಗಳಿಗಿಂತ ನೂರುಪಟ್ಟು ಉತ್ತಮವಾದ ಚಿಂತಕರು, ಬರಹಗಾರರು ನಮ್ಮಲ್ಲಿ ಇದ್ದಾರೆ; ಹೆಚ್ಚು ಬೇಡ ಅವರ ಬಲ ಸಿದ್ಧಾಂತವನ್ನು ಬೆಂಬಲಿಸುವ ಆದರೆ ಎಲ್ಲೂ ರಾಜಕೀಯದಲ್ಲಿ ತೊಡಗಿಕೊಳ್ಳದ, ಯಾವ ಪಕ್ಷದ ನಾಯಕನ ಪರ ಕ್ಯಾಂಪೇನ್ ಮಾಡದ ನಿಸ್ಪೃಹ ಚಿಂತಕರು, ಬರಹಗಾರರು ಹಲವಾರು ಮಂದಿ ಇದ್ದಾರೆ. ಅವರನ್ನೆಲ್ಲಾ ಬಿಟ್ಟು ಮೇಲಿನ ಎರಡು ವಿವಾದಿತ ವ್ಯಕ್ತಿತ್ವಗಳನ್ನೇ ಏಕೆ ಆರಿಸಿದ್ದಾರೆಂದರೆ ಅದಕ್ಕೆ ಉತ್ತರ ಬಹಳ ಸರಳ. ಮಕ್ಕಳಿಗೆ ಉದ್ರೇಕಕಾರಿಯಾದ, ದೇಶದಲ್ಲಿ ಅನ್ಯ ಮತೀಯರ ಮೇಲೆ ದ್ವೇಷ ಬಿತ್ತುವ ಆ ವ್ಯಕ್ತಿತ್ವಗಳನ್ನು ಪರಿಚಯಿಸಬೇಕಿದೆ. ಯಾಕೆಂದರೆ ಮಕ್ಕಳು ಶಾಲೆಯ ಪಠ್ಯದಲ್ಲಿ ಬರಿ ಲೇಖಕರು ಬರೆದ ಪಾಠವನ್ನಷ್ಟೆ ಓದುವುದಿಲ್ಲ; ಗಟ್ಟು ಹಚ್ಚುವುದಿಲ್ಲ, ಬದಲಿಗೆ ಅದನ್ನು ಬರೆದ ಲೇಖಕರ ಬಗ್ಗೆ ಕೂಡ ಕೂಲಂಕಶವಾಗಿ ತಿಳಿದುಕೊಳ್ಳಬೇಕಾಗುತ್ತದೆ; ಗಟ್ಟು ಹೊಡೆಯುತ್ತಾರೆ. ಪರೀಕ್ಷೆಯಲ್ಲಿ ಅಂಕ ಗಳಿಸುವ ಸಲುವಾಗಿ.

Image
sulibele-hedgevar

ನಾಡಿನ ಜನರನ್ನು ವಂಚಿಸಲು ಹೇಳಿದ ಸುಳ್ಳುಗಳನ್ನೇ ಬರೆದರೆ ಅದಕ್ಕೆ ಅಂಕ ಕೊಡುತ್ತಾರಾ?

ನನ್ನ ಅಣ್ಣನ ಮಗ ಈ ವರ್ಷ ಹತ್ತನೆಯ ತರಗತಿಯನ್ನು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾನೆ. ಅವನ ಶಾಲೆ ಶುರುವಾಗಿ ಆಗಲೇ ಎರಡು ವಾರಗಳ ಮೇಲಾಯಿತು. ಈಗಲೂ ಅವನಿಗೆ ಕನ್ನಡ ಹಾಗೂ ಸಮಾಜದ ಪಠ್ಯ ಪುಸ್ತಕಗಳನ್ನು ವಿತರಿಸಿಲ್ಲ. ಅದಕ್ಕೆಲ್ಲ ಕಾರಣ ದಿನವೂ ಟಿವಿಯಲ್ಲಿ ನಡೆಯುವ ತನ್ನ ಪಠ್ಯಪುಸ್ತಕ ಕುರಿತ ‘ಏನೋ ಒಂದು ವಿವಾದ’ ಎಂದು ಅವನಿಗೆ ತಿಳಿದಿದೆ. ಆದರೆ ಯಾಕಾಗಿ ಇವೆಲ್ಲ ನಡೆಯುತ್ತಿದೆ ಎಂಬ ಕಿಂಚಿತ್ತೂ ಅಂದಾಜು ಅವನಿಗಿಲ್ಲ. ಎಷ್ಟೋ ಬಾರಿ ಈ ಹಿಂದೆ ಇದೇ ಚಕ್ರವರ್ತಿ ಸೂಲಿಬೆಲೆಯವರು ತಮ್ಮ ನೆಚ್ಚಿನ ರಾಜಕೀಯ ನಾಯಕನ ಪರವಾಗಿ ಊರೆಲ್ಲ ಕ್ಯಾಂಪೇನು ಮಾಡುತ್ತ ನಾಡಿನ ಜನತೆಯೆಲ್ಲ ಬಿದ್ದು ಬಿದ್ದು ನಗಾಡುವಂತೆ ಉತ್ಪ್ರೇಕ್ಷಿಸಿ ಹೇಳಿದ ಸುಳ್ಳುಗಳನ್ನು, ಹಾಗೂ ಅದರ ಮೇಲೆ ನಡೆದ ನಾನಾ ಟ್ರೋಲುಗಳನ್ನು ನೋಡಿ ನಕ್ಕಿದ್ದಾನೆ; ಮಜಾ ತೆಗೆದುಕೊಂಡಿದ್ದಾನೆ. ಈಗ ಅದೇ ವ್ಯಕ್ತಿ ಬರೆದಿರುವ ದೇಶಭಕ್ತಿಯ ಪಾಠವನ್ನು ತಾನು ಅಂಕಗಳಿಗೋಸ್ಕರ ಓದಬೇಕಾಗಿ ಬಂದಾಗ ಅವನ ಮನಸ್ಥಿತಿ ಏನಾಗಬಹುದು ಎಂದು ಒಮ್ಮೆ ಯೋಚಿಸಿ.

ನಾಡಿನ ಉದ್ದಗಲಕ್ಕೂ ಹೀಗೆ ಬರೀ ರಾಜಕೀಯ ಲಾಭಕ್ಕೋಸ್ಕೋರ ಬಣ್ಣಬಣ್ಣದ ಮಾತುಗಳಿಂದ ಜನರನ್ನು ವಂಚಿಸಿದ ಒಬ್ಬ ವ್ಯಕ್ತಿಯ ಬಾಯಿಂದ ಬರುತ್ತಿರುವ ಈ ಪಾಠವೂ ಕೂಡ ಆ ಸುಳ್ಳಿನ ಭಾಗವೇ ಯಾಕಾಗಿರಬಾರದು ಎಂದು ಒಮ್ಮೆ ಅವನಿಗೆ ಅನಿಸಿದರೆ ಗತಿಯೇನು ಯೋಚಿಸಿ? ಯಾವ ರಾಷ್ಟ್ರ ಭಕ್ತಿಯನ್ನು ನೀವು ಮಕ್ಕಳಲ್ಲಿ ತುಂಬಬೇಕು ಎಂದು ಇಷ್ಟೆಲ್ಲ ಸಾಹಸ ಮಾಡಿದ್ದೀರೋ ಅದೇ ಅವರಿಗೆ ಉಲ್ಟಾ ಆಗಿಬಿಡುವ ಅಪಾಯವಿರುವುದಿಲ್ಲವೇ? ಅಕಸ್ಮಾತ್ ಪರೀಕ್ಷೆಯಲ್ಲಿ ಇದೇ ಲೇಖಕರ ಕುರಿತು ಬರೆಯಿರಿ ಎಂದು ಪ್ರಶ್ನೆ ಬಂದಾಗ ಅವರು ನಾಡಿನ ಜನತೆಯನ್ನೆಲ್ಲ ವಂಚಿಸಲು ಹೇಳಿದ ಸುಳ್ಳುಗಳನ್ನೇ ಬರೆದರೆ ಅದಕ್ಕೆ ಅಂಕ ಕೊಡುತ್ತಾರೆಯೇ?

ಕೊಳಕಾದ ತಟ್ಟೆಯಲ್ಲಿ ನೀವು ಪಂಚಾಮೃತವನ್ನು ಉಣಬಡಿಸುತ್ತ  ‘ಅಯ್ಯೋ ತಟ್ಟೆಯ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಾ? ತಟ್ಟೆಯಲ್ಲಿರುವ ಪಂಚಾಮೃತವನ್ನಷ್ಟೆ ನೋಡಿ’ ಎಂಬಂತಿದೆ ಇವರ ಸಮರ್ಥನೆ. ಒಂದಷ್ಟು ಒಳ್ಳೆಯ ಲೇಖಕರನ್ನು ಸೇರಿಸಿದರೆ ಮಕ್ಕಳಿಗೆ ಪೂರಕವಾದ ಎಂಥಾ ಪಾಠಗಳನ್ನಾದರೂ ಅವರಿಂದ ಬರೆಸಬಹುದು; ಅದು ಅಂತಹ ದೊಡ್ಡ ವಿಷಯವೇನಲ್ಲ. ಆದರೆ ಪಾಠಗಳಷ್ಟೆ ಮುಖ್ಯವಾದದ್ದು ಅದನ್ನು ಬರೆದ ಲೇಖಕರ ವ್ಯಕ್ತಿತ್ವ ಎಂಬುದು ಯಾವುದೇ ಶೈಕ್ಷಣಿಕ ಕ್ಷೇತ್ರದ ಪರಿಣಿತರಿಗೆ ತಿಳಿದ ವಿಷಯವೇ. ‌

ಲೇಖಕರ ಬದುಕು, ಬರಹ, ಸೃಜನಶೀಲತೆ, ಸಾಧನೆ ಮೊದಲಾದವುಗಳನ್ನು ಮಕ್ಕಳಿಗೆ ಸ್ಫೂರ್ತಿಯಾಗಲಿ ಎಂದು ಸಂಕ್ಷಿಪ್ತವಾಗಿ ನೀಡಲಾಗಿರುತ್ತದೆ. ಅಂತಹ ವ್ಯಕ್ತಿತ್ವಗಳಿಗೆ ಒಂದು ಸಾಮಾಜಿಕ ಬದ್ಧತೆ, ಹೊಣೆಗಾರಿಕೆ, ನೈತಿಕ ಪ್ರಾಮಾಣಿಕತೆ ಇರುವುದು ಬಹಳ ಮುಖ್ಯವಾದ ಸಂಗತಿ ಎಂಬುದು ಮೇಲಿನ ವ್ಯಕ್ತಿತ್ವಗಳನ್ನು ಆಯ್ಕೆ ಮಾಡಿದ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಗೆ ತಿಳಿಯದೇ ಹೋದದ್ದುಕ್ಕೆ ಏನೆನ್ನಬೇಕು? ಇಂತಹ ಒಂದು ಸಾಮಾನ್ಯ ಜ್ಞಾನವೂ ಇಲ್ಲದೆ ಹೀಗೆ ಮಾಡಿದ್ದಾರೆ ಎನ್ನಬೇಕೆ? ಅಥವಾ ಎಲ್ಲಾ ಗೊತ್ತಿದ್ದೂ ತಮ್ಮ ಸಿದ್ಧಾಂತಗಳ ಬೀಜಗಳನ್ನು ಮಕ್ಕಳ ತಲೆಯಲ್ಲಿ ಬಿತ್ತಲು ನಡೆಸಿದ ಪ್ರಜ್ಞಾಪೂರ್ವಕ ಪ್ರಕ್ರಿಯೆ ಎಂದು ತಿಳಿಯಬೇಕೆ?

ಇದನ್ನು ಓದಿದ್ದೀರಾ?: ಜಾತ್ಯತೀತವಾಗಿ ವಿದ್ಯಾರ್ಥಿಗಳನ್ನು ರೂಪಿಸುವುದು ಬಹಳ ಮುಖ್ಯ: ಡಾ ಇಸ್ಮಾಯಿಲ್‌ ಎನ್

ಬಹುಶಃ ಮೇಲಿನ ಎರಡು ವ್ಯಕ್ತಿತ್ವಗಳನ್ನು ಪಠ್ಯದಲ್ಲಿ ಸೇರಿಸದೇ ಹೋಗಿದ್ದಿದ್ದರೆ ಇಷ್ಟೆಲ್ಲ ವಿವಾದ ಹುಟ್ಟುತ್ತಲೇ ಇರಲಿಲ್ಲ ಎನಿಸುತ್ತದೆ. ಆದರೆ ಈ ನಡುವೆ ದೇವನೂರು ಮಹಾದೇವ ಮೊದಲಾದ ಪ್ರಗತಿಪರ ಲೇಖಕರು ತಮ್ಮ ಬರಹಗಳನ್ನು ಇಂತಹ ಬಲಪಂಥೀಯ ಸಿದ್ಧಾಂತದ ಲೇಖಕರ ನಡುವಿನ ಪಠ್ಯದಿಂದ ಕೈಬಿಡುವಂತೆ ಪತ್ರ ಬರೆದಿದ್ದಾರೆ. ಇದು ಅವರ ಸಾಮಾಜಿಕ ಬದ್ಧತೆಯನ್ನು ಸೂಚಿಸಬಹುದು. ಆದರೆ ನನ್ನ ಪ್ರಕಾರ ಇದರಿಂದಲೂ ಕೂಡ ನಷ್ಟವಾಗುವುದು ನಮ್ಮ ಮಕ್ಕಳಿಗೇ. ಪರೀಕ್ಷೆಯ ಸಲುವಾಗಿಯಾದರೂ ದೇವನೂರ ಮಹಾದೇವರಂತಹ ಲೇಖಕರ ಬರಹಗಳನ್ನು ಓದುವ, ಅಭ್ಯಾಸ ಮಾಡುವ ಅವಕಾಶವನ್ನು ಈ ಮೂಲಕ ಕಳೆದುಕೊಳ್ಳುತ್ತಾರೆ.

ಬಲ ಒಂದು ಕಡೆ ಎಳೆದರೆ ಎಡ ಮತ್ತೊಂದು ದಿಕ್ಕಿಗೆ ನಡುವೆ ಸಿಲುಕಿರುವವರು ನಮ್ಮ ಸರ್ಕಾರಿ ಶಾಲೆ ಮಕ್ಕಳು. ಈಗಲೂ ಕಾಲ ಮಿಂಚಿಲ್ಲ. ಹೆಚ್ಚು ಸಮಯ ವ್ಯರ್ಥ ಮಾಡದೆ ಆದಷ್ಟು ಬೇಗ ಸರ್ಕಾರ ಒಂದು ತುರ್ತು ಪರಿಷ್ಕರಣ ಸಮಿತಿಯನ್ನು ನೇಮಿಸಿ ವಾರದ ಒಳಗೆ ಒಂದು ಸಾಮಾಜಿಕ ಬದ್ಧತೆಯಿಂದ, ಹೊಣೆಗಾರಿಕೆಯಿಂದ ಕೂಡಿದ ಯಾವುದೇ ಪಕ್ಷದ ಸೈದ್ಧಾಂತಿಕತೆಯನ್ನು ಪ್ರತಿಫಲಿಸದ ಸಂವಿಧಾನಾತ್ಮಕವಾದ ಪಠ್ಯಕ್ರಮವನ್ನು ಮುದ್ರಿಸಿ ಮಕ್ಕಳಿಗೆ ತಲುಪಿಸಲಿ ಎಂದು ಈ ಮೂಲಕ ಆಶಿಸುತ್ತಿದ್ದೇನೆ.

ನಿಮಗೆ ಏನು ಅನ್ನಿಸ್ತು?
1 ವೋಟ್