ಭಾರತ್‌ ಜೋಡೋ ಯಾತ್ರೆ | ನಿರಂತರ ದ್ವೇಷಕ್ಕೆ ಪ್ರೀತಿಯ ಬೆಸುಗೆಯ ನಡಿಗೆ

Rahul sonia

ಫ್ಯಾಸಿಸಂ ಸಿದ್ಧಾಂತ, ಆಡಳಿತವನ್ನು ರಾಹುಲ್‌ ಗಾಂಧಿ ಭಿನ್ನ ರೀತಿಯಲ್ಲಿ ಮುಖಾಮುಖಿ ಆಗಿದ್ದಾರೆ. ಅಧಿಕಾರದ ಮತಾಂಧತೆ ಹಾಗೂ ಮತಾಂಧರ ಎದುರು ಜನ ಸಾಮಾನ್ಯರ ಮುಗ್ಧತೆಯನ್ನು ಮುಖಾಮುಖಿಯಾಗಿಸಿದ್ದಾರೆ. ಕರುಣೆ, ಪ್ರೀತಿಯ ದಾರಿಯಿದು‌. ಇದು ಸದ್ಯದ ಪ್ರಜಾಪ್ರಭುತ್ವದ ಮುಖವಾಡ ತೊಟ್ಟ ಹುಚ್ಚುದೊರೆಯನ್ನು ರಾಹುಲ್ ಎದುರಿಸುತ್ತಿರುವ ರೀತಿ

ದೇಶದಲ್ಲಿ ನಿರುದ್ಯೋಗ ದಿಂದ ಯುವ ಜನತೆ ತತ್ತರಿಸಿರುವ, ರೈತರು ರಸ ಗೊಬ್ಬರದ ಬೆಲೆ ಏರಿಕೆ ಹಾಗೂ ಅತಿವೃಷ್ಟಿಯಿಂದ ಕಂಗೆಟ್ಟಿರುವ ಕಾಲದಲ್ಲಿ, ಭಾರತದ ಗ್ರಾಮೀಣ ಮಹಿಳೆ ಸಂಕಟಗಳು, ನಗರ ಮಹಿಳೆಯರ ಬವಣೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಆಶಾ ಭಾವನೆಯ, ಬದುಕಿನ ಭರವಸೆಯ ಸಣ್ಣ ಗೆರೆಯೊಂದು ಮೂಡುತ್ತಿದೆ.

Eedina App

ಕಂಡೂ ಕಾಣದಂತಿರುವ ಈ ಆಶಾಭಾವ ಕಾಂಗ್ರೆಸಿನ ಭಾರತ ಜೋಡೋ ಯಾತ್ರೆಯಲ್ಲಿ ಮೂಡತೊಡಗಿದೆ. ಹಬ್ಬಗಳನ್ನು ಕೇಸರಿಕರಣ ಮಾಡುತ್ತಿರುವ ಈ ವರ್ತಮಾನದಲ್ಲಿ, ಒಂದೆಡೆ ನಿರಂತರವಾಗಿ ದ್ವೇಷ ಬಿತ್ತಲಾಗುತ್ತಿದೆ. ಧರ್ಮ ರಕ್ಷಣೆಯ ಪೋಷಾಕಿನ ರಾಜಕಾರಣ ನಡೆಸುತ್ತಿರುವ ರಿಮೋಟ್ ಕಂಟ್ರೋಲ್‌ನ ಒಂದು ಬೆರಳು ಸಾಮರಸ್ಯದ ಮುಖವಾಡ ಹಾಕಿ ನಾಗಪುರದಲ್ಲಿ  ಮಾತನಾಡಿದರೆ, ಅದೇ ಸಮಯಕ್ಕೆ ಬೆಳಗಾವಿಯಲ್ಲಿ ʼಶಸ್ತ್ರಗಳಿರುವುದು ಪೂಜೆ ಮಾಡಲು ಅಷ್ಟೆ ಅಲ್ಲ, ಬಳಸುವುದು ಕಲಿಯಿರಿ, ಹೊಡೆದಾಟಕ್ಕೆ ಬಳಸುವಂಥ ಅಸ್ತ್ರಗಳನ್ನು ಪೂಜಿಸಿ ಹಾಗೂ ಪೊಲೀಸ್ ಪ್ರಕರಣಗಳಿಗೆ ಹೆದರಬಾರದುʼ ಎನ್ನುತ್ತದೆ.

ಸೈನಿಕರು, ಪೊಲೀಸರಿಂದ ಮಾತ್ರ ಹಿಂದೂ‌ಧರ್ಮ ಹಾಗೂ ಹಿಂದೂಗಳ ರಕ್ಷಣೆ ಸಾಧ್ಯವಿಲ್ಲ. ಪರಾಕ್ರಮದಿಂದ ನಮ್ಮ ರಕ್ಷಣೆಗೆ ನಾವೇ ಸನ್ನದ್ಧಗೊಳ್ಳಬೇಕು ಎಂದು ಕರೆ ನೀಡಲಾಗುತ್ತಿದೆ. ಉಡುಪಿಯಲ್ಲಿ ಇದಕ್ಕೆ ಪೂರಕ ಪೂಜೆಗಳಾಗುತ್ತವೆ. ಗಣೇಶ, ದುರ್ಗೆ ಸಹ ಕೇಸರಿಕರಣವಾಗಿ ಇಡೀ ಸಮಾಜವನ್ನು ಒಂದು ಸಿದ್ಧಾಂತದತ್ತ ದೂಡುವ ಪ್ರಯತ್ನಗಳು ದೇವರು ಧರ್ಮದ ಹೆಸರಲ್ಲಿ, ಮುಖವಾಡದಲ್ಲಿ ಒಂದು ಪ್ರಪಾತದ ಅಂಚಿಗೆ ಬಂದು ನಿಂತಿದೆ.

AV Eye Hospital ad

ಹೀಗೆ ಮಾತನಾಡುವವರು ಪೊಲೀಸರು ಇರುವುದು ಹಿಂದೂ ಧರ್ಮ ರಕ್ಷಣೆಗೆ, ಸೈನಿಕರಿರುವುದು ಹಿಂದೂಗಳನ್ನು ಕಾಯಲು ಎಂಬರ್ಥದಲ್ಲಿ ಸೈನ್ಯವನ್ನು, ಪೊಲೀಸರನ್ನು ಸಂವಿಧಾನ, ಕಾನೂನು, ಸೈನ್ಯದ ಚೌಕಟ್ಟು ಮೀರಿ ತನ್ನ ಅಹಂಮಿಕೆಯ ಕಬಂಧ ಬಾಹುಗಳಿಗೆ ತೆಗೆದುಕೊಂಡೇ ಮಾತಾಡುತ್ತದೆ. ಎಂಥ ವಿಪರ್ಯಾಸ ನೋಡಿ. ಬಹುತ್ವದ ಈ ದೇಶವನ್ನು ಜಾತಿ, ಮತ, ಧರ್ಮದ ಗಡಿದಾಟಿ ದೇಶ ಕಾಯುವ ಸೈನಿಕರನ್ನು ಒಂದು ಸಂಘಟನೆ ತನ್ನ ಅಧೀನರು ಎಂಬಂತೆ ಮಾತನಾಡುತ್ತದೆ. ಅಷ್ಟೇ ಅಲ್ಲ, ಅವರು ಧರ್ಮ ಕಾಯುವವರು ಎನ್ನುತ್ತಾ, ಅದು ಸಾಲದು, ನೀವು ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಿ ಎಂದು ಕರೆ ನೀಡುತ್ತದೆ. ಇದು ದೇಶದಲ್ಲಿ ಅಂತರ್ಯುದ್ಧಕ್ಕೆ ಕರೆ ನೀಡದಂತಲ್ಲವೇ? ತನ್ನ ದೇಶದಲ್ಲಿ ಅಂತಃಕಲಹ ಹಚ್ಚುವ ದೇಶಪ್ರೇಮಿಯೋ? ದೇಶದ್ರೋಹಿಯೋ?

ʼಕಮಲಮಯೀʼ ಸಂಪಾದಕರ ತಳಮಳ ಹೆಚ್ಚಿದೆ

ಇಂಥ ಸಮಯದಲ್ಲಿ ಆಕ್ರಮಣಕಾರಿ ಅಲ್ಲದ, ಸೌಮ್ಯ ಸ್ವಭಾವದ, ಸಣ್ಣಗೆ ಮಳೆ ಬಿದ್ದಂತೆ ಸರಳವಾಗಿ ಮಾತನಾಡುವ, ಎಲ್ಲರೊಂದಿಗೂ ಬೆರೆಯುವ, ಅಧಿಕಾರದ ಲಾಲಸೆ ಇಲ್ಲದ, ನಡೆ ನುಡಿಯಲ್ಲಿ ಭಾರತ ಜೋಡೋ ಯಾತ್ರೆ ಕರ್ನಾಟಕದ ಚಾಮರಾಜನಗರದಲ್ಲಿ ಪ್ರವೇಶಿಸಿ, ಮೈಸೂರು ದಾಟಿ, ಮಂಡ್ಯದಲ್ಲಿ ಸಾಗಿದೆ. ನಿರಂತರವಾಗಿ ಇದು ಇನ್ನೂ ಸಾಗಲಿದೆ. ಆರಂಭದ ತಮಿಳುನಾಡಿನಿಂದ ಹಿಡಿದು, ಕೇರಳ, ಕರ್ನಾಟಕದದಲ್ಲಿ ಹಲವು ಹೃದಯಸ್ಪರ್ಶಿ ಘಟನೆಗಳು,‌ ಅದರ ಚಿತ್ರಗಳು ಈ ಯಾತ್ರೆಯಲ್ಲಿ ಈವರೆಗೆ ಕಂಡು ಬಂದಿವೆ. ಯುವಕರನ್ನು, ತಾಯಂದಿರನ್ನು, ಮಕ್ಕಳನ್ನು, ರೈತ ಕಾರ್ಮಿಕರನ್ನು, ಅಂಗವಿಕಲರನ್ನು ರಾಹುಲ್ ಕಂಡ ಬಗೆ, ಅವರೊಂದಿಗೆ ನಡೆದುಕೊಂಡ ರೀತಿ ಜನರ ಕಣ್ಣು ತೆರೆಸಿವೆ. ರಾಹುಲ್ ಗಾಂಧಿಯನ್ನು ಅತ್ಯಂತ ಕೀಳುಭಾಷೆಯಲ್ಲಿ ಜರಿಯುವ ಪೇಯ್ಡ್ ಟ್ರೋಲರ್‌ಗಳು ಹುಬ್ಬೇರಿಸುವಂತೆ ಮಾಡಿವೆ. ಭಕ್ತರ ಪಡೆ, ʼಕಮಲಮಯೀʼ ಸಂಪಾದಕರ ತಳಮಳ ಹೆಚ್ಚಿದೆ. ಬಿಜೆಪಿಯ ಹರಿತ ಹಾಗೂ ಉದ್ದದ ನಾಲಿಗೆಗಳಿಗೆ ಭಾರತ ಜೋಡೋ ಯಾತ್ರೆಯನ್ನು ಕೌಂಟರ್ ಮಾಡಲು ಪದಗಳ ಕೊರತೆ ಕಾಣುತ್ತಿದೆ.

ಸೌಹಾರ್ದತೆ ಹಾಗೂ ಜನರ ನಡುವಿನ ಬೆಸುಗೆಯನ್ನು ಹೇಗೆ ಟೀಕಿಸಲು ಸಾಧ್ಯ? ಮೇಲಾಗಿ ಇದು ಚುನಾವಣೆಯ ಕಾಲವಲ್ಲ. ಅಧಿಕಾರದ ಗದ್ದುಗೆಯ ಹುನ್ನಾರುಗಳನ್ನು ಹೇಳದೆ, ಮಾತನಾಡದೆ,‌ ಜನರ ಸಂಕಟಗಳು ಕಳೆದ ಏಳೆಂಟು ವರ್ಷಗಳಲ್ಲಿ ಹೇಗೆ ನೂರ್ಮಡಿಸಿದವು ಎಂಬ ಚರ್ಚೆಯನ್ನು ಈ ಯಾತ್ರೆಯ ಸಮಯದಲ್ಲಿ ಜನರೇ ಹಂಚಿಕೊಳ್ಳತೊಡಗಿದ್ದಾರೆ. ದೇಶದಲ್ಲಿ 4 ಕೋಟಿ  ಜನರು ನಿರುದ್ಯೋಗಿಗಳಾಗಿದ್ದಾರೆ. ಇದರಲ್ಲಿ ಗ್ರಾಮೀಣರ ಸಂಖ್ಯೆ 2.2 ಕೋಟಿ. ನಗರ ವಾಸಿ ನಿರುದ್ಯೋಗಿಗಳ ಸಂಖ್ಯೆ 1.8 ಕೋಟಿ.
ಬಡತನ ರೇಖೆಗಿಂತ ಕೆಳಗಿರುವವರು 20 ಕೋಟಿ ಜನರು. 23 ಕೋಟಿ ಜನರ ದಿನದ ಆದಾಯ ರೂ.375 ಮಾತ್ರ. ಇಂತಹ ಸನ್ನಿವೇಶ,  ಪರಿಸ್ಥಿತಿಯನ್ನು ಆಳುವವರು ಸಮರ್ಥಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷವನ್ನು ಇನ್ನೆಷ್ಟು ದಿನ ದೂರುತ್ತಾ ಬರಲಾದೀತು? ಎಲ್ಲದಕ್ಕೂ ಕಾಂಗ್ರೆಸ್, ನೆಹರು ಕಾರಣ‌ ಎಂದು ಜನರನ್ನು ನಂಬಿಸಬಹುದು? ಪದೇ ಪದೇ ಧರ್ಮದ ಪೋಷಾಕಿನ ಗದ್ದಲ ಎಬ್ಬಿಸಲು ಸಹ ಕಾರಣಗಳೇ ಸಿಗದಂತಾಗುವೆ ಆಳುವವರಿಗೆ. ಅಲ್ಪ ಸಂಖ್ಯಾತರನ್ನು ವಿವಿಧ ಕಾರಣ ನೀಡಿ ಜೈಲಿಗೆ ತಳ್ಳಲಾಗಿದೆ. ಬುದ್ದಿ ಜೀವಿಗಳಿಗೆ ಕಿರುಕುಳ ನೀಡಲಾಗಿದೆ. ಹಲವು ಹೋರಾಟಗಾರರನ್ನು ಬಂಧನದಲ್ಲಿಡಲಾಗಿದೆ.

ಅಭಿವೃದ್ಧಿಯ ಪೊಳ್ಳು ಮುಖ
ದೇಶದಲ್ಲಿ 100 ಜನ ಉದ್ಯಮಿಗಳು ಮಾತ್ರ ಅಭಿವೃದ್ಧಿಯಾದುದು ಹೇಗೆ? ಇದಕ್ಕೂ ಕಾಂಗ್ರೆಸ್ ಕಾರಣವೇ? ಉದ್ಯಮಿಯೊಬ್ಬನ ಆದಾಯ ಗಂಟೆಗೆ 42 ಕೋಟಿ, ವಾರಕ್ಕೆ 6000 ಕೋಟಿಗೆ ತಲುಪಿದೆಯಂತೆ. ಇದು ಯಾರ ಆಡಳಿತದಲ್ಲಿ ಎಂಬುದನ್ನು ಜನರ ಮುಂದಿಡುವ ಕೆಲಸವನ್ನು ಪ್ರಾದೇಶಿಕ ಪಕ್ಷಗಳು ಮಾಡತೊಡಗಿವೆ. ಫ್ಯಾಸಿಸಂ ಭಾರತದ ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಭಿನ್ನ ರೀತಿಯಲ್ಲಿ ಮಣಿಸಿ ಬಡವರನ್ನು  ಮತ್ತಷ್ಟು ಬಡವರನ್ನಾಗಿ ಮಾಡಿರುವ ಸನಾತನ ಸಿದ್ಧಾಂತದ ಗುಟ್ಟು ರಟ್ಟಾಗಿದೆ. ಇದನ್ನು ಕಾಂಗ್ರೆಸ್ ಗಿಂತ ಉತ್ತಮ ರೀತಿಯಲ್ಲಿ ಜನರಿಗೆ ಪ್ರಾದೇಶಿಕ ಪಕ್ಷಗಳು ಮನವರಿಕೆ ಮಾಡುತ್ತಿವೆ. ಬಿಜೆಪಿಗೆ ಕಾಂಗ್ರೆಸ್‌ಗಿಂತ ಪ್ರಬಲ ಶತ್ರುಗಳು ಪಶ್ಚಿಮ ಬಂಗಾಳ, ದೆಹಲಿ, ತೆಲಂಗಾಣ, ಆಂದ್ರ,‌ ತಮಿಳುನಾಡು, ಕೇರಳದಲ್ಲಿ ಇದ್ದಾರೆ. ಇದು ಕೊಂಚ ಸಮಾಧಾನ ತರುವ ಸಂಗತಿ.

ರಾಹುಲ್ ಗಾಂಧಿ ಭಿನ್ನ ದಾರಿಯಲ್ಲಿ ನಡೆದಿದ್ದಾರೆ‌. ಫ್ಯಾಸಿಸಂ ಸಿದ್ಧಾಂತ ಮತ್ತು ಆಡಳಿತವನ್ನು ಭಿನ್ನ ರೀತಿಯಲ್ಲಿ ಅವರು ಮುಖಾಮುಖಿಯಾಗಿದ್ದಾರೆ ಅಥವಾ ಅಧಿಕಾರದ ಮತಾಂಧತೆ ಹಾಗೂ ಮತಾಂಧರ ಎದುರು, ಜನ ಸಾಮಾನ್ಯರ ಮುಗ್ಧತೆಯನ್ನು ಮುಖಾಮುಖಿಯಾಗಿಸಿದ್ದಾರೆ. ಅದು ಜನರ ಮಧ್ಯೆ ಬೆರೆಯುವ ಮೂಲಕ. ಕರುಣೆ ಮತ್ತು ಪ್ರೀತಿಯ ದಾರಿಯಿದು‌. ಇದು ಸದ್ಯದ  ಪ್ರಜಾಪ್ರಭುತ್ವದ ಮುಖವಾಡ ತೊಟ್ಟ ಹುಚ್ಚು ದೊರೆಯನ್ನು ರಾಹುಲ್ ಎದುರಿಸುತ್ತಿರುವ ರೀತಿ. ಇಲ್ಲಿ ಮಾಧ್ಯಮದ ಬೆಂಬಲವಿಲ್ಲ. ಬದಲಾಗಿ ಜನರೇ ರಾಹುಲ್ ಬಗ್ಗೆ ಅವಕಾಶವಿದ್ದ ಕಡೆ ಬರೆದು, ಚರ್ಚಿಸುತ್ತಿದ್ದಾರೆ. ಇದು ದೆಹಲಿ ಶೋಕಿವಾಲನಿಗೆ, ಅವನ ಭಕ್ತರಿಗೆ ನುಂಗಲಾರದ ತುತ್ತಾಗಿದೆ.

Bharath Jodo Yatre

ದೆಹಲಿ ಆಡಳಿತಶಾಹಿ ನಾಯಕತ್ವ ಜನರಿಂದ ದೂರವೇ ಇದೆ. ಕತ್ತಲಲ್ಲಿ ಕೂತು ಕಾರ್ಪೊರೇಟ್ ದೊರೆಗಳಿಂದ ಮಾಧ್ಯಮ ನಿಯಂತ್ರಣ ನಡೆದಿದೆ. ಆದರೆ ಜನರಿಂದ ದೂರ ಇದ್ದು, ಮನದ ಮಾತನ್ನು ನಾಲ್ಕು ಗೋಡೆಗಳ ಮಧ್ಯೆ ಆಡುವಾತ ಸಹಜವಾಗಿ ಜನರಿಂದ ದೂರವಾಗುತ್ತಾನೆ. ದೊಡ್ಡ ಗಂಟಲ ಭಾಷೆ ಸುಳ್ಳಿನಿಂದ ಕೂಡಿದೆ ಎಂಬ ಸತ್ಯ ಜನರ ಅರಿವಿಗೆ ಬರತೊಡಗಿದೆ. ಓರ್ವ ವ್ಯಕ್ತಿಯನ್ನು ಭಕ್ತರು, ಆಳುವ ಪಕ್ಷದ ಸಚಿವ ಶಾಸಕರಾದಿಯಾಗಿ ಮಾಡುವ ಗುಣಗಾನ ಬೋಗಸ್ ನಿಂದ ಕೂಡಿದ್ದು, ಅದೊಂದು ಟೊಳ್ಳು ಎಂಬುದು ಜನರಿಗೆ ಗೊತ್ತಾಗತೊಡಗಿದೆ. ತನ್ನ ರಕ್ಷಣೆಗೆ, ವೇಷ ಭೂಷಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ತನ್ನನ್ನು ಯಾರು ಭೇಟಿಯಾಗದಂತೆ ಕೋಟೆ ಕಟ್ಟಿಕೊಳ್ಳುವವ ಜನನಾಯಕನಾಗಿ ಉಳಿದಿರುವುದಿಲ್ಲ, ಬದಲಾಗಿ ಅದೊಂದು ಗೆದ್ದಲು ಹಿಡಿದ ಮರವಾಗಿರುತ್ತದೆ.

ಇದನ್ನು ಓದಿದ್ದೀರಾ? ಭಾರತ್‌ ಜೋಡೋ ಯಾತ್ರೆ | ಪಾದಯಾತ್ರೆಯನ್ನು ಬೆಂಬಲಿಸುತ್ತಲೇ ಕಾಂಗ್ರೆಸ್‌ ಮೇಲೆ ನಿಗಾ ಇಡಬೇಕು

ಇಂತಹ ಸನ್ನಿವೇಶದಲ್ಲಿ ಯುವಕ ರಾಹುಲ್ ಜನರ ಮಧ್ಯೆ ಬಂದು ಸುಮ್ಮನೆ ಜನರ ಜೊತೆ ಬೆರೆಯುತ್ತಾ, ಅವರ ಮಾತು ಕೇಳುತ್ತಾ, ಮೌನವಾಗಿ ಹೆಜ್ಜೆ ಹಾಕುತ್ತಾ, ಮಕ್ಕಳ ಶೂ ಲೇಸ್ ಕಟ್ಟುತ್ತಾ, ಮಗುವೊಂದನ್ನು ಎತ್ತಿಕೊಂಡು ತೆಳು ಹಾಸ್ಯದ ಮೂಲಕ ನಗಿಸುತ್ತಾ, ತಾನೂ ನಗುತ್ತಾ ಸಾಮಾನ್ಯರಲ್ಲಿ ಸಾಮಾನ್ಯನಾಗುವುದು ಕಾಣುತ್ತಿದೆ. ಇದೇ ನಾಯಕನೊಬ್ಬ ಬೆಳೆಯುವ ಬಗೆ. ಹಾಗೆ ಕನ್ನಡಿಗರ ಸಾಕ್ಷಿ ಪ್ರಜ್ಞೆಯಾದ ದೇವನೂರು ಮಹಾದೇವರಿಂದ ಸಂವಿಧಾನದ ಪ್ರತಿ ಸ್ವೀಕರಿಸಿ, ಅವರ ಕಿವಿ ಮಾತು ಆಲಿಸಿದ್ದು ಸಹ ಒಂದು ಮಹತ್ವದ ಬೆಸುಗೆಯ ಹೆಜ್ಜೆ. ಸಂವಿಧಾನ ರಕ್ಷಣೆ ಮಾಡಿ, ಭಾರತ ಉಳಿಯುತ್ತದೆ, ಭಾರತ ಬೆಸೆಯುತ್ತದೆ.

ಸಮಾನತೆ ಹಾಗೂ ಸಹೋದರತ್ವ, ಬಹುತ್ವ ರಕ್ಷಣೆಯಾಗುತ್ತದೆ ಎಂಬ ಕಿವಿಮಾತನ್ನು ಕೇಳಿಸಿಕೊಂಡವನೇ ನಾಯಕನಾಗಲು ಸಾಧ್ಯ ಎಂಬ ಆಶಯವೂ ಅಲ್ಲಿತ್ತು. ಮಾತನಾಡಬೇಕಾದವರು ಬಾಯ್ಮುಚ್ಚಿಕೊಂಡು ಕುಳಿತ ಈ ವರ್ತಮಾನದಲ್ಲಿ ಕೆಲವರಾದರೂ ಮಾತನಾಡುತ್ತಾ, ಸಾಮರಸ್ಯದ ನಡಿಗೆಗೆ ಜೊತೆಯಾಗಿದ್ದಾರೆ. ಭಾರತದ ಬೆಸುಗೆಗೆ ಬೆಂಬಲವಾಗಿದ್ದಾರೆಂಬುದೇ ಹೊಸ ಆಶಾಕಿರಣ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app