ಪುನೀತ್ ರಾಜಕುಮಾರ್, ಬಿಜೆಪಿ ಮತ್ತು ಭಾವನಾತ್ಮಕ ಬಲೆ

ಪುನೀತ್ ರಾಜಕುಮಾರ್ ಜನಪ್ರಿಯತೆಯನ್ನು ನಮನದ ನೆಪದಲ್ಲಿ ರಾಜಕಾರಣಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ? ಬಿಜೆಪಿಯ ಕೆಲವು ನಾಯಕರು ಚುನಾವಣಾ ಪ್ರಚಾರದ ಪೋಸ್ಟರ್‌ಗಳಲ್ಲಿ ಪುನೀತ್ ಫೋಟೋ ಬಳಸಿ, ಅಭಿಮಾನಿಗಳನ್ನು ಭಾವನಾತ್ಮಕವಾಗಿ ಬಳಸಿಕೊಳ್ಳುತ್ತಿದ್ದಾರೆಯೇ? ಮತಗಳನ್ನಾಗಿ ಮಾರ್ಪಡಿಸುವ ಹುನ್ನಾರ ನಡೆದಿದೆಯೇ?

ಖ್ಯಾತನಟ ಪುನೀತ್ ರಾಜಕುಮಾರ್ ಚಿತ್ರಗಳು ಕೇವಲ ಮನರಂಜನೆಯ ಸರಕಾಗದೆ, ಸದಭಿರುಚಿ ಹಾಗೂ ಸಂದೇಶ ಸಾರುವ ಚಿತ್ರಗಳೂ ಆಗಿದ್ದರಿಂದ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದ್ದು ದಿಟ. ನಟನೆಗೆ ಹೊರತಾದ ಅವರ ಸಮಾಜಸೇವೆಯ ಕಾರಣಕ್ಕೆ ಜನಪ್ರೀತಿಯ ವ್ಯಕ್ತಿಯಾಗಿದ್ದೂ ನಿಜ. ಹಾಗೆಯೇ ಅವರು ರೂಢಿಸಿಕೊಂಡ ಸಾರ್ವಜನಿಕ ವ್ಯಕ್ತಿತ್ವ ಮಾದರಿಯಾಗಿ ನಿಲ್ಲುವಂಥದ್ದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಪುನೀತ್ ರಾಜಕುಮಾರ್ ಅವರಲ್ಲಿದ್ದ ಈ ವಿಶೇಷ ಗುಣಸ್ವಭಾವಗಳು, ಬೇರೆ ನಟ-ನಟಿಯರಲ್ಲಿ ಇಲ್ಲದಿರುವ ಕಾರಣಕ್ಕಾಗಿಯೇ ಪುನೀತ್ ಭಿನ್ನವಾಗಿ ಕಾಣುತ್ತಾರೆ. ಮಾನವೀಯ ವ್ಯಕ್ತಿಯಾಗಿ ಕಂಗೊಳಿಸುತ್ತಾರೆ. 

Eedina App

ಇಂತಹ ವ್ಯಕ್ತಿ ಕೇವಲ 46ನೇ ವಯಸ್ಸಿಗೆ ಇಹಲೋಕ ತ್ಯಜಿಸಿದಾಗ, ನಾಡಿನ ಜನತೆ ನಿಜಕ್ಕೂ ಶಾಕ್ ಗೆ ಒಳಗಾಗಿದ್ದರು. ಈಗ ಪುನೀತ್ ಇಲ್ಲವಾಗಿ ವರ್ಷದ ಮೇಲಾಗಿದೆ. ಇವತ್ತಿಗೂ ಜನರ ಮನಸ್ಸಿನಿಂದ ಮರೆಯಾಗಿಲ್ಲ. ಅಭಿಮಾನಿಗಳ ನೆನಪಿನ ನೇವರಿಕೆ ಬೆಟ್ಟದಂತೆ ಬೆಳೆಯುವುದೂ ನಿಂತಿಲ್ಲ. ಮನೆಮಗನ ಸಾವಷ್ಟೇ ನೋವು ಕೊಟ್ಟು, ಭಾವನಾತ್ಮಕ ಬೆಸುಗೆಯಿಂದ ಬಿಡಿಸಿಕೊಳ್ಳಲೂ ಆಗಿಲ್ಲ. ಈ ಎಲ್ಲ ಇಲ್ಲಗಳಿಂದಾಗಿಯೇ, ಇವತ್ತಿಗೂ, ನಾಡಿನ ಜನತೆ ನೆನಪಿಸಿಕೊಳ್ಳುವ, ಗೌರವಿಸುವ ನೆಪದಲ್ಲಿ ಪುನೀತರನ್ನು ಜೀವಂತ ಇರುವಂತೆ ನೋಡಿಕೊಂಡಿದ್ದಾರೆ. 

ಈ ವಿಶೇಷ ಪುನೀತ್ ರಾಜಕುಮಾರ್ ಅವರಲ್ಲಿ ಮಾತ್ರ. ಜನರ ಈ ಭಾವನಾತ್ಮಕ ಬಂಧವನ್ನು ಅರ್ಥ ಮಾಡಿಕೊಂಡಿರುವ ಆಸೆಬುರುಕ ರಾಜಕಾರಣಿಗಳು ಪುನೀತರನ್ನು ಪಕ್ಷದ ಪೋಸ್ಟರ್ ಗಳಲ್ಲಿ ಪ್ರತಿಷ್ಠಾಪಿಸಲು, ಆ ಮೂಲಕ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಅದರಲ್ಲೂ ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ಹೆಜ್ಜೆ ಮುಂದೆ ಹೋಗಿ, ಪುನೀತ್ ರಾಜಕುಮಾರ್ ನಿಧನವನ್ನೂ ರಾಜಕೀಯಗೊಳಿಸಿದ್ದಾರೆ. ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿದರೂ ಸಮರ್ಥವಾಗಿ ನಿಭಾಯಿಸಲಾದ ಕೋವಿಡ್ ಸಾವು ನೋವುಗಳಂತಹ ಲೋಪದೋಷಗಳನ್ನು ಮುಚ್ಚಿಕೊಳ್ಳಲು; ಪಿಎಸ್ಐ ಅಕ್ರಮ, 40% ಕಮಿಷನ್ ದಂಧೆ, ಈಗ ಮತದಾರನ ಮಾಹಿತಿ ಕದಿಯುವ ಚಿಲುಮೆ ಹಗರಣದ ದುರಾಡಳಿತವನ್ನು, ಭ್ರಷ್ಟಾಚಾರವನ್ನು ಜನರ ಮನಸಿನಿಂದ ಮರೆಮಾಚಲು ಪುನೀತ್ ನಮನ ಕಾರ್ಯಕ್ರಮಗಳ ಮೊರೆಹೋಗುತ್ತಿದ್ದಾರೆ.

AV Eye Hospital ad

ಸರ್ಕಾರದ ಲೋಪದೋಷಗಳನ್ನು ಎತ್ತಿಹಿಡಿದು ಪ್ರಶ್ನಿಸಬೇಕಾದ ಮಾಧ್ಯಮಗಳು, ಅದರಲ್ಲೂ ದೃಶ್ಯ ಮಾಧ್ಯಮಗಳು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಾದ ಪುನೀತ್ ನಮನದಂತಹ ಟಿಆರ್ಪಿ ತರುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ, ಸರ್ಕಾರಕ್ಕೆ ನೆರವಾಗುತ್ತಿವೆ. ಸರ್ಕಾರ ದಯಪಾಲಿಸುವ `ಸ್ವೀಟ್ ಬಾಕ್ಸ್'ಗೆ ಬಲಿಯಾಗಿ, ನಾಡಿನ ಜನತೆಯನ್ನು ದಿಕ್ಕುತಪ್ಪಿಸುತ್ತಿವೆ. ಮಾಧ್ಯಮಗಳ ಪರೋಕ್ಷ ಬೆಂಬಲ ಪಡೆದ ಸರ್ಕಾರ ನಮನ-ನೆನಪು-ಶೃದ್ಧಾಂಜಲಿಯಂತಹ ಕಾರ್ಯಕ್ರಮಗಳ ಮೂಲಕ ಪುನೀತ್ ರನ್ನು ಹಾಡಿ ಹೊಗಳಿ, ಅವರ ಅಭಿಮಾನಿಗಳನ್ನು ತಮ್ಮತ್ತ ಸೆಳೆಯಲು, ಅವರ ಜನಪ್ರಿಯತೆಯನ್ನು ಮತಬ್ಯಾಂಕನ್ನಾಗಿ ಪರಿವರ್ತಿಸಲು ಹವಣಿಸುತ್ತಿದ್ದಾರೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ಹೇಳಿಕೇಳಿ ಇದು ಚುನಾವಣಾ ವರ್ಷ. ರಾಜಕಾರಣಿಗಳಿಗೆ ಗೆಲ್ಲುವುದೇ ಗುರಿ. ಅಧಿಕಾರ ಹಿಡಿಯುವುದೇ ಅಂತಿಮ. ಹಾಗಾಗಿ ಗುರಿ ಸಾಧನೆಗೆ ಅವರು ಹಲವು ಮಾರ್ಗಗಳನ್ನು ಹುಡುಕುವುದುಂಟು, ಹಲವು ಅಸ್ತ್ರಗಳನ್ನು ಪ್ರಯೋಗಕ್ಕೊಡ್ಡುವುದುಂಟು. ತಂತ್ರ-ಕುತಂತ್ರಗಳನ್ನು ಬಳಸುವುದುಂಟು. ಈಗಾಗಲೇ ದೇಶದ ಜನ ಬಿಜೆಪಿಗರ ಶ್ರೀರಾಮ, ಅಯೋಧ್ಯೆ, ಇಟ್ಟಿಗೆ, ಜ್ಯೋತಿ, ರಥಯಾತ್ರೆ, ಹಿಂದುತ್ವ ಎಂಬ ಭಾವನಾತ್ಮಕ ಬಲೆಯೊಳಗೆ ಬಿದ್ದು ಬಿಜೆಪಿಯನ್ನು ಗೆಲ್ಲಿಸಿ ನೋಡಿದ್ದಾಗಿದೆ. ಹಾಗೆಯೇ ಅವರ ಹಿಂದುತ್ವದ ಹಿಡಿತಕ್ಕೊಳಗಾಗಿ, ಸ್ವತಂತ್ರವಾಗಿ ಯೋಚಿಸುವಂತಹ ಮೆದುಳಿದೆ ಎಂಬುದನ್ನೇ ಮರೆತು, ಅನ್ಯಧರ್ಮದವರನ್ನು ಅನುಮಾನದಿಂದ ನೋಡುವ, ವಿನಾಕಾರಣ ದ್ವೇಷಿಸುವ, ಸಹಬಾಳ್ವೆಗೆ ಸಂಚಕಾರ ತಂದುಕೊಳ್ಳುವ, ಸಾವು-ನೋವಿಗೆ ಈಡಾಗುವ, ನಿಸೂರ ಬದುಕಿಗೆ ಭಂಗ ತಂದುಕೊಂಡಿದ್ದನ್ನೂ ಕಂಡಿದ್ದಾಗಿದೆ. ಹಾಗೆಯೇ ಈ ಭಾವನಾತ್ಮಕ ವಿಷಯಗಳೇ ಮುನ್ನಲೆಗೆ ಬಂದು ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ದಿಕ್ಕು ತಪ್ಪಿತ್ತಿರುವುದನ್ನೂ ಕಾಣುತ್ತಿದ್ದೇವೆ. ಈಗ ಧರ್ಮ-ದೇವರು-ಹಿಂದುತ್ವದ ಜೊತೆಗೆ ನಟನೊಬ್ಬನ ಜನಪ್ರಿಯತೆಯನ್ನು ನಮನದ ನೆಪದಲ್ಲಿ ಮತ್ತೊಂದು ಅಸ್ತ್ರವನ್ನಾಗಿ ಪ್ರಯೋಗಿಸಲ್ಪಡುತ್ತಿದೆ. 

ಪುನೀತ್ ರಾಜಕುಮಾರ್ ನಿಧನರಾದದ್ದು 29 ಅಕ್ಟೋಬರ್, 2021ರಂದು. ಅಲ್ಲಿಂದ ಇಲ್ಲಿಯವರೆಗೆ ಪುನೀತ್ ರಾಜಕುಮಾರ್ ಜನರ ಹೃದಯದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಲೇ ಸಾಗಿದ್ದಾರೆ. ಕರ್ನಾಟಕದ ಯಾವುದೇ ಸಣ್ಣ ಹಳ್ಳಿಗೆ ಹೋದರೂ ಪುನೀತ್ ರಾಜಕುಮಾರ್ ಪೋಸ್ಟರ್, ಫ್ಲೆಕ್ಸ್, ಕಟೌಟ್ ಕಂಗೊಳಿಸುತ್ತವೆ. ಮನೆಗಳಲ್ಲಿ, ಗಲ್ಲಿಗಳಲ್ಲಿ, ಬೀದಿಗಳಲ್ಲಿ, ಸರ್ಕಲ್ ಗಳಲ್ಲಿ ಫೋಟೋಗಳನ್ನಿಟ್ಟು ಹಾರ-ತುರಾಯಿಗಳಿಂದ ಶೃಂಗರಿಸಿರುವುದು ಸಾಮಾನ್ಯವಾಗಿದೆ. ಪೂಜೆ-ಪುನಸ್ಕಾರ ನಡೆಯುತ್ತಲೇ ಇದೆ. ಇನ್ನು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿ ಸ್ಥಳವಂತೂ ಸಾರ್ವಜನಿಕ ಯಾತ್ರಾಸ್ಥಳವಾಗಿ ಮಾರ್ಪಾಡಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದುಬರುತ್ತಿದೆ. 

ಇದು ಮಾನವೀಯ ವ್ಯಕ್ತಿಯೊಬ್ಬನಿಗೆ ನಾಡಿನ ಜನ ತೋರುವ ನಿರ್ವ್ಯಾಜ್ಯ ಪ್ರೀತಿ. ಅಪ್ಪಟ ಅಭಿಮಾನ. ಇಲ್ಲಿ ಜಾತಿಯಿಲ್ಲ, ಧರ್ಮವಿಲ್ಲ, ಪಂಥವಿಲ್ಲ, ಭಾಷಾ ಭೇದಭಾವವಿಲ್ಲ. ಇಂತಹ ನಿಷ್ಕಳಂಕ ಪ್ರೀತಿಯನ್ನು, ಜನಪ್ರಿಯತೆಯನ್ನು ಪುನೀತ್ ರಾಜಕುಮಾರ್ ಇಲ್ಲದ ಈ ಗಳಿಗೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ದುರುಪಯೋಗಪಡಿಸಿಕೊಳ್ಳಲು ಮುಂದಾಗಿದೆಯೇ; ಪುನೀತ್ ರಾಜಕುಮಾರ್ ಅವರಿಗೆ `ಕರ್ನಾಟಕ ರತ್ನ' ಎಂಬ ಮರಣೋತ್ತರ ಪ್ರಶಸ್ತಿ ನೀಡಿ, ರಾಜ್ ಕುಟುಂಬಕ್ಕೆ ಹತ್ತಿರವಾಗಲು ಹಾತೊರೆಯುತ್ತಿದೆಯೇ ಎಂಬ ಪ್ರಶ್ನೆ ಈಗ ಬಹುಚರ್ಚೆಯ ವಿಷಯವಾಗಿದೆ. 

ಅದಕ್ಕೆ ಪೂರಕವಾಗಿ, ಇಲ್ಲಿಯವರೆಗೆ ಚಿತ್ರೋದ್ಯಮದ ವತಿಯಿಂದ ನಡೆಯುತ್ತಿದ್ದ ಅಧಿಕೃತ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿದ್ದ ನಟನೊಬ್ಬನ ನಮನ ಕಾರ್ಯಕ್ರಮಗಳು, ಈಗ ರಾಜಕೀಯ ಪಕ್ಷಗಳ ಪ್ರಾಯೋಜಿತ ಕಾರ್ಯಕ್ರಮಗಳಾಗಿ ಚಾಲ್ತಿಗೆ ಬರುತ್ತಿವೆ. ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ, ಯುವಕರಿಗೆ ಕ್ರಿಕೆಟ್ ಪಂದ್ಯಾವಳಿ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಗರ್ಭಿಣಿ ಸ್ತ್ರೀಯರಿಗೆ ಮುಡಿತುಂಬುವ ಸೀಮಂತ, ವೃದ್ಧರಿಗೆ ಆರೋಗ್ಯ ತಪಾಸಣಾ ಶಿಬಿರ, ಸಾವಯವದ ನೆಪದಲ್ಲಿ ತಿಂಡಿ ಮೇಳ, ಪ್ರತಿಭಾನ್ವೇಷಣೆಯೆಂದು ಗಾಯನ ಸ್ಪರ್ಧೆ, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆಸ್ತಿಕರಿಗಾಗಿ ದೇವರ ಉತ್ಸವ, ಮನರಂಜನೆಗಾಗಿ ರಸಮಂಜರಿ ಕಾರ್ಯಕ್ರಮಗಳು- ಚುನಾವಣಾ ಸಮಯದಲ್ಲಿ ಸಾಮಾನ್ಯವಾಗಿದ್ದ, ರಾಜಕಾರಣಿಗಳು ಹಮ್ಮಿಕೊಳ್ಳುತ್ತಿದ್ದ ಇಂತಹ ಕಾರ್ಯಕ್ರಮಗಳಲ್ಲಿ ಈಗ ಪುನೀತ್ ರಾಜಕುಮಾರ್ ಅವರ ಭಾರೀ ಸೈಜಿನ ಭಾವಚಿತ್ರ, ಫ್ಲೆಕ್ಸ್, ಬ್ಯಾನರ್ ಕಡ್ಡಾಯವಾಗುತ್ತಿದೆ. ಪುನೀತರಿಗೆ ಗೌರವ ಸಲ್ಲಿಸುವ ನೆಪದಲ್ಲಿ ಯುವಜನತೆಯನ್ನು ಸೆಳೆಯುವ ಸಂಚು ಸದ್ದಿಲ್ಲದೆ ಚಾಲ್ತಿಗೆ ಬರುತ್ತಿದೆ. 

ಈ ಕುರಿತು ಹಲವರನ್ನು ಮಾತಿಗೆಳೆದರೆ, `ಇದು ಜನರ ಭಾವನೆಗಳ ಜೊತೆ ಸರ್ಕಾರದ ಚೆಲ್ಲಾಟ, ಅಧಿಕಾರ ದುರುಪಯೋಗ, ಈ ರೀತಿಯ ನಿರ್ಲಜ್ಜ ನಡೆಯನ್ನು ಹಿಂದೆಂದೂ ಕಂಡಿರಲಿಲ್ಲ' ಎಂದು ವ್ಯಗ್ರರಾಗುತ್ತಾರೆ. 

ಚಿತ್ರೋದ್ಯಮದ ಗಣ್ಯರೊಬ್ಬರು, `ರಾಜ್ ಕುಟುಂಬ ಯಾವತ್ತೂ ರಾಜಕಾರಣದಿಂದ ದೂರ. ರಾಜಕುಮಾರ್ ಅವರಂತೂ, ಅದು ನಮ್ಮಂತವರಿಗಲ್ಲ ಎಂದು ಸಾರ್ವಜನಿಕವಾಗಿಯೇ ಹೇಳಿದ್ದರು. ಇನ್ನು ಶಿವರಾಜ್ ಕುಮಾರ್ ಕುಟುಂಬ ಮಾತ್ರ, ಅದರಲ್ಲೂ ಮಡದಿ ಗೀತಾ ಅವರು ಚುನಾವಣೆಗೆ ನಿಂತು ಸೋತ ಮೇಲೆ, ಅವರೂ ಆ ಕಡೆ ತಲೆ ಹಾಕಿಲ್ಲ. ರಾಘು, ಪುನೀತ್ ರಂತೂ ಎಲ್ಲ ಪಕ್ಷಗಳ ನಾಯಕರೊಂದಿಗೂ ಸಂಪರ್ಕದಿಂದಿದ್ದು, ತಾವಾಯಿತು ತಮ್ಮ ವೃತ್ತಿಯಾಯಿತು ಎಂಬಂತಿದ್ದವರು. ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಆಗಾಗ ಸರ್ಕಾರದ ಮರ್ಜಿ ಮುಲಾಜುಗಳಿಗೆ ಒಳಗಾಗಿದ್ದು ಬಿಟ್ಟರೆ, ಯಾವುದಾದರೂ ಒಂದು ಪಕ್ಷದ ಜೊತೆ ಗುರುತಿಸಿಕೊಂಡವರಲ್ಲ. ಇಂತಹ ಕುಟುಂಬದಿಂದ ಬಂದ ಪುನೀತ್ ಇಲ್ಲದಿರುವ ಈ ಸಮಯದಲ್ಲಿ, ಅವರನ್ನು ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ' ಎಂದು ನೇರವಾಗಿಯೇ ನುಡಿಯುತ್ತಾರೆ.

ಮತ್ತೊಬ್ಬರು, `ಈಗ ನೋಡಿ, ಬಿಜೆಪಿ ಸರ್ಕಾರದ ಇತ್ತೀಚಿನ ಪ್ರತಿಯೊಂದು ಕಾರ್ಯಕ್ರಮದಲ್ಲೂ ಇನ್ಫೋಸಿಸ್ ನ ಸುಧಾಮೂರ್ತಿಯವರು ಕಾಣಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಅವರಿಗೆ ರೆಡ್ ಕಾರ್ಪೆಟ್ ಹಾಸಿ ಕರೆದು ಗೌರವಿಸುತ್ತಿದೆಯೋ ಅಥವಾ ಅವರೇ ಆಸಕ್ತಿ ತೋರಿ ಭಾಗವಹಿಸುತ್ತಿದ್ದಾರೆಯೋ, ಅವರೇ ಹೇಳಬೇಕು. ಅಂತೂ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ. ಆದರೆ ಇಲ್ಲದಿರುವ ಪುನೀತ್ ರನ್ನು ಹೀಗೆ ಎಲ್ಲದಕ್ಕೂ ಎಳೆದು ತರುವುದು ಸರಿಯಲ್ಲ. ಅವರು ಇದ್ದು, ಖುದ್ದು ಭಾಗಿಯಾಗಿದ್ದರೆ ಅದು ಬೇರೆ ಮಾತು. ಇಲ್ಲದಿರುವಾಗ ಹೀಗೆಲ್ಲ ಮಾಡಬಾರದು, ಸರ್ಕಾರಕ್ಕೂ ಸಾಮಾಜಿಕ ಲಜ್ಜೆ ಅನ್ನುವುದಿರಬೇಕು' ಎನ್ನುತ್ತಾರೆ.

ಹಿಂದೊಮ್ಮೆ, 1978ರಲ್ಲಿ ಡಾ. ರಾಜಕುಮಾರ್ ರಾಜಕೀಯಕ್ಕೆ ಎಂಬ ಸುದ್ದಿ ಹಬ್ಬಿತ್ತು. ಚಿಕ್ಕಮಗಳೂರು ಲೋಕಸಭಾ ಮರುಚುನಾವಣೆಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಇಂದಿರಾಗಾಂಧಿ ವಿರುದ್ಧ ಜನತಾಪಕ್ಷದಿಂದ ರಾಜಕುಮಾರ್ ಅಭ್ಯರ್ಥಿಯಾಗುತ್ತಾರೆ ಎಂಬುದು ಆ ಸಂದರ್ಭದಲ್ಲಿ ಸಂಚಲನ ಉಂಟು ಮಾಡಿತ್ತು. ರಾಜಕೀಯ ವಲಯದಲ್ಲಿ ಬಿರುಗಾಳಿ ಎದ್ದಿತ್ತು. ಆದರೆ ರಾಜಕುಮಾರ್ ಆ ಬಗ್ಗೆ ಮನಸ್ಸೂ ಮಾಡಲಿಲ್ಲ, ಮಾತನ್ನೂ ಆಡಲಿಲ್ಲ. ವಿರೋಧಿ ಪಾಳೆಯವನ್ನು ದಾರಿ ತಪ್ಪಿಸುವಲ್ಲಿ ರಾಜ್ ಹೆಸರನ್ನು ಮುನ್ನಲೆಗೆ ತರಲಾಗಿತ್ತು ಎಂಬ ಸತ್ಯ ನಿಧಾನವಾಗಿ ಹೊರಬಿತ್ತು. ಡಾ.ರಾಜಕುಮಾರ್ ಕೂಡ ಮೌನವಾಗಿದ್ದು, ಅದನ್ನೇ ಉತ್ತರವಾಗಿಸಿದ್ದು ಮತ್ತೊಬ್ಬರಿಗೆ ಮಾದರಿಯಾಗಿತ್ತು. 

ಹಾಗೆಯೇ 1992ರಲ್ಲಿ ಹಿರಿಯ ರಾಜಕಾರಣಿ ಎಸ್. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಡಾ.ರಾಜಕುಮಾರ್ ಅವರಿಗೆ `ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಮಾರಂಭವೇರ್ಪಡಿಸಿದ್ದರು. ರಾಜ್ ನೋಡಲು ಸಹಜವಾಗಿ ಭಾರೀ ಸಂಖ್ಯೆಯಲ್ಲಿ ಜನ ಸೇರಿತ್ತು, ಚಪ್ಪಲಿಗಳು ತೂರಾಡಿ ಗಲಾಟೆಯೂ ಆಗಿತ್ತು. ಆ ಗಲಾಟೆಯಿಂದ ಮನನೊಂದ ಡಾ.ರಾಜ್, ಅಂದಿನಿಂದ ಸರ್ಕಾರಿ ಸಮಾರಂಭಗಳಿಂದ ದೂರವೇ ಉಳಿದಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ಆ ಕಾರಣಕ್ಕಾಗಿಯೇ ಸಾರ್ವಜನಿಕ ವಲಯದಲ್ಲಿ ರಾಜ್ ಕುಟಂಬಕ್ಕೆ ತನ್ನದೇ ಆದ ಘನತೆ, ಗೌರವವಿದೆ. ಆ ಕುಟುಂಬ ತಳೆಯುವ ನಿಲುವು, ನಡೆಯನ್ನು ನಾಡಿನ ಜನತೆ ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದನ್ನೂ ಹೇಳಬೇಕಾಗಿದೆ. 

ಆದರೆ ಈಗ ಬಿಜೆಪಿ ಪುನೀತ್ ರ ಆಕಸ್ಮಿತ ಸಾವನ್ನು ನೋವಿನಿಂದ ನೋಡುತ್ತಲೇ, ಪ್ರತಿಭಾನ್ವಿತ ನಟನಿಗೆ ಸಲ್ಲಬೇಕಾದ ನ್ಯಾಯದ ನೆಪದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಆರಾಧನೆಗಿಳಿದಿದೆ. ತಮ್ಮ ಪಕ್ಷದ `ಬ್ರ್ಯಾಂಡ್' ಮಾಡಿಕೊಳ್ಳಲು, ಆ ಮೂಲಕ ಪುನೀತ್ ಅಭಿಮಾನಿಗಳನ್ನು ಭಾವನಾತ್ಮಕವಾಗಿ ಸೆಳೆಯಲು ಹವಣಿಸುತ್ತಿದೆ. ಅದಕ್ಕಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. 

ಚುನಾವಣಾ ಸಂದರ್ಭದಲ್ಲಿ ಇದೆಲ್ಲ ಇದ್ದದ್ದೆ. ಅದರಲ್ಲೂ ಸತ್ತವರ ನೆರಳಿನಲ್ಲಿ ರಾಜಕಾರಣ ಮಾಡುವುದು ಅವರಿಗೆ ಸುಲಭ. ಅದಕ್ಕೆ ದೊಡ್ಡ ಇತಿಹಾಸವೇ ಇದೆ. ಆದರೆ ಪುನೀತ್ ರಾಜಕುಮಾರ್ ರಾಜಕಾರಣದಿಂದ ಹೊರತಾದವರು. ಅವರು ಇಲ್ಲದ ಈ ಸಮಯದಲ್ಲಿ, ಅವರ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ, ಅಭಿಮಾನವನ್ನು ಮತವನ್ನಾಗಿ ಮಾರ್ಪಡಿಸಿಕೊಳ್ಳುತ್ತಿರುವ ಬಿಜೆಪಿ ನಡೆ ಬಗ್ಗೆ ಜನ ಜಾಗೃತರಾಗಬೇಕಾಗಿದೆ. ಹಾಗೆಯೇ ದೇವರು-ಧರ್ಮ-ಅಭಿಮಾನಗಳೆಂಬ ಭಾವನಾತ್ಮಕ ಬಲೆಯೊಳಗೆ ಪದೇ ಪದೇ ಬೀಳುವ ಪೆದ್ದರಲ್ಲ ಎಂಬುದನ್ನು ತಮ್ಮ ಎಚ್ಚರಿಕೆಯ ನಡೆಯ ಮೂಲಕವೇ ತೋರಬೇಕಾಗಿದೆ.

ನಿಮಗೆ ಏನು ಅನ್ನಿಸ್ತು?
6 ವೋಟ್
eedina app